ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಗಂಡುಕಲೆಯ ಮೊದಲ ವೃತ್ತಿಪರ ಮಹಿಳಾ ಭಾಗವತ : ಲೀಲಾವತಿ ಬೈಪಡಿತ್ತಾಯ

ಲೇಖಕರು : ನಯನಾ ಎಸ್
ಬುಧವಾರ, ಡಿಸೆ೦ಬರ್ 30 , 2015

ಅದು ಮಧ್ಯರಾತ್ರಿ. ಆಟಕ್ಕೆ ಒಳ್ಳೆ ಕಳೆಕಟ್ಟುತ್ತಿತ್ತು. ದ್ರೌಪದಿ ವಸ್ತ್ರಾಪಹಾರ ಪ್ರಸಂಗ. ತುಂಬಿದ ಸಭೆ. ತಲೆತಗ್ಗಿಸಿ ಕುಳಿತ ಪಾಂಡವರು, ಅಟ್ಟಹಾಸದಿಂದ ಮೆರೆವ ಕೌರವರು. ಏನೂ ಮಾಡಲಾಗದ ಅಸಹಾಯಕತೆಯಿಂದ ಚಡಪಡಿಸುತ್ತ ಕುಳಿತ ಭೀಷ್ಮ, ಧೃತರಾಷ್ಟ್ರ, ದ್ರೋಣರು. ಅವರ ನಡುವೆ…‘ಆರಿಗೊರಲಿದರಿಲ್ಲಿ ದೂರ ಕೇಳುವರಿಲ್ಲ, ವೀರರೇ ಕೈ ಬಿಡಲು ಕಾವರಿನ್ನಾರುಂಟು, ಗಾಂಗೇಯ ನೃಪ ಮುಖ್ಯರು…’ ಎಂಬ ಪದ್ಯವನ್ನು ಕರುಣಾರಸವನ್ನುಕ್ಕಿಸಿ ಅವರು ಹಾಡುತ್ತಿದ್ದರೆ ಎಂಥವರಲ್ಲೂ ರೋಮಾಂಚನ.

ಭಾಗವತನೆಂದರೆ ಸೂತ್ರಧಾರಿ…

ಅಷ್ಟು ಭಾವಪೂರ್ಣವಾಗಿ, ತನ್ಮಯವಾಗಿ ಅವರು ಹಾಡುತ್ತಿದ್ದರು. ಹಾಗೆ ಹಾಡುತ್ತಿದ್ದವರು ಮಹಿಳೆ ಎಂಬುದು ಇಲ್ಲಿ ವಿಶೇಷ. ಹಾಗಂತ ಮಹಿಳೆಗೆ ಸಹಜವಾಗಿರಬೇಕಾದ ಯಾವುದೇ ಮೃದುತ್ವದ ಧ್ವನಿ ಅಲ್ಲಿರಲಿಲ್ಲ. ಬದಲಾಗಿ ಕಂಚಿನ ಕಂಠದಲ್ಲೇ, ಅದೇ ಕಾಠಿಣ್ಯದಲ್ಲೇ ಭಾಗವತಿಕೆ ಸಾಗಿತ್ತು.

ನಿಜ, ಯಕ್ಷಗಾನ ಯಾವತ್ತೂ ಮೃದುತ್ವವೊಂದನ್ನೇ ಕೇಳುವುದಿಲ್ಲ. ಅದರ ಸೊಗಡಿರುವುದೇ ಕಾಠಿಣ್ಯದಲ್ಲಿ, ಕಂಚಿನ ಕಂಠದಲ್ಲಿ. ಹಾಗಾಗಿಯೇ ಅದು ಗಂಡುಕಲೆ. ಆದರೆ ತನ್ನೊಳಗಿನ ಸಹಜವಾದ ಮೃದು, ಸುಕೋಮಲ ಕಂಠವನ್ನೂ ಪಳಗಿಸಿ, ಕಂಚಿನ ಕಂಠವನ್ನಾಗಿಸಿಕೊಂಡು ಯಕ್ಷಗಾನ ಭಾಗವತಿಕೆಯಲ್ಲಿ ಸೈ ಎನಿಸಿಕೊಂಡವರು ಲೀಲಾವತಿ ಬೈಪಾಡಿತ್ತಾಯ.

ತಾಳಮದ್ದಲೆ-ಯಕ್ಷಗಾನ ಕ್ಷೇತ್ರದ ಮೊದಲ ವೃತ್ತಿಪರ ಮಹಿಳಾ ಭಾಗವತರು ಲೀಲಾ ಬೈಪಾಡಿತ್ತಾಯ. 40 ವರ್ಷಗಳ ಹಿಂದೆ ಜಾಗಟೆ, ಕೋಲು, ಪ್ರಸಂಗದ ಹಾಡುಗಳ ಕೃತಿ ಹಿಡಿದು ಯಕ್ಷಗಾನದ ರಂಗಸ್ಥಳದ ಹಿಮ್ಮೇಳದ ವೇದಿಕೆಯಲ್ಲಿ ಪವಡಿಸಿದಾಗ ಅವರಿಗೆ 28ರ ವಯಸ್ಸು. ಅದಾಗಲೇ ಅವರು ಇಬ್ಬರು ಗಂಡು ಮಕ್ಕಳ ತಾಯಿ. ಅಂದಿನಿಂದ ಸತತ 25 ವರ್ಷಗಳ ಕಾಲ ನಿರಂತರವಾಗಿ ಭಾಗವತಿಕೆ ನಿರ್ವಹಿಸಿದ ಲೀಲಾ, ಗಂಡು ಕಲೆಯಲ್ಲಿ ಹೆಣ್ಣಿನ ಕಂಚಿನಕಂಠಕ್ಕೆ ಪ್ರಸಿದ್ಧರಾದವರು. ಈಗಲೂ ಅತಿಥಿ ಕಲಾವಿದರಾಗಿ ಭಾಗವತಿಕೆ ನಡೆಸಿಕೊಡುವುದಲ್ಲದೆ ಈ ಕಲೆಯನ್ನು ಕಲಿಯುವವರಿಗೆ ತರಬೇತಿಯನ್ನೂ ನೀಡುತ್ತಾರೆ.

ಭಾಗವತನೆಂದರೆ ಇಡೀ ಯಕ್ಷಗಾನದ ಸೂತ್ರಧಾರಿ. ಆತನಿಗೆ ತಾಳಜ್ಞಾನ, ಶ್ರುತಿಜ್ಞಾನ ಹೇಗಿರಬೇಕೋ ಅದೇ ರೀತಿ ಆತ ಉತ್ತಮ ನಿರೂಪಕ ಕೂಡ ಆಗಿರುತ್ತಾನೆ. ಪಾತ್ರಧಾರಿಗಳ ಮಾತುಗಳನ್ನು ಎಲ್ಲಿ ಯಾವಾಗ ನಿಲ್ಲಿಸಬೇಕು, ಯಾವಾಗ ಅವರಿಗೆ ಕ್ಲೂ ಕೊಡಬೇಕು ಎಂಬ ಜಾಣ್ಮೆ ಭಾಗವತನಿಗಿರಬೇಕು. ಅಂಥ ಜಾಣ್ಮೆಯನ್ನು ಆರಂಭದಲ್ಲೇ ರೂಢಿಸಿಕೊಂಡವರು ಇವರು.

ಭಾಗವತಿಕೆ ಅಷ್ಟು ಸುಲಭದ್ದಲ್ಲ. ಒಂದೇ ಪದ್ಯದಲ್ಲಿ ಹಲವಾರು ಧಾಟಿಯನ್ನು ತರಬೇಕಾಗುತ್ತದೆ. ಅಂದರೆ ಕರುಣ, ವೀರ, ಶಾಂತ, ರೌದ್ರಗಳೆಲ್ಲವನ್ನೂ ಹೇಳಬೇಕಾಗುತ್ತದೆ. ಹಾಗಾಗಿಯೇ ಇದಕ್ಕೆ ಕಂಚಿನ ಕಂಠ ಬೇಕು. ಈ ಕಾರಣಕ್ಕಾಗಿ ಯಕ್ಷಗಾನದಲ್ಲಿ ಮೊದಲೆಲ್ಲ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿರುತ್ತಿದ್ದರು. ಜತೆಗೆ ಯಕ್ಷಗಾನವೆಂದರೆ ಅದು ರಾತ್ರಿ-ಬೆಳಗಿನ ಆಟ.

ಹೀಗೆ ಊರಿಂದೂರಿಗೆ ಹೋಗುತ್ತ, ರಾತ್ರಿ-ಬೆಳತನಕ ಕಳೆಯಬೇಕಾಗಿಬರುವ ಈ ಯಕ್ಷಗಾನದಲ್ಲಿ ಮಹಿಳೆಯೊಬ್ಬಳು ಛಾಪು ಮೂಡಿಸುತ್ತಾಳೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೂ 40 ವರ್ಷಗಳ ಹಿಂದಿನ ಕಾಲದಲ್ಲಿ ಮಹಿಳೆಯೊಬ್ಬಳು ಭಾಗವತಿಕೆ ಮಾಡಿ ಸೈ ಎನಿಸಿಕೊಂಡಿದ್ದಾಳೆಂದರೆ ಅದೊಂದು ಅಚ್ಚರಿಯ ಸಂಗತಿ. ಈ ಎಲ್ಲ ಹೆಗ್ಗಳಿಕೆಗೆ ಪಾತ್ರರಾಗಿರುವವರು ಇವರು.

ಲೀಲಾವತಿ ಬೈಪಡಿತ್ತಾಯ
ಜನನ :
ಮೇ 23, 1947
ಜನನ ಸ್ಥಳ :
ಮಧೂರು , ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ
ಕಲಾಸೇವೆ:
ಗಂಡುಕಲೆಯೆಂದೇ ಪ್ರಸಿದ್ಧಿಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ 40 ವರ್ಷಗಳ ಹಿಂದೆ ಭಾಗವತಿಕೆ ಮಾಡಿದ ಮೊದಲ ವೃತ್ತಿಪರ ಮಹಿಳಾ ಭಾಗವತರು.
ಪ್ರಶಸ್ತಿಗಳು:
  • ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ (2010)
  • ಆಳ್ವಾಸ್ ನುಡಿಸಿರಿ ಪ್ರಶಸ್ತಿ
  • ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ, ಪುರಸ್ಕಾರಗಳು

ಆಟವಾಡುತ್ತಲೇ ಆಟದ ಕಲೆ ಹುಟ್ಟಿದ್ದು…!

ಇಂಥ ಲೀಲಾ ಅವರು ಹುಟ್ಟಿ ಬೆಳೆದದ್ದು ಕೇರಳದ ಕಾಸರಗೋಡಿನ ಮುಳ್ಳೇರಿಯ ಸಮೀಪದ ಹಳ್ಳಿಯಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನೂ ಕಳೆದುಕೊಂಡ ಕಾರಣಕ್ಕಾಗಿ ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರಮಾವ ರಾಮಕೃಷ್ಣ ಭಟ್ ಮಧೂರು ದೇವಾಲಯದಲ್ಲಿ ದೇವನೃತ್ಯ ಕಲಾವಿದರು. ಬಡತನದಿಂದಾಗಿ ಶಾಲೆಯ ಮೆಟ್ಟಿಲು ಹತ್ತಲು ಲೀಲಾ ಅವರಿಗೆ ಸಾಧ್ಯವಾಗಲಿಲ್ಲ. ಮಧುರವಾಗಿ ಹಾಡುತ್ತಿದ್ದ ಅವರು ಪ್ರಸಿದ್ಧ ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತರು.

ಕಲೆಗೆ ಕಲೆ ಬೆರೆತದ್ದು ಹೀಗೆ…

ತೆಂಕುತಿಟ್ಟಿನ ಚಂಡೆ-ಮದ್ದಳೆಯ ಕಲಾವಿದ ಹರಿನಾರಾಯಣ ಬೈಪಾಡಿತ್ತಾಯರನ್ನು ಮದುವೆಯಾಗಿ ಸುಳ್ಯದ ಕಡಬಕ್ಕೆ ಬಂದಾಗ ಲೀಲಾವತಿ ಅವರಿಗೆ 23 ವರ್ಷ. ಕೆಲ ವರ್ಷಗಳಲ್ಲಿ ಗುರುಪ್ರಸಾದ್ ಮತ್ತು ಅವಿನಾಶ್ ಹುಟ್ಟಿದರು. ಸುಳ್ಯವೂ ಮಧೂರಿನಂತೆ ಯಕ್ಷಗಾನ ಕಲೆಯ ಆಡುಂಬೊಲವಾಗಿತ್ತು. ಪತ್ನಿಯ ಶಾಸ್ತ್ರೀಯ ಸಂಗೀತ ಗಾಯನ ಪ್ರತಿಭೆಯನ್ನು ಅರಿತ ಹರಿನಾರಾಯಣರಿಗೆ, ಯಕ್ಷಗಾನ ಹಾಡುಗಾರಿಕೆ ನಡೆಸಬಾರದೇಕೆ ಎಂದು ಅನಿಸಿತು. ಪತಿಯ ಮಾತು ಕೇಳಿ ಲೀಲಾ ಒಂದು ಕ್ಷಣ ಯೋಚಿಸಿದರು. ಕರ್ನಾಟಕ ಸಂಗೀತ ಮೃದು ಮಧುರ ಸ್ವರದಲ್ಲಿ ಹಾಡುವಂಥದ್ದು, ಆದರೆ ಯಕ್ಷಗಾನದ ಹಾಡುಗಾರಿಕೆಗೆ ಕಂಚಿನ ಕಂಠ, ಗತ್ತು ಬೇಕು. ಅದು ತಮ್ಮಿಂದ ಸಾಧ್ಯವೇ? ಎಂಬ ಅರೆಕ್ಷಣದ ಅನುಮಾನ ಸುಳಿಯಿತು. ಯಾವ ಕಲಿಕೆಗೂ ಸೈ ಎಂಬ ಅವರ ಅಂತರ್​ಸ್ಪೂರ್ತಿ ಹಿಂದೇಟು ಹಾಕಲಿಲ್ಲ. ಪ್ರಸಂಗವೊಂದರ ಕೃತಿ ಕೈಗೆತ್ತಿಕೊಂಡರು. ಅದರಲ್ಲಿನ ಹಾಡುಗಾರಿಕೆಯ ಭಾಗ ತೆರೆದು ಅಭ್ಯಾಸ ಮಾಡುತ್ತ ಹೋದರು. ಮೊದಮೊದಲು ಅವರ ಶಾರೀರ ಮಧುರತೆಯನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಛಲ ಬಿಡದ ಲೀಲಾ ಮೃದು ಕಂಠಕ್ಕೆ ಕಂಚಿನ ಛಾಪು ನೀಡೇಬಿಟ್ಟರು.

ಮೊದಮೊದಲು ಅವರು ಕಡಬದ ಸುತ್ತಲಿನ ಶಾಲಾ ವಾರ್ಷಿಕೋತ್ಸವ, ಮದುವೆ, ಉಪನಯನ, ಇತರ ಸಮಾರಂಭಗಳಲ್ಲಿ ಆಯೋಜಿಸುವ ತಾಳಮದ್ದಲೆಯ ಪ್ರಸಂಗಗಳಲ್ಲಿ ಹಾಡುಗಾರಿಕೆ ನಡೆಸಿಕೊಟ್ಟರು. ಇವರ ಶಾಸ್ತ್ರಬದ್ಧ ಕಂಚಿನ ಕಂಠದ ಖ್ಯಾತಿ ಸುತ್ತಲೂ ಹರಡಿದಾಗ ‘ಸೆಟ್ ಮೇಳ’ಗಳ ಪ್ರಸಂಗದಲ್ಲಿಯೂ ಕರೆಬಂತು. (ಸೆಟ್ ಮೇಳ ದಕ್ಷಿಣ ಕನ್ನಡದಲ್ಲಿ ಪ್ರಚಲಿತ. ಇದು ವೃತ್ತಿಪರ ಮೇಳವಲ್ಲ, ಯಕ್ಷಗಾನ ಅಭಿಮಾನಿಗಳು ಊರುಗಳಲ್ಲಿ ಯೋಜಿಸುವ ಮೇಳ) ಅಲ್ಲಿಯೂ ಭಾಗವತಿಕೆ ನಡೆಸಿಕೊಟ್ಟರು.

ಅದೇ ವೇಳೆ ಪಕ್ಕದ ಬೆಳ್ತಂಗಡಿಯ ಅರುವ ನಾರಾಯಣ ಶೆಟ್ಟಿ ‘ಆಳದಂಗಡಿ ಮೇಳ’ ಕಟ್ಟಿದ್ದರು. ಆ ಮೇಳದ ಮೂಲಕ ಭಾಗವತಿಕೆ ನಡೆಸಲು ಊರೂರು ಸುತ್ತಾಟ ಆರಂಭವಾಯಿತು. ಪತಿ ಹರಿನಾರಾಯಣ ಬೈಪಾಡಿತ್ತಾಯರು ಚೆಂಡೆ-ತಾಳಮದ್ದಲೆ ನಿರ್ವಹಿಸುತ್ತಿದ್ದರು. ಲೀಲಾವತಿ, ಹರಿನಾರಾಯಣ ಇಬ್ಬರೂ ತಾಳಮದ್ದಲೆ, ಯಕ್ಷಗಾನದ ವೇದಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ವರ್ಷಪೂರ್ತಿ ಮೇಳಗಳಲ್ಲಿ ಪ್ರವಾಸ

ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮೇಳಗಳಲ್ಲಿ ಭಾಗವತಿಕೆ ನಡೆಸಿದರು. ಸಾಹಿತ್ಯ ಸಿರಿವಂತಿಕೆಯ ‘ಪರಕೆದ ಪಿಂಗಾರ’ ಪ್ರಸಂಗದಲ್ಲಿ ಇವರು ಹಾಡಿದ ಹಾಡುಗಳನ್ನಂತೂ ಯಕ್ಷಗಾನ ರಸಿಕರು ದಶಕಗಳಿಂದ ಗುನುಗುನಿಸುತ್ತಿದ್ದಾರೆ. ದೇವಿಮಹಾತ್ಮೆ, ದಕ್ಷಯಜ್ಞ, ಕರ್ಣಪರ್ವ, ಸುಧನ್ವ ಮೋಕ್ಷ, ತುಳುವಿನ ಪರೆಕೆದ ಪಿಂಗಾರ, ವಜ್ರಕೋಗಿಲೆ, ಮುಂತಾದ ಪ್ರಸಂಗಗಳಲ್ಲಿ ಇವರು ಹಾಡಿದ ಪದ್ಯಗಳು ಪ್ರಸಿದ್ಧ. ಭಾಷಾ ಶುದ್ಧಿ, ಕಂಚಿನ ಕಂಠಕ್ಕೆ ಹೆಸರಾದರು ಇವರು. ಆಳದಂಗಡಿ ಮೇಳದಲ್ಲಿ ಲೀಲಾ ಅವರೇ ಪ್ರಧಾನ ಭಾಗವತರು. ತೆಂಕು, ಬಡಗು ಶೈಲಿಗೆ ಮತ್ತು ಕನ್ನಡ, ತುಳು ಪ್ರಸಂಗಗಳಿಗೆ ಹಾಡುಗಾರಿಕೆ ನಿರ್ವಹಿಸುತ್ತಾರೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಎಲ್ಲ ಸ್ಥಳಗಳು, ಉತ್ತರ ಕನ್ನಡ, ಬೆಂಗಳೂರು, ಮುಂಬೈ, ಪುನಾ, ದೆಹಲಿ, ಸೇಲಂ, ಬಳ್ಳಾರಿ, ಮಂತ್ರಾಲಯ, ಆಂಧ್ರ ಸೇರಿದಂತೆ ಹಲವೆಡೆ ಭಾಗವತಿಕೆ ನಡೆಸಿಕೊಟ್ಟರು. ಎಲ್ಲ ಕಡೆ ಚೆಂಡೆ-ಮದ್ದಳೆ ನಿರ್ವಹಿಸಿದವರು ಹರಿನಾರಾಯಣರು. ದಕ್ಷಿಣ ಕನ್ನಡದಲ್ಲಿ ಚಳಿಗಾಲದ ಬಳಿಕ 6 ತಿಂಗಳು ತಾಳಮದ್ದಲೆ/ಯಕ್ಷಗಾನ ನಡೆಯುತ್ತಿದ್ದರೆ, ಮಳೆ ಆರಂಭವಾಗುತ್ತಿದ್ದಂತೆ ಬೆಂಗಳೂರು, ಮುಂಬೈ, ಇತರ ಪ್ರದೇಶಗಳಿಗೆ ಮೇಳಗಳು ತೆರಳುತ್ತಿದ್ದವು. ಹೀಗಾಗಿ ವರ್ಷದ 6 ತಿಂಗಳು ಮನೆ/ಊರು ಬಿಟ್ಟು ಪತಿಯೊಂದಿಗೆ ಊರೂರು ಸುತ್ತುತ್ತಿದ್ದರು.

ಹಿರಿಯ ಕಲಾವಿದರ ಸಂಗದಲ್ಲಿ…

ಪ್ರತಿಭಾನ್ವಿತ ಮತ್ತು ಶ್ರೇಷ್ಠ ಯಕ್ಷಗಾನ ಕಲಾವಿದರ ಒಡನಾಟವೂ ಲೀಲಾ ಅವರಿಗೆ ದೊರೆಯಿತು. ಕಾಳಿಂಗ ನಾವುಡ, ಎಂ.ಎಲ್. ಸಾಮಗ, ಪಾತಾಳ ವೆಂಕಟರಮಣ ಭಟ್, ಈಶ್ವರ ಭಟ್, ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಬಣ್ಣದ ಮಾಲಿಂಗ, ಪ್ರಭಾಕರ ಜೋಷಿ, ಬಲಿಪ ಭಾಗವತರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಇತರ ಮುಮ್ಮೇಳ, ಹಿಮ್ಮೇಳ ಕಲಾವಿದರ ಒಡನಾಟ ಲೀಲಾ ಅವರ ಕಲಾಸೇವೆಯ ಉನ್ನತಿಗೆ ಸಹಕಾರವಾಯಿತು.

ಅಪಸ್ವರಕ್ಕೆ ಹಿಂದೇಟಿಲ್ಲ…

ಹೆಣ್ಣುಮಕ್ಕಳು ಯಕ್ಷಗಾನ ನೋಡುವುದೇ ಅಪರಾಧ ಎಂಬ ಕಾಲದಲ್ಲಿ 4 ದಶಕದ ಹಿಂದೆ, ಸಂಪ್ರದಾಯಸ್ಥ ಮನೆತನದ ಲೀಲಾವತಿ ಭಾಗವತಿಕೆಗೆ ಮುಂದಾದರು. ಯಕ್ಷಗಾನವೆಂದರೆ ರಾತ್ರಿ ಬೆಳಗಿನವರೆಗೂ ನಡೆಯುವಂಥದ್ದು. ಹೀಗೆ ರಾತ್ರಿ ಬೆಳಗಿನವರೆಗೂ ಹಾಡುತ್ತಿದ್ದರು. ರಾತ್ರಿ ನಿದ್ದೆಗೆಟ್ಟರೂ ಹಗಲಿನ ಮನೆಯ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿದ್ದರು. ‘ಮಕ್ಕಳು ಸಣ್ಣದಿರುವಾಗ ಅವರನ್ನು ಬಿಟ್ಟು ಹೋಗುವಾಗ ಕಷ್ಟವಾಗುತ್ತಿತ್ತು. ಅಜ್ಜಿಗೆ ತೊಂದರೆ ಕೊಡಬೇಡಿ ಎಂಬ ನನ್ನ ಮಾತನ್ನು ಅವರು ಉಳಿಸಿಕೊಳ್ಳುತ್ತಿದ್ದರು. ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಶಾಲೆಯ ರಜಾದಿನಗಳಲ್ಲಿ ನಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದೆವು’ ಎನ್ನುತ್ತಾರೆ. ಲೀಲಾರ ಕಿರಿಯ ಪುತ್ರ ಅವಿನಾಶ್ ಚೆಂಡೆ-ಮದ್ದಳೆ ಕಲಾವಿದ ಮತ್ತು ಪತ್ರಕರ್ತ. ಹಿರಿಯ ಪುತ್ರ ಗುರುಪ್ರಸಾದ್ ಖಾಸಗಿ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್.

ಪ್ರಶಸ್ತಿಗಳು:

ನಾನಾ ಕಡೆ ಅಭಿಮಾನಿ ಬಳಗ ಹೊಂದಿರುವ ಲೀಲಾವತಿ ಬೈಪಾಡಿತ್ತಾಯ ಅವರನ್ನು ಹಲವು ಉನ್ನತ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಅಗರಿ ಭಾಗವತ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿಗಳ ಜತೆ ಹಲವು ಪ್ರಶಸ್ತಿಗಳು, ಸನ್ಮಾನಗಳು ಸಂದಿದೆ.

***********************

ಲೀಲಾವತಿ ಬೈಪಡಿತ್ತಾಯರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು












************************


ಲೀಲಾವತಿ ಬೈಪಡಿತ್ತಾಯರ ಕೆಲವು ಛಾಯಾ ಚಿತ್ರಗಳು

( ಕೃಪೆ : ಅನಾಮಿಕ ಯಕ್ಷಗಾನಾಭಿಮಾನಿಗಳಿ೦ದ ಅ೦ತರ್ಜಾಲದಲ್ಲಿ ಲಭಿಸಿದ ಚಿತ್ರಗಳು )

ಖ್ಯಾತ ಹಿಮ್ಮೇಳವಾದಕ , ಪತಿ ಹರಿನಾರಾಯಣ ಬೈಪಡಿತ್ತಾಯರೊ೦ದಿಗೆ




ಬಲಿಪ ಭಾಗವತರು ಹಾಗೂ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರೊ೦ದಿಗೆ




ಸಮಾರ೦ಭವೊ೦ದರಲ್ಲಿ ಸನ್ಮಾನಿಸಲ್ಪಡುತ್ತಿರುವುದು




ತರುಣಿಯಾಗಿದ್ದಾಗ ಹೀಗಿದ್ದರು ನಮ್ಮ ಲೀಲಾವತಿ ಬೈಪಡಿತ್ತಾಯರು




************************



ಲೇಖನ ಕೃಪೆ : vijayavani



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ