ತೆಂಕುತಿಟ್ಟಿನ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು
ಲೇಖಕರು : ಪಣಂಬೂರು ಶ್ರೀಧರ ಐತಾಳ
ಮ೦ಗಳವಾರ, ಮಾರ್ಚ್ 4 , 2014
|
ಭಾಗವತಿಕೆ ಎಂದರೆ ಪಾತ್ರವನ್ನು ಸೃಷ್ಟಿಸಿ ಪೋಷಿಸುವುದು. ಭಾಗವತನಿಗೆ ರಂಗಪ್ರಜ್ಞೆ ಬಹಳ ಅಗತ್ಯ. ಆಯಾಯ ಪಾತ್ರದ ಸ್ವಭಾವವನ್ನು ಸರಿಯಾಗಿ ಮನದಟ್ಟು ಮಾಡಿ ಹಾಡಬೇಕು. ಪದ್ಯದ ಅರ್ಥ ಕೆಡುವಂತೆ ಹಾಡಲೇಬಾರದು. ಇದನ್ನು ತೋರಿಸಿ ಕೊಟ್ಟವರು ಕೀರ್ತಿಶೇಷ ಅಗರಿ ಶ್ರೀನಿವಾಸ ಭಾಗವತರು. ಆದುದರಿಂದಲೇ "ಅಗರಿ' ಎಂಬ ಮೂರಕ್ಷರ ಯಕ್ಷ ಪ್ರೇಮಿಗಳನ್ನು ರೋಮಾಂಚನಗೊಳಿಸುತ್ತದೆ. ಅಗರಿ ಮಟ್ಟು ಎಂಬ ಮಾರ್ಗಪ್ರವರ್ತಕರಾಗಿ, ಯಕ್ಷಗಾನ ಸಾಹಿತ್ಯದಲ್ಲಿ ಆಚಂದ್ರಾರ್ಕ ಪ್ರಭಾವಲಯವನ್ನು ನಿರ್ಮಿಸಿಕೊಂಡ ಅಗರಿಯವರು ಹಾಡುವ ಕ್ರಮದಲ್ಲಿ, ರಚನೆಯ ಪ್ರತಿಭೆಯಲ್ಲಿ, ಪ್ರದರ್ಶಿಸುವ ಚತುರತೆಯಲ್ಲಿ ಅಗ್ರಮಾನ್ಯರು. ಪದ್ಯಖಂಡಗಳ ಪುನರಾವರ್ತನೆ, ಆಲಾಪನೆ, ಸ್ವರಭೇದ, ರಾಗಪರಿವರ್ತನೆ, ತಾಳಭೇದ ಮುಂತಾದ ಸಂದರ್ಭಗಳಲ್ಲಿಯೂ ಸಾಹಿತ್ಯ ಮರ್ಮಜ್ಞತೆಯ ಈ ವೈಶಿಷ್ಟ್ಯವು ಅಗರಿಯವರ ಹಾಡುಗಾರಿಕೆಯಲ್ಲಿ ಸ್ಫುಟವಾಗಿ ಕಾಣುತ್ತಿತ್ತು.
|
ಕೇವಲ ಪದ್ಯ ಹೇಳುವುದು ಭಾಗವತಿಕೆಯಲ್ಲ. ಹಾಡುಗಾರರೆಲ್ಲ ಭಾಗವತರಲ್ಲ. ಅದ್ಭುತ ಸ್ವರವೊಂದೇ ಅರ್ಹತೆಯಲ್ಲ. ಅಗರಿಯವರ ಹಾಡುಗಾರಿಕೆ ಯಲ್ಲಿ ಹೃದಯವಂತಿಕೆಯೊಂದಿಗೆ ಭಾವೋದ್ರೇಕದ ರಸಾವಿಷ್ಕಾರದ ಅಂಶಗಳು ಹೆಚ್ಚು. ಪ್ರತಿಭೆ ಗುಪ್ತಗಾಮಿನಿಯಾಗಿರುವ ವೇಷಧಾರಿಗಳಿಗೆ ಅಗರಿಯವರ ಭಾಗವತಿಕೆ ಉತ್ತೇಜಕ ಮತ್ತು ಚೇತೋಹಾರಿ. ಭಾಗವತನ ಸ್ಥಾನಕ್ಕೆ ಗೌರವವನ್ನು ತಂದುಕೊಟ್ಟ ವ್ಯಕ್ತಿ ಅಗರಿಯವರು. ತನ್ನದೇ ಆದ ಪ್ರಸಂಗ ನಿರೂಪಣೆಯಿಂದ ಮೇಳವನ್ನು ಮೇಲೆತ್ತಿದವರು. ಕಲಾವಿದರ ತಪ್ಪು-ಒಪ್ಪುಗಳನ್ನು ನಿಷ್ಕರುಣವಾಗಿ ಹೇಳಿ ಸರಿಪಡಿಸಿದವರು. ಅನುಭವವಿಲ್ಲದ ವೇಷಧಾರಿಗಳನ್ನು ಮೇಲೆತ್ತಿ ಹಿಡಿದವರು.
ರಸಭಾವಗಳ ಕಲ್ಪನೆ, ಪ್ರಸಂಗಗಳ ಕಂಠ ಪಾಠ, ರಂಗಸ್ಥಳದಲ್ಲಿ ಯಾವ ಕಲಾವಿದನನ್ನು ಹೇಗೆ ಬಳಸಿ ಕಥೆಗೆ ಕಳೆ ತರಬೇಕು ಎನ್ನುವುದರ ಪ್ರಜ್ಞೆ - ಈ ಎಲ್ಲದರ ಪಾಕವಾಗಿದ್ದ ಭಾಗವತ ಅಗರಿ ಶ್ರೀನಿವಾಸ ಭಾಗವತರು. ಪ್ರಸಂಗದ ಕಳೆ ಏರುವುದು ಭಾಗವತರಿಂದ ಎಂಬ ಮಾತು ಅಗರಿಯವರ ಮಟ್ಟಿಗೆ ನೂರಕ್ಕೆ ನೂರು ಸತ್ಯ. ರಂಗಕ್ಕೊಪ್ಪುವ ಅದೆಷ್ಟೋ ಪೌರಾಣಿಕ ಪ್ರಸಂಗಗಳನ್ನು ರಚಿಸಿ ಪ್ರಯೋಗಿಸಿ ಆಟಗಳೂ ಶತಮಾನೋತ್ಸವಗಳನ್ನು ಆಚರಿಸುವಂತೆ ಮಾಡಿದ ಕೀರ್ತಿ ಅಗರಿಯವರಿಗೆ ಸಲ್ಲುತ್ತದೆ.
ಬಾಲ್ಯ, ಶಿಕ್ಷಣ ಮತ್ತು ಕಲಾಸೇವೆ
ಮಂಗಳೂರು ತಾಲೂಕಿನ ಹೊಸಬೆಟ್ಟು ಎಂಬಲ್ಲಿ ತಿಮ್ಮಪ್ಪಯ್ಯ ಮತ್ತು ರಾಧಮ್ಮ ದಂಪತಿಯ ಪುತ್ರನಾಗಿ 1906ರಲ್ಲಿ ಅಗರಿಯವರ ಜನನ. ಹುಟ್ಟಿ ಆರು ತಿಂಗಳಲ್ಲಿ ತಂದೆಯವರ ಅಕಾಲ ಮರಣದಿಂದಾಗಿ ಅಜ್ಜ, ಇಡ್ಯ ಅತಿಕಾರಿ ಶೀನಪ್ಪನವರ ಆಶ್ರಯ ಪಡೆಯಬೇಕಾಯಿತು. ಕಷ್ಟ ಕಾರ್ಪಣ್ಯಗಳ ಮಧ್ಯೆ ಸುರತ್ಕಲ್ ವಿದ್ಯಾದಾಯಿನಿ ಶಾಲೆಯಲ್ಲಿ ಏಳನೇ ತರಗತಿ ವರೆಗೆ ವಿದ್ಯಾಭ್ಯಾಸ.
ಕನ್ನಡ ಪಂಡಿತ ಸುರತ್ಕಲ್ ಸುಬ್ಬರಾಯರು ಹುಡುಗನ ಚುರುಕುತನ, ಸದ್ಗುಣಕ್ಕೆ ಮಾರುಹೋಗಿ ಹುಡುಗನಲ್ಲಿದ್ದ ಸಂಗೀತ, ನಾಟಕ, ಕವಿತಾರಚನೆಗೆ ಸೂಕ್ತ ಪ್ರೋತ್ಸಾಹ ನೀಡಿದರು. ಛಂದಸ್ಸು ವ್ಯಾಕರಣಗಳ ಆಳ ಅಭ್ಯಾಸದಿಂದ ಗುರುಗಳಿಂದ "ಪುಟ್ಟಕಬ್ಬಿಗ'ನೆಂಬ ಬಿರುದನ್ನು ಎಳವೆಯಲ್ಲೇ ಪಡೆದರು.
ಅಗರಿ ಗುಣಪಾಲ ಶೆಟ್ಟರ ಮಕ್ಕಳಿಗೆ ಪಾಠ ಮತ್ತು ಮನೆವಾರ್ತೆಯ ಶಾನುಭೋಗಿಕೆ ಕೆಲಸ ನಡೆಸಲು ಶ್ರೀನಿವಾಸ ರಾಯರು ಅಗರಿಗೆ ಬಂದು ನೆಲೆಸಿದರು. ಗುಣಪಾಲ ಶೆಟ್ಟರ ಪ್ರೋತ್ಸಾಹದಿಂದ ನಾರಾವಿ ಸೂರ್ಯ ನಾರಾಯಣ ಮೇಳದಲ್ಲಿ ಒಂದು ವರುಷ ತಿರುಗಾಟ ನಡೆಸಿದರು. 1936ರಲ್ಲಿ ಗುಣಪಾಲ ಶೆಟ್ಟರು ನಿಧನರಾದ ಬಳಿಕ ಮುಂದೆ ಕೊಡಿಯಾಲ್‌ಗುತ್ತು ಶಂಭು ಹೆಗ್ಡೆಯವರ ಕದ್ರಿ ಮೇಳದಿಂದ ತೊಡಗಿ ಕಟೀಲು, ಧರ್ಮಸ್ಥಳ, ಕೂಡ್ಲು, ಮೂಲ್ಕಿ, ಇರಾ ಸೋಮನಾಥೇಶ್ವರ, ಸುರತ್ಕಲ್, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದಕಟ್ಟೆ, ಮಂತ್ರಾಲಯ ಮೊದಲಾದ ಮೇಳಗಳಲ್ಲಿ 45 ವರ್ಷಕ್ಕೂ ಮಿಕ್ಕಿ ಕಾಲ ಭಾಗವತರಾಗಿ ತಿರುಗಾಟ ನಡೆಸಿದರು.
|
ಅಗರಿ ಶ್ರೀನಿವಾಸ ಭಾಗವತರು |
|
ಜನನ |
: |
1906 |
ಜನನ ಸ್ಥಳ |
: |
ಹೊಸಬೆಟ್ಟು, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಅಗರಿ ಶೈಲಿಯ ಜನಕ, 25ಕ್ಕೂ ಮಿಕ್ಕಿ ಪ್ರಸ೦ಗ ರಚನೆ.
ಕದ್ರಿ, ಕಟೀಲು, ಧರ್ಮಸ್ಥಳ, ಕೂಡ್ಲು, ಮೂಲ್ಕಿ, ಇರಾ ಸೋಮನಾಥೇಶ್ವರ, ಸುರತ್ಕಲ್, ಸುಬ್ರಹ್ಮಣ್ಯ, ಕೊಲ್ಲೂರು, ಸುಂಕದಕಟ್ಟೆ, ಮಂತ್ರಾಲಯ ಮೊದಲಾದ ಮೇಳಗಳಲ್ಲಿ 45 ವರ್ಷಕ್ಕೂ ಮಿಕ್ಕಿ ಕಾಲ ಭಾಗವತರಾಗಿ ತಿರುಗಾಟ.
|
ಪ್ರಶಸ್ತಿಗಳು:
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
|
ಮರಣ ದಿನಾ೦ಕ |
: |
ಮಾರ್ಚ್ 12, 1997 |
|
|
1937ರಲ್ಲಿ ಮಂಗಳೂರಿನ ದೇರೆಬೈಲಿನಲ್ಲಿ ಒಂದೇ ಕಡೆ 22 ದಿನಗಳ ಕಾಲ ಕದ್ರಿ ಮೇಳದ ವತಿಯಿಂದ ಮಹಾಭಾರತ ಕತೆಯ ಬಯಲಾಟ ಆಡುವುದಾಗಿ ನಿರ್ಣಯವಾಯಿತು. ಆ ಕಾಲದಲ್ಲಿ ಮಹಾಭಾರತದ ಎಲ್ಲಾ ಕಥೆಗಳ ಯಕ್ಷಗಾನ ಪ್ರಸಂಗಗಳು ಇರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಅಗರಿಯವರು ರಂಗದಲ್ಲಿ ಆಶು ಪದ್ಯಗಳನ್ನು ರಚಿಸಿ ಹಾಡಿ 22 ದಿನಗಳಲ್ಲಿ ಭಾರತ ಕಥಾನಕವನ್ನು ಪೂರೈಸಿದಾಗ ಈ ಅದ್ಭುತವಾದ ರಚನಾ ಕ್ರಮವನ್ನು ನೋಡಿದ ವಿದ್ವಾಂಸ ಪ್ರೇಕ್ಷಕರು ಇವರನ್ನು ಭಾಗವತೋತ್ತಮನೆಂದು ಕರೆದರು.
25ಕ್ಕೂ ಮಿಕ್ಕಿ ಪ್ರಸ೦ಗ ರಚನೆ
1948ರಲ್ಲಿ ಧರ್ಮಸ್ಥಳ ಮೇಳದಲ್ಲಿ ಇದ್ದಾಗ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ದಿ| ಮಂಜಯ್ಯ ಹೆಗ್ಡೆಯವರ ಇಚ್ಛೆಯಂತೆ "ಭರತೇಶ ವೈಭವ' ಪ್ರಸಂಗ ಕೃತಿ ರಚಿಸಿದರು. 1960ನೇ ಇಸವಿಯಲ್ಲಿ ಸುರತ್ಕಲ್ ಮೇಳಕ್ಕೆ ಸೇರಿದಾಗ ಕಲಾವಿದರಿಗೆ ತಕ್ಕುದಾಗಿ "ತಿರುಪತಿ ಮಹಾತ್ಮೆ', "ತುಳುನಾಡ ಸಿರಿ' ಪ್ರಸಂಗ ರಚನೆಯಾಯಿತು. ಮುಂದೆ ಕೂಡ್ಲು ಮೇಳಕ್ಕೆ ಸೇರಿದಾಗ "ಬಪ್ಪನಾಡು ಕ್ಷೇತ್ರ ಮಹಾತ್ಮೆ', "ಶಿವಲೀಲಾರ್ಣವ', "ಧನಗುಪ್ತ ಮಹಾಬಲಿ', "ಶ್ರೀ ದೇವಿ ಲಲಿತೋಪಾಖ್ಯಾನ' ಪ್ರಸಂಗಗಳನ್ನು ರಚಿಸಿದರು. ಕಟೀಲಿನ ವೇದಮೂರ್ತಿ ಗೋಪಾಲಕೃಷ್ಣ ಆಸ್ರಣ್ಣರ ಅಪ್ಪಣೆಯಂತೆ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ರಚಿಸಿದರು. ಆದಿಸುಬ್ರಹ್ಮಣ್ಯ ಮೇಳದಲ್ಲಿ ಇದ್ದಾಗ "ಭಸ್ಮ ರುದ್ರಾಕ್ಷಿ ಮಹಾತ್ಮೆ' ಎಂಬ ಕೃತಿ ರಚಿಸಿದರು. ಕ್ರೈಸ್ತ ಬಂಧುಗಳ ಕೇಳಿಕೆಯ ಮೇರೆಗೆ "ಏಸುಕ್ರಿಸ್ತ ಮಹಾತ್ಮೆ' ರಚಿಸಿದರು. ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಕಥೆಯನ್ನಾಧರಿಸಿ "ಅಭಯರಾಣಿ ಅಬ್ಬಕ್ಕ' ಎಂಬ ಪ್ರಸಂಗ ರಚಿಸಿದರು. "ಶ್ರೀ ನಾರಾಯಣ ಗುರು ಮಹಾತ್ಮೆ' ಪ್ರಸಂಗ ಕೂಡ ಇವರ ಕಾಣಿಕೆ.
ಸುಮಾರು 75ರಷ್ಟು ಪ್ರಸಂಗಗಳನ್ನು ಕಂಠಪಾಠ ಮಾಡಿಕೊಂಡು, 25ಕ್ಕೂ ಹೆಚ್ಚು ಪ್ರಸಂಗವನ್ನು ರಚಿಸಿ ಯಕ್ಷಬ್ರಹ್ಮನೆಂಬ ಬಿರುದನ್ನು ಪಡೆದ ಅಗ್ರಮಾನ್ಯ ಭಾಗವತರು 1997ರ ಮಾರ್ಚ್ 12 ರಂದು ನಿಧನರಾದರು.
ಅಗರಿಯವರ ಅಭಿಮಾನಿಗಳು ಸೇರಿ "ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ'ಯನ್ನು ಸ್ಥಾಪಿಸಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ (ರಿ.) ಗೋವಿಂದದಾಸ ಕಾಲೇಜು, ಸುರತ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ ಪ್ರತಿವರ್ಷ ನಡೆಸುತ್ತಾ ಬಂದಿದ್ದಾರೆ.
ಅಗರಿ ಶೈಲಿಯ ಜನಕ
ಭಾಗವತನೆಂದರೆ ಆತನಿಗೆ ನಿರ್ದೇಶನ ಮತ್ತು ಪದ್ಯರಚನೆಯ ಸಾಮರ್ಥ್ಯವಿರಬೇಕೆಂಬ ಮಾತಿಗೆ ಅಗರಿಯವರು ನಿದರ್ಶನ. ಪದ್ಯ ರಚನೆ ಅವರಿಗೆ ಸಲೀಸು. ಪ್ರಸಂಗ ಪುಸ್ತಕವಿಲ್ಲದಿದ್ದರೂ ಆಟ ಆಡಿಸಬಲ್ಲ ಅಸಾಮನ್ಯ ಪ್ರತಿಭಾಶಾಲಿ. ಯಕ್ಶಗಾನಕ್ಕೆ ನಾಟಕದ ಮಟ್ಟುಗಳನ್ನು, ಹೊಸ ಹೊಸ ರಾಗಗಳನ್ನು ತಂದ ಯಕ್ಶಬ್ರಹ್ಮ. ಇಂದು ತೆಂಕು ಬಡಗು ತಿಟ್ಟುಗಳ ಎಲ್ಲಾ ಭಾಗವತರ ಟ್ರಂಪ್ ಕಾರ್ಡ್ ಆಗಿರುವ ಹಿಂಧೋಳ (ಉತ್ತರಾದಿ ಮಾಲಕಂಸ್) ರಾಗವನ್ನು ಯಕ್ಶಗಾನಕ್ಕೆ ತಂದವರು ಅಗರಿಯವರೇ. ಹಿಂದೂಸ್ತಾನಿಯ ಭೀಂಪಲಾಸ್ (ನಾವಡರ ಪೊಡವಿಪಾತ್ಮಜೆ ಧನುಜೇಂದ್ರನಾ ಕಾಣುತಾ... ನೆನಪಾಗುತ್ತಿದೆಯೇ?) ರಾಗವನ್ನು ಯಕ್ಶಗಾನಕ್ಕೆ ತಂದವರೂ ಈ ಯಕ್ಶಬ್ರಹ್ಮನೇ!
ಅಗರಿಯವರ ಕೆಲವು ತಾಳ ಮದ್ದಲೆಯ ಪದಗಳನ್ನು ಕೇಳಿದಾಗ ಅದರಲ್ಲಿ ಮದ್ದಲೆಗಾರರಾದ ದಿವಾಣ ,ಕುರುಪ್, ಶಿರಂಕಲ್ಲು ಮುಂತಾದವರು ವಿಜ್ರಂಭಿಸಿದ ರೀತಿ ನೋಡಿದರೆ ಮೊದಲಿನ ಹಿಮ್ಮೇಳದವರ ಸೃಜನ ಶೀಲತೆ ನೈಪುಣ್ಯತೆ ಗುರುತಿಸಲು ದೊಡ್ಡ ಪ್ರತಿಭೆ ಎನೂ ಬೇಡ. ಸಾಮಾನ್ಯನೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ನಡೆಗಳು. ಇಂದಿನ ವ್ಯರ್ಥ ಅಲಾಪನೆಯ ಕಸರತ್ತು ಇಲ್ಲ.ಚಾಲು ಕುಣಿತದ ಹುಚ್ಚು ಎಳೆದಾಟವಿಲ್ಲ ಆದರು ಹಿಮ್ಮೇಳ ವೈಭವೀಕೃತ ಗೊಳ್ಳುವ ಬಗೆ ಅಚ್ಚರಿ ಮೂಡುತ್ತದೆ. “ ರಂಗನಾಯಕ ರಾಜೀವ ಲೋಚನ, ಪೋಗಿಬರುವೆನು ಗೋಪ ನಾಗ ವೇಣಿಯರೆ .. ಮುಂತಾದ ಉದಯರಾಗದ ಪದಗಳು ಹಲವು ಅಗರಿಯವರ ಕಂಠದಲ್ಲೇ ಕೇಳುವ ಸುಖ ಬೇರೆ ಅನುಕರಣೆಯ ಧ್ವನಿಯಲ್ಲಿ ಸಿಗಲಾರದು. ಅಗರಿ ಶೈಲಿ ಅನುಕರಣೀಯವಾಗಿ ಸುಲಭ ಎಂದು ಕಂಡರೂ , ಹಲವರು ಇದು ಅಗರಿ ಶೈಲಿ ಎಂದು ಗುರುತಿಸಿಕೊಂಡರೂ ಅಗರಿ ಎಂತಿದ್ದರೂ ಅಗರಿಯೆ.
ಅಗರಿ ಶ್ರೀನಿವಾಸ ಭಾಗವತರ ಪದಗಳನ್ನು ಇಂದಿನ ತಲೆಮಾರಿನವರು ಹೆಚ್ಚು ಕೇಳಿರಲಾರರು. ಕೇಳಿದ ಹಳಬರು ಇಂದಿಗೂ ಮೆಲುಕು ಹಾಕುವ ಅಗರಿಯ ಸ್ವರ ಶೈಲಿಯ ಕಲ್ಪನೆ ಮಾತ್ರ ಈಗ ಸಂಗ್ರಹವಾಗುವ ಪದಗಳಿಂದ ಸಾಧ್ಯ. ಚುರುಕು ನಡೆಯ ಮೊಟಕು ಆಲಾಪನೆಯ ಶೈಲಿ, ಬೆರಳೆಣಿಕೆಯ ಕ್ಷಣಗಳಲ್ಲಿ ಮದ್ದಲೆವಾದಕರಿಗೆ ವಿಪುಲ ಅವಕಾಶ ಒದಗಿಸುವ ಲಯ, ಕೇಳುಗನ ಎದೆಯಲ್ಲಿ ಅಲಾಪನೆಯ ಅಲೆಯ ಕಂಪನವನ್ನುಂಟುಮಾಡುವ ಅಲಾಪನೆ ಎಲ್ಲವೂ ಅಗರಿ ಪದಗಳ ವಿಶೇಶತೆ. ಪ್ರತಿಸಲ ಕೇಳಿದಾಗಲೂ ವಿಭಿನ್ನ ಅನುಭವನ್ನು ನೀಡಬಲ್ಲ ಪದಗಳು ಮತ್ತೂ ಮತ್ತೂ ಮೆಲುಕು ಹಾಕುವಂತೆ ಮಾಡುತ್ತಿವೆ. ಕೇವಲ ಪೂರ್ವಾಗ್ರಹದಿಂದ, ಅಂಧಾಭಿಮಾನದಿಂದ ಇಂತಹ ಪದಗಳನ್ನು ಕೇಳದೆ ಉಳಿಯುವವರು ಖಂಡಿತ ನಾದ ಮಧುರ್ಯ ಸವಿಯುವಲ್ಲಿ ವಂಚಿತರಾದರೆಂದೇ ಹೇಳಬೇಕು.
****************
ಅಗರಿ ಶ್ರೀನಿವಾಸ ಭಾಗವತರ ಕೆಲವು ವಿಡಿಯೊ ತುಣುಕುಗಳು
ಕೃಪೆ :
http://udayavani.com
|
|
|