ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಲಾರಿಯ ಮೇಲೇರಿ ಹೊರಡಲಿದೆ ಯಕ್ಷ ರಂಗಸ್ಥಳ

ಲೇಖಕರು : ಉಮೇಶ್ ಕುಕ್ಕುಪಲ್ಕೆ
ಬುಧವಾರ, ಜನವರಿ 29 , 2014

ಬಲ್ಲಿರೇನಯ್ಯ..ಕೂಲಿ ಕಾರ್ಮಿಕರ ಕೊರತೆ ಕೇವಲ ಕೃಷಿ ಚಟುವಟಿಕೆಗೆ ಮಾತ್ರವಲ್ಲ ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೂ ತಟ್ಟಿದೆ. ಟೆಂಟ್ ಮೇಳಗಳಲ್ಲಿ ಅಥವಾ ಸಣ್ಣಪುಟ್ಟ ತಿರುಗಾಟದ ಮೇಳಗಳಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರಂಗಸ್ಥಳ ನಿರ್ಮಾಣ ಹಾಗೂ ಬಿಚ್ಚುವ ಕೆಲಸ ಪ್ರಯಾಸವಾಗುತ್ತಿರುವ ಸಂದರ್ಭ ತೀರ್ಥಹಳ್ಳಿಯ ಮೇಳದ ವ್ಯವಸ್ಥಾಪಕರೊಬ್ಬರು ಲಾರಿಯನ್ನೇ ಬಳಸಿ ಮೊಬೈಲ್ ರಂಗಸ್ಥಳ ನಿರ್ಮಾಣ ಮಾಡಿ ಈಗ ಸುದ್ದಿಯಲ್ಲಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯ ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಬಿ. ಗಣಪತಿ ಅವರು ಈ ಮೊಬೈಲ್ ರಂಗಸ್ಥಳದ ಪರಿಕಲ್ಪನೆ ಸಾಕಾರಗೊಳಿಸಿ, ಅದನ್ನು ಯಕ್ಷಗಾನ ಪ್ರಯೋಗಕ್ಕೆ ಸಿದ್ಧಪಡಿಸಿದ್ದಾರೆ.

ಹೊಸಳ್ಳಿಯ ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಬಿ. ಗಣಪತಿ
ಗಣಪತಿ ಅವರ ಪ್ರಕಾರ ಲಾರಿಯನ್ನು ಬಳಸಿಕೊಂಡು ಈ ರಂಗಸ್ಥಳವನ್ನು ಸುಲಭವಾಗಿ ಸಿದ್ಧಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ರಂಗಸ್ಥಳ 16*13 ಅಡಿ ವಿನ್ಯಾಸದಲ್ಲಿ ರಚನೆ ಮಾಡಲಾಗುತ್ತದೆ. ಇಲ್ಲಿ ಲಾರಿಯ ಎಡಬದಿಯ ಬಾಡಿಯನ್ನು ತೆರೆದು 14*14 ಅಡಿಯ ರಂಗಸ್ಥಳವನ್ನು ನಿರ್ಮಾಣ ಮಾಡಬಹುದು. ವೇಷಧಾರಿಗಳು ಕುಣಿಯುವಾಗ ವೇದಿಕೆ ಅಲುಗಾಡದಂತೆ ಹಾಗೂ ಭದ್ರತೆ, ಸಮತೋಲನದ ದೃಷ್ಟಿಯಿಂದ ಆಧಾರಸ್ತಂಭವನ್ನು ಊರಲಾಗುತ್ತದೆ. 8 ಅಡಿ ಎತ್ತರಕ್ಕೆ ರಾಟೆ ಮುಖಾಂತರ ರಾಡ್‌ಗಳನ್ನು ಬಳಸಿಕೊಂಡು ರಂಗಸ್ಥಳ, ಸಜ್ಜಿಕೆ ನಿರ್ಮಿಸಬಹುದು.

ಸಾಮಾನ್ಯವಾಗಿ ಮೇಳಗಳಲ್ಲಿ ವೇಷಧಾರಿಗಳು ಬಣ್ಣ ಕಳಚಿ ಮತ್ತೊಂದೂರಿಗೆ ಪ್ರಯಾಣಕ್ಕೆ ಸಿದ್ಧವಾದರೂ, ರಂಗಸ್ಥಳವನ್ನು ಬಿಚ್ಚುವ ಕೆಲಸ ಅಷ್ಟು ಸುಲಭವಲ್ಲ. ರಾತ್ರಿಯಲ್ಲಿ ಜಾಗರಣೆ ಮಾಡಿದ ಕಾರ್ಮಿಕರ ಗೊಣಗಾಟ ತಪ್ಪಿದ್ದಲ್ಲ. ಈಗಿನ ಕೂಲಿ ಕಾರ್ಮಿಕರ ಕೊರತೆಯ ಸಮಯದಲ್ಲಂತೂ ಇದೊಂದು ತಲೆನೋವಿನ ಕೆಲಸವೇ ಆಗಿದೆ. ಹೀಗಾಗಿ ಈ ನೂತನ ರಂಗಸ್ಥಳದ ಪರಿಕಲ್ಪನೆ ತಿರುಗಾಟದ ದೊಡ್ಡ ಮೇಳಗಳು ಅಲ್ಲದೆ ಸಣ್ಣ ಮೇಳಗಳಿಗೂ ಅನೂಕೂಲವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.

ಬಂಡವಾಳ ಎಷ್ಟು ?: ಪ್ರಸ್ತುತ ಗಣಪತಿ ಅವರು ಸುಮಾರು 2 ಲಕ್ಷ ರೂ. ತೆತ್ತು ಹಳೆಯ ಲಾರಿ(ಈಚರ್)ಯನ್ನು ಖರೀದಿಸಿ ಅದನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ. ರಂಗಸ್ಥಳದ ನಿರ್ಮಾಣ ಪರಿಕರಗಳು ಸೇರಿದಂತೆ ಮತ್ತೆ ಸುಮಾರು 2 ಲಕ್ಷ ರೂ. ವೆಚ್ಚ ತಗಲಿದೆ. ಒಟ್ಟಾರೆ ಹಳೆಯ ಲಾರಿಯನ್ನು ಬಳಸಿಕೊಂಡರೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಈ ಮೊಬೈಲ್ ರಂಗಸ್ಥಳ ಬಳಕೆಗೆ ರೆಡಿ. ಇನ್ನುಳಿದಂತೆ ಪ್ರದರ್ಶನದ ನಂತರ ರಂಗಸ್ಥಳವನ್ನು ಕಳಚಿ, ಮೇಳದ ಸರಂಜಾಮುಗಳನ್ನು ಕೊಂಡೊಯ್ಯಲು ಯಾವುದೇ ಅಡ್ಡಿಯಿಲ್ಲ. ಒಬ್ಬನೇ ವ್ಯಕ್ತಿಗೆ ಈ ರಂಗಸ್ಥಳವನ್ನು ಸಿದ್ಧಪಡಿಸಲು ಅಥವಾ ಕಳಚಲು ಕೇವಲ ಅರ್ಧ ಗಂಟೆ ಸಾಕು!

ಗಣಪತಿ ಅವರ ಈ ನೂತನ ಪರಿಕಲ್ಪನೆಯ 'ಲಾರಿ ಮೇಲೆ ರಂಗಸ್ಥಳ'ದ ಲೋಕಾರ್ಪಣೆ ಕಾರ್ಯಕ್ರಮ ಜ.31ರಂದು ತೀರ್ಥಹಳ್ಳಿಯ ಶ್ರೀಕ್ಷೇತ್ರ ಸೋಮವಾರಸಂತೆಯ ಶ್ರೀ ಗುತ್ಯಮ್ಮ ದೇವಾಲಯದ ವಠಾರದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ.

ರಾಜ್ಯ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಶಾಸಕ ಅರಗ ಜ್ಞಾನೇಂದ್ರ, ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಬಗ್ಗೆ ಬಿ. ಗಣಪತಿ ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಶ್ರೀ ಗುತ್ಯಮ್ಮ ಜಾನಪದ ಮತ್ತು ಯಕ್ಷಗಾನ ಕಲಾಕೇಂದ್ರದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಹಾಗೂ ಪತ್ರಕರ್ತ ತುಪ್ಪದ ಮನೆ ಶಿವಣ್ಣ ಉಪಸ್ಥಿತರಿದ್ದರು.

ತಿರುಗಾಟದ ಮೇಳಗಳಲ್ಲಿ ಕೂಲಿ ಕಾರ್ಮಿಕರ ಕೊರತೆ ಮತ್ತಿತರ ಕಾರಣಗಳಿಂದಾಗಿ ರಂಗಸ್ಥಳ ನಿರ್ಮಿಸುವುದು ಹಾಗೂ ಬಿಚ್ಚುವುದು ತುಂಬಾ ಶ್ರಮದಾಯಕ. ಈ ಕಾರ್ಯವನ್ನು ಸುಲಭ ವಾಗಿಸಲು ಲಾರಿ ಮೇಲೆ ರಂಗಸ್ಥಳವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಕಾರ್ಯಗತ ಮಾಡಿಕೊಂಡೆ. ಈ ರಂಗಸ್ಥಳದ ವಿನ್ಯಾಸವನ್ನು ತೀರ್ಥಹಳ್ಳಿ ಸಹ್ಯಾದ್ರಿ ಪಾಲಿಟೆಕ್ನಿಕ್‌ನ ಉಪನ್ಯಾಸಕ ಮೇಗರವಳ್ಳಿ ನಿತಿನ್ ಹೆಗ್ಡೆ ಮಾಡಿದ್ದಾರೆ. ಲಾರಿ ಮೇಲೆ ರಂಗಸಜ್ಜಿಕೆಯನ್ನು ಕುರುವಳ್ಳಿಯ ಪಡಿಯಾರ್ ಎಂಜಿನಿಯರಿಂಗ್ ವರ್ಕ್ಸ್‌ನ ಸುಬ್ರಹ್ಮಣ್ಯ ನಿರ್ಮಿಸಿದ್ದಾರೆ. ಈ ರಂಗಸ್ಥಳದ ನಿರ್ಮಾಣ ಹಾಗೂ ಬಿಚ್ಚಲು ಒಬ್ಬ ವ್ಯಕ್ತಿಗೆ ಕೇವಲ 30-45 ನಿಮಿಷಗಳು ಸಾಕು. ಅಲ್ಲದೆ ಮೇಳದ ಸರಕು ಸರಂಜಾಮುಗಳನ್ನು ಲೋಡ್ ಮಾಡಿ ಸಾಗಿಸಲು ಯಾವುದೇ ಸಮಸ್ಯೆಯಾಗದು. ಪ್ರಸ್ತುತ ರಾಟೆಯನ್ನು ಬಳಸಿಕೊಂಡು ರಂಗಸ್ಥಳವನ್ನು ಸಿದ್ಧಪಡಿಸಲಾಗುತ್ತಿದೆ. ಹೈಡ್ರಾಲಿಕ್‌ನಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಮತ್ತಷ್ಟು ಕಡಿಮೆ ಸಮಯದಲ್ಲಿ ಹಾಗೂ ತ್ವರಿತವಾಗಿ ನಿರ್ಮಾಣ ಮಾಡಲು ಸಾಧ್ಯವಾಗಬಹುದು. ತಮ್ಮ ಈ ಪ್ರಯತ್ನಕ್ಕೆ ಧರ್ಮಸ್ಥಳದ ಧರ್ಮದರ್ಶಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದಾರೆ. - ಬಿ. ಗಣಪತಿ, ನೂತನ ರಂಗಸ್ಥಳದ ನಿರ್ಮಾಪಕಕೃಪೆ : http://vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ