ಪ್ರಸ೦ಗ ಕರ್ತೃ, ಸ೦ಪಾದಕ, ಭಾಗವತ ಕುಬಣೂರು ಶ್ರೀಧರ ರಾವ್
ಲೇಖಕರು : ನಾ.ಕಾರ೦ತ, ಪೆರಾಜೆ
ಗುರುವಾರ, ಜನವರಿ 1 , 2015
|
ಓರ್ವ ಯಕ್ಷಗಾನ ಭಾಗವತ ಪತ್ರಿಕೆಯ ಸಂಪಾದಕನಾಗುವುದು ಸಾಧ್ಯವೇ? ಕೀರ್ತಿಶೇಷ ಕಡತೋಕ ಮಂಜುನಾಥ ಭಾಗವತರು ಪತ್ರಿಕೆಯೊಂದನ್ನು ನಡೆಸಿದ್ದರು. ಕಟೀಲು ಮೇಳದ ಭಾಗವತ ಕುಬಣೂರು ಶ್ರೀಧರ ರಾವ್ (63) 'ಯಕ್ಷಪ್ರಭಾ' ಪತ್ರಿಕೆಯೊಂದನ್ನು ಪ್ರಕಾಶಿಸುತ್ತಿದ್ದಾರೆ. ಅದಕ್ಕೀಗ ವಿಂಶತಿಯ ಸಡಗರ. ಮೇಳದ ವೃತ್ತಿಯಲ್ಲಿದ್ದುಕೊಂಡೇ ಪತ್ರಿಕೆಯನ್ನೂ ನಡೆಸುತ್ತಿದ್ದಾರೆ.
|
ಕುಬಣೂರು ಓದಿದ್ದು, ಮೆಕಾನಿಕಲ್ ಇಂಜಿನಿಯರಿಂಗಿನಲ್ಲಿ ಡಿಪ್ಲೋಮ. ಯಕ್ಷಗಾನದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡರು. ಬದುಕಿಗೆ ಇಂಜಿನಿಯರಿಂಗ್ ಕಲಿಕೆ ಉಪಯೋಗಕ್ಕೆ ಬಾರದಿದ್ದರೂ, ಇಂಜಿನಿಯರಿಂಗ್ ಜಾಣ್ಮೆಯಿದೆಯಲ್ಲಾ, ಅದು ಯಕ್ಷಗಾನ ರಂಗದಲ್ಲಿ ಬಳಕೆಗೆ ಬಂತು. ಹಾಗಾಗಿಯೇ ನೋಡಿ, ಕುಬಣೂರು ಆಡಿಸುವ ಆಟಗಳಲ್ಲೆಲ್ಲಾ ಚೌಕಟ್ಟಿನೊಳಗೆ ತುಸು ವಿಭಿನ್ನತೆ. ಪ್ರತ್ಯೇಕತೆ.
ದಕ್ಷಾಧ್ವರ, ಹಿರಣ್ಯಕಶ್ಯಪು... ಮೊದಲಾದ ಸಂವಾದ ಪ್ರಧಾನ ಪ್ರಸಂಗಗಳ ಪದ್ಯಗಳು ಅರ್ಥಧಾರಿ, ವೇಷಧಾರಿಗೆ ಸ್ಫೂರ್ತಿ ನೀಡುವಂತಾದ್ದು. ಪದ್ಯಗಳಿಗೆ ಬಳಸುವ ಸಂಗೀತಾದಿ ರಾಗಗಳ ಮಿಳಿತದ ಸೊಗಸು ಅನುಭವಿಸಲು ಗೊತ್ತಿರಬೇಕಷ್ಟೇ.
ಶ್ರೀಧರ ರಾಯರು ಐ.ರಘುಮಾಸ್ತರರಿಂದ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದರು. ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನ, ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಬೇಕೂರು ಕೇಶವರಿಂದ ನಾಟ್ಯಾಭ್ಯಾಸ, ಟಿ.ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಿಂದ ಯಕ್ಷಗಾನ ಭಾಗವತಿಕೆ ಕಲಿಕೆ. ಭಾಗವತನಾದವನಿಗೆ ಯಕ್ಷಗಾನದ ಸರ್ವಾ೦ಗದ ಪರಿಚಯವಿದ್ದು ಬಿಟ್ಟರೆ ಈಜಲು ಅಂಜಬೇಕಾಗಿಲ್ಲ. ಯಾರದ್ದೇ ಹಂಗಿಗೆ ಒಳಗಾಗಬೇಕಾದ್ದಿಲ್ಲ.
ಕದ್ರಿಮೇಳ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿ ವ್ಯವಸಾಯ. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಶ್ರೀ ಕಟೀಲು ಮೇಳವೊಂದರಲ್ಲೇ ವೃತ್ತಿ. ಬದುಕಿನ ಏಳುಬೀಳುಗಳನ್ನು ಎದುರಿಸುತ್ತಾ ಒಟ್ಟು ಮೂವತ್ತಮೂರು ವರುಷಗಳ ಅನುಭವ.
ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ.. ಪ್ರಸಂಗಗಳ ರಚಯಿತರು. ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ 'ಯಕ್ಷವಿಜಯ ವಿಠಲ' ಕೃತಿಯ ಸಂಪಾದಕರು. ಯಕ್ಷಗಾನವನ್ನು ಅಕಾಡೆಮಿಕ್ ಮಟ್ಟದಲ್ಲಿ ವಿಚಾರ ಮಾಡುವ ಬೆರಳೆಣಿಕೆಯ ಕಲಾವಿದರಲ್ಲಿ ಕುಬಣೂರು ಮುಖ್ಯರಾಗುತ್ತಾರೆ.
|
ಕುಬಣೂರು ಶ್ರೀಧರ ರಾವ್ |
|
ಜನನ |
: |
1951 |
ಜನನ ಸ್ಥಳ |
: |
ಕುಬಣೂರು
ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ
|
ಕಲಾಸೇವೆ |
: |
ಕಳೆದ 24 ವರುಷಗಳಿ೦ದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದು, 33 ವರ್ಷಗಳಿ೦ದ ಕದ್ರಿಮೇಳ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿ ಕಲಾಸೇವೆ |
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
|
|
|
ಚೆಂಡೆವಾನದಲ್ಲಿ ಜುಗಲ್ಬಂದಿ, ದೇವೇಂದ್ರನ ಒಡ್ಡೋಲಗದಲ್ಲಿ ನೃತ್ಯರೂಪಕ.. ಮೊದಲಾದ ಪರಿಷ್ಕಾರಗಳು ಒಂದು ಕಾಲಘಟ್ಟದಲ್ಲಿ ಜನಸ್ವೀಕೃತಿ ಪಡೆದುದನ್ನು ಜ್ಞಾಪಿಸಿಕೊಳ್ಳುತ್ತಾರೆ. ಬಯಲಾಟ, ತಾಳಮದ್ದಳೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ, ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ.
ಹಲವಾರು ಸಂಮಾನ, ಪ್ರಶಸ್ತಿಯಿಂದ ಪುರಸ್ಕೃತರು. ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ ನೀಡುವ 'ಬೊಳ್ಳಿಂಬಳ ಪ್ರಶಸ್ತಿ'ಯು ಕುಬಣೂರು ಶ್ರೀಧರ ರಾಯರನ್ನು ಅರಸಿ ಬಂದಿದೆ.
ಕೃಪೆ :
http://yakshamatu.blogspot.in
|
|
|