ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಡಿಸೆ೦ಬರ್ 14 , 2014

ಹಿರಿಯಡ್ಕ ಗೋಪಾಲರಾಯರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿ ವರ್ಷ 44 ಸಂದಿದೆ. 95 ವರ್ಷದ ಈ ಹಿರಿಯರು ಉಡುಪಿ ಪರಿಸರದಲ್ಲಿ ಯಕ್ಷಗಾನ ಹಾಗಲ್ಲದೆ ಸಾಹಿತ್ಯದ ಕುರಿತು ವಿಚಾರ ಸಂಕಿರಣ ಸಭೆ ಸಮಾರಂಭದಲ್ಲಿ ತಪ್ಪದೆ ಕಂಡು ಬರುವ ವ್ಯಕ್ತಿ. ದಶಕಗಳಿಂದ ಕಾಣುತ್ತಿರುವ ನಮ್ಮ ಮುಂದಿರುವ ಒಂದು ಬಿಳಿ ತಲೆ. ಯಕ್ಷಗಾನ ಲೋಕದ ಜೀವಂತ ದಂತ ಕಲೆಯಾಗಿರುವ ಇವರು ಸಂಘ ಸಂಸ್ಥೆಯವರು ಆಸಕ್ತರು ಕರೆದರೆ ಹೋಗಿ ತಮ್ಮ ಅನುಭವ ಪೂರ್ಣ ಮಾಹಿತಿ ತರಬೇತಿ ನೀಡುತ್ತಾರೆ.

ಭಾಗವತ ಕುಂಜಾಲು ಶೇಷಗಿರಿ ಕಿಣಿ, ಹಾರಾಡಿ ರಾಮಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಶಿರಿಯಾರ ಮಂಜುನಾಕ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೊಳ್ಕೆಬೈಲು ಶೀನ ನಾಯ್ಕ ಮುಂತಾದವರನ್ನು ಒಳಗೊಂಡ ಬಡಗುತಿಟ್ಟು ಯಕ್ಷಗಾನದ ಸುವರ್ಣಯುಗದ ಓರ್ವ ಪ್ರತಿನಿಧಿಯಾಗಿ ನಮ್ಮೊಂದಿಗಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಗೋಪಾಲರಾಯರು ಒಬ್ಬರು. ಮದ್ದಳೆ ವಾದನದ ಗಂಟು ಉರುಳಿಕೆ, ಏರುಮದ್ದಳೆ, ಅಲ್ಲದೆ ಆಧುನಿಕ ಶಿಕ್ಷಣ ಪದ್ಧತಿಯು ಬಡಗುತಿಟ್ಟು ಯಕ್ಷಗಾನಕ್ಕೆ ರಾಯರ ಮೂರು ಮುಖ್ಯ ಕೊಡುಗೆಗಳು.

ಬಾಲ್ಯ, ಶಿಕ್ಷಣ, ತ೦ದೆಯವರ ಮಾರ್ಗದರ್ಶನ

ಹಿರಿಯಡ್ಕ ಸಮೀಪ ಓಂತಿಬೆಟ್ಟಿನಲ್ಲಿ ಸರಳ ಜೀವನ ನಡೆಸುತ್ತಿರುವ ಈ ಮದ್ದಳೆಯ ಮಾಂತ್ರಿಕರು 1919ರಲ್ಲಿ ಹಿರಿಯಡ್ಕ ಶೇಷಗಿರಿರಾವ್ ಮತ್ತು ಲಕ್ಷ್ಮೀ ದಂಪತಿಯ ಪುತ್ರನಾಗಿ ಜನಿಸಿದರು. ಉಡುಪಿಯ ಅನಂತೇಶ್ವರ ಶಾಲೆಯಲ್ಲಿ ಆರನೇ ತರಗತಿ ಮುಗಿಸಿ ಜೀವನ ಶಿಕ್ಷಣಕ್ಕೆ ಕಾಲಿಟ್ಟರು.

ತಂದೆ ಆಯುರ್ವೇದ ವೈದ್ಯರಾಗಿದ್ದು ಮದ್ದಳೆವಾದನವನ್ನು ತಿಳಿದಿದ್ದರಿಂದ ಎರಡನ್ನು ಮಗನಿಗೆ ಧಾರೆಯೆರೆದರು. ಯಕ್ಷಗಾನದ ಅಭದ್ರತೆಯ ನಡುವೆ ವೈದ್ಯವೃತ್ತಿ ಅವರಿಗೆ ಭದ್ರತೆ ನೀಡಿತು. ಮದ್ದಳೆವಾದನ ಮತ್ತು ಕುಣಿತವನ್ನು ಹಿರಿಯಡ್ಕದ ಗುರಿಕಾರ ನಾಗಪ್ಪ ಕಾಮತರಿಂದ ಪಡೆದ ಇವರು 1934ರಲ್ಲಿ ವಿಠಲ ಹೆಗ್ಡೆಯವರ ನೇತೃತ್ವದ ಹಿರಿಯಡ್ಕ ಮೇಳ ಸೇರಿದರು. ಮೇಳದ ಹೊಣೆಹೊತ್ತ ಶೇಷಗಿರಿ ರಾಯರು ಮಗನನ್ನು ವೇಷಧಾರಿಯಾಗಿ ಆ ಮೇಳಕ್ಕೆ ಸೇರಿಸಿದರು.

ಮಾತಿಗೆ ಬೇಕಾದ ಸಾಹಿತ್ಯದಲ್ಲಿ ಹಿಂದೆ ಬಿದ್ದ ರಾಯರನ್ನು ಒತ್ತು ಮದ್ದಳೆಗೆ ಸೂಚಿಸಿದರು. ಒತ್ತು ಮದ್ದಳೆಗಾರ ಚಂಡೆಯನ್ನು ಬಾರಿಸಬೇಕಾದದ್ದು ಅಂದಿನ ಮೇಳಗಳಲ್ಲಿ ರೂಢಿಯಾಗಿತ್ತು. ಹೀಗೆ ಎರಡು ವರ್ಷ ಹಿರಿಯಡ್ಕ ಮೇಳದಲ್ಲಿ ಸೇವೆ ಸಲ್ಲಿಸಿದರು. ನಂತರ ಅವರಿಗೆ ಮುಖ್ಯ ಮದ್ದಳೆಗಾರರಾಗುವ ಯೋಗ ಲಭಿಸಿತು

ಮ೦ದಾರ್ತಿ ಮೇಳದಲ್ಲಿ ದೀರ್ಘಕಾಲ ಕಲಾಸೇವೆ

ಪೆರ್ಡೂರು ಮೇಳದ ಯಜಮಾನರಾಗಿದ್ದ ಹಿರಿಯ ವೇಷಧಾರಿ ಗಣಪತಿ ಪ್ರಭುಗಳು ಮೊದಲಾಗಿ ಇವರನ್ನು ಮುಖ್ಯ ಮದ್ದಳೆಗಾರರಾಗಿ ಸೇರಿಸಿಕೊಂಡರು. ಕೋಟ ಶ್ರೀನಿವಾಸ ನಾಯ್ಕರು ಅಲ್ಲಿನ ಭಾಗವತರು. ನಂತರ ಮಾರ್ವಿ ಶ್ರೀನಿವಾಸ ಉಪ್ಪೂರರಿಗೆ ಪ್ರದಾನ ಮದ್ದಳೆಗಾರರಾಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ನಂತರ ಮ೦ದಾರ್ತಿ ಮೇಳಕ್ಕೆ ಸೇರಿದ ಗೋಪಾಲರಾಯರು ನಿರಂತರ 27 ವರ್ಷ ತಿರುಗಾಟ ಮಾಡಿ ಸ್ವಯಂ ನಿವೃತ್ತಿ ಪಡೆದರು.

ಮ೦ದಾರ್ತಿ ಕ್ಷೇತ್ರಕ್ಕೂ ಗೋಪಾಲ ರಾಯರಿಗೂ ಅವಿನಾಭಾವ ಸಂಬಂಧ. ಪ್ರತೀ ವರ್ಷ ಮ೦ದಾರ್ತಿ ಮೇಳದ ದೇವರ ಸೇವೆ ಆಟಕ್ಕೆ ಹಾಜರಿರುವ ಹಿರಿಯ ತಲೆಮಾರಿನ ಏಕಮಾತ್ರ ವ್ಯಕ್ತಿ ಇವರು. ಶ್ರೀ ಕ್ಷೇತ್ರದ ಹಾರಾಡಿ ರಾಮಗಾಣಿಗ ಪ್ರಶಸ್ತಿ ಬಹುಬೇಗನೆ ಇವರಿಗೆ ಲಭಿಸಿತ್ತು. ಮ೦ದಾರ್ತಿ ಮೇಳದಲ್ಲಿ ದೀರ್ಘಕಾಲ ಬಡಗುತಿಟ್ಟಿನ ಮಹಾನ್ ಕಲಾವಿದ ಶೇಷಗಿರಿ ಭಾಗವತರಿಗೆ ಸಾಥಿಯಾಗಿದ್ದರು.

ಹಿರಿಯಡ್ಕ ಗೋಪಾಲ ರಾವ್
ಜನನ : 1919
ಜನನ ಸ್ಥಳ : ಹಿರಿಯಡ್ಕ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಅಪ್ರತಿಮ ಚೆ೦ಡೆವಾದಕರಾಗಿ ಮಂದಾರ್ತಿ, ಮಾರಣಕಟ್ಟೆ ಸಾಲಿಗ್ರಾಮ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರಗಳು :
  • ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ
  • ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  • ರಾಜ್ಯ ಸರಕಾರದ ಜಾನಪದಶ್ರೀ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ
  • ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್ ಪ್ರಶಸ್ತಿ
  • ವಾದಿರಾಜ್ ಹೆಬ್ಬಾರ್ ಪ್ರಶಸ್ತಿ
  • ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ
  • ಮ೦ದಾರ್ತಿ ಕ್ಷೇತ್ರದ ಹಾರಾಡಿ ರಾಮಗಾಣಿಗ ಪ್ರಶಸ್ತಿಗಳು
  • ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
  • 2009ರ ದೇರಾಜೆ ಪ್ರಶಸ್ತಿ
  • ಗೋಪಾಲರಾಯರ ಅನುಭವಗಳನ್ನೊಳಗೊಂಡ ಮಹಾನ್ ಗ್ರಂಥ `ಮದ್ದಳೆಯ ಮಾಯಾಲೋಕ` ಕೆ. ಎಂ. ರಾಘವ ನಂಬಿಯಾರರಿ೦ದ ಪ್ರಕಟ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನಗಳು
ಹಾರಾಡಿ ರಾಮಗಾಣಿಗರ ಎರಡನೇ ವೇಷ ಕುಷ್ಟ ಗಾಣಿಗರ ಪುರುಷವೇಷ ಕೊಳ್ಕೆಬೈಲು ಶೀನ ನಾಕರ ಸ್ತ್ರೀವೇಷ ಜಾನುವಾರುಕಟ್ಟೆ ಭಾಗವತರು. ಗೋರ್ಪಾಡಿ ವಿಠಲ ಪಾಟೀಲರು, ಸುರಗಿಕಟ್ಟೆ ಬಸವ ಗಾಣಿಗರು, ಶಿರಯಾರ ಮಂಜುನಾಕರು, ಹಳ್ಳಾಡಿ ಮಂಜಯ್ಯ ಶೆಟ್ಟಿ, ಬೈಕಾಡಿ ಗೋಪಾಲ ಮಡಿವಾಳ, ಜಂಬೂರು ರಾಮಚಂದ್ರಯ್ಯ, ಹಾರಾಡಿ ನಾರಾಯಣ ಗಾಣಿಗ, ಮಹಾಬಲ ಗಾಣಿಗ ಮುಂತಾದ ಘಟಾನುಘಟಿಗಳಿಂದ ತುಂಬಿದ ಮ೦ದಾರ್ತಿ ಮೇಳದ ಆ ಸಮಯವನ್ನು ಹಿರಿಯರು ಇಂದಿಗೂ ಮೆಲುಕು ಹಾಕುತ್ತಾರೆ, ನೆನಪಿಸುತ್ತಾರೆ.

ಶೇಷಗಿರಿ ಭಾಗವತರ ಸ್ಮರಣೆ

``ಮೈಕ್ ಇಲ್ಲದೆ ಶೇಷಗಿರಿ ಭಾಗವತರ ಸ್ವರ ರಾತ್ರಿ ವೇಳೆ ಮೈಲುಗಟ್ಟಲೆ ದೂರ ಕೇಳಿಸುತ್ತದೆ. ತಾಳ ಲಯಗಳ ಮೇಲಿನ ಅವರ ಹಿಡಿತ ಅದ್ಭುತ ಅವರ ಪದಕ್ಕೆ ನುಡಿಸುವಾಗ ಕೈ ತನ್ನಿಂದ ತಾನೆ ಓಡುತ್ತದೆ. ಅವರು ಅನುಭವಿಸಿ ಹಾಡುವ ಭಾಗವತ. ನನಗೆ ಪ್ರತೀತಿ ಬಂದುದಿದ್ದರೆ ಶೇಷಗಿರಿ ಭಾಗವತರಿಂದ`` ಎಂದು ವಿನಮ್ರವಾಗಿ ನುಡಿಯುವ ರಾಯರು ಶೇಷಗಿರಿ ಅವರಂತಹ ಭಾಗವತರನ್ನು ನಾನು ಇದುವರೆಗೆ ಕಂಡಿಲ್ಲ ಎನ್ನುತ್ತಾರೆ. ಮ೦ದಾರ್ತಿ, ಮಾರಣಕಟ್ಟೆ, ಸೌಕೂರು, ಅಮೃತೇಶ್ವರಿ ಈ ನಾಲ್ಕು ಮೇಳಗಳಲ್ಲಿ ವಾದನ ಕ್ರಮಗಳು ಒಂದೇ ರೀತಿ ಇದ್ದು ಚೆ೦ಡೆಯನ್ನು ಅನಗತ್ಯವಾಗಿ ಬಳಸುವ ಕ್ರಮವಿರಲಿಲ್ಲ ಎಂದು ನೆನಪಿಸುತ್ತಾರೆ.

ಹಾರ್ಮೋನಿಯ೦ ಬದಲಿಗೆ ಬುರುಡೆ ಅಥವಾ ಪುಂಗಿ ಶ್ರುತಿ ಇದ್ದು ಶ್ರುತಿ ಬದಲಿಸುವಾಗ ಹೊಸ ವಾತಾವರಣ ಸೃಷ್ಟಿಯಾಗುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಎಳೆಯುತ್ತಿತ್ತು. ಯಕ್ಷಗಾನಕ್ಕೆ ಶ್ರುತಿಯೇ ಆಧಾರ ಎನ್ನುವುದು ರಾಯಯ ವಾದ. ಶ್ರುತಿ ಇಲ್ಲದ ಮಾತುಗಾರಿಕೆ ಹಿಮ್ಮೇಳ ಯಕ್ಷಗಾನವನ್ನು ನೀರಸವಾಗಿಸುತ್ತದೆ ಎಂಬುದು ರಾಯರ ಅಂಬೋಣ. ರಾಮಗಾಣಿಗರು ಚೌಕಿಯಿಂದ ಹೊರಟಾಗ ಅವರ ಗೆಜ್ಜೆಯ ಸ್ವರದಿಂದ ಅವರ ಬರುವಿಕೆ ತಿಳಿಯುತ್ತಿತ್ತು. ರಾಮಗಾಣಿಗರ ಹೆಜ್ಜೆಗೆ ಇವರ ಭಾರವಾದ ನುಡಿತ ಅಪೇಕ್ಷಣೀಯವಾಗಿತ್ತು ಎಂಬುವುದು ಹಿರಿಯ ಅಂಬೋಣ.

ಜೋಡಾಟದ ಸ್ಪರ್ಧೆಗಳಲ್ಲಿ ನೂತನ ಪ್ರಯೋಗ, ಏರು ಮದ್ದಳೆಯ ಅವಿಷ್ಕಾರ

ಏರು ಮದ್ದಳೆಯ ಅವಿಷ್ಕಾರ ಬಡಗುತಿಟ್ಟಿಗೆ ಗೋಪಾಲರಾಯರ ಮಹತ್ವದ ಕೊಡುಗೆ. ಸಾವಿರಗಟ್ಟಲೆ ಜನ ಸೇರುತ್ತಿದ್ದ ಜೋಡಾಟಗಳು ಇದಕ್ಕೆ ಕಾರಣ. ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟೀಷರು ತಮ್ಮ ವಾರ್ ಫಂಡ್ ಗಾಗಿ ಜೋಡಾಟ ನೆಡೆಸಿ ಹಣ ಕಟ್ಟುವಂತೆ ಮಾಗಣೆಯವರಿಗೆ ಆದೇಶ ನೀಡಿದ್ದರಿಂದ ತಿಂಗಳಿಗೆ ಒಂದೆರಡು ಜೋಡಾಟ ಅನಿವಾರ್ಯವಾಯಿತು. ಸಮಬಲದ ಮೇಳಗಳ ನಡುವೆ ಸ್ಪರ್ಧೆ ಏರ್ಪಟ್ಟಾಗ ಹೊಸ ಶೋಧಗಳು ನಡೆದವು.

ಹಿಮ್ಮೇಳವನ್ನು ಬಲಗೊಳಿಸಲು ಸ್ವರ ಏರಿಸಿ ಆ ಮೂಲಕ ಆಟದ ಕಳೆ ಏರಿಸುವ ತಂತ್ರವಾಗಿ ಏರು ಮದ್ದಳೆ ಬಂತು. ಗಿಡ್ಡವಾದ ಅದರ ಕಳಸಿಗೆ ಶ್ರುತಿ ಏರಿಸಿದರೂ ಸ್ವರ ಸಾಕಷ್ಟು ಏರದ ಹಿಂದಿನ ಮದ್ದಳೆಗೆ ಬದಲಿಯಾಗಿ ಬಂದು ಮುಂದೆ ಇದು ಮಾಮೂಲಾಯಿತು. ಇಂದಿಗೂ ಬೆಳಗಿನ ಜಾವದ ಬಡಗುತಿಟ್ಟಿನ ಆಟಗಳಲ್ಲಿ ಏರು ಮದ್ದಳೆ ಅನಿವಾರ್ಯವಾಯಿತು. ನಿಜವಾದ ಯಕ್ಷಗಾನದ ಪ್ರೇಕ್ಷಕರು ಏರುಮದ್ದಳೆಯ ಸ್ವರಕ್ಕಾಗಿ ಕಾಯುವುದು ಇಂದಿಗೂ ಗಮನಿಸಬಹುದಾಗಿದೆ.

ತಬಲವಾದನದ ಅನುಭವವೇ ರಾಯರ ಏರುಮದ್ದಳೆಗೆ ಪ್ರೇರಣೆಯಂತೆ. ಮದ್ದಳೆಯ ಗಂಟು ಉರುಳಿಕೆಯನ್ನು ಜನಪ್ರಿಯತೆಗೊಳಿಸಿದ ಕೀರ್ತಿ ರಾಯರಿಗಿದೆ. ಸಾಮಾನ್ಯ ಉರುಳಿಕೆ ಮಾತ್ರ ಇದ್ದ ಕಾಲದಲ್ಲಿ ಪೆರ್ಡೂರು ವೆಂಕಟ ಕಾಮತರಿಂದ ಗಂಟು ಉರುಳಿಕೆ ಕಲಿತ ರಾಯರು ತಮ್ಮ ಏರು ಮದ್ದಳೆ ವಾದನದಲ್ಲಿ ಅದನ್ನು ಸಮರ್ಪಕವಾಗಿ ಬಳಸಿದ್ದಾರೆ. ಇಂದಿನ ವೃದ್ದಾಪ್ಯದಲ್ಲೂ ಅವರು ವಾದನದಲ್ಲಿ ಇತರರನ್ನು ಮೀರಿಸಬಲ್ಲರು. ವಾದನದ ಸ್ಪಷ್ಟತೆ ಇವರ ಬಹುದೊಡ್ಡ ಗುಣ.

ಡಾ| ಶಿವರಾಮ ಕಾರಂತರ ಒಡನಾಟ, ದೇಶ ವಿದೇಶಗಳಲ್ಲಿ ತಿರುಗಾಟ

1967ರ ಮೇ ತಿಂಗಳಲ್ಲಿ ಮ೦ದಾರ್ತಿ ಮೇಳಕ್ಕೆ ವಿದಾಯ ಹಾಡಿದ ರಾಯರು ವೈದ್ಯ ವೃತ್ತಿ ನಡೆಸತೊಡಗಿದರು. ಡಾ| ಶಿವರಾಮ ಕಾರಂತರು ತಮ್ಮೆಲ್ಲ ಚಟುವಟಿಕೆಗಳಲ್ಲಿ ರಾಯರನ್ನು ಬಳಸಿಕೊಂಡರು. 1961ರಲ್ಲಿ ರಾಗಗಳ ದಾಖಲಾತಿ ಅಲ್ಲದೆ ನೃತ್ಯ ನಾಟಕಗಳಲ್ಲೂ ರಾಯರು ಇದ್ದರು. 1967ರಲ್ಲಿ ಬ್ರಹ್ಮಾವರದಲ್ಲಿ ಆರಂಭಿಸಿದ ಯಕ್ಷಗಾನ ಕೇಂದ್ರಕ್ಕೆ ಗುರುವಾಗಿ ನೇಮಕವಾದರು. 1976ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮಕೃಷ್ಣಯ್ಯ, ವೀರಭದ್ರ ನಾಯಕರೊಂದಿಗೆ ಗುರುವಾಗಿ ಸೇರಿಕೊಂಡ ಇವರು ಈರ್ವರೊಂದಿಗೆ ಸೇರಿಕೊಂಡು ಮಾಡಿದ ಪಾಠಪಟ್ಟಿ ಒಂದು ಅಧೀಕೃತ ಪಠ್ಯವಾಗಿ ಮೂಡಿ ಬಂದಿದೆ. ಕೇಂದ್ರದಲ್ಲಿ ಏಳು ವರ್ಷಗಳ ಕಾಲ ಗುರುವಾಗಿ ಸೇವೆ ಸಲ್ಲಿಸಿದ ರಾಯರು ಕಾರಂತರ ಯಕ್ಷರಂಗದ ಸದಸ್ಯನಾಗಿ ರಾಜ್ಯದ ಹೊರಗೂ ತಿರುಗಾಟ ನಡೆಸಿದರು.

ಡಾ| ಪೀಟರ್ ಜೆ.ಕ್ಲಾಸ್ ಹಾಗೂ ಮಾರ್ತಾ ಆಶ್ಟನ್ ಇವರಿಬ್ಬರು ಗೋಪಾಲರಾಯರ ಪ್ರಸಿದ್ಧ ವಿದೇಶಿ ಶಿಷ್ಯರು. ಒಬ್ಬರು ಮದ್ದಳೆವಾದನವನ್ನು ಇನ್ನೊಬ್ಬರು ವೇಷಗಾರಿಕೆಯ ಸಮಗ್ರ ಅಧ್ಯಯನ ನಡೆಸಿ ಪಿ.ಎಚ್.ಡಿ ಕೂಡ ಪಡೆದರು. 1976ರಲ್ಲಿ ಮಾರ್ತ ಅವರೊಡನೆ ಅಮೇರಿಕಾದ ಹತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. 1979ರಲ್ಲಿ ಬಿ.ವಿ. ಆಚಾರ್ಯರೊಂದಿಗೆ ಅಮೇರಿಕಾ ಜರ್ಮನಿ ಪ್ರವಾಸಗಳಲ್ಲಿ ಗೋಪಾಲರಾಯರು ಭಾಗವಹಿಸಿದ್ದರು. ಬಿ.ವಿ.ಕಾರಂತರ ನೃತ್ಯ ನಾಟಕಕ್ಕೂ ಸಂಗೀತ ನೀಡಿದ ರಾಯರ ಮದ್ದಳೆ ವಾದನವನ್ನು ಜಪಾನಿನ ರಂಗಾಸಕ್ತರು ದಾಖಲಿಸಿಕೊಂಡಿದ್ದಾರೆ.

ಹಲವಾರು ಶಿಷ್ಯ೦ದರಿಗೆ ಮಾರ್ಗದರ್ಶನ

ಅನೇಕ ಸಂಘ ಸಂಸ್ಥೆಗಳ ಕಲಾವಿದರಿಗೆ ಯಕ್ಷಗಾನವನ್ನು ಕಲಿಸಿ ಈ ಕಲೆಯನ್ನು ಮುಂದಿನ ತಲೆ ಮಾರಿಗೆ ದಾಟಿಸಿದ ಕೀರ್ತಿ ರಾಯರಿಗಿದೆ ಅವುಗಳಲ್ಲಿ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಕಲಾ ಸಂಸ್ಥೆ ಮೊದಲಿನದ್ದಾಗಿದೆ. ಅನೇಕ ಶಿಷ್ಯರನ್ನು ತಯಾರುಗೊಳಿಸಿದ ರಾಯರ ಅನೇಕ ಶಿಷ್ಯರು ಸಮಕಾಲೀನ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ.

ಅವರ ಪಟ್ಟದ ಶಿಷ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಸಂಜೀವ ಸುವರ್ಣರು ಉಡುಪಿ ಯಕ್ಷಗಾನ ಕೇಂದ್ರದ ಇಂದಿನ ಪ್ರಾಂಶುಪಾಲರು ಮಾತ್ರವಲ್ಲದೆ ಯಕ್ಷಗಾನದ ದಶಾವತಾರಿ, ಗೋಪಾಲ ರಾಯರ ಏಕಮಾತ್ರ ಪುತ್ರ ರಾಮ ಮೂರ್ತಿ ಅವರನ್ನು ಓರ್ವ ಯಕ್ಷಗಾನ ಕಲಾವಿದನನ್ನಾಗಿ ಬೆಳೆಸಿದ್ದಾರೆ. ಅವರ ನಿಕಟ ಸಂಪರ್ಕದಲ್ಲಿರುವ ಕಾಜಾರಗುತ್ತು ಸಂಘವು ಅವರ 90ರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಉಡುಪಿ ಶಿರಿಬೀಡಿನ ಕಲಾಕ್ಷೇತ್ರ ಸಿಂಡಿಕೇಟ್ ಬ್ಯಾಂಕ್ ರಿಕ್ರಿಯೇಶನ್ ಕ್ಲಬ್ ಪೆರ್ಡೂರು ಪ್ರೌಢಶಾಲಾ ಅಧ್ಯಾಪಕರು, ಕಲಾಮಂಡಳಿ ಕಬ್ಯಾಡಿ ಇವುಗಳು ಉಲ್ಲೇಖಾರ್ಹವಾಗಿದೆ.

ಪ್ರಶಸ್ತಿಗಳ ಪ್ರವಾಹ

ಓರ್ವ ಕಲಾವಿದನಿಗೆ ಸಲ್ಲಬಹುದಾದ ಸಾಕಷ್ಟು ದೊಡ್ಡ ಪ್ರಶಸ್ತಿ ಗೋಪಾಲರಾಯರಿಗೆ ಸಂದಿದೆ. ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರಕಾರದ ಜಾನಪದಶ್ರೀ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್, ವಾದಿರಾಜ್ ಹೆಬ್ಬಾರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಮ೦ದಾರ್ತಿ ಕ್ಷೇತ್ರದ ಹಾರಾಡಿ ರಾಮಗಾಣಿಗ ಪ್ರಶಸ್ತಿಗಳು ಪ್ರಮುಖವಾದವುಗಳು. ಗೋಪಾಲರಾಯರೊಂದಿಗೆ ಸಂವಾದ ನಡೆಸಿ ವಿದ್ವಾಂಸರಾದ ಕೆ. ಎಂ. ರಾಘವ ನಂಬಿಯಾರರು ಬರೆದ ಮದ್ದಳೆಯ ಮಾಯಾಲೋಕ ಎಂಬ ಗ್ರಂಥ ಗೋಪಾಲರಾಯರ ಅನುಭವಗಳನ್ನೊಳಗೊಂಡ ಮಹಾನ್ ಗ್ರಂಥವಾಗಿ ಪ್ರಕಟಗೊಂಡಿದೆ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ