ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಪ್ರಸಂಗ ಕರ್ತರ ಜೀವನ ಪ್ರಸಂಗ; ಲಘು-ಗುರು ಛಂದಸ್ಸಿನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಜೂನ್ 30 , 2015

ಯಕ್ಷಗಾನ ಕ್ಷೇತ್ರದ ಮೌಲ್ಯಾಧಾರಿತ ಪ್ರಸಂಗಕರ್ತ ಆದರ್ಶ ಅಧ್ಯಾಪಕ ಕುಂದಾಪುರ ತಾಲೂಕಿನ ಹೆಮ್ಮೆಯ ವರಪುತ್ರ ಕಂದಾವರ ರಘುರಾಮ ಶೆಟ್ಟರು 80ನೇ ಸಂವಸ್ತರಕ್ಕೆ ಕಾಲಿಡುತಿದ್ದಾರೆ. ಪರಿಸರ ಹಾಗೂ ಪರಂಪರೆಯ ಪ್ರಭಾವದಿಂದ ರೂಪುಗೊಂಡು ಪರಿಶ್ರಮದಿಂದ ಪ್ರಸಿದ್ಧಿಗೇರಿದ ಸಿದ್ಧಿಯ ಕಲಾವಿದ ಕಂದಾವರ ರಘುರಾಮ ಶೆಟ್ಟರು. ಛಂದೋಬದ್ಧವಾಗಿ ಪೌರಾಣಿಕ ಆಕರಗಳನ್ನೇ ಬಳಸಿಕೊಂಡು ಸುಮಾರು 20 ಪ್ರಸಂಗ ರಚಿಸಿದ ಇವರ ಎಲ್ಲಾ ಪ್ರಸಂಗಗಳು ಮೌಲ್ಯಾಧಾರಿತ ಮತ್ತು ಸುಸಂಬದ್ದವಾಗಿವೆ.

ಎಲ್ಲವೂ ಡೇರೆ ಮತ್ತು ಬಯಲಾಟ ಮೇಳಗಳಲ್ಲಿ ಯಶಸ್ಸನ್ನು ಕಂಡಿವೆ. 30 ವರ್ಷಗಳ ಹಿಂದೆ ಹೊಸದಾಗಿ ಡೇರೆ ಮೇಳವಾಗಿ ರೂಪುಗೊಂಡ ಪೆರ್ಡೂರು ಮೇಳಕ್ಕೆ ಇವರು ನೀಡಿದ ಪ್ರಥಮ ಪ್ರಸಂಗ ``ಶೂದ್ರ ತಪಸ್ವಿನಿ`` ಯಜಮಾನರ ಗಲ್ಲಾಪೆಟ್ಟಿಗೆ ತುಂಬಿಸಿ ವರ್ಷವಿಡೀ ಜಯಬೇರಿ ಬಾರಿಸಿದೆ. ಸಾಲಿಗ್ರಾಮ ಮೇಳದಲ್ಲಿ ಇವರ ``ಚಲುವೆ-ಚಿತ್ರಾವತಿ, ರತಿ-ರೇಖಾ, ಸತೀಸೀಮಂತಿನಿ, ವಸುವರಾಂಗಿ`` ಮತ್ತು ಮೂಲ್ಕಿ ಮೇಳದಲ್ಲಿ ``ಸೀತಾ ಪಾರಮ್ಯ`` ಪ್ರಸಂಗವೂ ಜಯಬೇರಿ ಪಡೆದಿವೆ. ಇವರ ``ಶ್ರೀ ದೇವಿ ಬನಶಂಕರಿ, ವಧು ಮಾಧವಿ`` ಸಹಿತ ಹತ್ತು ಪ್ರಸಂಗಗಳ ಬ್ರಹತ್ ಹೊತ್ತಗೆ ಪ್ರಕಟಗೊಂಡಿದೆ.

ನಿವೃತ್ತ ಅಧ್ಯಾಪಕರಾದ ಶೆಟ್ಟರು ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಕೊನೆಯಲ್ಲಿ ಪ್ರಧಾನ ಅಧ್ಯಾಪಕರಾಗಿದ್ದ ಇವರು ತಮ್ಮ ರಂಜನೆಯುಕ್ತ ಪಾಠದಿಂದ ವಿದ್ಯಾರ್ಥಿಗಳ ಪ್ರ್ತೀತಿಗೆ ಪಾತ್ರರಾಗಿದ್ದರು. ವೃತ್ತಿಗೆ ನಿಷ್ಟರಾಗಿ ದುಡಿದ ಇವರು ತಾಲೂಕುಮಟ್ಟದಲ್ಲಿ ಮಾದರಿ ಅಧ್ಯಾಪಕರೆಂಬ ಹಿರಿಮೆಗೆ ಪಾತ್ರರಾಗಿದ್ದರು. ವಿದ್ಯಾರ್ಥಿಗಳಿಗೆ ಅಭಿನಯಿಸಲು ಯೋಗ್ಯವಾದ 7 ಕಿರುನಾಟಕಗಳು, ರಂಗಗೀತೆ, ನಾಟಕಗಳನ್ನೂ ರಚಿಸಿದ್ದಾರೆ ಹಲವಾರು ಶಿಶುಗೀತೆಗಳನ್ನೂ ರಚಿಸಿದ್ದಾರೆ. ಅವರ ಕವನ ಕಥೆಗಳು ಪ್ರಜಾಮತ ಮತ್ತು ನವಯುಗ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕಲಾಸಕ್ತಿಗೆ ಪೂರಕವಾದ ಕುಟು೦ಬ ಪರ೦ಪರೆ

ರಘುರಾಮ ಶೆಟ್ಟರ ಅಜ್ಜ ಚಿತ್ತೂರು ಕೃಷ್ಣಯ್ಯ ಶೆಟ್ಟರು, ಮಾವ ಕಂದಾವರ ಅಣ್ಣಪ್ಪ ಶೆಟ್ಟರು ಆ ಕಾಲದ ಪ್ರಸಿದ್ಧ ಅರ್ಥದಾರಿಗಳು ಅವರ ತಂದೆ ಕರ್ಕಿ ಸದಿಯಣ್ಣ ಶೆಟ್ಟರು ಯಕ್ಷಗಾನ ಕಲಾಭಿಮಾನಿ ಅಲ್ಲದೆ ಹಲವಾರು ಕೂಟಗಳಲ್ಲಿ ಭಾಗವತಿಕೆ ಮಾಡಿದವರು. ಈ ಪರಂಪರೆ ಶೆಟ್ಟರಿಗೆ ನೆರವಾಗಿದೆ. ಬಾಲ್ಯದಲ್ಲಿ ಸೌಕೂರು ಮತ್ತು ಮಾರಣಕಟ್ಟೆ ಮೇಳಗಳ ಆಟಗಳನ್ನು ಆಸಕ್ತಿಯಿಂದ ನೋಡುತಿದ್ದರು. ಬಾಲ್ಯದಲ್ಲಿ ಅವರಿಗಿದ್ದ ಯಕ್ಷಗಾನ ಆಸಕ್ತಿ ಮತ್ತು ಲಯಗಾರಿಕೆಯನ್ನು ಗುರುತಿಸಿದ ಅವರ ಗುರುಗಳಾದ ರಮಾನಂದರಾಯರು ``ಶಂಬೂಕ ವಧೆ`` ಎಂಬ ಕಿರು ಯಕ್ಷಗಾನ ಬಯಲಾಟದಲ್ಲಿ ಭಾಗವತಿಕೆ ಮಾಡಲು ಪ್ರೇರೇಪಿಸಿದರು.

ಬಳಿಕ ನಾಲ್ಕಾರು ಪ್ರದರ್ಶನಗಳಲ್ಲಿ ಅವರದ್ದೇ ಭಾಗವತಿಕೆ. ಹತ್ತನೇ ತರಗತಿಯಲ್ಲಿ ``ಪಾದ್ರಿ ಸಂಧಾನ``ವೆಂಬ ಬಯಲಾಟಕ್ಕೆ ಅವರದ್ದೇ ಭಾಗವತಿಕೆ. ಅಂದಿನ ಹಾಡುಗಾರಿಕೆಗೆ ಸಭಿಕರೊಬ್ಬರು ನೀಡಿದ ಪದಕ ಅವರ ಬಾಲ ಪ್ರತಿಭೆಗೆ ಸಂದ ಗೌರವ. ಅಜ್ಜ ಚಿತ್ತೂರು ಕೃಷ್ಣಯ್ಯ ಶೆಟ್ಟರು ಜ್ಞಾನವನ್ನೂ, ಅರ್ಥಗಾರಿಕೆಯ ಸೂಕ್ಷ್ಮವನ್ನೂ ತಿಳಿಯ ಹೇಳಿ ತನ್ನೊಂದಿಗೆ ಹಲವಾರು ಕೂಟಗಳಿಗೆ ಕರೆದುಕೊಂಡು ಹೋಗಿ ಚಿಕ್ಕ ಚಿಕ್ಕ ಪಾತ್ರಗಳನ್ನು ಅವರಿಗೆ ಕೊಡಿಸಿದರು. ಮುಂದೆ ಶಿವಪುರ ಪಂಡಿತರನ್ನು ಗುರುಗಳಾಗಿ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ಮುಂದುವರಿದು ಪ್ರಭಾವಿ ಅರ್ಥದಾರಿಗಳಾಗಿ ಮೂಡಿ ಬಂದರು.

ತೆ೦ಕು ಬಡಗುಗಳಲ್ಲಿ ಜಯಭೇರಿ ಬಾರಿಸಿದ ಪ್ರಸ೦ಗಗಳು

ಶೆಟ್ಟರು ಹೈಸ್ಕೂಲಿನಲ್ಲಿ ಓದುತಿದ್ದ ಸಂದರ್ಭ ಮುದ್ದಣ್ಣನ ``ರತ್ನಾವತಿ ಕಲ್ಯಾಣ`` ಹಾಗೂ ``ಕುಮಾರ ವಿಜಯ`` ಪ್ರಸಂಗದ ಕೆಲವು ಪದ್ಯಗಳನ್ನು ಅಭ್ಯಸಿಸುವ ಸಂದರ್ಭ ಬಂದಾಗ ಅದರ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳಿಗೆ ಮಾರು ಹೋಗಿ ಅವರು ಪ್ರಸಂಗ ರಚನೆಯತ್ತ ಮನಮಾಡಿದರು. ಹಲವಾರು ಪ್ರಸಂಗಗಳನ್ನು ಓದಿ ಪದ್ಯ ರಚನೆಯ ಸೂಕ್ಷ್ಮ ಅರಿತುಕೊಂಡರು. ಚಾರಿತ್ರಿಕ ಕಥಾವಸ್ತುವಾದ ``ಚಂದ್ರಗುಪ್ತ ವಿಜಯ`` ಎಂಬ ಪ್ರಸಂಗ ರಚಿಸಿದರು. ಅದು ಪ್ರದರ್ಶನಕ್ಕೆ ಬರುವ ಮುನ್ನ ಕಳೆದು ಹೋಯಿತು. ಖ್ಯಾತ ಪ್ರಸಂಗಕರ್ತ ಡಾ/ ವೈ ಚಂದ್ರಶೇಖರ ಶೆಟ್ಟಯವರ ಸಲಹೆಯಂತೆ ``ಸತೀ ಸೀಮಂತಿನಿ``` ಎಂಬ ಪ್ರಸಂಗ ರಚಿಸಿದರು ಅದು ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಸಾಲಿಗ್ರಾಮ ಮೇಳದಲ್ಲಿ ಯಶಸ್ವಿಯಾಯಿತು. ಇದು ಅವರ ಪಸಂಗ ರಚನೆಯತ್ತ ಮುನ್ನುಗ್ಗಲು ಸಹಕಾರಿಯಾಯಿತು.

ಶ್ರೀ ಸಾಲಿಗ್ರಾಮ ಮೇಳದಲ್ಲಿ ``ಸತಿ ಸೀಮಂತಿನಿ, ಚಲುವೆ ಚಿತ್ರಾವತಿ, ಶ್ರೀದೇವಿ ಬನಶಂಕರಿ, ರತಿರೇಖಾ`` ಪೆರ್ಡೂರು ಮೇಳದಲ್ಲಿ ``ಶೂದ್ರ ತಪಸ್ವಿನಿ, ಚಾರುಚಂದ್ರಿಕೆ, ಪುಷ್ಪಾಂಜಲಿ'' ಶ್ರೀ ಧರ್ಮಸ್ಥಳ ಮೇಳದಲ್ಲಿ ``ವಸುವರಾಂಗಿ``, ಮೂಲ್ಕಿ ಮೇಳದಲ್ಲಿ ``ಸೀತಾ ಪಾರಮ್ಯ, ನಾಗನಂದನೆ`` ಅತ್ಯಂತ ಯಶಸ್ವಿಯಾಯಿತು. ಶ್ರೀ ಮಂದಾರ್ತಿ, ಮಾರಣಕಟ್ಟೆ ಮೇಳಗಳಲ್ಲೂ ಅವರ ಪ್ರಸಂಗಗಳು ಯಶಸ್ವಿಯಾಗಿವೆ. ಶೆಟ್ಟರ ಪದ್ಯಗಳು ಸರಳವಾಗಿ ಸುಲಲಿತವಾಗಿದ್ದು ಉತ್ತಮವಾದ ಛಂದಸ್ಸಿನಿಂದ ಕೂಡಿದ್ದು ಪಾತ್ರಗಳು ಲವಲವಿಕೆಯಿಂದಿರುವುದೇ ಅವರ ಪ್ರಸಂಗಗಳ ಯಶಸ್ಸಿನ ಗುಟ್ಟು.

ಕಂದಾವರ ರಘುರಾಮ ಶೆಟ್ಟಿ
ಜನನ : 1936
ಜನನ ಸ್ಥಳ
ಕಂದಾವರ , ಬಳ್ಕೂರು ಗ್ರಾಮ ,ಕುಂದಾಪುರ ತಾಲ್ಲೂಕು ,ಉಡುಪಿ ಜಿಲ್ಲೆ ,ಕರ್ನಾಟಕ ರಾಜ್ಯ

ಕಲಾಸೇವೆ
ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 35 ವರ್ಷಗಳ ಕಾಲ ಅಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಉತ್ಕ್ರಷ್ಟ ಸಾಹಿತ್ಯ ಮತ್ತು ಛಂದಸ್ಸು ಮೇಳೈಸಿದ 20ಕ್ಕೂ ಮಿಕ್ಕಿ ಪ್ರಸ೦ಗಗಳು, ವಿದ್ಯಾರ್ಥಿಗಳಿಗೆ ಅಭಿನಯಿಸಲು ಯೋಗ್ಯವಾದ 7 ಕಿರುನಾಟಕಗಳು, ರಂಗಗೀತೆ, ನಾಟಕಗಳನ್ನೂ ರಚಿಸಿದ್ದಾರೆ ಹಲವಾರು ಶಿಶುಗೀತೆಗಳನ್ನೂ ರಚಿಸಿದ್ದಾರೆ.

ಪ್ರಶಸ್ತಿಗಳು:
  • ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದಿ೦ದ ಬಂಗಾರದ ಪದಕ.
  • ಕರ್ನಾಟಕ ಯಕ್ಷಗಾನ ಸಮಿತಿ ಪ್ರಶಸ್ತಿ
  • ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
  • ಡಾ. ವೀರೇಂದ್ರ ಹೆಗ್ಗಡೆ, ಎಡನೀರು ರಾಮಚಂದ್ರಮಠ, ದಾವಣಗೆರೆ ವಿರಕ್ತಮಠದ ಸ್ವಾಮೀಜಿಯವರಿ೦ದ ಸನ್ಮಾನ
  • ಪ್ರತಿಶ್ಠಿತ ಸೀತಾನದಿ ಪ್ರಶಸ್ತಿ
  • ಮಟ್ಟಿ ಮುರಳೀದರ ರಾವ್ ಪ್ರಶಸ್ತಿ
  • ಯಕ್ಷಸಾಹಿತ್ಯ ಶ್ರೀ ಪ್ರಶಸ್ತಿ
  • ಕರ್ನಾಟಕ ನಾಟಕ ಅಕಾಡೆಮಿಯ ``ಇಂದಿನ ರಂಗ ಕಲಾವಿದರು`` ಹೊತ್ತಿಗೆಯಲ್ಲಿ ರಘುರಾಮ ಶೆಟ್ಟಿಯವರ ಹೆಸರು ದಾಖಲಾಗಿದೆ
  • ಪ್ರತಿಷ್ಠಿತ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ

ಜಗಜಟ್ಟಿ ಕಲಾವಿದರಿ೦ದ ಸಾಮಾಜಿಕ ಪ್ರಸ೦ಗಗಳು

ಉಭಯ ತಿಟ್ಟುಗಳ ಸವ್ಯಸಾಚಿ ಭಾಗವತ ಕಡತೋಕ ಮಂಜುನಾಥ ಭಾಗವತರು ಅವರ ಸಂದರ್ಶನದಲ್ಲಿ ಶೆಟ್ಟರ ಪದ್ಯಗಳ ಬಗ್ಗೆ ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ. ಅವರ ಪ್ರಥಮ ಪ್ರಸಂಗ ``ಸತೀ ಸೀಮಂತಿನಿ``ಯ ಪದ್ಯಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ ಅಂದಿನ ಸಾಲಿಗ್ರಾಮ ಮೇಳದ ಮೇರು ಭಾಗವತ ಕಾಳಿಂಗ ನಾವಡರು ಮುಂದಿನ ಪ್ರಸಂಗ ರಚನೆಗೆ ಮಾರ್ಗದರ್ಶನ ಮಾಡಿದ್ದರು. ಸುಬ್ರಮಣ್ಯ ಧಾರೇಶ್ವರರಂತ ಉತ್ತಮ ಭಾಗವತರು, ನಗರ ಜಗನ್ನಾಥ ಶೆಟ್ಟಿ, ಕುಮಟಾ ಗೋವಿಂದ ನಾಯಕ್, ತೀರ್ಥಳ್ಳಿ ಗೋಪಾಲಾಚಾರ್. ರಾಮ ನಾಯರಿ, ಕಿನ್ನಿಗೋಳಿ ಮುಖ್ಯಪ್ರಾಣ, ಜಲವಳ್ಳಿ ವೆಂಕಟೇಶ ರಾವ್ , ಐರೋಡಿ ಗೋವಿಂದಪ್ಪ , ಅರಾಟೆ ಮಂಜುನಾಥ , ಹೊಸಂಗಡಿ ರಾಜೀವ ಶೆಟ್ಟಿ, ಬೇಗಾರು ಪದ್ಮನಾಭ, ಆರ್ಗೋಡು ಮೋಹನದಾಸ ಶೆಣೈ ಮುಂತಾದ ಆಗಿನ ಮೇರು ಕಲಾವಿದರ ಉತ್ತಮ ದುಡಿತವೂ ನನ್ನ ಪ್ರಸಂಗಗಳ ಯಶಸ್ಸಿಗೆ ಕಾರಣವೆನ್ನುವ ಇವರು ತೀರಾ ನಿಗರ್ವಿಗಳು.

ಸ್ವಂತಿಕೆಯಿಂದ ಪ್ರಸಂಗ ರಚಿಸಬೇಕು. ಯಾರದ್ದೋ ಕಥೆಗೆ ಯಾರದ್ದೋ ಪದ್ಯ ರಚನೆಯಾಗಬಾರದು ಪದ್ಯ ಹಾಡುವಂತಿರಬೇಕು. ಉತ್ಕ್ರಷ್ಟ ಸಾಹಿತ್ಯ ಮತ್ತು ಛಂದಸ್ಸು ಮೇಳೈಸಬೇಕು. ಜನರಂಜನೆಗಾಗಿ ಅಶ್ಲೀಲ ಅಸಂಬದ್ದ ಹಾಸ್ಯ ಇರಕೂಡದು. ಮಾತ್ರಾಗಣ ಅಕ್ಷರಗಣ ಗೊತ್ತಿರುವವರು ಮಾತ್ರ ಪ್ರಸಂಗ ರಚಿಸಬೇಕು ಎನ್ನುವುದು ಶೆಟ್ಟರ ನಿಲುವು. ಯುವ ಪ್ರಸಂಗಕರ್ತರಿಗೆ ಶೆಟ್ಟರ ಕಿವಿಮಾತು

ಪ್ರಶಸ್ತಿ , ಪುರಸ್ಕಾರಗಳು

ಯಕ್ಷಗಾನ ಕ್ಷೇತ್ರದ ಇವರ ಸಾದನೆಯನ್ನು ಗುರುತಿಸಿ ನಾಡಿನಾದ್ಯಂತ ರಾಜ್ಯಮಟ್ಟದಲ್ಲೂ ಅನೇಕ ಸನ್ಮಾನಗಳು ನೆರವೇರಿವೆ. ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಟಾನದ ಮೂಲಕ ಪ್ರತಿ ವರ್ಷ ಅರ್ಹ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಉಡುಪಿ ರಾಜಾಂಗಣದ ತಾಳ ಮದ್ದಳೆಯ ಮಟ್ಟಿ ಮುರಳೀದರ ರಾವ್ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಹುಟ್ಟೂರ ಸನ್ಮಾನ ಸನ್ಮಾನ ಸಹಿತ ದೂರದ ಮುಂಬೈನಲ್ಲೂ ಇವರಿಗೆ ಸನ್ಮಾನ ಲಭಿಸಿದೆ. ಕುಂದಾಪುರ ಸಾಹಿತ ಪರಿಷತ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ 80ನೇ ಸಂವಸ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಅವರ ಸಾಧನೆಯನ್ನು ಬಿಂಬಿಸುವ ಅಭಿನಂದನಾ ಗ್ರಂಥ ಬಿಡುಗಡೆಯಾಗುತಿದ್ದು ಕುಂದಾಪುರದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಅದನ್ನು ಅವರಿಗೆ ಅಭಿಮಾನಿಗಳು ಸಮರ್ಪಿಸಲಿದ್ದಾರೆ.

**********************
ಸಮಾರ೦ಭವೊ೦ದರಲ್ಲಿ





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
BalkurUday Mendan (7/2/2015)
ಶ್ರೀಯುತರು ನಮ್ಮ ಊರಿನವರು ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅವರ ಶಲ್ಯ ನ ಪಾತ್ರ ತುಂಬಾ ಫೇಮಸ್ ಅಂತೆ
Raghavendra P N Jois(7/2/2015)
ಅವರ ಸಾಹಿತ್ಯ ಸೇವೆಗೆ ಕನ್ನಡಿಗರ ಪರವಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಯಕ್ಷಕಲಾ ಕವಿ ಹಾಗೂ ಸಾಹಿತಿಗಳನ್ನು ಅಸ್ಪೃಶ್ಯರಂತೆ ಕಾಣುತ್ತಿದೆಯೇನೋ ಅಂದೆನಿಸುತ್ತಿದೆ.ಏಕೆಂದರೆ ಹಳೆಗನ್ನಡವನ್ನೂ ಕನ್ನಡ ಛಂಧಸ್ಶಾಸ್ತ್ರವನ್ನು ಇಂದಿಗೂ ಬಳಕೆಯಲ್ಲಿಟ್ಟುಕೊಂಡವರು ಇವರು.ಕನ್ನಡ ಸಹಿತಿಗಳೆನಿಸಿದ ಅನೇಕರು "ಅವನು ಬಂದ!ನಾನು ಹೋದೆ!ಯಾಕೊ ಏನೋ ಗೊತ್ತಿಲ್ಲ!ಬಂದದ್ದೂ ನಿಜ!ಹೋದದ್ದು?"-ಎಂದು ಬರೆದು ಕವಿಗಳೆನಿಸಿಕೊಳ್ಳುತ್ತಾರೆ.ಇಂದಿಗೂ ಕಷ್ಟಪಟ್ಟು ಪ್ರಾಸಬದ್ಧವಾದ ಪದ್ಯ ರಚಿಸುವ ಈ ಕವಿಗಳಿಗೆ ತಕ್ಕ ಮಾನ್ಯತೆ ಕೊಡದಿರುವುದು ಇವರ ತಾರತಮ್ಯಕ್ಕೊಂದು ಉದಾಹರಣೆ ಎನಿಸುವುದಿಲ್ಲವೇ?
Mahabaleshwar Hegde (7/2/2015)
ಇತರರು ಪ್ರಸಂಗಕರ್ತರನ್ನು ಗುರುತಿಸುವ ಮೊದಲು ನಾವು ಗುರುತಿಸಬೇಕು ಹಳೆಯ ಕವಿಗಳ ಹೆಸರುಗಳನ್ನು ತಿಳಿಯಲು ಪ್ರಯತ್ನಿಸಬೇಕು ಕರಪತ್ರಗಳಲ್ಲಿ ಕವಿಯ ಹೆಸರನ್ನು ಹಾಕುವಂತೆ ಮಾಡಬೇಕು ಇಲ್ಲವಾದರೆ ಜೀವಂತ ಇರುವಾಗ ನೆನೆದು ಅನಂತರ ಮರೆತುಬಿಡಬಹುದು ಪ್ರಸಂಗವಿರುವವರೆಗೂ ಕವಿಯ ಹೆಸರಿರಬೇಕು
Avinash N Rao(7/2/2015)
ಶೂದ್ರ ತಪಸ್ವಿಯ ಖಣಿ ಪದ್ಯ ಅಂತು ಸೂಪರ್....
Keerthan HB Halady(7/2/2015)
ಅವರ ಸುಲಲಿತ ಸಾಹಿತ್ಯ ಗಳು ಕಾಳಿ೦ಗ ನಾವಡರ ಕ೦ಠ ಸಿರಿ ಅಲ್ಲಿ ಸೊಗಸಾಗಿ ಮೂಡಿಬ೦ದು ಪ್ರೇಕ್ಷರ ಹ್ರದಯ ಮ೦ದಿರದಲ್ಲಿ ಎ೦ದೂ ಅಳಿಸಲಾಗದ ಮಧುರ ನೆನಪಾಗಿ ಉಳಿದಿವೆ
Surendra Paniyoor(7/2/2015)
Raghu master prasangakke ondu ghanasthike ede moulya ede raatri edee pada helidre ayaasa gottagolla 4 dina haadidre prasanga baayi paata astu gamaka badda
Keerthan HB Halady(7/2/2015)
Intaha olle prasanga kartharu aparoopa




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ