ಎಲ್ಲ ಪ್ರತಿರೋಧಗಳಿಗೂ ಸಡ್ಡು ಹೊಡೆದು ಜೀವಿತಾವಧಿಯಲ್ಲಿ ಗುರಿಸಾಧನೆಯ ಹಾದಿಯನ್ನು ಉಪಕ್ರಮಿಸಲು ಹೋರಾಟವನ್ನೇ ಅನಿವಾರ್ಯವಾಗಿಸುವ ವ್ಯಕ್ತಿತ್ವ ಹಲವು ಸಲ ಗೋಚರಿಸಬಹುದು. ತಾನು ಉನ್ನತಿಯಲ್ಲಿದ್ದರೂ ಜೇವನದಲ್ಲಿ ಅತ್ಯುನ್ನತಿ ಎಂಬುದು ಇನ್ನೊಂದಿದೆ ಎಂಬುದರ ಅರಿವಾಗುವಾಗ ಅದರ ಬೆನ್ನತ್ತಿ ಹೋಗಿ, ಅದನ್ನು ವಶವಾಗಿಸುವಲ್ಲಿ ತನ್ನ ಅರ್ಹತೆಯನ್ನು ಸರಿದೂಗಿಸಿ ಪರಿಸ್ಥಿತಿಯನ್ನು ಎಲ್ಲಾ ಪ್ರತಿರೋಧದ ನಡುವೆ ಗೆಲ್ಲುವ ಛಲ ಇದು ಮಹತ್ತರ ಸಾಧನೆಗೆ ನಿಮಿತ್ತವಾಗುತ್ತದೆ. ಪೌರಾಣಿಕದಲ್ಲಿ ಬರುವ ರಾಜಾ ಕೌಶಿಕನ ವ್ಯಕ್ತಿತ್ವ ಆ ಬಗೆಯದು. ಬ್ರಹ್ಮಋಷಿ ಪದವಿ ಎಂಬುದೊಂದು ಇದೆ ಎಂದು ಅರಿವಾದಾಗ ಅದನ್ನು ಹೊಂದಿಕೊಳ್ಳಲು ಕಠಿಣ ಸಾಧನೆಗೆ ಉಪಕ್ರಮಿಸುವ ಕೌಶಿಕ ವಿಶ್ವಾಮಿತ್ರನಾಗಿ ಬ್ರಹ್ಮಋಷಿಯಾಗುವ ಹಾದಿ ಆ ವ್ಯಕ್ತಿತ್ವದ ಸತ್ವವನ್ನು ಬಹಿರಂಗಗೊಳಿಸುತ್ತದೆ.
ಅದೇಬಗೆಯಲ್ಲಿ ಯಕ್ಷಗಾನದಲ್ಲಿ ಕೌಶಿಕನಾಗಿ ಮೆರೆದವರು ನಮ್ಮ ಗೋವಿಂದಣ್ಣ. ಧರ್ಮಸ್ಥಳ ಮೇಳದ ಮಹಾಬ್ರಾಹ್ಮಣ ಪ್ರಸಂಗದ ರಾಜಾ ಕೌಶಿಕನ ಪಾತ್ರದಂತೆ, ನಿಜ ಬದುಕಿನ ಹಾದಿಯಲ್ಲೂ ಕೌಶಿಕನ ಛಲವನ್ನು ತೋರಿದವರು ಇಂದಿಗೂ ರಾಜಾ ಕೌಶಿಕನಾಗಿ ಯಾವುದೇ ಎಗ್ಗಿಲ್ಲದೆ ರಂಗಸ್ಥಳವನ್ನೇರುವ ಗೋವಿಂದಣ್ಣನ ರಂಗಸ್ಥಳದ ಆ ನಿಲುಮೇ ಮತ್ತು ಅತಿ ದೀರ್ಘ ಬದುಕು ಸಾಮಾನ್ಯರಿಗೆ ಕೈಗೆಟುಕದ ರೀತಿಯದ್ದು.
|