ಸನ್ಮಾನಗೊಳ್ಳಲಿರುವ ಮಾರ್ವಿ ಶೈಲಿಯ ಸಿಧ್ಧಿಯ ಭಾಗವತ ಕೆ.ಪಿ.ಹೆಗಡೆ
ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಜುಲೈ 24 , 2015
ಬಡಗುತಿಟ್ಟಿನ ಸಂಪ್ರದಾಯ ಯಕ್ಷಗಾನದ ಶ್ರೇಷ್ಠ ಶೈಲಿಗಳಲ್ಲಿ ಒಂದಾದ ಮಾರ್ವಿ ಶೈಲಿಯ ಪ್ರಾತಿನಿಧಿಕ ಭಾಗವತ, ನಾರ್ಣಪ್ಪ ಉಪ್ಪೂರರ ಭಾಗವತಿಕೆ ಶೈಲಿಯ ಸಮರ್ಥ ಪ್ರತಿಪಾದಕ ಕೆ. ಪಿ ಹೆಗಡೆಯವರು ವೃತ್ತಿ ರಂಗಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬಡಗುತಿಟ್ಟಿನ ಹಿರಿಯ ಮೇಳವಾದ ಮಂದಾರ್ತಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಅಲ್ಲಿಯೇ ಭಡ್ತಿ ಪಡೆದು ದೀರ್ಘ ಕಾಲ ಮಂದಾರ್ತಿ ಮೇಳವೊಂದರಲ್ಲೇ ಸೇವೆ ಸಲ್ಲಿಸಿದ ಅವರು ಅಲ್ಲಿಂದಲೇ ಮೇಳಕ್ಕೆ ನಿವೃತ್ತಿ ಹೊಂದುತಿದ್ದಾರೆ. ಜಾನುವಾರುಕಟ್ಟೆ ಭಾಗವತರು, ಕುಂಜಾಲು ಶೇಷಗಿರಿ ಕಿಣಿ, ಗೋರ್ಪಾಡಿ ವಿಠಲ ಪಾಟೀಲ್, ಹರಾಡಿ ಅಣ್ಣಪ್ಪ ಗಾಣಿಗರು, ಮತ್ಯಾಡಿ ನರಸಿಂಹ ಶೆಟ್ಟರ ನಂತರ ಮಂದಾರ್ತಿ ಮೇಳವೊಂದರಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದವರಲ್ಲಿ ಇವರೂ ಒಬ್ಬರು.
ಬಾಲ್ಯ , ಶಿಕ್ಷಣ
ಬಡಾಬಡಗು ತಿಟ್ಟು ಯಕ್ಷಗಾನ ರಂಗಕ್ಕೆ ಮೇರು ಕಲಾವಿದರನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪ ಗುಳಗೋಡು ಎಂಬಲ್ಲಿ ಪರಮೇಶ್ವರ ಹೆಗಡೆ ತುಂಗಭದ್ರ ಅಮ್ಮನವರ ಪುತ್ರನಾಗಿ ಜನಿಸಿದ ಕೃಷ್ಣ ಪರಮೇಶ್ವರ ಹೆಗಡೆಯವರು ಆ ಕಾಲದಲ್ಲಿ ಎಸ್. ಎಸ್. ಎಲ್. ಸಿ ವರೆಗೆ ಓದು ಮುಗಿಸಿದವರು. ಅವರ ಮನೆತನವೇ ಯಕ್ಷಗಾನದ ಮನೆತನ. ಅವರ ಚಿಕ್ಕಪ್ಪ ಸಹೋದರ ಮಾವ ಸ್ವತಹ ಕಲಾವಿದರು. ಆರ್ಥಿಕ ಅಡಚಣೆಯಿಂದ ಓದು ನಿಲ್ಲಿಸಿದ ಹೆಗಡೆಯವರಿಗೆ ಸಂಗೀತದಲ್ಲಿ ಆಸಕ್ತಿ ಮೂಡಿತು. 1978ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಭಾಗವತಿಕೆ ತರಬೇತಿ ಪಡೆದರು. ದುರ್ಗಪ್ಪ ಗುಡಿಗಾರ ಮತ್ತು ಶಂಕರ ಭಾಗವತರ ಗಟ್ಟಿ ಮದ್ದಳೆಗಾರಿಕೆ ಇವರ ತಾಳ ಲಯವನ್ನು ಗಟ್ಟಿಗೊಳಿಸಿತು. ಸಹಪಾಠಿಗಳಾಗಿ ಸುಬ್ರಹ್ಮಣ್ಯ ಧಾರೇಶ್ವರ, ಆರ್. ಪಿ. ಹೆಗಡೆಯವರಂತ ಇಂದಿನ ಸಮರ್ಥ ಭಾಗವತರಿದ್ದರು. ಅಲ್ಲಿನ ತರಬೇತಿಯ ನಂತರ ಶ್ರೀ ಮಂದಾರ್ತಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಅಲ್ಲಿಯೇ ಒತ್ತು ಭಾಗವತರಾಗಿ ಭಡ್ತಿ ಪಡೆದರು.
ಸಿರಸಿ ಮೇಳದಲ್ಲಿ ಯಶಸ್ವಿ ತಿರುಗಾಟ
ಬಳಿಕ ಮೂಲ್ಕಿ, ಪೆರ್ಡೂರು. ಕುಮಟಾ, ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ಅವರ ಭಾಗವತಿಕೆ ಬದುಕಿನ ಸುವರ್ಣಯುಗ ಶ್ರೀ ಸಿರಸಿ ಮಾರಿಕಾಂಬ ಮೇಳದಲ್ಲಿ. ಘಟಾನುಘಟಿ ಕಲಾವಿದರಿದ್ದ ಆ ಮೇಳದಲ್ಲಿ ಸದಾಶಿವ ಅಮೀನ್, ಹೆರಂಜಾಲು ಗೋಪಾಲ ಗಾಣಿಗ, ಮತ್ತು ಹೆಗಡೆಯವರ ಭಾಗವತಿಕೆ, ಶಂಕರ ಭಾಗವತರ ಮದ್ದಳೆ, ಹಳ್ಳಾಡಿ ರಾಕೇಶ ಮಲ್ಯರ ಚೆಂಡೆಯೊಂದಿಗೆ ಗಜಗಟ್ಟಿ ಹಿಮ್ಮೇಳವೆಣಿಸಿತು. ಮುಮ್ಮೇಳದಲ್ಲೂ ಚಿಟ್ಟಾಣಿ, ಗೋಡೆ, ತೆಕ್ಕಟ್ಟೆ ಆನಂದ ಮಾಸ್ತರ್, ಕುಂಜಾಲು ರಾಮಕೃಷ್ಣ, ಎಂ. ಎ. ನಾಯ್ಕ, ಕೊಕ್ಕಡ ಈಶ್ವರ ಭಟ್, ತೋಟಿಮನೆ ಗಣಪತಿ ಹೆಗಡೆ, ಹೊಸಂಗಡಿ ಜಯರಾಮ ಗಾಣಿಗ, ಉಪ್ಪುಂದ ನಾಗೇಂದ್ರ, ಮುಂತಾದ ಕಲಾವಿದರಿದ್ದು ಅಂದು ಪ್ರದರ್ಶಿಸುತಿದ್ದ ಶ್ವೇತ ಪಂಚಕ, ಭಾಗ್ಯ-ಭಾರತಿ ಮುಂತಾದ ಪ್ರಸಂಗಗಳು ಆ ಕಾಲದಲ್ಲಿ ಅತ್ಯಂತ ಯಶಸ್ವಿಯಾಗಿತ್ತು.
ಪೆರ್ಡೂರು ಮೇಳದೊಂದಿಗೆ ವಿವಿದೆಡೆ ಜೋಡಾಟಗಳೂ ನಡೆದದ್ದಿದೆ. ಬಳಿಕ ಶ್ರೀ ಸಾಲಿಗ್ರಾಮ ಮೇಳದ ತಿರುಗಾಟದ ಬಳಿಕ ಪುನಹ 90ರ ದಶಕದಲ್ಲಿ ಮಂದಾರ್ತಿ ಮೇಳ ಸೇರಿದ ಅವರು ನಿವೃತ್ತಿಯವರೆಗೂ ಅಲ್ಲಿಯೇ ಸೇವೆ ಸಲ್ಲಿಸುತಿದ್ದರು. ಶ್ರೀ ಕಮಲಶಿಲೆ ಮೇಳದಲ್ಲೂ ಅವರು ತಿರುಗಾಟ ಮಾಡಿದ್ದಾರೆ.
ಕೆ.ಪಿ. ಹೆಗಡೆ
ಜನನ
:
ಜುಲೈ 7, 1959
ಜನನ ಸ್ಥಳ
:
ಗೋಳಗೋಡು ಸಿದ್ದಾಪುರ (ತಾ) ಉತ್ತರ ಕನ್ನಡ ಜಿಲ್ಲೆ ಕರ್ನಾಟಕ ರಾಜ್ಯ
ಕಲಾಸೇವೆ
:
ಪ್ರಸ್ತುತ ಮಂದರ್ತಿ ಮೇಳದಲ್ಲಿ ಭಾಗವತರಾಗಿದ್ದು, ಮೂಲ್ಕಿಮೇಳ, ಹಿರೇಮಹಾಲಿಂಗೆಶ್ವರ ಮೇಳ, ಪೆರ್ಡೂರು, ಕುಮಟಾ, ಪಂಚಲಿಂಗೇಶ್ವರ, ಶಿರಸಿ, ಸಾಲಿಗ್ರಾಮ, ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು
ಮಾರ್ವಿ ಶೈಲಿಯ ಪ್ರಾತಿನಿಧಿಕರು
ಭಾಗವತ ಕೆ. ಪಿ ಹೆಗಡೆಯವರು ನಾರಣಪ್ಪ ಉಪ್ಪೂರರ ಸಮರ್ಥ ಶಿಷ್ಯನಾಗಿದ್ದು ಬಡಗು ತಿಟ್ಟಿನ ಎರಡು ಪ್ರಮುಖ ಶೈಲಿಗಳಲ್ಲಿ ಒಂದಾದ ಮಾರ್ವಿ ಶೈಲಿಯ ಪ್ರಾತಿನಿಧಿಕ ಭಾಗವತರು. ಅವರ ಭಾಗವತಿಕೆಯಲ್ಲಿ ಗುರು ನಾರ್ಣಪ್ಪ ಉಪ್ಪೂರರ ಛಾಪು, ದಸ್ತುಗಳನ್ನು ಬಾಯಿ ತಾಳದ ಮೂಲಕ ಹಾಡುವ ಚಾಕಚಕ್ಯತೆ, ಅಪೂರ್ವ ರಂಗತಂತ್ರ, ಏರು ಶ್ರುತಿಯಲ್ಲಿ ಹಾಡಬಲ್ಲ ಕಂಠ, ರಾಗ ತಾಳ ಮತ್ತು ಲಯಗಳಲ್ಲಿ ಅಪೂರ್ವವಾದ ಹಿಡಿತವನ್ನು ಗಮನಿಸಬಹುದು. ರಾಮಾಂಜನೇಯ, ಚೂಡಾಮಣಿ, ಭಸ್ಮಾಸುರ-ಮೋಹಿನಿ ಮುಂತಾದ ಪ್ರಸಂಗಗಳ ಪದ್ಯಗಳನ್ನು ಉಪ್ಪೂರರ ಶೈಲಿಯಲ್ಲಿಯೇ ಹಾಡಿ ಜನಮನ ರಂಜಿಸಿದ್ದರು. ಸ್ವತಹ ಅಂದಿನ ಪ್ರಸಿದ್ದ ಭಾಗವತ ಕಾಳಿಂಗ ನಾವಡರೇ ಇಂತಹ ಪ್ರಸಂಗಗಳಿಗೆ ಕೆ. ಪಿ ಹೆಗಡೆಯವರೇ ಸಮರ್ಥರು ಎಂದು ಸಂಘಟಕರಿಗೆ ಹೇಳುತಿದ್ದರು. ರಾಮಾಂಜನೇಯದ ಸೀತೆಯ ಪದ್ಯ “ಏನಿದೇನು ಗುಟ್ಟು ಮಹನೀಯ” ಮತ್ತು ಅಂಗದ ಸಂದಾನದ “ಏನಪ್ಪ ರಾವಣೇಂದ್ರ ನೀನಾಜಾನಕಿಯನ್ನು ಕಾಣದಂತೆ ಕದ್ದು ತರಬಹುದೇನ್ಮ್ಯ” ಪದ್ಯಗಳು ಹಿಮ್ಮೇಳಾಸಕ್ತರನ್ನು ರಂಜಿಸಿದ ಪದ್ಯಗಳು.
ಹಂಗಾರಕಟ್ಟೆ ಕೇಂದ್ರದ ಗುರುವಾಗಿ ಅನೇಕ ಭಾಗವತ ಶಿಷ್ಯರನ್ನು ತಯಾರು ಮಾಡಿದ ಇವರ ಶಿಷ್ಯರಲ್ಲಿ ಕಿಗ್ಗ ಹಿರಿಯಣ್ಣ ಆಚಾರ್, ಸೂರಾಲು ರವಿ ಕುಮಾರರು ಪ್ರಮುಖರು. ಸುದೀರ್ಘ ಕಾಲ ಬಯಲಾಟ ಮೇಳಗಳಲ್ಲಿ ಸಾಂಪ್ರದಾಯದ ಭಾಗವತರಾಗಿ ಪ್ರಸಿಧ್ಧಿಯ ಗೋಜಿಗೆ ಹೋಗದೆ ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಇವರನ್ನು ಜುಲೈ 25 ಶನಿವಾರ ಸಿದ್ದಾಪುರದಲ್ಲಿ ಕೆ. ಕ್ಯೂಬ್ ಸಂಘಟನೆಯ ವತಿಯಿಂದ ಸಂಪತ್ತ್ ಕನ್ನಂತ ಇವರು ಗುರುವಂದನೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಗಣ್ಯರ ಉಪಸ್ಥಿತಿಯಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನವಿದೆ.
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.