ಅನಶ್ವರ ಕಲಾವಿದ - ಬಲಿಪ ನಾರಾಯಣ ಭಾಗವತ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಆಗಸ್ಟ್ 13 , 2013
|
ತೆಂಕು ತಿಟ್ಟು ಯಕ್ಷಗಾನದ ಭಾಗವತಿಕೆಯಲ್ಲಿ ಬಲಿಪ ನಾರಾಯಣ ಭಾಗವತರದು ಬಹುದೊಡ್ಡ ಹೆಸರು. ಯಕ್ಷರಂಗದ ಭೀಷ್ಮಎಂದೇ ಖ್ಯಾತಿ. ಸುಮಾರು 50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ. ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪ ನೂಯಿ ಎಂಬ ಪುಟ್ಟ ಹಳ್ಳಿಯಲ್ಲಿ ವಾಸ. ಕಟೀಲು ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ಪ್ರಸಂಗಕರ್ತರೂ ಹೌದು. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಇವರು ರಚಿಸಿದ ಐದು ದಿನಗಳ ‘ದೇವಿ ಮಹಾತ್ಮೆ’ ಪ್ರಸಂಗದ ಹಾಡು, ಅತ್ಯಂತ ಮೌಲಿಕ ಮತ್ತು ಅಪರೂಪದ ಕೃತಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
|
ಬಾಲ್ಯ , ಶಿಕ್ಷಣ
ಯಕ್ಷಗಾನದ ತವರು, ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾ.13, 1938ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತೀ ಅಮ್ಮನವರ ಸುಪುತ್ರರಾಗಿ ಜನಿಸಿದವರು ಬಲಿಪ ನಾರಾಯಣ ಭಾಗವತರು. ಏಳನೇ ತರಗತಿಯವರಿಗೆ ಓದಿದ್ದರೂ ಅವರ ಅನುಭವ, ಪಾಂಡಿತ್ಯದ ಮಟ್ಟ ಮಾತ್ರ ಎತ್ತರದ್ದು. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ತಮ್ಮ 13ನೇ ವರ್ಷದಲ್ಲಿಯೇ ರಂಗ ಪ್ರವೇಶ ಗೈದರು. ಇವರುದ್ದು ನಿರಂತರ 60ವರ್ಷಗಳ ಸುಧೀರ್ಘ ಕಾಲದ ಕಲಾ ಸೇವೆ. ಪಡ್ರೆ ಜಠಾಧಾರಿ ಮೇಳವನ್ನು ಕಟ್ಟಿ ನಡೆಸಿ ಯಜಮಾನಿಕೆಯ ಅನುಭವವನ್ನೂ ಪಡೆದವರು. 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪರಿಗಿದೆ. 30 ಪ್ರಕಟಿತ, 15 ಅಪ್ರಕಟಿತ ಪ್ರಸಂಗಗಳನ್ನು ರಚಿಸಿ ಉದ್ದಾಮ ಪಂಡಿತರೆನಿಸಿಕೊಂಡಿದ್ದಾರೆ.
ಪರಂಪರೆಯ ಯಕ್ಷಗಾನಕ್ಕೊಂದು ಮನ್ನಣೆ ನೀಡಿ ಇಂದಿಗೂ ಶುದ್ಧ ಯಕ್ಷಗಾನ ಶೈಲಿಯನ್ನು ಉನ್ನತ ಕಂಠಸಿರಿಯಿಂದ ಹಾಡುವ ತಾಕತ್ತುಳ್ಳ ಅಮೂಲ್ಯ ಸ್ವರಹೊಂದಿದ ಭಾಗವತರು ಇವರು. ಭಾಗವತ ಪರಂಪರೆಯನ್ನು ಮೇಲೆತ್ತಿದ ಮೇರು ವ್ಯಕ್ತಿತ್ವ. ನಿಷ್ಕಲ್ಮಶ ಕಲಾಸೇವೆಗೆ ಅವರ ಲಕ್ಷಾಂತರ ಅಭಿಮಾನಿಗಳೇ ಸಾಕ್ಷಿ. ಇವರ ಸಾಧನೆಗೆ ಸಾಕ್ಷಿ ಇವರಿಗೆ ಸಂದ ಬಿರುದ, ಸನ್ಮಾನಗಳು. ಮನೆಯ ಗೋಡೆಗಳಲ್ಲೆಲ್ಲಾ ಸನ್ಮಾನ ಪತ್ರ, ಪ್ರಶಸ್ತಿ ಪತ್ರಗಳೇ ರಾರಾಜಿಸುತ್ತಿವೆ. ಪತ್ನಿ ಶ್ರೀಮತಿ ಜಯಲಕ್ಷ್ಮೀ ಇವರ ಕಲಾ ಸೇವೆಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದಾರೆ. ನಾಲ್ವರು ಪುತ್ರರ ಪೈಕಿ ಮಾಧವ ಬಲಿಪ ಹಿಮ್ಮೇಳವಾದಕರು. ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪ ಭಾಗವತದಲ್ಲಿ ಪರಿಣಿತರು. ಶಶಿಧರ್ ಬಲಿಪ ಕೃಷಿಯನ್ನು ನೆಚ್ಚಿಕೊಂಡರು. ಯಕ್ಷಗಾನ ಪ್ರಪಂಚದಲ್ಲಿ `ಬಲಿಪರ ಮಟ್ಟು' ಎಂಬ ಸ್ಥಿತಿಯನ್ನು ಸ್ಥಾಪಿಸಿದವರು ದಿ.ಬಲಿಪ ನಾರಾಯಣ ಭಾಗವತರು. ಅದನ್ನು ಇಂದಿಗೂ ಮುನ್ನಡೆಸಿದ ಕೀರ್ತಿ ಅವರ ಮೊಮ್ಮಗ ಬಲಿಪ ನಾರಾಯಣ ಭಾಗವತರದ್ದು ಎಂದರೆ ತಪ್ಪಾಗಲಾರದು.
ಇದು ಬಲಿಪರ ವೈಶಿಷ್ಟ್ಯ
ಯಕ್ಷಗಾನದ ಹಾಡುಗಾರಿಕೆ(ಭಾಗವತಿಕೆ)ಯಲ್ಲಿ ಬಲಿಪರ ಸ್ವರಕ್ಕೆ ಅದರದ್ದೇ ಆದ ಮಹತ್ವವಿದೆ. ಕಂಚಿನ ಕಂಠದ ಅವರ ಸ್ವರ, ಹಾಡುಗಾರಿಕೆಗೆ ಮಾರುಹೋದವರು ಅನೇಕರು. ಆ ಕಾರಣಕ್ಕಾಗಿಯೇ ಬಲಿಪ ಯಕ್ಷಗಾನದಲ್ಲೊಂದು ಮೋಡಿ ಮಾಡಿದ್ದಾರೆ.
ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಹಾಡುವ ಬಲಿಪರು ತಮ್ಮ ಕಲಾ ಸೇವೆಯುದ್ದಕ್ಕೂ ಹಾಡುಗಾರಿಕೆಯ ಮೂಲಕ ಯಕ್ಷರಂಗಕ್ಕೊಂದು ಜೀವ ಕಳೆ ತುಂಬಿದ್ದಾರೆ.
`ಬಲಿಪ' ಹೆಸರಿನ ಹಿಂದಿನ ಒಳಗುಟ್ಟು...
`ಬಲಿಪ' ಈ ಹೆಸರಿಗೆ ಅದರದ್ದೇ ಆದಂತಹ ಹಿನ್ನಲೆ ಏನೆಂಬುದು ಸ್ಪಷ್ಟವಾಗಿಲ್ಲ. ಇದು ಬಲಿಪರು ಸ್ವತಃ ಹೇಳಿದ ಮಾತು. ಹಿರಿಯರಿಂದ ಬಳುವಳಿಯಾಗಿ ಬಂದಿದೆ ಎನ್ನುತ್ತಾರವರು. ತನ್ನ ತಿಳುವಳಿಕೆಯ ಪ್ರಕಾರ, `ಬಲಿಪ' ಎಂಬುದು ಅಡ್ಡ ಹೆಸರಾಗಿರಬಹುದು. ಅಂಗ್ರಾಜೆ ಮನೆತನದವರು ನಾವು. ಅದು ಪಡ್ರೆಯಲ್ಲಿದೆ. ಅಲ್ಲೇ ಸನಿಹದಲ್ಲಿ ಸಾಲೆತ್ತಡ್ಕ ಎಂಬಲ್ಲಿ `ಬಲಿಪರ ಜಾಲು ' ಎಂಬಲ್ಲಿ ನಾವಿದ್ದೆವು. ಈ ಕಾರಣಕ್ಕೆ ಹೆಸರು ಬಂದಿರಲೂ ಬಹುದು ಎಂದವರು ವಿವರಿಸುತ್ತಾರೆ.
|
ಬಲಿಪ ನಾರಾಯಣ ಭಾಗವತ |
|
ಜನನ |
: |
ಮಾರ್ಚ್ 13, 1938 |
ಜನನ ಸ್ಥಳ |
: |
ಪಡ್ರೆ ಗ್ರಾಮ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ |
ಕಲಾಸೇವೆ |
: |
50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ.
|
ಪ್ರಶಸ್ತಿಗಳು:
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010
- ಸಾಮಗ ಪ್ರಶಸ್ತಿ 2012
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' 2003
- ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ 2002
- 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ 2003
- ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ' 2002
- ಶೇಣಿ ಪ್ರಶಸ್ತಿ 2002
- ಕವಿ ಮುದ್ದಣ ಪುರಸ್ಕಾರ 2003
- ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ 2003
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ 2003
- ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ 1988
|
|
|
ಇನ್ನೂ ಒಂದು ಕಥೆಯಿದೆ. ಅದು ಎಷ್ಟರ ಮಟ್ಟಿಗೆ ಸರಿ ಎಂಬುದು ಗೊತ್ತಿಲ್ಲ ಎಂಬ ಬಲಿಪ ನಾರಾಯಣ ಭಾಗವತರು, ನಮ್ಮ ಹಿರಿಯರ ಕಾಲದಲ್ಲಿ ತೀರ್ವೆ ಕಟ್ಟಲು ಮಡಿಕೇರಿಗೆ ಹೋಗುತ್ತಿದ್ದರು. ಅದಾಗ ಮಡಿಕೇರಿಯಲ್ಲಿ ತೀರ್ವೆ ಕಟ್ಟಬೇಕಾಗಿತ್ತು. ಅಂದೆಲ್ಲಾ ಬಸ್ಸು ವಾಹನಗಳು ಅಪರೂಪ. ನಡೆದೇ ಹೋಗುವ ಪರಿಪಾಠ. ಹಾಗೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿ ವೇಳೆ `ಅಡ್ಡ ಬಲಿಪ' (ಹೆಬ್ಬುಲಿಯನ್ನು)ನಮ್ಮ ಹಿರಿಯರೊಬ್ಬರು ಕೊಂದರಂತೆ. ಅದನ್ನು ಅಲ್ಲಿನ ರಾಜರಿಗೆ ತೋರಿಸಿದರಂತೆ. ಅದರಿಂದ ಸಂತೋಷಗೊಂಡ ರಾಜ ನಿಮ್ಮ ಜಾಗೆಗೆ ಇಂದಿನಿಂದ ತೀರ್ವೆ ಬೇಕಾಗಿಲ್ಲ ಎಂದರಂತೆ. ಆ ಪ್ರಕಾರ ಪಡ್ರೆಯ ಬಾರ್ಮೊಗ ಎಂಬ ಜಾಗೆಗೆ ಇಂದಿಗೂ ತೀರ್ವೆಯಿಲ್ಲ. ಬಲಿಪನನ್ನು ಕೊಂದ ಕಾರಣಕ್ಕೆ `ಬಲಿಪ' ಎಂದು ಬಂದಿರಬಹುದು ಎನ್ನುತ್ತಾರೆ ಅವರು.
`ಬಲಿಪ'ರಿಗೆ ಬಲಿಪರೇ ಸಾಟಿ...
ರಾತ್ರಿ ಹತ್ತರ ಹೊತ್ತಿಗೆ ಕೈಯಲ್ಲಿ ಜಾಗಟೆ ಹಿಡಿದು ವೇದಿಕೆ ಮೇಲೆ ಕುಳಿತರೆ ಮತ್ತೆ ಮೇಲೇಳುವುದು ಬೆಳಗ್ಗಿನ ಜಾವದಲ್ಲಿ `ಮಂಗಳ' ಹಾಡು ಹಾಡಿದ ನಂತರವೇ. ಅಷ್ಟೊಂದು ಶ್ರದ್ಧೆ, ಪ್ರೀತಿ ಕಲೆಯ ಮೇಲಿದೆ. ಆ ಕಲಾ ಪ್ರೀತಿಯೇ ಅವರನ್ನು ಈ ಎತ್ತರಕ್ಕೇರುವಂತೆ ಯಕ್ಷರಂಗದಲ್ಲೊಂದು ಛಾಪು ಮೂಡಿಸುವಂತೆ ಮಾಡಿದೆ. ಅವರೇ ಯಕ್ಷ ದಿಗ್ಗಜ ಖ್ಯಾತಿಯ `ಬಲಿಪ' ನಾರಾಯಣ ಭಾಗತರು.
ಬಲಿಪರು ಯಕ್ಷಗಾನದಲ್ಲಿದ್ದಾರೆಂದರೆ ಅಂದು ತುಂಬಿದ ಸಭೆ. ಕಂಚಿನ ಕಂಠದ `ಬಲಿಪ' ಖ್ಯಾತಿಯ ಬಲಿಪ ನಾರಾಯಣ ಭಾಗವತರ ಪ್ರಶಸ್ತಿಗೆ ಇತ್ತೀಚೆಗೆ ಕೇರಳ ಸಂಗೀತ ನಾಟಕ ಅಕಾಡೆಮಿ ತ್ರಿಶೂರು ಗುರುಪೂಜಾ ಪ್ರಶಸ್ತಿ ನೀಡಿ ಗೌರವಿಸಿದೆ. ಯಕ್ಷಗಾನದ ಉತ್ಕರ್ಷಕ್ಕಾಗಿ ಶ್ರಮಿಸಿದ ಉತ್ಕೃಷ್ಟ ಭಾಗವತ ಬಲಿಪರಿಗೆ ಈ ಪ್ರಶಸ್ತಿ ದೊರಕಿರುವುದು ನಿಜವಾಗಿಯೂ ಪ್ರಶಂಸಾರ್ಹ
ಕೃಪೆ : http://www.ekanasu.com
|
ಈ ಲೇಖನಕ್ಕೆ ಸ೦ಪೂರ್ಣ ವಿವರಗಳು ಲಭ್ಯವಾಗಿಲ್ಲ. ಆಸಕ್ತರು ಯಾವುದೇ ಮೌಲ್ಯಯುತ ಮಾಹಿತಿಗಳನ್ನು ಕಳುಹಿಸಬೇಕಾಗಿ ವಿನ೦ತಿ. |
|
|