ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಪ್ರಸ೦ಗ
Share
ಶ್ರೀದೇವಿ ಮಹಾತ್ಮೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜನವರಿ 1 , 2013

ಪ್ರಸ೦ಗ ಕತೃ : ಶ್ರೀ ಬಲಿಪ ನಾರಾಯಣ ಭಾಗವತ

ಯಕ್ಷಗಾನದಲ್ಲಿ ಅತ್ಯಂತ ಪ್ರಮುಖ ಪ್ರಸಂಗ- ದೇವಿ ಮಹಾತ್ಮೆ. ಸೃಷ್ಟಿಯ ಆದಿಯಿಂದಲೇ ಈ ಪ್ರಸಂಗ ಆರಂಭಗೊಳ್ಳುತ್ತದೆ. ದೇವಿ ಮಹಾತ್ಮೆಯಲ್ಲಿ ಜಗತ್ತಿನ ಸೃಷ್ಟಿ, ನಂತರದಲ್ಲಿ ಜಗದ ಉದ್ಧಾರಕ್ಕಾಗಿ ಜಗಜ್ಜನನಿಯ ಅವತಾರಗಳು ಮತ್ತು ರೂಪಾಂತರಗಳ ಚಿತ್ರಣವಿದೆ.

ತ್ರಿಮೂರ್ತಿಗಳ ಜನನ

ಎತ್ತ ನೋಡಿದರೂ ಮಹಾನ್ ಸಾಗರ. ಭೂಮಿಯ ಸುಳಿವೇ ಇಲ್ಲ. ಇಂತಹ ಘೋರ ಶರದಿಯ ಮಧ್ಯದಲ್ಲಿ ತ್ರಿಮೂತಿಗಳ ಜನನವಾಗುತ್ತದೆ. ತಮ್ಮ ಜನನಕ್ಕೆ ಕಾರಣಕರ್ತರಾರೆಂದು ಇವರು ಚಿಂತಿಸುತ್ತಿರಬೇಕಾದರೆ ಜಗನ್ಮಾತೆ ಪ್ರಕಟಗೊಂಡು ಜನ್ಮ ರಹಸ್ಯವನ್ನು ತಿಳಿಸಿ ಅವರಿಗೆ ಬ್ರಹ್ಮ, ವಿಷ್ಣು, ಮಹೇಶ್ವ್ಟರರೆಂದು ನಾಮಕರಣ ಮಾಡುತ್ತಾಳೆ. ನಂತರ ಅವರಿಗೆ ಅವರದ್ದೇ ಆದ ಜವಾಬ್ದಾರಿಗಳನ್ನೂ ನೀಡುತ್ತಾಳೆ. ಬ್ರಹ್ಮ, ರಾಜಸ್ವ ಗುಣದಿಂದ ಕೂಡಿದ ಕಾರಣ ಸೃಷ್ಟಿ ಕಾರ್ಯವನ್ನೂ, ವಿಷ್ಣುವು ಸೌಮ್ಯ ಸ್ವಭಾವದವನಾದ್ದರಿಂದ ಪಾಲನಾ ಕಾರ್ಯವನ್ನೂ (ಸ್ಥಿತಿ), ಈಶ್ವರನು ಉಗ್ರ ಸ್ವರೂಪಿಯಾದ್ದರಿಂದ ಆತನಿಗೆ ಲಯಕರ್ತನ ಜವಾಬ್ದಾರಿಯನ್ನೂ ನೀಡುತ್ತಾಳೆ. ಯಾವುದದಾದರೂ ಸಮಸ್ಯೆಗಳಿದ್ದಲ್ಲಿ ನನ್ನನ್ನೇ ಭಕ್ತಿಯಿಂದ ಸ್ಥುತಿಸಿದರೆ ಅಭಯವನ್ನು ನೀಡುವುದಾಗಿ ಅನುಗ್ರಹಿಸಿ ಅಂತರ್ದಾನಳಾಗುತ್ತಾಳೆ.

ಮಧು ಕೈಟಭರ ವಧೆ

ಇಷ್ಟಾಗುವಾಗ ತ್ರಿಮೂತಿಗಳಲ್ಲಿ ತಮ್ಮಲ್ಲಿ ದೊಡ್ಡವವರಾರೆಂಬ ಪ್ರಶ್ನೆ ಮೂಡುತ್ತದೆ. ಬ್ರಹ್ಮ ತಾನೇ ದೊಡ್ಡವನೆಂದರೆ ವಿಷ್ಣು ನಾನು ಎನ್ನುತ್ತಾನೆ. ಈಶ್ವರ ಹರಿ-ಹರರಲ್ಲಿ ಭೇದವಿಲ್ಲ ಎಂದು ಹರಿಯಲ್ಲಿ ಐಕ್ಯಗೊಳ್ಳುತ್ತಾನೆ. ನಂತರ ವಿಷ್ಣುವು ಬ್ರಹ್ಮನ ಬಾಯಿಯ ಮೂಲಕ ಆತನ ಉದರ ಹೊಕ್ಕು ಪರಿಶೀಲಿಸುತ್ತಾನೆ. ಎತ್ತ ನೋಡಿದರೂ ಚಿನ್ನದ ಗಟ್ಟಿಯೇ ಕಂಡುಬಂದು ಚಕಿತಗೊಳ್ಳುತ್ತಾನೆ. ಆಗಲೇ ಬ್ರಹ್ಮ, ತನ್ನ ನವದ್ವಾರಗಳ ಪೈಕಿ ಗುದವೊಂದನ್ನು ಬಿಟ್ಟು 8 ದ್ವಾರಗಳನ್ನು ಮುಚ್ಚುತ್ತಾನೆ. ಹರಿ ವಿಧಿಯಿಲ್ಲದೇ ಗುದದ್ವಾರದ ಮೂಲಕವೇ ಹೊರ ಬರುವ ಕಾರಣ ಆತನಿಗೆ ಅಧೋಕ್ಷಜ ಎಂಬ ಹೆಸರು ಅನ್ವರ್ಥವಾಗುತ್ತದೆ. ಬ್ರಹ್ಮನ ಗಭದಲ್ಲಿ ಹಿರಣ್ಯವೇ(ಚಿನ್ನ) ತುಂಬಿರುವುದರಿಂದ ಆತ ಹಿರಣ್ಯಗರ್ಭನಾಗುತ್ತಾನೆ.

ದೇವಿ ಮಹಾತ್ಮೆ
ಪ್ರಮುಖ ಪಾತ್ರಗಳು : ದೇವಿ
ಬ್ರಹ್ಮ
ವಿಷ್ಣು
ಮಹೇಶ್ವ್ಟರ
ಮಧು-ಕೈಟಭ
ಮಹಿಷಾಸುರ
ವಿದ್ಯುನ್ಮಾಲಿ
ಮಾಲಿನಿ
ಚ೦ಡ-ಮು೦ಡ
ರಕ್ತಬೀಜ
ಶು೦ಭ-ನಿಶು೦ಭ
ಇತರ ಪಾತ್ರಗಳು : ರಕ್ತೇಶ್ವರಿ
ಭದ್ರಕಾಳಿ
ದೂತ
ಋಷಿ
ನಂತರದ ಸರದಿ ಬ್ರಹ್ಮನದ್ದು. ಬ್ರಹ್ಮ ವಿಷ್ಣುವಿನ ಬಾಯಿಯ ಮೂಲಕ ಉದರ ಹೊಕ್ಕು ನೋಡಿದರೆ ಆತನಿಗೆ ಬ್ರಹ್ಮಾಂಡವೇ ಕಾಣುತ್ತದೆ. ದ್ವಾದಶ (12) ಬ್ರಹ್ಮರೂ ಕಾಣುತ್ತಾರೆ. (ಒಂದೊಂದು ಯುಗದ ನಂತರವೂ ಮತ್ತೊಂದು ಯುಗ ಆರಂಭವಾಗುತ್ತದೆ ಎಂಬುದಕ್ಕೆ ಪುರಾಣದಲ್ಲಿನ ಪುರಾವೆಯಿದು.) ಒಂದೆಡೆ ಈಶ್ವರನೂ ಕಾಣುತ್ತಾನೆ. ಬ್ರಹ್ಮ 8 ದ್ವಾರ ಮುಚ್ಚಿದ್ದ. ವಿಷ್ಣು ನವದ್ವಾರಗಳನ್ನೆಲ್ಲ ಮುಚ್ಚಿ ನಿದ್ರೆ ಹೋಗುತ್ತಾನೆ. ಈಗಲೇ ಮಧು-ಕೈಟಭರ ಜನನವಾಗುವುದು. ವಿಷ್ಣು ತನ್ನ ಕಿವಿಯಿಂದ ತೆಗೆದೆಸೆದ ಕಶ್ಮಲದಿಂದ (ವ್ಯಾಕ್ಸ್) ಇವರೀವರ ಜನನವಾಗುತ್ತದೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ತಪ್ಪು ಭಾವನೆ ಎಂದರೆ ಮಧು-ಕೈಟಭರು ರಾಕ್ಷಸರು ಎಂಬುದು. ಆದರೆ, ಅವರು ರಾಕ್ಷಸರಲ್ಲ. ವಿಷ್ಣುವೇ ಅವರ ಅಪ್ಪ. ಹಸಿವಿನಿಂದ ಕಂಗೆಟ್ಟ ಮಧು-ಕೈಟಭರು ಬ್ರಹ್ಮನನ್ನು ತಿನ್ನಲು ಮುಂದಾದಾಗ ಬ್ರಹ್ಮ ವಿಷ್ಣುವನ್ನು ಪ್ರಾರ್ಥಿಸುತ್ತಾನೆ. ಬ್ರಹ್ಮನನ್ನು ರಕ್ಷಿಸಲೋಸುಗ ವಿಷ್ಣು ಮಧು-ಕೈಟಭರೊಂದಿಗೆ ಯುದ್ಧ ಆರಂಭಿಸುತ್ತಾನೆ.

ವಿಷ್ಣು ಒಬ್ಬ, ಮಧು-ಕೈಟಭರು ಇಬ್ಬರು. ಮಧುವಿಗೆ ಸುಸ್ತಾದಾಗ ಕೈಟಭ, ಕೈಟಭನಿಗೆ ಸುಸ್ತಾದಾಗ ಮಧು ಎಂದು ಪಾಳಿಯಲ್ಲಿ ಯುದ್ಧ ಮುಂದುವರಿಸುತ್ತಾರೆ. ವಿಷ್ಣು ಒಬ್ಬನೇ ಸೆಣಸುತ್ತಾ ಒಂದು ಹಂತದಲ್ಲಿ ಸೋಲಿನ ಭೀತಿಯನ್ನು ಎದುರಿಸುತ್ತಾನೆ. ದಿಕ್ಕು ತೋಚದೆ ಆದಿ ಮಾಯೆಯನ್ನು ಸ್ತುತಿಸುತ್ತಾನೆ. ಆದಿಮಾಯೆ ಆಕಾಶದಲ್ಲಿ ಮಾಯೆಯ ರೂಪದಲ್ಲಿ ಕಾಣಿಸಿಕೊಂಡು ಮಧು-ಕೈಟಭರಲ್ಲಿ ಚಂಚಲತೆ ಮೂಡಿಸುತ್ತಾಳೆ. ಯುದ್ಧದಲ್ಲಿ ಇರಬೇಕಾದ ಏಕಾಗ್ರತೆ ತಪ್ಪಿ ಹೋಗುತ್ತದೆ. ಆಗ ವಿಷ್ಣು ಅವರನ್ನು ಘಾಸಿಗೊಳಿಸುತ್ತಾನೆ. ಸಾವಿನ ನೋವಲ್ಲಿ ನರಳುತ್ತಿದ್ದ ಮಧು-ಕೈಟಭರಿಗೆ ಜನ್ಮ ರಹಸ್ಯವನ್ನು ತಿಳಿಸಿ ಅನುಗ್ರಹಿಸುತ್ತಾನೆ. ಸಾವು ಬಂತೆಂದು ನೀವು ಮರುಗಬೇಕಿಲ್ಲ. ಲೋಕದ ಸೃಷ್ಟಿಗಾಗಿ ನಿಮ್ಮ ಕೊಡುಗೆ ಅಗತ್ಯವಿತ್ತು ಎಂದು ಅವರ ಚರ್ಮದಿಂದ ಭೂಮಿಯನ್ನು ನಿರ್ಮಿಸುತ್ತಾನೆ.

ಅದೇ ಹೊತ್ತಿಗೆ, ವಿಷ್ಣುವಿನ ಉದರದೊಳಗಿರುವ ಬ್ರಹ್ಮ, ಹೊರ ಬರಲು ದಾರಿ ಕಾಣದೆ ಪರಿತಪಿಸುತ್ತಾನೆ. ಜಗನ್ಮಾತೆಯ ಸ್ಮರಣೆ ಮಾಡಿದಾಗ, ವಿಷ್ಣುವಿನ ನಾಭಿಯಿಂದ (ಹೊಕ್ಕುಳು) ಹೊರ ಬರಲು ಸೂಚಿಸುತ್ತಾಳೆ. ಬ್ರಹ್ಮ ಹೊರಬಂದಾಗ, ಹಸಿವಿನಿಂದ ಕಂಗೆಟ್ಟಿದ್ದ ಮಧು-ಕೈಟಭರು ಆತನ ಮೇಲೆ ಆಕ್ರಮಣ ಮಾಡುತ್ತಾರೆ. ಬ್ರಹ್ಮ "ನಾರಾಯಣ.. ನಿನಗಿಂತ ಹಿರಿಯರಿಲ್ಲ" ಎಂದು ವಿಷ್ಣುವಿನ ಮೊರೆ ಹೋಗುತ್ತಾನೆ. ನಂತರ ವಿಷ್ಣು ಚಕ್ರಾಯುಧದಿಂದ ಮಧು-ಕೈಟಭರ ವಧೆ ಮಾಡಿ ಭೂಮಿಯನ್ನು ನಿರ್ಮಿಸುತ್ತಾನೆ.

ಮಹಿಷಾಸುರ ವಧೆ

ಮಹಿಷಾಸುರನ ಜನನದಿಂದ ಸಾವಿನ ವರೆಗಿನ ಕಥಾ ಹಂದರವನ್ನು ಇದು ಒಳಗೊಂಡಿದೆ. ವಿದ್ಯುನ್ಮಾಲಿ ಮತ್ತು ಮಾಲಿನಿ ರಾಕ್ಷಸ ದಂಪತಿಗೆ ಬಹುಕಾಲ ಮಕ್ಕಳಿರಲಿಲ್ಲ. ಹೇಗಾದರೂ ಪುತ್ರಪ್ರಾಪ್ತಿಯಾಗಲೇಬೇಕೆಂದು ನಿರ್ಧರಿಸಿದ ಮಾಲಿನಿ ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ಕಾಡಿಗೆ ತೆರಳಿ ಮಹಿಷಿ ಅಂದರೆ ಎಮ್ಮೆಯ ರೂಪದಲ್ಲಿ ತಪಸ್ಸಿಗೆ ತೊಡಗುತ್ತಾಳೆ. ಆಕೆಯ ಕಠೋರ ತಪಸ್ಸಿನಿಂದ ಹೊಮ್ಮುವ ಶಾಖ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಠನಾದ ಋಷಿ ಜ್ಞಾನದೃಷ್ಟಿಯಿಂದ ಮಾಲಿನಿ ತಪಸ್ಸನ್ನಾಚರಿಸುವುದನ್ನು ತಿಳಿದುಕೊಳ್ಳುತ್ತಾನೆ. "ಮಹಿಷಿಯ ರೂಪದಲ್ಲಿ ತಪಸ್ಸಾನಚರಿಸುತ್ತಿರುವುದರಿಂದ ನಿನ್ನ ಹೊಟ್ಟೆಯಲ್ಲಿ ಮಹಿಷ ಅಂದರೆ ಕೋಣವೇ ಜನ್ಮತಾಳಲಿ" ಎಂದು ಶಪಿಸುತ್ತಾನೆ. ಇದರ ಫಲವೇ ಮಹಿಷಾಸುರನ ಜನನ. ಮಹಿಷಾಸುರ ಬೆಳಯುತ್ತಿದ್ದ.

ಒಮ್ಮೆ ವಿದ್ಯುನ್ಮಾಲಿ ದೇವೇಂದ್ರನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದಲ್ಲಿ ವಿದ್ಯುನ್ಮಾಲಿಯ ಸೇನೆ ಸೋತು, ಆತ ಸಾವನ್ನಪ್ಪುತ್ತಾನೆ. ಇದರ ಸೇಡು ತೀರಿಸಿಕೊಳ್ಳಲು ಬಾಲಕ ಮಹಿಷ ಹೊರಟಾಗ ಮಾಲಿನಿ ತಡೆದು, ತಪಸ್ಸನ್ನಾಚರಿಸಿ ಶಕ್ತಿ ಸಂಪಾದಿಸಿಕೊಳ್ಳುವಂತೆ ಮಹಿಷನಿಗೆ ಸೂಚಿಸುತ್ತಾಳೆ. ಅದರಂತೆ ತಪಸ್ಸನ್ನಾಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವರ ಪಡೆಯುತ್ತಾನೆ. ವರಬಲದಿಂದ ಕೊಬ್ಬಿದ ಮಹಿಷ ದೇವಾದಿ ದೇವತೆಗಳನ್ನು ಸೋಲಿಸುತ್ತಾರೆ. ದೇವತೆಗಳು ಯಥಾಪ್ರಕಾರ ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳು ಆದಿಮಾಯೆಯನ್ನು ಸ್ತುತಿಸಲು ಸೂಚಿಸುತ್ತಾರೆ. ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ಆದಿಮಾಯೆ ಮಹಿಷಾಸುರನನ್ನು ಕೊನೆಗಾಣಿಸುತ್ತಾಳೆ. ಅಲ್ಲಿಂದ ತರುವಾಯ ಆಕೆ, ಮಹಿಷಾಸುರಮರ್ದಿನಿಯಾಗಿ ಭಕ್ತರ ಹೃದಯಮಂದಿರದಲ್ಲಿ ನೆಲೆಸುತ್ತಾಳೆ.

ಚ೦ಡ-ಮು೦ಡ, ರಕ್ತಬೀಜಾಸುರ , ಶು೦ಭ-ನಿಶು೦ಭ ವಧೆ

ಇಷ್ಟಾದರೂ ದಾನವರ ಉಪಟಳ ಕಡಿಮೆಯಾಗುತ್ತದೆಯೆ? ಇಲ್ಲ. ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಕ್ಷಾದಿ ಅಸುರರ ಜನನವಾಗುತ್ತದೆ. ದೇವತೆಗಳಿಗೆ ಇವರಿಂದ ಉಪಟಳ ಶುರು. ಮತ್ತೆ ಜಗನ್ಮಾತೆಯನ್ನೇ ಸ್ತುತಿಸುತ್ತಾರೆ. ಜಗನ್ಮಾತೆ ಅಸುರರನ್ನು ಮುಗಿಸುವ ಭರವಸೆ ನೀಡಿ, ವೃಂದಾವನದಲ್ಲಿ ಶಾಂಭವೀ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ಸಂಗೀತ ಗಾಯನ ಮಾಡುತ್ತಾ, ಉಯ್ಯಾಲೆಯಾಡುತ್ತಾ ವಿಹರಿಸುತ್ತಾಳೆ. (ಸಂಗೀತದಲ್ಲಿ ಶಾಂಭವೀ ರಾಗ ಎಂದೇ ಇದೆ.) ಆಕೆಯ ವಿಚಾರ ತಿಳಿವ ಶುಂಭಾಸುರ ದೇವಿಯನ್ನು ವರಿಸಲು ಮುಂದಾಗುತ್ತಾನೆ. ಯಾರು ಎಷ್ಟು ಬುದ್ಧಿವಾದ ಹೇಳಿದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ದೂತನ ಮೂಲಕ ದೇವಿಗೆ ತನ್ನನ್ನು ಮದುವೆಯಾಗುವಂತೆ ಹೇಳಿ ಕಳುಹಿಸುತ್ತಾಳೆ. ದೇವಿ "ಶುಂಭನೇ ಬರಲಿ ಶಂಭುವೇ ಬರಲಿ ಅಂಜುವುದಿಲ್ಲ" ಎಂದು ಹೇಳಿಕಳುಹಿಸುತ್ತಾಳೆ. ಇಷ್ಟಕ್ಕೇ ಶುಂಭ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಧೂಮ್ರಾಕ್ಷನನ್ನು ಕಳುಹಿಸುತ್ತಾನೆ. ದೇವಿ ಕಣ್ಣ ನೋಟದಿಂದಲೇ ಧೂಮ್ರಾಕ್ಷನನ್ನು ಸುಟ್ಟುಬಿಡುತ್ತಾಳೆ. ಕ್ರೋಧಗೊಂಡ ಶುಂಭ ಚಂಡ-ಮುಂಡರನ್ನು ಕಳುಹಿಸುತ್ತಾನೆ. ದೇವಿ ಭದ್ರಕಾಳಿಯಾಗಿ ಚಂಡ-ಮುಂಡರ ಶಿರವನ್ನು ಚಂಡಾಡುತ್ತಾಳೆ. ನಂತರದ ಸರದಿ ರಕ್ತಬೀಜಾಕ್ಷನದ್ದು. ಈತನ ದೇಹದ ರಕ್ತ ನೆಲಕ್ಕೆ ಸೋಕಿದರೆ ಕೋಟಿ ಕೋಟಿ ಸಂಖ್ಯೆಯ ರಾಕ್ಷಸರು ಹುಟ್ಟುವ ವರವನ್ನು ಪಡೆದವ ರಕ್ಷಬೀಜಾಕ್ಷ. ಈತನನ್ನು ರಕ್ತೇಶ್ವರಿಯಾಗಿ ರೂಪಾಂತರಗೊಂಡು ವಧಿಸುತ್ತಾಳೆ ಜಗನ್ಮಾತೆ. ಶುಂಭ-ನಿಶುಂಭರನ್ನು ಶಾಂಭವಿಯಾಗಿಯೇ ಸಂಹರಿಸುತ್ತಾಳೆ.

ಯಕ್ಷಗಾನ ಆಟ

ದೇವಿ ಮಹಾತ್ಮೆಯನ್ನೇ ಹೆಚ್ಚಾಗಿ ಆಡುವ ಮೇಳಗಳೆಂದರೆ- ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಮತ್ತು ಮಾರಣಕಟ್ಟೆ ಯಕ್ಷಗಾನ ಮಂಡಳಿ. ಉಳಿದ ಮೇಳಗಳೂ ಆಡುತ್ತವೆ. ಆದರೆ, ಈ ಮೇಳಗಳದ್ದು ವಿಶೇಷ. ದೇವಿ ಮಹಾತ್ಮೆ ಆಟ ಆಡಿಸುತ್ತೇನೆಂದು ಹರಕೆ ಹೊತ್ತರೆ ಇಷ್ಟಾರ್ಥಗಳು, ಮನೋಕಾಮನೆಗಳು ನೆರವೇರುತ್ತವೆ. ದೇವಿ ಮಹಾತ್ಮೆ ಪ್ರಸಂಗ ರಾತ್ರಿ 8-8.30ರ ಹೊತ್ತಿಗೆ ಆರಂಭವಾದರೆ ಮಂಗಳವಾಗುವುದು ಬೆಳ್ಳಂಬೆಳಗ್ಗೆ 6 ಗಂಟೆಗೆ. ಇಷ್ಟು ಹೊತ್ತು ಇಲ್ಲದಿದ್ದರೆ ಪ್ರಸಂಗವನ್ನು ಸರಿಯಾಗಿ ಆಡಲಾಗುವುದಿಲ್ಲ.

ವಿಶೇಷ:

ದೇವಿ ಮಹಾತ್ಮೆ ಪ್ರಸಂಗದ ವಿಶೇಷಗಳು ಹಲವು. ಉಳಿದ ಯಾವುದೇ ಪ್ರಸಂಗದಲ್ಲಿ ಇಲ್ಲದಂತಹ ಹಲವಾರು ಅಂಶಗಳನ್ನು ಇದರಲ್ಲಿ ಕಾಣಬಹುದು. ಅವುಗಳನ್ನು ಪಟ್ಟಿ ಮಾಡುತ್ತಾ ಹೋಗುವುದಾದರೆ
  • ಗಣಪತಿ ಸ್ತುತಿಯೊಂದಿಗೆ ಪ್ರಸಂಗದ ಪದ್ಯ ಆರಂಭವಾದರೆ ಮಂಗಳದ ವರೆಗೆ ಒಂದೇ ಒಂದು ಪದವನ್ನೂ ಬಿಡುವಂತಿಲ್ಲ. ಸಮಯ ಇಲ್ಲ, ಬೇಗ ಮುಗಿಸಬೇಕೆಂಬ ಆತುರದಲ್ಲಿ ಪದ್ಯ ಪೂರ್ತಿ ಮಾಡದೇ ಇರುವಂತಿಲ್ಲ.
  • ದೇವಿಯ ವೇಷ ಮಾಡುವಾಗ ಸಾಮಾನ್ಯವಾಗಿ ಬಳಸುವ 3 ಬಣ್ಣಗಳ ಜೊತೆಗೆ ಕಪ್ಪು ಬಣ್ಣವನ್ನು ಹೆಚ್ಚಿಗೆ ಬಳಸುತ್ತಾರೆ. ಇಲ್ಲವಾದರೆ, ವೇಷಧಾರಿ ಶರೀರದಲ್ಲೇ ದೇವಿ ಪ್ರಕಟೊಳ್ಳುತ್ತಾಳೆ.
  • ದೇವಿ ವೇಷಧಾರಿ ಆಟದ ದಿನ ಸಂಪೂರ್ಣ ವೃತದಲ್ಲಿರಬೇಕಾಗುತ್ತದೆ. ಮಧು-ಮಾಂಸ ಸೇವಿಸಬಾರದು. ಒಪ್ಪತ್ತು ಊಟವನ್ನೇ ಮಾಡಬೇಕು. ಅಂದು ಸ್ತ್ರೀಸಂಗವನ್ನೂ ಮಾಡಬಾರದು.
  • ಕುಂಬಳಕಾಯಿ ಒಡೆಯುವುದು- ಒಬ್ಬೊಬ್ಬ ರಾಕ್ಷಸನ ವಧೆಯಾಗುತ್ತಿದ್ದಂತೆ ಒಂದೊಂದು ಕುಂಬಳಕಾಯಿ ಒಡೆದು ಅದಕ್ಕೆ ಕುಂಕುಮ ಹಚ್ಚಲಾಗುತ್ತದೆ. ಇದು, ದೇವಿಗೆ ಅಸುರರನ್ನು ಬಲಿ ಕೊಡುವುದರ ಸಂಕೇತ.
  • ಪ್ರತಿಯೊಬ್ಬ ರಾಕ್ಷಸನ ವಧೆಯಾಗುವಾಗಲೂ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ.
ಕೃಪೆ : http://dheemkita.blogspot.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Eshwarachari h v achar(7/8/2016)
Good
ramakrishna(1/29/2015)
ತನ್ನ ನವದ್ವಾರಗಳ ಪೈಕಿ ಗುದವೊಂದನ್ನು ಬಿಟ್ಟು 8 ದ್ವಾರಗಳನ್ನು ಮುಚ್ಚುತ್ತಾನೆ. ಹರಿ ವಿಧಿಯಿಲ್ಲದೇ ಗುದದ್ವಾರದ ಮೂಲಕವೇ ಹೊರ ಬರುವ ಕಾರಣ ಆತನಿಗೆ ಅಧೋಕ್ಷಜ ಎಂಬ ಹೆಸರು ಅನ್ವರ್ಥವಾಗುತ್ತದೆ. ಈ ಕಥೆ ಮಾರ್ಕಾಂಡೇಯ ಪುರಾಣದಲ್ಲಿ ಬರುವುದಿಲ್ಲ. ಹಿಂದೆ ಯಾವುದೋ ಕಾರಣದಿಂದ ಕಲಾವಿದ ಈ ವಿಚಾರವನ್ನು (ಅಣಕು ಮಾಡುವ ಉದ್ದೇಶದಿಂದ )ಹೇಳಿದ ಅದನ್ನೆ ವಿಚಾರವಂತರು ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ. ಅಧೋಕ್ಷಜ ಎನ್ನುವ ಶಬ್ದಕ್ಕೆ ಅರ್ಥ ಬೇರೆ ಇದೆ. ಅದರ ಸಂದರ್ಭವೂ ಬೇರೆಯಾಗಿದೆ.
P Shrinivas Kamath(5/8/2014)
Very informative
M.L.Bhat,Sagar(11/23/2013)
some more roles reqd...Diti, Malinidoota, Shankha,Durga, Bidala,Devendra,Sugreeva Dhoomraksha,Saptamatrakeyaru, Beejadigalu.Rakteshwari patri.
ಪ್ರಸ೦ಗಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ