ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಪ್ರಸಂಗ ಸಾಹಿತ್ಯ

ಲೇಖಕರು :
ಪ್ರಭಾಕರ ಶಿಶಿಲ
ಗುರುವಾರ, ಜುಲೈ 28 , 2016

ಪ್ರಸಂಗ ಸಾಹಿತ್ಯದ ಲಕ್ಷಣಗಳು ಮತ್ತು ಉದ್ದೇಶಗಳು

ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮತ್ತು ಕಲಾವಿದರು ಪ್ರಸಂಗನಿಷ್ಠರಾಗಿ ಕಥಾವಸ್ತು ವನ್ನು ಮುಂದಕ್ಕೆ ಒಯ್ಯುತ್ತಾರೆ.

ಯಕ್ಷಗಾನ ಪ್ರಸಂಗ ಕರ್ತನನ್ನು ಯಕ್ಷಕವಿ ಎಂದು ಕರೆಯುತ್ತಾರೆ. ಪ್ರೊ. ಮರಿಯಪ್ಪ ಭಟ್ಟರು ಯಕ್ಷಗಾನ ಪ್ರಸಂಗಗಳನ್ನು ಜಾನಪದ ವಾಙ್ಮಯ ಎಂದು ಪರಿಗಣಿಸಿದ್ದಾರೆ. ‘ಪ್ರಸಂಗ’ ಎಂದರೆ ಘಟನೆ ಎಂದರ್ಥ. ಒಂದು ಪ್ರಸಂಗವು ಒಂದು ಘಟನಾ ಕೇಂದ್ರಿತವಾಗಿರುತ್ತದೆ . ಉದಾ :ಶೂರ್ಪನಖಾ ಮಾನಭಂಗ, ದ್ರೌಪದಿ ವಸ್ತ್ರಾಪಹಾರ, ಕರ್ಣಾವಸಾನ,ಇತ್ಯಾದಿ. ಈ ಘಟನೆಗಳನ್ನು ಇತರ ವಿವರಗಳಿಂದ ವಿಸ್ತರಿಸಿ ಪ್ರಸಂಗವನ್ನು ರಚಿಸಲಾಗುತ್ತದೆ.

ರಾಘವ ನಂಬಿಯಾರರು ಹೀಗನ್ನುತ್ತಾರೆ: ‘ಪ್ರಸಂಗ ಮೂಲತಃ ಒಂದು ಗೀತ ರೂಪಕ. ಆದರೆ, ಉದ್ದೇಶ ಸರಸ ಸಂಭಾಷಣೆಯಿಂದ ಕೂಡಿದ ಸೊಗಸಾದ ರಂಗಪ್ರದರ್ಶನವನ್ನು ಏರ್ಪಡಿಸುವುದು. ಕರ್ನಾಟಕದ ಕೆಲವು ಕಡೆಗಳಲ್ಲಿ ಲಿಖಿತವಾಗಿ ಕಾಣಿಸುವ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಆಶು ವಚನಗಾರಿಕೆಯಲ್ಲಿ ಕಾಣಿಸುವ ಸಂಭಾಷಣೆಯಿಂದ ಯಕ್ಷಗಾನದ ರಂಗಕೃತಿ ಗದ್ಯಪದ್ಯ ಮಿಶ್ರಿತವಾದ ದೃಶ್ಯ ಕಾವ್ಯಕ್ಕೆ ಸೇರಬೇಕು.’ [ಕಲ್ಕೂರ ಕೆ. ಎಸ್‌.ಸಂದಿ ಆಶುವೈಭವ, 1989, ಪುಟ 196]

ಟಿ. ಕೇಶವಭಟ್ಟರ ಅಭಿಪ್ರಾಯ ಹೀಗಿದೆ : ‘ಯಕ್ಷಗಾನ ಕಲೆ ಪ್ರಾಯೋಗಿಕವಾಗಿ ತಾಳಮದ್ದಳೆ, ಆಟಗಳ ರೂಪದಲ್ಲಿ ರಾತ್ರಿ ಜಾಗರಣೆಯ ಸುಮಾರು ಎಂಟು ಗಂಟೆ ಅವಧಿಯ ಕಾರ್ಯಕ್ರಮದ ವಿವಿಧ ರಸಾತ್ಮಕ ಕಥಾವಸ್ತುವನ್ನು ಒಳಗೊಂಡಿರುತ್ತದೆ. ಇಂತಹ ಒಂದೊಂದು ಪರಿಪೂರ್ಣ ಕಥಾತ್ಮಕ ಪದಗಳ ಕೃತಿಯನ್ನು ಪ್ರಸಂಗ ಎನ್ನುವರು. ಯಕ್ಷಗಾನ ಸಾಹಿತ್ಯವು ದಾಸಸಾಹಿತ್ಯಕ್ಕಿಂತ ಪ್ರಬುದ್ಧ ಹಾಗೂ ಪ್ರಾಚೀನ ಕಲೆಯಾಗಿ ಕಂಡು ಬರುತ್ತದೆ. ರಾಗ ತಾಳಬದ್ಧ ಕೀರ್ತನೆಗಳ ರೂಪದಲ್ಲಿ ಭಕ್ತಿ ಸಾಹಿತ್ಯವನ್ನು ನಿರ್ಮಿಸಿರುವ ಶಿವದಾಸರು, ಹರಿದಾಸರು, ಜಿನಭಕ್ತರು ಬಲುಮಟ್ಟಿಗೆ ಯಕ್ಷಗಾನ ಪದಗಳನ್ನೇ ಅನುಸರಿಸಿದಂತೆ ಕಂಡು ಬರುತ್ತದೆ.[ ಆಶುವೈಭವ, ಪುಟ 132]

ಯಕ್ಷಗಾನ ಪ್ರಸಂಗ ಲಕ್ಷಣಗಳು • ಘಟನೆಯೊಂದರ ಪದ್ಯರೂಪವೇ ಯಕ್ಷಗಾನ ಪ್ರಸಂಗ.
 • ಪ್ರಸಂಗದ ಪದ್ಯಗಳು ಛಂದಸ್ಸು ಅಥವಾ ಮಟ್ಟು ಆಧರಿಸಿ ರೂಪುಗೊಂಡಿವೆ.
 • ಯಕ್ಷಗಾನ ಪ್ರಸಂಗಗಳ ಪದ್ಯಗಳು ತಾಳಲಯ ಬದ್ದವಾಗಿವೆ.
 • ರಸಾಭಿವ್ಯಕ್ತಿಗೆ ಅನುಕೂಲವಾಗುವಂತೆ ಪ್ರಸಂಗದ ಓಟವಿರುತ್ತದೆ.
 • ಯಕ್ಷಗಾನ ಪ್ರಸಂಗಕ್ಕೆ ಕಾಲಬದ್ಧತೆಯಿದೆ. ಅದು ಮಹಾಕಾವ್ಯವಲ್ಲ.
 • ಯಕ್ಷಗಾನ ಪ್ರಸಂಗ ಸಾಹಿತ್ಯಕ್ಕೆ ಐದು ಶತಮಾನಗಳ ಇತಿಹಾಸವಿದೆ.
 • ಯಕ್ಷಗಾನ ಪ್ರಸಂಗಗಳಲ್ಲಿ ಪಾಂಡಿತ್ಯ ಪ್ರದರ್ಶನಕ್ಕೆ ವಿಪುಲಾವಕಾಶವಿಲ್ಲ.
 • ಯಕ್ಷಗಾನ ಪ್ರಸಂಗಗಳಲ್ಲಿ ವಿತಾಲದ ತಾಳವಿಲ್ಲದ ಪದ್ಯಗಳು ತೀರಾ ಕಡಿಮೆ.
 • ಪುರಾಣ, ಮಹಾಕಾವ್ಯ, ಜಾನಪದ, ಐತಿಹಾಸಿಕ ಮತ್ತು ಕಾಲ್ಪನಿಕ ಘಟನೆಗಳನ್ನು ಆಧರಿಸಿ ಪ್ರಸಂಗಗಳನ್ನು ರಚಿಸಲಾಗಿದೆ.
ಯಕ್ಷಗಾನದ ಸಾಹಿತ್ಯವು ಕೆಲವು ವಿಶಿಷ್ಟ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅವನ್ನು ಯಕ್ಷಗಾನ ಸಾಹಿತ್ಯದ ಉದ್ದೇಶಗಳೆಂದು ಕರೆಯಬಹುದು. ಯಕ್ಷಗಾನ ಸಾಹಿತ್ಯದ ಉದ್ದೇಶಗಳು ಇವು:

1. ಮೌಲ್ಯಗಳ ಪ್ರತಿಪಾದನೆ :

ಯಕ್ಷಗಾನದ ಪ್ರಸಂಗಗಳು ಪೌರಾಣಿಕ ಮೌಲ್ಯ ಗಳನ್ನು ಪ್ರತಿಪಾದಿಸುತ್ತವೆ. ಸತ್ಯ ಅಥವಾ ಧರ್ಮಕ್ಕೆ ಅಂತಿಮ ಜಯ ಎಂಬುದೇ ಈ ಮೌಲ್ಯ. ಭಕ್ತಿ ಮತ್ತು ಪಾತಿವ್ರತ್ಯ ಇವು ಯಕ್ಷಗಾನ ಪ್ರಸಂಗಗಳು ಪ್ರತಿಪಾದಿಸುವ ಮೌಲ್ಯಗಳು. ಕೆಲವು ಪ್ರಸಂಗಗಳು ಪುನರ್ಜನ್ಮ, ಕರ್ಮಸಿದ್ಧಿಂತ ಕುಲಶ್ರೇಷ್ಠತೆ, ವರ್ಣಭೇದದ ಸಮರ್ಥನೆ, ಜಾತಿ ಪದ್ಧತಿಯ ಸಮರ್ಥನೆ ಮಾಡುವುದುಂಟು. ಈ ದೋಷಗಳಿಗೆ ಕವಿಗಳು ಮತ್ತು ಕಲಾವಿದರು ಕಾರಣರೇ ಹೊರತು ಅದು ಯಕ್ಷಗಾನದ ದೋಷವಲ್ಲ.

2. ಸಂಘರ್ಷ ಚಿತ್ರಣ :

ಯಕ್ಷಗಾನ ಪ್ರಸಂಗಗಳು ಒಳ್ಳೆಯ ಮತ್ತು ಕೆಟ್ಟ ಮೌಲ್ಯ ಗಳ ಸಂಘರ್ಷವನ್ನು ಚಿತ್ರಿಸುತ್ತವೆ. ಅಂತಿಮವಾಗಿ ಕೆಟ್ಟ ಮೌಲ್ಯಗಳು ಒಳ್ಳೆಯ ಮೌಲ್ಯ ಗಳಿಂದ ಸೋಲು ಅನುಭವಿಸುತ್ತವೆ. ಒಳ್ಳೆಯ ಮೌಲ್ಯಗಳನ್ನು ದೇವತೆಗಳು ಅಥವಾ ಋಷಿ ಮುನಿಗಳ ಮೂಲಕ ಸಂಕೇತಿಸಲಾಗುತ್ತದೆ. ಕೆಟ್ಟ ಮೌಲ್ಯಗಳನ್ನು ರಕ್ಕಸ ಅಥವಾ ರಾಕ್ಷಸಗುಣದ ಪಾತ್ರಗಳಿಂದ ಸಂಕೇತಿಸಲಾಗುತ್ತದೆ. ಯಕ್ಷಗಾನದ ಬಹುತೇಕ ಪ್ರಸಂಗಗಳು ಸುಖಾಂತವಾಗಿರುತ್ತವೆ. ಆದರೆ ಅಭಿಮನ್ಯು ವಧೆ, ಕೋಟಿ ಚೆನ್ನಯ್ಯ, ತುಳುನಾಡ ಸಿರಿ ಇವೇ ಮುಂತಾದ ದುಃಖಾಂತ ಪ್ರಸಂಗಗಳೂ ಯಕ್ಷಗಾನದಲ್ಲಿವೆ.

3. ವಿಚಾರ ಪ್ರಚೋದಕ ಮನರಂಜನೆ :

ಯಕ್ಷಗಾನವು ಜನರ ಮನರಂಜನೆಗಾಗಿಯೇ ಬೆಳವಣಿಗೆ ಹೊಂದಿದ ಒಂದು ಸಾಮುದಾಯಿಕ ಕಲೆ. ದೇವಾಲಯದ ಮಂತ್ರ ತಂತ್ರ ಅರಿವಾಗದ ಮತ್ತು ಬಹುಶಃ ದೇವಾಲಯಗಳಿಗೆ ಒಂದು ಕಾಲದಲ್ಲಿ ಪ್ರವೇಶ ನಿರಾಕರಿಸಲ್ಪಟ್ಟಿದ್ದ ಮಂದಿ ಅದನ್ನು ಬೆಳೆಸಿದರು. ಅದರ ಕಥಾ ವಸ್ತುವಿಗೆ ವಿಚಾರದೊಡನೆ ಮನರಂಜನೆ ನೀಡುವ ಉದ್ದೇಶವಿದೆ. ಅದನ್ನು ಮನರಂಜನೆಯ ಮೂಲಕ ವಿಚಾರವನ್ನು ನೀಡುವ ಉದ್ದೇಶ ವೆಂದೂ ಹೇಳಬಹುದು. ಯಕ್ಷಗಾನದ ಪದ್ಯಗಳಲ್ಲಿ ವಿಚಾರವೇ ಅಧಿಕ. ಅದು ಅತಿಯಾಗ ದಂತೆ ನೋಡಿಕೊಳ್ಳಲು ಮನರಂಜನೆ. ಉದಾತ ಯಕ್ಷಗಾನದ ಬೇಟೆ, ಪ್ರಣಯ ಮತ್ತು ಹಾಸ್ಯ. ಆಧುನಿಕ ನಾಟಕಗಳು ಅಳವಡಿಸುವ ಬ್ರೆಕ್ಟನ ತಂತ್ರವನ್ನು ಯಕ್ಷಗಾನ ಐದುನೂರು ವರ್ಷಗಳ ಹಿಂದೆಯೇ ಹಾಸ್ಯ ಪಾತ್ರಗಳ ಮೂಲಕ ಅಳವಡಿಸಿಕೊಂಡಿದೆ.

4. ಕಾವ್ಯ ಸೃಷ್ಟಿಗೆ ಪ್ರಚೋದನೆ :

ಯಕ್ಷಗಾನ ಪ್ರಸಂಗಗಳನ್ನು ಪದೇ ಪದೇ ಓದುವವರಿಗೆ ಮತ್ತು ಪ್ರದರ್ಶನ ನೋಡುವವರಿಗೆ ಪ್ರಸಂಗಗಳ ಪದ್ಯಗಳು ಬಾಯಿಪಾಠ ಬಂದುಬಿಡುತ್ತವೆ. 1980ರ ದಶಕದ ವರೆಗೂ ಉಡುಪಿ, ದ.ಕ. ಕಾಸರಗೋಡು ಜಿಲ್ಲೆಗಳ ಬಹುತೇಕ ಜನರ ಬಾಯಲ್ಲಿ ಪ್ರಸಂಗ ಪದ್ಯಗಳು ನರ್ತಿಸುತ್ತಿದ್ದವು. ಯಕ್ಷಗಾನ ಹಾಡುಗಳ ಕ್ಯಾಸೆಟ್ಟನ್ನು ಎಲ್ಲಾ ಧರ್ಮೀಯರು ಮನೆಗಳಲ್ಲಿ ಟೇಪ್‌ ರೆಕಾರ್ಡರಿಗೆ ಹಾಕಿ ಕೇಳುತ್ತಿದ್ದರು. ಹೆಚ್ಚು ವಿದ್ಯೆಯಿಲ್ಲದ ಕಲಾಸಕ್ತರು ಯಕ್ಷಗಾನ ನೋಡಿ ಪ್ರಸಂಗ ರಚಿಸಿದ್ದಿದೆ. ಕರ್ನಾಟಕದ ಕರಾವಳಿಯ ಜನರು ನಿಜಕ್ಕೂ ಬುದ್ಧಿವಂತರಾಗಿದ್ದರೆ ಅದಕ್ಕೆ ಯಕ್ಷಗಾನದ ಕೊಡುಗೆ ಅಪಾರ. ಕಾವ್ಯ ಸೃಷ್ಟಿಯಾಗಲಿ ಎನ್ನುವುದು ಯಕ್ಷಗಾನ ಸಾಹಿತ್ಯದ ಉದ್ದೇಶವಲ್ಲದಿದ್ದರೂ ಸುಸಂಸ್ಕೃತ ಸಮಾಜ ಸೃಷ್ಟಿಯ ಉದ್ದೇಶ ಯಕ್ಷಗಾನಕ್ಕಿದೆ.

ಪ್ರಸಂಗ ಪ್ರಭೇದಗಳು ಮತ್ತು ಕವಿಗಳು

ಯಕ್ಷಗಾನ ಪ್ರಸಂಗಗಳನ್ನು ವಸ್ತುವಿಗೆ ಅನುಗುಣವಾಗಿ ಪೌರಾಣಿಕ, ಐತಿಹಾಸಿಕ, ಜಾನಪದೀಯ ಮತ್ತು ಕಾಲ್ಪನಿಕ ಪ್ರಸಂಗಗಳೆಂದು ವಿಭಾಗಿಸಬಹುದು. ಭಾಷೆಗೆ ಅನುಗುಣ ವಾಗಿ ಕನ್ನಡ, ತುಳು, ಕೊಂಕಣಿ, ಮಲೆಯಾಳ, ಹಿಂದಿ ಮತ್ತು ಇಂಗ್ಲೀಷ್‌ ಯಕ್ಷಗಾನ ಪ್ರಸಂಗಗಳೆಂದು ವರ್ಗೀಕರಿಸಬಹುದು.

1. ಪೌರಾಣಿಕ ಪ್ರಸಂಗಗಳು :

ಹೊಸ್ತೋಟ ಮಂಜುನಾಥ ಭಾಗವತ
ಪುರಾಣ, ಭಾಗವತ, ರಾಮಾಯಣ, ಮಹಾಭಾರತ ಗಳನ್ನು ಆಧರಿಸಿದ ಪ್ರಸಂಗಗಳು ಪೌರಾಣಿಕ ಪ್ರಸಂಗಗಳೆಂದು ಕರೆಸಿಕೊಳ್ಳುತ್ತವೆ. ಅನೇಕ ಯಕ್ಷಗಾನ ಕವಿಗಳು ತೊರವೆ ರಾಮಾಯಣ. ಕುಮಾರವ್ಯಾಸನ ಕರ್ನಾಟ ಕಥಾ ಮಂಜರಿ ಮತ್ತು ಲಕ್ಷ್ಮೀಶನ ಜೈಮಿನಿ ಭಾರತದಿಂದ ಪ್ರಭಾವಿತರಾಗಿ ಯಕ್ಷ ಪ್ರಸಂಗ ರಚಿಸಿದ್ದಿದೆ. ಡಿ. ಎಸ್‌. ಶ್ರೀಧರ್‌ ಅಭಿಪ್ರಾಯ ಪಡುವಂತೆ ‘ಯಕ್ಷಗಾನ ಪ್ರಸಂಗವೆಂಬುದು ಸಂಪೂರ್ಣ ಸ್ವತಂತ್ರ ಕಾವ್ಯವಲ್ಲ. ನಮ್ಮ ಕವಿಗಳು ಒಂದಿಲ್ಲೊಂದು ರೀತಿಯಿಂದ ಕುಮಾರವ್ಯಾಸ, ಲಕ್ಷ್ಮೀಶ, ಕುಮಾರ ವಾಲ್ಮೀಕಿ ಮುಂತಾದವರ ಕೃತಿಗಳಲ್ಲಿ ಬರುವ ಕತೆಗಳನ್ನು ಆಧರಿಸಿ ಪ್ರಸಂಗ ರಚಿಸಿದರು. ಕೆಲವೆಡೆ ಅವರದೇ ಪದ್ಯಗಳನ್ನು ನೇರವಾಗಿ ಬಳಸುತ್ತಿದ್ದರು. ಆಯಾ ಸಂದರ್ಭಗಳಲ್ಲಿ ಆಯಾ ಕವಿಗಳ ಭಾಗವೇ ಸಮರ್ಥ ಎನ್ನುವ ಒಪ್ಪಿಕೊಳ್ಳುವ ಮನೋಭಾವವೇ ಇದಕ್ಕೆ ಕಾರಣ ಹೊರತು ಕೃತಿ ಚೌರ್ಯದ ಕೆಟ್ಟ ಸಂಪ್ರದಾಯ ಈ ಕವಿಗಳಿಗಿದ್ದಂತಿಲ್ಲ. ಕಾವ್ಯಾಭ್ಯಾಸದ ಪರಿಣಾಮವಾಗಿ ಯಕ್ಷಗಾನದಲ್ಲಿಯೂ ಅದೇ ಹಳೆಯ ವರ್ಣನೆಗಳು, ಹಳೆಯ ಕಾವ್ಯ ಧೋರಣೆಗಳು ನುಸುಳಿಕೊಂಡಿವೆ. ಪ್ರಯೋಗಶೀಲ ಯಕ್ಷಗಾನ ಕವಿಗಳು [ಮುದ್ದಣನಂಥವರು ] ಅಲ್ಲಲ್ಲಿ ಕಂಡು ಬಂದರೂ ವಿಶೇಷ ಯಶಸ್ಸು ಅವರಿಗೆ ದೊರೆತಂತಿಲ್ಲ.[ ಯಕ್ಷಗಾನ ಮಕರಂದ, ಪುಟ 136]

ಒಂದು ಅಂದಾಜಿನ ಪ್ರಕಾರ ಯಕ್ಷಗಾನ ಪ್ರಸಂಗಗಳ ಒಟ್ಟು ಸಂಖ್ಯೆ ಸುಮಾರು ಒಂದುವರೆ ಸಾವಿರದಷ್ಟು. ಅವುಗಳ ಪೈಕಿ ಕೇವಲ ಮೂರನೇ ಒಂದರಷ್ಟು ಮಾತ್ರ ಲಭ್ಯವಾಗಿವೆ. ಲಭ್ಯ ಪ್ರಕಟಿತ ಯಕ್ಷಗಾನ ಪ್ರಸಂಗಗಳಲ್ಲಿ ಶೇ 80ರಷ್ಟು ಪೌರಾಣಿಕ ಕಥಾ ವಸ್ತುಗಳನ್ನು ಹೊಂದಿವೆ. ದೇವಿದಾಸ, ಪಾರ್ತಿಸುಬ್ಬ, ಮುದ್ದಣ, ಹಟ್ಟಿಯಂಗಡಿ ರಾಮಭಟ್ಟ, ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಕೀರಿಕ್ಕಾಡು ವಿಷ್ಣು ಮಾಸ್ತರ್‌, ಅಮೃತ ಸೋಮೇಶ್ವರ, ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಹೊಸ್ತೋಟ ಮಂಜುನಾಥ ಭಟ್‌, ರಾಘವ ನಂಬಿಯಾರ್‌, ಶೇಣಿ ಗೋಪಾಲಕೃಷ್ಣ ಭಟ್‌, ಮಲ್ಪೆ ರಾಮದಾಸ ಸಾಮಗ, ಗೆರೆಸೊಪ್ಪೆ ಶಾಂತಪ್ಪಯ್ಯ, ಧ್ವಜಪುರದ ನಾಗಪ್ಪಯ್ಯ, ಸಂಕಯ್ಯ ಭಾಗವತ, ಬಳಕಿನ ವಿಷ್ಣ್ವಯ್ಯ, ಸೀತಾನದಿ ಗಣಪಯ್ಯ ಶೆಟ್ಟಿಮುಂತಾದವರು ಪೌರಾಣಿಕ ಯಕ್ಷಗಾನ ಕವಿಗಳಾಗಿ ಖ್ಯಾತಿ ಪಡೆದಿದ್ದಾರೆ. ತಾಟಕ ವಧೆ, ಪಂಚವಟಿ ವಾಲಿಸುಗ್ರೀವರ ಕಾಳಗ, ಅತಿಕಾಯ ಇಂದ್ರಜಿತು ಮಹಿರಾವಣ ಕಾಳಗ, ವೀರಮಣಿ ಕಾಳಗ, ಗುರುದಕಿಣೆ, ದ್ರೌಪದೀ ವಸ್ತ್ರಾಪಹಾರ, ಕುರುಕೇತ್ರ, ಕರ್ಣಾರ್ಜುನ, ಕಾಯಕಲ್ಪ, ಸುಧನ್ವಾರ್ಜುನ, ತಾಮ್ರಧ್ವಜ, ಪ್ರಮೀಳಾರ್ಜುನ ಮತ್ತು ಬಭ್ರುವಾಹನ, ತ್ರಿಪುರ ಮಥನ, ಸಹಸ್ರ ಕವಚ ದೇವಿ ಮಹಾತ್ಮ್ಯೆ, ಕುಮಾರ ವಿಜಯ, ವಿದ್ಯುನ್ಮತಿ ಕಲ್ಯಾಣ, ರತಿ ಕಲ್ಯಾಣ, ರತ್ನಾವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಸೀತಾ ಕಲ್ಯಾಣ ಇತ್ಯಾದಿಗಳು ಅತ್ಯಂತ ಜನಪ್ರಿಯವಾದ ಪೌರಾಣಿಕ ಪ್ರಸಂಗಗಳಾಗಿವೆ.

2. ಐತಿಹಾಸಿಕ ಪ್ರಸಂಗಗಳು :

ಶೇಣಿ ಗೋಪಾಲಕೃಷ್ಣ ಭಟ್‌
ಇತಿಹಾಸವು ಯಕ್ಷಗಾನ ಪ್ರಸಂಗವಾದದ್ದು ಪ್ರಸಂಗ ಕರ್ತರ ಯಕ್ಷಗಾನ ಮೋಹದಿಂದಲೇ ಹೊರತು ಇತಿಹಾಸದ ಮೇಲಣ ಮೋಹದಿಂದಲ್ಲ. ಜಯಚಂದ್ರ ಪರಾಭವ, ಪೃಥ್ಥೀರಾಜ ಕಾಳಗ, ಕುಮಾರರಾಮ, ಟಿಪ್ಪು ಸುಲ್ತಾನ, ಅಂಗುಲಿ ಮಾಲ, ನೃಪತುಂಗ ವಿಜಯ, ಅನಾರ್ಕಲಿ, ಕಲ್ಯಾಣಪ್ಪನ ಕಾಟಕಾಯಿ ಮುಂತಾದ ಯಕ್ಷಗಾನ ಪ್ರಸಂಗಗಳು ಇತಿಹಾಸವನ್ನು ಆಧರಿಸಿ ರಚಿತವಾಗಿವೆ. ಕೆಲವು ರಂಗಪ್ರದರ್ಶನ ಗಳನ್ನೂ ಕಂಡಿವೆ. ರಾಮದಾಸ ಸಾಮಗ, ಸೀತಾನದಿ ಗಣಪ್ಪಯ್ಯ ಶೆಟ್ಟಿ, ಬೆಳ್ಳಾರೆ ಸೂರ್ಯ ನಾರಾಯಣ ಭಟ್‌, ಆಲೆಟ್ಟಿ ರಾಮಣ್ಣ ಶಗ್ರಿತ್ತಾಯ, ಗುಂಡು ಸೀತಾರಾಮರಾವ್‌, ಶೇಣಿ ಗೋಪಾಲಕೃಷ್ಣ ಭಟ್‌ ಮುಂತಾದವರು ಐತಿಹಾಸಿಕ ವಸ್ತುಗಳನ್ನು ಎತ್ತಿಕೊಂಡು ಪ್ರಸಂಗ ರಚಿಸಿದ್ದಾರೆ. ಆದರೆ ಐತಿಹಾಸಿಕ ಪ್ರಸಂಗಗಳು ರಂಗಪ್ರದರ್ಶನದಲ್ಲಿ ನಿರೀಕಿತ ಯಶಸ್ಸನ್ನು ಕಂಡಿಲ್ಲ. ಜನಪ್ರಿಯ ಇತಿಹಾಸ ಪುರುಷರನ್ನು ಯಕ್ಷಗಾನ ರೂಪದಲ್ಲಿ ತರುವುದು ಸುಲಭದ ಮಾತಲ್ಲ. ಐತಿಹಾಸಿಕ ಪ್ರಸಂಗಗಳ ರಚನೆಗೆ ಆವಿಷ್ಕಾರಿಕ ಮಹತ್ವವಿದೆಯೇ ಹೊರತು ಪ್ರದರ್ಶನ ಮಹತ್ವವಿಲ್ಲ. ಐತಿಹಾಸಿಕ ಪ್ರಸಂಗಗಳು ಯಕ್ಷಗಾನದ ಚೌಕಟ್ಟಿಗೆ ಒಗ್ಗುವುದಿಲ್ಲವೆನ್ನುವುದು ಐತಿಹಾಸಿಕ ಸತ್ಯ.

3. ಜಾನಪದೀಯ ಪ್ರಸಂಗಗಳು :

ಅಮೃತ ಸೋಮೇಶ್ವರ
ಐತಿಹ್ಯ ಅಥವಾ ಜಾನಪದವನ್ನಾಧರಿಸಿ ಅನೇಕ ಪ್ರಸಂಗಗಳು ಯಕ್ಷಗಾನದಲ್ಲಿ ರಚನೆಯಾಗಿವೆ. ಕಟೀಲು, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಬಪ್ಪನಾಡು, ಮುರೂರು, ಮಂದರ್ತಿ, ಶಿಶಿಲ ಕೇತ್ರ ಮಹಾತ್ಮ್ಯೆಗಳಂತಹ ಪ್ರಸಂಗಗಳು ಭಾವುಕ ಭಕ್ತ ಗಡಣದಿಂದಾಗಿ ಯಶಸ್ಸನ್ನು ಕಂಡಿವೆ. ಅಗೋಳಿ ಮಂಜಣ್ಣ, ವೀರಕಲ್ಕುಡ, ಕೋಟಿಚೆನ್ನಯ, ಅಬ್ಬಗ ದಾರಗ, ಅಬ್ಬರದ ಬೊಬ್ಬರ್ಯೆ, ಕಾಂತಾಬಾರೆಬುಧಾಬಾರೆ, ತುಳುನಾಡ ಸಿರಿ, ದೇವುಪೂಂಜ,ಮುಂತಾದ ಜಾನಪದ ಪ್ರಸಂಗಗಳು ತುಂಬಾ ಯಶಸ್ವಿಯಾಗಿವೆ.

ಭೂತರಾಧನೆಗೆ ಮತ್ತು ಸ್ಥಳೀಯ ನಾಯಕರುಗಳಿಗೆ ದ.ಕ. ಜಿಲ್ಲೆಯ ಜನರು ಕೊಡುವ ಮಹತ್ವ ಇದಕ್ಕೆ ಕಾರಣ. ಭೂತಾಳ ಪಾಂಡ್ಯ, ಪುಣ್ಯಕೋಟಿಯಂತಹ ಪ್ರಸಂಗಗಳು ಕಲಾವಿದರಿಂದಾಗಿ ಯಶಸ್ವಿಯಾಗುವುದಿದೆ. ಅಮೃತ ಸೋಮೇಶ್ವರ, ಸೀತಾನದಿ ಗಣಪಯ್ಯ ಶೆಟ್ಟಿ, ಅನಂತರಾಮ ಬಂಗಾಡಿ, ತಾರಾನಾಥ ಬಲ್ಯಾಯ, ಕುಳಾಯಿ ಮಾಧವ ಭಂಡಾರಿ, ಶಿಶಿಲ, ಸೀತಾರಾಮ ಕೆದಿಲಾಯ ಮುಂತಾದವರು ಜಾನಪದೀಯ ಪ್ರಸಂಗ ಕರ್ತರಾಗಿ ಮನ್ನಣೆ ಪಡೆದಿದ್ದಾರೆ.

4. ಕಾಲ್ಪನಿಕ ಪ್ರಸಂಗಗಳು :

ಅಡುಗೂಲಜ್ಜಿಯ ಅಥವಾ ಚಂದಮಾಮ ಕತೆಗಳನ್ನು ಆಧರಿಸಿ ಯಕ್ಷಗಾನ ಪ್ರಸಂಗ ರಚನೆಯಾದದ್ದಿದೆ. ಕೆಲವರು ಕಾಲ್ಪನಿಕ ಕತೆಗಳನ್ನು ಆಧರಿಸಿ ಅಥವಾ ಸೃಷ್ಟಿಸಿ ಪ್ರಸಂಗ ಹೆಣೆದದ್ದೂ ಇದೆ. ಕೀರಿಕ್ಕಾಡು ವಿಷ್ಣು ಮಾಸ್ತರ್‌, ಕಾಳಿಂಗ ನಾವುಡ, ಅಂಬೆಮೂಲೆ ಗೋವಿಂದ ಭಟ್‌, ಅಂಬಾತನಯ ಮುದ್ರಾಡಿ, ಕಬ್ಬಿನಾಲೆ ವಸಂತ ಭಾರದ್ವಾಜ, ಕಡತೋಕ ಮಂಜುನಾಥ ಭಾಗವತ, ಬಾಬು ಕುಡ್ತಡ್ಕ, ಸೀತಾನದಿ ಗಣಪಯ್ಯ ಶೆಟ್ಟಿ, ಹೊಸ್ತೋಟ ಮಂಜುನಾಥ ಭಟ್‌, ಕಂದಾವರ ರಘುರಾಮ ಶೆಟ್ಟಿ, ಕುಬೆವೂರು ಪುಟ್ಟಣ್ಣ ಶೆಟ್ಟಿ, ಅನಂತರಾಮ ಬಂಗಾಡಿ, ಮನೋಹರ ಕುಮಾರ್‌, ನಿತ್ಯಾನಂದ ಕಾರಂತ, ಸದಾಶಿವ ಭಟ್ಟ, ಸಿದ್ಧಿಕಟ್ಟೆ ವಿಶ್ವನಾಥ ಶೆಟ್ಟಿ, ದೇವದಾಸ ಈಶ್ವರ ಮಂಗಲ ಮುಂತಾದವರು ಅನೇಕ ಕಾಲ್ಪನಿಕ ಪ್ರಸಂಗಗಳನ್ನು ರಚಿಸಿದ್ದಾರೆ.

ಕಂದಾವರ ರಘುರಾಮ ಶೆಟ್ಟಿ
ಕೆಲವು ರಂಗ ಪ್ರದರ್ಶನವಾಗಿ ಯಶಸ್ಸನ್ನು ಕಂಡಿವೆ. ಕಾಡಮಲ್ಲಿಗೆ, ಪಟ್ಟದ ಪೆರುಮಳೆ, ಗೋಣ ತಂಕರೆ, ಕಾನದ ತನಿಯೆ, ಕಾಂತು ಕಬೇದಿ, ರೂಪಶ್ರೀ, ಕಾಂಚನಶ್ರೀ, ನಾಗಶ್ರೀ, ಕನಕ ಲೇಖಾ ಮುಂತಾದ ಕಾಲ್ಪನಿಕ ಪ್ರಸಂಗಗಳು ತುಂಬಾ ಯಶಸ್ವಿಯಾಗಿವೆ. ಕಾಲ್ಪನಿಕ ಪ್ರಸಂಗಗಳಲ್ಲಿ ಮುಕ್ಕಾಲು ಪಾಲು ತುಳು ಭಾಷೆಯಲ್ಲಿ ರಚಿತವಾಗಿರುವುದು ಗಮನೀಯ. ಭಾಷಾ ದೃಷ್ಟಿಯಿಂದ ನೋಡಿದರೆ ಯಕ್ಷಗಾನ ಪ್ರಸಂಗಗಳಲ್ಲಿ ಶೇ 95ರಷ್ಟು ಕನ್ನಡದಲ್ಲಿ ರಚಿತವಾಗಿವೆ. ಉಳಿದವುಗಳು ತುಳು ಭಾಷೆಯ ರಚನೆಗಳು. ದೃಷ್ಟಿ ಬೊಟ್ಟಿನಂತೆ ಹಿಂದಿ, ಇಂಗ್ಲೀಷ್‌, ಕೊಂಕಣಿ, ಮಲೆಯಾಳಗಳಲ್ಲಿ ಯಕ್ಷಗಾನ ಪ್ರಸಂಗ ರಚನೆಯಾದದ್ದಿದೆ. ಆದರೆ ಕನ್ನಡ ಯಕ್ಷಗಾನ ಪ್ರಸಂಗಗಳ ಸಹಜತೆ, ಮತ್ತು ಸೌಂದರ್ಯ ಇತರ ಭಾಷಾ ಪ್ರಸಂಗಗಳಿಗೆ ಇನ್ನೂ ಬಂದಿಲ್ಲ.

5. ಸಾಂದರ್ಭಿಕ ಪ್ರಸಂಗಗಳು

: ಸಂದರ್ಭದ ಅನಿವಾರ್ಯತೆ ಕೆಲವು ಪ್ರಸಂಗಗಳನ್ನು ಸೃಷ್ಟಿಸುವುದುಂಟು. ಹಸಿರು ಕ್ರಾಂತಿಯ ಕಾಲದಲ್ಲಿ, ಕುಟುಂಬ ಯೋಜನೆ ಜಾರಿಗೆ ಬಂದಾಗ, ಭೂ ಸುಧಾರಣೆಯ ಅವಧಿಯಲ್ಲಿ, ಪಾನ ನಿಷೇಧಕ್ಕಾಗಿ ಕೆಲವು ಪ್ರಸಂಗಗಳು ರಚನೆಯಾಗಿವೆ. ಪಶ್ಚಿಮ ಘಟ್ಟ ಉಳಿಸಿ ಚಳುವಳಿ ಮತ್ತು ಸಾಕರತಾ ಆಂದೋಲನ ಕಾಲದಲ್ಲಿ ಯಕ್ಷಗಾನದ ಹೊಸ ಪ್ರಸಂಗಗಳು ಸೃಷ್ಟಿಯಾಗಿವೆ. ಏಡ್ಸ್‌, ಡೆಂಗ್ಯೂ, ಎಚ್‌ವನ್‌ಎನ್ವನ್‌ ನಂತಹ ಕಾಯಿಲೆಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಪ್ರಸಂಗಗಳು ರಚನೆಯಾಗಿವೆ. ಅಂತಹ ಪ್ರಸಂಗಗಳಿಗೆ ಸಾಮಯಿಕ ಮಹತ್ವವಿದೆ. ಆದರೆ ಅವುಗಳನ್ನು ಬಹುತೇಕ ಜನರು ಯಕ್ಷಗಾನವೆಂದು ಒಪ್ಪುವುದಿಲ್ಲ.

ಯಕ್ಷ ಪ್ರಸಂಗದಲ್ಲಿ ಏನಿರಬೇಕು? • ಯಕ್ಷಗಾನ ಪ್ರಸಂಗ ಯಶಸ್ವಿಯಾಗಬೇಕಾದರೆ ಅದರಲ್ಲಿ ಈ ಕೆಳಗಿನ ಅಂಶಗಳಿರಬೇಕು :
 • ಅದರಲ್ಲಿ ಶಾಂತ, ಶೃಂಗಾರ, ಕರುಣ, ವೀರ, ರೌದ್ರ, ಅದ್ಭುತ, ಭೀಭತ್ಸ, ಭಯಾನಕ, ಹಾಸ್ಯರಸಾಭಿವ್ಯಕ್ತಿಗೆ ಅವಕಾಶವಿರಬೇಕು.
 • ಅದರಲ್ಲಿ ಯಕ್ಷಗಾನದಲ್ಲಿ ಬಳಕೆಯಾಗುವ ಎಲ್ಲಾ ತಾಳಗಳು ಬಳಕೆಯಾಗಬೇಕು. ತ್ರಿವುಡೆ, ಅಷ್ಟ, ಏಕ, ರೂಪಕ ಮತ್ತು ಝುಂಪೆ ತಾಳಗಳಿಗೆ ವಿಪುಲಾವಕಾಶವಿರಬೇಕು.
 • ಪ್ರಸಂಗದಲ್ಲಿ ರಾಜ, ಎದುರುವೇಷ, ಬಣ್ಣದ ವೇಷ, ಹೆಣ್ಣು ಬಣ್ಣ, ಸ್ತ್ರೀವೇಷ, ಪಗಡಿವೇಷಗಳು ಇರಲೇಬೇಕು. ಶಬರನಂತಹ ವಿಶಿಷ್ಟ ವೇಷಗಳಿದ್ದರೆ ಇನ್ನೂ ಆಕರ್ಷಕ.
 • ಯಕ್ಷಗಾನ ಪದಗಳು ಪ್ರಾಸ ಮತ್ತು ಛಂದೋಬದ್ಧವಾಗಿದ್ದು ಸಾಹಿತ್ಯಿಕ ಗುಣ ಗಳನ್ನು ಹೊಂದಿರಬೇಕು.
 • ಯಕ್ಷಗಾನ ಪ್ರಸಂಗಗಳು ಪುನರ್ಜನ್ಮ, ವಿಧಿವಾದ, ಅಸಮಾನತೆ, ಕುಲಶ್ರೇಷ್ಠತೆ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಎತ್ತಿಹಿಡಿಯಬಾರದು. ಸಮಾನತೆ ಮತ್ತು ಜಾತ್ಯತೀತತೆಯನ್ನು ಅವು ಪ್ರತಿಪಾದಿಸಬೇಕು.
 • ಯಕ್ಷಗಾನ ಪ್ರಸಂಗಗಳಲ್ಲಿ ಜಾನಪದ ಸತ್ವದೊಡನೆ ಕಾವ್ಯದ ಬೆಡಗೂ ಇರಬೇಕು.
 • ಯಕ್ಷಗಾನ ಪದ್ಯಗಳು ಮೆಲುಕು ಹಾಕುವಂತಿರಬೇಕು. ಕೃಷ್ಣಸಂಧಾನದ ‘ಕೋಮಲಾಂಗಿ ಕೇಳೇ’ ಪದ್ಯ ಈಗಲೂ ಯಕ್ಷಗಾನ ಪ್ರಿಯರ ನಾಲಿಗೆಯಲ್ಲಿ ನರ್ತಿಸುತ್ತಿರುತ್ತದೆ.
 • ಪ್ರಸಂಗಕರ್ತನಲ್ಲಿ ವಿಶಾಲ ದೃಷ್ಟಿಕೋನ, ಕಾವ್ಯಶಕ್ತಿ, ಛಂದಸ್ಸಿನ ಜ್ಞಾನ, ರಾಗತಾಳಜ್ಞಾನ, ಲೋಕಜ್ಞಾನ, ಪುರಾಣ ಜ್ಞಾನ, ವಿಶಾಲವಾದ ಓದು, ವೈಚಾರಿಕ ಚಿಂತನೆ ಇದ್ದರೆ ಒಳ್ಳೆಯ ಪ್ರಸಂಗಗಳು ಮೂಡಿ ಬರುತ್ತವೆ.
ಪು. ಶ್ರೀನಿವಾಸ ಭಟ್ಟರ ಪ್ರಕಾರ ‘ಯಕ್ಷಗಾನದ ಪದ್ಯಗಳನ್ನು ಮೂರು ರೀತಿಯಿಂದ ವಿಂಗಡಿಸಬಹುದು. ಒಂದು ಸನ್ನಿವೇಶವನ್ನು ಹೇಳುವಂತಹವುಗಳು. ಇನ್ನೊಂದು ರಂಗಸ್ಥಳ ದಲ್ಲಿ ಆಗತಕ್ಕ ಕ್ರಿಯೆಯನ್ನು ಸೂಚಿಸುವವುಗಳು. ಮತ್ತೊಂದು ಸಂಭಾಷಣೆಗೆ ಅನುಕೂಲ ವಾದವುಗಳು.’ [ಯಕ್ಷಗಾನ ಮಕರಂದ ಪುಟ 162] ಸನ್ನಿವೇಶ ನಿರೂಪಣೆಗೆ ಕಂದ, ಭಾಮಿನಿ, ಷಟ್ಪದಿಗಳಂತಹ ವಿತಾಲ ಪದ್ಯಗಳನ್ನು ಬಳಸಬೇಕು. ಕ್ರಿಯೆ ಸೂಚನೆಗೆ ಮತ್ತು ಸಂಭಾಷಣೆಗೆ ಭಾವಾಭಿವ್ಯಕ್ತಿಯ ಮತ್ತು ಅಭಿನಯ ಸಾಧ್ಯತೆಯ ಪದ್ಯಗಳಿದ್ದರೇನೇ ಯಕಪ್ರಸಂಗ ಯಶಸ್ವಿಯಾಗುವುದು. ಈ ಅರಿವು ಪ್ರಸಂಗ ಕರ್ತನಿಗಿರಬೇಕು.

ಕೆಲವು ಪ್ರಮುಖ ಯಕ್ಷಗಾನ ಕವಿಗಳು

1. ದೇವಿದಾಸ

ಕಾಲ : ಖಚಿತವಿಲ್ಲ
ಪ್ರಮುಖ ಪ್ರಸಂಗ ಕೃತಿಗಳು : ದೇವಿ ಮಹಾತ್ಮೆ, ಕೃಷ್ಣಸಂಧಾನ, ಭೀಷ್ಮಪರ್ವ, ಅಭಿಮನ್ಯು, ಬಾರಕೂರು ಕಾಳಗ, ಸೈಂಧವ ವಧೆ, ಚಿತ್ರಸೇನ ಕಾಳಗ, ಗಿರಿಜಾ ಕಲ್ಯಾಣ, ಕೃಷ್ಣಾರ್ಜುನರ ಕಾಳಗ.

2. ಪಾರ್ತಿಸುಬ್ಬ

ಕಾಲ : ಖಚಿತವಿಲ್ಲ
ಪ್ರಮುಖ ಪ್ರಸಂಗ ಕೃತಿಗಳು : ಪುತ್ರ ಕಾಮೇಷ್ಟಿಸೀತಾ ಕಲ್ಯಾಣ, ಪಟ್ಟಾಭಿಷೇಕ, ಪಂಚವಟಿ, ಕಣಿಪುರಕುಂಬಳೆ ವಾಲಿ ಸಂಹಾರ, ಉಂಗುರ ಸಂಧಿ, ಸೇತು ಬಂಧನ, ಅಂಗದ ಸಂಧಾನ, ಕುಂಭಕರ್ಣಾದಿ ಕಾಳಗ, ಕುಶಲವರ ಕಾಳಗ, ಕೃಷ್ಣ ಚರಿತೆ, ಐರಾವತ, ಸಭಾಲಕ್ಷಣ.

3. ಗೆರೆಸೊಪ್ಪೆ ಶಾಂತಯ್ಯ

ಕಾಲ : 1840-70ರ ಅವಧಿಯಲ್ಲಿ ಮಂಗಳೂರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದರು
ಪ್ರಮುಖ ಪ್ರಸಂಗ ಕೃತಿಗಳು : ರಾವಣ ದಿಗ್ವಿಜಯ, ಕರ್ಣಪರ್ವ

4. ಕವಿ ಮುದ್ದಣ

ಕಾಲ : 1870-1901 ನಂದಳಿಕೆ
ಪ್ರಮುಖ ಪ್ರಸಂಗ ಕೃತಿಗಳು : ರತ್ನಾವತಿ ಕಲ್ಯಾಣ, ಕುಮಾರ ವಿಜಯ

5. ಅಮೃತ ಸೋಮೇಶ್ವರ ಕೋಟೆಕಾರ್‌ ಮಂಗಳೂರು

ಕಾಲ : ಜನನ 27-09-1935
ಪ್ರಮುಖ ಪ್ರಸಂಗ ಕೃತಿಗಳು : ಅಮರಶಿಲ್ಪಿ ವೀರ ಕಲ್ಕುಡ, ಸಹಸ್ರಕವಚ ಮೋಕ, ಕಾಯಕಲ್ಪ, ಅಮರವಾಹಿನಿ, ಮಹಾಕಲಿ ಮಗಧೇಂದ್ರ, ತ್ರಿಪುರ ಮಥನ, ವಂಶವಾಹಿನಿ, ಸಾಮ್ರಾಟ ನಹುಷೇಂದ್ರ, ಸಹಸ್ರಾನೀಕ, ಅಂಧಕ ಮೋಕ, ಭುವನ ಭಾಗ್ಯ.

6. ರಾಘವ ನಂಬಿಯಾರ್‌ ಉಡುಪಿ

ಕಾಲ : 07-12-1946
ಪ್ರಮುಖ ಪ್ರಸಂಗ ಕೃತಿಗಳು : ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ಅಮರೇಂದ್ರ, ಪದ ವಿಜಯಿ, ವಜ್ರಧರ ವಿಲಾಸ.

[ ಮಾಹಿತಿ ಮೂಲ : ಯಕ್ಷಗಾನ ಕಲಾದರ್ಶನ 2002 ಮತ್ತು ಯಕ್ಷೋಪಾಸನೆ 2008 ]

ರಾಘವ ನಂಬಿಯಾರ್‌ ಉಡುಪಿ

ಯಕ್ಷಗಾನ ಪ್ರಸಂಗಗಳಿಗೆ ಸಾಹಿತ್ಯದ ಸ್ಥಾನಮಾನ ಏಕಿಲ್ಲ?

ಇದೊಂದು ಬಹಳ ಗಹನವಾದ ಪ್ರಶ್ನೆ. ‘ಯಕ್ಷಗಾನ ಪ್ರಸಂಗ ಕೃತಿಯನ್ನು ಸಾಹಿತ್ಯ ಕೃತಿಯಾಗಿ ತೆಗೆದುಕೊಳ್ಳಬಹುದೆ ? ಕೂಡದೆ? ತೆಗೆದುಕೊಂಡರೆ ಅದನ್ನು ಯಾವ ವರ್ಗದಲ್ಲಿ ಇಡಬೇಕು? ಶಿಷ್ಟ ಸಾಹಿತ್ಯ ಎನ್ನಬಹುದೇ? ಕೂಡದೆ? ಕಥಕ್ಕಳಿ, ಹಾಡುಗಬ್ಬಗಳು ಕಾವ್ಯ ಎನಿಸಬಹುದಾದರೆ ಯಕ್ಷಗಾನ ಯಾಕಲ್ಲ? ಕಥಕ್ಕಳಿಗಿಂತ ಹೆಚ್ಚಿನ ಪ್ರಾಚೀನತೆಯನ್ನು ಸ್ಥಾಪಿಸುವ ಯಕ್ಷಗಾನ ಪ್ರಸಂಗವನ್ನು ಬೇರೆಯೇ ದರ್ಜೆಯಲ್ಲಿ ಗುರುತಿಸುವುದರ ಔಚಿತ್ಯವೇನು? ಎಂದು ರಾಘವ ನಂಬಿಯಾರ್‌ ಪ್ರಶ್ನಿಸುತ್ತಾರೆ.[ ಆಶುವೈಭವ, ಪುಟ 196]

‘ಯಕ್ಷಗಾನ ಸಾಹಿತ್ಯದ ಒಂದು ದುರ್ದೈವವೆಂದರೆ, ಈ ವಿಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಸಾಹಿತ್ಯದ ವಿದ್ವತ್‌ ವಲಯದಲ್ಲಿ ಸಾಕಷ್ಟು ಪ್ರಾಶಸ್ತ್ಯ ಸಲ್ಲದೇ ಹೋದದ್ದು. ಕನ್ನಡದ ಪ್ರಸಿದ್ಧ ಸಾಹಿತ್ಯ ಚರಿತ್ರೆಯ ಗ್ರಂಥಗಳಲ್ಲಿ ಯಕ್ಷಗಾನ ಸಾಹಿತ್ಯದ ಕುರಿತು ಸರಿಯಾದ ಉಲ್ಲೇಖ ವಾಗಲಿ, ಸಮೀಕೆಯಾಗಲೀ ಇಲ್ಲದಿರುವುದು ವಿಚಿತ್ರವಾಗಿದೆ. ನಾಲ್ಕೈದು ಶತಮಾನಗಳಿಂದ ಕನ್ನಡದಲ್ಲಿ ವಿಪುಲವಾಗಿ ಪ್ರಸಂಗ ಸಾಹಿತ್ಯವು ಸೃಷ್ಟಿಯಾಗಿದ್ದರೂ ಅವುಗಳಲ್ಲಿ ಹಲವು ಕೃತಿಗಳು ನಾಡಿನ ಅತ್ಯಂತ ಪರಿಪೂರ್ಣವೆನಿಸುವ ಜನಪ್ರಿಯ ರಂಗಭೂಮಿಯ ಆಧಾರ ಸಾಹಿತ್ಯವಾಗಿ ಪ್ರಚಾರದಲ್ಲಿದ್ದರೂ, ನೂರಾರು ಪ್ರಸಂಗಗಳು ಮುದ್ರಿತವಾಗಿ ಲಭ್ಯವಿದ್ದರೂ ಈ ಸಾಹಿತ್ಯ ಪ್ರಕಾರವು ಬಹುಪಾಲು ಸಾಹಿತ್ಯ ಸಮೀಕಕರ ಗಮನಕ್ಕೆ ಬಾರದೇ ಹೋಯಿತು’ ಎಂದು ಅಮೃತ ಸೋಮೇಶ್ವರರು ವಿಷಾದಿಸಿದ್ದಾರೆ. [ಯಕ್ಷಾಂದೋಳ, ಪುಟ 184]

ಯಕ್ಷಗಾನದ ಮಹಾನ್‌ ಪ್ರತಿಭೆ ಎಂದು ಪ್ರಖ್ಯಾತರಾದ ಶೇಣಿ ಗೋಪಾಲಕೃಷ್ಣ ಭಟ್ಟರು ಮದರಾಸಿನ ಗೋಷ್ಠಿಯೊಂದರಲ್ಲಿ ಹೇಳಿದ ಮಾತುಗಳಿವು:’ಯಕ್ಷಗಾನ ಸಾಹಿತ್ಯ, ಯಾವ ಮಾನದಂಡದಿಂದ ಅಳೆದರೂ, ಸಾಹಿತ್ಯದ ಯಾವ ಪ್ರಕಾರಕ್ಕೂ ಎರಡನೆ ಸ್ಥಾನದಲ್ಲಿ ನಿಲ್ಲಬೇಕಾದದ್ದಲ್ಲ. ಸಾಹಿತಿಗಳು, ವಿದ್ವಾಂಸರು, ಪಂಡಿತರೆನಿಸಿದವರು ಯಕ್ಷಗಾನ ಪ್ರಸಂಗ ಸಾಹಿತ್ಯದ ಕಡೆಗೆ ಗಮನ ಹರಿಸಲಿಲ್ಲ. ಗುರುತಿಸುವ ಸಾಮಥ್ರ್ಯ ಇಲ್ಲದೆ ಹಾಗಾಯಿತೆನ್ನುವುದು ಕಷ್ಟ. ಗುರುತಿಸುವ ಹೃದಯವಂತಿಕೆ ಇಲ್ಲದೆ ಹಾಗಾಯಿತೆ? ಅದರ ಅಗತ್ಯ ಅವರಿಗೆ ಕಾಣಲಿಲ್ಲವೆ? ಅಥವಾ ಸಮಯಾವಕಾಶ ಇಲ್ಲದೆ ಹೋಯಿತೆ? ಅಂತು ಇದರಿಂದ ಯಕ್ಷಗಾನ ಕವಿಗಳಿಗೆ ಹಾಗೂ ಸಾಹಿತ್ಯಕ್ಕೆ ಅಪಚಾರವಾದದ್ದು ಖಂಡಿತ. ಇದರ ಜತೆಯಲ್ಲಿ ಇನ್ನೊಂದು ಅಂಶವನ್ನೂ ಇಲ್ಲಿ ಹೇಳಲೇಬೇಕು. ಇದರಲ್ಲಿ, ಈ ಕೇತ್ರದಲ್ಲಿ ದುಡಿಯುವ ನಮ್ಮ ಪಾಲೂ ಇದೆ. ಪ್ರಸಂಗಗಳ ಸಾಹಿತ್ಯ ಗುಣವನ್ನು ಎತ್ತಿ ಹಿಡಿಯುವಲ್ಲಿ ನಮ್ಮ ಪ್ರಯತನವೂ ಸಾಲದು ಎನಿಸಿದೆ.

ಯಕ್ಷಗಾನದಲ್ಲಿ ಕಲೆ, ಸಾಹಿತ್ಯ ಎರಡಕ್ಕೂ ಸಮಾನ ಸ್ಥಾನವಿದೆ. ಅದುವೇ ಯಕ್ಷಗಾನದ ವೈಶಿಷ್ಟ್ಯ ಕೂಡ. ಯಕ್ಷಗಾನ ಪ್ರಸಂಗಗಳಲ್ಲಿ ಬರುವ ಭಾಗಗಳು ಗದುಗಿನ ಭಾರತಕ್ಕೆ ಅಥವಾ ಅಂತಹ ಇನ್ನಾವುದೇ ಕಾವ್ಯಕ್ಕೆ ಸರಿದೊರೆಯಾಗಿದೆ. ಅಥವಾ ಅದಕ್ಕೂ ಒಂದು ಬಣ್ಣ ಮಿಗಿಲು ಎಂಬಂತೆ ಜಾನಪದ ಸೊಗಡು, ಮಣ್ಣಿನ ಗುಣ ಹೊಂದಿದೆ. ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿಗಳಂಥ ಸಂಸ್ಥೆಗಳು ಇನ್ನಾದರೂ ಯಕ್ಷಗಾನ ಸಾಹಿತ್ಯದ ಬಗೆಗೆ, ಕವಿಗಳ ಬಗೆಗೆ ಕಣ್ಣು ತೆರೆಯಬೇಕು. ಅವರಿಗೆ ನ್ಯಾಯ ಸಲ್ಲಬೇಕು.’

ಯಕ್ಷಗಾನ ನಿರ್ದಿಷ್ಟವಾದ ಛಂದಸ್ಸು ಇದೆ. ಕಬ್ಬಿನಾಲೆ ವಸಂತ ಭಾರದ್ವಾಜ್‌, ಸೀತಾರಾಮ ಕೆದಿಲಾಯ, ನಾರಾಯಣ ಶೆಟ್ಟಿ ಮುಂತಾದವರು ಯಕ್ಷಗಾನ ಛಂದಸ್ಸಿನ ವಿವೇಚನೆ ನಡೆಸಿ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನದ ಮಹಾಕವಿಗಳಾದ ದೇವಿದಾಸ, ಪಾರ್ತಿಸುಬ್ಬ, ಹಟ್ಟಂಗಡಿ, ಹಲಸಿನ ಹಳ್ಳಿ, ಶಾಂತಪ್ಪಯ್ಯ, ಸಂಕಯ್ಯ ಕೀರಿಕ್ಕಾಡು ವಿಷ್ಣು ಮಾಸ್ತರ್‌, ಅಮೃತ ಸೋಮೇಶ್ವರ ಮುಂತಾದವರು ತಮ್ಮ ಪ್ರಸಂಗಗಳಲ್ಲಿ ಅದ್ಭುತ ಕಾವ್ಯ ಪ್ರತಿಭೆ ಮೆರೆದಿದ್ದಾರೆ.

ಆದರೂ ಯಕ್ಷಗಾನ ಪ್ರಸಂಗಗಳು ಅವಗಣನೆಗೆ ಒಳಗಾಗಿದೆ. ಅದಕ್ಕೆ ಬಲವಾದ ಕಾರಣಗಳೂ ಇವೆ :

1. ಪ್ರಸಂಗ ಕರ್ತರ ಕೀಳರಿಮೆ :

ಯಕ್ಷಗಾನದ ಬಹುತೇಕ ಪ್ರಸಂಗಕರ್ತರು ತಾವು ‘ಹೊಸದೇನನ್ನೂ ಹೇಳದೆ ಪುರಾಣಗಳಲ್ಲೋ, ಮಹಾಕಾವ್ಯಗಳಲ್ಲೋ ಇರುವುದನ್ನು ತಮ್ಮ ಅಲ್ಪಮತಿಗೆ ತೋರಿದಂತೆ ಯಕ್ಷಗಾನ ರೂಪದಲ್ಲಿ ಹೇಳಿದ್ದೇವೆ, ಪ್ರಾಜ್ಞರು ತಿದ್ದಿ ಮೆರೆಸಬೇಕು’ ಎಂಬ ಅತಿ ವಿನಯವನ್ನು ಪ್ರದರ್ಶಿಸಿದ್ದಾರೆ. ‘ರನ್ನನ ಕೃತಿರತ್ನಮಂ ಪರೀಕ್ಷಿಪಂಗೆ ಎಂಟೆರ್ದೆಯೇ’ ಎಂದು ರನ್ನ ಕೇಳಿದ್ದರೆ ‘ಕಾವ್ಯಕೆ ಗುರುವೆನಲು ರಚಿಸಿದನು ಕುಮಾರವ್ಯಾಸ ಭಾರತವ’ ಎಂದು ಕುಮಾರವ್ಯಾಸ ಆತ್ಮಾಭಿಮಾನದಿಂದ ಹೇಳಿಕೊಂಡಿದ್ದಾನೆ. ಅಂತಹ ಸ್ವಾಭಿಮಾನದ ಒಂದು ಸೊಲ್ಲೂ ಯಕ್ಷಗಾನ ಕವಿಗಳಿಂದ ಬಂದಂತಿಲ್ಲ. ಇದು ಸಂಸ್ಕಾರ ಗುಣವೋ, ಋಜು ಸ್ವಭಾವವೋ, ಕಾಲಧರ್ಮವೋ, ಅತಿವಿನಯವೋ ತಿಳಿಯುತ್ತಿಲ್ಲ. ತನ್ನ ಕೃತಿಯಂ ತಾನೆ ನೋಡಿ ಬೆರಗನು ಪಡೆಯೆ ಯಕ್ಷಗಾನ ಕವಿಗಳಿಂದ ಆಗಲಿಲ್ಲ. ಹಾಗಾಗಿ ಯಕ್ಷಗಾನ ಕೃತಿಗಳನ್ನು ಆದರಿಸಬೇಕಾದವರು ಸ್ವಾಗತಿಸಲಿಲ್ಲ.

2. ಯಕ್ಷಗಾನದ ಅವಗಣನೆ :

ಕೇರಳವನ್ನು ಕಥಕ್ಕಳಿಯಿಂದ ಸಂಕೇತಿಸುವಂತೆ ಕರ್ನಾಟಕವನ್ನು ಯಕ್ಷಗಾನದಿಂದ ಸಂಕೇತಿಸಲು ಕನ್ನಡಿಗರಿಂದ ಸಾಧ್ಯವಾಗಿಲ್ಲ. ಅಖಿಲ ಕರ್ನಾಟಕದ ಕಲೆ ಯಕ್ಷಗಾನ ಎಂದು ಸರಕಾರ ಒಂದು ಬಾರಿಯೂ ಹೇಳಲಿಲ್ಲ. ಕನ್ನಡ ಸಂಘಟನೆಗಳು ಅದಕ್ಕಾಗಿ ಹೋರಾಟ ಮಾಡಲಿಲ್ಲ. ಅಜ್ಞಾನಿಗಳು ತುಂಬಿರುವಲ್ಲಿ ಪ್ರತಿಭೆಯೂ ಅಪರಾಧವೆನಿಸುತ್ತದೆಂದು ಫ್ರೆಂಚ್‌ ಚಿಂತಕ ವಿಕ್ಟರ್‌ ಹ್ಯೂಗೋ ಹೇಳಿದ್ದಾನೆ. ಯಕ್ಷಗಾನವನ್ನು ಸರಕಾರ ಮತ್ತು ಕನ್ನಡ ಸಂಘಟನೆಗಳು, ಪರಿಷತ್ತು ಮತ್ತು ಅಕಾಡೆಮಿ ದಕಿಣ ಕನ್ನಡ ಕಲೆಯೆಂದು ತಪ್ಪು ತಿಳಿದು ಅವಗಣಿಸಿತು. ಕರಾವಳಿ ಕರ್ನಾಟಕದ ಮಂತ್ರಿ, ಸಂಸದ, ಶಾಸಕರಿಗೂ ಯಕ್ಷಗಾನಕ್ಕೆ ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆಯನ್ನು ಸಿಗುವಂತೆ ಮಾಡಲು ಸಾಧ್ಯವಾಗಲಿಲ್ಲ.

3. ಸಂಘಟನೆಯ ಕೊರತೆ :

ಯಕ್ಷಗಾನಕ್ಕೆ ಮನನಣೆ ಸಿಕ್ಕಾಗ ಯಕ್ಷಗಾನ ಸಾಹಿತ್ಯಕ್ಕೂ ಗೌರವ ದೊರೆಯುತ್ತದೆ. ಆದರೆ ಯಕ್ಷಗಾನ ಕವಿಗಳಲ್ಲಿ ಮತ್ತು ಕಲಾವಿದರಲ್ಲಿ ಒಗ್ಗಟ್ಟಿಲ್ಲ. ಬಹುತೇಕ ಕಲಾವಿದರು ಕಲಾಸಕ್ತಿಯ ಬದಲು ರಾಜಕೀಯ ಒಲವನ್ನೂ, ಜಾತೀಯತೆಯನ್ನೂ, ಕೋಮು ಭಾವನೆಯನ್ನೂ ಬೆಳೆಸಿಕೊಂಡಿದ್ದಾರೆ. ಕೆಲವು ಜಾತಿ ಸಂಘಟನೆಗಳು ತಮ್ಮ ಜಾತಿಯ ಕಲಾವಿದರನ್ನು ಮಾತ್ರ ಆಯ್ದು ಯಕ್ಷಗಾನ ಪ್ರದರ್ಶಿಸಿದ್ದಿದೆ. ಯಕ್ಷಗಾನ ಹುಟ್ಟಿದ್ದು, ಬೆಳೆದದ್ದು ಕೆಳಜಾತಿಯ ಹೃದಯವಂತ ಬಡವರಿಂದ. ಅವರಲ್ಲಿ ಈಗಲೂ ಸಂಘಟನೆಯಿಲ್ಲ. ಜಾತಿ ಸಂಘಟನೆಗಳಿಂದ ಯಕ್ಷಗಾನ ಕಲೆಗೆ ಯಾವ ಪ್ರಯೋಜನವೂ ಆಗಿಲ್ಲ. ಆದರೆ ಕಲಾವಿದರ ಒಗ್ಗಟನ್ನು ಒಡೆಯಲು ಅವುಗಳಿಂದ ಸಾಧ್ಯವಾಗಿದೆ. ಕಲಾವಿದರು ಯಕ್ಷಗಾನಕ್ಕೆ ಬರಬೇಕಿರುವ ಗೌರವ ಮನ್ನಣೆ ತರಲು ಸಂಘಟಿತ ಹೋರಾಟ ಮಾಡಿದ ಒಂದೇ ಒಂದು ಉದಾಹರಣೆ ಕಾಣುವುದಿಲ್ಲ. ಕಲೆಯನ್ನು ಜಾತಿಯ ಸೋಂಕಿನಿಂದ ಮಲಿನ ಮಾಡಿರುವ ಪಟ್ಟಭದ್ರ ಜನರಿಂದಾಗಿ ಯಕ್ಷಗಾನ ಕಲಾವಿದರು ಒಗ್ಗಟಾಗಿ ಹೋರಾಡಿ ಯಕ್ಷಗಾನಕ್ಕೆ ಸಲ್ಲಬೇಕಾದ ಸ್ಥಾನ ತಂದುಕೊಡಲು ಸಾಧ್ಯವಾಗಿಲ್ಲ.

4. ಹೊಸ ಪ್ರಸಂಗಗಳ ಕೊರತೆ :

ಜಾಗತೀಕರಣದ ಭರಾಟೆಯಲ್ಲಿ ಸ್ಥಳೀಯ ಸಂಸ್ಕೃತಿ ನಾಶವಾಗುತ್ತಿದೆ. ಯಕ್ಷಗಾನವೂ ಸಹಜವಾಗಿ ಅವಗಣನೆಗೆ ಒಳಗಾಗಿದೆ. ಇಂತಹ ಕಾಲದಲ್ಲಿ ಹೆಚ್ಚು ಹೆಚ್ಚು ಮೌಲ್ಯಯುತವಾದ ಯಕ್ಷಗಾನ ಪ್ರಸಂಗಗಳ ಸೃಷ್ಟಿಯಾಗಬೇಕಿದೆ. ಕರ್ನಾಟಕವು ಯಕ್ಷಗಾನದ ಮೂಲಕ ಜಾಗತೀಕರಣಕ್ಕೆ ಸಡ್ಡು ಹೊಡೆಯಬೇಕಿದೆ. ಆದರೆ ಕರ್ನಾಟಕದಲ್ಲಿ ಹೊಸ ಪ್ರಸಂಗಕಾರರು ಹುಟ್ಟುತ್ತಿಲ್ಲ. ಹಾಗಾಗಿ ಯಕ್ಷಗಾನ ಅಕಾಡೆಮಿ ಪ್ರಸಂಗ ರಚನಾ ಶಿಬಿರ ಮತ್ತು ಕಮ್ಮಟಗಳನ್ನು ಸಂಯೋಜಿಸುವ ಅಗತ್ಯವಿದೆ. ಅಲ್ಲದೆ ವರ್ಷದ ಅತ್ಯುತ್ತಮ ಯಕ್ಷಗಾನ ಪ್ರಸಂಗವನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಬೇಕು. ಸಿನಿಮಾದಲ್ಲಿರುವಂತೆ ಯಕ್ಷಗಾನದಲ್ಲೂ ಪ್ರತಿವರ್ಷ ಅತ್ಯುತ್ತಮ ಪ್ರಸಂಗಕರ್ತ, ಭಾಗವತ, ಚೆಂಡೆಮದ್ದಳೆಗಾರ, ಪೀಠಿಕೆ ವೇಷಧಾರಿ, ಎದುರು ವೇಷಧಾರಿ, ಬಣ್ಣದ ವೇಷಧಾರಿ, ಸ್ತ್ರೀ ವೇಷಧಾರಿ, ಪುಂಡು ವೇಷಧಾರಿ ಮತ್ತು ಹಾಸ್ಯ ಕಲಾವಿದ ಎಂದು ಒಟ್ಟು 10 ಪ್ರಶಸ್ತಿ ನೀಡಬೇಕು. ಇದು ಕಲಾವಿದರ ಗುಣಮಟ್ಟವನ್ನು ಹೆಚ್ಚಿಸುತ್ತದೆ.

5. ಹೊಸ ದೃಷ್ಟಿಕೋನವಿಲ್ಲ :

ರಚನೆಯಾಗುತ್ತಿರುವ ಪ್ರಸಂಗಗಳಲ್ಲೂ ಹೊಸ ದೃಷ್ಟಿಕೋನಗಳಿಲ್ಲ. ಜೀವವಿರೋಧಿ ಮೌಲ್ಯಗಳದ್ದೇ ವಿಜೃಂಭಣೆ. ಕರಾವಳಿ ಜಿಲ್ಲೆಗಳ ಇತಿಹಾಸವನ್ನು ಗಮನಿಸಿದರೆ ಅದು ಸಾಮಂತ ಅರಸರುಗಳಿಂದಲೇ ಆಳಲ್ಪಡುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆಗ ರಾಜಕೀಯ ದಾಸ್ಯವಿತ್ತು. ಈಗ ಸಾಂಸ್ಕೃತಿಕ ದಾಸ್ಯವಿದೆ ಮತ್ತು ಕೋಮು ಸಂಘಟನೆಗಳು ವಿಜೃಂಭಿಸುತ್ತಿವೆ. ಹಾಗಾಗಿ ಜೀವಪರ ಮೌಲ್ಯಗಳಾದ ಸಮಾನತೆ, ಜಾತ್ಯತೀತತೆಗೆ ಬೆಲೆ ಇಲ್ಲವಾಗಿದೆ. ರಚನೆಯಾಗುವ ಯಕ್ಷಗಾನ ಪ್ರಸಂಗಗಳಲ್ಲಿ ಹೊಸತನ, ಹೊಸ ದೃಷ್ಟಿಕೋನ, ಸಾರ್ವಕಾಲಿಕ ಸಮಸ್ಯೆಗಳಿಗೆ ಪರಿಹಾರ ಇಲ್ಲದೆ ಇರುವುದರಿಂದ ವಿಮರ್ಶಕರು ಯಕ್ಷಗಾನ ಪ್ರಸಂಗಗಳನ್ನು ತಿರಸ್ಕರಿಸಿರ ಬೇಕೆನಿಸುತ್ತದೆ. ಸಾಹಿತ್ಯವು ವ್ಯವಸ್ಥೆ ಯನ್ನು ಪ್ರಶ್ನಿಸಬೇಕು. ಯಕ್ಷಗಾನದಿಂದ ಅದು ಆಗುತ್ತಿಲ್ಲ. ಹಾಗಾಗಿ ಯಕ್ಷಗಾನ ಸಾಹಿತ್ಯ ವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಸರಿಯಾಗಬೇಕಾದರೆ ಹೊಸ ದೃಷ್ಟಿಯ ಹೊಸ ಪ್ರಸಂಗಗಳ ಸೃಷ್ಟಿಯಾಗಬೇಕು. ಯುಗಾಂತ, ಯಯಾತಿ, ಪರ್ವ, ಹಯವದನ, ಪುಂಸ್ತ್ರೀ, ಮತ್ಸ್ಯಗಂಧಿಯಂತಹ ಹೊಸ ದೃಷ್ಟಿಯ ಸಾಹಿತ್ಯ ಕೃತಿಗಳ ಆಧಾರದಲ್ಲಿ ಯಕ್ಷಗಾನ ಪ್ರಸಂಗಗಳು ರೂಪುಗೊಂಡರೆ ಯಕ ಸಾಹಿತ್ಯಕ್ಕೆ ಮನನಣೆ ಸಿಗುವ ಸಂಭವವಿದೆ.

6. ವಿಶ್ವವಿದ್ಯಾಲಯ ಮತ್ತು ಅಧ್ಯಾಪಕರ ದೃಷ್ಟಿಕೋನ :

ಕೆಲವು ವರ್ಷಗಳ ಹಿಂದೆ ಮಂಗಳೂರು ವಿ.ವಿ.ಯಲ್ಲಿ ಪಾರ್ತಿಸುಬ್ಬನ ಪ್ರಸಂಗ ಕೃತಿಯೊಂದು ಪಠ್ಯವಾಗಿತ್ತು. ಅದನ್ನು ಬಹುತೇಕ ಕನ್ನಡ ಅಧ್ಯಾಪಕರು ವಿರೋಧಿಸಿದರು. ಆ ಬಳಿಕ ವಿಶ್ವವಿದ್ಯಾಲಯ ಪ್ರಸಂಗ ಸಾಹಿತ್ಯವನ್ನು ಪಠ್ಯ ಮಾಡುವ ಧೈರ್ಯ ತೋರಲಿಲ್ಲ. ವಿಶ್ವವಿದ್ಯಾಲಯದಲ್ಲಿ ಒಂದು ಯಕ್ಷಗಾನ ಪೀಠವೇನೋ ಇದೆ. ಅದು ಯಕ್ಷಗಾನದ ಬೆಳವಣಿಗೆಗೆ ಯಾವುದೇ ಸಮರ್ಪಕ ಯೋಜನೆ ರೂಪಿಸಿದಂತಿಲ್ಲ. ಮಂಗಳೂರು ವಿ.ವಿಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ಸಂಶೋಧನೆಗಳಾಗಿಲ್ಲ. ಮಂಗಳೂರು ವಿ.ವಿ. ಯಕ್ಷಗಾನ ಕವಿ ಮತ್ತು ಕಲಾವಿದರನ್ನು ಸಂಘಟಿಸಿ ಯಕ್ಷಗಾನದ ಉಳಿವಿಗೆ ಇನಾನದರೂ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಕ್ಷಗಾನ ಪ್ರಸಂಗ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನ ಸಿಗಲು ಸಾಧ್ಯವಿದೆ.

ಅಮೃತ ಸೋಮೇಶ್ವರರು ಹೇಳುವಂತೆ ‘ಯಕ್ಷಗಾನದ ಸಮಗ್ರ ಕವಿ ಚರಿತ್ರೆ ಅಥವಾ ಸಾಹಿತ್ಯ ಚರಿತ್ರೆ ಇನ್ನೂ ಬರೆಯಲ್ಪಟ್ಟಿಲ್ಲ. ಇದು ತುಸು ಕ್ಲಿಷ್ಟಕರವಾದರೂ ನಾಲ್ಕಾರು ಮಂದಿ ಆಸಕ್ತ ವಿದ್ವಾಂಸರು ಶ್ರಮಿಸಿದರೆ ಇಂಥ ಆಕರ ಗ್ರಂಥ ರೂಪುಗೊಳ್ಳಬಹುದು. ವಿಶ್ವವಿದ್ಯಾಲಯ ಮಟ್ಟದಲ್ಲಿ ಇಂಥ ಯೋಜನೆಯನ್ನು ಕೈಗೊಳ್ಳುವುದು ವಿಹಿತ.’

********************


ಲೇಖನ ಕೃಪೆ : www.chilume.com

ಚಿತ್ರಗಳ ಕೃಪೆ : ಅ೦ತರ್ಜಾಲದಲ್ಲಿ ಯಕ್ಷಗಾನಾಭಿಮಾನಿಗಳಿ೦ದ ಪ್ರಕಟಿಸಲ್ಪಟ್ಟ ಸ೦ಗ್ರಹದಿ೦ದ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ