ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಟೆಂಟಲ್ಲಿ ಅರ್ಧಾಯುಷ್ಯ ಕಳೆದ ಹೆಮ್ಮೆಯ ಯಜಮಾನ : ಕಸ್ತೂರಿ ವರದರಾಯ ಪೈ

ಲೇಖಕರು :
ನಾ.ಕಾರ೦ತ, ಪೆರಾಜೆ
ಭಾನುವಾರ, ಜುಲೈ 24 , 2016

ಕಸ್ತೂರಿ ವರದರಾಯ ಪೈಗಳು ಸುರತ್ಕಲ್ ಮೇಳದ ಯಜಮಾನ. ಇವರ ಮೇಳದ ಗಾಥೆಗೆ ಹತ್ತಿರ ಹತ್ತಿರ ಅರ್ಧ ಶತಮಾನದ ಇತಿಹಾಸವಿದೆ. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದ್ದ ಅವರು ಯಜಮಾನಿಕೆಗೂ ‘ಅರ್ಹತೆಯಿದೆ’ ಮತ್ತು ‘ಅರ್ಹತೆ ಬೇಕು’ ಎಂದು ಅನುಷ್ಠಾನಿಸಿ ತೋರಿಸಿ ಕೊಟ್ಟವರು.

ಪೌರಾಣಿಕ ಪ್ರಸಂಗ-ಪಾತ್ರಗಳ ಆವರಣ ಮತ್ತು ಬದುಕಿನ ಆಸಕ್ತಿಗಳನ್ನು ಮಿಳಿತಗೊಳಿಸಿದವರು. ರಂಗ ಒಪ್ಪುವ ಪ್ರದರ್ಶನಗಳನ್ನು ಸ್ಮರಣೀಯವಾಗಿ ಸಂಪನ್ನಗೊಳಿಸಿದರು. ತೊಂಬತ್ತೊಂದು ವರ್ಷಗಳ ತುಂಬು ಜೀವನವನ್ನು ಅನುಭವಿಸಿದ ವರದರಾಯ ಪೈಗಳು 2016 ಜುಲೈ 17ರಂದು ದೈವಾಧೀನರಾದರು. ಅವರು ತಮ್ಮ ಅರ್ಧಾಯುಷ್ಯವನ್ನು ಚೌಕಿಯಲ್ಲೇ ಕಳೆದಿದ್ದರು!

ಬಾಲ್ಯ ಮತ್ತು ಶಿಕ್ಷಣ

ಕಸ್ತೂರಿ ವೆಂಕಟ್ರಮಣ ಪೈ ಮತ್ತು ಕಮಲಾ ಭಾಯಿ ದಂಪತಿ ಪುತ್ರನಾಗಿ 1924ರಲ್ಲಿ ಜನಿಸಿರುವ ಕಸ್ತೂರಿ ವರದರಾಯ ಪೈ ಅವರು ನಾಲ್ಕು ದಶಕಗಳ ಕಾಲ ಸುರತ್ಕಲ್ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಇವರ ತಂದೆ ವೆಂಕಟ್ರಮಣ ಪೈ ಅವರು ಕೂಡ ಭಾಗವತರಾಗಿ, ಚೆಂಡೆಮದ್ದಳೆವಾದಕರಾಗಿ ಗುರುತಿಸಿಕೊಂಡವರು. ತಂದೆಯ ಯಕ್ಷಗಾನಾಸಕ್ತಿ ಪುತ್ರ ವರದರಾಯರಲ್ಲೂ ಪಡಿ ಮೂಡಿತ್ತು. ಎಳವೆಯಲ್ಲೇ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಲು ಕೂಡ ಇದೊಂದು ಉತ್ತಮ ಕಾರಣವಾಯಿತು. ಸಮಾನ ಮನಸ್ಕ ಕೆಲವರನ್ನು ಸೇರಿಸಿಕೊಂಡು ತಾಳಮದ್ದಳೆ ಕಾರ್ಯಕ್ರಮ ನಡೆಸುತ್ತಾ, ನವರಾತ್ರಿ ಯಕ್ಷಗಾನ ಪ್ರದರ್ಶಿಸುತ್ತಾ ಯಕ್ಷಗಾನದ ಹುಚ್ಚನ್ನು ಮತ್ತಷ್ಟು ಹೆಚ್ಚಿಸಿಕೊಂಡವರು ವರದರಾಯ ಪೈಗಳು.

ಕಲಾವಿದರಿಗೆ ಬಾಳ್ವೆ ನೀಡಿದ ಸುರತ್ಕಲ್ ಮೇಳ

‘ಶ್ರೀ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್’ ಯಕ್ಷಗಾನಕ್ಕೆ ವಾಙ್ಮಯ ವೈಭವವನ್ನು ತಂದು ಕೊಟ್ಟ ಮೇಳ. ಸೊಂಟತ್ರಾಣದ ಬದಲಿಗೆ ಪಾತ್ರತ್ರಾಣ, ಭಾವ-ಭಾವನೆಗಳಿಗೆ ಮಾನ, ಬುದ್ಧಿಗೆ ಗ್ರಾಸ, ಶಿಸ್ತಿನ ಬಣ್ಣದ ಮನೆ, ಶಿಸ್ತಿನ ಪ್ರೇಕ್ಷಕರು, ಪೌರಾಣಿಕ ಜಾಡಿನಲ್ಲಿ ಕಾಲ್ಪನಿಕ ಪ್ರಸಂಗ... ಹೀಗೆ ಮೇಳದ ಒಂದೊಂದು ವಿಭಾಗವನ್ನು ಪೋಸ್ಟ್‌ ಮಾರ್ಟಂ ಮಾಡಿದರೆ ಅಪ್ಪಟ ಯಕ್ಷಗಾನದ ಜೀವಂತಿಕೆ ಮಿಣುಕುತ್ತದೆ. ‘ಸುರತ್ಕಲ್ ಮೇಳವು ನಮ್ಮದು’ ಎನ್ನುವ ಸಾವಿರಾರು ಮನಸ್ಸುಗಳನ್ನು ಗೆಲ್ಲುವುದು ಸಣ್ಣ ಕೆಲಸವಲ್ಲ. ಅದು ವರದರಾಯ ಪೈಗಳ ಜಾಣ್ಮೆಯ ನಿರ್ವಹಣೆ.

ಕಸ್ತೂರಿ ವರದರಾಯ ಪೈ
ಜನನ : 1924

ಕಲಾಸೇವೆ:
ಬದುಕಿನ ಅರ್ಧ ಶತಮಾನಗಳನ್ನು ಚೌಕಿಯಲ್ಲಿ ಕಳೆದ ಪೈಗಳು ‘ಶ್ರೀ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್’ಮೇಳವನ್ನು, ವಿವಿಧ ಯಶಸ್ವೀ ಪ್ರಯೋಗಗಳಿ೦ದ ಮುನ್ನೆಡೆಸಿ, ಕಲಾವಿದರ ಪ್ರೀತಿ ಪಾತ್ರರಾದ ಯಜಮಾನರಾಗಿದ್ದರು


ಮರಣ ದಿನಾ೦ಕ : ಜುಲೈ 17, 2016
ಮೇಳ ಕಟ್ಟುವುದು ಅವರ ಯೌವನದ ಕನಸು. 1955ರ ಹಿಂದೆ ಮುಂದೆ ಅಚಾನಕ್ಕಾಗಿ ಅದೃಷ್ಟಕ್ಕೆ ಒಲಿದ ಐದು ಸಾವಿರ ರೂಪಾಯಿ ಮೂಲ ಬಂಡವಾಳ ಇರಿಸಿಕೊಂಡು ಅಣ್ಣ ಕಸ್ತೂರಿ ವಾಸುದೇವ ಪೈ ಅವರೊಂದಿಗೆ ಹೊಸ ಮೇಳದ ರೂಪೀಕರಣ. ಸಾಮಾಜಿಕ ಸ್ಥಿತಿ-ಗತಿ, ವೈಯಕ್ತಿಕ ಬದುಕು, ಕಲಾವಿ ದರ ಜೋಡಣೆ, ಮೇಳ ನಿರ್ವಹಣೆ ಹೀಗೆ ಸವಾಲುಗಳನ್ನು ಎದುರಿಸಿದ ಪೈ ಸಹೋದರರ ಮೇಳವು ಒಂದೊಂದೇ ಹೆಜ್ಜೆಯೂರುತ್ತಾ ತ್ರಿವಿಕ್ರಮನಾಗಿ ಬೆಳೆದು ನಿಂತಿತು. ಅನುಭವವು ‘ಮಾಗಲು ಮತ್ತು ಬಾಗಲು’ ಕಲಿಸಿತ್ತು! ಹಾಗಾಗಿ ಈ ಮೇಳ ದೀರ್ಘ ಕಾಲ ಬಾಳಿತು. ಕಲಾವಿದರಿಗೆ ಬಾಳ್ವೆ ನೀಡಿತು.

ಯಶಸ್ವಿಯಾದ ಹೊಸ ಪ್ರಸಂಗಗಳ ಪ್ರಯೋಗ

ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜ ಯಯಾತಿ, ಸತಿ ಶೀಲವತಿ, ತುಳುನಾಡ ಬಲಿಯೇಂದ್ರ, ರಾಣಿ ರತ್ನಾವಳಿ.. ಪ್ರಸಂಗಗಳ ಮಾಲೆಗಳು ಮೇಳದ ವಿಜಯ ಮಾಲೆಗಳಾದುವು. ಜನರ ಮನಸ್ಸನ್ನು ಓದುವ ಸಾಮರ್ಥ್ಯದ ವರದರಾಯ ಪೈಗಳು ಹೊಸ ಪ್ರಸಂಗಗಳ ಹುಡುಕಾಟ ಮಾಡಿದರು. ಯಕ್ಷಗಾನದ ಸ್ವರೂಪಕ್ಕೆ ತೊಂದರೆಯಾಗದಂತೆ ಪರಿಷ್ಕರಿಸಿದರು. ಕಾಲ್ಪನಿಕ ಪ್ರಸಂಗಗಳ ಪ್ರಸ್ತುತಿಗಳು ಕಾಲಧರ್ಮದ ಪಲ್ಲಟ. ಶನೀಶ್ವರ ಮಹಾತ್ಮೆ, ಬಪ್ಪನಾಡು ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗಗಳನ್ನು ರಂಗ ಒಪ್ಪಿತು. ಪ್ರೇಕ್ಷಕರು ಸ್ವೀಕರಿಸಿದರು.

ಜಗಜಟ್ಟಿ ಕಲಾವಿದರ ರೂಪಿಸಿದ ಮೇಳದ ಯಜಮಾನ

ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಮಧೂರು ಗಣಪತಿ ರಾವ್, ರಾಮದಾಸ ಸಾಮಗ.. ಹೀಗೆ ಹಿರಿಯರಿದ್ದ ಮೇಳವು ‘ಸುಸಂಸ್ಕೃತ’ ಪದವ್ಯಾಪ್ತಿಯೊಳಗಿತ್ತು. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರನ್ನು ‘ಭಾಗವತ’ರನ್ನಾಗಿ ರೂಪಿಸಿದ ಮೇಳವಿದು. ಒಬ್ಬೊಬ್ಬ ಕಲಾವಿದನ ಕೊಡುಗೆಯು ಪ್ರಸಂಗ ಉತ್ತುಂಗಕ್ಕೇರಿಸಿತ್ತು. ಇದರಿಂದಾಗಿ ಕಲಾವಿದರಿಗೆ, ಮೇಳಕ್ಕೆ, ಪ್ರಸಂಗಕ್ಕೆ ತಾರಾ ಮೌಲ್ಯ ಬಂತು. ಜತೆಗೆ ಕಲೆಕ್ಷನ್ ತುಂಬಿ ಬಂತು.

ಪೈಗಳು ಬಹುಶಃ ವೇಷ ಮಾಡಲಿಲ್ಲ. ಅರ್ಥ ಹೇಳಲಿಲ್ಲ. ಆದರೆ, ಯಾವುದೇ ಪಾತ್ರದ ಆಳೆತ್ತರ, ಅದರ ರಂಗವ್ಯಾಪ್ತಿ, ಪ್ರಸ್ತುತಿಯಲ್ಲಿ ಕಲಾವಿದನ ಜವಾಬ್ದಾರಿಗಳ ಸ್ಪಷ್ಟ ಅರಿವಿತ್ತು, ನಿಲುವಿತ್ತು. ಯಾವ ಕಲಾವಿದನಲ್ಲಿ ಎಷ್ಟು ಅಭಿವ್ಯಕ್ತಿಯಿದೆ ಎನ್ನುವ ಮಾಪಕ ಮತಿಯಲ್ಲಿತ್ತು. ಅದನ್ನು ಹೊರಗೆಳೆವ ಅವರ ಕೌಶಲ ಅಪೂರ್ವ. ಈ ಮಾಪಕವೇ ಪ್ರದರ್ಶನಗಳ ಯಶಸ್ಸಿನ ಗುಟ್ಟು. ಯಜಮಾನರ ಹಾದಿಯನ್ನು ಅರ್ಥ ಮಾಡಿ ಕೊಂಡ ಕಲಾವಿದ ಗಡಣ. ಹಾಗಾಗಿ ನೋಡಿ. ಸುರತ್ಕಲ್ ಮೇಳವು ನಿಲುಗಡೆಯಾಗಿ ಹದಿನಾರು ವರ್ಷ ಕಳೆದರೂ ಅದರ ಪ್ರದರ್ಶನಗಳು ಕಾಡುತ್ತವೆ.

ಪೈಗಳಿಗೂ ಶೇಣಿ ಯವರಿಗೂ ಕಳಚದ ನಂಟು

ಸಾಮಾನ್ಯವಾಗಿ ಚೌಕಿಗೂ ಯಜಮಾನನಿಗೂ ತುಂಬಾ ಅಂತರ. ಪೈಗಳ ಮೇಳದ ಚೌಕಿ ಮನೆ ಯಿದ್ದಂತೆ! ಕುಟುಂಬ ಸಹಿತವಾಗಿ ಚೌಕಿಯಲ್ಲಿ ಧಾರಾ ಳವಾಗಿ ಕುಳಿತುಕೊಳ್ಳಬಹುದು! ಕಲಾವಿದ ರೊಂದಿಗೆ ಮಾತನಾಡಬಹುದು. ಕಲಾವಿದರ ಕುಟುಂಬವು ಚೌಕಿಗೆ ಬಂದರಂತೂ ಎಲ್ಲರಿಗೆ ಖುಷಿ. ಬೆಸೆದುಕೊಳ್ಳುವ ಇಂತಹ ಆಪ್ತತೆಗಳೇ ಮೇಳದ ಗಟ್ಟಿ ಅಡಿಗಟ್ಟು. ಕಲಾವಿದರೊಂದಿಗೆ ಪೈಗಳ ಊಟ, ತಿಂಡಿ, ನಿದ್ದೆ, ಮಾತುಕತೆ, ಸುಖ-ದುಃಖ ವಿನಿಮಯ. ಮೇಳದ ಯಜಮಾನನಾದವನು ಮೇಳದಲ್ಲೇ ಇರ ಬೇಕು, ಕಲಾವಿದರೊಂದಿಗೆ ಬೆರೆಯಬೇಕು, ಎಂದು ಶೇಣಿಯವರೂ ಹೇಳುತ್ತಿದ್ದರು. ಪೈಗಳಿಗೂ ಶೇಣಿ ಯವರಿಗೂ ಕಳಚದ ನಂಟು. ಶೇಣಿಯವರಿಗೂ ಯಜಮಾನರ ಮೇಲೆ ಗೌರವ. ಮೇಳದ ಕುರಿತು ಬಿಟ್ಟು ಕೊಡದ ಪ್ರೀತಿ. ಇಂಥ ಗುಣಗಳು ಕಲಾವಿದರಿಗೆ ಮೇಲ್ಪಂಕ್ತಿ.

ವರದರಾಯ ಪೈಗಳ ಮೇಳದ ನಿರ್ವಹಣೆ ಜಾಣ್ಮೆಯಿಂದ ಕೂಡಿತ್ತು. ದುಬಾರಿತನದಿಂದ ದೂರ. ಅಡುಗೆಗೆ ಸಾಧ್ಯವಾದಷ್ಟೂ ಸ್ಥಳೀಯ ತರಕಾರಿಗಳ ಅವಲಂಬನೆ. ಮೇಳವು ಊರಿನಿಂದ ಊರಿಗೆ ಹೋಗುವಾಗ ಆ ಊರಿನ ಪಾರಂಪರಿಕ ತರಕಾರಿ ಯಾವುದಿದೆಯೋ ಅದರತ್ತ ಆಸಕ್ತಿ. ಎಲ್ಲೆಲ್ಲಿ ಸಂತೆ ಆಗುತ್ತದೋ ಅ ಜಾಗವೆಲ್ಲಾ ಪೈಗಳಿಗೆ ಪರಿಚಿತ. ಸಂತೆ ಆಗುವಲ್ಲಿ ಸುರತ್ಕಲ್ ಮೇಳದ ಆಟ ಖಚಿತ. ಟೆಂಟ್ ಹೌಸ್‌ಫುಲ್.

ಶಿಸುಬಧ್ಧ ಜೀವನ ಶೈಲಿ

ಬದ್ಧತೆ ಮೇಳದಲ್ಲಿ ಸಮಯಕ್ಕೆ ಮಹತ್ವ. ಕಲಾವಿದರೆಲ್ಲರೂ ಎಂಟು ಗಂಟೆಯೊಳಗೆ ಚೌಕಿಯಲ್ಲಿರುವ ಅಲಿಖಿತ ಶಾಸನ. ಎಂಟೂವರೆಗೆ ಚೌಕಿ ಪೂಜೆ, ಒಂಬತ್ತು ಗಂಟೆಯಿಂದ ಕಟ್ಟುವೇಷ, ನಿತ್ಯ ವೇಷಗಳ ಕುಣಿತ. ಹತ್ತು ಗಂಟೆ ಹತ್ತು ನಿಮಿಷಕ್ಕೆ ಪ್ರಸಂಗ ಶುರು. ಚೌಕಿಯಲ್ಲಿ ದೇವರಿಗೆ ಹೂ, ಹಣ್ಣು ಖಾಯಂ. ಸ್ವತಃ ಪೈಗಳೇ ದೇವರಿಗೆ ಅಲಂಕಾರ ಮಾಡುತ್ತಿದ್ದರು. ಪೂಜೆಯ ಬಳಿಕ ಮೇಳದ ಟಿಕೆಟ್ ಕೌಂಟರ್ ತೆರೆದುಕೊಳ್ಳುತ್ತಿತ್ತು. ಸ್ವತಃ ಪೈಗಳೇ ಕೌಂಟರಿನಲ್ಲಿರುತ್ತಿದ್ದರು.

ಕಲೆಕ್ಷನ್ ಆದ ಬಳಿಕ ಕೌಂಟರಿಗೆ ಬಾಗಿಲು ಹಾಕಿ ಚೌಕಿಗೆ ಬಂದು ಕಲಾವಿದರೊಂದಿಗೆ ಮಾತನಾಡಿದ ಬಳಿಕವೇ ನಿದ್ದೆ. ಬೆಳಿಗ್ಗೆ ಐದು ಗಂಟೆಗೆ ಸ್ನಾನ. ಚೌಕಿ ಪೂಜೆಗೆ ಅಣಿ. ಈ ನಿಯತ್ತು ಬಹಳ ವರ್ಷ ಅನುಷ್ಠಾನ ಮಾಡಿದ್ದರು ಎಂದು ಭಾಗವತ ಪದ್ಯಾಣ ಗಣಪತಿ ಭಟ್ಟರು ಪೈಗಳ ಕಾಯಕ ಸ್ಮರಿಸಿಕೊಳ್ಳುತ್ತಾರೆ. ವರದರಾಯ ಪೈಗಳು 2000ರಲ್ಲಿ ಮೇಳ ನಿಲ್ಲಿಸುವ ಹೊತ್ತಲ್ಲಿ, ಮೇಳವೇನೋ ನಿಲ್ಲಿಸಬಹುದು ಆದರೆ, ಕಲಾವಿದರ ಗತಿ ಏನು ಎಂದು ಮರುಗಿದ್ದರು. ಕಲಾವಿದರ ಯೋಗ ಕ್ಷೇಮವು ಪೈಗಳ ‘ಯಜಮಾನಿಕೆ’ ವ್ಯಾಪ್ತಿಯೊಳಗಿತ್ತು. ಇಂಥ ಯಜಮಾನರನ್ನು ಪಡೆದ ಸುರತ್ಕಲ್ ಮೇಳ ಧನ್ಯ.

****************

ಕೃಪೆ : prajavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ