ಭೀಷ್ಮವಿಜಯ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ನವ೦ಬರ್ 1 , 2012
|
ಪ್ರಸ೦ಗ ಕತೃ : ಶ್ರೀ ಹಲಸಿನಹಳ್ಳಿ ನರಸಿ೦ಹ ಶಾಸ್ತ್ರಿ
ಚಂದ್ರವಂಶದ ಪುರೂರವನಿಂದ ಪರಂಪರೆಯಾಗಿ ಬಂದ ಹಸ್ತಿನಾವತಿಯ ಪಟ್ಟವನ್ನು ಭೀಷ್ಮ ವಿಚಿತ್ರವೀರ್ಯಕನಿಗೆ ಕಟ್ಟಿ ತಾನು ಅದನ್ನು ಸಂರಕ್ಷಿಸುತ್ತಲೂ ಪರಿಪರಿಯ ನೀತಿಯನ್ನು ಬೋಧಿಸುತ್ತಲೂ ಇದ್ದ.
ಅದೇ ಕಾಲದಲ್ಲಿ ಕಾಶೀರಾಜ ಪ್ರತಾಪಸೇನ ತನ್ನ ಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರ ಸ್ವಯಂವರ ಏರ್ಪಡಿಸಿ ಹಲವು ರಾಜರಿಗೆ ಆಮಂತ್ರಣ ಕಳುಹಿಸಿದ. ಸೌಭದೇಶದ ದೊರೆ ಸಾಲ್ವನಿಗೆ ಆಮಂತ್ರಣ ಹೋಗಿರಲಿಲ್ಲ. ಗೂಢಚಾರರಿಂದ ಸ್ವಯಂವರದ ವಿಷಯ ತಿಳಿದ ಸಾಲ್ವ ಕೋಪಗೊಂಡು ಸ್ವಯಂವರದಲ್ಲಿ ಭಾಗವಹಿಸಲು ಕಾಶೀರಾಜ್ಯಕ್ಕೆ ಹೊರಟ. ಮಾರ್ಗಮಧ್ಯೆ ಜಲಕ್ರೀಡೆಯಾಡಲು ಬಂದ ಅಂಬೆಯನ್ನು ನೋಡಿದ. ಪರಸ್ಪರ ಮೋಹಗೊಂಡರು. ಮಾರನೆಯ ದಿನದ ಸ್ವಯಂವರದಲ್ಲಿ ಅಂಬಿಕೆ, ಅಂಬಾಲಿಕೆಯರು ಯಾರನ್ನೇ ಮದುವೆಯಾಗಲಿ ತಾನು ಮಾತ್ರ ಸಾಲ್ವನನ್ನೇ ಮದುವೆಯಗುವುದಾಗಿ ಅಂಬೆ ಸಾಲ್ವನಿಗೆ ಮಾತುಕೊಟ್ಟಳು.
|
ಸ್ವಯಂವರ ಮಂಟಪದಲ್ಲಿ ಸೇರಿದ ರಾಜರುಗಳ ನಡುವೆ ಪರಾಕ್ರಮಪಂಥ ನಡೆಯುತ್ತಿದ್ದಾಗ ಆಮಂತ್ರಣವೂ ಇಲ್ಲದ ಹಸ್ತಿನಾವತಿಯ ಭೀಷ್ಮ ಪ್ರತಿಷ್ಠೆಯಿಂದ ದಾಳಿಯಿಟ್ಟ. ಉಳಿದ ರಾಜರು ಹೆದರಿ ಹಿಂಜರಿದುಬಿಟ್ಟರು. ಸಾಲ್ವ ಭೀಷ್ಮನೊಂದಿಗೆ ಹೋರಾಡಿ ಸೋತು ಹೋದ. ಉಳಿದ ರಾಜರು ಭೀಷ್ಮನಿಗೆ ಶರಣಾದರು. ಗೆದ್ದ ಭೀಷ್ಮ ಕನ್ನೆಯರನ್ನು ರಥವೇರಿಸಿಕೊಂಡು ಹಸ್ತಿನಾವತಿಗೆ ಕರೆತಂದ.
ಮೂವರು ಕನ್ನೆಯರನ್ನು ಎದುರಿಗಿರಿಸಿಕೊಂಡು ಹಸ್ತಿನಾವತಿಯ ವಂಶಪರಂಪರೆಯನ್ನು ನಿವರಿಸಿ ಮೂವರನ್ನೂ ಸತ್ಯವತಿಯ ಮಗ ವಿಚಿತ್ರವೀರ‍್ಯಕನಿಗೆ ಕೊಟ್ಟು ಮದುವೆ ಮಾಡಲು ಸಿದ್ಧನಾದ. ಅಂಬಿಕೆ, ಅಂಬಾಲಿಕೆಯರು ಮರುಮಾತನಾಡದೆ ಒಪ್ಪಿಕೊಂಡರು.
ಅಂಬೆ ಒಪ್ಪದೆ ತಾನು ಸೌಭದೇಶದ ದೊರೆ ಸಾಲ್ವನಿಗೆ ಒಲಿದು ಮಾತುಕೊಟ್ಟಿರುವೆನೆಂದು ತಿಳಿಸಿದಳು. ಓರ್ವ ಬ್ರಾಹ್ಮಣನನ್ನು ಜತೆ ಮಾಡಿ ಭೀಷ್ಮ ಅಂಬೆಯನ್ನು ಸಾಲ್ವನಲ್ಲಿಗೆ ಕಳುಹಿಸಿದ. ತುಂಬಿದ ಸಭೆಯಲ್ಲಿ ಅಪಮಾನಿತನಾಗಿದ್ದ ಸಾಲ್ವ ಅಂಬೆಯನ್ನು ತಿರಸ್ಕರಿಸಿದ. ತಿರುಗಿ ಭೀಷ್ಮನಲ್ಲಿಗೆ ಬಂದ ಅಂಬೆ ತನ್ನನ್ನು ಮದುವೆಯಾಗಲೇಬೇಕೆಂದು ಒತ್ತಾಯಿಸಿದಳು. ಭೀಷ್ಮ ತನ್ನ ಪ್ರತಿಜ್ಞೆಯ ವಿಷಯ ವಿವರಿಸಿ ತನಗೂ ಬೇಡ ; ತನ್ನ ತಮ್ಮನಿಗೂ ಬೇಡ ಎಂದು ನಿರಾಕರಿಸಿಬಿಟ್ಟ. ಸಿಟ್ಟಿಗೆದ್ದ ಅಂಬೆ ಭೀಷ್ಮನನ್ನು ಕೊಲ್ಲುವ ಪ್ರತಿಜ್ಞೆ ಮಾಡಿ ವಿಂಧ್ಯಾರಣ್ಯ ಸೇರಿದಳು.
ಅಲ್ಲಿ ತನ್ನನ್ನು ಮೋಹಿಸಿಬಂದ ಏಕಲವ್ಯನೆಂಬ ಕಿರಾತನ ಮನವೊಲಿಸಿ ಭೀಷ್ಮನನ್ನು ಕೊಲ್ಲಲು ಕರೆದು ತಂದಳು. ಆತನೂ ಸೋತುಹೋದ. ಅಂಬೆ ಯತಿಧರ‍್ಮಪಾಲಿಸುವುದಾಗಿ ಹೇಳಿ ಮತ್ತೆ ಅರಣ್ಯ ಸೇರಿದಳು. ಅಲ್ಲಿ ಶೈಖ್ಯಾವತ್ಯ ಮುನಿಯ ಆಶ್ರಮ ಸೇರಿದಳು. ಅಲ್ಲಿಗೆ ಬಂದ ಅಂಬೆಯ ಅಜ್ಜ ಹೋತೃ ವಾಹನ ಮೊಮ್ಮಗಳನ್ನು ಗುರುತಿಸಿದ. ಪರಶುರಾಮನ ಮೂಲಕ ಮದುವೆ ಮಾಡಿಸುವುದಾಗಿ ಹೇಳಿ ಪರಶುರಾಮನಲ್ಲಿಗೆ ಕರೆತಂದ. ಶಿಷ್ಯ ಭೀಷ್ಮನನ್ನು ಮದುವೆಗೆ ಒಪ್ಪಿಸಿಯೇ ಬಿಡುವುದಾಗಿ ಹೇಳಿ ಪರಶುರಾಮ ಹಸ್ತಿನಾವತಿಗೆ ಬಂದ. ಭೀಷ್ಮನ ಮನವೊಲಿಸಲು ಪರಶುರಾಮ ಪರಿಪರಿಯಾಗಿ ಪ್ರಯತ್ನಿಸಿದ. ಶಾಪಾನುಗ್ರಹದ ಬೆದರಿಕೆ ಹಾಕಿದ. ಭೀಷ್ಮ ಒಪ್ಪಲಿಲ್ಲ, ಕುರುಕ್ಷೇತ್ರದಲ್ಲಿ ಅವರಿಬ್ಬರ ನಡುವೆ ಘನಘೋರ ಯುದ್ಧವಾಯಿತು. ಭೀಷ್ಮ ಸೋಲುವವನಲ್ಲ ; ಯುದ್ಧ ನಿರರ್ಥಕ ಎಂದು ಅಶರೀರವಾಣಿಯಾದಾಗ ಪರಶುರಾಮ ನಿರ್ಗಮಿಸಿದ.
ಮುಂದಿನ ಜನ್ಮದಲ್ಲಿ ಭೀಷ್ಮನನ್ನು ಕೊಲ್ಲುವುದಾಗಿ ಶಪಥಮಾಡಿ ಅಗ್ನಿಕುಂಡಕ್ಕೆ ಹಾರಿ ಪ್ರಾಣಕಳೆದುಕೊಂಡಳು. ತನ್ನಿಂದ ಸ್ತ್ರೀಹತ್ಯೆಯಾಗಿಬಿಟ್ಟಿತೆಂದು ಭೀಷ್ಮ ಚಿಂತಿತನಾದ. ನಾರದ ಬಂದು ಭೀಷ್ಮನಿಗೆ ಸಮಾಧಾನ ಹೇಳಿದ. ಭೀಷ್ಮ ಹಸ್ತಿನಾವತಿಗೆ ಬಂದು ತಾಯಿಗೆ ವಂದಿಸಿ ವೃತ್ತಾಂತವನ್ನೆಲ್ಲ ಹೇಳಿದ. ಪಟ್ಟಣವನ್ನೆಲ್ಲ ಶೃಂಗರಿಸಿ ವಿಜೃಂಭಣೆಯಿಂದ ಅಂಬಿಕೆ, ಅಂಬಾಲಿಕೆಯರ ಮದುವೆಯನ್ನು ವಿಚಿತ್ರವೀರ್ಯಕನೊಂದಿಗೆ ನೆರವೇರಿಸಿದ. ಎಂಬಲ್ಲಿಗೆ ಭೀಷ್ಮವಿಜಯ ಪ್ರಸಂಗಕೃತಿಯ ಕಥೆ ಮುಕ್ತಾಯವಾಗುತ್ತದೆ.
ಈ ಪ್ರಸಂಗ ಕೃತಿಯಲ್ಲಿಯೂ ಕೆಲವು ವಿಶೇಷಗಳಿವೆ. ಕಥಾ ಸಂದರ್ಭವನ್ನು ಕುಮಾರವ್ಯಾಸನಿಂದಲೇ ತೆಗೆದುಕೊಂಡಿದ್ದರೂ ರಂಗಕ್ಕೆ ಅನುಗುಣವಾಗಿ ದೃಶ್ಯಗಳನ್ನು ಹಿಗ್ಗಿಸುವಲ್ಲಿ ಕವಿ ತುಂಬ ಯಶಸ್ಸು ಪಡೆದಿದ್ದಾನೆ. ಈ ಪ್ರಸಂಗಕೃತಿಯ ರಂಗಕೃತಿಯಲ್ಲಿ ಭೀಷ್ಮ, ಅಂಬೆ, ಸಾಲ್ವ, ಪರಶುರಾಮ ಪಾತ್ರಗಳ ನಿರ್ವಹಣೆಯ ಕ್ರಮದಲ್ಲಿ ಸಾಕಷ್ಟು ನಟ ಪರಂಪರೆಗಳು ಸ್ಥಾಪಿತವಾಗಿವೆ.
ಹಲವು ಪ್ರಧಾನ ವೇಷಧಾರಿಗಳೂ ಸ್ತ್ರೀ ವೇಷಧಾರಿಗಳೂ ಬೇರೆ-ಬೇರೆ ಕಾಲಘಟ್ಟಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಸ್ತ್ರೀ ಸ್ವಾತಂತ್ರ್ಯದ ಹಿರಿಮೆಯನ್ನೂ ದುರಂತವನ್ನೂ ಅಂಬೆಯ ಪಾತ್ರದಲ್ಲಿ ಚಿತ್ರಿಸಿ ಹೆಸರು ಮಾಡಿದವರಿದ್ದಾರೆ. ಅಂಬೆಯ ಬದುಕನ್ನೂ ಆಕಸ್ಮಿಕವಾಗಿ ಪ್ರವೇಶಿಸಿ ಆ ಬದುಕನ್ನು ಹಾಳುಗೆಡಹುವ ಖಳ ಸಾಲ್ವನನ್ನು ಚಿತ್ರಿಸುವ ಬದಲು ಭಗ್ನಪ್ರಣಯಿಯಾದ ಸಾಲ್ವನನ್ನು ಚಿತ್ರಿಸುವ ಪರಂಪರೆಯೂ ತೊಡಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಸಾಲ್ವನನ್ನು ಬಣ್ಣದ ವೇಷ (ರಾಕ್ಷಸ)ದಂತೆ ರೂಪಿಸುವ ಕ್ರಮವೂ ಇದೆ.
|
ಭೀಷ್ಮ ವಿಜಯ |
 |
ಪ್ರಮುಖ ಪಾತ್ರಗಳು |
: |
ಭೀಷ್ಮ
ಅಂಬೆ
ಸಾಲ್ವ
ವದ್ಧಬ್ರಾಹ್ಮಣ
ಪ್ರತಾಪಸೇನ
ಅಂಬಾಲಿಕೆ
ಅಂಬಿಕೆ
ಪರಶುರಾಮ
|
ಇತರ ಪಾತ್ರಗಳು |
: |
ದ್ವಾರಪಾಲಕ
ವಿಚಿತ್ರವೀರ್ಯ
ಏಕಲವ್ಯ
ಸುಮತಿ
ಕಿರಾತರು
ಪುಚ್ಛ ಮುಂತಾದ ವಟುಗಳು
ದೃಢಸೇನ
ಶೈಖ್ಯಾವತ್ಯ
ಚಾರಕರು
ಕೃತೌವ್ರಣ
ಓಲೆದೂತ
ಸುಹೋತ್ರ-ಮೈತ್ರೇಯ
ಸುಕೇತು
ಋಷಿಗಳು
ಹೋತ್ರವಾಹನ
ಗಣಪತಿ
ಅಂಬೆ
ಭಕುಟಿ
ವಸು
ಸುವೇಶ
ಸಖಿಯರು
ಅಂಬರವಾಣಿ
ಗಂಗೆ
ಗೂಢಚಾರಕ
ಚಿತ್ರವರ್ಮ
ಸುನೀತಿ
ನಾರದ |
|
|
ಪ್ರಸಂಗ ಕೃತಿ ರಂಗದಲ್ಲಿ ಮತ್ತು ತಾಳಮದ್ದಳೆ ಎರಡರಲ್ಲೂ ಖ್ಯಾತಿ ಪಡೆದಿದೆ. ಅಂಬೆಯನ್ನು ಬಯಸಿ ಭೀಷ್ಮನೊಂದಿಗೆ ಯುದ್ಧ ಮಾಡುವ ಕಿರಾತನ ಪಾತ್ರ ಪ್ರಸಂಗದಲ್ಲಿ ಹೊಸದಾಗಿ ಸೇರಿದೆ. ಇದರಿಂದ ಯಕ್ಷಗಾನ ಶಬರಪಾತ್ರ ಪರಂಪರೆಗೆ ಅವಕಾಶವಾಗಿದೆ.
ಡಾ.ಕಾರಂತರ ನೃತ್ಯನಾಟಕ ಪ್ರಯೋಗಕ್ಕೂ ಇತ್ತೀಚಿನ ಸಮಯಮಿತಿಯ ಪ್ರದರ್ಶನಕ್ಕೂ ಈ ಪ್ರಸಂಗ ಒದಗಿದೆ. ಒಟ್ಟಿನಲ್ಲಿ ಯಕ್ಷಗಾನರಂಗಭೂಮಿಯ ಚರಿತ್ರೆಯ ಅತ್ಯಂತ ಪ್ರಮುಖ ಪ್ರಸಂಗಗಳಲ್ಲಿ ಒಂದಾಗಿದೆ.
ಕೃಪೆ : http://kanaja.in
|
|
|