ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಪಾತಾಳ ಪ್ರಶಸ್ತಿ ಪುರಸ್ಕೃತ ಹಳುವಳ್ಳಿ ಗಣೇಶ ಭಟ್

ಲೇಖಕರು :
ನಾ.ಕಾರ೦ತ, ಪೆರಾಜೆ
ಮ೦ಗಳವಾರ, ಡಿಸೆ೦ಬರ್ 15 , 2015

2003. ಮೂಡುಬಿದಿರೆಯ ಸಾರ್ವಜನಿಕ ಬಯಲಾಟ ಸಮಿತಿಯ ಐವತ್ತನೇ ವರುಷದ ಶ್ರೀ ಕಟೀಲು ಮೇಳದ ಆಟ. ಸುವರ್ಣ ಸಂಭ್ರಮದ ನೆನಪಿಗಾಗಿ 'ಚಿನ್ನದ ಕಿರೀಟ' ಸಮರ್ಪಣೆ. ಮೇಳದಲ್ಲಿ ಹಳುವಳ್ಳಿ ಗಣೇಶ ಭಟ್ಟರು ಶ್ರೀದೇವಿ ಪಾತ್ರಧಾರಿ. ಮೊದಲ ಬಾರಿಗೆ ಚಿನ್ನದ ಕಿರೀಟವನ್ನು ತೊಟ್ಟು ಪಾತ್ರವನ್ನು ಮಾಡಿದ ಹಿರಿಮೆ ಇವರದು. ಆ ದಿವಸವನ್ನು ಜ್ಞಾಪಿಸಿಕೊಂಡಾಗ ಭಟ್ಟರು ಭಾವುಕರಾಗುತ್ತಾರೆ. ಪುಳಕಗೊಳ್ಳುತ್ತಾರೆ. ಬದುಕಿನ ಮಹೋನ್ನತ ಕ್ಷಣವೆಂದು ಖುಷಿ ಪಡುತ್ತಾರೆ.

ಹಳುವಳ್ಳಿಯವರ ಶ್ರೀದೇವಿ ಪಾತ್ರವು ಬಿಗುವನ್ನು ಬಿಟ್ಟುಕೊಡದ, ಗಾಂಭೀರ್ಯವನ್ನು ಕಾಪಾಡಿಕೊಂಡ ಅಭಿವ್ಯಕ್ತಿ. ಅಗ್ಗದ ಪ್ರಚಾರಕ್ಕಾಗಿ ಪಾತ್ರವನ್ನು ಹಗುರ ಮಾಡುವ ಜಾಯಮಾನದವರಲ್ಲ. ಪ್ರಸಂಗದಲ್ಲಿ ದೇವಿ ಉದ್ಭವದ ಸಂದರ್ಭದಲ್ಲಿ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸುವ ಹಲವಾರು ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಕಲಾಭಿಮಾನಿಗಳ ಭಾವನೆಗೆ ಎಂದೂ ಧಕ್ಕೆ ತಂದವರಲ್ಲ. ಇಪ್ಪತ್ತು ವರುಷದ ಕಟೀಲು ಮೇಳದ ವ್ಯವಸಾಯದಲ್ಲಿ ಶ್ರೀ ದೇವಿ ಮಹಾತ್ಮೆ ಮತ್ತು ಶ್ರೀದೇವಿ ಲಲಿತೋಪಾಖ್ಯಾನ ಪ್ರಸಂಗವಿದ್ದಾಗ ನಾನು ಎಂದೂ ರಜೆ ಮಾಡಿದ್ದಿಲ್ಲ, ಅವರ ವೃತ್ತಿಬದ್ಧತೆಗೆ ಮಾದರಿಯಿದು.

ಶ್ರೀ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಅರಂಭ. ಒಂದು ವರುಷದ ತಿರುಗಾಟದ ಬಳಿಕ ಎರಡು ದಶಕ ಸುಂಕದಕಟ್ಟೆ ಮೇಳದ ಅನುಭವ. ನಂತರದ ಎರಡು ದಶಕ ಶ್ರೀಕಟೀಲು ಮೇಳದ ವ್ಯವಸಾಯ. ಸುಂಕದಕಟ್ಟೆ ಮೇಳದಲ್ಲಿ ವಿವಿಧ ಪಾತ್ರಗಳ ನಿರ್ವಹಣೆ. ಸ್ತ್ರೀ ಪಾತ್ರದಿಂದ ಬಣ್ಣದ ವೇಷದ ವರೆಗಿನ ಅವಕಾಶ. ಮೇಳದಲ್ಲಿದ್ದ ಭಾಗವತ ಪುತ್ತಿಗೆ ತಿಮ್ಮಪ್ಪ ರೈಗಳು ಇವರಿಗೆ ವಿವಿಧ ಬಗೆಯ ಪಾತ್ರಗಳನ್ನು ನೀಡಿ ಬೆಳೆಸಿದ್ದಾರೆ. ಹಾಗಾಗಿ ಎಲ್ಲಾ ಬಗೆಯ ವೇಷಗಳು ಹಳುವಳ್ಳಿಯವರಲ್ಲಿ ಗೆದ್ದಿವೆ. ಇಂದು ಶ್ರೀ ದೇವಿ ಪಾತ್ರ ಮಾಡಿದರೆ, ನಾಳೆ ಶುಂಭನಿಗೂ ಸಿದ್ಧ, ನಾಡಿದ್ದು ಹೆಣ್ಣು ಬಣ್ಣಕ್ಕೂ ಸೈ!

ಗಣೇಶ ಭಟ್ಟರು ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. ಬಾಲ್ಯದಲ್ಲೇ ಯಕ್ಷಗಾನದ ತುಡಿತ. ತನ್ನೂರು ಕಳಸಕ್ಕೆ ಬಂದಿದ್ದ ಧರ್ಮಸ್ಥಳ ಮೇಳದತ್ತ ಸೆಳೆತ. ಪಾತಾಳ ವೆಂಕಟ್ರಮಣ ಭಟ್, ಕೆ.ಗೋವಿಂದ ಭಟ್, ಕುಂಬಳ ಸುಂದರ ರಾಯರ ವೇಷಗಳತ್ತ ಆಸಕ್ತ. ಮೇಳದ ಕಲಾವಿದನಾಗಬೇಕೇಂಬ ಹಪಾಹಪಿ. ತೆಂಕುತಿಟ್ಟಿನ ನಾಟ್ಯವನ್ನು ಗೋವಿಂದ ಭಟ್ ಮತ್ತು ಪಡ್ರೆ ಚಂದು ಅವರಲ್ಲಿ ಕಲಿತರೆ, ಬಡಗಿನ ನಾಟ್ಯಕ್ಕೆ ವಿಶ್ವನಾಥ ಜೋಯಿಸ್ ಗುರು. ಎರಡೂ ತಿಟ್ಟುಗಳ ಅನುಭವ. ಒಂದು ತಿಟ್ಟಿನ ಗತಿಯನ್ನು ಇನ್ನೊಂದು ತಿಟ್ಟಿಗೆ ಮಿಳಿತ ಗೊಳಿಸದ ಎಚ್ಚರ. ಸ್ತ್ರೀವೇಷ, ಪುಂಡು ವೇಷ, ರಾಜ ವೇಷ, ಬಣ್ಣದ ವೇಷ, ಪೋಷಕ ಪಾತ್ರಗಳು... ಹೀಗೆ ಯಕ್ಷಗಾನದ ಎಲ್ಲಾ ವಿಧದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀರಾಮ, ಕೃಷ್ಣ, ವಿಷ್ಣು, ಸಂಜಯ, ಶುಂಭ, ದಶರಥ, ದಾಕ್ಷಾಯಿಣಿ, ಕಯಾದು, ಅಂಬೆ, ಕಿನ್ನಿದಾರು, ಚಂದ್ರಮತಿ... ಹೀಗೆ ಭಿನ್ನ ಸ್ವಭಾವದ ಪಾತ್ರಗಳು. ಶ್ರೀ ದೇವಿ ಮಹಾತ್ಮೆಯು 'ಶ್ರೀದೇವಿ' ಪಾತ್ರವು ಅವರಿಗೆ ತಾರಾಮೌಲ್ಯ ತಂದಿತ್ತ ಪಾತ್ರ.

ಮೇಳದ ಕಲಾವಿದನಾಗಬೇಕೆಂಬು ಆಸೆಯಿತ್ತು. ಅದು ಈಡೇರಿದೆ. ಈಗ ವಯಸ್ಸಾಯಿತು. ಇನ್ನು ಸ್ತ್ರೀಪಾತ್ರ ಮಾಡಬಾರದು. ನಾನೇ ಹಿಂದೆ ಸರಿದೆ. ಪ್ರೇಕ್ಷಕರು ಮೊದಲು ನನ್ನ ಶ್ರೀದೇವಿ ಪಾತ್ರವನ್ನು ಮೆಚ್ಚಿಕೊಂಡಿದ್ದರು, ಒಪ್ಪಿಕೊಂಡಿದ್ದರು. ಅವರ ಅಭಿಮಾನವು ಶಾಶ್ವತವಾಗಿರಬೇಕು, ಎನ್ನುತ್ತಾರೆ.

ಹಳುವಳ್ಳಿ ಗಣೇಶ ಭಟ್
ಜನನ ದಿನಾ೦ಕ : 1956
ಜನನ ಸ್ಥಳ : ಹಳುವಳ್ಳಿ, ಕಳಸ
ಮೂಡಿಗೆರೆ ತಾಲೂಕು
ಚಿಕ್ಕಮಗಳೂರು ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಧರ್ಮಸ್ಥಳ, ಸುಂಕದಕಟ್ಟೆ ಮತ್ತು ಕಟೀಲು ಮೇಳಗಳಲ್ಲಿ 4 ದಶಕಗಳ ಕಾಲ ಅಪ್ರತಿಮ ಸ್ತ್ರೀ ಪಾತ್ರಧಾರಿಯಾಗಿ, ತೆ೦ಕು ಹಾಗೂ ಬಡಗು ತಿಟ್ಟಿನ್ನಲ್ಲಿ ಕಲಾಕೃಷಿ
"ಕಳಸದ ಹಳುವಳ್ಳಿಯ ತಂಬಿಕುಡಿಗೆಯ ಇವರ ಮನೆ ಕಲಾವಿದರಿಗೆ ಆಶ್ರಯ. ಆ ಭಾಗಕ್ಕೆ ಯಾವುದೇ ಮೇಳ ಬರಲಿ, ವಾಸ್ತವ್ಯಕ್ಕೆ ಇವರದು ತೆರೆದ ಮನೆ-ಮನ. ಆಟ, ಕೂಟಗಳಿಗೆ ಮೊದಲಾದ್ಯತೆ. ಈ ಮನೆಯಲ್ಲಿ ಊಟ ಮಾಡದೇ ಇದ್ದ ಕಲಾವಿದರು ಕಡಿಮೆ. ಇವರ ಚಾವಡಿ ತುಂಬಾ ಕಂಬಳಿ, ಹಾಸಿಗೆ. ಹೊತ್ತು ಹೊತ್ತಿಗೆ ಮೃಷ್ಟಾನ್ನ ಭೋಜನ, ಕಳೆದ ಕಾಲದ ದಿನಮಾನವನ್ನು ನೆನಪಿಸಿಕೊಳ್ಳುತ್ತಾರೆ" ಪಾತಾಳ ವೆಂಕಟ್ರಮಣ ಭಟ್ಟರು.

ಐವತ್ತೊಂಭರ ಹರೆಯದ ಗಣೇಶ ಭಟ್ಟರು ಯಕ್ಷಗಾನದೊಂದಿಗೆ ಕೃಷಿಯೂ ಪ್ರಿಯ ವೃತ್ತಿ. ತನ್ನ ಅನುಪಸ್ಥಿತಿಯಲ್ಲಿ ಮಡದಿ ಸೀತಾಲಕ್ಷ್ಮೀ ಹೆಗಲೆಣೆ. ಶಶಿಧರ್, ಶಾಂಭವಿ - ಇಬ್ಬರು ಮಕ್ಕಳು. ಮೇಳದ ತಿರುಗಾಟ, ಪಾತ್ರಕ್ಕೆ ಸಿಕ್ಕ ಜನ ಸ್ವೀಕೃತಿ, ತಾರಾಮೌಲ್ಯಗಳಿಂದ ಸಂತೃಪ್ತ. ಅನ್ನ, ಆಶ್ರಯ ನೀಡಿದ ಮೇಳಕ್ಕೆ ನಿಷ್ಠನಾದ ಹಳುವಳ್ಳಿಯವರು ನೂರಾರು ಸಂಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ. ಈಗ 'ಪಾತಾಳ ಪ್ರಶಸ್ತಿ' ಅರಸಿ ಬಂದಿದೆ.

ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ-ಎಡನೀರು' ಪ್ರಶಸ್ತಿಯನ್ನು ದಶಂಬರ್ 5ರಂದು ಶ್ರೀ ಎಡನೀರು ಮಠದಲ್ಲಿ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಪ್ರಶಸ್ತಿ ಪ್ರದಾನ ಮಾಡಿದರು.



**************


ಕೃಪೆ : yakshamatu.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ