ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಪ್ರಸ೦ಗ
Share
ದ್ರೌಪದಿ ಸ್ವಯಂವರ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 1 , 2012

ಪ್ರಸ೦ಗ ಕತೃ : ಶ್ರೀ ಹಟ್ಟಿಯಂಗಡಿ ರಾಮಭಟ್ಟ

ಆರಗಿನಮನೆಯ ಅಪಾಯದಿಂದ ಪಾರಾದ ಪಾಂಡವರು ಅರಣ್ಯ ಸೇರಿದರು. ಅದು ಹಿಡಿಂಬವನ. ಅಲ್ಲಿ ವಾಸವಾಗಿದ್ದ ಹಿಡಿಂಬಾಸುರ ಅವರನ್ನೆಲ್ಲ ತಿಂದೇ ಬಿಡಲು ಬಂದ. ಭೀಮ ಅವನನ್ನು ಕೊಂದ. ಅವನ ತಂಗಿ ಹಿಡಿಂಬೆ ಭೀಮನಿಗೆ ಒಲಿದು ಬಂದಳು. ಮದುವೆಯಾಗಲು ಭೀಮ ಒಪ್ಪಲಿಲ್ಲ. ಅಲ್ಲಿಗೆ ಬಂದ ವೇದವ್ಯಾಸಮುನಿ ಮುಂದೆ ನಡೆಯಲಿರುವ ಮಹಾಭಾರತ ಯುದ್ಧದಲ್ಲಿ ಹಿಡಿಂಬೆಗೆ ಹುಟ್ಟುವ ಮಗನಿಂದಾಗುವ ಸಹಾಯವನ್ನು ಮನವರಿಕೆ ಮಾಡಿಕೊಟ್ಟು ಮದುವೆಮಾಡಿಕೊಳ್ಳಲು ಸಲಹೆ ಮಾಡಿದ. ಭೀಮ-ಹಿಡಿಂಬೆಯರ ಮದುವೆಯಾಯಿತು. ಘಟೋತ್ಕಚ ಹುಟ್ಟಿದ.

ಅವನಿಗೆ ಅಧಿಕಾರ ನೀಡಿ ಪಾಂಡವರು ಏಕಚಕ್ರ ನಗರಕ್ಕೆ ಬಂದು ಬ್ರಾಹ್ಮಣವೇಷದಲ್ಲಿ ಭಿಕ್ಷೆ ಬೇಡುತ್ತ ಬಾಳತೊಡಗಿದರು. ಏಕಚಕ್ರನಗರಕ್ಕೆ ಹೊಂದಿಕೊಂಡಿದ್ದ ಅಡವಿಯಲ್ಲಿ ಬಕಾಸುರನೆಂಬ ರಕ್ಕಸನಿದ್ದ. ಊರವರ ಮತ್ತು ಅವನ ನಡುವೆ ಆದ ಒಪ್ಪಂದದಂತೆ ಪ್ರತೀದಿನ ಹನ್ನೆರಡು ಖಂಡುಗದ ಅಕ್ಕಿಯ ಅಡುಗೆ, ಎರಡುಕೋಣ ಮತ್ತು ಒಬ್ಬ ಮನುಷ್ಯನನ್ನು ಬಕನ ಆಹಾರವಾಗಿ ಕಳಿಸಬೇಕಿತ್ತು. ಮಾರನೆಯದಿನ ವಾಸವಾಗಿದ್ದ ನೆರಮನೆಯ ಬ್ರಾಹ್ಮಣನ ಪಾಳಿಯಾಗಿತ್ತು. ತಾಯಿಯ ಸೂಚನೆಯಂತೆ ಭೀಮನೇ ಅವನ್ನೆಲ್ಲ ಒಯ್ದು ಉಂಡು ಬಕಾಸುರನನ್ನು ಕೊಂದು ಬಂದ.

ಪಾಂಚಾಲರ ರಾಜ ದ್ರುಪದನಿಗೆ ಬೇಹಿನಚರರು ಅರಗಿನಮನೆಯಲ್ಲಿ ಪಾಂಡವರು ಸುಟ್ಟುಹೋದರೆಂದು ಸುದ್ದಿ ಮುಟ್ಟಿಸಿದರು. ಆತ ಚಿಂತಿತನಾದ. ದ್ರೋಣನ ಹಗೆ ತೀರಿಸಿಕೊಳ್ಳಲು ತನ್ನ ಮಗಳನ್ನು ಅರ್ಜುನನಿಗೆ ಕೊಟ್ಟು ಮದುವೆಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದ. ಪುರೋಹಿತರನ್ನು ಕರೆಸಿ ಸಮಾಲೋಚಿಸಿದ. ಪುರೋಹಿತ ಸ್ವಯಂವರದ ಸಲಹೆಕೊಟ್ಟ. ವೈಭವದ ಸ್ವಯಂವರದ ಏರ್ಪಾಡಾಯಿತು. ದೇಶದ ರಾಜರುಗಳಿಗೆಲ್ಲ ಓಲೆ ಹೋಯಿತು. ಬ್ರಾಹ್ಮಣವೇಷದ ಪಾಂಡವರು ರಾತ್ರಿವೇಳೆಯಲ್ಲಿ ಕೊಳ್ಳಿಯ ಬೆಳಕಿನಲ್ಲಿ ಪಾಂಚಾಲ ನಗರಕ್ಕೆ ಹೊರಟರು.

ಮಾರ್ಗ ಮಧ್ಯೆ ತನ್ನ ನಾರೀ ವೃಂದದೊಂದಿಗೆ ಜಲಕೇಳಿಗೆ ಬಂದ ಅಂಗಾರಪರ್ಣ ಸಿಟ್ಟಿಗೆದ್ದು ಪಾಂಡವರ ಮೇಲೆ ಏರಿಹೋದ. ಅರ್ಜುನನೊಂದಿಗೆ ಯುದ್ಧಮಾಡಿ ಸೋತು ಶರಣಾದ. ಅವರು ಪಾಂಡವರೆಂದು ತಿಳಿದುಕೊಂಡು ಅನೇಕ ಬಗೆಯಿಂದ ಉಪಕರಿಸಿದ. ಆ ಕಡೆ ಕೌರವರಿಗೂ ಸ್ವಯಂವರದ ಆಮಂತ್ರಣ ಹೋಗಿತ್ತು. ಕೌರವ ತನ್ನೆಲ್ಲ ಪರಿವಾರದೊಂದಿಗೆ ಪಾಂಚಾಲಕ್ಕೆ ಹೊರಟ. ದಾರಿಯಲ್ಲಿ ಅನೇಕ ಅಪಶಕುನಗಳಾದವು. ಕಾರಣವನ್ನೇ ಕಾಯುತ್ತಿದ್ದ ಹಾಗೆ ದ್ರೋಣ ಮತ್ತು ಕರ್ಣರ ನಡುವೆ ಶಕುನದ ವಿಷಯದಲ್ಲಿಯೇ ಜಗಳವಾಯಿತು. ಕೌರವ ಸಮಾಧಾನ ಹೇಳಿ ಜಗಳ ನಿಲ್ಲಿಸಿದ. ಪಾಂಚಾಲಕ್ಕೆ ಬಂದ ಪಾಂಡವರು ಕುಂಬಾರನೊಬ್ಬನ ಮನೆಯಲ್ಲಿ ಉಳಿದಕೊಂಡರು.

ದ್ವಾರಕೆಯಿಂದ ಬಂದ ಶ್ರೀಕೃಷ್ಣ ಕುಂಬಾರನ ಮನೆಗೇ ಹೋಗಿ ಪಾಂಡವರನ್ನು ಕಂಡ. ಕೃಷ್ಣನು ಅರ್ಜುನನಿಗೆ ಕೊಟ್ಟ ಮುದ್ರಿಕೆಯ ಉಂಗುರವನ್ನು ಸ್ವಲ್ಪ ಕಾಲ ಪಡೆದ ಭೀಮ ತನ್ನ ಅಸಾಮಾನ್ಯ ಭೋಜನ ಸಾಮರ್ಥ್ಯ ಪ್ರದರ್ಶಿಸಿ ಊಟ ನೀಡಿದ ದೃಷ್ಟದ್ಯುಮ್ನ ಸೋಲೊಪ್ಪುವಂತೆ ಮಾಡಿದ.

ಸ್ವಯಂವರ ಮಂಟಪದಲ್ಲಿ ಧೃಷ್ಟದ್ಯುಮ್ನ ತಂದೆಯ ಸೂಚನೆಯಂತೆ ಮತ್ಸ್ಯಯಂತ್ರವನ್ನು ಸಜ್ಜುಗೊಳಿಸಿದ. ಶೃಂಗಾರಗೊಂಡ ದ್ರೌಪದಿ ಸ್ವಯಂವರ ಮಂಟಪಕ್ಕೆ ಬಂದಳು. ಮತ್ಸ್ಯಯಂತ್ರ ಭೇದಿಸಿ ದ್ರೌಪದಿಯನ್ನು ವರಿಸಲು ಅನೇಕ ರಾಜರು ಪ್ರಯತ್ನಿಸಿ ಸೋತುಹೋದರು. ಕೌರವ, ಕರ್ಣ ಮುಂತಾದವರೂ ಸೋತರು. ಕ್ಷತ್ರಿಯರು ಕೈ ಸೋತಾಗ ಬ್ರಾಹ್ಮಣರೂ ಭಾಗವಹಿಸಬಹುದು ಎಂದಾಯಿತು.

ಅಣ್ಣ ಧರ್ಮಜನ ಕಣ್ಸನ್ನೆಯಂತೆ ಬ್ರಾಹ್ಮಣವೇಷದ ಅರ್ಜುನ ಪಂಥಕ್ಕೆ ಅಣಿಯಾದ. ಹಲವರು ಹಲವು ರೀತಿಯ ಮಾತಾಡಿ ಲೇವಡಿ ಮಾಡಿದರು. ಅರ್ಜುನ ಮತ್ಸ್ಯಯಂತ್ರ ಭೇದಿಸಿ ದ್ರೌಪದಿಯನ್ನು ಗೆದ್ದ. ಕೌರವನ ಪ್ರಚೋದನೆಯಂತೆ ಯುದ್ಧಕ್ಕೆ ಬಂದ ರಾಜರುಗಳನ್ನೆಲ್ಲ ಭೀಮಾರ್ಜುನರು ಸದೆಬಡಿದರು. ನಂತರ ದ್ರೌಪದಿಯೊಡನೆ ತಾವು ಉಳಿದುಕೊಂಡಿದ್ದ ಕುಂಬಾರನ ಮನೆಗೆ ಬಂದರು. ದ್ರೌಪದಿಯನ್ನು ಹೊರಗೆ ನಿಲ್ಲಿಸಿ ಒಳಗೆ ಬಂದ ಐವರೂ ತಾಯಿಯ ಪಾದಕ್ಕೆರಗಿ ದಿವ್ಯ ಮೌಕ್ತಿಕವೊಂದನ್ನು ತಂದಿದ್ದೇವೆ ಎಂದರು.ಅದನ್ನು ಕೇಳಿದ ತಾಯಿಕುಂತಿ ಐವರೂ ಸಮವಾಗಿ ವಿನಯದಿಂದ ಹಂಚಿಕೊಳ್ಳಿ ಎಂದು ಬಿಟ್ಟಳು. ಮಾತೆಯ ಮಾತು ತಪ್ಪದ ಪಾಂಡವರು ಐವರೂ ದ್ರೌಪದಿಯನ್ನು ಮದುವೆಯಾದರು.

ದ್ರೌಪದಿ ಸ್ವಯಂವರ
ಪ್ರಮುಖ ಪಾತ್ರಗಳು : ಪಂಚಪಾಂಡವರು ( ಧರ್ಮರಾಯ , ಭೀಮಸೇನ , ಅರ್ಜುನ , ನಕುಲ , ಸಹದೇವ )
ಕುಂತೀದೇವಿ (ಬ್ರಾಹ್ಮಣವೇಷದಲ್ಲಿ ಕೂಡ)
ದ್ರುಪದರಾಜ
ದ್ರೌಪದಿ
ಬಕಾಸುರ
ಶ್ರೀಕೃಷ್ಣ
ಇತರ ಪಾತ್ರಗಳು : ಪುರೋಚನ (ದುರ್ಯೋಧನನ ಕಡೆಯ ಸೇವಕ, ಅರಗಿನ ಅರಮನೆ ಸುಡಬಂದ ವ್ಯಕ್ತಿ)
ಹಿಡಿಂಬ
ಹಿಡಿಂಬೆ (ಮಾಯಾಹಿಡಿಂಬೆ)
ವೇದವ್ಯಾಸರು
ಬ್ರಾಹ್ಮಣರು
ಬೇಹಿನ ಚರರು
ಶತಾನಂದ (ಪುರೋಹಿತರು)
ದ್ರುಪದನ ಮಂತ್ರಿ
ಕೌರವ (ಶಕುನಿ ದುಶ್ಯಾಸನಾದಿಗಳು)
ಕರ್ಣ
ಅಂಗಾರಪರ್ಣ
ನಾರಿಯರು
ಧೌಮ್ಯರು
ದ್ರೋಣ
ಅಶ್ವತ್ಥಾಮ
ಸತ್ಯಭಾಮೆ
ಬಲರಾಮ (ಯಾದವರು ಸಹ)
ಗರುಡ
ಧೃಷ್ಟದ್ಯುಮ್ನ
ಮಾಗಧ, ಶಿಶುಪಾಲ, ಶಲ್ಯ ಮುಂತಾದವರು
ಪತಿಶೂನ್ಯನಾರಿ ಮುಂತಾದವರು

ಧೃಷ್ಟದ್ಯುಮ್ನ ಮರೆಯಲ್ಲಿ ನಿಂತು ಎಲ್ಲ ವಿದ್ಯಮಾನಗಳನ್ನು ಗಮನಿಸಿದ. ಅವರು ಪಾಂಡವರೇ ಎಂಬುದು ಅವನಿಗೆ ಖಾತ್ರಿಯಾಯಿತು. ದ್ರುಪದನಿಗೆ ಎಲ್ಲವನ್ನೂ ವಿವರಿಸಿದ. ನಂತರ ವೈಭವದಿಂದ ವಿವಾಹ ಮಹೋತ್ಸವ ಜರುಗಿತು. ವ್ಯಾಸಮುನಿ ಬಂದು ಶಿವ ಪಂಚಮುಖದಿಂದ ವರಕೊಟ್ಟಿದ್ದರಿಂದ ದ್ರೌಪದಿ ಪಂಚವಲ್ಲಭೆಯಾಗಲೇ ಬೇಕು ಎಂದನು. ಎಂಬಲ್ಲಿಗೆ ಹಟ್ಟಿಯಂಗಡಿಯ ರಾಮಭಟ್ಟನ ದ್ರೌಪದಿ ಸ್ವಯಂವರ ಮಂಗಲವಾಗುತ್ತದೆ.
ಇಂದು ರಂಗಸ್ಥಳದಲ್ಲಿ ಬಳಕೆಯಾಗುವುದು ರಾಮಭಟ್ಟನ ದ್ರೌಪದಿ ಸ್ವಯಂವರವೇ ಹಿಡಿಂಬಾಸುರವಧೆ, ಹಿಡಿಂಬಾವಿವಾಹ, ಬಕಾಸುರ ವಧೆ, ದ್ರೌಪದಿ ಸ್ವಯಂವರ ಇವೆಲ್ಲ ಬಿಡಿಯಾಗಿಯೂ ಇಡಿಯಾಗಿಯೂ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಪರಂಪರೆಯಿದೆ. ಒಂದು ಕಾಲದಲ್ಲಿ ಹಿಡಿಂಬಾ ವಿವಾಹ-ಬೇಡರಕಣ್ಣಪ್ಪ ಅತ್ಯಂತ ಜನಪ್ರಿಯವಾದ ಪ್ರದರ್ಶನ. ಮಾಯಾ ಹಿಡಿಂಬೆಯ ಪಾತ್ರಪರಂಪರೆ ಅನೂಚಾನವಾಗಿದೆ. ಕೃತಿಯಲ್ಲಿ ಹಲವು ಸಾಂಪ್ರದಾಯಿಕ ಮಟ್ಟುಗಳು ಪದ್ಯಗಳಿವೆ.

ಕೃಪೆ : http://kanaja.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Suresh(7/17/2015)
good
ಪ್ರಸ೦ಗಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ