ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಯಕ್ಷಗಾನ ತಜ್ಞ, ಹಿರಿಯ ವಿಮರ್ಶಕ ಹಂದಾಡಿ ಸುಬ್ಬಣ್ಣ ಭಟ್ಟರು

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಜನವರಿ 4 , 2016

ಬ್ರಹ್ಮಾವರ ಸಮೀಪ ಬಡಗುತಿಟ್ಟಿನ ಪ್ರಮುಖ ಶೈಲಿಗಳಲ್ಲಿ ಒಂದಾದ ಮಟಪಾಡಿ ತಿಟ್ಟನ್ನು ಹುಟ್ಟುಹಾಕಿದ ದಶಾವತಾರಿ ಗುರು ವೀರಭದ್ರ ನಾಯ್ಕರು ಜನ್ಮವೆತ್ತ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಮಂಡಳಿಗೆ ಈಗ ಐವತ್ತರ ಸಂಬ್ರಮ. ಸುವರ್ಣ ಸರಣಿ ಕಾರ್ಯಕ್ರಮದ ಅಂಗವಾಗಿ ಜನವರಿ 3ರರಂದು ಸುವರ್ಣ ಪ್ರಶಸ್ತಿಯನ್ನು ಹಿರಿಯ ಪ್ರಸಾದನ ತಜ್ಞ ಸರಳ ವ್ಯಕ್ತಿತ್ವದ ಆದರ್ಶ ಅಧ್ಯಾಪಕ, ಯಕ್ಷಗಾನ ವಿಮರ್ಶಕರಲ್ಲೇ ಅತೀ ಹಿರಿಯರಾದ ಸುಮಾರು 85ರ ಆಸುಪಾಸಿನವರಾದ ಹಂದಾಡಿ ಸುಬ್ಬಣ್ಣ ಭಟ್ಟರಿಗೆ ನೀಡಲಾಯಿತು. ಬಳಿಕ ಶ್ರೀ ಪೆರ್ಡೂರು ಮೇಳದವರಿಂದ ಚಂದ್ರಹಾಸ-ಕುಶಲವ ಎಂಬ ಪ್ರಸಂಗಗಳ ಬಯಲಾಟ ನಡೆಯಿತು.

ಬಿಳಿಯ ಅಂಗಿ, ಮುಂಡು ಪಂಚೆ ಮೈಮೇಲೆ ಶಾಲು ತಾಂಬೂಲ ಸವಿದ ಬಾಯಿ ಸಣಕಲು ಶರೀರದ ಸುಬ್ಬಣ್ಣ ಭಟ್ಟರನ್ನು ಅರಿಯದವರು ಯಕ್ಷಗಾನ ರಂಗದಲ್ಲಿ ಬಹುತೇಕ ವಿರಳ ಎನ್ನಬಹುದು. ಹಾರಾಡಿ ಮಟ್ಪಾಡಿ ತಿಟ್ಟು ಮಟ್ಟುಗಳ ಬಗ್ಗೆ ಅಧಿಕಾರವಾಣಿಯಿಂದ ಹೇಳಬಲ್ಲ ದಿವಂಗತ ಎಂ. ಎಂ. ಹೆಗ್ಡೆ, ಪ್ರೋ. ಬಿ. ವಿ. ಆಚಾರ್ಯರ ನಂತರ ಇನ್ನೊಬ್ಬರೆಂದರೆ ಅದು ಸುಬ್ಬಣ್ಣ ಭಟ್ಟರು. ಯಾವುದೇ ಪ್ರಚಾರ ಬಯಸದೆ ತೆರೆಯ ಹಿಂದೆ ಇದ್ದು ಸುಮಾರು ಮುಕ್ಕಾಲು ಶತಮಾನಗಳ ಕಾಲ ಬಡಗುತಿಟ್ಟು ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಅಪಾರ.

ಯಕ್ಷಗಾನಕ್ಕೆ ಸಂಬಂದಪಟ್ಟ ಯಾವುದೇ ಗೋಷ್ಟಿ, ವಿಚಾರ ಸಂಕಿರಣ ಪ್ರಯೋಗವಿರಲಿ ಅಲ್ಲಿ ಭಟ್ಟರು ಅನಿವಾರ್ಯ. ಅಲ್ಲಿಯೂ ಕೂಡ ಅವರ ಮಾತಿಗೆ ಮಾನ್ಯತೆ. ಬಣ್ಣದ ಕಮ್ಮಟ, ವೇಷ ಹಂಚುವಿಕೆ, ಜೋಡಾಟ ಇಲ್ಲಿ ಎಲ್ಲಿಯೂ ಸುಬ್ಬಣ್ಣ ಭಟ್ಟರನ್ನು ಮೀರಿ ನಡೆದವರಿಲ್ಲ. ಶ್ರೇಷ್ಠ ಮದ್ದಳೆಗಾರರಾದ ಇವರು ಜಾನುವಾರುಕಟ್ಟೆ ಭಾಗವತರು, ನೀಲಾವರ ರಾಮಕೃಷ್ಣಯ್ಯ, ಮರವಂತೆ ದಾಸರ ಪದ್ಯಕ್ಕೆ ಮದ್ದಳೆ ನುಡಿಸಿದ್ದಾರೆ. ಶ್ರೇಷ್ಠ ವಿಮರ್ಶಕರಾದ ಇವರು ಹವ್ಯಾಸಿ ರಂಗಭೂಮಿ ಕಂಡ ಸವ್ಯಸಾಚಿ ಕಲಾವಿದರು. ಬಡಗುತಿಟ್ಟಿನ ಎಲ್ಲಾ ವಿಬಾಗದಲ್ಲಿ ಆಳವಾದ ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದ ಇವರು ದೇಶ ವಿದೇಶಗಳಲ್ಲಿ ಆ ಕಾಲದಲ್ಲಿ ಯಕ್ಷಗಾನದ ಕಂಪನ್ನು ಮೂಡಿಸಿದವರು. ಸ್ವತ ಹೆಸರಿಗೆ ತಕ್ಕ ಒಳ್ಳೇಯ ಬಣ್ಣಗಾರಿಕೆಯಲ್ಲಿ ಪಳಗಿ ಶ್ರೇಷ್ಠ ಪ್ರಸಾದನ ತಜ್ಞರೆಂದು ಗುರುತಿಸಿಕೊಂಡಿದ್ದಾರೆ.

ಸುಬ್ಬಣ್ಣ ಭಟ್ಟರಿಗೆ ಯಕ್ಷಗಾನದೆಡೆಗೆ ಒಲವು ತಂದೆ-ತಾಯಿ ಎರಡೂ ಕಡೆಯಿಂದ ಅನುವಂಶೀಯವಾಗಿ ಹರಿದು ಬಂದಿದೆ. ತಂದೆ ಕೃಷ್ಣ ಭಟ್ಟರು ಹವ್ಯಾಸಿ ಕಲಾವಿದರಾಗಿದ್ದರು. ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಅವರ ಹಿರಿಯರು ಕಲಾಪೋಷಕರಾಗಿದ್ದು ಸಂಘಟಕರೂ ಆಗಿದ್ದರು. ಭಟ್ಟರ ಅಜ್ಜ ಸುಬ್ಬಣ್ಣ ಭಟ್ಟರು ಯಕ್ಷಗಾನ ಛಂದಸ್ಸನ್ನು ಬಲ್ಲವರಾಗಿದ್ದರು. ಇವರ ತಂದೆ ವೆಂಕಟಕೃಷ್ಣಯ್ಯನವರು ಸಂಗೀತ ತಜ್ಞರಾಗಿದ್ದರು. ಇವೆಲ್ಲವೂ ಭಟ್ಟರಿಗೆ ಭದ್ರ ಬುನಾದಿಯನ್ನು ನೀಡಿದವು.

ಭಟ್ಟರು ನಾಲ್ಕನೇ ತರಗತಿಯಲ್ಲಿ ಇರುವಾಗಲೇ ಮೂಡುಕುದ್ರುವಿನಲ್ಲಿ ಕಾಂತಪ್ಪ ಮಾಸ್ತರರು ನಡೆಸುತಿದ್ದ ಯಕ್ಷಗಾನ ತರಬೇತಿಗೆ ಸೇರಿಕೊಂಡರು. ಹಿರಿಯರಾದ ಕಾಂತಪ್ಪ ಮಾಸ್ತರರೇ ಇವರಿಗೆ ಮೊದಲ ಗುರು. ಮುಂದೆ ಹಿರಿಯಡ್ಕ ಗೋಪಾಲ ರಾವ್ ಗೋರ್ಪಾಡಿ ವಿಠಲ ಪಾಟೀಲ್, ಕನ್ನಾರು ಮಧ್ವರಾಯ ಮಂಜರು ಮುಂತಾದವರಿಂದ ತರಬೇತಿ ಪಡೆದರು. ಯಕ್ಷಗಾನದ ಗಂಡುಮೆಟ್ಟಿನ ನೆಲ ಬ್ರಹ್ಮಾವರದ ಆಸುಪಾಸಿನಲ್ಲಿ ಬೆಳೆಯುತಿದ್ದ ಭಟ್ಟರಿಗೆ ಕೀರ್ತಿಶೇಷ ಕುಂಜಾಲು ಶೇಷಗಿರಿ ಕಿಣಿ, ಹಾರಾಡಿ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗ, ಶ್ರೀನಿವಾಸ ನಾಯ್ಕ್, ವೀರಭದ್ರ ನಾಯ್ಕ್, ಹಾಸ್ಯಗಾರ ಚಂದು ನಾಯ್ಕ್ ಮುಂತಾದ ಹಿರಿಯ ಕಲಾವಿದರ ಒಡನಾಟ ದೊರೆಯಿತು. ಆಗಿನ ಅನೇಕ ಕಲಾವಿದರಿಗೆ ಬಿ. ವಿ. ಆಚಾರ್ಯ ಮತ್ತು ಸುಬ್ಬಣ್ಣ ಭಟ್ಟರ ಮನೆಯೇ ಆಶ್ರಯವಾಗಿತ್ತು. ಆ ಪರಿಪಾಟ ಇಂದಿಗೂ ಮುಂದುವರಿದಿದೆ. ಕಲಾವಿದರು ಬ್ರಹ್ಮಾವರಕ್ಕೆ ಬಂದರೆ ಭಟ್ಟರ ಮನೆಗೆ ಹೋಗದೇ ಹಿಂದಿರುಗುವುದಿಲ್ಲ.

ಹಂದಾಡಿ ಸುಬ್ಬಣ್ಣ ಭಟ್ಟರು
ಜನನ : 1930
ಜನನ ಸ್ಥಳ : ಹಂದಾಡಿ ಗ್ರಾಮ, ಬ್ರಹ್ಮಾವರ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಹಿರಿಯ ಪ್ರಸಾದನ ತಜ್ಞ, ಹಾರಾಡಿ ಮಟ್ಪಾಡಿ ತಿಟ್ಟು ಮಟ್ಟುಗಳ ಬಗ್ಗೆ ಅಧಿಕಾರವಾಣಿಯಿಂದ ಹೇಳಬಲ್ಲ ಹಿರಿಯ ವಿಮರ್ಶಕ.
ಪ್ರಶಸ್ತಿಗಳು:
  • ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬದ ಪ್ರಶಸ್ತಿ
  • ಅಜಪುರ ಕರ್ನಾಟಕ ಸಂಘದ ಸುವರ್ಣ ಪ್ರಶಸ್ತಿ
  • ಗುಂಡ್ಮಿ ಕಾಳಿಂಗ ನಾವಡರ ದಶಮ ಪುಣ್ಯತಿಥಿ ಸನ್ಮಾನ
  • ಮಟಪಾಡಿ ನಂದಿಕೇಶ್ವರ ಯಕ್ಷಗಾನ ಮಂಡಳಿ ಸುವರ್ಣ ಮಹೋತ್ಸವ ಸುವರ್ಣ ಪ್ರಶಸ್ತಿ
  • ಹಲವಾರು ಸಂಘಸಂಸ್ಥೆ ಮತ್ತು ಮೇಳಗಳ ವೇದಿಕೆಯಲ್ಲಿ ಸನ್ಮಾನ
ಮರಣ ದಿನಾ೦ಕ : ಜುಲೈ 22, 2016
ಯಕ್ಷಗಾನದ ಎಲ್ಲಾ ಮಜಲುಗಳಲ್ಲಿಯೂ ಒಲವು ಮೂಡಿಸಿಕೊಂಡ ಸುಬ್ಬಣ್ಣ ಭಟ್ಟರು ಮುಂದೆ ಮದ್ದಳೆಗಾರಿಕೆಯತ್ತ ಹೆಚ್ಚು ಆಕರ್ಷಿತರಾದರು. ಐರೋಡಿ ರಾಮ ಗಾಣಿಗರು ಭಾಗವತಿಕೆ ಮಾಡುತಿದ್ದ ಕಾಲದಲ್ಲಿ ಅವರೊಂದಿಗೆ ಭದ್ರಗಿರಿ ಅಚ್ಯುತರಾಯರು ಇರುತಿದ್ದರು. ಅಂದು ಅಸ್ಥಿತ್ವದಲ್ಲಿದ್ದ ಬ್ರಹ್ಮಾವರ ಸಾಲಿಕೇರಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಗೆ ವೇಷಭೂಷಣ ಮಾತ್ರ ನಾಟಕದ್ದಾಗಿತ್ತು. ಆಗ ಹಿಮ್ಮೇಳ ಸೈಡ್ ವಿಂಗ್ ನಲ್ಲಿ ಇರುತಿತ್ತು. ಸೌಗಂಧಿಕಾ ಅಪಹರಣ, ಭೂಕೈಲಾಸ, ಕೋಟಿ-ಚೆನ್ನಯ ಇವುಗಳು ಅಂದಿನ ಪ್ರಯೋಗಗಳಾಗಿದ್ದವು. ಯಕ್ಷಗಾನಕ್ಕೆ ನಾಟಕದ ವೇಷಭೂಷಣ ಸರಿ ಹೊಂದುವುದಿಲ್ಲ ಎಂದು ತಿಳಿದ ಭಟ್ಟರು ವೇಷಭೂಷಣ ತಯಾರಿಗೆ ಕೈಹಾಕಿದರು. ಅಂದಿನಿಂದ ಇಂದಿನವರೆಗೆ ಅಜಪುರ ಯಕ್ಷಗಾನ ಮಂಡಳಿ ಎಂಬ ಪ್ರಸಾದನ ಸಂಸ್ಥೆ ನಡೆಸಿಕೊಂಡು ಬರುತಿದ್ದಾರೆ. ಆದರೆ ಅದರಿಂದ ಬರುವ ಲಾಭ ಮಾತ್ರ ಶೂನ್ಯ ಎಂಬುದು ಎಲ್ಲರಿಗು ತಿಳಿದಿರುವ ವಿಚಾರ. ಹವ್ಯಾಸಿ ಕಲಾವಿದರಿಗೆ ಬಣ್ಣ ಹಾಕುವವರಿಗೆ ಸಂಬಳ ಮತ್ತು ವಾಹನ ಬಾಡಿಗೆ ಮಾತ್ರ ಅವರ ಸಂಭಾವನೆ. ಮಳೆಗಾಲದಲ್ಲಿ ವೇಷಭೂಷಣ ರಿಪೇರಿ ಖರ್ಚು ಬೇರೆ. ಎಲ್ಲವನ್ನೂ ಪರಿಗಣಿಸಿದರೆ ಇದರ ಆದಾಯ ಮಾತ್ರ ಶೂನ್ಯ ಎಂಬುದು ಯಕ್ಷಗಾನದ ಅಲ್ಪ ಜ್ಞಾನಿಗಳಿಗೂ ತಿಳಿದ ವಿಚಾರ.

ಸುಬ್ಬಣ್ಣ ಭಟ್ಟರು ಯಾವುದೇ ವೃತ್ತಿ ಮೇಳದಲ್ಲಿ ತಿರುಗಾಟ ಮಾಡಲಿಲ್ಲ. ಅದರ ಅಗತ್ಯತೆಯೂ ಅವರಿಗಿಲ್ಲ. ಪದವೀಧರರಾಗಿ ಎಸ್. ಎಂ. ಎಸ್. ಹೈಸ್ಕೂಲು ಬ್ರಹ್ಮಾವರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಆದರ್ಶ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ನಿವೃತ್ತಿ ಪಡೆದರು. ಆದರೂ ಅವರ ಒಡನಾಟ ಮಾತ್ರ ಅಂದಿನ ಮಹಾನ್ ಕಲಾವಿದರಾದ ಹಾರಾಡಿ ರಾಮಗಾಣಿಗ ಬಂಧುಗಳು, ಮಟ್ಪಾಡಿ ತಿಟ್ಟಿನ ಕಲಾವಿದರು, ‌ಉಡುಪಿ ಬಸವ, ಕೊಳ್ಕೆಬೈಲು ಶೀನ, ಶಿರಿಯಾರ ಮಂಜು ನಾಯ್ಕ್, ಕೊಕ್ಕರ್ಣೆ ನರಸಿಂಹ ಕಾಮತ್ ರಂತ ಘಟಾನಿಘಟಿಗಳು. ವಕೀಲರಾದ ಎಂ. ಎಂ. ಹೆಗ್ಡೆಯವರ ಪದವೀಧರ ಯಕ್ಷಗಾನ ಮಂಡಳಿಯಲ್ಲೂ ಬಾಗವಹಿಸಿದ್ದಾರೆ. 1962ರಲ್ಲಿ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿಯೂ ಬಾಗವಹಿಸಿದ್ದಾರೆ. ಅಂದು ವೇಷಭೂಷಣದೊಂದಿಗೆ ಮದ್ದಳೆಗಾರರಾಗಿಯೂ ಬಾಗವಹಿಸಿದ್ದಾರೆ. ಅಲ್ಲಿ ಗುಂಡ್ಮಿ ರಾಮಚಂದ್ರ ನಾವಡರು, ನಾರ್ಣಪ್ಪ ಉಪ್ಪೂರರು, ಕೆರೆಮನೆ ಮಹಾಬಲ ಹೆಗ್ಡೆಯವರೂ ಇವರ ಸಹ ಕಲಾವಿದರಾಗಿದ್ದರು. ಬಳಿಕ 1979ರಲ್ಲಿ ಮಾರ್ತಾ ಆಸ್ಟನ್ ಮತ್ತು ಪ್ರೋ. ಬಿ. ವಿ. ಆಚಾರ್ಯರ ತಂಡದಲ್ಲಿ ವಿದೇಶ ಸಂಚಾರ ಮಾಡಿದ್ದರು.

ಯಕ್ಷಗಾನದ ವಿವಿದ ಮಜಲುಗಳಲ್ಲಿ ಕೈಯಾಡಿಸಿ ಜೋಡಾಟದ ತೀರ್ಪುಗಾರರಾಗಿಯೂ ಪರಿಣತಿ ಪಡೆದ ಇವರನ್ನು ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬದ ಪ್ರಶಸ್ತಿ, ಅಜಪುರ ಕರ್ನಾಟಕ ಸಂಘದ ಸುವರ್ಣ ಪ್ರಶಸ್ತಿ, ಗುಂಡ್ಮಿ ಕಾಳಿಂಗ ನಾವಡರ ದಶಮ ಪುಣ್ಯತಿಥಿ ಸನ್ಮಾನ ಸಹಿತ ಹಲವಾರು ಸನ್ಮಾನಗಳು ಅವರಿಗೆ ಸಂದಿದೆ. ಹರಾಡಿ ಮಟ್ಪಾಡಿ ತಿಟ್ಟುಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ಭಟ್ಟರಿಗೆ ಮಟ್ಪಾಡಿ ತಿಟ್ಟಿನ ಪ್ರಾತಿನಿಧಿಕ ಕಲಾವಿದ ವೀರಭದ್ರ ನಾಯ್ಕರ ಹುಟ್ಟೂರ ಸುವರ್ಣ ಪ್ರಶಸ್ತಿ ಯೋಗ್ಯವಾಗಿಯೇ ಸ೦ದಿದೆ



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Vasudeva Heggade(1/6/2016)
ಮಲೆನಾಡಸಿರಿ : ಮಲೆನಾಡಸಿರಿ ಪ್ರೊ. ಎಸ್.ವಿ. ಯು ಸೆಟ್ಟ್ರು ಲೇಖನ/ವಿಮರ್ಶೆ/ಸಂದರ್ಶನ/ಪರಿಚಯ ಓದುವಲ್ಲಿ ನಮಗೆ ತಿಳಿಯದೇ ಇರುವ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅದರಲ್ಲಿಯೂ ಯಕ್ಷಗಾನ / ಕಲಾವಿದರ ಬಗ್ಗೆ ಸಂಪೂರ್ಣ ವಿಚಾರವನ್ನು ಹತ್ತಿರದಿಂದ ತಿಳಿದು ಅನುಭವ ಪಡೆದು ನಿಷ್ಪಕ್ಷವಾಗಿ ಮಂಡಿಸುತ್ತಾರೆ. ಫೇಸ್ ಬುಕ್/ವಾಟ್ಸಪ್ ನೋಡಿ ಇದೇ ಯಕ್ಷಗಾನ/ ಈಗಿನ ಕಾಲದ ಕಲಾವಿದ/ ಪೋಷಕರೇ ಮಾಹಾನ್ ಎಂದು ತಿಳಿದಿದಿರುವ ಈಗಿನ ಕಾಲದ ಹೊಸ ಪೀಳಿಗೆಯರಿಗೆ ಹಂದಾಡಿ ಭಟ್ಟರಂತವರನ್ನು ಪರಿಚಯಿಸಿ ಅವರ ಸಾಧನೆ ಯನ್ನು ಮನಗಾಣಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ