ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಣ್ಣದ ವೇಷಕ್ಕೆ ಲಾಲಿತ್ಯದ ಛಾಪು ನೀಡಿದ ದಿಗ್ಗಜ - ಪಕಳಕುಂಜ ಕೃಷ್ಣ ನಾಯ್ಕ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಸೆಪ್ಟೆ೦ಬರ್ 13 , 2013

ರಾವಣ, ಮೈರಾವಣ , ರುದ್ರಭೀಮ ,ಅಜಮುಖಿ, ಶೂರ್ಪನಖಿ, ಕುಕ್ಕಿತ್ತಾಯ , ಶು೦ಭಾಸುರ ,ಹಿಡಿಂಬ ಮುಂತಾದ ಬಣ್ಣದ ವೇಷಗಳಿಗೆ ಪ್ರಖ್ಯಾತರಾಗಿದ್ದು , ಶಿಸ್ತುಧ್ಧವಾದ ಕುಣಿತ, ತೆರೆಪೊರಪ್ಪಾಟು, ಚುಟ್ಟಿ ಇಡುವ ಕ್ರಮಗಳಿಗೆ ಹೆಸರಾದ ಪಕಳಕುಂಜ ಕೃಷ್ಣ ನಾಯ್ಕರು ಅತೀವ ಶ್ರಧ್ಧೆಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದರು. ಬಣ್ಣದ ಕುಟ್ಯಪ್ಪು , ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು , ತ್ರಿವಿಕ್ರಮ ಶೆಣೈ ಮುಂತಾದ ದಿಗ್ಗಜರು ತಮ್ಮ ಬಣ್ಣದ ವೇಷದ ಭೀಕರತೆಗೆ ಹೆಸರಾದರೆ ಪಕಳಕುಂಜ ಕೃಷ್ಣ ನಾಯ್ಕರು ಬಣ್ಣದ ವೇಷಕ್ಕೆ ಲಾಲಿತ್ಯವನ್ನು ನೀಡಿ ರಂಗದಲ್ಲಿ ಮೆರೆಸಿದವರು. ಅವರ ಕತ್ತರಿ ಕುಣಿತ ನೋಡುವುದೇ ಕಣ್ಣಿಗೆ ಹಬ್ಬ.

ಬಾಲ್ಯ ಮತ್ತು ಶಿಕ್ಷಣ

ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಪಕಳಕುಂಜ ಕೆದುಮೂಲೆಯಲ್ಲಿ 1935ರಲ್ಲಿ ಚೋಮ ನಾಯ್ಕ ಮತ್ತು ಕಾವೇರಿ ದಂಪತಿಯ 8 ಮಂದಿ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದ ಇವರು ಅಡ್ಯನಡ್ಕದ ಸರಕಾರಿ ಶಾಲೆಯಲ್ಲಿ 7ನೇ ತರಗತಿಗೆ ವಿದ್ಯಾಭ್ಯಾಸ ಮಾಡಿ ಯಕ್ಷಗಾನ ಕಲೆಗೆ ಮಾರುಹೋದರು. ಅಳಿಕೆ ಮೋನು ಶೆಟ್ಟಿ ಮತ್ತು ಅಳಿಕೆ ರಾಮಯ್ಯ ರೈ ಅವರಿಂದ ನಾಟ್ಯಾಭ್ಯಾಸ ಮತ್ತು ಅರ್ಥಗಾರಿಕೆ ಕಲಿತರು. ಉಕ್ಕಿನಡ್ಕದ ಬಳ್ಳಂಬೆಟ್ಟು ಶಾಸ್ತಾರ ಮೇಳ ಹಾಗೂ ಭಾಗವತರಾಗಿದ್ದ ತಲೆಂಗಳ ಶಾಮ ಭಟ್ಟರ ಆಶಯದಂತೆ ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿದರು. ನಂತರ ಕರ್ನಾಟಕ ಮೇಳದಲ್ಲಿ ವೇಷಧಾರಿಯಾಗಿ ವಿಭಿನ್ನ ಅನುಭವ ಪಡೆದರು.

ವೃತ್ತಿ ಹಾಗೂ ಕಲಾಸೇವೆ

ಅಳಿಕೆ ಮೋನು ಶೆಟ್ಟಿ, ಕುಂಬಳೆ ಕುಟ್ಯಪ್ಪು, ಚಂದ್ರಿಗಿರಿ ಅಂಬು, ಬಣ್ಣದ ಮಾಲಿಂಗ ಹಿರಿಯ ಕಲಾವಿದರ ಒಡನಾಟದಿಂದ ಬಣ್ಣದ ವೇಷಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಬಣ್ಣದ ಕಷ್ಣ ನಾಯ್ಕರೆಂದೇ ಗುರುತಿಸಿಕೊಂಡರು. ಅಬ್ಬರದ ಗತ್ತು, ವಿಶಿಷ್ಟ ಬಣ್ಣಗಾರಿಕೆ ಪಾತ್ರಕ್ಕೆ ತಕ್ಕುದಾದ ಸ್ವರಭಾರ, ತಾಳಕ್ಕೆ ತಕ್ಕ ಹೆಜ್ಜೆ, ರಂಗಕಲ್ಪನೆ, ತಿಳಿಹಾಸ್ಯದ ಸ್ಪಷ್ಟತೆಯ ಮಾತುಗಳಿಂದ ರಂಗದಲ್ಲಿ ಕಾರ್ಯನಿರ್ವಹಿಸಿದರು.

ಉಕ್ಕಿನಡ್ಕದ ಬಳ್ಳಂಬೆಟ್ಟು ಶಾಸ್ತಾರ ಮೇಳದಲ್ಲಿ 1 ವರ್ಷ ಕಲಾವಿದನಾಗಿ ಸೇವೆ. ಸಲ್ಲಿಸಿ ಬಳಿಕ ಕರ್ನಾಟಕ ಮೇಳದಲ್ಲಿ ಬಾಲವೇಷ, ಪುಂಡು ವೇಷ, ಕಿರೀಟ ವೇಷಗಳನ್ನು ಸತತ 4 ವರ್ಷಗಳ ಕಾಲ ಮಾಡಿದರು. ಪಕಳಕುಂಜರ ಸ್ವರಭಾರ, ಗಾಂಭೀರ್ಯ, ವೇಷಗಾರಿಕೆಯನ್ನು ಗಮನಿಸಿದ ತೆಂಕುತಿಟ್ಟಿನ ಸರ್ವಶ್ರೇಷ್ಠ ಕಲಾವಿದ ಶೇಣಿಯವರ ಸಲಹೆಯಂತೆ ಕೂಡ್ಲು ಮೇಳದಲ್ಲಿ ಬಣ್ಣದ ವೇಷ ಆರಂಭ. ಶುಂಭ, ಶೂರಪದ್ಮ, ಮಾಗಧ, ರಾವಣ. ಮಹಿರಾವಣ, ಪೂತನಿ, ಅಜಮುಖೀ, ಶಕಟಾಸುರ, ಹಿಡಿಂಬ ಮೊದಲಾದ ಪಾತ್ರಗಳಿಗೆ ರಂಗದಲ್ಲಿ ಜೀವ ತುಂಬಿದ ಕಲಾವಿದ. ಬಣ್ಣದ ವೇಷದ ಮೂಲಕ ಹೊಸ ಹೊಳಹನ್ನು ತೆರೆದಿಟ್ಟು ಪಾತ್ರಗಳ ವಿಸ್ತಾರವನ್ನು ನಿಜ ಅರ್ಥದಲ್ಲಿ ಮಾಡಿದ ಕಲಾವಿದ.

ಅಜಮುಖೀ, ಶೂರ್ಪನಖೀ ಮೊದಲಾದ ಹೆಣ್ಣು ಬಣ್ಣಗಳಲ್ಲಿ ರಾಕ್ಷಸ ಸ್ತ್ರೀಗೆ ಒಪ್ಪುವ ಸೆಡವು, ಬಿನ್ನಾಣಗಳನ್ನು ಪ್ರದರ್ಶಿಸಿ ವಿಶಿಷ್ಟ ಅಭಿನಯದ ಮೂಲಕ ಜನಮಾಸನದಲ್ಲಿ ನೆಲೆಯಾದ ಅಭಿಜಾತ ಕಲಾವಿದ. ಬಣ್ಣದ ವೇಷಧಾರಿಗಳಿಗೆ ಅರ್ಥಗಾರಿಕೆ ಕಡಿಮೆ ಎಂಬ ಅಗ್ಗಳಿಕೆಯನ್ನು ತೆಗೆದು ಹಾಕಿ ಭಾವಪೂರ್ಣವೂ, ವಿದ್ವತ್ಪೂರ್ಣವೂ ಆಗಿ ಅರ್ಥಗಾರಿಕೆ ವಿಸ್ತರಿಸಿ ಪಾತ್ರದ ಶೋಭೆ ಹೆಚ್ಚಿಸುತ್ತಿದ್ದರು. ಹೆಣ್ಣು ಬಣ್ಣದ ಪಾತ್ರಗಳಲ್ಲಿ ತಿಳಿ ಹಾಸ್ಯದ ಮೂಲಕ ರಂಗಪ್ರಬುದ್ಧತೆಯನ್ನು ಕಾಪಾಡುತ್ತಿದ್ದ ಅಭಿನಯಶ್ರೇಷ್ಠ ಗುಣಗ್ರಾಹಿ. ಭಾಗವತರ ಶ್ರುತಿ ಸ್ಥಾಯಿಯಲ್ಲಿ ಅಟ್ಟಹಾಸ ತೆಗೆಯುತ್ತಿದ್ದ ಅಪೂರ್ವ ಕಲಾವಿದ . ಧೀರೋದಾತ್ತ ಪಾತ್ರಗಳಿಗೆ ಪಕಳಕುಂಜರು ಎತ್ತಿದ ಕೈ. ಭೀಮಕ, ಹಂಸಧ್ವಜನಂತಹ ಪಾತ್ರಗಳು ರಂಗದಲ್ಲಿ ಚಿರಸ್ಥಾಯಿಯಾಗಿಸಿದ ಹೆಗ್ಗಳಿಕೆ ಪಕಳಕುಂಜರದ್ದು.
ಪಕಳಕು೦ಜ ಕೃಷ್ಣ ನಾಯ್ಕ‌
ಜನನ : 1935
ಜನನ ಸ್ಥಳ : ಪಕಳಕುಂಜ, ಮಾಣಿಲ ಗ್ರಾಮ
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಬಣ್ಣದ ವೇಷಧಾರಿಯಾಗಿ 48 ವರ್ಷ ಕಾಲ ಹಲವು ಮೇಳದಲ್ಲಿ ದುಡಿಮೆ.
ಪ್ರಶಸ್ತಿಗಳು:
1999ರಲ್ಲಿ ಜನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಡೋಗ್ರ ಪೂಜಾರಿ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಜತೆಗೆ ಹತ್ತಾರು ಸಮ್ಮಾನಗಳು,
ಮರಣ ದಿನಾ೦ಕ : ಸೆಪ್ಟೆ೦ಬರ್ 12, 2013


ಮೂಲ್ಕಿ ಮೇಳದಲ್ಲಿ 1 ವರ್ಷ, ಕಟೀಲು ಮೇಳದಲ್ಲಿ 5ವರ್ಷ, ಕೂಡ್ಲು ಮೇಳದಲ್ಲಿ 8 ವರ್ಷ, ಧರ್ಮಸ್ಥಳ ಮೇಳದಲ್ಲಿ ದೀರ್ಘ‌ಕಾಲ 32 ವರ್ಷದ ಸೇವಾನುಭವ.

ಮುಂಬಯಿ, ಬೆಂಗಳೂರು, ದೆಹಲಿ, ಬಹೈನ್‌, ದುಬೈ, ಮೊದಲಾದೆಡೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗಿ. ಸಹಕಲಾವಿದರ ಜತೆಗೆ ಸಹೃದಯಿ ಒಡನಾಟ. ರಂಗದ ಮೇಲಿನ ಖಳನಟನಾದರೂ ಕಾಸಗಿ ಜೀವನದಲ್ಲಿ ಬಣ್ಣದ ವೇಷದ ಕಲಾವಿದನೆಂದು ನಂಬಲು ಕಷ್ಟವಾಗುವ ಸೌಮ್ಯ ಸ್ವಭಾವ.

ಪ್ರಶಸ್ತಿ

1999ರಲ್ಲಿ ಜನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಡೋಗ್ರ ಪೂಜಾರಿ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಜತೆಗೆ ಹತ್ತಾರು ಸಮ್ಮಾನಗಳು,

ನಿಧನ

ಕಳೆದ 10 ವರ್ಷಗಳ ಹಿಂದೆ ಹೃದಯಾಘಾತಕ್ಕೆ ಒಳಗಾದ ಬಳಿಕ ತಿರುಗಾಟವನ್ನು ಮೊಟಕುಗೊಳಿಸಿ ಮನೆಯಲ್ಲೇ ಇದ್ದರು. ಕಳೆದ 4 ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಪಾರ್ಶ್ವವಾಯುವಿಗೆ ತುತ್ತಾಗಿ ಮಲಗಿದ್ದಲ್ಲಿದ್ದ ಕೃಷ್ಣ ನಾಯ್ಕ ಅವರು 15 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಪರಮುಖ ಎಂಬಲ್ಲಿ ಪತ್ನಿ ಯಮುನ, 3 ಗಂಡು, 5 ಹೆಣ್ಣುಮಕ್ಕಳೊಂದಿಗೆ ವಾಸ್ತವ್ಯವಿದ್ದರು.

48 ವರ್ಷ ಕಾಲ ರಂಗಸ್ಥಳದಲ್ಲಿ ಮೆರೆದ ಯಕ್ಷಗಾನ ತೆಂಕುತಿಟ್ಟಿನಲ್ಲಿ ಮನೆ ಮಾತಾಗಿದ್ದ ಪಕಳಕುಂಜ ಕೃಷ್ಣ ನಾಯ್ಕ (78) ಅವರು ಗುರುವಾರ ( 12-09-2013) ಮುಂಡಾಜೆ ಪರಮುಖದ ಸ್ವಗೃಹದಲ್ಲಿ ನಿಧನರಾದರು.



ಪಕಳಕು೦ಜ ಕೃಷ್ಣ ನಾಯ್ಕ್




ರಾಕ್ಷಸ ವೇಷದ ಮುಖರ್ಣಿಕೆಯಲ್ಲಿ


ಕೃಪೆ : http://vijaykarnataka.com/     http://udayavani.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ