ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಜೇನುಗೊರಳು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಆಗಸ್ಟ್ 28 , 2013

ಹಾಡು ಹಕ್ಕಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ದೇಹ ಗಾಂಭೀರ್ಯದ, ಕಂಚಿನ ಕಂಠದ ಭಾಗವತ. ತನ್ನದೇ ಶೈಲಿಯಲ್ಲಿ ತೆಂಕು-ಬಡಗು ತಿಟ್ಟುಗಳಲ್ಲಿ ಭಾಗವತಿಕೆ ಮಾಡುವ ಪೊಲ್ಯರದ್ದು ತುಂಬುನಾದದ, ಆಳವಾದ ಪ್ರಭಾವವುಳ್ಳ ಜೇನುಗೊರಳು. ಯಕ್ಷಗಾನ ಕಲಾರಂಗವನ್ನು ಮಧುರ ಕಂಠಶ್ರೀ ಶ್ರೀಮಂತಗೊಳಿಸಿದ ಅಭಿಜಾತ ಕಲಾವಿದ ``ಪೊಲ್ಯ ದೇಜಪ್ಪ ಶೆಟ್ಟಿಯವರ ಮಗ ಯಾರೆಂದು ಬಲ್ಲೀರಾ ?`` ಎಂದು ಕೇಳಿದರೆ ತಟ್ಟನೆ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಎಂಬ ಉತ್ತರ ದೊರೆಯುತ್ತದೆ. ತಂದೆ ಪ್ರಗತಿಪರ ಕೃಷಿಕರು. ನ್ಯಾಯ ತೀರ್ಮಾನದಲ್ಲಿ ನಿಷ್ಣಾತರೂ ಆಗಿದ್ದರು. ಬಿಡುವಿಲ್ಲದ ಕೆಲಸಗಳಿದ್ದರೂ ಯಕ್ಷಗಾನ ಕಲಾರಂಗಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಬಾಲ್ಯ , ಶಿಕ್ಷಣ

ತಂದೆಯವರು ಸಂತೃಪ್ತ ಸಂಸಾರಿಯಾಗಿದ್ದರು. ಅಡ್ವೆ ಪರಾರಿ ರುಕ್ಕ ಶೆಟ್ಟಿ ಮತ್ತು ಕಾಪು ಉಳಿಯಾರಗೋಳಿ ಪೂವಣಿಗುತ್ತು ದೊಡ್ಡಕ್ಕ ಶೆಟ್ಟಿಯವರ ಮಗಳು ಪದ್ಮಾವತಿ ಇವರ ತಾಯಿ. ತಂದೆಯವರ ಅನುಪಸ್ಥಿತಿಯಲ್ಲಿ ಮನೆಯ ಭಾರವನ್ನೆಲ್ಲ ನಿಭಾಯಿಸುತ್ತಿದ್ದ ಆದರ್ಶ ಗೃಹಿಣಿ. ಒಟ್ಟಿಗೆ ಒಂಬತ್ತು ಮಕ್ಕಳು, ಏಳು ಗಂಡು, ಎರಡು ಹೆಣ್ಣು.

ಬಾಲ್ಯದಲ್ಲಿ ಯಕ್ಷಗಾನ ರಂಗಭೂಮಿಯಲ್ಲಿ ಆಸಕ್ತಿ ಕುದುರಿಸಲು ಮನೆಯ ವಾತಾವರಣ ಪೂರಕವಿರಲಿಲ್ಲ. ಕಾರಣ ತಂದೆಯವರು ತನ್ನ ಯಾವ ಮಕ್ಕಳೂ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸಿ ಯಕ್ಷಗಾನದ ಕಡೆಗೆ ಆಕರ್ಷಿತರಾಗಬಾರದು ಎಂಬ ಧೋರಣೆ ಹೊಂದಿದ್ದರು. ಯಕ್ಷಗಾನ ರಂಗಭೂಮಿಯಲ್ಲಿದ್ದ ಗುಂಪುಗಾರಿಕೆ, ಜಾತೀಯತೆ ಮುಂತಾದ ಕಾರಣಗಳಿಂದ ಅವರು ತೀರಾ ನೊಂದುಕೊಂಡಿದ್ದರು.

ಮನೆಯ ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಗಳು, ತಂದೆಯವರನ್ನು ನೋಡಲು ಬರುತ್ತಿದ್ದ ಹಲವಾರು ಅಭಿಜಾತ ಕಲಾವಿದರ ಸಂಪರ್ಕ ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಆಸಕ್ತಿಯನ್ನು ಮೂಡುವಂತೆ ಮಾಡಿತು. ಯಕ್ಷಗಾನ ರಂಗ ಮಾಧ್ಯಮ ಇವರ ಅತ್ಯಂತ ಗಾಢ ಆಸಕ್ತಿಗೆ ನೆಲೆಯಾಯಿತು. ವೈಯಕ್ತಿಕ ತುಡಿತ, ಮಿಡಿತ, ಕೌಟುಂಬಿಕ ಹಿನ್ನೆಲೆ ಈ ಕ್ಷೇತ್ರದಲ್ಲಿ ಆಳವಾಗಿ ಬೇರೂರುವಂತೆ ಮಾಡಿದವು. ಆದರೂ ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣ ಮುಗಿಯುವ ತನಕ ಯಕ್ಷಗಾನ ಕಲಾ ರಂಗದಲ್ಲಿ ಯಾವುದೇ ವ್ಯವಸಾಯ ಮಾಡಿಲ್ಲ.

ಜ್ಯೂನಿಯರ್‌ ಕಾಲೇಜ್‌ ಶಿಕ್ಷಣಕ್ಕಾಗಿ ಅದಮಾರು ಪದವಿ ಪೂರ್ವ ಕಾಲೇಜಿಗೆ ಸೇರಿದರು. ಈ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅದಮಾರು ಶಿವರಾಮ್‌ ಭಟ್‌ ಅವರು ಶಿಫಾರಸ್ಸಿನಂತೆ ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಪ್ರವೇಶ ದೊರೆಯಿತು. ಅಷ್ಟರ ತನಕ ಸುಪ್ತವಾಗಿದ್ದ ಯಕ್ಷಗಾನ ಕಲಾಸಕ್ತಿ ಆಗ ಬೆಳೆಯಿತು.

ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ
ಜನನ :  
ಜನನ ಸ್ಥಳ :  
ಕಲಾಸೇವೆ : ಪೆರ್ಡೂರು ಮೇಳ , ಗುರುನಾರಾಯಣ ಯಕ್ಷಗಾನ ಮಂಡಳಿ, ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ, ಶ್ರೀ ದತ್ತಾತ್ರೇಯ ಯಕ್ಷಗಾನ ಮಂಡಳಿ, ಕದ್ರಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು
ಎಂಜಿಎಂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಕು.ಶಿ. ಹರಿದಾಸ ಭಟ್ಟರು ಇವರಲ್ಲಿದ್ದ ಸುಪ್ತ ಚಿಂತನಶೀಲತೆ ಜಾಗೃತಗೊಳಿಸಲು ಕಾರಣೀಭೂತರಾದರು. ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಇವರನ್ನು ಸೇರಿಸಿದ್ದರು. ಆಗ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ನಿರ್ದೇಶನದಲ್ಲಿ ನಡೆಯುತ್ತಿತ್ತು. ಇವರೋರ್ವ ಕಲಾವಿದನಾಗಿ ಅವಿರ್ಭಾವಗೊಳ್ಳಲು ಮೂಲ ಕಾರಣಕರ್ತರಾದ ಕು.ಶಿ. ಹರಿದಾಸ ಭಟ್ಟರು ಸದಾ ಸ್ಮರಣೀಯರು. ಇವರಲ್ಲಿದ್ದ ಪ್ರತಿಭೆಯನ್ನವರು ಗುರುತಿಸಿದ್ದರು. ಕೇಂದ್ರದ ವೃತ್ತಿ ಮೇಳ ದೇಶದ ವಿವಿಧೆಡೆ ಪ್ರದರ್ಶನಗಳನ್ನು ನೀಡಿದಾಗ ಭಾಗವಹಿಸಲು ಕೂಡಾ ಅವಕಾಶ ಒದಗಿಸಿಕೊಡುತ್ತಿದ್ದರು. ಆಗ ಯಕ್ಷಗಾನ ಕೇಂದ್ರದಲ್ಲಿ ಮಟ್ಟಾಡಿ ವೀರಭದ್ರ ನಾಯಕ್‌, ನೀಲಾವರ ರಾಮಕೃಷ್ಣಯ್ಯ, ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್‌, ಕೋಟ ಮಹಾಬಲ ಕಾರಂತ, ಹಿರಿಯಡ್ಕ ಗೋಪಾಲರಾವ್‌,ಹೆರಂಜಾಲು ವೆಂಕಟರಮಣ ಗಾಣಿಗ ಮುಂತಾದವರು ಗುರುಗಳಗಿದ್ದರು. ಇವರ ತಂದೆಯವರ ಮೇಲಿದ್ದ ಅಪಾರ ಗೌರವಾದರಗಳಿಂದಾಗಿ ಇವರನ್ನು ಅವರೆಲ್ಲ ಪ್ರೀತಿ-ವಾತ್ಸಲ್ಯಗಳಿಂದ ನೋಡುತ್ತಿದ್ದರು. ಈ ಘಟಾನುಘಟಿ ಕಲಾವಿದರ ತರಬೇತಿ ಪಡೆದ ಇವರು ಧನ್ಯ ಎಂದು ಹೇಳಬಹುದು. ಕೇಂದ್ರದಲ್ಲಿ ಬಡುಗು ತಿಟ್ಟು ಯಕ್ಷಗಾನದ ಶಾಸ್ತ್ರೀಯ ಕುಣಿತ ಮತ್ತು ಭಾಗವತಿಕೆಯನ್ನು ಕಲಿತುಕೊ೦ಡಿದ್ದರು. ಖ್ಯಾತ ಪ್ರಸಂಗಕರ್ತ ಮತ್ತು ಯಕ್ಷಗಾನ ಕಲಾವಿದ ಡಾ| ಚಂದ್ರಶೇಖರ ಶೆಟ್ಟಿ ಅವರ ಸಮರ್ಥ ಹವ್ಯಾಸಿ ತಂಡ ಆ ಕಾಲದಲ್ಲಿ ಪ್ರಚಲಿತದಲ್ಲಿತ್ತು. ಈ ತಂಡದ ಬಹುತೇಕ ಎಲ್ಲ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಪ್ರಭಾಕರ ಅತಿಕಾರಿ, ಶಿವಸ್ವಾಮಿ ಹೊಳ್ಳ, ಅರಾಟೆ ಮಂಜುನಾಥ, ಹಾರಾಡಿ ಕುಷ್ಟ ಗಾಣಿಗ, ನ್ಯಾಯವಾದಿ ಎಂ.ಎಂ.ಹೆಗ್ಡೆ ಮುಂತಾದ ಸಮರ್ಥ ಕಲಾವಿದರ ಸಹಭಾಗಿತ್ವ ಇವರ ಬೆಳವಣಿಗೆಗೂ ಕಾರಣವಾಯಿತು.

ವೃತ್ತಿ , ಕಲಾಸೇವೆ

1975ರ ಸುಮಾರಿಗೆ ಬಡಗುತಿಟ್ಟಿ ಯಕ್ಷಗಾನ ರಂಗಭೂಮಿಗೆ ಕಾಯಕಲ್ಪವಾಯಿತು ಎನ್ನಬಹುದು. ಘಟಾನುಘಟಿ ಕಲಾವಿದರು ಪಳ್ಳಿ ಸೋಮನಾಥ ಹೆಗ್ಡೆ ಅವರ ವ್ಯವಸ್ಥಾಪಕತ್ವದ ಸಾಲಿಗ್ರಾಮ ಮೇಳದಲ್ಲಿ ವಿಜೃಂಭಿಸುತ್ತಿದ್ದರು. ಇವರಲ್ಲಿ ಕೆರೆಮನೆ ಶಿವರಾಮ ಹೆಗ್ಡೆ, ಮಹಾಬಲ ಹೆಗ್ಡೆ, ಶಿರಿಯಾರ ಮಂಜುನಾಯ್ಕ, ದೊಡ್ಡ ಸಾಮಗರು, ಭಾಗವತ ನಾರಣಪ್ಪ ಉಪ್ಪೂರು ಮೊದಲಾದವರು ಒಳಗೊಂಡಿದ್ದರು. ಅವರ ಕಲಾಪ್ರೌಢಿಮೆಗೆ ಯಕ್ಷಗಾನದಲ್ಲಿ ಕೊಂಚವೂ ಆಸಕ್ತಿಯಿಲ್ಲದವರೂ ಮೇಳದ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಮಂತ್ರಮುಗ್ಧರಾಗುತ್ತಿದ್ದರು.

ಇದೇ ಹೊತ್ತಿನಲ್ಲಿ ತನ್ನ ಅಮೋಘ ಕಂಠಶ್ರೀಯಿಂದ ಯಕ್ಷಗಾನ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಭಾಗವತ ಕಾಳಿಂಗ ನಾವಡರ ಪ್ರವೇಶವಾಯಿತು. ಉತ್ತರ ಕನ್ನಡದ ಮಹಾನ್‌ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಲಕ್ಷಾಂತರ ಪ್ರೇಕ್ಷಕರ ಮನಸೂರೆಗೈದರು. ಕೆರೆಮನೆ ಮಹಾಬಲ ಹೆಗ್ಡೆಯವರ ಭೀಷ್ಮ, ದುಷ್ಟಬುದ್ಧಿ, ಚಿಟ್ಟಾಣಿಯವರ ಭಸ್ಮಾಸುರ, ಕೀಚಕ, ಶಂಭು ಹೆಗ್ಡೆಯವರ ಮದನ, ಸಾಲ್ವ, ರಾಮ, ಕೃಷ್ಣ, ಗಜಾನನ ಹೆಗಡೆಯವರ ಅಂಬೆ, ವಿಷಯೆ, ಶಿರಯಾರ ಮಂಜುನಾಯಕರ ದೇವವೃತ, ಸುಧನ್ವ, ವೀರಭದ್ರ ನಾಯಕರ ಶಂತನು ಪಾತ್ರಗಳು ಇವರ ಮೇಲೆ ವಿಶೇಷ ಪರಿಣಾಮಗಳನ್ನು ಬೀರಿದವು.

ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿದ ಅನಂತರ ಬೆಂಗಳೂರಿನಲ್ಲಿ ಎರಡು ವರ್ಷ ಉನ್ನತ ಶಿಕ್ಷಣ ಪೂರೈಸಿ ಊರಿಗೆ ಬಂದಿದ್ದೆ. ಆಗ ನಾರಣಪ್ಪ ಉಪ್ಪೂರರು ಸಾಲಿಗ್ರಾಮ ಮೇಳ ಬಿಟ್ಟು ಅಮೃತೇಶ್ವರಿ ಮೇಳ ಸೇರಿದಾಗ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಕಾಳಿಂಗ ನಾವಡರು ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾಗಿ ಸೇರಿದ್ದರು. ಈ ಹೊತ್ತಿನಲ್ಲಿ ನಾವಡರು ತನ್ನ ಕಂಠ ಮಾಧುರ್ಯದಿಂದಾಗಿ ಕೀರ್ತಿ ಶಿಖರಕ್ಕೇರಿಯಾಗಿತ್ತು. ಪೆರ್ಡೂರು ಮೇಳದಲ್ಲಿ ಅವರ ಅನುಪಸ್ಥಿತಿ ಆ ಮೇಳಕ್ಕೆ ದೊಡ್ಡ ಆಘಾತವನ್ನೇ ತಂದೊಡ್ಡಿತು. ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿಯವರು ಕೆಲವು ಕಡೆಗಳಲ್ಲಿ ಇವರ ಭಾಗವತಿಕೆ ಆಲಿಸಿದ್ದರಿಂದ ಇವರನ್ನು ಅವರ ಮೇಳಕ್ಕೆ ಸೇರುವಂತೆ ಒತ್ತಾಯಿಸಿದ್ದರು. ಆದರೆ ತಂದೆಯವರು ಇದಕ್ಕೆ ಒಪ್ಪಲಿಲ್ಲ. ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆಯವರ ಒತ್ತಾಯಕ್ಕೆ ಮಣಿದು ತಂದೆಯವರು ಒಪ್ಪಿದ್ದರಿಂದ ಪೆರ್ಡೂರು ಮೇಳ ಸೇರಿ ವ್ಯವಸಾಯ ಭಾಗವತನಾಗಿ ಕಲಾ ವ್ಯವಸಾಯ ಪ್ರಾರಂಭಿಸಿದರು. ಆಗ ಬೆಳೆಸಳಿಗೆ ಗಣಪತಿ ಹೆಗಡೆಯವರು ಬರೆದ ರಂಗ ತರಂಗ ಪ್ರಸಂಗ ಬಹಳ ಜನಪ್ರಿಯವಾಯಿತು. ಈ ಪ್ರಸಂಗದಲ್ಲಿ ಯಕ್ಷಗಾನ ಕಲಾರಂಗದಲ್ಲಿ ಪ್ರಪ್ರಥಮವಾಗಿ ಮಾಡಿದ ದ್ವಿಪಾತ್ರ ಪ್ರಯೋಗ ಪ್ರೇಕ್ಷಕರಲ್ಲಿ ಆಸಕ್ತಿ, ಕುತೂಹಲ ಕೆರಳಿಸಿತ್ತು. ಮಲ್ಪೆ ವಾಸುದೇವ ಸಾಮಗರು ಪರಿಣಾಮಕಾರಿಯಾಗಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ವಿಶ್ವಾಮಿತ್ರ ಮೇನಕೆ, ಧರ್ಮಾಂಗದ ದಿಗ್ವಿಜಯ ಪ್ರಸಂಗಗಳೂ ಬಹಳ ಪ್ರಯೋಗಗಳನ್ನು ಕಂಡಿದ್ದವು.

ಈ ತನ್ಮಧ್ಯೆ ಇವರಿಗೆ ಬ್ಯಾಂಕ್‌ ಉದ್ಯೋಗ ದೊರೆಯಿತು. ಇದಕ್ಕಾಗಿ ಮೇಳ ಬಿಟ್ಟು ಮುಂಬಯಿಗೆ ಬರಬೇಕಾಯಿತು. ದುರದೃಷ್ಟವಶಾತ್‌ ಮುಂಬಯಿಗೆ ಇವರು ಬಂದ ಕೆಲವೇ ವಾರಗಳಲ್ಲಿ ಮೇಳ ನಿಂತು ಹೋಯಿತು.

1980ರಲ್ಲಿ ಉದ್ಯೋಗಾರ್ಥಿಯಾಗಿ ಮುಂಬೈಗೆ ಬಂದ ಸಂದರ್ಭದಲ್ಲಿ ಮೊದಲಿಗೆ ಇವರನ್ನು ಸಂಪರ್ಕಿಸಿದವರು ಪದವೀಧರ ಯಕ್ಷಗಾನ ಸಮಿತಿಯ ಎಚ್‌.ಬಿ.ಎಲ್‌.ರಾವ್‌. ಇವರ ತಂದೆಯವರನ್ನು ಬಹಳ ವರ್ಷಗಳಿಂದ ಬಲ್ಲ ಅವರು ಇವರ ಬಗ್ಗೆಯೂ ಬಹಳಷ್ಟು ತಿಳಿದುಕೊಂಡಿದ್ದರು. ಅವರ ಪದವೀಧರ ಯಕ್ಷಗಾನ ಸಮಿತಿ ಸಮರ್ಥ ಕಲಾವಿದರನ್ನು ಒಳಗೊಂಡಿತ್ತು. ಆ ತಂಡದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಒಂದು ಅಪೂರ್ವ ಅನುಭವವಾಗಿತ್ತು. ಈ ಮಧ್ಯೆ ಆತ್ಮೀಯರಾದ ಮೂಳೂರು ಸಂಜೀವ ಕಾಂಚನ್‌ ಅವರ ಪರಿಚಯವಾಗಿ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಗೆ ಹೋಗಬೇಕಾಯಿತು. ಸಹೃದಯಿ ಕಲಾವಿದರಾದ ಇನ್ನ ಆನಂದ ಎಂ.ಶೆಟ್ಟಿ, ಆಗ ಮುಂಬೈಯಲ್ಲಿ ನೆಲೆಸಿದ್ದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಮಾನಾಡಿ ಸದಾನಂದ ಶೆಟ್ಟಿ, ಕಟೀಲು ಸದಾನಂದ ಶೆಟ್ಟಿ, ಸತೀಶ್‌ ಕಾಪು, ತುಂಬೆರಾಜೆ, ಅಜೆಕಾರು ಬಾಲಕೃಷ್ಣ ಶೆಟ್ಟಿ, ನರೇಂದ್ರ ತೋಳಾಣ, ಕಣಂಜಾರ್‌ ಸುರೇಶ್‌ ಶೆಟ್ಟಿ ಮೊದಲಾದರ ಕಲಾವಿದರ ಪ್ರೀತಿ, ವಿಶ್ವಾಸ, ಗೌರವಾದರಗಳನ್ನು ಗಳಿಸುವ ಅವಕಾಶವೂ ಲಭ್ಯವಾಯಿತು. ಮಂಡಳಿಯ ಕಾರ್ಯಾಧ್ಯಕ್ಷನಾಗಿ, ಪ್ರಧಾನ ಭಾಗವತನಾಗಿ ಸೇವೆ ಸಲ್ಲಿಸುವ ಸೌಭಾಗ್ಯವನ್ನು ಮಂಡಳಿಯ ಕಲಾವಿದರು ಒದಗಿಸಿಕೊಕೊಟ್ಟರು.

ಇಲ್ಲಿನ ಇನ್ನುಳಿದ ಯಕ್ಷಗಾನ ಮಂಡಳಿಗಳಾದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ, ಶ್ರೀ ದತ್ತಾತ್ರೇಯ ಯಕ್ಷಗಾನ ಮಂಡಳಿಗಳಲ್ಲಿ ಕಲಾ ಸೇವೆಯನ್ನು ಮಾಡಿರುವರು.

1980ರ ದಶಕದಲ್ಲಿ ಇವರ ಮುಂಬಯಿ ವಾಸ್ತವ್ಯದ ಸಮಯದಲ್ಲಿ ಊರಿನಿಂದ ಬರುತ್ತಿದ್ದ ಎಲ್ಲ ಮೇಳಗಳಲ್ಲಿ ಅತಿಥಿ ಭಾಗವತನಾಗಿ ಭಾಗವಹಿಸುತ್ತಿದ್ದರು. ಗೋಪಾಲ ಕೃಷ್ಣ ಯಕ್ಷಗಾನ ಕಲಾಸಂಪದ ಪಡೀಲು ಇದರ ವ್ಯವಸ್ಥಾಪಕರಾದ ಕರ್ನೂರು ಕೊರಗಪ್ಪ ರೈಲುಗಳು ತೆಂಕು ತಿಟ್ಟಿನ ಸಮರ್ಥ ಕಲಾವಿದರ ಆಯ್ದ ತಂಡವನ್ನು ಮುಂಬಯಿಯ ಸಂಘಟಕರಿಗೆ ಒದಗಿಸುವ ಜವಾಬ್ದಾರಿ ಹೊರುತ್ತಿದ್ದರು. ರೈಗಳನ್ನು ಮೊದಲೇ ಬಲ್ಲವರಾಗಿದ್ದರೂ ಅವರ ಜತೆ ನಿಕಟ ಆತ್ಮೀಯತೆ ಮುಂಬಯಿಯಲ್ಲಿ ಬೆಳೆಯಿತು. ಇವರ ಮತ್ತು ಯಕ್ಷಗಾನದ ಕೋಗಿಲೆ ಕಾಳಿಂಗ ನಾವಡರ ಅಭಿಮಾನಿಯಾಗಿದ್ದ ರೈಗಳು ಅವರ ಸಂಘಟನೆಯ ಯಾವುದೇ ಕಾರ್ಯಕ್ರಮಕ್ಕೂ ಅವರಿಬ್ಬರನ್ನೂ ಆಹ್ವಾನಿಸುತ್ತಿದ್ದರು.

1981ರಲ್ಲಿ ಭರ್ಜರಿ ವ್ಯವಸ್ಥೆಗಳೊಂದಿಗೆ ಕೊರಗಪ್ಪ ರೈಗಳ ವ್ಯವಸ್ಥಾಪಕತ್ವದಲ್ಲಿ ಕದ್ರಿ ಮೇಳ ತಿರುಗಾಟ ಪ್ರಾರಂಭಿಸಿತು. ಮೇಳದಲ್ಲಿ ಸಮರ್ಥ ಭಾಗವತರ ಶೋಧನೆಯಲ್ಲಿದ್ದ ಕೊರಗಪ್ಪ ರೈಗಳ ಮನಸ್ಸಿಗೆ ಇವರ ವಿಷಯ ಹೊಳೆಯಿತು. ಕಾರ್ಪೋರೇಶನ್‌ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ ಇವರನ್ನು ಹೇಗಾದರೂ ಮಾಡಿ ವಿಶೇಷ ರಜೆ ಮೂಲಕ ಮೇಳಕ್ಕೆ ಕರೆಸಿಕೊಳ್ಳಬೇಕು ಎಂದು ಯೋಜನೆ ರೂಪಿಸಿದ್ದರು. ಸಾರ್ವಜನಿಕ ರಂಗದ ಬಹಳಷ್ಟು ಮುತ್ಸದ್ದಿಗಳನ್ನು ಬಹಳ ನಿಕಟವಾಗಿ ಬಲ್ಲ ಕೊರಗಪ್ಪ ರೈಗಳು ಬ್ಯಾಂಕಿನ ಅಧ್ಯಕ್ಷರಾದ ವೈ.ಎಸ್‌.ಹೆಗ್ಡೆಯವರಲ್ಲಿ ಇವರ ವಿಶೇಷ ರಜೆಯ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ವರ್ಷ ಸತ್ಯದಪ್ಪೆ ಚೆನ್ನಮ್ಮ ಪ್ರಸಂಗ ಯಕ್ಷಗಾನ ರಂಗದಲ್ಲಿ ದಾಖಲೆ ನಿರ್ಮಿಸಿತು. ಇದಕ್ಕೆ ಕಾರಣ ಹೊಸ ಅವಿಷ್ಕಾರಗಳು, ಬಡಗುತಿಟ್ಟಿನ ಚಾಲು ಕುಣಿತಗಳ ಮಿತವಾದ ಬಳಕೆ, ಎಲ್ಲ ಕಲಾವಿದರ ಪ್ರಾಮಾಣಿಕ ದುಡಿಮೆ. ಮುಂದಿನ ವರ್ಷ ಪೊಳಲಿ ನಿತ್ಯಾನಂದ ಕಾರಂತ ಬರೆದ ಧರ್ಮಧಾರೆ ಪ್ರಸಂಗ ಜನಪ್ರಿಯವಾಯಿತು. ಆ ತಿರುಗಾಟದಲ್ಲಿ ಕೇವಲ ಮೂರು ತಿಂಗಳು ಭಾಗವತನಾಗಿ ದುಡಿದಿದ್ದರು. ಬ್ಯಾಂಕಿನ ಕೆಲಸದಿಂದಾಗಿ ಅಪರೂಪಕ್ಕೊಮ್ಮೆ ಅತಿಥಿ ಭಾಗವತನಾಗಿ ಕದ್ರಿ ಮೇಳದಲ್ಲಿ ಭಾಗವಹಿಸುತ್ತಿದ್ದರು. ಮುಂಬಯಿಯಿಂದ ಮಂಗಳೂರಿಗೆ ಕಾರ್ಯಕ್ರಮ ನಿಮಿತ್ತ ಭಾಗವಹಿಸಲು ಇವರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದರು ರೈಗಳು. ಇದರ ಫಲಶ್ರುತಿಯಾಗಿ ಇವರಿಗೆ ವಿಮಾನ ಭಾಗವತ ಎಂಬ ಅನ್ವರ್ಥನಾಮವೂ ದೊರೆಯಿತು.

ಬಡಗುತಿಟ್ಟಿನ ಸರ್ವಶ್ರೇಷ್ಠ ಭಾಗವತ ಕಾಳಿಂಗ ನಾವಡರನ್ನು ಮತ್ತು ಇವರನ್ನು ಒಂದೇ ವೇದಿಕೆಯಲ್ಲಿ ಜತೆಯಲ್ಲಿ ಹಾಡಿಸಬೇಕೆಂಬ ಪ್ರಯತ್ನ ಅಭಿಮಾನಿಗಳಲ್ಲಿ ಪ್ರಾರಂಭವಾಯಿತು. ಅದುವರೆಗೆ ಯಕ್ಷಗಾನದಲ್ಲಿ ಒಂದೇ ಹಾಡನ್ನು ಅಥವಾ ಒಂದೇ ಸನ್ನಿವೇಶದ ವಿಭಿನ್ನ ಪಾತ್ರಗಳ ಹಾಡುಗಳನ್ನು ಎರಡು ತಿಟ್ಟಿನ ಭಾಗವತರು ಹಾಡುವ ದ್ವಂದ ಹಾಡುಗಾರಿಕೆ ಪ್ರಚಲಿತದಲ್ಲಿ ಇರಲಿಲ್ಲ. ಇದು ಕಲಾವಿದರ ನಡುವೆ ಸ್ಪರ್ಧೆಯ ಜತೆಯಲ್ಲಿ ವೈಷಮ್ಯವನ್ನೂ , ವೃತ್ತಿ ಮಾತ್ಸರ್ಯವನ್ನೂ, ಗುಂಪುಗಾರಿಕೆಯನ್ನೂ ಮೆರೆಸುವುದಕ್ಕೆ ಕಾರಣವಾಯಿತೆಂಬುದು ಇವರ ಊಹೆ. ಬಹಳಷ್ಟು ಅನ್ಯೋನ್ಯವಾಗಿದ್ದ ಇವರ ಮತ್ತು ಕಾಳಿಂಗ ನಾವಡರ ಸಂಬಂಧ ಇಂಥ ಕೆಲವು ಕಾರ್ಯಕ್ರಮಗಳ ಅನಂತರ ಹಳಸಲು ಪ್ರಾರಂಭವಾಗಿತ್ತು. ಇದು ತೀರಾ ಕೆಟ್ಟ ಬೆಳವಣಿಗೆ. ಕೆಲವು ಕಾರ್ಯಕ್ರಮಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದೂ ಇದೆ. ಆಗಿನ ಇನ್ನೋರ್ವ ಪ್ರಸಿದ್ಧ ಭಾಗವತ ಕಡತೋಕ ಮಂಜುನಾಥ ಭಾಗವತರೂ ನಾವಡರೊಂದಿಗೆ ದ್ವಂದ ಹಾಡುಗಾರಿಕೆ ಮಾಡುತ್ತಿದ್ದರು. ಒಂದು ಕಾರ್ಯಕ್ರಮದಲ್ಲಿ ಕಡತೋಕರ ಚರ್ಯೆಯಿಂದ ಇನ್ಮುಂದೆ ದ್ವಂದ ಹಾಡುಗಾರಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ನಾವಡರು ಶಪಥ ಮಾಡಿದ್ದರು. ಮಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಇವರು ಅವರಿಗೆ ಸಿಕ್ಕಿದಾಗ ದ್ವಂದ ಹಾಡುಗಾರಿಕೆಯ ಬಗ್ಗೆ ಬಹಳ ನೋವಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅನಂತರ ಇವರೂ ದ್ವಂದ ಹಾಡುಗಾರಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ನಾವಡರಿಗೆ ಆಶ್ವಾಸನೆ ನೀಡಿದ್ದರು.

ಸಾ೦ಸಾರಿಕ ಜೀವನ

1984ರಲ್ಲಿ ಇವರ ವಿವಾಹ ನಡೆಯಿತು. ಇವರ ಸಹೋದ್ಯೋಗಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನೀತಾ ಎಂಬಳವಳನ್ನು ವಿವಾಹವಾದರು. ಆ ಕಾಲದಲ್ಲಿ ಬಂಟರ ಸಮಾಜದಲ್ಲಿ ಅಂತರ್ಜಾತಿ ವಿವಾಹ ಬಹಳ ವಿವಾದಸ್ಪದ ಮತ್ತು ನಿಷಿದ್ಧ. ಇವರ ಕುಟುಂಬದವರು ಈ ಮದುವೆಯನ್ನು ಬಹಿಷ್ಕರಿಸಿದ್ದರು. ಆ ಸಂದರ್ಭದಲ್ಲಿ ಕಾಳಿಂಗ ನಾವಡರು ದೂರವಾಣಿ ಮೂಲಕ ಇವರನ್ನು ಸಂಪರ್ಕಿಸಿ ಸ್ವಾಂತನದ ನುಡಿಗಳನ್ನು ಹೇಳಿದ್ದರು. ಡಾ| ಸುನೀತಾ ಶೆಟ್ಟಿ ನಮ್ಮನ್ನು ಮನೆಗೆ ಆಹ್ವಾನಿಸಿ ಭರ್ಜರಿ ಊಟ ಹಾಕಿ ನಿಂದನೆಗಳಿಗೆ ಧೃತಿಗೆಡದಂತೆ ಧೈರ್ಯ ತುಂಬಿದ್ದರು. ಇವರ ತಂದೆಯವರು ಕುಟುಂಬದ ಇತರರ ಒತ್ತಡಕ್ಕೆ ಸುಮ್ಮನಿದ್ದರೂ ಮನಃಪೂರ್ವಕವಾಗಿ ಇವರ ಅಂತರ್ಜಾತಿ ವಿವಾಹವನ್ನು ವಿರೋಧಿಸಲಿಲ್ಲ.

ಊರಿನಿಂದ ಪೂರ್ಣ ಪ್ರಮಾಣದ ಭಾಗವತನಾಗಿ ಮುಂಬಯಿಗೆ ಬಂದರೂ ಇವರನ್ನು ಮುಂಬಯಿ ಭಾಗವತನೆಂದು ಊರಿನಲ್ಲಿ ಅಭಿಮಾನಿಗಳು ಕರೆಯುತ್ತಾರೆ. ಇದರಿಂದ ಮುಂಬಯಿ ಯಕ್ಷರಂಗ ಭೂಮಿಯಲ್ಲಿ ಇವರ ದುಡಿಮೆ ಪರಿಗಣಿಸಲ್ಪಟ್ಟಿದೆ ಎಂಬ ಧನ್ಯತಾ ಭಾವ ಮೂಡುತ್ತದೆ. ಊರಿನ ಕಲಾವಿದರು ಮುಂಬಯಿಗೆ ಬಂದಾಗ ಅವರ ಜತೆಯಲ್ಲಿ ಇವರು ಭಾಗವಹಿಸುವಾಗ ಮುಂಬಯಿಯ ಕಲಾಭಿಮಾನಿಗಳು ಪ್ರೋತ್ಸಾಹಿಸಿ ಇವರನ್ನು ಹುರಿದುಂಬಿಸಿರುವುದು ಇವರ ಬೆಳವಣಿಗೆಗೆ ಕಾರಣವಾಯಿತು ಎನ್ನಬಹುದು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಮುಂಬಯಿಯಲ್ಲಿ ಯಕ್ಷಗಾನ ತಾಳಮದ್ದಲೆಗೆ ವಿಶೇಷವಾದಂಥ ಪ್ರಬುದ್ಧ ಪ್ರೇಕ್ಷಕ ವರ್ಗ ಸಿದ್ಧವಾಗಿರುವುದು ಒಳ್ಳೆಯ ಬೆಳವಣಿಗೆ ಮತ್ತು ಸಂತೋಷದ ವಿಷಯ. ಊರಿನಿಂದ ಪ್ರತಿಭಾವಂತ ಕಲಾವಿದರ ತಂಡವನ್ನು ಕರೆಸಿ, ಮುಂಬಯಿ, ಪುಣೆ, ನಾಸಿಕ್‌ ಮೊದಲಾದ ಕಡೆಗಳಲ್ಲಿ ತುಂಬು ಪ್ರೇಕ್ಷಕರ ಮುಂದೆ ಅವಿಸ್ಮರಣೀಯ ತಾಳಮದ್ದಲೆ ಕಾರ್ಯಕ್ರಮಗಳನ್ನು ಸಂಘಟಿಸುವ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಅವರ ಬಳಗದ ಪ್ರಯತ್ನ ಶ್ಲಾಘನೀಯ.

ಮಕ್ಕಳಲ್ಲಿ ತಾಯ್ನಾಡಿನ ಸಂಸ್ಕೃತಿಯ ಅರಿವು ಮೂಡಿಸಲು ಹುಟ್ಟಿದ ಸಂಸ್ಥೆ ಚಿಣ್ಣರ ಬಿಂಬ. ಈ ಸ್ತುತ್ಯ ಉಪಕ್ರಮ ಇವರನ್ನು ಆಕರ್ಷಿಸಿತು. ತೆಂಕು-ಬಡಗು ಉಭಯ ತಿಟ್ಟುಗಳ ಘಟಾನುಘಟಿ ಕಲಾವಿದರುಗಳಿಗೆ ಭಾಗವತಿಕೆ ಮಾಡಿ, ಆನಂದಾನುಭೂತಿಯನ್ನು ಅನುಭವಿಸಿದ ಇವರಿಗೆ ಎಳೆಹರೆಯದ ಚಿಣ್ಣರನ್ನು ಕುಣಿಸುವ ಅನುಭವ ಹೊಸತು. ಈ ಮಕ್ಕಳ ಅಭಿನಯ ಸಾಮರ್ಥ್ಯ, ಪಾತ್ರಾಭಿವ್ಯಕ್ತಿಯನ್ನು ವೇದಿಕೆಯ ಇಕ್ಕೆಲಗಳಲ್ಲಿ ಕಾಣಲು ತವಕ ಪಡುವ ಚಿಣ್ಣರ ಹೆತ್ತವರನ್ನೂ ಗಮನಿಸುವುದು ಒಂದು ಅಪೂರ್ವ ಅನುಭವ. ಶಿಸ್ತುಬದ್ಧವಾಗಿ ನಡೆಯುತ್ತಿರುವ ಚಿಣ್ಣರ ಬಿಂಬದ ಕಾರ್ಯಕ್ರಮಗಳು ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟಿವೆ. ಚಿಣ್ಣರ ಬಿಂಬದ ಚಟುವಟಿಕೆಗಳಿಂದಾಗಿ ಮುಂಬಯಿಯಲ್ಲಿ ಯಕ್ಷಗಾನ ಪ್ರೇಕ್ಷಕರ ಸಂಖ್ಯೆ, ಕಲಾಸಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು ಉತ್ತಮ ಬೆಳವಣಿಗೆ. ಚಿಣ್ಣರ ಬಿಂಬದ ಕೀರ್ತಿ ದಿಗಂತ ವ್ಯಾಪಿಸಲಿ ಎಂಬುದು ಇವರ ಹಾರೈಕೆ.

ಇವರಿಗೆ ಇಬ್ಬರು ಮಕ್ಕಳು. ಮಗಳು ಕಾವ್ಯ ಮತ್ತು ಮಗ ಕಾರ್ತಿಕ್‌. ಇವರ ಕಲಾಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಅಭಿಮಾನದಿಂದ ಸಮ್ಮಾನಿಸಿವೆ.



ಕೃಪೆ : http://www.udayavani.com
ಈ ಲೇಖನಕ್ಕೆ ಸ೦ಪೂರ್ಣ ವಿವರಗಳು ಲಭ್ಯವಾಗಿಲ್ಲ. ಆಸಕ್ತರು ಯಾವುದೇ ಮೌಲ್ಯಯುತ ಮಾಹಿತಿಗಳನ್ನು ಕಳುಹಿಸಬೇಕಾಗಿ ವಿನ೦ತಿ.

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ