ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ಯಕ್ಷಗಾನದ ಪರಿವ್ರಾಜಕ ಹೊಸ್ತೋಟ ಮಂಜುನಾಥ ಭಾಗವತ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಜೂನ್ 13 , 2015

ರಾಷ್ಟ್ರಕವಿ ಕುವೆಂಪು, ದ.ರಾ ಬೇಂದ್ರೆಯವರ೦ತೆ ಛಂದಸ್ಸು, ರಸ ಬಳಸಿ 250ಕ್ಕೂ ಅಧಿಕ ಯಕ್ಷಪ್ರಸಂಗ, ಸಾವಿರಾರು ದ್ವಿಪದಿಗಳನ್ನು ರಚಿಸಿರುವ ಹೊಸ್ತೋಟ ಮಂಜುನಾಥ ಭಾಗವತರು ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು, ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದರು. ಎಲೆ ಮರೆಯ ಕಾಯಿಯಂತೆಯೇ ಇದ್ದು ಯಕ್ಷಗಾನವೆಂಬ ಮಹಾಸಾಗರಕ್ಕೆ ಇಳಿದು ಸಾಧನೆ ಮಾಡಿದವರು.

ಬಾಯಲ್ಲಿ ಸದಾ ಕವಳ, ಕೈ ಚೀಲ ಸಂಗಾತಿಯೊಂದಿಗೆ ಯಕ್ಷ ಗಾನಕ್ಕಾಗಿ ಬದುಕು ಮುಡುಪಾಗಿಟ್ಟ ಹೊಸ್ತೋಟರವರು, ಅಣ್ಣಾ ಹಜಾರೆ ಆಂದೋಲನದಿಂದ ಪ್ರೇರಿತರಾಗಿ ಭ್ರಷ್ಟಾಚಾರ ದಮನ 210ನೇ ಯಕ್ಷ ಪ್ರಸಂಗ ರಚಿಸಿದ್ದಾರೆ. ತಾಳಮದ್ದಲೆ ಧ್ವನಿ ಸುರುಳಿ ಯಾಗಿ, ಹಿಂದಿ ಭಾಷೆಗೂ ಪರಿವರ್ತನೆಯಾಗಿದೆ. ಹೆತ್ತವರು ಬೇಡವೆಂದರೂ ಬೈಸಿಕೊಂಡು 12ನೇ ವಯಸ್ಸಿನಿಂದ ಯಕ್ಷಗಾನ ಕಲಿತು ನಾಲ್ಕು ದಶಕಗಳ ಕಾಲ ಗುರುವಾಗಿ ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನ ಕಲಿಸಿದ್ದಾರೆ. ಯಕ್ಷಗಾನದ ರಾಗ, ದಾಟಿ, ಮಟ್ಟು, ಛಂದಸ್ಸು, ನಿರೂಪಣೆ, ಹಾಡುಗಾರಿಕೆ ಮೂಲಕ ಪಾತ್ರಕ್ಕೆ ಅನುಗುಣವಾಗಿ ಹಾಡುವ ಸಿದ್ಧಿ ಗಳಿಸಿದ್ದಾರೆ.

ಯಕ್ಷಗಾನದ ಪರಿವ್ರಾಜಕ

ತನಗನಿಸಿದ್ದನ್ನು ನೇರವಾಗಿ ಹಾಗೂ ನಿರ್ಭಯವಾಗಿ ಹೇಳುವ ಹಾಗೂ ವಸ್ತುನಿಷ್ಠತೆಯನ್ನು ಸತತವಾಗಿ ಕಾಪಾಡಿಕೊಂಡಿರುವ ಹೋಲಿಕೆಯಿಲ್ಲದ ಈ ವ್ಯಕ್ತಿ ಯಕ್ಷಗಾನದ ಪರಿವ್ರಾಜಕ. ಇವರದೇ ಆದ ಆಸ್ತಿ, ತಾಣ, ಎಂಬುದಿಲ್ಲ. ಸದಾ ಒಂದು ಕೈ-ಚೀಲ ಹೊತ್ತು ಯಕ್ಷಗಾನದ ಭಾಗವತಿಕೆ, ಯಕ್ಷಗಾನದ ಪ್ರಯೋಗ ನಡೆಸುವ ಇವರಿಗೆ ಇದೀಗ ವಯಸ್ಸು 75. ಅವರ ಮಾತಿನಲ್ಲೇ ಹೇಳುವುದಾದರೆ ನೀವು ನನಗೆ ಸಮ್ಮಾನ, ಸಭೆ, ಸಮಾರಂಭ ನಡೆಸಬೇಡಿ, ನನಗೆ ಮಾಡಲು ಕೆಲಸ ಕೊಡಿ, ಕ್ಷೇತ್ರ (ಯಕ್ಷಗಾನ ಕುರಿತು) ಕೊಡಿ, ಸಂತೋಷದಿಂದ ನಡೆಸುವೆ ಎನ್ನುವ ಇವರ ಮಾತು ಆದರ್ಶನೀಯ.

ಬಾಲ್ಯ, ಅಭಯ ಚೈತನ್ಯ ಬ್ರಹಚಾರಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಹನುಮಂತಿ ಗ್ರಾಮದ ಹೊಸ್ತೋಟ ಎನ್ನುವ ಸಣ್ಣ ಹಳ್ಳಿಯಲ್ಲಿ ಗಣಪತಿ ಭಟ್ಟ ಮತ್ತು ಮಹಾದೇವಿ ದ೦ಪತಿಗಳಿಗೆ ಹಿರಿಯವನಾಗಿ ಜನಿಸಿದವರು. ಇವರ ಇಷ್ಟದ ಕಲಾವಿದರಾದ ಶಿವರಾಮ ಹೆಗಡೆಯವರನ್ನು ಬಹುವಾಗಿ ಪೀತಿಸುವ ಇವರು ಯಕ್ಷಗಾನದ ಸರ್ವಾ೦ಗೀಣ (ನೃತ್ಯ, ಭಾಗವತಿಕೆ, ಚೆ೦ಡೆ, ಮದ್ದಳೆ) ಶಿಕ್ಷಣ ಪಡೆದ ನ೦ತರ ಇವರು ಕೆರೆಮನೆ ಮೇಳದಲ್ಲಿ ಕಲಾವಿದನಾಗಿ ಪಾತ್ರಗಳನ್ನು ನಿರ್ವಹಿಸತೊಡಗಿದರು. ಆರಂಭದಲ್ಲಿ ಕೊಡಗಿಪಾಲ ಶಿವರಾಮ ಹೆಗ್ಡೆ ಇವರನ್ನು ರಂಗಕ್ಕೆ ತಂದಾಗ ಉತ್ಸಾಹದಿಂದ ಹಾಡುಗಾರಿಕೆ ನಡೆಸಿ ಹೆಚ್ಚಿನ ಜಿಜ್ಞಾಸೆ ಬೆಳೆಸಿಕೊಂಡು ಬಾಳೆಹದ್ದು ಕೃಷ್ಣ ಭಾಗವತ ಹಾಗೂ ಕೆರಮನೆ ಮಹಾಬಲ ಹೆಗ್ಡೆ ಇವರ ಶಿಷ್ಯನಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟೂ ಗಟ್ಟಿಗೊಳಿಸಿಕೊಂಡರು. ಕ್ರಮೇಣ ನೃತ್ಯ, ಚಂಡೆ, ಮದ್ದಳೆ, ವೇಷಗಾರಿಕೆ ಮಾಡುತ್ತಾ ಬಯಲಾಟದ ಅನೇಕ ತಿರುಗಾಟಗಳನ್ನು ಮಾಡಿದ ಅನುಭವ ಇವರದು.

1966ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಸೇರಿ ಅಭಯ ಚೈತನ್ಯ ಬ್ರಹಚಾರಿ ಆದರು. ಇಂದಿಗೂ ಹೊಸ್ತೋಟ ಮಂಜುನಾಥ ಭಾಗವತರು ಎಲ್ಲಾ ಅರ್ಥಗಳಲ್ಲಿ ಪರಿವ್ರಾಜಕರಾಗಿ ತಮ್ಮ ಸಂಪೂರ್ಣ ಸೇವೆಯನ್ನು ಯಕ್ಷಗಾನಕ್ಕೆ ಮುಡಿಪಾಗಿರಿಸಿರುವರು. ಭಾಗವತಿಕೆಯ ಜೊತೆಯಲ್ಲಿ ಅರ್ಥಗಾರಿಕೆಯಲ್ಲೂ ಮೊದಲ ಪಂಕ್ತಿಗೆ ಅರ್ಹರಾದ ಇವರು ಸಂಶೋಧನತ್ಮಕ ನೆಲೆಯಲ್ಲಿ ಕಲೆಯನ್ನು ನೋಡುವ ಕಲಾ ಜಿಜ್ಞಾಸುಗಳಾಗಿರುವರು.

200ಕ್ಕೂ ಮಿಕ್ಕಿ ಪ್ರಸಂಗ ರಚನೆ

ಯಕ್ಷಗಾನದ ರಾಗ, ದಾಟಿ, ಮಟ್ಟು, ಛಂದಸ್ಸು, ನಿರೂಪಣೆ ಹಾಗೂ ಹಾಡುಗರಿಕೆಯಲ್ಲಿನ ಪಾತ್ರಗಳಿಗೆ ಅನುಗುಣವಾಗಿ ಹಾಡನ್ನು ಹಾಡುವ ಸಿದ್ಧಿಗಳಿಸಿರುವ ಶ್ರೇಷ್ಠತೆ ಇವರಲ್ಲಿದೆ. ಆಧುನಿಕ ಕಾಲದ ಪ್ರಸಂಗಕರ್ತರಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಸ್ವರೂಪದ ಸಾಹಿತ್ಯ ರಚಿಸಿರುವ ಪ್ರಸಂಗಕರ್ತರಲ್ಲಿ ಒಬ್ಬರು. ಚಿಕ್ಕ ಪ್ರಸಂಗ ಹಾಗೂ ದೊಡ ಪ್ರಸಂಗ ಒಟ್ಟಾಗಿ ಸುಮಾರು 200ಕ್ಕೂ ಮಿಕ್ಕಿ ಪ್ರಸಂಗಗಳನ್ನು ಶ್ರೀಯುತರು ರಚಿಸಿರುವರು. ಮುಖ್ಯವಾಗಿ ಇವರ ಬರಹಗಳು ಅಭ್ಯಾಸಿ ಮತ್ತು ಹವ್ಯಾಸಿ ಯಕ್ಷಗಾನ ತಂಡಕ್ಕಾಗಿ ರಚಿತವಾದಂತವು. ಸಾಂಪ್ರದಾಯಿಕ ಪ್ರಸಂಗಗಳಲ್ಲಿ ಕಥೆಯ ಸಾರಾಂಶವನ್ನು ನಾಟಕೀಯವಾಗಿ ಹೇಳುವುದು ಇವರ ಮುಖ್ಯ ತತ್ವ.
ಹೊಸ್ತೋಟ ಮಂಜುನಾಥ ಭಾಗವತ
ಜನನ : ಫೆಬ್ರವರಿ 15, 1940
ಜನನ ಸ್ಥಳ : ಹೊಸ್ತೋಟ
ಹನುಮಂತಿ ಗ್ರಾಮ, ಶಿರಸಿ
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು, ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದರು.

ಪ್ರಶಸ್ತಿಗಳು:
  • ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ‘ಪಾರ್ತಿಸುಬ್ಬ ಪ್ರಶಸ್ತಿ’
  • 2014ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ


75ರ ಹರೆಯದ ಹೊಸ್ತೋಟ ಮಂಜುನಾಥರು ರಾಮಾಯಣದ 19 ಪ್ರಸಂಗಗಳು, ಮಹಾಭಾರತ 51 ಪ್ರಸಂಗಗಳು, ಶ್ರೀಕೃಷ್ಣ ಮಹಿಮೆ 23 ಪ್ರಸಂಗಗಳು, ಐತಿಹಾಸಿಕ, ಪೌರಾಣಿಕ, ಕಾಲ್ಪನಿಕ ಹೀಗೆ 300ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಕುರಿತ 750ಕ್ಕೂ ಹೆಚ್ಚು ತಾಡವಾಲೆಗಳ ಅಧ್ಯಯನವನ್ನು ಕರ್ನಾಟಕದಾದ್ಯಂತ ಸುತ್ತಾಡಿ ಅಧ್ಯಯನ ಮಾಡಿದ್ದಾರೆ. ಅಲ್ಲದೆ ಯಕ್ಷಗಾನ ಕಲಿಕೆಗೆ ಅನುಕೂಲವಾಗಲು ತಾಳಸೂತ್ರವನ್ನು ಗಣಿತ ಕ್ರಮದಲ್ಲಿ ರಚಿಸಿದ್ದಾರೆ.

ರೇಡಿಯೋದಲ್ಲಿ 1 ಗಂಟೆ ಪ್ರಸಾರಕ್ಕಾಗಿ 18ರಿಂದ 20 ಯಕ್ಷ ಪದ್ಯಗಳ ರಾಮ ನಿರ್ಯಾಣ ಮೊದಲ ಪ್ರಸಂಗ 70 ಪದ್ಯಗಳಿಗೆ ವಿಸ್ತಾರವಾಗಿದೆ. ಹೊಸ್ತೋಟ ರಚಿತ 23 ಸಾವಿರ ದ್ವಿಪದಿಯನ್ನು ಮೈಸೂರಿನ ಶ್ರೀರಾಮಕೃಷ್ಣಾ ಶ್ರಮ ಪ್ರಕಟಿಸಿದೆ. ಸಾಮಾಜಿಕ, ಪರಿಸರ ಜಾಗೃತಿ, ಸಾಕ್ಷರತೆ, ವೀರ ಶೈವ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಬಸವಣ್ಣ ಕುರಿತ ಯಕ್ಷಗಾನ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಂಡಿವೆ.

ಬಹುತೇಕ ಪ್ರಸಂಗಗಳು ನೂರಾರು ಪ್ರದರ್ಶನ ಕಂಡಿವೆ. ಹೊಸ್ತೋಟ ಬರಿಯ ಪ್ರಸಂಗಕರ್ತರಲ್ಲ. ಹವ್ಯಾಸಿ ವೇಷಧಾರಿ, ಭಾಗವತ, ಮದ್ದಳೆ ಮತ್ತು ಚೆಂಡೆ ವಾದಕ, ತಾಳಮದ್ದಳೆ ಅರ್ಥಧಾರಿ. ತಾಳೆಗರಿಗಳಲ್ಲಿ ಯಕ್ಷಗಾನ ಕುರಿತ ಅಧ್ಯಯನವನ್ನು ಕೆಳದಿ ವಸ್ತು ಸಂಗ್ರಹಾಲಯ ಕೃತಿಯಾಗಿ ಪ್ರಕಟಿಸಿದೆ.

ಮ್ಯಾಕ್‌ಬೆತ್‌ ಯಕ್ಷಗಾನ!

ವಿಲಿಯಂ ಶೇಕ್ಸ್ ಪಿಯರ್ ಅವರ ಮ್ಯಾಕ್‌ಬೆತ್, ಆಲ್ ಈಸ್ ವೆಲ್ ದ್ಯಾಟ್ ಎಂಡ್ಸ್ ವೆಲ್ ನಾಟಕವನ್ನು ಮೇಘಕೇತ ಹಾಗೂ ಗುಣಪಣ ಕಲ್ಯಾಣ ಯಕ್ಷಗಾನ ಪ್ರಸಂಗವಾಗಿ ಹೊಸ್ತೋಟ ರೂಪಿಸಿದ್ದಾರೆ. ಷೇಕ್ಸ್‌ಪಿಯರ್‌ನ `ಮ್ಯಾಕ್‌ಬೆತ್‌' ನಾಟಕವನ್ನು ಯಕ್ಷಗಾನಕ್ಕೆ ತರಬೇಕು. ಅದನ್ನು ಯಕ್ಷಗಾನ ಶೈಲಿಯಲ್ಲಿ ಬರೆಯಬೇಕು ಎನ್ನುವ ಕನಸು ಇವರದಾಗಿತ್ತು. ಈಗ ಅದು ಸಾಕಾರವಾಗಿದೆ. ಮ್ಯಾಕ್‌ಬೆತ್‌ ನಾಟಕವನ್ನು ಯಕ್ಷಗಾನ ಶೈಲಿಗೆ ಬರೆದಿದ್ದಾರೆ. `ಮೇಘಕೇತ' ಈ ಪ್ರಸಂಗದ ಹೆಸರು. ವಿದೇಶಿ ಸಂಸ್ಕೃತಿಗೂ ಇವರ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ಅದಕ್ಕಾಗಿ ಈ ನಾಟಕದಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ಅನಿವಾರ್ಯವಾಗಿ ಬದಲಾಯಿಸಿದ್ದೇರೆ.. ಇಲ್ಲಿ ಮ್ಯಾಕ್‌ಬೆತ್‌, `ಮೇಘಕೇತ' ಆಗಿದ್ದಾನೆ. `ಲೂಯಿಸಸ್‌'ನ ಹೆಸರು `ಉಲ್ಲಾಸ' ಎಂದು ಮಾಡಿದ್ದೇರೆ.. ಇದರ ರಂಗ ಪ್ರಯೋಗ ಇನ್ನೂ ಆಗಿಲ್ಲ. ಪ್ರಯೋಗ ಕಂಡು ಯಶಸ್ವಿಯಾದರೆ ಇವರ ಕನಸು ನನಸಾಗುತ್ತದೆ.

ಗಣಿತ ಸೂತ್ರದಲ್ಲಿ ಯಕ್ಷಗಾನ ಶಿಕ್ಷಣ

ಕಲಾವಿದನಾಗಿದ್ದ ಇವರಿಗೆ ಯಕ್ಷಗಾನ ಕಲಿಯುವವರಿಗೆ ಏನಾದರೂ ಸುಲಭ ವಿಧಾನವನ್ನು ಅಳವಡಿಸಬೇಕು. ಅದು ಗಣಿತ ರೂಪದಲ್ಲಿರಬೇಕು. ಸುಲಭ ಮತ್ತು ಒಮ್ಮೆ ಕಲಿತರೆ ಮರೆಯದಂತಿರಬೇಕು ಎಂಬ ಸೂತ್ರ ಅಳವಡಿಸುವ ಕನಸನ್ನು ಕಂಡರು. ಅದರ ಬಗ್ಗೆ ಅಧ್ಯಯನ ಮಾಡಿದರು. ಬಾಳೆಹದ್ದ ಕೃಷ್ಣ ಭಾಗವತರು ಅದಕ್ಕೆ ಸಹಕಾರಿಯಾದರು. ಅಲ್ಲಿಂದ ಇವರು ಇವರ ಹತ್ತಿರ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಗಣಿತ ಸೂತ್ರದಲ್ಲಿಯೇ ಯಕ್ಷಗಾನವನ್ನು ಹೇಳಿ ಕೊಡತೊಡಗಿದರು. ಈ ಗಣಿತ ಸೂತ್ರದಲ್ಲಿ ಯಕ್ಷಗಾನವನ್ನು ಸರಿಯಾಗಿ ಕಲಿತರೆ ಮತ್ತೆ ಮರೆಯುವ ಸಂಭವವಿರುವುದಿಲ್ಲ ಎನ್ನುವುದು ಗಮನಕ್ಕೆ ಬಂತು. ಲಯ ತಪ್ಪುವ ಸಂಭವವೂ ಇಲ್ಲಿರುವುದಿಲ್ಲ. ಇಂದು ಇವರ ಅನೇಕ ಶಿಷ್ಯರು ಅದೇ ವಿಧಾನದಲ್ಲಿ ಯಕ್ಷಗಾನವನ್ನು ಕಲಿಸಿ ಕೊಡುತ್ತಿರುವುದರಿಂದ ಆ ಕನಸು ನನಸಾಗಿದೆ.

ಸಾವಿರಕ್ಕೂ ಮಿಕ್ಕಿದ ಶಿಷ್ಯರು.

ಉತ್ತರ ಕನ್ನಡ ಮತ್ತು ಮಲೆನಾಡುಗಳಲ್ಲಿ ಯಕ್ಷಗಾನದ ಸರ್ವಾಂಗ ಶಿಕ್ಷಣದ ಗುರುವಾಗಿ, ಭಾಗವತರಾಗಿ ತಮ್ಮ ಕಾರ್ಯವನ್ನು ಒಂದು ಚಳುವಳಿ ರೂಪವಾಗಿ ಬೆಳೆಸಿರುವರು. ಇವರ ಇಪ್ಪತೈದು ವರ್ಷಗಳ ತಿರುಗಾಟದಲ್ಲಿ ಸುಮಾರು 30 ಭಾಗಗಳಲ್ಲಿ ಸಾವಿರಕ್ಕೂ ಮಿಕ್ಕಿದ ಶಿಷ್ಯರನ್ನು ತಯಾರಿಸಿದ ಕೀರ್ತಿ ಇವರದಾಗಿದೆ. ಯಕ್ಷಗಾನ ಪಾಠ, ತರಬೇತಿ ನೀಡಿರುವ ಇವರು ಏಕವ್ಯಕ್ತಿ ಗುರುಕುಲವೆಂಬ ಪ್ರಶಂಸೆಗೆ ಪಾತ್ರರಾಗಿರುವರು. ಇವರ ಮತ್ತೊಂದು ಸಾಧನೆಯೆಂದರೆ ಶಿವಮೊಗ್ಗದ ಅಂಧ ವಿಕಾಸ ಕೇಂದ್ರದ ಮಕ್ಕಳಿಗೆ ತರಬೇತಿ ನೀಡಿ ಯಕ್ಷಗಾನವನ್ನು ಪ್ರದರ್ಶಿಸಿರುವ ಆಟಗಳು ಒಂದು ಅಭೂತಪೂರ್ವ ಹಾಗೂ ಗಿನ್ನೆಸ್ ದಾಖಲೆಯಾಗುವಂತಹ ಸಾಧನೆ ಎನ್ನಬಹುದು. ಯಕ್ಷಗಾನದಲ್ಲಿ ಪ್ರಚಲಿತ ಶಿಕ್ಷಣ ಯೋಜನೆಗಿಂತ ಭಿನ್ನವಾಗಿ ಗಣಿತದ ಮೂಲಕ ತಾಳವನ್ನು ಹೇಳಿಕೊಡುವುದು, ಅದಕ್ಕೆ ಚಲನೆಯನ್ನು ಹೊಂದಿಸುವ ಇವರದೇ ಆದ ರಾಚನೀಕ ಸ್ವರೂಪ ಮತ್ತು ಪದ್ಯ ಮಟ್ಟುಗಳನ್ನು ಕಲಿಸುವುದು ಶಿಕ್ಷಣ ಕ್ಷೇತ್ರದಲ್ಲಿಯೇ ಒಂದು ಹೊಸ ದೃಷ್ಠಿಕೋನವೆಂದು ತಿಳಿಯಲಾಗಿದೆ. ಶ್ರೀಯುತರು ನಡೆಸಿಕೊಡುವ ತಾಳ, ಮಟ್ಟು, ಹಾಡುಗಾರಿಕೆಯ ವಿಧಾನದ ಅನೇಕ ಪ್ರಕಾರಗಳನ್ನು ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರವು ದಾಖಲೀಕರಣ ನಡೆಸಿದೆ.

ಇವರು ಸದಾ ಕನಸುಗಾರ ಎನ್ನಬಹುದು. ಆದರೆ ಕನಸು ನನಸಿನ ಗುರಿ ತಲುಪಬೇಕು, ಅಲ್ಲಿಯವರೆಗೆ ಇವರಿಗೆ ಸಮಾಧಾನವಿರುವುದಿಲ್ಲ. ಈ ಕನಸಿನ ಫಲವೇ ಇಂದು ಇವರು 160 ಯಕ್ಷಗಾನ ಆಖ್ಯಾನಗಳನ್ನು ರಚಿಸಲು ಕಾರಣವಾಯಿತು. ಇದರಲ್ಲಿ ಸಂಪೂರ್ಣ ರಾಮಾಯಣ, ಸಂಪೂರ್ಣ ಮಹಾಭಾರತ, ಸಂಪೂರ್ಣ ಭಾಗವತ, ಭಾಸವತಿ, ಶ್ರೀರಾಮ ನಿರ್ಯಾಣ ಜೊತೆಗೆ ಮಕ್ಕಳು ಸುಲಭವಾಗಿ ಪ್ರದರ್ಶನ ನೀಡುವಂತಹ ಹಲವಾರು ಯಕ್ಷಗಾನವನ್ನು ಬರೆದಿದ್ದರು.

ಶಿವಮೊಗ್ಗದ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ 30 ಮಕ್ಕಳಿಗೆ ವೇಷ, ಕುಣಿತ, ಪದ್ಯ ಹೇಳಿಕೊಟ್ಟಿದ್ದಾರೆ, ಪ್ರದರ್ಶನ ಮಾಡಿಸಿದ್ದಾರೆ. ಶಿರಸಿಯ ದೇವರಕೊಪ್ಪ ಕನ್ನಡ ಮಾಧ್ಯಮ ಶಾಲೆಯಲ್ಲಿ 1958-60ರ ಅವಧಿಯಲ್ಲಿ ರಜೆ ಅವಧಿಯಲ್ಲಿ 2 ವರ್ಷ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡಿದ್ದಾರೆ(ಸಿನಿಮಾ ನಟ ರಾಮಕೃಷ್ಣ ಇದೇ ಶಾಲಾ ವಿದ್ಯಾರ್ಥಿ, ಯಕ್ಷಗಾನ ಕಲಿತಿದ್ದಾರೆ).

ಲೋಕವೇ ನನ್ನ ಮನೆ

ಇತ್ತೀಚಿನ ಸಮಾರ೦ಭವೊ೦ದರಲ್ಲಿ ಮಾತನಾಡುತ್ತಾ `` ಆಧುನಿಕ ಮನೋಭಾವ ಅರ್ಥೈಸಿ, ಪೌರಾಣಿಕ ಪ್ರಸಂಗಗಳನ್ನು ವೈಜ್ಞಾನಿಕವಾಗಿ, ಉಪಯುಕ್ತವಾಗಿ ಮಕ್ಕಳು ಮತ್ತು ಯುವಜನತೆಗೆ ಹೇಳಬೇಕು. ಬರಿಯ ಪುರಾಣಕ್ಕಿಂತ ಪ್ರತ್ಯಕ್ಷವನ್ನು ಒಪ್ಪುವ ಸ್ಥಿತಿ ಇಂದಿನದಾಗಿದ್ದು ಕಾಲಮಿತಿಯ ಯಕ್ಷಗಾನ ಪ್ರಸಂಗ ರಚನೆ ಆಧುನಿಕ, ಒತ್ತಡದ ಯುಗದಲ್ಲಿ ಅನಿವಾರ್ಯ. ಲೋಕವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬ ಎಂದು ತಿಳಿದು ಅದನ್ನೇ ಅನುಭವಿಸಿಕೊಂಡು ಬಂದಿದ್ದೇನೆ. ಯಕ್ಷಗಾನವನ್ನು ವೃತ್ತಿಯಾಗಿಯೂ ಆಧ್ಯಾತ್ಮವನ್ನು ಪ್ರವೃತ್ತಿಯನ್ನಾಗಿಯೂ ಮಾಡಿಕೊಂಡಿದ್ದೇನೆ. ನನ್ನ ಬದುಕನ್ನು ಇಂದಿಗೂ ಸ್ವಾವಲಂಬಿಯಾಗಿ, ಸ್ವತಂತ್ರನಾಗಿ ನೆಮ್ಮದಿಯಿಂದ ಕಳೆಯುತ್ತಿರುವ ಖುಷಿ ಇದೆ. ಯಾರದ್ದಾದರೂ ಮನೆಗೆ ಹೋದಾಗ ಅಲ್ಲಿ ಮಾತನಾಡಿ ಮನೆಯವರೊಳಗೆ ಏನಾದರೂ ಸಣ್ಣಪುಟ್ಟ ನೋವು ವಿರೋಧಾಭಾಸ ಉಂಟಾಗಬಹುದು ಎಂಬ ಕಾರಣಕ್ಕೆ ಅಲ್ಲಿಯೇ ಒಂದಷ್ಟು ಅಂತರವಿರಿಸಿಕೊಂಡು ಇರಲು ಇಷ್ಟಪಡುತ್ತೇನೆ. ಅದಕ್ಕಾಗಿ ಪ್ರಸಂಗ ರಚನೆ ಮಾಡಲು ತೊಡಗಿದೆ `` ಎ೦ದು ನುಡಿದರು.

ಪ್ರಚಾರ, ಪಾರಿತೋಷಕ್ಕಾಗಿ ಸಾಧನೆ ಮಾಡಿದರೆ ಇಂತಹ ಸಾಧನೆ ಮಾಡುವುದು ಅಸಾಧ್ಯ. ಹೊಸ್ತೋಟ ಅವರು ಬರೆದಿರುವ ಸಾಹಿತ್ಯದ ಸಾಕ್ಷ್ಯಚಿತ್ರ ಮಾಡುವ ಜವಾಬ್ದಾರಿ ಸರಕಾರದ್ದಾಗಿದೆ. ಅಲ್ಲದೆ ಅವುಗಳನ್ನು ಸಮಗ್ರ ಸಾಹಿತ್ಯವನ್ನಾಗಿ ಹೊರತರಬೇಕಾಗಿದೆ, ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಇತರ ಮೇರು ವ್ಯಕ್ತಿಗಳನ್ನು ಗುರುತಿಸುವಂತೆ ಹೊಸ್ತೇಟ ಅವರನ್ನು ಕೂಡ ಗುರುತಿಸುವುದು ಅತ್ಯಗತ್ಯ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ‘ಪಾರ್ತಿಸುಬ್ಬ ಪ್ರಶಸ್ತಿ’ ಸೇರಿದ೦ತೆ ನಾಡಿನ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಇವರಿಗೆ 2014ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಲಭಿಸಿರುವುದು ಯಕ್ಷಗಾನಕ್ಕೇ ಸ೦ದ ಗೌರವ.

************************


****************

ಹೊಸ್ತೋಟರವರ ಒ೦ದು ಅಪರೂಪದ ವಿಡಿಯೊ





ಹೊಸ್ತೋಟ ಮಂಜುನಾಥ ಭಾಗವತರವರ ಕೆಲವು ಛಾಯಾ ಚಿತ್ರಗಳು

( ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )








ಕೃಪೆ : udayavani , wikipedia ಹಾಗೂ ಅ೦ತರ್ಜಾಲದಲ್ಲಿ ಲಭಿಸಿದ ಇತರ ಮಾಹಿತಿಗಳಿ೦ದ.

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಗಿಂಡೀಮನೆ ಮೃತ್ಯುಂಜಯ (6/14/2015)
ಘನವ್ಯಕ್ತಿತ್ವದ ಹೊಸ್ತೋಟ ಭಾಗವತರ ವ್ಯಕ್ತಿತ್ವದ ಸಮಗ್ರ ಚಿತ್ರಣವನ್ನು ನೀಡಿದ್ದು ಸಕಾಲಿಕ, ಅಭಿನಂದನೀಯ. ಸತೀಶ್ ನಾಯಕ್ ಅವರಿಗೆ ಹೃತ್ಪೂರ್ವಕ ವಂದನೆಗಳು.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ