ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಲಾಲಿತ್ಯಪೂರ್ಣ ಸ್ತ್ರೀವೇಷಧಾರಿ ಹೆರಂಜಾಲು ಸುಬ್ಬಣ್ಣ ಗಾಣಿಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಜುಲೈ 31 , 2014

ಹಾರಾಡಿ ಕಲಾವಿದರ ಮೈಯ ರೇಖೆ, ಬಳುಕು, ಅಭಿನಯ, ಲಾಲಿತ್ಯಪೂರ್ಣ ರಂಗಚಲನೆ, ಲಾಸ್ಯದಿಂದ ಕೂಡಿದ ಹೆಜ್ಜೆಗಾರಿಕೆ, ಸುಮಧುರ ಕಂಠ ಮಾದುರ್ಯ, ಇವೆಲ್ಲವನ್ನು ಮೈಗೂಡಿಸಿಕೊಂಡವರು ಹೆರಂಜಾಲು ಸುಬ್ಬಣ್ಣ ಗಾಣಿಗರು. ಬಡಗು ತಿಟ್ಟು ಸಾಂಪ್ರದಾಯೀಕ ಯಕ್ಷಗಾನಕ್ಕೆ ಹೆರಂಜಾಲು ಕುಟುಂಬದವರ ಕೊಡುಗೆ ಅಪಾರ. ಸುಬ್ಬಣ್ಣ ಗಾಣಿಗರ ಸಹೋದರ ವೆಂಕಟರಮಣ ಗಾಣಿಗರಿಗೆ ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳಲ್ಲಿ ಅಪಾರ ಪರಿಣತಿಯಿದ್ದು ದಶಾವಾತಾರಿ ಎಂದು ಖ್ಯಾತರಾಗಿ ಉಡುಪಿ ಯಕ್ಷಗಾನ ಕೇಂದ್ರದ ಗುರುವಾಗಿಯೂ ಸೇವೆಸಲ್ಲಿಸಿದ್ದರು. ಅವರ ಪುತ್ರರಾದ ಹೆರಂಜಾಲು ಗೋಪಾಲ ಗಾಣಿಗರು ಪ್ರಸಿಧ್ಧ ಭಾಗವತರಾಗಿದ್ದು ಸದ್ಯ ಮಂದಾರ್ತಿ ಮೇಳದ ಪ್ರಧಾನ ಭಾಗವತರು. ಇನ್ನೋಬ್ಬ ಪುತ್ರ ಹೆರಂಜಾಲು ಬಾಲಕೃಷ್ಣ ಗಾಣಿಗರು ಮಾರಣಕಟ್ಟೆ ಮೇಳದ ಮದ್ದಳೆವಾದಕರು. ಇದೇ ಕುಟುಂಬದ ನಾರಾಯಣ ಗಾಣಿಗ ಮತ್ತು ತುಂಗಮ್ಮ ಗಾಣಿಗರು ಸುಬ್ಬಣ್ಣ ಗಾಣಿಗರ ತಂದೆ ತಾಯಿಯರು.

ಮೂರೂ ತಿಟ್ಟುಗಳಲ್ಲಿ ಸೈ

ಸುಬ್ಬಣ್ಣ ಗಾಣಿಗ ಆರಂಭದ ಗುರುಗಳು ಸಹೋದರ ವೆಂಕಟರಮಣ ಗಾಣಿಗರು. ಆರಂಭದಲ್ಲಿ ಹೂವಿನಕೋಲಿನಲ್ಲಿ ಬಾಗವಹಿಸಿ ಅನುಭವಗಳಿಸಿಕೊಂಡ ಇವರು ಹದಿಮೂರನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಪೀಠೀಕಾ ಸ್ತ್ರೀವೇಷದಿಂದ ಹಂತ ಹಂತವಾಗಿ ಮೇಲೇರಿ ಸಾಲಿಗ್ರಾಮ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಗುರುತಿಸಿಕೊಂಡರು. ತೆಂಕುತಿಟ್ಟಿನ ಇರಾ ಸೋಮನಾಥೇಶ್ವರ ಮೇಳ, ಕೊಲ್ಲೂರು, ಕುಂಡಾವು, ಇಡಗುಂಜಿ ಹೀಗೆ ಮೂರೂ ತಿಟ್ಟುಗಳಲ್ಲಿ ತಿರುಗಾಟ ಮಾಡಿ ಸೈ ಎಣಿಸಿಕೊಂಡವರು.

ಪಳ್ಳಿ ದಿ. ಸೋಮನಾಥ ಹೆಗ್ಡೆ ಮತ್ತು ದಿ. ಎಂ. ಎಂ. ಹೆಗ್ಡೆಯವರು ಜಂಟಿಯಾಗಿ ನಿರ್ವಹಿಸಿದ ಮಂದಾರ್ತಿ ಮೇಳಕ್ಕೆ ಪ್ರಧಾನ ಸ್ತ್ರೀವೇಷಧಾರಿಯಾಗಿ ಸೇರಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಶ್ರೀಕ್ಷೇತ್ರ ಮಂದಾರ್ತಿಯ ಅಭಿಮಾನಿಯಾದ ಇವರು ನಿವೃತ್ತರಾಗುವವರೆಗೆ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ದಿ.ಬೋಜರಾಜ ಹೆಗ್ಡೆಯವರ ಯಜಮಾನಿಕೆಯ ಮಂದಾರ್ತಿ ಮೇಳದಲ್ಲಿ ಮತ್ತ್ಯಾಡಿ ನರಸಿಂಹ ಶೆಟ್ಟಿ ಮತ್ತು ಹರಾಡಿ ಅಣ್ಣಪ್ಪ ಗಾಣಿಗರ ಹಿಮ್ಮೇಳದಲ್ಲಿ ಕೋಡಿ ಶಂಕರ ಗಾಣಿಗ, ಉಡುಪಿ ಬಸವ, ಮೊಳಹಳ್ಳಿ ಹೆರಿಯ, ಮಜ್ಜಿಗೆಬೈಲು ಆನಂದ ಶೆಟ್ಟರೊಂದಿಗೆ ಸುಬ್ಬಣ್ಣಗಾಣಿಗರ ಸ್ತ್ರೀವೇಷ ಅಪಾರ ಜನ ಮನ್ನಣೆ ಗಳಿಸಿತ್ತು.

ಐದು ದಶಕಗಳ ಸುದೀರ್ಘ ಕಲಾಸೇವೆ

ಶ್ರೀ ಮಂದಾರ್ತಿ ಕ್ಷೇತ್ರ ಮಹಾತ್ಮೆಯ ದೇವರತಿ, ದೇವಿ ಮಹಾತ್ಮೆಯ ದೇವಿ, ಆಗಿನ ಹೊಸ ಪ್ರಸಂಗಗಳಾದ ಸತಿ ಸುಶೀಲೆ, ಯಕ್ಷಲೋಕ ವಿಜಯದ ಪದ್ಮಾಕ್ಷಿ, ಚಿತ್ರಾವತಿಯ ಮದನಾಂಗಿ, ರೂಪಶ್ರೀ, ರತ್ನಶ್ರೀ, ಬಾಗ್ಯಶ್ರೀ ಮುಂತಾದ ಹೊಸ ಪ್ರಸಂಗಗಳ ಇವರ ಪಾತ್ರಗಳು ಅಪಾರ ಜನ ಮನ್ನಣೆ ಗಳಿಸಿದ್ದವು. ಹೊಸ ಪ್ರಸಂಗಗಳಲ್ಲೂ ಪೌರಾಣಿಕ ನೆಲೆಗಟ್ಟನ್ನು ಮೀರದೆ ಅಬಿನಯಿಸಿದ್ದು ಇವರ ಹೆಚ್ಚುಗಾರಿಕೆ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲೂ ಅಭಿನಯಿಸಿ ಸೈ ಎಣಿಸಿಕೊಂಡಿದ್ದಾರೆ. ಚಿತ್ರಾಂಗದೆ, ಸುಭದ್ರೆ, ದಮಯಂತಿ, ಕಯಾದು, ಚಂದ್ರಮತಿ, ಸೀತೆ ಮುಂತಾದ ಸ್ತ್ರೀ ಪಾತ್ರಗಳಿಗೆ ಹೊಸ ರೂಪವನ್ನು ನೀಡಿದ್ದಾರೆ. ಭಾಗವತರಾಗಿಯೂ ಪ್ರಸಿಧ್ಧರಾದ ಇವರು ಕಳುವಾಡಿ ಮೇಳವನ್ನು ಸ್ವತಹ ಮುನ್ನೆಡೆಸಿ ಯಜಮಾನಿಕೆಯ ಸಿಹಿ ಕಹಿಯನ್ನು ಸಹ ಉಂಡವರು.

ಸುಮಾರು ಐದು ದಶಕಗಳ ಸುದೀರ್ಘ ತಿರುಗಾಟದ ಅನಂತರ ಈಗ ತನ್ನದೇ ಗುರುಕುಲದಲ್ಲಿ ಆಸಕ್ತರಿಗೆ ಯಕ್ಷಗಾನದ ತರಬೇತಿ ನೀಡುತ್ತಿರುವ ಇವರನ್ನು ಸುಮಾರು ಮೂವತ್ತಕ್ಕೂ ಅಧಿಕ ಸಂಘಟನೆಗಳು ಸನ್ಮಾನಿಸಿವೆ. ಕಳೆದ ಸಾಲಿನ ಉಡುಪಿ ಯಕ್ಷಗಾನ ಕಲಾರಂಗದ ಕೋಟ ವೈಕುಂಠ ಪ್ರಶಸ್ತಿಯೂ ಇವರಿಗೆ ಸಂದಿದೆ.
ಹೆರಂಜಾಲು ಸುಬ್ಬಣ್ಣ ಗಾಣಿಗ
ಜನನ :  
ಜನನ ಸ್ಥಳ : ಹೆರಂಜಾಲು, ಬೈ೦ದೂರು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ತೆ೦ಕು, ಬಡಗು ಹಾಗೂ ಬಡಾಬಡಗು ಮೂರೂ ತಿಟ್ಟಿನಲ್ಲಿ ಸ್ತ್ರೀವೇಷಧಾರಿಯಾಗಿ ೫೦ ವರ್ಷಗಳಿಗೂ ಮಿಕ್ಕಿ ಸಾಲಿಗ್ರಾಮ, ಇರಾ ಸೋಮನಾಥೇಶ್ವರ ಮೇಳ, ಕೊಲ್ಲೂರು, ಕುಂಡಾವು, ಇಡಗುಂಜಿ, ಮಂದಾರ್ತಿ ಮೇಳಗಳಲ್ಲಿ ದುಡಿಮೆ.
ಪ್ರಶಸ್ತಿಗಳು:
  • ಉಡುಪಿ ಕಲಾರ೦ಗದ ಕೋಟ ವೈಕು೦ಠ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು

ಮಾದರಿ ಸಂತ್ರಪ್ತ ಕುಟುಂಬ

ನಾಲ್ವರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳ ಸಂತ್ರಪ್ತ ಕುಟುಂಬ ಸುಬ್ಬಣ್ಣ ಗಾಣಿಗರದ್ದು. ಅವರ ಮಕ್ಕಳು ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಉನ್ನತ ಪದವಿಯನ್ನು ಪಡೆದಿದ್ದಾರೆ. ಒಬ್ಬ ಪುತ್ರ ವೈದ್ಯಕೀಯ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿದ್ದಾರೆ. ಪುತ್ರಿಯರಿಗೂ ಉನ್ನತ ಶಿಕ್ಷಣವನ್ನು ನೀಡಿದ ಇವರು ಇತರ ಕಲಾವಿದರಿಗೆ ಮಾದರಿಯಾಗಿದ್ದಾರೆ. ತನ್ನೆಲ್ಲಾ ಕಾರ್ಯ ಚಟುವಟಿಕೆಗಳಿಗೆ ಮಂದಾರ್ತಿ ದೇವಿಯೇ ಪ್ರೇರಣೆ ಎಂದು ಗಾಣಿಗರು ವಿನಮ್ರರಾಗಿ ನುಡಿಯುತ್ತಾರೆ.

****************





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ