ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪ ಆರ್ಗೋಡು ಎಂಬ ಕುಗ್ರಾಮದಲ್ಲಿ 1922ರಲ್ಲಿ ಗಣಪಯ್ಯ ಶೆಣೈ ಮತ್ತು ರುಕ್ಮಿಣಿ ಬಾಯಿಯವರ ಪುತ್ರನಾಗಿ ಜನಿಸಿದ ಶೆಣೈಯವರು ಐಗಳ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ಶಾಲೆಗಳಿಲ್ಲದ ಆ ಕಾಲದಲ್ಲಿ ಗುರುಕುಲ ಶಿಕ್ಷಣ ಪಡೆದವರು. ಜನ್ಯಾಡಿ ಪುತ್ತು ಪೈ ಮತ್ತು ಜನಶಾಲೆ ನಾಗಪ್ಪ ಶ್ಯಾನುಬೋಗರಿಂದ ಯಕ್ಷಗಾನ ಅಬ್ಯಾಸ ಮಾಡಿ ಶ್ರೀ ಕಮಲಶಿಲೆ ಮೇಳವನ್ನು ಆ ಕಾಲದಲ್ಲಿ ತನ್ನ ಯಜಮಾನಿಕೆ ಮೂಲಕ ಹೊರಡಿಸಿದರು. ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದ ಆ ಕಾಲದಲ್ಲಿ ಸಮಾಜದ ಮೇಲುವರ್ಗದಿಂದ ಬಂದ ಇವರು ಯಕ್ಷಗಾನ ಕಲಾವಿದನಾಗಿ ಬೆಳೆದುಬಂದದ್ದೇ ಒಂದು ಸಾಧನೆ ಎನ್ನಬಹುದು. ಸಮಾಜ ಬಾ೦ಧವರು ಯಕ್ಷಗಾನದಿಂದ ಬಹುದೂರ ಉಳಿದಿರುವ ಆ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಸಾಗಿ, ಸಾಮಾನುಗಳನ್ನು ಎತ್ತಿನಗಾಡಿಯಲ್ಲಿ ತುಂಬಿಕೊಂಡು ಬಹುದೂರದ ಉಡುಪಿ ಉದ್ಯಾವರ ಪರಿಸರದಲ್ಲಿ ಬಡಗುತಿಟ್ಟಿನ ಕಂಪನ್ನು ಹರಡಿದ ಕೀರ್ತಿ ಇವರದ್ದಾಗಿದೆ. ಮೇಳದಲ್ಲಿ ಹಗಲು ಅಡಿಗೆ ಕೆಲಸ, ರಾತ್ರಿ ಪೂಜೆಯನ್ನೂ ಸಹ ತಾನೇ ಮಾಡಿಕೊಂಡು ಮೇಳವನ್ನು ಬಹುಕಾಲ ಮುನ್ನೆಡಿಸಿದವರು. ಕೆಲಕಾಲ ಹಿರಿಯಡ್ಕ ಮೇಳದ ಉಸ್ತುವಾರಿಯನ್ನು ವಹಿಸಿದವರು.
ಬಡಗುತಿಟ್ಟಿನ ಸಂಪ್ರದಾಯದ ಭಾಗವತನಾಗಿ ಪೆರ್ಡೂರು, ರಂಜದಕಟ್ಟೆ, ನಾಗರಕೊಡಗೆ, ಮೇಗರವಳ್ಳಿ, ಮಂದಾರ್ತಿ, ಸೌಕೂರು, ಇಡಗುಂಜಿ ಮೇಳಗಳಲ್ಲಿ ಸುಮಾರು 65 ವರ್ಷ ಕಲಾಸೇವೆಗೈದು ನಿವೃತ್ತಿಯಾಗಿ ನಿರಂತರ ಊರ ಹಾಗು ಪರವೂರ ಆಸಕ್ತರಿಗೆ ಶಿಕ್ಷಣ ನೀಡಿ ಯಕ್ಷಗಾನದ ಸವ್ಯಸಾಚಿಯಾಗಿ ಬೆಳೆದು ಬಂದರು. ಹಲವಾರು ವೃತ್ತಿ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದ ಇವರ, ಪುತ್ರ, ಯಕ್ಷಗಾನದಲ್ಲಿ ಬರುವ ಶ್ರೀರಾಮನ ಪಾತ್ರಕ್ಕೆ ಹೇಳಿಮಾಡಿಸಿದ ಆಳಂಗ ಸ್ವರಭಾರವಿರುವ ಆರ್ಗೋಡು ಮೋಹನದಾಸ ಶೆಣೈ ಬಡಗುತಿಟ್ಟಿನ ಬಹುಬೇಡಿಕೆಯ ಎರಡನೇ ವೇಷದಾರಿ, ಇವರ ಹತ್ತಿರದ ಬ೦ಧು ಆರ್ಗೋಡು ಸದಾನಂದ ಶೆಣೈ ಭಾಗವತರಾಗೀಯೂ, ದೇವದಾಸ ಶೆಣೈ ಮದ್ದಳೆಗಾರರಾಗಿಯೂ ವೃತ್ತಿ ಮೇಳದಲ್ಲಿ ಸೇವೆ ಸಲ್ಲಿಸುತಿದ್ದಾರೆ.
ತನ್ನ ಕಲಾಸೇವೆಗಾಗಿ ಹಲವಾರು ಸನ್ಮಾನ ಪಡೆದ ಇವರಿಗೆ ಉಡುಪಿ ಯಕ್ಷಗಾನ ಕಲಾರಂಗದ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಂಗಸ್ಥಳ ಪ್ರಶಸ್ತಿಗಳು ಸಂದಿವೆ.
ಪರಂಪರೆಯ ಭಾಗವತಿಕೆಯ ಕೊನೆಯ ಕೊಂಡಿಯಾದ ಇವರನ್ನು ಅವರ ಜೀವಮಾನದ ಸಾಧನೆಗಾಗಿ, ಉಡುಪಿಯಲ್ಲಿ ಸೆಪ್ಟಂಬರ್ 20, 2013 ರ೦ದು ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿರೂರು ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅವರ ಅಬಿಮಾನಿಗಳು ಸನ್ಮಾನಿಸಿದರು.
|
ಆರ್ಗೋಡು ಗೋವಿಂದರಾಯ ಶೆಣೈ |
 |
ಜನನ |
: |
1922 |
ಜನನ ಸ್ಥಳ |
: |
ಆರ್ಗೋಡು, ಸಿದ್ದಾಪುರ
ಕುಂದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ |
: |
65 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ, ಸ೦ಘಟಕರಾಗಿ ಹಾಗೂ ಗುರುಗಳಾಗಿ ಹಲವು ಮೇಳದಲ್ಲಿ ದುಡಿಮೆ. |
ಪ್ರಶಸ್ತಿಗಳು:
ಉಡುಪಿ ಯಕ್ಷಗಾನ ಕಲಾರಂಗದ ನಾರ್ಣಪ್ಪ ಉಪ್ಪೂರ ಪ್ರಶಸ್ತಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
|
|
|