ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಕಲಾಭಿಮಾನಿಗಳ ಸಹಾಯದ ನಿರೀಕ್ಷೆಯಲ್ಲಿ ಶಶಿಕಿರಣ ಕಾವು

ಲೇಖಕರು :
ಕಟೀಲು ಸಿತ್ಲ ರಂಗನಾಥ ರಾವ್
ಸೋಮವಾರ, ಆಗಸ್ಟ್ 10 , 2015

ಶಶಿಕಿರಣ ಕಾವು ಅವರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಮುಖವರ್ಣಿಕೆ, ನಾಟ್ಯ ಮತ್ತು ಹಾವ ಭಾವಾಭಿವ್ಯಕ್ತಿಗಳಿಂದ ಒಳ್ಳೆಯ ಕಲಾವಿದರೆಂದೆನಿಸಿಕೊಂಡವರು. ಇವರು ಕಟೀಲು ಮೇಳ ಸಂಖ್ಯೆ 4ರಲ್ಲಿ ಬಣ್ಣದ ವೇಷಧಾರಿಯಾಗಿದ್ದ ಕಾಲದಲ್ಲಿ ಹಲವು ಬಣ್ಣದ ವೇಷಗಳನ್ನು ನಾನು ನೋಡಿದವನು ಮತ್ತು ಅತೀವ ಆನಂದವನ್ನು ಅನುಭವಿಸಿದವನು. ನನ್ನ ಹಾಗೆಯೇ ಬಹಳಷ್ಟು ಜನ ಇವರ ಕಲಾವಂತಿಕೆಯನ್ನು ಕಣ್ತುಂಬಿಕೊಂಡು ಆನಂದಿಸಿರಬಹುದು.

ಬಳಿಕ ವ್ಯವಸಾಯೀ ಮೇಳವನ್ನು ಬಿಟ್ಟು ಸುಳ್ಯದಲ್ಲಿ ತನ್ನದೇ ಆದ ಒಂದು ಎಲೆಕ್ಟ್ರೋನಿಕ್ ಅಂಗಡಿಯನ್ನು ಶುರು ಮಾಡಿ ತಕ್ಕಮಟ್ಟಿಗೆ ಬಾಳ ಬಂಡಿಯನ್ನು ಮುನ್ನಡೆಸುತ್ತಾ ಬಂದಿದ್ದರು. ಜತೆಯಲ್ಲಿ ಆಸಕ್ತಿಯ ಪ್ರೀತಿಯ ಕ್ಷೇತ್ರವಾದ ಯಕ್ಷಗಾನ ರಂಗವೂ ಇತ್ತಲ್ಲ. ಹವ್ಯಾಸಿಯಾಗಿ ಹೇಳಿಕೆಯ ಮೇರೆಗೆ ಕರೆದಲ್ಲಿ ಭಾಗವಹಿಸುತ್ತಾ ಕಲಾಭಿಮಾನಿಗಳಿಗೆ ಆನಂದವನ್ನು ಕೊಡುತ್ತಾ ಮುನ್ನಡೆಯುತ್ತಿದ್ದವರು. ಅಂತೂ ಬದುಕು ಸಾಗುತ್ತಿತ್ತು.

ಆದರೆ, ಇಂದೀಗ ನಮ್ಮ ಪ್ರೀತಿಯ ಶಶಿಕಿರಣ ಕಾವು ಅವರು ಅನಾರೋಗ್ಯಪೀಡಿತರಾಗಿದ್ದಾರೆ. ಆಮ ವಾತ ಅಂತ ಆಯುರ್ವೇದದಲ್ಲಿ ಅದನ್ನು ಹೆಸರಿಸುವುದು. ಇದನ್ನು ಆಂಗ್ಲದಲ್ಲಿ Rheumatism ಹೆಸರಿಸುತ್ತಾರೆ.

ಆಮ ಹಾಗೂ ವಾತ ಹೀಗೆ ಎರಡು ಬೇರೆ-ಬೇರೆ ಶಬ್ದಗಳಿಂದ ಕೂಡಿದ, ಆಮದ ಸ್ಥಾನ ಮತ್ತು ಪ್ರಕುಪಿತ ವಾತ ಇವುಗಳ ಗುಣಕರ್ಮಗಳನ್ನು ನಿರ್ದಿಷ್ಟವಾಗಿ ಸೇರಿಸಿ ಹೇಳಿರುವುದರಿಂದ ಇದನ್ನು ಪ್ರತ್ಯೇಕ ರೋಗವೆಂದು ಹೇಳಲಾಗಿದೆ. ಇದರಲ್ಲಿ ಸಂದುವಾತ ಹಾಗೂ ವಾತರಕ್ತಗಳೆಂದು ಎರಡು ವಿಧ. ಪುರುಷರಿಗಿಂತ ವಿಶೇಷವಾಗಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವುದು. ಕೈ-ಕಾಲು, ಸಣ್ಣ ಮೂಳೆಗಳ ಸಂಧಿಗಳಲ್ಲಿ ಪ್ರಾರಂಭಿಸಿ ಕ್ರಮೇಣ ದೊಡ್ಡ ಸಂಧಿಗಳನ್ನು ಪೀಡಿಸುವುದು.

ಇದಕ್ಕೆ ಕಾರಣಗಳು: ವಿರುದ್ಧ ಆಹಾರ, ವಿಲಕ್ಷಣ ಚೇಷ್ಟೆಗಳು, ಅಗ್ನಿಮಾಂದ್ಯ, ನಿಶ್ಚೇಷ್ಟತೆಯಿಂದ ಒಂದೆಡೆಗೆ ಕೂಡ್ರುವುದು, ಸ್ನಿಗ್ಧ ಭೋಜನ ಮಾಡಿದ ಕೂಡಲೇ ವಿಶ್ರಾಂತಿ/ವ್ಯಾಯಾಮ/ದಣಿವಾಗುವಂತಹ ಕೆಲಸ ಮಾಡುವುದರಿಂದ ಶರೀರದಲ್ಲಿ ಆಮದೋಷವುಂಟಾಗುವುದು. ಆಹಾರ ಸಂಯೋಗ, ಸಂಸ್ಕಾರ ಹಾಗೂ ಪ್ರಮಾಣ ಇತ್ಯಾದಿಗಳಲ್ಲಿ ಕಂಡಬರುವ, ಶರೀರಕ್ಕೆ ಒಗ್ಗದಿರುವ ಅಂಶಗಳಿಂದಲೂ ಆಮೋತ್ಪತ್ತಿ ಆಗುವುದು. ಇದು ಸಂದುಗಳಲ್ಲಿ ಸಂಚಿತವಾಗಿರುವಾಗ ಚಲನ-ವಲನಕ್ಕೆ ತುಂಬ ನೋವುಂಟಾಗುವುದು. ಆಮಾಂಶವು ಪಚನವಾದ ನಂತರವೇ ನೋವು-ಬಾವುಗಳು ಕಡಿಮೆ ಆಗುವುವು. ಇಲ್ಲದಿದ್ದರೆ ನೋವು ಕಾಣಿಸುತ್ತಿರುವುದು.

ಇದರ ಲಕ್ಷಣಗಳು: ಮೈ-ಕೈಗಳಲ್ಲಿ ನೋವು, ಅರುಚಿ, ಬಾಯಾರಿಕೆ, ಅಲಸ್ಯತೆ, ಮೈ ಭಾರ, ಜ್ವರ, ಅಜೀರ್ಣ ಹಾಗೂ ಸಂದುಗಳಲ್ಲಿ ಬಾವು ಕಂಡುಬರುವುದು. ಸ್ನಾಯು ಸಂಕೋಚ, ಬೆರಳುಗಳು ಸಂಕೋಚ, ಕೈಕಿರುಬೆರಳು ಸ್ವಲ್ಪ ತನ್ನ ಸ್ಥಾನದಿಂದ ದೂರವಾದಂತೆನಿಸುವುದು ಬೆರಳುಗಳಲ್ಲಿ ಸ್ವಲ್ಪ/ಹೆಚ್ಚು ಕಾರ್ಯ ಹಾನಿ. ಚರ್ಮದ ಒಳಭಾಗದಲ್ಲಿ ಪೇಶಿ-ಕಂಡರಾಗಳಲ್ಲಿ ಸಣ್ಣ ಸಣ್ಣ ಗಂಟುಗಳಾಗುವುವು. ಒಮ್ಮೊಮ್ಮೆ ಈ ರೋಗದ ಲಕ್ಷಣಗಳು ತಮ್ಮಷ್ಟಕ್ಕೆ ತಾವೇ ಹೋಗಿ ಮತ್ತೆ ಮರುಕಳಿಸಬಹುದು.

ಈ ಆಮ ವಾತಕ್ಕೆ ಆಂಗ್ಲ ಪದ್ಧತಿಯಲ್ಲಿ ಚಿಕಿತ್ಸೆ ಇಲ್ಲ. 21 ವರ್ಷಗಳ ವರೆಗೆ ಪ್ರತೀ ತಿಂಗಳಿಗೊಂದರಂತೆ ಇಂಜೆಕ್ಷನ್ ಇದೆ. ಆದರೆ ಇದು ದುಬಾರಿ ಮಾತ್ರವಲ್ಲದೇ ಶಮನಕಾರಿಯಲ್ಲ. ಆಯುರ್ವೇದ ಪದ್ಧತಿಯಲ್ಲಿ ಇದಕ್ಕೆ ಚಿಕಿತ್ಸೆ ಇದೆ. ಆದರೆ ಪಥ್ಯದೊಂದಿಗೆ ವಿಶ್ರಾಂತಿ ಅನಿವಾರ್ಯ ಅದೂ ಕೂಡ 3 ವರ್ಷಗಳಿಂದ 4 ವರ್ಷಗಳ ಪರ್ಯಂತ ಈ ಪಥ್ಯದ ಚಿಕಿತ್ಸೆಯನ್ನು ವಿಶ್ರಾಂತಿಯೊಡನೆ ಮಾಡಬೇಕು.

ಶಶಿಕಿರಣ ಕಾವು ಅವರು ಯಕ್ಷಗಾನ ಕಲಾವಿದರಾಗಿದ್ದುಕೊಂಡು ಮಾಡಿರಬಹುದಾದ ಸಂಪಾದನೆ ಕಡಿಮೆ. ಸುಳ್ಯದಲ್ಲಿರುವ ಅವರ ಅಂಗಡಿಯನ್ನೂ ಕೂಡ ಇಂದೀಗ ತನ್ನ ಈ ಅಸಹಾಯಕತೆಯ ಕಾರಣ ಬೇರೆಯವರಿಗೆ ಲೀಸಿಗೆ ಕೊಟ್ಟಿದ್ದಾರೆ. ಮಡದಿ ಮಕ್ಕಳ ಜತೆಗಿನ ಸಂಸಾರ, ಮಕ್ಕಳ ಶಾಲೆ ಅದರ ಫೀಸು, ಜತೆಗೆ ಕುಟುಂಬ ನಿರ್ವಹಣೆ, ಊಟ ತಿಂಡಿ ಅಂದರೆ ಒಂದು ಕುಟುಂಬ ನಿರ್ವಹಣೆ ಆದಾಯದ ಮೂಲವಿಲ್ಲದೇ ಹೋದಾಗ ಎಷ್ಟು ಕಷ್ಟ ಅಲ್ಲವೇ? ಅದೂ ಈಗ ಅತ್ತ ಯಕ್ಷಗಾನವೂ ಇಲ್ಲ, ಇತ್ತ ಅಂಗಡಿಯನ್ನೂ ಲೀಸಿಗೆ ಕೊಟ್ಟು ಆದಾಯದ ಮೂಲವೇ ಇಲ್ಲದಂತಾಗಿದೆ. ಕುಟುಂಬ ನಿರ್ವಹಣೆಯ ಜತೆಯಲ್ಲಿ ವೈದ್ಯಕೀಯ ಖರ್ಚುಗಳೂ ಸೇರಿ ನಮ್ಮ ಶಶಿಕಿರಣರಿಗೆ ಬಹಳ ಕಷ್ಟಕರ ಪರಿಸ್ಥಿತಿ ಒದಗಿದೆ.

ರಂಗದಲ್ಲಿ ಕಲಾವಿದನಾದವನು ವಿಜೃಂಭಿಸುವ ಸಮಯದಲ್ಲಿ ನಾವುಗಳು ಕಲಾಭಿಮಾನಿಗಳು ಹಾಗೂ ಆ ಕಲಾವಿದನ ಅಭಿಮಾನಿಗಳೆಂದು ಹೇಳಿಕೊಳ್ಳಲು ಎಷ್ಟು ಹೆಮ್ಮೆಪಡುತ್ತೇವೆ ಅಲ್ಲವೇ. ನಾವುಗಳು ಕಲಾವಿದನ ಅಭಿಮಾನಿ ಸಂಘವನ್ನೂ ಬಳಗವನ್ನೂ ಮಾಡಿಕೊಂಡು ಅದೆಷ್ಟು ಸಂಭ್ರಮಪಡುತ್ತೇವೆ ಅಲ್ಲವೇ. ಕಲಾವಿದನ ಅಭಿಮಾನಿ ಗಳೊಳಗೇ ನಮ್ಮ ಅಭಿಮಾನಿ ಕಲಾವಿದನೇ ಶ್ರೇಷ್ಟ ಎಂದೆನ್ನುತ್ತಾ ವಾಗ್ಯುದ್ಧವನ್ನೂ, ಜಗಳವನ್ನೂ ಮಾಡಿಕೊಳ್ಳುವ ಅಭಿಮಾನಿಗಳೂ ಇದ್ದಾರೆ.

ಆಗ ಇರುವ ಅಭಿಮಾನಿಗಳಾದ ನಾವು ಇಂದೀಗ ಇಂತಹ ಸಂಕಷ್ಟದ ಕಾಲದಲ್ಲಿ ಕಲಾವಿದನಾದವನಿಗೆ ಕಲಾಭಿಮಾನಿಯಾಗಿ, ಕಲಾವಿದನ ಅಭಿಮಾನಿಯಾಗಿ ಮಾತ್ರವಲ್ಲದೇ ಮಾನವೀಯತೆಯ ದೃಷ್ಟಿಯಿಂದ ನಮ್ಮ ಕೈ ಸೇರಿಸಿ ನಾವು ನಿಮ್ಮೊಡನಿದ್ದೇವೆ ಎಂದು ಧೈರ್ಯವನ್ನು ತುಂಬುವುದು ಮಾತ್ರವಲ್ಲದೇ ನಮ್ಮಿಂದಾಗುವ ಧನ ಸಹಾಯವನ್ನೂ ಮಾಡಬೇಕಾಗಿರುವುದು ನಮ್ಮ ಕರ್ತ್ಯವ್ಯವಲ್ಲವೇ. ಆಗ ನಮಗಾಗಿ ತನ್ನ ಆರೋಗ್ಯ ಚೆನ್ನಾಗಿಲ್ಲದೇ ಇದ್ದಾಗಲೂ ತನ್ನ ಅಭಿಮಾನಿಗಳು ತನ್ನ ವೇಷವನ್ನು ನೋಡಿ ಆನಂದಿಸಲು ಬಂದಿದ್ದಾರೆ ಎನ್ನುವ ಕಾರಣಕ್ಕೆ ತನ್ನ ಅನಾರೋಗ್ಯವನ್ನೂ ನಿರ್ಲಕ್ಷಿಸಿ ನಮಗಾಗಿ ಅದ್ಭುತ ಪ್ರದರ್ಶನವನ್ನು ನೀಡಿದ ದಿನಗಳನ್ನು ದಯಮಾಡಿ ನೆನೆದುಕೊಳ್ಳಿ. ವಿಜೃಂಬಿಸಿದ ಕಾಲದಲ್ಲಿ ಅಭಿಮಾನಿಗಳಾಗಿದ್ದ ನಾವು ಈ ಸಂಕಷ್ಟದ ಘಳಿಗೆಯಲ್ಲಿಯೂ ನಮ್ಮ ಅಭಿಮಾನವನ್ನು ತೋರ್ಪಡಿಸಿ ಕಲಾವಿದನನ್ನು ಬಲಪಡಿಸುವತ್ತ ಮನ ಮಾಡೋಣ. ಕಲಾವಿದನಿದ್ದರೆ ಮಾತ್ರ ಕಲೆ ಉಳಿಯುತ್ತದೆ ಎನ್ನುವುದನ್ನು ನೆನಪಲ್ಲಿರಿಸಿಕೊಂಡು ನಮ್ಮಿಂದಾದ ಸಹಾಯವನ್ನು ಮಾಡೋಣ.

ಅದಾಗಲೇ ಯಕ್ಷಗಾನ ಕಲಾರಂಗ ತನ್ನ ವತಿಯಿಂದ ರೂಪಾಯಿ 10, 000 ವನ್ನು ನೀಡಿದೆ. ಓರ್ವ ಕಲಾಪ್ರೇಮಿ ಶಶಿಕಿರಣರಿಗೆ ರೂಪಾಯಿ 5,000 ವನ್ನು ನೀಡಿದ್ದಾರೆ. ಆದರೆ ಇದು ಸಾಲದಾಗುತ್ತಿದೆ. ಇದುವರೆಗೆ ಅವರ ಚಿಕಿತ್ಸೆಗೆ ರೂಪಾಯಿ 60,000 ಕ್ಕೂ ಮಿಕ್ಕಿ ಖರ್ಚಾಗಿದೆ, ಇನ್ನೂ ಖರ್ಚು-ವೆಚ್ಚಗಳು ಆಗುವ ಸಂಭವನೀಯತೆಯೂ ಇದೆ.

ನಮ್ಮ ಶಶಿಕಿರಣ ಕಾವು ಅವರು ಬಹಳ ಒಳ್ಳೆಯ ಕಲಾವಿದರು ಜತೆಗೆ ಬಹಳ ಒಳ್ಳೆಯ ವ್ಯಕ್ತಿಯೂ ಹೌದು. ಇದು ತನಕದ ಅವರ ವೃತ್ತಿಜೀವನದಲ್ಲಿ ಅವರ ಕುರಿತಾದ ಒಂದು ಸಣ್ಣ ಕೆಟ್ಟ ಮಾತನ್ನಾಗಲೀ, ಹೀಗಳಿಕೆಯನ್ನಾಗಲೀ ನಾನು ಕೇಳಿದವನಲ್ಲ. ಇವರು ಬಹಳ ಸ್ವಾಭಿಮಾನಿಯೂ ಹೌದು. ಯಾರಿಂದಲೂ ಯಾವ ಕಾಲದಲ್ಲಿಯೂ ಯಾವುದೇ ರೀತಿಯ ಸಹಾಯವನ್ನು ಯಾಚಿಸಿದವರಲ್ಲ.

ಇಂತಹ ಒಳ್ಳೆಯ ಕಲಾವಿದನಿಗೆ ಒಬ್ಬ ಒಳ್ಳೆಯ ವ್ಯಕ್ತಿಗೆ ನಮ್ಮಿಂದಾಗುವ ಸಹಾಯವನ್ನು ಮಾಡೋಣ. ಅವರು ಆದಷ್ಟು ಶೀಘ್ರದಲ್ಲಿ ಗುಣಮುಖರಾಗಿ ಮತ್ತೆ ಯಕ್ಷರಂಗದಲ್ಲಿಯೂ ಮಿಂಚಲಿ ತನ್ನ ಬಾಳ ಪಯಣದಲ್ಲೂ ಗೆಲ್ಲಲಿ. ಅದಕ್ಕೆ ಕಲಾಭಿಮಾನಿಗಳೂ ಶಶಿಕಿರಣ ಕಾವು ಅವರ ಅಭಿಮಾನಿಗಳೂ ಆಗಿ ಸಹಾಯ ಸಹಕಾರವನ್ನು ನೀಡೋಣ.

ಈ ಕೆಳಗೆ ಶಶಿಕಿರಣ ಕಾವು ಅವರ ಬ್ಯಾಂಕು ಉಳಿತಾಯ ಖಾತೆಯ ಸಂಖ್ಯೆಯನ್ನೂ ಮತ್ತು IFSC ಕೋಡ್ ಅನ್ನೂ ಕೊಡಮಾಡಿದ್ದೇನೆ.

Account No - 64124742695
IFSC Code – SBMY0040152
Name - Shashikiran Kavu
Branch - SBM Puttur Branch
*********************
ಕೃಪೆ : rangasyaksharanga.blogspot


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ