ಪಟ್ಲ ಎನ್ನುವುದೇನು ಹೆಸರೇ ಬರಿಯ ಊರಿಗೆ...?
ಒಂದು ಜೀವಕೆ ಹೆಸರಿದಾದರೆ,
ಹಲವು ಮನಸುಗಳ ಮಿಡಿತವದು...!
ಅಬ್ಬಾ..! ಎಷ್ಟು ನಿಜ ಅಲ್ವಾ..?
ತೆಂಕುತಿಟ್ಟಿನ ಯಕ್ಷಗಾನ ಇತಿಹಾಸದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದವರು, ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನ ತಂಡೋಪತಂಡವಾಗಿ ಸೆಳೆದವರು, ಹಸಿದು ಬಂದವರಿಗೆ ಅನ್ನವೀಯುವ ಧಣಿಯಾಗಿ, ಸ್ನೇಹಕ್ಕೆ ಹಂಬಲಿಸಿದವರಿಗೆ ಆಪ್ತಮಿತ್ರನಾಗಿ, ಸಹಾಯ ಬೇಡಿ ಬಂದವರಿಗೆ ಆಪ್ತರಕ್ಷಕನಾಗಿ ಹಲವರಿಗೆ ಹಲವು ರೂಪದಲ್ಲಿ ಕಾಣ ಸಿಗುವ ಇವರ ವ್ಯಕ್ತಿತ್ವ ಒಂದು ಅಮೋಘವಾದುದು,ಅಪರಿಮಿತ, ಅಗಣಿತ.....! ಹಾಂ ಹೌದು ನೀವು ಯೋಚಿಸುತ್ತಿರುವುದು ಸರಿಯಾಗಿಯೇ ಇದೆ... ಇದೆಲ್ಲಾ ಸತೀಶ್ ಪಟ್ಲ ಎನ್ನುವ ಅಪರೂಪದ ವ್ಯಕ್ತಿಯ ವ್ಯಕ್ತಿತ್ವದ ಕುರಿತಾದ ಮಾತುಗಳೇ ನಿಜ.
ಬಾಲ್ಯ ಹಾಗೂ ಶಿಕ್ಷಣ
1980 ರ ಆಗಸ್ಟ್ 1 ದುಗ್ಗಪ್ಪ ಅಜ್ಜನ ಪ್ರೀತಿಯ ಮೊಮ್ಮಗನ ಆಗಮನ ಪಟ್ಲಗುತ್ತುವಿನ ಮನೆಗಾಯಿತು, ಶ್ರೀ ಮಹಾಬಲ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ದಂಪತಿಗಳ ಮೂರನೇ ಮಗನಾಗಿ ಒಬ್ಬ ಅಕ್ಕ ಮತ್ತು ಒಬ್ಬ ಅಣ್ಣನ ಪ್ರೀತಿಯ ತಮ್ಮನಾಗಿ ಜನಿಸಿದ ಇವರು ಬೆಳೆದುದೆಲ್ಲಾ ಅಜ್ಜನ ಪ್ರೀತಿಯ ಮೊಮ್ಮಗನಾಗಿಯೇ....! ಆ ಕಾಲದಲ್ಲಿ ಪಟ್ಲಗುತ್ತುವಿನ ದುಗ್ಗಪ್ಪಜ್ಜನೆಂದರೆ ಒಂದು ರೀತಿ ಊರಿಗೆ ನ್ಯಾಯ ಹೇಳುವ ಹಿರಿಮನುಷ್ಯರಂತೆ ಬಾಳಿದವರು ಅವರು. ಇನ್ನು ಅವರ ಮೊಮ್ಮಗನೆಂದರೆ ಕೇಳಬೇಕೆ..? ಎಲ್ಲಿ ನ್ಯಾಯ ತೀರ್ಮಾನವೆಂದರೂ ಮೊಮ್ಮಗನ ಕೈ ಹಿಡಿದು ಅಜ್ಜ ಹೊರಟು ಬಿಡುತ್ತಿದ್ದರು ಅಜ್ಜಿ ಪದ್ಮಾವತಿ ಅಮ್ಮ ಲಲಿತಾರ ಹೋಗುವುದು ಬೇಡ ಎನ್ನುವ ಮಾತುಗಳು ಇವರ ಕಿವಿಗೆ ಬೀಳುತ್ತಲೇ ಇರಲಿಲ್ಲ...!
ಆಗಿನ್ನೂ ಇವರಿಗೆ ಮೂರು ವರ್ಷ ಪ್ರಾಯವೇನೋ ಓರಗೆಯವರೊಡನೆ ಆಟ ಆಡಿಕೊಂಡು ಬೆಳೆಯುವ ಹಸುಳೆಗೆ ಓದುವ ಮನಸಾಯಿತು ಮನದ ಬಯಕೆ ಅಜ್ಜನಲ್ಲಿಗೆ ಹೋಯಿತು.. ಆಗ ಅಂಗನವಾಡಿಗಳು ಇರಲಿಲ್ಲವಾದ್ದರಿಂದ ದುಗ್ಗಪ್ಪ ಶೆಟ್ಟಿ ಯವರು ಶಾಲೆಗೆ ಹೋಗಿ ನನ್ನ ಮೊಮ್ಮಗನನ್ನು ಶಾಲೆಗೆ ಸೇರಿಸಿಕೊಂಡು ಒಂದನೇ ಕ್ಲಾಸಿನಲ್ಲಿ ಕೂರಿಸಿಬಿಡಿ ಎಂದು ಹೇಳಿಯೇ ಬಿಟ್ಟರು. ಶಾಲೆಯ ಶಿಕ್ಷಕರು ಆಗುವುದಿಲ್ಲ ಇವನಿಗೆ ಇನ್ನೂ ಮೂರು ವರ್ಷವಷ್ಟೇ ಎಂದಾಗ ನಿಮಗೆ ಬೇಕಾದಷ್ಟು ಪ್ರಾಯ ನಿಮ್ಮ ಹಾಳೆಯಲ್ಲಿ ಬರೆದುಕೊಂಡು ಸೇರಿಸಿಕೊಳ್ಳಲೇ ಬೇಕೆಂದು ಪಟ್ಟು ಹಿಡಿದು ಕುಳಿತಾಗ ಇನ್ನು ದುಗ್ಗಪ್ಪಜ್ಜನ ಮಾತನ್ನ ಧಿಕ್ಕರಿಸಿದರೆ ಶಾಲೆಯ ಬಾಗಿಲನ್ನು ಮುಚ್ಚುವ ಹಾಗಾದೀತು ಎಂಬ ಭಯದಿಂದ ಎರಡು ವರ್ಷ ಹೆಚ್ಚಿಗೆ ಬರೆದು ಶಾಲಾ ದಾಖಾಲಾತಿಯಲ್ಲಿ ಜನನ 1978 ಆಗಸ್ಟ್ 1 ಎಂದು ಉಲ್ಲೇಖಿಸಿ ವಿದ್ಯಾಭ್ಯಾಸಕ್ಕೆ ಅಡಿಯಿಟ್ಟರು.
ಬೆಳೆವ ಸಿರಿ ಮೊಳಕೆಯಲ್ಲಿ
ಮೊದಲಬಾರಿಗೆ ನೀವು ಹಾಡಿದ್ದು ಯಾವಾಗ ಎಂದು ಕೇಳಿದ್ದಕ್ಕೆ ಏನೋ ನೆನಪಿಸಿಕೊಂಡವರಂತೆ ಯೋಚಿಸಿ ನಕ್ಕು ನುಡಿಯುವುದು ಹೀಗೆ, ಅಯ್ಯೋ ಆ ಅವಸ್ಥೆ ಹೇಳಿ ಸುಖ ಇಲ್ಲ ಶಾಲಾದಿನಗಳಲ್ಲಿ ಅಂದರೆ ನಾನಿನ್ನೂ ಐದನೇ ತರಗತಿಯಲ್ಲಿರುವಾಗ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ದೇಶಭಕ್ತಿಗೀತೆ ಹಾಡಿದ್ದೆ ಅದನ್ನು ಹೇಳುವಾಗ ವೇದಿಕೆಯಲ್ಲಿ ಹಲವು ಗಣ್ಯರು ಆಸೀನರಾಗಿದ್ದರು, ಅವರನ್ನೆಲ್ಲಾ ನೋಡಿ ಕೈಕಾಲು ನಡುಗಿಸುತ್ತಾ ಹಾಡು ಹೇಳಿದ್ದು ನೆನೆಸಿಕೊಂಡರೆ ಈಗಲೂ ಭಯವಾದೀತು ವೇದಿಕೆಯ ಭಯ ಅಷ್ಟಿತ್ತು ನನ್ನಲ್ಲಿ ಎನ್ನುತ್ತಾರೆ.
ಆ ಒಂದು ಹಾಡಿನಿಂದಲೇ ಶಿಕ್ಷಕರ ಮನಗೆದ್ದಿದ್ದ ಈ ಹುಡುಗನ "ಶಿಲೆಗಳ ಸಂಗೀತವ ಹಾಡಿದೆ....." ಮತ್ತು "ಭಾನಿಗೊಂದು ಎಲ್ಲೆ ಎಲ್ಲಿದೆ...." ಎನ್ನುವ ಹಾಡುಗಳು ಎಲ್ಲರಿಗೂ ಅಚ್ಚುಮೆಚ್ಚಾದವು. ಆಗ ಜಾಸ್ತಿ ಒಲವಿದ್ದದು ಚಿತ್ರಗೀತೆಗಳತ್ತ ಎಂದು ಹೇಳುವ ಅವರು ಏಳನೇ ತರಗತಿಯಲ್ಲಿರುವಾಗ ತರಗತಿಗಳೆಲ್ಲಾ ಮುಗಿದು ಓರಗೆಯವರೆಲ್ಲಾ ಮನೆ ಕಡೆ ಹೊರಟಾಗ ಶಿಕ್ಷಕರು ಸತೀಶ ನೀ ನಿಲ್ಲು ಒಂದು ಹಾಡು ಹೇಳಿ ಹೋಗು ಎನ್ನುವಾಗ ಇವರಿಗೆ ಅಯ್ಯೋ ದೇವರೆ ಎಂದು ಮನದಲೇ ಅಂದು ಕೊಳ್ಳುತ್ತಲೇ ಒಂದು ಹಾಡು ಹೇಳಿ ಮನೆ ಸೇರುತ್ತಿದ್ದರಂತೆ. ಅಂದರೆ ಅದಾಗಲೇ ಅವರ ಹಾಡುಗಳು ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂತಿರುತ್ತಿದ್ದುದ್ದು ಸುಳ್ಳಲ್ಲ...
ಪಟ್ಲ ಸತೀಶ್ ಶೆಟ್ಟಿ
ಜನನ
:
ಆಗಸ್ಟ್ 1, 1980
ಜನನ ಸ್ಥಳ
:
ಕನ್ಯಾನ, ಕರೋಪಾಡಿ ಗ್ರಾಮ
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಕಳೆದ 15 ವರ್ಷಗಳಿ೦ದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದು, “ಸ್ಟಾರ್ ವಾಲ್ಯೂ“ ಗಳಿಸಿದ “ಪಟ್ಲ ಶೈಲಿ“ಗೆ ದೇಶ ವಿದೇಶಗಳಲ್ಲಿ ಅಸ೦ಖ್ಯಾತ ಅಭಿಮಾನಿಗಳಿಸಿದ ತೆ೦ಕುತಿಟ್ಟಿನ ಪ್ರತಿಭಾವ೦ತ ಭಾಗವತ
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ, ಪುರಸ್ಕಾರಗಳು
ಸ೦ಗೀತಾಭ್ಯಾಸ, ತ೦ದೆ-ಅಣ್ಣನವರ ಪ್ರೋತ್ಸಾಹ
ಎಂಟನೇ ತರಗತಿಗೆಂದು ಕನ್ಯಾನಕ್ಕೆ ಸೇರಿದಾಗ ಇವರಿಗೆ ಹೇಳುವಂತಾ ಸಂಗೀತಾಸಕ್ತಿ ಇಲ್ಲದಿದ್ದರೂ ಒಂದು ಮಟ್ಟಿಗೆ ಇತ್ತಷ್ಟೇ... ಇವರು ಒಂದು ಸಂಗೀತದ ಸ್ಪರ್ಧೆಯಲ್ಲಿ ಭಾಗವಹಿಸಿದರೆಂದರೇ ಪ್ರಥಮ ಬಹುಮಾನ ಕಟ್ಟಿಟ್ಟ ಬುತ್ತಿ ಸಂಗೀತ ಕಲಿತವರೆದುರು ಸಂಗೀತ ಕಲಿಯದ ಹುಡುಗನ ಕಂಠ ಚಮತ್ಕಾರ ಮಾಡಿತ್ತು... ಅಂದರೆ ಅದಾಗಲೇ ಸಂಗೀತ ಕಲಿತವರೆದುರು ಸ್ಪರ್ಧೆಗಿಳಿದು ಜಯಿಸುವಮಟ್ಟಿಗೆ ಗಾನಶಾರದೆ ಅವರ ಕಂಠದಲ್ಲಿ ಕುಳಿತಿದ್ದಳು...! ಅದೇ ಸಮಯವೆಂಬಂತೆ ಅವರ ಶಿಕ್ಷಕರೊಬ್ಬರು ನೀ ಸಂಗೀತ ತರಗತಿಗೆ ಸೇರಲೇ ಬೇಕು ಬಾ ಎಂದು ಎಳೆದುಕೊಂಡು ಹೋಗಿ ಸೇರಿಸಿಯೇ ಬಿಟ್ಟರು, ನಾಲ್ಕೇ ನಾಲ್ಕು ಕ್ಲಾಸು ಹೋದ ಇವರು ಆಸಕ್ತಿಯಿಲ್ಲದೇ ಅಲ್ಲಿಗೆ ನಿಲ್ಲಿಸಿಬಿಟ್ಟರು.
ಇನ್ನು ಇವರಿಗೆ ಬುದ್ಧಿ ಬರುವ ಮೊದಲೇ ಒಂದು ಯಕ್ಷಗಾನ ಮೇಳವನ್ನ ಕಟ್ಟಿ ಮುನ್ನಡೆಸಿದ ಇವರ ತಂದೆ ಮಹಾಬಲ ಶೆಟ್ಟಿಯವರು, ಮತ್ತು ಮಳೆಗಾಲದ ಸಮಯದಲ್ಲಿ ಮನೆಯಲ್ಲಿರುತ್ತಿದ್ದ ಕಲಾವಿದರ ಸ್ನೇಹಮಯಿ ವಾತಾವರಣವೋ ಏನೋ ಇವರನ್ನ ಕ್ರಮೇಣವಾಗಿ ಯಕ್ಷಗಾನದತ್ತ ಸೆಳೆದಿತ್ತು. ಆದರೆ ಸಚ್ಚಣ್ಣ ಹೇಳುವ ಪ್ರಕಾರ ನನ್ನಣ್ಣನ ಯಕ್ಷಗಾನ ಆಸಕ್ತಿಯ ಮುಂದೆ ನನ್ನದೇನೂ ಇಲ್ಲ, ನಿಜವಾಗಿಯೂ ಯಕ್ಷಗಾನ ಕ್ಷೇತ್ರಕ್ಕೆ ಬರಬೇಕಾದವನು ಅವನು, ಭಾಗವತಿಕೆಯೆಡೆಗೆ ಅಪಾರ ಆಸಕ್ತಿ ಹೊಂದಿದ್ದ ಅಣ್ಣ ಸುಮ್ಮನಿರುವಾಗ ಕೂಡ ಪದ್ಯ ಗುನುಗಿಸುತ್ತಾ ಇರುತ್ತಿದ್ದ. ಆಗಲೇ ಅವನಿಗೆ ಆ ಕಾಲದ ಹಲವು ಪ್ರಸಿದ್ಧ ಕಲಾವಿದರ ಪರಿಚಯವೂ ಅವನಿಗಿತ್ತು.. ನಾನು ಕಟೀಲು ಮೇಳಕ್ಕೆ ಸೇರಿದ ಆರಂಭದ ವರ್ಷಗಳಲ್ಲಿಯೇ ನನ್ನಲ್ಲಿ ಒಂದು ಮಾರುತಿ ಕಾರಿತ್ತು ಅವನು ನನ್ನೊಂದಿಗೆ ಆಟ ಎಷ್ಟೇ ದೂರಿದ್ದರೂ ಬಂದು ಬಿಡುತ್ತಿದ್ದ ಅಲ್ಪ ಸಂಗೀತ ಜ್ಙಾನವಿದ್ದ ಅವನು ನನ್ನ ಪದ್ಯದಲ್ಲಿನ ಸರಿ-ತಪ್ಪುಗಳನ್ನು ಕೂಡಲೇ ಗುರುತಿಸಿ ಸರಿಪಡಿಸುತ್ತಿದ್ದ ಎನ್ನುತ್ತಾರೆ.
ಮಾ೦ಬಾಡಿಯವರ ಶಿಷ್ಯತ್ವ
ಹಾಗೋ ಹೀಗೋ ಪಿ.ಯು.ಸಿ. ಯಲ್ಲಿ ಕಲಾವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಪೂರೈಸಿದ ಇವರಿಗೆ ಶಿಕ್ಷಣದತ್ತ ಹಲವು ಅವಕಾಶಗಳಿದ್ದರೂ ಕಲಿಯುವಂತಾ ಹಂಬಲವೇನೂ ಇರಲಿಲ್ಲ.. ಹಾಗಾಗಿ ಪಿಯುಸಿ ಆದೋಡನೆಯೇ ಬಾಂಬೆಯ ಸಿಟಿ ಕೈಬೀಸಿ ಕರೆದಿತ್ತು, ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದ ಇವರು ಆಗಲೇ ಬಿಡುವಿನ ಸಮಯದಲ್ಲಿ ಪ್ರಸಂಗ ಪುಸ್ತಕದಲ್ಲಿ ಸುಮ್ಮನೇ ಕಣ್ಣಾಡಿಸುತ್ತಿದ್ದರು... ಬಾಂಬೆಗೆ ಹೋಗಿ ಒಂದೈದಾರು ತಿಂಗಳುಗಳಲ್ಲಿಯೇ ಅಕ್ಕ ಶೋಭಾರ ಮದುವೆ, ಅಮ್ಮನ ಅನಾರೋಗ್ಯ ಊರಿಗೆ ಕರೆಸಿ ಇಲ್ಲೇ ನೆಲೆಸುವಂತೆ ಮಾಡಿತು... ಊರಿನಲ್ಲಿ ಎಂತವರಿಗೂ ಯಕ್ಷಗಾನ ಕೈ ಬೀಸಿ ಕರೆವಾಗ ಇನ್ನು ಅದೇ ವಾತಾವರಣದಲ್ಲಿ ಬೆಳೆದ ಪಟ್ಲರಿಗೆ ಬಿಟ್ಟೀತೆ...? ಮೆಕ್ಯಾನಿಕ್ ಕೆಲಸವನ್ನೂ ಬಲ್ಲವರಾಗಿದ್ದ ಇವರು ಸದಾ ಉತ್ಸಾಹದ ಚಿಲುಮೆಯಂತಲೇ ಇರುತ್ತಿದ್ದರು. ಮನೆಯ ಹತ್ತಿರವೇ ಇದ್ದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಆಗಾಗ ಸುಮ್ಮನೇ ಹೋಗಿ ಬರುತ್ತಿದ್ದ ಇವರು ಅವರಲ್ಲಿ ಯಕ್ಷಗಾನ ಹಿಮ್ಮೇಳ ಕಲಿಯಲು ಬರುತ್ತಿದ್ದವರನ್ನ ಓರೆಗಣ್ಣಲ್ಲಿ ಗಮನಿಸುತ್ತಾ ತಾನೂ ವಿಧ್ಯಾಕಾಂಕ್ಷಿಯಾಗಿ ಕುಳಿತೇ ಬಿಟ್ಟರು, ಆಗಲೇ ಮಾಂಬಾಡಿಯವರಲ್ಲಿ ಯಕ್ಷಗಾನದ ಹಿಮ್ಮೇಳವನ್ನ ಕಲಿತರು.. ಗುರುವಿನ ಸಹವಾಸವಿಲ್ಲದೇ ಮೊದಲೇ ಚಂಡೆ-ಮದ್ದಲೆಯನ್ನ ಸುಲಲಿತವಾಗಿ ಬಾರಿಸುತ್ತಿದ್ದ ಇವರಿಗೆ ಗುರುಗಳು ಮಾರ್ಗದರ್ಶಕರಾದರು ರಾಗ-ಜ್ಙಾನದ ಸ್ಪರ್ಶವೂ ಆಯಿತು. ನೋಡ ನೋಡುತ್ತಲೇ ಮನೆಯವರ ಸಂಪೂರ್ಣ ಸಹಕಾರ ದೊರಕಿತು.. ಮಾಂಬಾಡಿಯವರ ಅಪ್ಪಟ ಶಿಷ್ಯ ರತ್ನವೊಂದು ಉದಯಿಸಿಯೇ ಬಿಟ್ಟಿತ್ತು.
ಮಾಂಬಾಡಿಯವರಲ್ಲಿ ಯಕ್ಷಗಾನದ ಪಟ್ಟುಗಳನ್ನ ಕಲಿಯುವ ಸಂದರ್ಭದಲ್ಲಿಯೇ ಊರಿನಲ್ಲಿ ಒಂದು ಕಾರ್ಯಕ್ರಮ ನಡೆದಾಗ ಮೊದಲಬಾರಿಗೆ ಇವರನ್ನ ಸ್ತುತಿ ಪದ್ಯ ಹೇಳಲು ಕುಳ್ಳಿರಿಸಲಾಗಿತ್ತು, ಆ ಪದ್ಯ ಕೇಳಿದ ಕೆಲವು ಹಿರಿತಲೆಗಳಿಗೆ ಆಗಲೇ ಆತಂಕವಾಗಿ ಮರುದಿನವೇ ಮಾಂಬಾಡಿಯವರಲ್ಲಿ ಹೋಗಿ, ಸತೀಶನಿಗೆ ಇನ್ನು ಮುಂದೆ ನೀವು ಯಕ್ಷಗಾನ ಹಿಮ್ಮೇಳ ಕಲಿಸಬಾರದು ಎಂಬಲ್ಲಿಗೆ ಆಗಲೇ ಮುಟ್ಟಿತ್ತು... ಆದರೆ ಗುರುವಿನ ಮನಸು ಅದಕೆ ಸ್ಪಂದಿಸದೆ ಶಿಷ್ಯನ ಏಳ್ಗೆಯ ಕನಸ ಕಂಡಿತ್ತು. ಹಾಗೆ ಕಲಿತು ಮೇಳ ಸೇರುವ ಮುನ್ನ ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ತಿಂಗಳು ಕಾಲ(ಆಗಸ್ಟ್ 16 ರಿಂದ ಸೆಪ್ಟೆಂಬರ್ 16) ನಡೆವ ತಾಳಮದ್ದಲೆಯಂತ ವೇದಿಕೆ ಇವರ ಭಾಗವತಿಕೆಯ ಪ್ರದರ್ಶನಕ್ಕೆ ಮೊದಲ ಮೆಟ್ಟಿಲಾಗಿತ್ತು... ಮೇಳ ಸೇರುವ ಮುನ್ನ ಸಸಿಹಿತ್ಲು ಮತ್ತು ಕೆಲವು ಮೇಳಗಳಿಗೆ ಭಾಗವತರು ರಜೆ ಇದ್ದಲ್ಲಿ ಹೋಗಿ ಹಾಡಿ ಬರುತ್ತಿದ್ದರು...
ಕಟೀಲು ಮೇಳಕ್ಕೆ ಪಾದಾರ್ಪಣೆ
ಹಿಮ್ಮೇಳವನ್ನ ನಿಧಾನವಾಗಿ ಸಿದ್ದಿಸಿಕೊಂಡ ಇವರಿಗೆ ಮೇಳ ಸೇರುವುದೇನು ಕಷ್ಟವಾಗಲಿಲ್ಲ... 1999 ರ ತಿರುಗಾಟದಲ್ಲಿ ಕುರಿಯ ಶಾಸ್ತ್ರಿಗಳಿದ್ದ ಕಟೀಲು ಮೂರನೇ ಮೇಳದಲ್ಲಿ ಎರಡನೇ ಸಂಗೀತಗಾರನಾಗಿ ವೃತ್ತಿಪರವಾಗಿ ಮೇಳಕ್ಕೆ ಸೇರಿದರು, ಆದಾಗಲೇ ಅಲ್ಲಿ ಮುಖ್ಯ ಸಂಗೀತಗಾರನಾಗಿದ್ದ ಶ್ರೀ ಶ್ರೀನಿವಾಸ ಬಳ್ಳಮಂಜರ ಹಲವು ಉತ್ತಮ ಸಲಹೆಯನ್ನೂ ಅವರು ಪಡೆದುಕೊಂಡಿದ್ದರು... ಮೂರನೇ ಮೇಳಕ್ಕೆ ಸೇರಿ ಒಂದು ತಿಂಗಳಾಗಿರುವಾಗ ಎರಡನೇ ಮೇಳದಲ್ಲಿ ಬಲಿಪರು ಅನಾರೋಗ್ಯದ ನಿಮಿತ್ತ ರಜೆಯಲ್ಲಿದ್ದಾರೆ ಎಂದು ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟಿಯವರು ಒಂದು ದಿನದ ಮಟ್ಟಿಗೆ ಇವರನ್ನು ಎರಡನೇ ಮೇಳಕ್ಕೆ ಕರೆದುಕೊಂಡು ಹೋದರು, ಹೆದರಿಕೆಯಿಂದಲೇ ಎರಡು ಗಂಟೆಯ ಸುಮಾರಿಗೆ ಪದ್ಯ ಹೇಳಲು ಕುಳಿತ ಇವರಿಗೆ ಆ ದಿನದ ಪ್ರಸಂಗ ಜ್ಙಾನ, ನಡೆ, ಪದ್ಯ ಯಾವುದರ ಪರಿಚಯವೂ ಇರಲಿಲ್‍ಲ... ಆ ಇಡೀ ಪ್ರಸಂಗ ಮುಗಿದ ಮೇಲೆ ತಿಳಿದದ್ದು ಅವರಿಗೆ ತಾನು ಇಷ್ಟೊತ್ತು ಪದ್ಯಹೇಳಿದ ಪ್ರಸಂಗ "ಮಿತ್ರಗುಪ್ತ ವಿಜಯ" ಎಂಬುದಾಗಿ....!!!
ಬಲಿಪಜ್ಜರ ಮಾರ್ಗದರ್ಶನ
ಮಾರನೇ ದಿನ ಯಥಾವತ್ತಾಗಿ ಮೂರನೇ ಮೇಳಕ್ಕೆ ಹೊರಡುವರಿದ್ದ ಸಂದರ್ಭದಲ್ಲಿ ಎರಡನೇ ಮೇಳದ ಕಲಾವಿದರ ಪ್ರೀತಿ, ವಿಶ್ವಾಸ, ಜನರ ಅಭಿಮಾನ, ಒತ್ತಾಯದಿಂದ ಬಲಿಪರ ಮಾತಿನಿಂದ ಕಲ್ಲಾಡಿಯವರು ಪಟ್ಲರನ್ನು ಎರಡನೇ ಮೇಳದಲ್ಲೇ ಮುಂದುವರೆಸಲು ಒಪ್ಪಿದರು ಅಂತಾಯಿತು. ಆಗೆಲ್ಲಾ ಆರಂಭದಲ್ಲಿ ಕುಳಿತು ಕೊಳ್ಳುತ್ತಿದ್ದ ಪಟ್ಲರು ಎರಡನೆಯದಾಗಿ ಬಲಿಪರು ಕೊನೆಯದಾಗಿ ಪ್ರಸಾದ್ ಬಲಿಪರು ಪದ್ಯಕ್ಕೆ ಕುಳಿತುಕೊಳ್ಳುವಾಗ ಮೊದಲು ಪದ್ಯ ಹೇಳಿದ ಪಟ್ಲರು, ಆಗಾಗ ಅಪರೂಪಕ್ಕೆ ಹಗಲಿನಲ್ಲಿ ಯಕ್ಷಗಾನ ಆಸಕ್ತಿ ಉಳ್ಳವರಿಗೆ ತರಬೇತಿ ಕೊಡುತ್ತಿದ್ದುದರಿಂದ ಹಗಲು ಹೇಗೂ ಮಲಗಲು ಸಮಯವಿಲ್ಲ ಈಗಾದರೂ ಮಲಗಲು ಸಮಯ ಸಿಕ್ಕೀತೆಂದು ಓಡುತ್ತಿದ್ದರಂತೆ.
ಆಗಲೇ ಒಂದು- ಅರ್ಧಗಂಟೆ ಸಮಯ ಪದ್ಯ ಹೇಳಿ ಇಳಿದು ಬರುತ್ತಿದ್ದ ಬಲಿಪಜ್ಜ ಇವರು ಪದ್ಯ ಹೇಳುವಾಗ ಮಾಡುತ್ತಿದ್ದ ಸಣ್ಣ-ಪುಟ್ಟ ತಪ್ಪುಗಳನ್ನೆಲ್ಲಾ ಕುಳಿತು ಮೊದಲೇ ನೋಟ್ ಮಾಡಿಟ್ಟುಕೊಂಡು ಇದು ಹಾಗಲ್ಲ ಹೀಗೆ ಎಂದು ಕುಳಿತು ತಿದ್ದುತಿದ್ದರಂತೆ... ಆಗ ಅಯ್ಯೋ ಇದೆಲ್ಲಾ ನನಗ್ಯಾಕೆ ಅನ್ನಿಸುವಷ್ಟು ಮನದಲೇ ಮಜ್ಜಿಗೆ ಕಡೆದಂತೆ ಅನಿಸುತ್ತಿದ್ದರೂ ಧಿಕ್ಕರಿಸಲು ಹಿರಿಯವರಲ್ಲವೇ ಅನ್ನಿಸಿ ಸುಮ್ಮನಿದ್ದೆ ಆದರೆ ಅಂದು ಅವರು ನನ್ನನ್ನು ಆ ಪರಿಯಾಗಿ ಕೆತ್ತಿದ್ದಕ್ಕೆ ಇಂದು ನಾ ಶಿಲ್ಪದ ಆಕಾರವನ್ನು ಪಡೆದೆ, ಕುಂತರೂ ನಿಂತರೂ ಬಲಿಪಜ್ಜ ಸತೀಶ ಇಲ್ಲಿ ಬಾ ಇದು ನೋಡು, ಹಾಗೆ ಮಾಡು ಅಂತೆಲ್ಲಾ ಪ್ರತಿಕ್ಷಣವೂ ಜೊತೆಗಿದ್ದರು, ಅವರನ್ನು ನೆನೆಯುವಾಗ ಕಣ್ತುಂಬಿ ಬರುತ್ತೆ ಎನ್ನುತ್ತಾರೆ. ಬಲಿಪರ ಜೊತೆಗಿನ ಮೂರು-ನಾಲ್ಕು ವರ್ಷಗಳ ತಿರುಗಾಟ ನನ್ನ ಯಕ್ಷಗಾನ ಜೀವನದ ಗತಿಯನ್ನೇ ಬದಲಾಯಿಸಿತು ಎಂದರೆ ತಪ್ಪಾಗಲಾರದು... ಎನ್ನುವ ಇವರು ಅದೇ ಮೇಳದಲ್ಲಿಯೇ ಹಲವು ಏಳು-ಬೀಳುಗಳನ್ನು ಕಂಡು ಆರಂಭದಲ್ಲಿ ಕುಳಿತುಕೊಳ್ಳುವುದರಿಂದ ಹಿಡಿದ ಮುಖ್ಯ ಭಾಗವತರಾಗಿಯೂ ಇದ್ದು ಆ ಮೇಳದಲ್ಲಿ ಹತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಕಳೆದೈದು ವರ್ಷಗಳಿಂದ ಐದನೇ ಮೇಳದ ಪ್ರಧಾನ ಭಾಗವತರಾಗಿ ಜನಮನ ಸೂರೆಗೊಳ್ಳುತ್ತಿದ್ದಾರೆ.
ಛಂದಸ್ಸುಗಳ ಅಭ್ಯಾಸ, ಶಾಸ್ತ್ರೀಯ ಸ೦ಗೀತದ ಜ್ಞಾನಾಭಿವೃಧ್ಧಿ
ಸಾಮಾನ್ಯವಾಗಿ ಛಂದಸ್ಸುಗಳ ಅರಿವು ಪ್ರಸಂಗಕರ್ತನಿಗೆ ಇರಬೇಕಾಗುತ್ತದೆ ಆದರೆ ಪಟ್ಲರು ಯಕ್ಷಗಾನದ ಜೊತೆ-ಜೊತೆಗೆ ಸೀಮಂತೂರು ನಾರಾಯಣ ಶೆಟ್ಟಿಯವರ ಶಿಷ್ಯನಾಗಿ ಛಂದಸ್ಸುಗಳನ್ನ ಅಭ್ಯಾಸ ಮಾಡಿದ್ದಲ್ಲದೇ ಯೋಗಿಶ್ ಶರ್ಮರ ಶಿಷ್ಯನಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಙಾನ ಹೆಚ್ಚಿಸಿಕೊಂಡು, ಭಜಕಳ ಗೋವಿಂದ ಭಟ್ ರ ಶಿಷ್ಯನಾಗಿ ಹಿಂದೂಸ್ಥಾನಿ ಸಂಗೀತದ ಅಭ್ಯಾಸ ಕೂಡ ಸಾಗುತ್ತಿದೆ. ಹಿರಿಯ ಭಾಗವತರ ಮುಂದೆ ನಾನಿಂದಿಗೂ ಶಿಷ್ಯನೇ ಎನ್ನುವ ಇವರು ಎಷ್ಟು ಎತ್ತರಕ್ಕೆ ಬೆಳೆದರೂ ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ಸಮಾನ ವಯಸ್ಕರಲ್ಲಿ ಪರಸ್ಪರ ವಿಶ್ವಾಸ ಅಭಿಮಾನಿಗಳಲ್ಲಿ ಅಭಿಮಾನ ಇಡುವ ಪರಿಯ ಅವರ ವ್ಯಕ್ತಿತ್ವವೇ ಅವರನ್ನ ದಿನದಿಂದ ದಿನಕ್ಕೆ ಉನ್ನತ ಶಿಖರಕ್ಕೇರಿಸುತ್ತಿರುವುದು ಎಂದರೆ ನಂಬಲೇ ಬೇಕಾದಂತ ಸತ್ಯವಿದು.
ಮುದ್ದಿನ ಕುಟು೦ಬ
ಮನೆಯಲ್ಲಿನ ಸಣ್ಣ ವ್ಯಾಜ್ಯದಿಂದ ಸ್ವಾಭಿಮಾನಿಯಾಗಿ ಮನೆಬಿಟ್ಟು ಬರಿಗೈಲಿ ಬಂದ ಮಹಾಬಲ ಶೆಟ್ಟರಿಗೆ ಮಗನ ಏಳ್ಗೆಯ ಮುಂದೆ ಅದೆಲ್ಲವೂ ಮರೆತುಹೋಗಿತ್ತು. ಪಟ್ಲರ ಆರಂಭಿಕ ದಿನಗಳೂ ಕೂಡ ಎಳೆವೆಯಲ್ಲಿರುವಂತೆ ಹಿತವಾಗಿರಲಿಲ್ಲವಾದರೂ ಅಪ್ಪನಂತೆಯೇ ಸ್ವಾಭಿಮಾನಿಯಾಗಿ ಅಸ್ತಿತ್ವ ಸ್ಥಾಪಿಸಲು ಹಗಲಿರುಳು ಶ್ರಮಿಸಿ ಜೀವನದಲ್ಲಿ ಏಳು-ಬೀಳುಗಳನ್ನ ಕಂಡು ಮೇಲೆದ್ದು ಬಂದವರು.
ಇವರ ವಯಕ್ತಿಕ ಜೀವನವೂ ಕೂಡ ಇವರ ಪದ್ಯದ ಇಂಪಿನ ಕಂಪಿನಷ್ಟೇ ಮಾಧುರ್ಯ ಭರಿತವಾದುದು ಹಿರಿಯರು ನೋಡಿ ಮಾಡಿದ ಮನ ಮೆಚ್ಚಿದ ಮಡದಿ, ಬಿ.ಎಸ್ಸಿ. ಪಧವೀಧರೆಯಾದ ನಿರ್ಮಿತರೊಂದಿಗೆ ವೈವಾಹಿಕ ಜೀವನದ ನಾಲ್ಕು ವಸಂತಗಳನ್ನ ಪೂರೈಸಿದ ಪಟ್ಲರಿಗೆ ದಾಂಪತ್ಯದ ಪ್ರತೀಕವಾಗಿ ಮುದ್ದು ಮುದ್ದಾದ ಕಂದ "ಹೃದಾನ್" ಗೆ ಪ್ರೀತಿಯ ಅಪ್ಪ ಎನ್ನಿಸಿಕೊಂಡವರಿದ್ದಾರೆ. ಇವನೋ ನಾನೇನೂ ಕಮ್ಮಿ ಎನ್ನುವಂತೆ ಎರಡುವರೆ ವರ್ಷದ ಪೋರನಿಗೂ ಯಕ್ಷಗಾನದ ಗೀಳು ರಕ್ತಗತವಾಗಿ ಬಂದುದರಿಂದಲೋ ಏನೋ ಬಹುವಾಗಿ ಅಂಟಿಕೊಂಡಿದೆಯಂತೆ, ಆಟ ನೋಡಲು ಬಂದರೆ ಅಪ್ಪನ ಮೇಜಿನ ಅಡಿಯಲಿ ಕುಳಿತು ಕಣ್ಣು ಮಿಟುಕಿಸುತ್ತಾ ಬಣ್ಣದ ವೇಷವನ್ನ ಅಚ್ಚರಿಯಿಂದ ನೋಡುತ್ತಾ ಅಪ್ಪನ ಪದ್ಯದ ಸವಿಯನ್ನುಣ್ಣುತ್ತ ಬಂದವರನ್ನೂ ಮಂತ್ರಮುಗ್ಧಗೊಳಿಸುವನಾತ...!!
ಅಭಿಮಾನಿಗಳ ಹುಚ್ಚೆಬ್ಬಿಸಿದ ``ಪಟ್ಲ ಶೈಲಿ``
ಯಕ್ಷಗಾನದಲ್ಲಿ ಕ್ರಾಂತಿಯೆಬ್ಬಿಸಿ "ಪಟ್ಲ ಶೈಲಿ"ಯನ್ನ ಹುಟ್ಟುಹಾಕಿದ ಇವರ ಕೆಲವು ಪದ್ಯಗಳ ಆರಂಭಿಕ ಸಾಲುಗಳು ಕೆಲವರ ಮೊಬೈಲ್ ನ ರಿಂಗ್-ಟೋನ್ ಗಳಾದವು, ಇನ್ನು ಕೆಲವರ ಅಲರಾಂ ಟೋನ್ ಗಳಾದರೆ, ಅವರ ಫೋಟೋಗಳು ವಾಟ್ಸಾಪ್ ನ ಡಿ.ಪಿ. ಗಳಾದವು, ಕೆಲವರ ವಾಟ್ಸಾಪ್ ಸ್ಟೇಟಸ್ ಗಳಂತು 'ಪಟ್ಲೇರ್ ಮರ್ಲ್ ಪತ್ತಾಯೆರ್' ಎಂದು ಬದಲಾದವು, ಇಂತಹ ಪಟ್ಲರಿಗೆ ಹಲವಾರು ಪ್ರಶಸ್ತಿಗಳು, ಬಿರುದುಗಳು ತಾವಾಗೇ ಅರಸಿಕೊಂಡು ಬಂದಿವೆ... ಪ್ರಶಸ್ತಿ - ಸಮ್ಮಾನಗಳನ್ನ ಉಲ್ಲೇಖಿಸ ಹೊರಟರೆ ಅದೇ ಒಂದು ಲೇಖನವಾಗುವುದಂತೂ ನೂರರಷ್ಟು ನಿಜ..! ಇದ್ಯಾವ ಪ್ರಶಸ್ತಿಗಳನ್ನ ತೆಗೆದುಕೊಳ್ಳುವ ಮಟ್ಟಿಗೆ ನಾ ಬೆಳೆದಿಲ್ಲವೆನ್ನುತ್ತರಾದರೂ ಅಭಿಮಾನಿಗಳ ಪ್ರೀತಿಯ ಮುಂದೆ ನಿರುತ್ತರರಾಗುತ್ತಾರೆ...!
ಇವರಿಂದಾಗಿ ಐದನೇ ಮೇಳದ ಆಟ ಅರಸಿಹೋಗುವ ವರ್ಗವೇ ಸೃಷ್ಟಿಯಾಯಿತು., ಮಲಗಿದವರು ರಾತ್ರಿ ಎರಡು ಗಂಟೆಗೆ ಎದ್ದು ಮೈ ಕೊಡವಿ ಆಟಕ್ಕೆ ಹೋಗುವಂತಾದರು, ಯುವಜನತೆ ಇವರ ಪದ್ಯಗಳಿಗೆ ಬಹುವಾಗಿ ಆಕರ್ಷಿತಗೊಂಡರು...ಇವರ ಏಳ್ಗೆಯನ್ನ ಸಹಿಸದವರು ಏನೆಲ್ಲಾ ವಿವಾದಗಳನ್ನ ಸೃಷ್ಟಿಸಿದರಾದರೂ ಕೊನೆಗೆ ಅವರೇ ಅದಕ್ಕೆ ತಲೆದಂಡವನ್ನೂ ತೆರಬೇಕಾದದ್ದು ಸುಳ್ಳಲ್ಲ...! ಕೀರ್ತಿ-ಪ್ರತಿಷ್ಟೆ ಹೆಚ್ಚಿದಂತೆ ವಿರೋಧಿಗಳ ಸಂಖ್ಯೆಯೂ ಬೆಳೆಯಿತು ಅವರ ಗುಣದಲ್ಲಿ ಮತ್ಸರ ಕಂಡರು..., ರಾಗದಲ್ಲಿ ತಪ್ಪು ಹುಡುಕುವ ಯತ್ನ ಮಾಡಿ ಕೈ ಸುಟ್ಟುಕೊಂಡರು, ಇನ್ನೂ ಕೆಲವು ಭಾಗವತರು ಅವರೊಂದಿಗೆ ದ್ವಂದ್ವ ಮಾಡಲಾಗದೇ ಶೃತಿಯನ್ನೇ ಏರುಪೇರಾಗಿಸಿ ಅವರ ಪದ್ಯದ ಗತಿ ಬದಲಿಸ ಹೋದರು, ಹೀಗೆ ಅವರ ಏಳ್ಗೆಸಹಿಸದವರು ಏನೋ ಮಾಡಲು ಹೋಗಿ ಏನೋ ಆಗಿ ಕೈ ಸುಟ್ಟುಕೊಂಡವರೇ ಹೆಚ್ಚು...!!
ದೇಶ ವಿದೇಶಗಳಲ್ಲೂ ತಿರುಗಾಟ
ಇವರ ಸಾಧನೆಯೂ ಸೀಮೋಲ್ಲಂಘನವಾಯಿತು. ಸಮುದ್ರದಾಚೆಯೂ ಇವರ ಕೀರ್ತಿ ಹಬ್ಬಿತು.... ದುಬೈ, ಕುವೈಟ್, ಮಸ್ಕತ್, ಅಮೇರಿಕಾ, ಸಿಂಗಾಪುರ್, ಲಂಡನ್ ಹೀಗೆ ಹತ್ತು-ಹಲವು ದೇಶಗಳಲ್ಲಿ ಯಕ್ಷಗಾನದ ಕಂಪ ಪಸರಿಸಿದ ಇವರು ಈ ಬಾರಿಯೂ ಕೂಡ ಜೂನ್ ನಲ್ಲಿ ದುಬೈ, ಜುಲೈನಲ್ಲಿ ದಿಲ್ಲಿ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಮಲೇಶಿಯಾ-ಸಿಂಗಾಪೂರ್ ಅಂತ ಮುಂದಿನ ತಿರುಗಾಟದ ತನಕ ಫುಲ್ ಬ್ಯುಸಿ ಇರುವ ಪಟ್ಲರ ಕಾರ್ಯಕ್ರಮದ ಡೇಟ್ ಸಿಗುವುದೆ ಕೆಲವರಿಗೆ ಕಷ್ಟವಾಗಿದೆ....!
ತೆಂಕುಭಾಗವತರ ಕಂಪು ಬಡಗಲೂ ಅಷ್ಟೇ ಸುಮಧುರವಾಗಿ ಪಸರಿಸಲು ಮೂಲ ಕಾರಣ ಪಟ್ಲರು. ಹಿರಿಯರೊಬ್ಬರು ಹೇಳುವ ಹಾಗೇ ಕಾಳಿಂಗ ನಾವಡರ ನಂತರ ಅವರದೇ ತೆರನಾಗಿ ಕೀರ್ತಿ ಪ್ರತಿಷ್ಠೆಯಿಂದಾಗಿ ,ವಿಶಿಷ್ಟವಾದ ಶೈಲಿಯಿಂದಾಗಿ ಬಡಗು-ತೆಂಕೆರಡರಲ್ಲೂ ಸಮಾನ ಅಭಿಮಾನಿಗಳನ್ನ ಹೊಂದಿದ ಏಕೈಕ ಭಾಗವತ ರತ್ನವಿದು ಎನ್ನುತ್ತಾರೆ. ಅಷ್ಟೇ ಏಕೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಇವರ ಆಪ್ತರೂ ಅಭಿಮಾನಿಯೂ ಆದ ಉದಯ್ ಕುಮಾರ್ ಶೆಟ್ಟಿಯವರ "ಕೆಂಟಕಿ" ರೆಸ್ಟೋರಂಟ್ ನಲ್ಲಿ ಹಾಕಿರುವ ಫೋಟೋ ನೋಡಿ ಅಭಿಮಾನಿಗಳಾದವರು ಹಲವರು..! ಇದರಿಂದ ಅಭಿಮಾನಿಗಳಾದ ಕೆಲವರು ಸಂದರ್ಶನದಲ್ಲಿ ಹೇಳಿಕೊಂಡಿದ್ದೂ ಇದೆ...!!
ಕಷ್ಟದಲ್ಲಿರುವವರಿಗೆ ಸದಾ ದಾರಿ ದೀಪ
ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ತನ್ನ ತನವನ್ನ ಮರೆಯದ ಪಟ್ಲರ ಗುಣ ಎಲ್ಲರಿಗೂ ಅಚ್ಚುಮೆಚ್ಚು. ಮೇಳದಕಲಾವಿದರು ಹೇಳುವಂತೆ ಅಪರೂಪದಲ್ಲಿ ಅಪರೂಪದ ವ್ಯಕ್ತಿ ಇವರು, ಸರಳ-ಸಜ್ಜನರು....! ಕಷ್ಟದಲ್ಲಿರುವವರಿಗೆ ಸದಾ ದಾರಿ ದೀಪವಾಗಿರುವ ಇವರು ತನಗೆ ಮಿಕ್ಕಿದ ಹಣ ತನ್ನದೇ ಆದರೂ ಪರರ ಸೇವೆಗದು ದೊರೆತದ್ದು ಎಂದು ಭಾವಿಸುವವರು.
ಮೂರು ವರ್ಷಗಳ ಹಿಂದೆ ಕಟೀಲು ಆರೂ ಮೇಳಗಳ ಪೈಕಿ ಹೆಸರು ಹೇಳಲಿಚ್ಛಿಸದ ಮಹಿಷ ಪಾತ್ರಧಾರಿಯೋರ್ವರು ಕಾಲು ನೋವೆಂದು ಅವರ ಚೌಕಿಯಿಂದ ಇವರಿಗೆ ಕರೆಮಾಡಿದಾಗ ತಕ್ಷಣವೇ ಬಳ್ಳಮಂಜರನ್ನ ಪದ್ಯಕ್ಕೆ ಕೂರಿಸಿ ಸ್ವತಃ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋದವರು, ದೇವಿ ಪಾತ್ರಧಾರಿಯೋರ್ವರ ಧ್ವನಿ ಕ್ಷೀಣಿಸಿದ್ದನ್ನ ಸರಿ ಪಡಿಸಲು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಏ.ಜೆ. ಯಲ್ಲಿ ಉಚಿತ ಚಿಕಿತ್ಸೆ ನೀಡಿಸಿದವರು...! ಮೇಳದ ಕಲಾವಿದರ ಮಳೆಗಾಲದ ಆಟಕ್ಕೆ ಹಣ ಪಡೆದುಕೊಳ್ಳದವರು, ಯಾವ ಕಾರ್ಯಕ್ರಮದಲ್ಲೂ ತನಗೆ ಇಂತಿಷ್ಟು ಹಣ ಕೊಡಿ ಎಂದು ಕೇಳದೆ ಕೊಟ್ಟದ್ದು ತೆಗೆದುಕೊಂಡವರು, ಕಲಾವಿದರೊಬ್ಬರು ಹಣಕಾಸು ವಿಷಯದಲಿ ಕೈಸೋತು ಕುಳಿತಾಗ ಕಣ್ಮುಚ್ಚಿ ಹತ್ತಿರ-ಹತ್ತಿರ ನಾಲ್ಕು ಲಕ್ಷಗಳಷ್ಟನ್ನ ಉಚಿತವಾಗಿ ಕೊಟ್ಟವರು....
ಇವರ ಬಗ್ಗೆ ಬರೆಯಹೊರಟರೆ ಪೂರ್ಣವಿರಾಮವೇ ಕಳೆದುಹೋದೀತು....! ಯಕ್ಷಗಾನಕ್ಕೂ ಸಮಾಜಿಕವಾಗಿಯೂ ಇನ್ನೂ ಹಲವು ಸಾಧನೆಗಳು ಇವರ ಪಾಲಾಗಲಿ ಎಂದು ಶ್ರೀ ಭ್ರಮರಾಂಬೆಯನ್ನ ಬೇಡುತ್ತಾ ಇವರ ಕುರಿತ ಬರವಣಿಗೆಗೆ ಅರ್ಧವಿರಾಮವಿಡೋಣ.....!!
************************
****************
ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು
ಪಟ್ಲ ಸತೀಶ್ ಶೆಟ್ಟಿಯವರ ಕೆಲವು ಛಾಯಾ ಚಿತ್ರಗಳು
( ಕೃಪೆ : ರಾಮ್ ನರೇಶ್ ಮ೦ಚಿ, ಕಿರಣ್ ವಿಟ್ಲ ಹಾಗೂ ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )
ಪ್ರೀತಿಯ ಗುರುಗಳಾದ ಬಲಿಪಜ್ಜನವರ ಜೊತೆ
ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯರ ಭಾಗವತಿಕೆಗೆ ಮದ್ದಳೆ ವಾದನ
ಸಮಕಾಲೀನ ಭಾಗವತ ರವಿಚ೦ದ್ರ ಕನ್ನಡಿಕಟ್ಟೆಯವರೊ೦ದಿಗೆ ದ್ವ೦ದ್ವ ಭಾಗವತಿಕೆ
ಮಡದಿ ನಿರ್ಮಿತಾ ಹಾಗೂ ಮಗ ಹೃದಾನ್ ಜೊತೆಗೆ
ಬೆ೦ಗಳೂರಿನ ನಡೆದ ಸನ್ಮಾನ
ಶ್ರಿಮತಿ ವಿದ್ಯಾ ಕೋಳ್ಯೂರುರವರ ತ೦ಡದೊ೦ದಿಗೆ ಅಮೇರಿಕದಲ್ಲಿ ನಡೆದ ಪ್ರದರ್ಶನವೊ೦ದರಲ್ಲಿ
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.