ಯಕ್ಷಗಾನ ಪಾದಾರ್ಪಣೆ
ಎಳವೆಯಲ್ಲಿ ಯಕ್ಷಗಾನದ ಸೆಳೆತಕ್ಕೆ ಒಳಗಾಗಿ ತನ್ನ ಇಪ್ಪತ್ತನೆಯ ವಯಸ್ಸಿಗೆ ಪ್ರಸಿದ್ಧ ಗುಂಡಬಾಳ ಯಕ್ಷಗಾನ ಮೇಳದಲ್ಲಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಮುಂದೆ ಉಡುಪಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಗುರುಗಳಾದ ವೀರಭದ್ರ ನಾಯಕ, ವೆಂಕಟರಮಣ ಹೆರಂಜಾಲು, ನೀಲಾವರ ರಾಮಕೃಷ್ಣಯ್ಯ ಇವರುಗಳಿಂದ ಶಾಸ್ತ್ರೀಯ ನೃತ್ಯ ತರಬೇತಿಯ ಜೊತೆಗೆ ಡಾ| ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿ, ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ನಾರಣಪ್ಪ ಉಪ್ಪೂರರಲ್ಲಿ ಭಾಗವತಿಕೆ ತರಬೇತಿ ಪಡೆದರು.
ದೇಶದಾದ್ಯ೦ತ ಪ್ರದರ್ಶನ
ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ವಿಶೇಷ ತರಬೇತಿ ಪಡೆದು, ಹತ್ತು ವರ್ಷಗಳ ಕಾಲ ವೃತ್ತಿಮೇಳವಾದ ಇಡಗುಂಜಿ ಮೇಳದಲ್ಲಿ ಪ್ರಧಾನ ಸ್ತ್ರೀಪಾತ್ರ ಮಾಡುವ ಅವಕಾಶ ದೊರಕಿತು. ಹಾಗೆಯೇ ಅಮೃತೇಶ್ವರಿ ಯಕ್ಷಗಾನ ಮೇಳದಲ್ಲಿ ಒಂದು ವರ್ಷ, ಕರ್ಕಿಯ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮೇಳದಲ್ಲಿ ಹತ್ತು ವರ್ಷ ಮತ್ತು ಇತರ ಹವ್ಯಾಸಿ ಬಳಗಗಳಲ್ಲಿ ತನ್ನ ಕಲಾ ಪ್ರತಿಭೆಯನ್ನು ಮೆರೆದರು. ಮೇರುನಟ ಶಂಭು ಹೆಗಡೆಯವರ ನೇತೃತ್ವದಲ್ಲಿ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಪ್ರದರ್ಶನ ನೀಡಿದ್ದಲ್ಲದೆ, ಹೊಸದಿಲ್ಲಿ, ತಿರುವನಂತಪುರ, ಖಜುರಾಹೋ, ಬಾಲಗಂಧರ್ವೋತ್ಸವ, ಮೈಸೂರಿನ ವಿಶ್ವ ಕನ್ನಡ ಸಮ್ಮೇಳನ, ಸಾರ್ಕ್ ಸಮ್ಮೇಳನ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವುದರ ಜೊತೆಗೆ ವಿದೇಶಗಳಲ್ಲಿಯೂ ಮಿಂಚಿದ್ದು ಅವಿಸ್ಮರಣೀಯ.
ವಿಶ್ರಾ೦ತ ಜೀವನ
ಹೀಗೆ ಯಕ್ಷಗಾನದ ಪ್ರಧಾನ ಸ್ತ್ರೀ ಪಾತ್ರದಲ್ಲಿ ಹೆಸರು ಗಳಿಸುವುದರೊಂದಿಗೆ ಪುರುಷ ಪಾತ್ರ ಹಾಗೂ ಹಾಸ್ಯ ಪಾತ್ರಗಳಲ್ಲಿ ಮಿಂಚಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಈ ಕ್ಷೇತ್ರದಲ್ಲಿ ದುಡಿದ ಇವರಿಗೆ ಉದರಕ್ಕೆ ಸಂಬಂಧಿಸಿದ ತೀವ್ರ ತರದ ಅನಾರೋಗ್ಯ ಕಾಡಿ, ಶಸ್ತ್ರಚಿಕಿತ್ಸೆಯ ಅನಂತರ ಪತ್ನಿ ನೇತ್ರಾವತಿ ಹಾಗೂ ಮಕ್ಕಳಾದ ಅರ್ಪಿತಾ ಮತ್ತು ಅಕ್ಷತಾ ಜೊತೆಗೆ ಪುಟ್ಟ ಮನೆ- ಜಾಗದಲ್ಲಿ ಕೃಷಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕರ್ನಾಟಕ ಜಾನಪದ ಪರಿಷತ್‌ನ ದೊಡ್ಡಮನೆ ಪ್ರಶಸ್ತಿಯೊಂದಿಗೆ ಹತ್ತು ಹಲವು ಪ್ರತಿಷ್ಠಿತ ಯಕ್ಷಗಾನ ಸಂಘ, ಸಂಸ್ಥೆಗಳು ಇವರನ್ನು ಗೌರವಿಸಿವೆ. ಹಲವು ಕಡೆ ಸಂಪನ್ಮೂಲ ವ್ಯಕ್ತಿಯಾಗಿಯೂ ಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
|
ಶ್ರೀಧರ ಮಹಾಬಲೇಶ್ವರ ಷಡಕ್ಷರಿ |
 |
ಜನನ ಸ್ಥಳ |
: |
ಆನೆಗುಂದಿ, ಕತಗಾಲ
ಕುಮಟಾ, ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಪ್ರಮುಖವಾಗಿ ಸ್ತ್ರೀವೇಷಧಾರಿಯಾಗಿ ಗುಂಡಬಾಳ, ಹಂಗಾರಕಟ್ಟೆ, ಇಡಗುಂಜಿ, ಕರ್ಕಿ ಮೇಳಗಳಲ್ಲಿ ದುಡಿಮೆ.
|
ಪ್ರಶಸ್ತಿಗಳು:
- ಕರ್ನಾಟಕ ಜಾನಪದ ಪರಿಷತ್‌ನ ದೊಡ್ಡಮನೆ ಪ್ರಶಸ್ತಿ
- ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಕಲಾಪೀಠ ಕೋಟ (ರಿ.), ಮತ್ತು ಸಂಸ್ಕೃತಿ ಇಲಾಖೆಯ ಸಮ್ಮಾನಿಸಲಿರುವುದು
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
|
|
|