ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಮೂಡಣದ ಪ್ರೇರಕ ಶಕ್ತಿ ಮೂಡಂಬೈಲು

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ಆಗಸ್ಟ್ 29 , 2014

ಯಕ್ಷಗಾನದಂತಹ ಒಂದು ಪಾರಂಪರಿಕ ಕಲೆ ಬೆಳೆದು ಬರಬೇಕೆಂದರೆ ಅದಕ್ಕೆ ಪರಂಪರೆಯೇ ತೆರೆದು ನಿಲ್ಲಿಸಿದ ಒಂದು ಹಾದಿ ಮುಖ್ಯವಾಗುತ್ತದೆ. ಎಳೆಯ ಕರು ಭೂಮಿಗೆ ತಾಯಿ ಒಡಲಿಂದ ಬಿದ್ದಾಗ ಅದರ ಮುಂದಿನ ಪ್ರವೃತ್ತಿಗೆ ಯಾವುದೇ ಶಾಸ್ತ್ರ ಸಮ್ಮತವಾದ ಜೀವನ ಕ್ರಮ ಸಿದ್ಧವಾಗಿರುವುದಿಲ್ಲ. ತಾಯಿ ಹಸು ಬಿದ್ದ ಕರುವನ್ನು ಸ್ವಪ್ರಚೋದನೆಯಿಂದಲೆ ತಡವುತ್ತದೆ, ಮತ್ತು ಆಮುಖೇನ ಆ ಕಂದ ಕರುವಿಗೆ ಅತ್ಯಂತ ಪ್ರಾಥಮಿಕವಾಗಿ ಸಿಗಬೇಕಾದ ಆರೈಕೆಯ ಅವಶ್ಯಕತೆಯನ್ನು ಬಾಹ್ಯ ಪ್ರಚೋದನೆ ಇಲ್ಲದೇನೆ ಅದು ನೀಡುತ್ತದೆ. ಕಂದ ಕರುವು ತೀರಾ ಅಪರಿಚಿತ ಕ್ಷೇತ್ರಕ್ಕೆ ಬಂದ ಒಡನೆ ಕರುವು ಎದ್ದು ನಿಲ್ಲುವುದಕ್ಕೆಪ್ರಯತ್ನಿಸಿ ಎದ್ದು ನಿಂತೊಡನೆ ತಾಯಿ ಕೆಚ್ಚಲನ್ನು ಅರಸಿ ಬಾಯಿ ಹಾಕಿ ಬಿಡುತ್ತದೆ.

ಈತೆರನ ಅಲಿಖಿತ ನಿಯಮದಂತೆ ಯಕ್ಷಗಾನದಲ್ಲಿ ವರ್ತಮಾನದ ಹಾದಿ ತೆರೆದುಕೊಳ್ಳುವುದು ಭೂತಕಾಲದ ಅನುಭವದಿಂದ. ಇದಕ್ಕೆ ಶಾಸ್ತ್ರೀಯ ಕ್ರಮ ಇಲ್ಲದೇ ಇದ್ದರೂ ಪರಂಪರೆಯ ತಳಹದಿಯಲ್ಲಿ ನಿರ್ಮಿಸಿದ ಒಂದು ಸ್ತಂಭಗಳ ಚೌಕಟ್ಟು ಇದೆ. ಆ ನಡುವೆ ಯಕ್ಷಗಾನದ ಒಂದೊಂದು ಕಲ್ಲುಗಳು ಇಡಲ್ಪಟ್ಟು ಮುಂದೆ ಇಡಬಹುದಾದಂತ ಕಲ್ಲುಗಳಿಗೆ ಒಂದು ನಿರ್ದಿಷ್ಟವಾದ ಜಾಗ ನಿಗದಿಯಾಗಿರುತ್ತದೆ. ಇದರ ಅರಿವಾಗಬೇಕಾದರೆ ಸ್ಥಿರವಾಗಿ ನಿಂತಕಲ್ಲು ತನ್ನ ಆಯವನ್ನು ಕಂಡುಕೊಳ್ಳಬೇಕು. ಈ ಆಯವನ್ನು ಅರಿತುಕೊಳ್ಳುವುದಕ್ಕೆ ಇಂದು ನಮ್ಮ ಮುಂದಿರುವುದು ಹಿಂದಿನವರು ನಮ್ಮ ಮುಂದೆ ಬಿಟ್ಟು ಹೋದ ಹೆಜ್ಜೆಯ ಪಡಿಯಚ್ಚುಗಳು ಮಾತ್ರ. ಆ ಹೆಜ್ಜೆಗಳನ್ನು ಗುರುತಿಸಿ ಮುಂದಿನ ಆಯಾಮವನ್ನು ಪಡೆದುಕೊಳ್ಳಬೇಕಾಗುತ್ತದೆ.

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಇಂದು ಯಕ್ಷಗಾನ ಬಯಲಾಟವನ್ನೋ ತಾಳಮದ್ದಲೆಯನ್ನೋ ನಮ್ಮ ಕ್ರಿಯಾ ಶಕ್ತಿಗೋ ಇಚ್ಛಾಶಕ್ತಿಗೋ ಅನುಸಾರವಾಗಿ ಮಾಡಿ ಆ ಮೂಲಕ ತಮ್ಮ ಮಟ್ಟಿಗಿನ ಕಲಾಸೇವೆಯನ್ನು ನಾವು ಮಾಡಿ ತೃಪ್ತಿಯನ್ನು ಕಾಣಬಹುದು. ಆದರೂ ಇಲ್ಲೆಲ್ಲೋ ಯಾವುದೋ ತಂತು ಕಳೆದು ಹೋದ ಅನುಭವ ಆಗುವುದಲ್ಲವೇ? ಮುತ್ತಿನ ಮಣಿಯ ಮಾಲೆಯನ್ನು ಬೆಸೆವ ದಾರ ಕಳಚಿ ಕಳೆದು ಹೋದಮೇಲೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮುತ್ತುಗಳ ಹಾಗೆ ಎಲ್ಲವೂ ಇದೆ. ಆದರೆ ಎಲ್ಲೋ ಯಾವುದೋ ಕಳೆದು ಹೋಗಿದೆ. ಹಲವು ಸಲ ಕಳೆದು ಹೋದದ್ದು ಏನು ಎಂಬ ಅರಿವೇ ನಮಗೆ ಸಾಧ್ಯವಾಗುವುದಿಲ್ಲ.

ಯಕ್ಷಗಾನ ಅದು ಬಯಲಾಟವಾಗಲೀ ತಾಳಮದ್ದಲೆಯಾಗಲೀ ಇಂದು ಕಳೆದ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ ಆ ನೆನಪಿನ ಸುಳಿಯಿಂದ ಹೊರಬರಲಾರದೇ ಅಂದಿನ ಆಕಾಲಕ್ಕೂ ಈ ಕಾಲದ ಯಕ್ಷಗಾನಕ್ಕೂ ಹೋಲಿಕೆ ಮಾಡುವ ಸ್ಥಿತಿ ಇಂದು. ಅನುಭದಿಂದ ಕಲಿಯುವಂತಹ ಪರಿಸ್ಥಿತಿ ಕಾಣದೇ ಇದ್ದರೂ ಅವುಗಳನ್ನು ನೆನಪಿನ ಬುತ್ತಿಯಲ್ಲಿ ಕಟ್ಟಿಡುವುದನ್ನು ಬಿಡುವುದಿಲ್ಲ. ಇಂದು ಆ ಅನುಭವಗಳು ಬೇಕೆಂದರೂ ಲಭ್ಯವಿಲ್ಲ. ಬರೀ ನೆನಪಿನ ಬುತ್ತಿಯಲ್ಲಿ ಕಟ್ಟಿಟ್ಟ ಆ ಮುತ್ತುಗಳು ಸೂಕ್ತ ದಾಖಲೀಕರಣವಿಲ್ಲದೆ ಚದುರಿದ ಚಿತ್ರಗಳಂತೆ, ಆಕಾಶದ ನಕ್ಷತ್ರಗಳಂತೆ ಕೈಗೆ ಸಿಗುವುದಿಲ್ಲ. ಎಲ್ಲೋ ಇತ್ತು, ಅದು ಹೀಗಿರಬಹುದೇ ಎಂಬ ಊಹನೆ ಮಾತ್ರ.

ಸರಿದು ಹೋದ ಅನುಭವಗಳು ಭವಿಷ್ಯತ್ತನ್ನು ರೂಪಿಸುತ್ತವೆ. ಭವಿಷ್ಯತ್ತಿನ ಕವಲು ದಾರಿಗಳಲ್ಲಿ ಸಂದೇಹ ಉಂಟಾದಾಗ ಗತಿಸಿದ ಅನುಭವಗಳು ಸಂದೇಹ ನಿವಾರಣೆಯನ್ನು ಮಾಡಬಲ್ಲುದು. ಅದೇ ದಾರಿಯನ್ನೂ ಅದೇ ಸಮಸ್ಯೆಗಳನ್ನು ಎದುರಿಸಿದ ಹಿರಿಯರ ಅನುಭವ ಇಲ್ಲಿ ಉಪಯುಕ್ತವಾಗುತ್ತದೆ. ಈ ಅನುಭವಗಳ ಮೌಲ್ಯಗಳನ್ನು ಗುರುತಿಸಿ ಅದನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ವೇಣೂರಿನ ಮಿತ್ರ ಕಜೆ ಸುಬ್ರಹ್ಮಣ್ಯ ಭಟ್ಟರು ಸರಳವಾದ ಕ್ರಿಯಾತ್ಮಕ ಪ್ರವೃತ್ತಿಯನ್ನು ತೋರ್ಪಡಿಸಿದರು. ಅದು ಯಕ್ಷಗಾನದ ಹಿರಿಯ ಅರ್ಥಧಾರಿ ಮಹಾನ್ ಮೇಧಾವಿ ಶ್ರೀಯುತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳ ಅನುಭವಗಳನ್ನು ಸಂಗ್ರಹಿಸುವ ಕಾರ್ಯ. ಇವರ ಕ್ಯಾಮರ ಕಣ್ಣೆದುರು ಶಾಸ್ತ್ರಿಗಳು ತಮ್ಮ ಅನುಭವಗಳ ಸಿಂಚನವನ್ನು ಸಿಂಪಡಿಸಿ ಯಕ್ಷಗಾನದ ಮೌಲ್ಯವನ್ನು ನನಪಿಸುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

ಮೂಡಂಬೈಲು ಇವರ ಬಗ್ಗೆ ಯಕ್ಷಗಾನ ವಲಯದಲ್ಲಿ ಅರಿಯದವರು ಇಲ್ಲ. ವರ್ತಮಾನದ ಅತ್ಯಂತ ಹಿರಿಯ ತಾಳಮದ್ದಲೆಯ ಅರ್ಥಧಾರಿಗಳು, ವಿದ್ವಾಂಸರು , ತಮ್ಮ ಪ್ರೌಢಿಮೆ ಮತ್ತು ಪಾಂಡಿತ್ಯದಿಂದ ನಿಜಾರ್ಥದಲ್ಲಿಯೂ ಯಕ್ಷಗಾನದ ’ಅರ್ಥ’ ಧಾರಿಗಳು. ಅಮೋಘವಾದ ಪಾಂಡಿತ್ಯದಿಂದ ಕೂಡಿದ ಮತ್ತು ಅದನ್ನು ನಿರರ್ಗಳವಾಗಿ ಮತ್ತು ಸರಳವಾಗಿ ಮಂಡಿಸುವ ಮೂಡಂಬೈಲು ಶಾಸ್ತ್ರಿಗಳ ಅರ್ಥಗಾರಿಕೆ ವಿದ್ವತ್ ಸಂಚಾರವಾದಂತೆ. ಪುರಾಣ ವ್ಯಾಕರಣ ಉಪನಿಷತ್ ಹೀಗೆ ಯಾವುದೇ ಆಗಲಿ ಮೂಡಂಬೈಲು ಅರ್ಥಗಾರಿಕೆಯಲ್ಲಿ ಇವುಗಳು ನಿಜ ಅರ್ಥವನ್ನೇ ಬಿಂಬಿಸುತ್ತದೆ. ಅರ್ಥಾತ್, ಒಂದು ಮೌಲ್ಯ ಯುತ ಅರ್ಥಗಾರಿಕೆ ಮೂಡಂಬೈಲುರವರದ್ದು. ಪೌರಾಣಿಕ ಪ್ರಸಂಗಗಳ ಯಾವುದೇ ಸಂದರ್ಭವಾದರೂ ಸರಿಯೇ ಅದರ ಬಗ್ಗೆ ತನ್ನದೆ ಆದ ವಿಶ್ಲೇಷಣೆಯನ್ನು ವಿಶೇಷತೆಯನ್ನು ನಿರರ್ಗಳವಾಗಿ ಉಪಮೇ ಸಹಿತ ಅರ್ಥವಾಗುವಂತೆ ಮಂಡಿಸಬಲ್ಲರು. ಮೂಡಂಬೈಲಿನ ಒಂದು ಪಯಣದ ಅನುಭವ ಮೂಡಣದ ಹೊಂಗಿರಣದಂತೆ, ಹೊಸ ವಿಚಾರಗಳ ದರ್ಶನವನ್ನು ಮಾಡಿಸುತ್ತದೆ.

ನೀವು ಮೆಚ್ಚುವ ಕಲಾವಿದರು ಯಾರು? ನಿಮ್ಮ ಮೆಚ್ಚಿನ ಪ್ರಸಂಗ ಯಾ ಪಾತ್ರ ಯಾವುದು? ಹೀಗೆ ಸಾಮಾನ್ಯವಾಗಿ ಕಲಾವಿದರುಗಳ ಸಂದರ್ಶನದಲ್ಲಿ ಕಲೆಗಿಂತಲೂ ವೈಯಕ್ತಿಕ ವಿಚಾರಗಳು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸುತ್ತವೆ. ಇದು ಒಂದುರೀತಿಯ ವ್ಯಕ್ತಿ ಪೂಜೆಯಂತೆ. ಕಲೆಗಿಂತಲೂ ವ್ಯಕ್ತಿ ದೊಡ್ಡವನು ಎಂಬ ಭಾವ ಮನದ ಮೂಲೆಯಲ್ಲಿರುವುದೇ ಇದಕ್ಕೆ ಕಾರಣ. ವೈಶಿಷ್ಟ್ಯವೆಂದರೆ ಈ ಸಂದರ್ಶನದ ಪ್ರಶ್ನೆಗಳಲ್ಲಿ, ಜಿಜ್ಞಾಸೆಗಳಲ್ಲಿ ಇಂತಹ ಪ್ರವೃತ್ತಿ ಎಲ್ಲಿಯೂ ಕಾಣುವುದಿಲ್ಲ. ವೈಯಕ್ತಿಕ ವಿಚಾರಗಳತ್ತ ಸುಳಿಯದೇ ಸಮಗ್ರವಾಗಿ ಯಕ್ಷಗಾನ ಮತ್ತು ತಾಳಮದ್ದಲೆಯ ವಿಚಾರಗಳು ಹೆಚ್ಚು ಮಥಿಸಲ್ಪಟ್ಟಿವೆ. ಈ ಒಂದು ವಿಶೇಷತೆಯಿಂದಲೇ ಈ ಸಂದರ್ಶನದ ಆಶಯವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇಲ್ಲಿ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳ ಸಂಕ್ಷಿಪ್ತ ಭಾವ ವಿಶ್ಲೇಷಣೆಯನ್ನು ತಕ್ಕ ಮಟ್ಟಿಗೆ ಮಂಡಿಸುವ ಯತ್ನವಿದು.


*********************

ಸ೦ದರ್ಶಕರು : ಕಜೆ ಸುಬ್ರಹ್ಮಣ್ಯ ಭಟ್



ಪ್ರಶ್ನೆ : ಯಕ್ಷಗಾನ ತಾಳಮದ್ದಳೆಯಲ್ಲಿ ಪಾತ್ರ ಚಿತ್ರಣ ಹೇಗಿರಬೇಕು ?

ಮೂಡಂಬೈಲು : ಅರ್ಥಗಾರಿಕೆಯಲ್ಲಿ ಲೌಕಿಕವಾದ ವಿಚಾರಗಳನ್ನು ಬಳಸಬಾರದು. ವಿಚಾರಗಳು ಪೌರಾಣಿಕವಾಗಿ, ಪೌರಾಣಿಕ ಕ್ರಮದಲ್ಲೇ ಇರಬೇಕು. ಸ್ವಾಭಾವಿಕ ಕ್ರಮ ಎಂಬ ಸಾಮಾಜಿಕ ಪದ್ದತಿಯಲ್ಲಿರಬಾರದು. ಪೌರಾಣಿಕ ಕ್ರಮದಲ್ಲಿ ಇಲ್ಲದಿದ್ದರೆ ಅವುಗಳು ಔಚಿತ್ಯವನ್ನು ಪಡೆಯುವುದಿಲ್ಲ. ಆವಾಗ ಅರ್ಥಗಾರಿಕೆ ಅರ್ಥ ಪೂರ್ಣವಾಗಿರುತ್ತದೆ. ಸಮಕಾಲೀನ ವಿಚಾರಗಳು ಬಂದಾಗ ಅಸಹಜತೆ ಕಾಣಿಸಿಕೊಳ್ಳುವುದಲ್ಲದೆ ಉಂಟು ಮಾಡಬೇಕಾದ ಪ್ರಭಾವದಲ್ಲಿ ಕೊರತೆಯಾಗುತ್ತದೆ. ಲೌಕಿಕ ವಿಚಾರಗಳು ನಮ್ಮನ್ನು ಈ ಲೋಕದಲ್ಲೇ ಸ್ಥಿರವಾಗಿಸುತ್ತವೆ, ಹೊರತು ಅದು ಪೌರಾಣಿಕ ಲೋಕಕ್ಕೆ ಒಯ್ಯುವುದಿಲ್ಲ.

ಸ೦ದರ್ಶಕ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಇಲ್ಲಿ ಪ್ರೇಕ್ಷಕ ಎರಡು ಕಾಲಗಳ ಮಧ್ಯೆ ಕಾಲ್ಪನಿಕವಾಗಿ ಸಂಚರಿಸುವಾಗ ಅದು ಅಸ್ವಾಭಾವಿಕವಾಗಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದು ಪಾತ್ರಗಳ ನಿಲುಮೆಯಲ್ಲೂ ವ್ಯತ್ಯಾಸವನ್ನುಂಟುಮಾಡುತ್ತದೆ. ಹಾಗಾಗಿ ಇದೆಲ್ಲ ಪೌರಾಣಿಕ ಸನ್ನಿವೇಶದ ಒಟ್ಟು ಚಿತ್ರಣದಲ್ಲಿ ಅಸಹಜತೆಯನ್ನು ಬಿಂಬಿಸುತ್ತದೆ.

ಪ್ರಶ್ನೆ : ಸಾಮಾನ್ಯವಾಗಿ ಪಾತ್ರಧಾರಿಗಳು ಪಾತ್ರವನ್ನು ನಿರ್ವಹಿಸುವಾಗ ಅವರು ಪ್ರಸಂಗಕ್ಕೆ ನಿಷ್ಠರಾಗಿರಬೇಕೋ? ಅಥವಾ ಮೂಲ ಕಾವ್ಯಕ್ಕೆ ನಿಷ್ಠರಾಗಿರಬೇಕೋ? ಹಲವು ಸಲ ಮೂಲ ಕಾವ್ಯಕ್ಕೂ ಪ್ರಸಂಗ ಚಿತ್ರಣಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಆವಾಗ ಯಾವುದನ್ನು ಆಧಾರವಾಗಿಟ್ಟುಕೊಳ್ಳಬೇಕು?

ಮೂಡಂಬೈಲು : ಮೂಲವಾಗಿ ಪ್ರಸಂಗಕ್ಕೆ ಆದ್ಯತೆಯನ್ನು ನೀಡಬೇಕು. ಇಲ್ಲವಾದಲ್ಲಿ ಆ ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳಲ್ಲಿ ಅದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಒಬ್ಬ ಪ್ರಸಂಗ ಬಿಟ್ಟು ಮೂಲ ಆಕರವನ್ನು ಆಧರಿಸಿ ಮಾತನಾಡಿದರೆ ಅದು ಪ್ರಸಂಗಕ್ಕೆ ವಿರುದ್ಧವಾಗಿದ್ದರೆ ಆಗ ಮತ್ತೊಬ್ಬ ಮಾತನಾಡುವುದು ಹೇಗೆ? ಆಗ ಪಾತ್ರಗಳ ನಡುವೆ ಪ್ರಸಂಗದಲ್ಲಿ ತದ್ವಿರುದ್ಧವಾದ ಹೇಳಿಕೆಗಳು ಕೊಡಲ್ಪಡುತ್ತವೆ. ಇದಕ್ಕೆ ಸುಧನ್ವ ಕಾಳಗದ ಉದಾಹರಣೆಯನ್ನು ಶಾಸ್ತ್ರಿಗಳು ಉದ್ದರಿಸುತ್ತಾರೆ.

ಈ ಪ್ರಸಂಗದಲ್ಲಿ ಸುಧನ್ವನನ್ನು ಕೊಲ್ಲಿಸುವ ಸಂದರ್ಭದಲ್ಲಿ ಪ್ರಸಂಗವನ್ನು ಆಧರಿಸಿ, ಶ್ರೀಕೃಷ್ಣ, ಅರ್ಜುನ ಬಿಡುವ ಬಾಣಕ್ಕೆ ತುದಿಯಲ್ಲಿ ಲಯಕಾರಕ ಈಶ್ವರ, ಮಧ್ಯದಲ್ಲಿ ವಿಷ್ಣು, ಬುಡದಲ್ಲಿ ಜಯಕಾರಕನಾದಂತಹ ಬ್ರಹ್ಮ ಹೀಗೆ ತ್ರಿಮೂರ್ತಿಗಳನ್ನು ಆವಾಹಿಸುತ್ತಾನೆ. ಆದರೆ ಮೂಲ ಜೈಮಿನಿ ಭಾರತಲ್ಲಿ, ಬಾಣದ ತುದಿಯಲ್ಲಿಯೇ ವಿಷ್ಣುವನ್ನೇ ಅವಾಹಿಸಿಬಿಡುತ್ತಾನೆ. ಇಲ್ಲಿ ಶ್ರೀಕೃಷ್ಣ ಹೇಳುವುದೊಂದು ಸುಧನ್ವ ಅದಕ್ಕೆ ವ್ಯಾಖ್ಯಾನ ಮಾಡುವುದು ಇನ್ನೊಂದೋ ಆದರೆ ಪ್ರೇಕ್ಷಕ ಗೊಂದಲದಲ್ಲಿ ಸಿಕ್ಕಿಬಿಡುತ್ತಾನೆ. ಇಲ್ಲಿ ಪ್ರಸಂಗದ ಅಶಯವೇ ಪ್ರಧಾನ. ಹಾಗಾಗಿ ಮೂಲ ಕಾವ್ಯವಸ್ತು ಪ್ರಸಂಗಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.

ಆದರೆ ಜೈಮಿನಿ ಭಾರತದಂತಹ ಮೂಲ ಆಕರವನ್ನು ಇಂದಿನ ಯುವ ಅರ್ಥಧಾರಿಗಳು ಎಷ್ಟು ಅಭ್ಯಾಸ ಮಾಡಿದ್ದಾರೆ ಮತ್ತು, ಅದರ ಬಗ್ಗೆ ಎಷ್ಟು ತಿಳಿದು ಕೊಂಡಿದ್ದಾರೆ ಎಂಬ ವಿಚಾರ ಕೂಡ ಈ ಮಧ್ಯೆ ಗಮನಾರ್ಹವಾಗಿಬಿಡುತ್ತದೆ. ಹಿಂದಿನ ತಾಳಮದ್ದಲೆಗಳ ಧ್ವನಿ ಮುದ್ರಣವನ್ನಷ್ಟೇ ಕೇಳಿ ಅದನ್ನು ಯಾಥಾವತ್ ವರದಿ ಒಪ್ಪಿಸುವಲ್ಲಿ, ಈ ಪ್ರಶ್ನೆಯ ಉತ್ತರದ ಒಳ ಆಶಯ ಮತ್ತು ಗಂಭೀರತೆಯನ್ನು ಮನಗಾಣಬೇಕು.

ಪ್ರಶ್ನೆ : ತಾಳಮದ್ದಲೆ ಅರ್ಥಗಾರಿಕೆಯಲ್ಲಿ ವೈಚಾರಿಕತೆ ಇರಬೇಕೆ? ಇದ್ದರೆ ಎಷ್ಟಿರಬೇಕು?

ಮೂಡಂಬೈಲು : ತಾಳಮದ್ದಲೆ ಅರ್ಥಗಾರಿಕೆಯಲ್ಲಿ ವೈಚಾರಿಕತೆ ತಕ್ಕ ಮಟ್ಟಿಗೆ ಇರಲೇಬೇಕು. ಯಾಕೆಂದರೆ ಇದು ಬಯಲಾಟದ ಹಾಗೆ ಅಲ್ಲ. ಬಯಲಾಟದಲ್ಲಿ ಕುಣಿತ, ಆಂಗಿಕ ಅಭಿನಯ, ಬಣ್ಣಗಾರಿಕೆ, ವೇಷಗಳೇ ಪ್ರಾಮುಖ್ಯ. ಇಲ್ಲಿ ಮಾತುಗಾರಿಕೆಯೇ ಪ್ರಾಮುಖ್ಯ. ಇಲ್ಲಿ ಪಾತ್ರಧಾರಿ ಮಾತು ಸಂಭಾಷಣೆಯಿಂದಲೇ ಪಾತ್ರವನ್ನು ದೃಶ್ಯವನ್ನು ಕಟ್ಟಬೇಕು. ವಿಚಾರಾತ್ಮಕವಾದ ವಿಮರ್ಶೆ, ಸಂಭಾಷಣೆ ಇಲ್ಲಿ ಅನಿವಾರ್ಯ. ಆದರೆ ಇವುಗಳು ಕಾಲಮಿತಿಯನ್ನು ಅನುಸರಿಸಿ ಇರಬೇಕು. ಪಾತ್ರಗಳ ವ್ಯವಹಾರ ಪೌರಾಣಿಕ ಕಾಲದಲ್ಲೇ ಇರಬೇಕು. ಅದು ಈಗಿನ ಕಾಲಕ್ಕೆ ಬರಬಾರದು. ಈ ಕಾಲಕ್ಕೆ ಬಂದಲ್ಲಿ ಅದು ತಾತ್ಕಾಲಿಕವಾದ ರಾಜಕೀಯ ಸಾಮಾಜಿಕ ವಿಮರ್ಶೆಗಳೇ ಬಂದುಬಿಡುತ್ತದೆ.ಇದನ್ನು ಕೇಳುವುದಕ್ಕೆ ತಾಳಮದ್ದಲೆಗೆ ಹೋಗಬೇಕೆಂದಿಲ್ಲ.

ತಾಳಮದ್ದಲೆ ಯಾಕೆ ಇರುವುದು? ಆಗಿನ ಕಾಲದ ಚಿತ್ರಣಕ್ಕೆ. ನಮ್ಮನ್ನು ಪೌರಾಣಿಕ ಕಾಲಕ್ಕೆ ತೆದುಕೊಂಡು ಹೋಗುವ ಹಾಗಿರಬೇಕು ಹೊರತು ಪೌರಾಣಿಕ ಪಾತ್ರ ಸಂದರ್ಭಗಳನ್ನು ಈಗಿನ ಕಾಲಕ್ಕೆ ಎಳೆದು ತರುವುದಲ್ಲ. ಈಗಿನ ಯಕ್ಷಗಾನದಲ್ಲಿ ಈ ವ್ಯತ್ಯಾಸವನ್ನು ಬಹಳಷ್ಟು ಗುರುತಿಸಬಹುದು. ಉದಾಹರಣೆಗೆ ಶೂರ್ಪನಖಿಯ ಪಾತ್ರಧಾರಿ ತನ್ನ ಸೌಂದರ್ಯ ಹೇಗಿರಬೇಕೆಂದು ಕಲ್ಪಿಸಿ ಮಾತನಾಡುವಾಗ ಎರಡು ಜಡೆ ಹಾಕುವುದು ಮುಂತಾದ ವರ್ತಮಾನದ ವಿಚಾರಗಳನ್ನು ಸೇರಿಸುವಾಗ ಆ ಕಾಲದಲ್ಲಿ ಹಾಗಿತ್ತೇ ಎಂದು ಯೋಚಿಸಬೇಕಾಗುತ್ತದೆ. ಇದು ಪ್ರಸಂಗಕ್ಕೆ ಅಸಹಜತೆಯನ್ನೇ ಕೊಡುತ್ತದೆ.

2012ರಲ್ಲಿ ಪುತ್ತೂರಿನಲ್ಲಿ ತಾಳಮದ್ದಳೆಯ ದಿಗ್ಗಜ ದಿವ೦ಗತ ಪೆರ್ಲ ಕೃಷ್ಣ ಭಟ್ಟರವರಿ೦ದ ಸನ್ಮಾನಿಸಲ್ಪಡುತ್ತಿರುವ ಶಾಸ್ತ್ರಿಗಳು
(ಚಿತ್ರ ಕೃಪೆ : http://yakshamatu.blogspot.in )

ಪ್ರಶ್ನೆ : ತಾಳಮದ್ದಲೆ ಎಂದ ಕೂಡಲೇ ಅದು ನಮ್ಮ ವಿದ್ವತ್ ಪ್ರದರ್ಶನಕ್ಕೆ ಅವಕಾಶ ಎಂದು ಹೆಚ್ಚಿನವರು ತಿಳಿದುಕೊಳ್ಳುತ್ತಾರೆ. ಕೆಲವೊಂದು ಪ್ರಸಂಗಗಳೂ ಹಾಗೆ ಅತ್ಯಂತ ಗಂಭೀರವಾದ ಚರ್ಚೆಯನ್ನು ಬಯಸುತ್ತದೆ. ಇಲ್ಲಿ ನಮ್ಮ ವಿದ್ವತ್ ಪ್ರದರ್ಶನ ಎಷ್ಟು ಮಾಡಬೇಕು? ಎದುರು ಅರ್ಥಧಾರಿ ತಮ್ಮ ಮಟ್ಟಕ್ಕೆ ಇಲ್ಲ ಎಂದಾಗ ನಮ್ಮ ವಿದ್ವತ್ ನ್ನೇ ಪ್ರದರ್ಶಿಸುವುದು ಸರಿಯೋ?

ಮೂಡಂಬೈಲು : ನಮ್ಮ ವಿದ್ವತ್ ನ್ನೇ ನಾವು ಪ್ರದರ್ಶಿಸಿ ಇದಿರಾಳಿಯನ್ನು ಖಂಡಿಸುವುದಂತೂ ಅಲ್ಲವೇ ಅಲ್ಲ. ಬದಲಾಗಿ ನಮ್ಮ ವಿದ್ವತ್ ನ್ನು ಪ್ರದರ್ಶಿಸುತ್ತಾ ಇದಿರಾಳಿ ಚಿಕ್ಕ ಅರ್ಥದವನೇ ಆಗಿದ್ದರೂ ಅವನನ್ನು ಎತ್ತಿಕೊಂಡು ಹೋಗುವುದೇ ತಾಳಮದ್ದಲೆಯ ಸಹಜ ಸ್ವಭಾವ ಗುಣ. ಪಾತ್ರದ ಅರ್ಥ ಸಣ್ಣದೇ ಆದರೂ ಅದು ಈ ಪಾತ್ರವನ್ನು ಬೆಳೆಸುವುದಕ್ಕೆ ಅತ್ಯಂತ ಅವಶ್ಯ. ಕರ್ಣಪರ್ವದ ಕರ್ಣ ಪಾತ್ರಧಾರಿ ಉದ್ದುದ್ದ ಮಾತನಾಡಬಹುದು. ಆದರೆ ಎದುರು ಸರ್ಪಾಸ್ತ್ರದ ಪಾತ್ರಧಾರಿಗೆ ಮಾತಾನಾಡುವುದಕ್ಕೆ ಅನುವು ಮಾಡಿಕೊಡಬೇಕು. ಅದು ಪ್ರಸಂಗದ ಆಶಯ. ಆಲ್ಲಿ ಎದುರು ಪಾತ್ರದ ದಮನ ಖಂಡಿತಾ ಸಲ್ಲದು.

ಪಾತ್ರ ದಮನಿಸಲ್ಪಟ್ಟರೆ ಪ್ರಸಂಗ ದಮನವಾಗುತ್ತದೆ. ಪ್ರಸಂಗ ದಮನವಾದರೆ ತಾಳಮದ್ದಲೆಯೇ ಅರ್ಥಹೀನವಾಗುತ್ತದೆ. ಇಲ್ಲಿ ಹಿರಿಯ ಅರ್ಥ ಧಾರಿಯ ವಿಚಾರಗಳು ಗೆಲುವನ್ನು ಪಡೆದರೂ ತಾಳಮದ್ದಲೆ ಸಂಪೂರ್ಣ ವೈಫಲ್ಯವನ್ನು ಅನುಭವಿಸುತ್ತದೆ. ಸರ್ಪಾಸ್ತ್ರದ ಎರಡು ಪದದ ಅರ್ಥವಾದರೂ ಅದು ಸರಿಯಾಗಿ ಹೊಂದಿಕೊಂಡು ಬಾರದಿದ್ದಲ್ಲಿ ಕರ್ಣ ಏನು ಮಾಡಬಹುದು? ಇಲ್ಲಿ ಕರ್ಣನ ಪಾತ್ರ ಬೆಳೆಯಬೇಕಾದರೆ ಸರ್ಪಾಸ್ತ್ರದ ಗೆಲುವು ಅನಿವಾರ್ಯ.

ಪ್ರಶ್ನೆ : ತಾಳಮದ್ದಲೆಯನ್ನು ವಿದ್ಯಾರ್ಥೀ ದೆಸೆಯಲ್ಲಿ ಕಲಿಯುವಾಗ ವಿದ್ಯಾರ್ಥಿಗಳಿಗೆ ಹೇಳುತ್ತೇವೆ, ತಾಳಮದ್ದಲೆ ಭಾಷಾ ಶುದ್ದತೆಯನ್ನು ನೀಡುತ್ತದೆ. ಮಾತು ಸಭಾ ಕಂಪನವನ್ನು ನೀಗಿಸುತ್ತದೆ. ನಮ್ಮನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ಇದನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳ ಬಹುದು?

ಮೂಡಂಬೈಲು : ಪ್ರಾಥಮಿಕ ಹಂತದಲ್ಲಿ ಚಿಕ್ಕವರಿಗೆ ಆದರೂ ದೊಡ್ಡವರಿಗೇ ಆದರು ತಮಗಿರುವ ವೇದಿಕೆಯ ಭಯವನ್ನು ನಿವಾರಣೆ ಮಾಡುವುದಕ್ಕೆ ಸರಳವಾಕ್ಯವನ್ನು ಅನುಸರಿಸಿ ಪ್ರಾರಂಭಿಸಬೇಕು. ಪ್ರಾರಂಭಕ್ಕೆ ಚರ್ಚೆ ಮಾಡುವುದನ್ನೋ ಅಥವಾ ಬಹಳ ದೊಡ್ಡ ವಾಕ್ಯವನ್ನು ಕಲಿತು ಬಾಯಿ ಪಾಠ ಹೊಡೆದು ಅದನ್ನೆ ಅಲ್ಲಿ ಹೇಳುವುದನ್ನು ಮಾಡಬಾರದು. ಬಾಯಿ ಪಾಠಕಲಿತ ವಾಕ್ಯಗಳು ಸ್ವಲ್ಪ ಭಯವಾದರೂ ತಪ್ಪಿಹೋಗುವ ಭೀತಿ ಉಂಟು. ಸರಳವಾದ ಸ್ವಂತ ವಾಕ್ಯಗಳು ಒಪ್ಪಿಸಿದಲ್ಲಿ ಅದು ನಿರರ್ಗಳವಾಗಿ ಬರುತ್ತದೆ. ಸ್ವಲ್ಪವೇ ಹೇಳಿಬಿಟ್ಟರೆ ಆದಿನಕ್ಕೆ ಅವನಿಗೆ ಬಹಳಷ್ಟು ಧೈರ್ಯ ಬರುತ್ತದೆ. ಇನ್ನೊಂದು ಸಲಕ್ಕೆ ಅದು ಹೆಚ್ಚು ಆತ್ಮ ಸ್ಥೈರ್ಯವನ್ನು ಕೊಡುತ್ತದೆ. ಆಗ ವೇದಿಕೆಯ ಭಯ ತಾನೇತಾನಾಗಿ ಹೊರಟು ಹೋಗುತ್ತದೆ. ಆರಂಭಿಕ ಹಂತಗಳಲ್ಲಿ ಕೆಲವಷ್ಟೇ ವಿಚಾರಗಳನ್ನು ಸೇರಿಸುತ್ತ ಮತ್ತೆ ಮತ್ತೆ ಅದಕ್ಕೆ ಸೇರಿಸುತ್ತಾ ಹೋಗಬೇಕು.

ಪ್ರಶ್ನೆ : ತಾಳಮದ್ದಲೆಯಲ್ಲಿ ವಾದವಿವಾದಗಳು ಸ್ವಾಭಾವಿಕ. ಈ ಕಾರಣಕ್ಕೆ ಎಷ್ಟೋ ತಾಳಮದ್ದಲೆಗಳೂ ಅರ್ಧದಲ್ಲೇ ನಿಂತಿವೆ. ಒಣ ಪ್ರತಿಷ್ಠೆಯಿಂದಲೋ ಗೆಲ್ಲಲೇ ಬೇಕೆಂಬ ಛಲದಿಂದಲೋ ಅಥವಾ ವಾದವನ್ನು ನಿರ್ವಹಿಸಲಾಗದೆಯೋ ಏಷ್ಟೋ ತಾಳಮದ್ದಲೆಗಳೂ ಅರ್ಧದಲ್ಲೇ ನಿಂತಿದೆ. ತಾಳಮದ್ದಲೆಯ ನಿಜವಾದ ಉದ್ದೇಶ ರಸವನ್ನು ಆವಿಷ್ಕರಿಸುವುದು. ಯಕ್ಷಗಾನ ಆಟಗಳಲ್ಲಿ ವೇಷ ಭೂಷಣ ಅಭಿನಯದಿಂದ ರಸಾವಿಷ್ಕಾರವಾಗುತ್ತದೆ. ಅದರಂತೆ ತಾಳಮದ್ದಲೆಯಲ್ಲಿ ರಸಾವಿಷ್ಕಾರ ಹೇಗೆ ಮಾಡಬಹುದು?

ಮೂಡಂಬೈಲು : ವಾದವಿವಾದಗಳಿಂದ ತಾಳಮದ್ದಲೆ ನಿಲ್ಲುವುದಕ್ಕೆ ಕಾರಣ ಒಣ ಪ್ರತಿಷ್ಠೆ. ತಾಳಮದ್ದಲೆಗೆ ಬಂದು ಕೂತವರು ಗೆಲ್ಲತಕ್ಕದ್ದು ಎಂಬ ಮಾನಸಿಕ ಧೋರಣೆ ಇಲ್ಲಿ ತಾಳಮದ್ದಲೆ ಗೆಲ್ಲುವುದಲ್ಲ ವ್ಯಕ್ತಿ ಗೆಲ್ಲುವುದು. ವಾಸ್ತವದಲ್ಲಿ ತಾಳಮದ್ದಲೆ ಗೆಲ್ಲಬೇಕು. ತಾಳಮದ್ದಲೆ ಎಂಬುದು ಒಂದು ಸಾಮೂಹಿಕ ಕಲೆ. ಯಾವುದಾದರೂ ಒಂದು ಪಾತ್ರವೋ, ಹಾಡುಗಾರಿಕೆ ಪದವೋ, ಗೆದ್ದಲ್ಲಿ ತಾಳಮದ್ದಲೆ ಗೆದ್ದಂತಾಗುವುದಿಲ್ಲ. ಇನ್ನು ತಾಳಮದ್ದಲೆಯಲ್ಲಿ ರಸಾವಿಷ್ಕಾರ ಹೇಗೆ?

ತಾಳಮದ್ದಲೆಯಲ್ಲೂ ಎಲ್ಲಾ ಬಗೆಯ ರಸಾವಿಷ್ಕಾರ ಸಾಧ್ಯವಿದೆ. ಅದನ್ನು ಮಾಡಬೇಕು. ಒಂದು ಕಾಲದಲ್ಲಿ ರಸಾವಿಷ್ಕಾರ ಇತ್ತು. ಆನಂತರ ವೈಚಾರಿಕತೆ ಹೆಚ್ಚಾದಂತೆ ರಸಾವಿಷ್ಕಾರ ಕುಂಠಿತಗೊಂಡಿತು. ರಸಾವಿಷ್ಕಾರಗೊಂಡರೆ ಮಾತ್ರ ತಾಳಮದ್ದಲೆ ಯಶಸ್ವಿಯಾದೀತು. ಸಾಮಾನ್ಯವಾಗಿ ವೀರರಸಗಳಲ್ಲಿ ವಾಕ್ಯಗಳೆಲ್ಲ ಗಿಡ್ದಗಿಡ್ಡವಾಗಿರಬೇಕು. ಸ್ವರವೂ ಏರುತ್ತಾ ಹೋಗಬೇಕು.. ಉದ್ದ ವಾಕ್ಯಗಳಲ್ಲಿ ವೇಗವು ಸಾಧ್ಯವಾಗುವುದಿಲ್ಲ. ಸ್ವರವೂ ಸಾಕಾಗುವುದಿಲ್ಲ. ಆದರೆ ಸೌಮ್ಯ ರಸಗಳಿಗೆ ಉದ್ದ ವಾಕ್ಯ ಅಡ್ಡಿಯಿಲ್ಲ.

ಎಲ್ಲಿ ವಾಕ್ಯಗಳಲ್ಲಿ ಭಾವವನ್ನು ವಾಕ್ಯದ ಮುಕ್ತಾಯದವರೆಗೆ ಹಿಡಿದಿಡುವುದಕ್ಕೆ ಸಾಧ್ಯವೋ ಅಲ್ಲಿ ರಸ ಭಾವ ಉಳಿದುಕೊಳ್ಳುತ್ತದೆ. ವೀರ ರಸಕ್ಕೆ ಸ್ವರ ಏರುಗತಿಯಲ್ಲಿರುವಾಗ ಆ ಸ್ವರವನ್ನು ವಾಕ್ಯದ ಅಂತ್ಯದವರೆಗೂ ಹಿಡಿದಿಡುವುದು ಅಸಾಧ್ಯ. ಸೌಮ್ಯ ರಸಗಳಲ್ಲಿ ಇದು ಸಾಧ್ಯವಾಗುತ್ತದೆ. ಈಗ ತಾಳಮದ್ದಲೆಯಲ್ಲಿ ಸ್ತ್ರೀ ಪಾತ್ರದ ಅರ್ಥ ಹೇಳುವವರ ಕೊರತೆ ಕಂಡುಬರುತ್ತದೆ. ಅದಕ್ಕೆ ಕಾರಣ ಅವರಲ್ಲಿ ಸ್ವರ ವೈವಿಧ್ಯ ಇಲ್ಲದಿರುವುದು. ರಸೋತ್ಪಾದನೆಗೆ ಸ್ವರ ವೈವಿಧ್ಯ ಅತ್ಯವಶ್ಯ. ವಿದುರನಾದವ ಕೃಷ್ಣ ಎದುರು ಶಾಂತ ಭಾವದಿಂದ ಭಕ್ತಿಭಾವದಿಂದ ಮಾತನಾಡಿದರೆ ಕೌರವನ ಎದುರು ವೀರ ರಸದಿಂದಲೇ ಮಾತನಾಡಬೇಕು.

ಶರಸೇತುವಿನ ಹನುಮಂತನ ಪಾತ್ರ, ಇದು ಆರಂಭದಲ್ಲಿ ಶಾಂತವಾಗಿದ್ದರೆ, ಆನಂತರ ಸ್ವಲ್ಪ ಸಾವರಿಸಿಕೊಂಡು ಉತ್ತರಿಸುತ್ತಾನೆ, ಆನಂತರ ವೀರರಸವನ್ನೇ ತೋರಿಸಬೇಕು ಕೊನೆಯಲ್ಲಿ ರಾಮ ಪ್ರತ್ಯಕ್ಷನಾಗುವಾಗ ಭಕ್ತಿ ರಸವನ್ನು ತೋರಬೇಕು ಹೀಗೆ ಒಂದೇ ಪಾತ್ರದಲ್ಲಿ ವೈವಿಧ್ಯಮಯ ರಸಾವಿಷ್ಕಾರ ಸಾಧ್ಯವಾಗಬೇಕು. ಇದೆಲ್ಲಾ ಒಂದೇ ಆದರೆ ಅದು ಏನೂ ಪ್ರಭಾವ ಬೀರಲಾರದು. ಬೇಸರದ ಸಂಗತಿ ಎಂದರೆ ಈಗಿನ ತಾಳಮದ್ದಲೆಗಳಲ್ಲಿ ಈ ರಸೋತ್ಪಾದನೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಕರುಣಾ ರಸ ಶೃಂಗಾರ ರಸ ಕಡೆಗಣಿಸಲ್ಪಟ್ಟಿದೆ. ಸುಧನ್ವ ಪ್ರಸಂಗದ ಪ್ರಭಾವತಿ ಸುಧನ್ವ ಸನ್ನಿವೇಶದಿಂದಾಗಿ ಆ ಪ್ರಸಂಗವನ್ನೇ ಬೇಡ ಎಂದು ಹೇಳುತ್ತಾರೆ. ಇಲ್ಲಿ ಸುಧನ್ವ ಪ್ರಭಾವತಿ ಸಂಭಾಷಣೆಯಲ್ಲಿ ಶೃಂಗಾರ ರಸ ಅತ್ಯವಶ್ಯ. ಹಾಗಾಗಿ ಪ್ರಭಾವತಿ ಮಾಡುವುದಕ್ಕೆ ಜನವೇ ಸಿಗಲಾರದ ಪರಿಸ್ಥಿತಿ.

ಪ್ರಶ್ನೆ : ತಾಳಮದ್ದಲೆಗಳಲ್ಲಿ ಭಕ್ತಿರಸವನ್ನು ಪ್ರತಿಪಾದಿಸುವಂತಹ ಪಾತ್ರಗಳು, ಗೋಚರಿಸುವಂತಹ ಪ್ರಧಾನ ಮೂರು ಪಾತ್ರಗಳು. ಒಂದು ಭೀಷ್ಮ ಇನ್ನೊಂದು ವಿದುರ ಮತ್ತೊಂದು ಸುಧನ್ವ. ಈ ಮೂರು ಜನ ಕೂಡ ಕೃಷ್ಣನ ಭಕ್ತರೆ. ಇವರು ಅಪ್ರತಿಮ ಭಕ್ತರಾದರೂ ಇವರ ಭಕ್ತಿಯ ವಿಧಾನ ಬೇರೆ ಬೇರೆ. ತಾಳಮದ್ದಲೆಯಲ್ಲಿ ಅದನ್ನು ಹೇಗೆ ಪ್ರತಿಪಾದಿಸಬಹುದು?

ಮೂಡಂಬೈಲು :
ತೆ೦ಕು ತಿಟ್ಟಿನ ಯಕ್ಷಗಾನದಲ್ಲಿ ಕೃಷ್ಣನ ವೇಷ
ಭಕ್ತಿಯಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ ನಾಲ್ಕು ವಿಧ. ಜ್ಞಾನ, ಆಶೆ ಇಟ್ಟುಕೊಂಡು ಇರಿಸುವ ಭಕ್ತಿ ಆರ್ತ, ಮತ್ತೆ ಜಿಜ್ಞಾಸು ಮತ್ತು ಅರ್ಥಾರ್ಥಿ. ಇಲ್ಲಿ ಭೀಷ್ಮ ಜ್ಞಾನಿ, ಅವನು ಜ್ಞಾನಿ ಭಕ್ತ. ವಿದುರ ಆರ್ತ ಭಕ್ತನೇ, ಅವನ ಭಕ್ತಿಯಲ್ಲಿ ಏನು ಆಶೆಗಳಿಲ್ಲ. ಅರ್ಥಾರ್ಥಿಯೂ ಅಲ್ಲ ಅವನು. ಆದರೆ ಸುಧನ್ವ ಆರ್ತ ಭಕ್ತನೇ ಆದರೂ ಸುಧನ್ವ ವೀರ ವೈಷ್ಣವ. ವೀರ ಎಂದರೆ ಇಲ್ಲಿ ಪರಾಕ್ರಮಿ ಎಂಬ ಅರ್ಥ ಮಾತ್ರವಲ್ಲ. ಅದರ ಮತ್ತೊಂದು ಭಾವ, ತಾನು ವಿಕಾರಗೊಳ್ಳದೆ, ಬೇರೆಯವರನ್ನು ವಿಕಾರಗೊಳಿಸದವನು. ವಿಕಾರಗೊಳ್ಳದ ಅವಿಕಾರೀ ಭಕ್ತ. ಅವನದ್ದು ಕೃಷ್ಣನಿಗೆ ಅರ್ಪಿಸಲ್ಪಟ್ಟ ಭಕ್ತಿ ಅವನದ್ದು. ಅವನ ಮಾತಿನಲ್ಲಿ ಎಲ್ಲಿಯೂ ಸ್ವಾರ್ಥ ಕಾಣಬಾರದು. “ತಿಳಿದೆನು ನಿನ್ನಯ ಚಿತ್ತದುಮ್ಮಳಿಕೆಯ ನಿಜವ....” ಎಂಬ ಕೊನೆಯ ಪದದಲ್ಲಿ ಸುಧನ್ವನ ಭಕ್ತಿ ರೂಪ ತಿಳಿಯುವುದಕ್ಕೆ ಬರ್ತದೆ. ಶ್ರೀಕೃಷ್ಣ ಯಾರನ್ನು ಉಳಿಸಬೇಕು ಎಂಬ ಸಂದಿಗ್ಧದಲ್ಲಿರುವಾಗ ಆತ ತನ್ನನ್ನು ಕೃಷ್ಣನಿಗೆ ಅರ್ಪಿಸಿ ಮಾತನಾಡುತ್ತಾನೆ. ಅರ್ಜುನನ್ನು ಉಳಿಸು ಎಂದು ಅವನೇ ಕೇಳಿಕೊಳ್ಳುತ್ತಾನೆ. ಯಾಕೆ ಅರ್ಜುನನ್ನು ಉಳಿಸಿದರೆ ಶ್ರೀಕೃಷ್ಣನ ಧರ್ಮ ಸಂಸ್ಥಾಪನೆಗೆ ಅನುಕೂಲವಾಗುತ್ತದೆ. ಹೀಗೆ ಭಾವ ಪರವಶನಾಗಿ ಸುಧನ್ವ ಹೇಳಬೇಕು.

ಇನ್ನು ಭೀಷ್ಮ ಆತ ಹೇಳುತ್ತಾ ಹೋಗುವಾಗ, ಶ್ರೀಕೃಷ್ಣನ ಭಗವದ್ಗೀತೆಯ ಉಪದೇಶವನ್ನೆಲ್ಲಾ ಕೇಳಿದ ಅರ್ಜುನ, ಅವನಿಗೆ ಇನ್ನೂ ಪ್ರಪಂಚದಲ್ಲಿ ಏನನ್ನೆಲ್ಲ ಸಾಧಿಸಬೇಕೋ ಅದನ್ನು ಕೃಷ್ಣ ಹೇಳುತ್ತಾನೆ. ಅವನಿಂದ ಮಾಡಿಸ್ತುತ್ತಾನೆ. ಆದರೆ ತನಗೆ ಇನ್ನು ಏನಾಗಲಿದೆ? ಹಾಗಾಗಿ ಭೀಷ್ಮ ಯಾಕೆ ಹೀಗಾದ ಎಂಬುದಕ್ಕೆ ಅವನಲ್ಲಿ ಸಮರ್ಥನೆ ಉಂಟು. ಅದಲ್ಲವಾದರೆ ಆತ ಕೌರವನ ಪಕ್ಷಕ್ಕೆ ಹೋದದ್ದು ಅಪರಾಧವಾಗುತ್ತದೆ. ಭೀಷ್ಮ ಅದು ಯಾಕೆ ಅಪರಾಧವಲ್ಲ ಎಂಬುದಾಗಿ ಪ್ರತಿಪಾದಿಸಬೇಕಾಗುತ್ತದೆ.

ಇನ್ನು ವಿದುರ ಜ್ಞಾನಿಯೇ ಆದರೂ ಆತನ ಮನಸ್ಸು ಕೃಷ್ನನ ಕಡೆಗೆ ಬದಲಾಗಿ ಹೋಗುತ್ತದೆ. ಕೃಷ್ಣನನ್ನು ಕಂಡಾಗ ಅನಂದಾತಿರೇಕದಿಂದ ಭಾವೋದ್ವೇಗಕ್ಕೆ ಒಳಗಾಗುತ್ತಾನೆ. ತನ್ನಲ್ಲಿ ಏನಿದ್ದರು ಕೃಷ್ಣನಿಗೆ ಕೊಟ್ಟು ಬಿಡುವ, ತನ್ನಲ್ಲಿ ಏನೂ ಬೇಡ, ಕೃಷ್ಣ ಮನೆಗೆ ಬಂದ ಮೇಲೆ ಎಲ್ಲವೂ ಆಯಿತು ಎಂದು ಸರ್ವ ಸಪರ್ಪಣಾ ಭಾವದ ಭಕ್ತಿ ಅವನದ್ದು.

*********************
ಹೀಗೆ ಒಂದಿಷ್ಟು ಸಾರ್ಥಕ ಘಳಿಗೆಯ ಸಂದರ್ಶನವಿದು. ಇಲ್ಲಿ ಅಪ್ಪಟ ಪರಂಪರೆಯ ಬಗೆಗಿನ ಪ್ರಾಮಾಣಿಕ ಕಾಳಜಿಯನ್ನು ಕಾಣಬಹುದು. ಆಡಂಬರವಿಲ್ಲ. ಕಿರಿ ಕಿರಿಯಾಗುವ ಪ್ರಶ್ನೆಗಳಿಲ್ಲ. ಬೃಹತ್ ಜಾಲದ ಮಾಧ್ಯಮವಂತೂ ಇಲ್ಲವೇಇಲ್ಲ. ಸಾಮಾನ್ಯವಾಗಿ ದೊಡ್ಡ ಮಾಧ್ಯಮವಿದ್ದರೆ ಮಾತ್ರ ಕಲಾವಿದರು ತಮ್ಮನ್ನು ಉಧ್ಘಾಟಿಸುತ್ತಾರೆ. ಆದರೆ ಇಲ್ಲಿ ಮೂಂಡಬೈಲು ಶಾಸ್ತ್ರಿಗಳು ಆ ರೀತಿಯ ಯಾವ ಬಿಗುಮಾನವನ್ನು ತೋರಲಿಲ್ಲ. ಬಹುಶಃ ಇದು ಶಾಸ್ತ್ರಿಗಳಂತ ಸರಳ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮಾತ್ರವೇ ಸಾಧ್ಯ.

ಮಾಧ್ಯಮದ ಬಗ್ಗೆ ಸುಬ್ಬಣ್ಣ ತೆಲೆಕೆಡಿಸುವುದಿಲ್ಲ. ತಮ್ಮ ಆತ್ಮಕ್ಕೆ ಏನು ಬೇಕೋ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಿದ್ದಾರೆ. ಮೂಡಣದ ಬೈಲಿನ ಮಾತುಗಳಿಗೆ ಕಿವಿಯಾಗುತ್ತಾ ತಾವೇ ಮಾಧ್ಯಮವಾಗಿದ್ದಾರೆ. ಇಲ್ಲಿ ಸಹೃದಯ ಮಿತ್ರಬಳಗದ ಮಾಧ್ಯಮ ವಿಶಾಲವಾಗಿ ತೆರೆದುಕೊಳ್ಳುತ್ತದೆ ಅದಷ್ಟು ಧಾರಾಳ. ಮಾತಿಗಿಳಿದ ಸುಬ್ಬಣ್ಣನಿಗೂ ಮಾತುಗಾರ ಮೂಡಂಬೈಲು ಶಾಸ್ತ್ರಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು

*********************


ಕೃಪೆ : http://yakshachintana.blogspot.in/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ