ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಂಚಿನ ಕಂಠದ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಏಪ್ರಿಲ್ 15 , 2014

ಇದು ಸುಮಾರು ಅರವತ್ತು ದಶಕಗಳ ಹಿಂದಿನ ಮಾತು. ಹಂಗಾರಕಟ್ಟೆಯಲ್ಲಿ ಮಂದಾರ್ತಿ ಮತ್ತು ಅಮೃತೇಶ್ವರಿ ಮೇಳಗಳ ಜೋಡಾಟ ತೀವ್ರ ಪೈಪೋಟಿಯಿಂದ ನೆಡೆದಿತ್ತು. ಸೈ೦ಧವ ವಧೆ ಪ್ರಸಂಗದಲ್ಲಿ ಸಮಸಪ್ತಕರನ್ನು ಸದೆ ಬಡಿದ ಅರ್ಜುನನಾಗಿ ಬಡಗುತಿಟ್ಟಿನ ದಂತ ಕಥೆ ಹಾರಾಡಿ ದಿ.ಕುಷ್ಟ ಗಾಣಿಗರು ತನ್ನ ಪಾಳಯಕ್ಕಾಗಿ ಹಿಂದಿರುಗುವಾಗ ಮಂಗಳಾಂಗಿನಿಯರು ಆರತಿಯೆತ್ತಿ ಸ್ವಾಗತಿಸುತ್ತಾರೆ. ಭಾಗವತರು ”ರತುನದಾರತಿಯೆತ್ತಿ” ಪದವನ್ನು ಏರು ಧ್ವನಿಯಲ್ಲಿ ಹಾಡುತಿದ್ದಂತೆ ಅಪಶಕುನದ ಛಾಯೆ ಗುರುತಿಸಿದ ಅರ್ಜುನ ಆರತಿ ತಟ್ಟೆಯನ್ನು ಬಲಗೈಯಿಂದ ಎತ್ತಿ ಹಾರಿಸಿದಾಗ ಭಾಗವತರ ಸನಿಹದಲ್ಲೇ ತಟ್ಟೆ ಬಿತ್ತಾದರೂ ಅದೇ ತಾದಾತ್ಮ್ಯ ಹೊಂದಿ ಭಾಗವತರು ಹಾಡುತಿದ್ದರು. ಇಂದೆಲ್ಲಾ ಇದು ಗತ ವೈಭವವಾಗಿ ಕಂಡರೂ ಅಂದಿನ ಇಂತಹ ರಸ ರೋಮಾಂಚನಗೊಳಿಸುವ ಘಟನೆಗಳ ಸರಮಾಲೆಯನ್ನೇ ನಮ್ಮೆದುರು ತೆರೆದಿಡುವ ಹಿರಿಯ ಸಂಪ್ರದಾಯದ ಶೈಲಿಯ ಭಾಗವತರೊಬ್ಬರು ನಮ್ಮ ನಡುವೆ ಇದ್ದಾರೆ ಅವರೇ ಬಡಗಿನ ಅತ್ಯಂತ ಹಿರಿಯ 84 ವರ್ಷ ವಯಸ್ಸಿನ ಮತ್ಯಾಡಿ ನರಸಿಂಹ ಶೆಟ್ಟರು.

ಕುಂದಾಪುರ ತಾಲೂಕಿನ ಯಕ್ಷಗಾನದ ಆಡೊಂಬಲವಾದ ಹಳ್ಳಾಡಿ ಸಮೀಪ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ 1929ರಲ್ಲಿ ರಾಮಣ್ಣ ಶೆಟ್ಟಿ ಮುತ್ತಕ್ಕ ಶೆಡ್ತಿ ದಂಪತಿಗಳ ಪುತ್ರನಾಗಿ ಮಧ್ಯಮ ವರ್ಗದ ಬಂಟ ಕುಟುಂಬದಲ್ಲಿ ಜನಿಸಿದ ಇವರ ಒಲವು ಯಕ್ಷಗಾನದತ್ತ ತಿರುಗಿದ್ದು ಅನೀರೀಕ್ಷಿತ. ಯಕ್ಷಗಾನ ರಂಗದ ಮಹಾನ್ ಕಲಾವಿದರ ಹಾಗೆ ಇವರ ವಿದ್ಯಾಭ್ಯಾಸ ಅರ್ಧಕ್ಕೇ ನಿಂತರೂ ಬಡಗುತಿಟ್ಟಿನ ಯಕ್ಷ ಸಾಮ್ರಾಜ್ಯಕ್ಕೆ ಇವರು ಸೂತ್ರಧಾರಿಯಾದರು.

ಗುರು ನಾರ್ಣಪ್ಪ ಉಪ್ಪೂರರಲ್ಲಿ ಶುಧ್ಧ ಸಾಂಪ್ರದಾಯದ ರಾಗ-ತಾಳ, ಮಟ್ಟು-ದಸ್ತುಗಳ ಪರಿಚಯ ಮಾಡಿಕೊಂಡ ಇವರು ಪ್ರಥಮವಾಗಿ ಮಲ್ಪೆ ಸಮೀಪದ ಕೊಡವೂರು ಮೇಳದಲ್ಲಿ ತಾಳ ಹಿಡಿದರು. ಮುಂದೆ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳ ಸೇರಿದ ಇವರು ಅಲ್ಲಿ ಭಾಗವತರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರಿಂದ ಕುಂಜಾಲು ಶೈಲಿಯ ಭಾಗವತಿಕೆ ಅಬ್ಯಾಸ ಮಾಡಿದರು. ಅವರಿಂದ ರಂಗತಂತ್ರ, ಆಟವಾಡಿಸುವ ಕಲೆ ಕರಗತ ಮಾಡಿಕೊಂಡ ಇವರು ಪುನಹ ತನ್ನ ಗುರುಗಳಿದ್ದ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಇಲ್ಲಿ ಅವರ ಭಾಗವತಿಕೆಯ ಮಟ್ಟುಗಳು ಗಟ್ಟಿಗೊಂಡವು.

ಬಳಿಕ ನೇರವಾಗಿ ಪ್ರಸಿದ್ದ ಬಯಲಾಟ ಮೇಳವಾದ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದ ಶೆಟ್ಟರು ಅಲ್ಲಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಬಡಗುತಿಟ್ಟಿನ ಅವಿಸ್ಮರಣೀಯ ಕಲಾವಿದರಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಕೊಕ್ಕರ್ಣೆ ನರಸಿಂಹ ಕಾಮತ್, ಕೊರ್ಗು ಹಾಸ್ಯಗಾರ, ಉಡುಪಿ ಬಸವ, ವೀರಭದ್ರ ನಾಯಕ್ ಹೀಗೆ ನಾವು ಕಾಣದ ಕೇಳಿದ ಮಹಾನ್ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗಿದೆ. ಮೂರು ತಲೆಮಾರಿನ ಕಲಾವಿದರನ್ನು ರಂಗದಲ್ಲಿ ದೀಗಣ ಹಾಕಿಸಿದ ಇವರು ಅಂದಿನ್ ಹಾರಾಡಿ ತಿಟ್ಟಿನ ಜಾಪು-ಛಾಪು, ಮಟ್ಪಾಡಿ ತಿಟ್ಟಿನ ನರ್ತನ ಆಂಗಿಕ ಚಲನೆ ಈಗಿನವರಲ್ಲಿಲ್ಲ ಎಂದು ವ್ಯಥೆ ಪಡುತ್ತಾರೆ. ಇದು ಇಂದು ಆಧುನೀಕರಣಗೊಂಡ ಯಕ್ಷಗಾನದ ಬಗ್ಗೆ ಬೇಸರದ ಭಾವವನ್ನು ಸೂಚಿಸುತ್ತದೆ.

ಹಲವಾರು ತಿರುಗಾಟವನ್ನು ರಾಮ ಗಾಣಿಗರ ಯಜಮಾನಿಕೆಯಲ್ಲಿ ನಡೆಸಿದ ಶೆಟ್ಟರು ತಮ್ಮ ಬಹುತೇಕ ತಿರುಗಾಟವನ್ನು ವಿದ್ಯುದ್ದೀಪವಿಲ್ಲದೆ ದೊಂದಿ ಬೆಳಕಿನಲ್ಲಿ, ಧ್ವನಿವರ್ದಕವಿಲ್ಲದೆ ಕಳೆದವರು. ಇದೊಂದು ಕೊರತೆಯೋ ಲೋಪವೋ ಎಂದು ಆಗ ಅವರಿಗೆ ಅನಿಸಿದ್ದಿಲ್ಲ. ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರಿಗೆ ಸುಧನ್ವಾರ್ಜುನ, ಮೈರಾವಣ ಕಾಳಗ, ಅತಿಕಾಯ, ಕರ್ಣಾರ್ಜುನ ಪ್ರಸಂಗವೆಂದರೆ ಅಚ್ಚುಮೆಚ್ಚು. ವೀರಭದ್ರ ನಾಯಕರ ಅತಿಕಾಯ, ಶಿರಿಯಾರ ಮಂಜು ನಾಯ್ಕರ ದೇವವ್ರತ, ಕೊರ್ಗು ಹಾಸ್ಯಗಾರರ ಬಾಹುಕ, ಹಳ್ಳಾಡಿ ಮಂಜಯ್ಯ ಶೆಟ್ಟರ ಋತುಪರ್ಣ, ಉಡುಪಿ ಬಸವನವರ ಚಿತ್ರಸೇನ, ಕೊಕ್ಕರ್ಣೆ ನರಸಿಂಹನವರ ಶಶಿಪ್ರಭೆ, ಹಾರಾಡಿ ರಾಮನವರ ಹಿರಣ್ಯಕಶ್ಯಪು, ಕರ್ಣ, ಜಾಂಬವ, ಕುಷ್ಟಗಾಣಿಗರ ಪುಷ್ಕಳ, ಅರ್ಜುನ, ನಾರಾಯಣ ಗಾಣಿಗರ ಕಯಾದು ಕೃಷ್ಣ ಮುಂತಾದ ಪಾತ್ರಗಳನ್ನು ರಂಗದಲ್ಲಿ ಕುಣಿಸಿದ ತೃಪ್ತಿ ಇವರಿಗಿದೆ.

ಜೋಡಾಟದಲ್ಲಿಯೂ ನಿಷ್ಣಾತರಾದ ಇವರು ವಿಪರ್ಯಾಸವೆಂಬಂತೆ ತಮ್ಮ ಗುರು ಉಪ್ಪೂರರ ಎದುರಿಗೆ ಪದ್ಯ ಹೇಳಬೇಕಾಗಿ ಬಂದಿದ್ದು ವಿಶೇಷ ಅಲ್ಲಿಯೂ ಸಹ ಗುರುವಿನಿಂದ ಸೈ ಎಣಿಸಿಕೊಂಡ ಇವರು ಇಂದಿಗೂ ಸಹ ಎಲೆಮರೆಯ ಕಾಯಿಯಂತೆ ತಮ್ಮ ಕಂಠಸಿರಿಯನ್ನು ವಿಕೃತಗೊಳಿಸದೆ ಲಯಬದ್ದವಾಗಿ ಹಾಡಬಲ್ಲರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಅವರ ಪದ್ಯವನ್ನು ಕೇಳುವ ಸೌಜನ್ಯ ತಾಳ್ಮೆ ಯಾರಿಗಿದೆ. ಸರಿಸುಮಾರು ಅರ್ಧ ಶತಮಾನಗಳ ಕಾಲ ಬಯಲು ಗದ್ದೆಯ ನಾಲ್ಕು ಕಂಬದ ನಡುವೆ ಬಡಗುತಿಟ್ಟನ್ನು ಶ್ರೀಮಂತಗೊಳಿಸಿದ ಶೆಟ್ಟರ ಖಾಸಗಿ ಬದುಕು ಮಾತ್ರ ಶ್ರೀಮಂತವಾಗಲಿಲ್ಲ ಎನ್ನುವುದೆ ದೌರ್ಭಾಗ್ಯ ನರಸಿಂಹ ಶೆಟ್ಟರನ್ನು ಹುಡುಕಿಕೊಂಡು ಬಂದ ಸನ್ಮಾನ ಪ್ರಶಸ್ತಿಗಳು ಹಲವಾರು. ಮಂದಾರ್ತಿ ಕ್ಷೇತ್ರದ ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದಲ್ಲಿ ದಿ. ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ ಇವರಿಗೆ ಸಂದಿದೆ. ಸೀತಾನದಿ ಪ್ರಶಸ್ತಿ. ಕುಂದಾಪುರದ ಎಂ. ಎಂ. ಹೆಗ್ಡೆ ಪ್ರಶಸ್ತಿ. ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ ಅಲ್ಲದೆ ಕಳೆದ ಸಾಲಿನ ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಇವೆರಿಗೆ ಸಂದಿದೆ. ಕಳೆದ ವರ್ಷದ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಸಹ ಇವರಿಗೆ ಸಂದಿದೆ.

ಮತ್ಯಾಡಿ ನರಸಿಂಹ ಶೆಟ್ಟಿ
ಜನನ : 1929
ಜನನ ಸ್ಥಳ : ಮತ್ಯಾಡಿ ಗ್ರಾಮ, ಹಳ್ಳಾಡಿ
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರು ಕೊಡವೂರು, ಮಂದಾರ್ತಿ, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ 50 ವರ್ಷಗಳ ಕಾಲ ಮೇರು ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು:
  • ಮಂದಾರ್ತಿ ಕ್ಷೇತ್ರದ ಹಾರಾಡಿ ರಾಮ ಗಾಣಿಗ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದಲ್ಲಿ ದಿ. ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ
  • ಸೀತಾನದಿ ಪ್ರಶಸ್ತಿ
  • ಕುಂದಾಪುರದ ಎಂ. ಎಂ. ಹೆಗ್ಡೆ ಪ್ರಶಸ್ತಿ
  • ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ
  • ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
  • ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ






****************

ಮತ್ಯಾಡಿ ನರಸಿಂಹ ಶೆಟ್ಟಿಯವರ ಕೆಲವು ಭಾವಚಿತ್ರಗಳು








Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
vikram shetty(4/17/2014)
Nice artical Very interesting . We want more articals like this...
Ragu(4/15/2014)
Ivara recordings dorakuttadeye?




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ