ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ಪ್ರಕ್ಷಿಬ್ಧ ಪ್ರಸಂಗಗಳು

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಒಕ್ಟೋಬರ್ 24 , 2013

'ಪ್ರಸಂಗ' ವೆಂದರೆ ಪದ್ಯಗಳ ಮೂಲಕ ಹೆಣೆಯಲ್ಪಡುವ ಕಥಾ ಸನ್ನಿವೇಷ. ಇದು ಪ್ರದರ್ಶನದ ಪಠ್ಯವೂ ಹೌದು. ಕಥೆಯ ನೆಡೆಗೆ ಇದುವೇ ಆದಾರ. ಕಥೆಯನ್ನು ಆರಿಸಿ ಕೊಳ್ಳುವಾಗ ಕವಿಯ ಹೊಣೆಗಾರಿಕೆ ಮಹತ್ವದ್ದು. ಅದು ಕೇವಲ ರಂಜನೆಯಾಗಿರದೆ ಸತ್ವ ಭರಿತವಾಗಿರಬೇಕು. ಪುರಾಣ ಕಥೆಗಳಲ್ಲಿ ಸಾರ್ವಕಾಲಿಕ ಮೌಲ್ಯವುಳ್ಳವುಗಳಾದರೆ ಸಮಕಾಲೀನ ಸಮಾಜಕ್ಕೆ ಉಪಯುಕ್ತವಾಗಿರುವಂತಾದರೆ ಅದನ್ನು ಹಾಗೆ ಮುಂದಿಡಬಹುದು. ಹಳೆಯ ಕೆಲವು ಸವಕಲು ಅರ್ಥಶೂನ್ಯ ವಿಚಾರಗಳನ್ನು ಇಂದು ಮೌಲ್ಯಗಳೆಂದು ಕರೆಯುವಂತಿಲ್ಲ. ಇಂಥಹ ಸಂದರ್ಭದಲ್ಲಿ ಇಂದಿನ ದ್ರಷ್ಟಿ ದೋರಣೆಗಳಿಗೆ ಸರಿಯಾಗಿ ಪುರಾಣ ಘಟನೆಗಳನ್ನು ಪುನರ್ ರಚಿಸ ಬೇಕಾಗುತ್ತದೆ.

ಬಡಗು ತಿಟ್ಟಿನ 'ಕರ್ಣಾರ್ಜುನ'ದ ಒ೦ದು ದೃಶ್ಯ
ಯಕ್ಷಗಾನ ಕೃತಿಗಳು ಬಹುಮಟ್ಟಿಗೆ ಸಂವಾದದಿಂದಲೇ ಕೂಡಿದೆ. ಸಂವಾದವನ್ನು ಹೊಸೆಯುವಾಗ ಭಿನ್ನ ಭಿನ್ನ ಛಂದಸ್ಸುಗಳಲ್ಲಿ ಆಯಾಯ ಪಾತ್ರಗಳ ಸ್ವಭಾವಕ್ಕನುಗುನವಾದ ಶೈಲಿ, ಶಬ್ದಗಳನ್ನು ಉಪಯೋಗಿಸಬೇಕು. ಒಂದೇ ತಾಳದಲ್ಲಿ ಹೆಣೆಯಲಾದ ಸುದೀರ್ಘ ಸಂಭಾಷಣೆ ಏಕತಾನತೆಯನ್ನು ಉಂಟುಮಾಡುತ್ತವೆ. ದ್ರೌಪದೀ ಪ್ರತಾಪದಲ್ಲಿ ಹೆಚ್ಚಿನ ಪದ್ಯಗಳು ಝಂಪೆ ತಾಳದಲ್ಲಿ ಇರುವುದನ್ನು ಗಮನಿಸಬಹುದು. ವೀರ ರಸಕ್ಕೆ ಬಳಸುವ ರಾಗ ತಾಳಗಳನ್ನು ಯುದ್ದ ಸನ್ನಿವೇಷಕ್ಕೆ ಮತ್ತು ಪುಂಡು ವೇಷಗಳಿಗೆ ಬಳಸ ಬೇಕೆ ವಿನಹ ಕರುಣ ರಸದ ನೀಲಾಂಬರಿ, ಆನಂದ ಬೈರವಿ ರಾಗದ ಕೋರೆ ತಾಳದ ಪದ್ಯಗಳನ್ನು ಬಳಸಬಾರದು. ಎಲ್ಲಾ ಸಂದಭದಲ್ಲೂ ತಾಳದ ಸಾಹಿತ್ಯವನ್ನೇ ಬಳಸಿದರೆ ಭಾಗವತನಿಗೆ ತೋರಿಸಿಕೊಳ್ಳಲು ಅಸಾದ್ಯ. ಹಾಗಾಗಿ ಭಾಮಿನಿ, ವಾರ್ದಕ್ಯ, ಕಂದ ಪದ್ಯಗಳನ್ನು ಅಲ್ಲಲ್ಲಿ ತುರುಕಿಸುವುದು ರೂಢಿ. ಇವು ಕೆಲವೊಮ್ಮೆ ಕವಿವಾಣಿಯೂ ಆಗಿರುತ್ತವೆ. ಈ ಪದ್ಯಗಳನ್ನು ಭಾಗವತನು ಪಕ್ಕವಾದ್ಯವಿಲ್ಲದೆ ಭಾವಕ್ಕನುಗುನವಾಗಿ ತನಗನುಕೂಲವಾದ ರಾಗದಲ್ಲಿ ಹಾಡಬಹುದು. ಇಲ್ಲಿ ಸನ್ನಿವೇಶದ ತೀವ್ರತೆಯನ್ನು ಪ್ರೇಕ್ಷಕ ಅನುಭವಿಸಬಹುದು.

ಹೆಚ್ಚಿನ ಪ್ರಸಂಗಕರ್ತರು ರಾಮಾಯಣ, ಭಾರತದಲ್ಲಿನ ಪದ್ಯಗಳನ್ನು ಯಥಾವತ್ತಾಗಿ ಯಕ್ಷಗಾನಕ್ಕೆ ತಂದಿದ್ದಾರೆ. ಇದು ರಚನೆಗೆ ಕೊಟ್ಟ ಗೌರವ ವಿನಹ ಕೃತಿಚೌರ್ಯವಲ್ಲ. ಉದಾ; ಕರ್ಣಾರ್ಜುನ ಕಾಳಗದ 'ಮಾತೆಗಿತ್ತೆನು ಭಾಷೆಯನು' ಪದ್ಯ ಇತ್ಯಾದಿ. ಕರ್ಣನ ಹುಟ್ಟು ತಿಳಿಯದಿರುವ ಪಾತ್ರಗಳು ಸಹ ಪದ್ಯದಲ್ಲಿ 'ಎಲೆ ಭಾನುಜಾತ' ಎಂದೇ ಸಂಭೋದಿಸುತ್ತವೆ. ಇದನ್ನು ಕವಿವಾಣಿಯೆಂದೆ ಪರಿಗಣಿಸಬೇಕಾಗುತ್ತದೆ. ಕರ್ಣನ ಹುಟ್ಟು ತಿಳಿಯದ ಶಲ್ಯ ಕರ್ಣನನ್ನು ಹಾಗೆ ಕರೆಯುವುದು ಕರ್ಣಾರ್ಜುನ ಕಾಳಗದಲ್ಲಿ ಗಮನಿಸಬಹುದು. ಕೃಷ್ಣ ಸಂಧಾನದಲ್ಲಿ ಕವಿ ಕೌರವನನ್ನು 'ಕಾಮುಕ ಕುರು ಭೂಕಾಂತನ' ಎಂದು ಛಲದಂಕ ಚಕ್ರೇಶ್ವರನನ್ನು ಕರೆದದ್ದು ಎಷ್ಟು ಸಮಂಜಸವೋ?, ಯೋಚಿಸಬೇಕಾಗುತ್ತದೆ. ಹಾಗೆಯೆ ರಂಗದಲ್ಲಿ ನೆಡೆಯುವ ಘಟನೆಯ ಸಂಭಾಷಣೆಯಲ್ಲಿ ಭವಿಷ್ಯದಲ್ಲಿ ನೆಡೆಯುವ ಘಟನೆಗಳ ಉದಾಹರಣೆ ಹಾಗು ಪದ್ಯಗಳು ಬರಬಾರದು. ರಾಮಾಯಣ ಪ್ರಸಂಗಗಳಲ್ಲಿ ಮಹಾಭಾರತದ ಉದಾಹರಣೆ ಬರುವ ಪದ್ಯಗಳು ಬರಬಾರದು.

ಪಾರ್ತಿಸುಬ್ಬನು ಯಕ್ಷಗಾನಕ್ಕೆ ಹಲವು ಪ್ರಸಂಗ ನೀಡಿದ ಕವಿ. ಅದೆ ಕಾಲದ ದೇವಿದಾಸರು 'ಕೃಷ್ಣ ಸಂಧಾನ' , 'ಭೀಷ್ಮಪರ್ವ' , 'ದೇವಿ ಮಹಾತ್ಮೆ' , 'ಗಿರಿಜಾ ಕಲ್ಯಾಣ' ದಂತಹ ಉತ್ತಮ ಪ್ರಸಂಗ ರಚಿಸಿದ್ದಾರೆ. ಈತನ ಭಾರತ ಪ್ರಸಂಗಕ್ಕೆಲ್ಲ ಕುಮಾರವ್ಯಾಸ ಭಾರತವೆ ಆಧಾರ. ಈತನ ರಚನೆಯಲ್ಲಿ ಕೃಷ್ಣ ಸಂಧಾನ ಪ್ರಸಿದ್ದವಾಗಿದ್ದು, ತಾಳಮದ್ದಳೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಕೃಷ್ಣನ ರಾಜತಾಂತ್ರಿಕ ವ್ಯವಸ್ಥೆ ಹೆಚ್ಚು ಬಣ್ಣಿಸಲಾದರೂ ದ್ರಶ್ಯ ಸ೦ಯೋಜನೆಯಿಲ್ಲದೆ ರಂಗದಲ್ಲಿ ಈ ಪ್ರಸಂಗ ಹೆಚ್ಚು ಪ್ರಸಿದ್ದವಾಗಿಲ್ಲ. ಅಲ್ಲದೆ ಕೃಷ್ಣನ ವ್ಯಂಗ್ಯದ ಮಾತು ಹೆಚ್ಚು ಉಲ್ಲೇಖಿಸಲ್ಪಟ್ಟಿದೆ. ಉದಾ; 'ಚರಣ ನಿನಗೆ ಬಲು ನೋವಾಯಿತಲ್ಲ'.

ಇಡಗು೦ಜಿ ಮೇಳದ ಪ್ರಸಿಧ್ಧ ಪ್ರಸ೦ಗ 'ಶ್ರೀರಾಮ ನಿರ್ಯಾಣ'ದ ಶ್ರೀರಾಮನ ಪಾತ್ರ ನಿರ್ವಹಿಸುತ್ತಲೇ ಇಹಲೋಕ ತ್ಯಜಿಸಿದ ಕೆರೆಮನೆ ಶ೦ಭು ಹೆಗಡೆ
ಸುಮಾರು 19ನೆ ಶತಮಾನದಲ್ಲಿ ನೂತನ ಹೆಜ್ಜೆಯಿಟ್ಟ ಕವಿ ಮುದ್ದಣ್ಣನ ಕುಮಾರ ವಿಜಯ ಉತ್ತಮ ಛಂದಸ್ಸು, ಹಾಗೂ ವೈವಿದ್ಯಮಯ ರಾಗ ತಾಳದಿಂದ ಗಮನ ಸೆಳೆಯುತ್ತದೆ. ರತ್ನಾವತಿ ಕಲ್ಯಾಣ ಪುರಾಣಾಂತರ್ಗತ ಕಥೆ ಅಲ್ಲದಿದ್ದರೂ ಪ್ರದರ್ಶನಯೋಗ್ಯವಾದ ಸಾಹಿತ್ಯದಿಂದ ಕೂಡಿದಕೃತಿಯಾಗಿದೆ. ಉಪಮ, ರೂಪಕ, ಅಲಂಕಾರಗಳಿಂದ ಕೂಡಿದ ಪದ್ಯಗಳಲ್ಲಿ ಶೃಂಗಾರ, ವೀರ, ರೌದ್ರ, ಕರುಣಾರಸಗಳು ಬಿಂಬಿತವಾಗಿವೆ.

ಯಕ್ಷಗಾನದ ಆಧುನೀಕರಣದಿಂದ ಪ್ರಸಂಗ ರಚನೆಯಲ್ಲಿ ಪರೀಷ್ಕರಣೆ ಉಂಟಾದವು. ಪುರಾಣ ಕಥೆ ಆಯ್ಕೆ ಮಾಡುವುದು ಕಷ್ಟವಾದಾಗ ಯಕ್ಷಗಾನಕ್ಕೆ ಒಪ್ಪುವ ಪುರಾಣಾಂತರ್ಗತ ಪ್ರಸಂಗಗಳು ಬಂದವು. ಇಡಗುಂಜಿ ಮೇಳದವರ 'ಬ್ರಹ್ಮ ಕಪಾಲ' , 'ಸತ್ಯ ಹರಿಶ್ಚಂದ್ರ' , 'ರಾಮ ನಿರ್ಯಾಣ' , 'ವಾಸವದತ್ತೆ' ಸಾಲಿಗ್ರಾಮ ಮೇಳದವರ 'ವಸಂತ ಸೇನೆ' , 'ಚಂದ್ರ ಹಾಸ' , ವೀರಭದ್ರ ನಾಯಕರ 'ಬೇಡರ ಕಣ್ಣಪ್ಪ' ಇವುಗಳನ್ನು ಈ ಸಾಲಿಗೆ ಸೇರಿಸಬಹುದು.

ನಂತರದ ಕಾಲದಲ್ಲಿ ವೃತ್ತಿ ಮೇಳಗಳು ವ್ಯಾಪಾರೀಕರಣ ದೃಷ್ಟಿಯಿರಿಸಿಕೊಂಡು ಪ್ರದರ್ಶನ ನೀಡುವಾಗ ಪೌರಾಣಿಕವಲ್ಲದ ಹೊಸ ಪ್ರಸಂಗಗಳು ಅನಿವಾರ್ಯವಾದವು. ಅದರಲ್ಲಿ ಬಡಗುತಿಟ್ಟಿನ ಕಾಳಿಂಗ ನಾವಡ ವಿರಚಿತ 'ನಾಗಶ್ರೀ' ಮತ್ತು ತೆಂಕುತಿಟ್ಟಿನ ಅನಂತರಾಮ್ ಬಂಗಾಡಿ ವಿರಚಿತ 'ಕಾಡಮಲ್ಲಿಗೆ' ಪ್ರಸಂಗಗಳು ದಾಖಲೆ ನಿರ್ಮಿಸಿವೆ. ಬಳಿಕ ವೃತ್ತಿ ಮೇಳಕ್ಕೆ ಕಂದಾವರ ರಘುರಾಮ ಶೆಟ್ಟರ 'ರತಿರೇಖ' , 'ಬನಶಂಕರಿ' , 'ಚೆಲುವೆ ಚಿತ್ರಾವತಿ' , 'ಶೂದ್ರ ತಪಸ್ವಿನಿ' , 'ವಧು ಮಾದವಿ' , ಚಂದ್ರಶೇಖರ ಶೆಟ್ಟರ 'ರಾಜನರ್ತಕಿ' , 'ಚೈತ್ರಪಲ್ಲವಿ' , 'ಪದ್ಮಪಲ್ಲವಿ' , 'ರಂಗನಾಯಕಿ' ಪ್ರಸಂಗಗಳು ಅದ್ಬುತ ಯಶಸ್ಸನ್ನು ತಂದುಕೊಟ್ಟವು. ಹಾಗೇಯೆ ತೆಂಕುತಿಟ್ಟಿನಲ್ಲಿ ಅಮ್ರತ ಸೋಮೇಶ್ವ್ರರರ ಹಾಗು ರಾಘವ ನಂಭಿಯಾರರ ಪೌರಾಣಿಕ ನೆಲೆಗಟ್ಟನ್ನು ಹೊಂದಿದ ಛಂದೋಬದ್ದವಾದ ಪ್ರಸಂಗಗಳು ಅದ್ಬುತ ಯಶಸ್ಸನ್ನು ಹೊಂದಿದವು. ಇವೆಲ್ಲವೂ ಪ್ರದರ್ಶನ ಯೋಗ್ಯ ಪ್ರಸಂಗವೆನ್ನುವಲ್ಲಿ ಎರಡು ಮಾತಿಲ್ಲ ಇಷ್ಟೇಲ್ಲ ಇದ್ದರೂ ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗಣಿಸಿದ್ದು ನಮ್ಮ ದೌರ್ಭಾಗ್ಯವೇ ಸರಿ. ಈ ಕಲೆ ಜಾನಪದವಾಗಿ ಉಳಿಯಲು ಇದೂ ಒಂದು ಕಾರಣವಿರಬಹುದು.

ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ
ಕೆಲವು ಪ್ರಸಂಗಗಳು ರಂಗದಲ್ಲಿ ಯಶಸ್ಸು ಕಂಡರೂ ಕೃತಿಯಲ್ಲಿ ಕಳಪೆಯಾಗಿರುತ್ತದೆ. ಛಂದೋಬದ್ದವಾಗಿ ಓದುವುದು, ಹಾಡುವುದು ಕಷ್ಟವಾಗುತ್ತದೆ. ಪದ್ಯಗಳು ಸೀಮಿತವಾದಾಗ ಪಾತ್ರ ಪೋಷಣೆ ಸಮರ್ಪಕವಾಗದೆ ಪ್ರದ್ರರ್ಶನ ಸ೦ದರ್ಭದಲ್ಲಿ ಕಲಾವಿದನಿಗೆ ಹೆಚ್ಚಿನ ಹೊರೆ ಬೀಳುತ್ತದೆ. ಇಂದಿನವರೆಗೆ ಸಾವಿರಕ್ಕೂ ಅದಿಕ ಪ್ರಸಂಗ ರಚನೆಯಾದರೂ ಪ್ರದರ್ಶನಗೊಂಡವು ಕೆಲವು ಮಾತ್ರ. ಯಾಕೆಂದರೆ ಕೆಲವು ಕವಿಗಳು ಪ್ರಸಂಗವನ್ನು ಕಾವ್ಯದಂತೆ ರಚಿಸಿದ್ದಾರೆ. ಯಕ್ಷಗಾನ ಕೃತಿಯನ್ನು ಕನ್ನಡ ಕಾವ್ಯಕ್ಕೇ ಹೋಲಿಸಿ ಸಮಾನತೆ ನೀಡಿದಲ್ಲಿ ಯಕ್ಷಗಾನಾಸಕ್ತರು ಧನ್ಯರಾಗುತ್ತಾರೆ. ಪ್ರಸಂಗ ಕೃತಿಯು ಕಾವ್ಯದ ಗುಣ ಸ್ವರೂಪ ಹೊಂದಿದಾಗಲೂ ಅದನ್ನು ಕಾವ್ಯವೆಂದೋ ಸಾಹಿತ್ಯ ಕೃತಿಯೆಂದು ಜನ ಯಾಕೆ ಒಪ್ಪುವುದಿಲ್ಲ.

ಕನ್ನಡ ಸಾಹಿತ್ಯದಲ್ಲಿ ನಾಟಕವೂ ಒಂದು. ಆಧುನಿಕ ಬರಹಗಾರರು ಅನೇಕ ನಾಟಕ ರಚನೆಮಾಡಿ ಸಾಹಿತ್ಯಕ್ಕೆ ಕೀರ್ತಿ ತಂದಿದ್ದಾರೆ. ನಾಟಕಕ್ಕೂ ಯಕ್ಷಗಾನ ಸಾಹಿತ್ಯಕ್ಕೂ ಬಹಳ ಸಾಮ್ಯವಿದೆ. ಸಂಗೀತ ನಾಟಕದಲ್ಲಿ ಅಲ್ಲಲ್ಲಿ ಹಾಡುಗಳಿವೆ. ನಾಟಕವು ಗದ್ಯ ಪ್ರಧಾನವಾದರೆ ಯಕ್ಷಗಾನವು ಪದ್ಯ ಪ್ರಧಾನ. ನಾಟಕದಲ್ಲಿ ಬರೆದ ಮಾತುಗಳನ್ನೇ ಪಾತ್ರದಾರಿ ಆಡುತ್ತಾನೆ. ಯಕ್ಷಾಗಾನ ಪದ್ಯಕ್ಕೆ ಒಬ್ಬೊಬ್ಬ ಪಾತ್ರಧಾರಿಯ ಮಾತು ಒಂದೊಂದು ತರಹವಿರುತ್ತದೆ. ಕಥಗೆ ಉಚಿತವೆಣಿಸುವ ಮಾತನ್ನು ಸ್ವಯಂ ಸೃಷ್ಟಿಸಿ ಮಾತನಾಡುತ್ತನೆ. ಆದುದರಿಂದ ಯಕ್ಷಗಾನುವು ಸರ್ವಾ೦ಗವೂ ಇರುವ ನಾಟಕವಾಗಿದೆ. ಕಿರಿದರೊಳ್ ಪಿರಿದಾರ್ಥ ನೀಡುವುದು ಯಕ್ಷಗಾನ ಪದ್ಯಗಳ ವೈಶಿಷ್ಯ.

ಕಾಲ್ಪನಿಕ ಮತ್ತು ಪ್ರಕ್ಷಿಬ್ದ ಪ್ರಸಂಗಗಳು

ನಾಲ್ಕೈದು ದಶಕಗಳ ಹಿಂದೆ ಪ್ರಕ್ಷಿಬ್ದ ಪ್ರಸಂಗಗಳು ಅನೇಕರಿಗೆ ಅಸ್ಪಶ್ಯವಾಗಿದ್ದವು. ಈ ರೀತಿಯ ಪ್ರಸಂಗಗಳನ್ನು ಪ್ರದರ್ಶಿಸುವುದಾಗಲಿ, ನೋಡುವುದಾಗಲಿ ಪುರಾಣಗಳಿಗೆ ಮಾಡುವ ಅಪಚಾರ ಮಾತ್ರವಲ್ಲ ನೋಡುಗರನ್ನು ಅಪಮಾರ್ಗಕ್ಕೆಳೆಯುವ ಪಾಪ ಕಾರ್ಯವೆಂದು ತಿಳಿಯುವವರಿದ್ದರು. ಕೃಷ್ಣಾರ್ಜುನ ಕಾಳಗ ದಂತ ಪುರಾಣವಲ್ಲದ ಪ್ರಸಂಗದಲ್ಲಿ ಅರ್ಥ ಹೇಳಲಾರೆನೆಂದು ತಾಳಮದ್ದಳೆಯಿಂದ ಹೊರಟು ಹೋದ ಕಲಾವಿದರನ್ನು ನಾನು ನೋಡಿದ್ದೆನೆ ಎಂದು ಖ್ಯಾತ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ರಿಯವರು ಉಲ್ಲೇಖಿಸುತ್ತಾರೆ ( ನೋಡಿ; ಬಂಟರ ಯಕ್ಷಗಾನ ಕಲೋತ್ಸವ ಸ್ಮರಣ ಸಂಚಿಕೆ 'ಒಡ್ಡೋಲಗ' ಪುಟ 254 ). ಹಾಗಿದ್ದಲ್ಲಿ ಆಟ ಕೂಟದಲ್ಲಿ ಮೆರದ, ಅರ್ಜುನನ ಪಾತ್ರದಿಂದ ಮೆಲ್ಮಟ್ಟದ ಕಲಾವಿದರೆಂದು ಗುರುತಿಸಲ್ಪಟ್ಟ ಹಾರಾಡಿ ರಾಮ ಗಾಣಿಗರಿಗೆ, ಕೆರೆಮನೆ ಮಹಾಬಲ ಹೆಗಡೆಯವರಿಗೆ ಕೀರ್ತಿ ತಂದುಕೊಟ್ಟ ಪ್ರಸಂಗ ಪ್ರಕ್ಷಿಬ್ದ ಎಂದಾಯಿತು. ಅವರೇ ಹೇಳುವಂತೆ ದಶರಥನು ಗುಟ್ಟಾಗಿ ರಾಮ ಪಟ್ಟಾಭಿಷೇಕ ನಿಶ್ಚಯಿಸಿದ ಶೂರ್ಪನಖಿ ಹದಿನಾರು ವರುಷದ ಹೆಣ್ಣಾದಳು ಸೀತೆಯನ್ನು ತರುವ ಮೊದಲು ರಾವಣ ಮಂಡೋದರಿಯ ಸಲಹೆ ಕೇಳಿದ ಇವುಗಳೆಲ್ಲ ಪ್ರಕ್ಷಿಬ್ದ ಎಂದಾಯಿತು.

ಬಡಗು ತಿಟ್ಟಿನ ದೃಶ್ಯ
ಬಡಗುತಿಟ್ಟಿನ ನಡು ಪ್ರಾಂತ್ಯದಲ್ಲಿ ಪ್ರಸಿದ್ದಿ ಪಡೆದ 'ಲವ ಕುಶ ಕಾಳಗ' ಅಥವಾ 'ಚಿತ್ರಪಠ ಸಂಧಿ ಪ್ರಸಂಗ', ಅದ್ಬುತವಾದ ಸಾಹಿತ್ಯ ಛಂದೋಬಂದದಿಂದ ಕೂಡಿದ 'ರಾಮಾಂಜನೇಯ' ಅಶ್ಲೀಲತೆಯಿಂದ ಕೂಡಿದ 'ಚಂದ್ರಾವಳಿ ವಿಲಾಸ' , 'ಶ್ವೇತ ಕುಮಾರ' , ಆರು ಬಾರಿಗೂ ಹೆಚ್ಚು ಮುದ್ರಣಗೊಂಡು ಬಯಲಾಟಕ್ಕೆ ಹೇಳಿ ಮಾಡಿಸಿದ ಹಲಸಿನ ಹಳ್ಳಿ ನರಸಿಂಹ ಶಾಸ್ರೀಗಳ 'ವೀರಮಣಿ ಕಾಳಗ' ಪದ್ಮಪುರಾಣದಿಂದ ಆರಿಸಿದರೂ ಮೂಲರಾಮಾಯಣಕ್ಕೆ ಸಂಬಂದಿಸಿದ್ದಲ್ಲ. ವಿಶ್ವಾಮಿತ್ರ ಹೇಳಿದ ತಕ್ಷಣ ಶ್ರೀರಾಮನು ಶಕುಂತನನ್ನು ಕೊಲ್ಲಲು ಮುಂದಾದದ್ದು ಪ್ರಕ್ಷಿಬ್ದದ ಪರಮಾವದಿಯನ್ನು 'ರಾಮಾಂಜನೇಯ'ದಲ್ಲಿ ಗಮನಿಸಬಹುದು.

'ಕನಕಾಂಗಿ ಕಲ್ಯಾಣ'ದ ಪಡಿಯಚ್ಚು ಎನ್ನಬಹುದಾದ ಇನ್ನೋಂದು ಪ್ರಸಂಗ 'ಮೈಂದ ದಿವಿಜ ಕಾಳಗ' ಅಥವಾ 'ರುಕ್ಮಾವತಿ ಕಲ್ಯಾಣ'. ಬಲರಾಮನ ಮಗಳು ಕನಕಾಂಗಿಯನ್ನು ಅಭಿಮನ್ಯುವಿಗೆ ಕೇಳಲು ಹೊಗುತ್ತಳೆ ಸುಭದ್ರೆ. ಘಟೋತ್ಕಜನ ಮಾಯೆಯಿಂದ ಕನಕಾಂಗಿ ಅಭಿಮನ್ಯುವರ ವಿವಾಹ ನೆರವೇರುತ್ತದೆ. ಅಭಿಮನ್ಯುವಿನ ಹೆಂಡತಿ ಉತ್ತರೆಯೊ ಅಥವಾ ಕನಕಾಂಗಿಯೊ? ಅಣ್ಣ ರುಕ್ಮನ ಮಗಳನ್ನು ಮಗನಾದ ಮನ್ಮಥನಿಗೆ ಕೇಳಲು ಹೋಗುವುದು ರುಕ್ಮಿಣಿ. ಬಳಿಕ ಯಾದವರಿಗೂ ಕುಂಡಿನಪುರದವರಿಗೂ ಯುದ್ದವಾಗಿ ಮನ್ಮಥನೊಂದಿಗೆ ರುಕ್ಮಾವತಿಯ ಕಲ್ಯಾಣವಾಗುತ್ತದೆ. ಇಲ್ಲಿಯೂ ಅದೇ ಪ್ರಶ್ನೆ ಮನ್ಮಥನ ಹೆಂಡತಿ ರತಿಯೇ? ಇಲ್ಲಾ ರುಕ್ಮಾವತಿಯೇ? ಅಲ್ಲಿ ಅಭಿಮನ್ಯು ಬಲರಾಮನ ಸೋದರಳಿಯ, ಇಲ್ಲಿ ಮನ್ಮಥನು ರುಕ್ಮನ ಸೋದರಳಿಯ. ಸೋದರಿಕೆಯ ಸಮಕಾಲೀನ ಅದ್ಬುತ ಕಲ್ಪನೆಯೊಂದಿಗೆ ಮೂಡಿಬಂದ ಈ ಪ್ರಸಂಗಗಳೆರಡು ರಂಗದಲಿ, ಜೋಡಾಟದಲ್ಲಿ, ಯಶಸ್ವಿಯಾಗಿದೆಯೆಂಬಲ್ಲಿ ಕಾಲ್ಪನಿಕವಾಗಲಿ, ಪ್ರಕ್ಶಿಬ್ದವಾಗಲಿ ಯಕ್ಷಗಾನದ ಚೌಕಟ್ಟೀನೊಳಗೆ ಮೂಡಿಬಂದ ಪ್ರಸಂಗಗಳು ಸ್ವೀಕಾರಾರ್ಹವೆ. ಪ್ರಕ್ಷಿಬ್ದವಾದರೇನು? ಕಾಲ್ಪನಿಕವಾದರೇನು? ಮೂಲವಾದರೇನು? ಒಳ್ಳೆಯ ಅದರ್ಶವನ್ನು ಜನಕೋಟಿಗೆ ನೀಡುವ ಯಕ್ಷಗಾನದ ಚೌಕಟ್ಟಿಗೆ ಒಪ್ಪುವ ಪ್ರಸಂಗಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಬಹುದು.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ನಿರಂಜನ(2/13/2015)
"ಕೃಷ್ಣ ಸಂಧಾನದಲ್ಲಿ ಕವಿ ಕೌರವನನ್ನು ಕಾಮುಕ ಕುರು ಭೂಕಾಂತನ ಎಂದು ಛಲದಂಕ ಚಕ್ರೇಶ್ವರನನ್ನು ಕರೆದದ್ದು ಎಷ್ಟು ಸಮಂಜಸವೋ?, ಯೋಚಿಸಬೇಕಾಗುತ್ತದೆ." --- ಬಹುಶಃ ದ್ರೌಪದೀ ವಸ್ತ್ರಾಪಹಾರ - ತದನಂತರ ತನ್ನ ತೊಡೆಯಮೇಲೆ ಆಸೀನಳಾಗು ಎಂದು ಹೇಳಿದ ಸಂದರ್ಭವನ್ನು ಮನಸ್ಸಿನಲ್ಲಿಟ್ಟುಕೊಂಡು, ಕೃಷ್ಣ -ಕೌರವನ ಮನೆಯೆನ್ನುವಲ್ಲಿ ಕಾಮುಕ ಕುರು ಭೂಕಾಂತನ ನಿಲಯಕೆ ಎಂದು ಹೇಳಿರಬಹುದಲ್ಲ ಗುರುಗಳೇ?...
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ