ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಇತಿಹಾಸದ ಪುಟಕ್ಕೆ ಸಂದು ಹೋದ ಯಕ್ಷ ವಾಚಸ್ಮತಿ : ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ

ಲೇಖಕರು :
ಎಂ. ಶಾಂತಾರಾಮ ಕುಡ್ವ
ಶುಕ್ರವಾರ, ಜುಲೈ 1 , 2016

ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು. ಯಕ್ಷರಂಗಕ್ಕೆ ತೀವೃ ಆಘಾತ ತಂದ ಸುದ್ದಿ ಇದು. ಕಳೆದ ಐದು ತಿಂಗಳಿಂದ ಅನಾರೋಗ್ಯದಿಂದಿದ್ದ ಶೆಟ್ಟರ ನಿಧನ ಯಕ್ಷರಂಗಕ್ಕೆ ದೊಡ್ಡ ನಷ್ಟವನ್ನೇ ತಂದಿದೆ. ಸದಾ ನಗುಮೊಗದ, ಸರಳ, ನಿಗರ್ವಿ ವ್ಯಕ್ತಿತ್ವದ ಶೆಟ್ಟರು ಇನ್ನೀಗ ನೆನಪು ಮಾತ್ರವಾಗಿ ಇತಿಹಾಸದ ಪುಟಕ್ಕೆ ಸಂದು ಹೋದರು ಎಂದು ಬರೆಯುವುದೇ ವೇದನೆಯ ವಿಷಯ.

1955 ರಲ್ಲಿ ಜನಿಸಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ತೆಂಕು, ಬಡಗು ತಿಟ್ಟಿನ ಸುಪ್ರಸಿಧ್ಧ ವೇಷಧಾರಿ, ಅರ್ಥಧಾರಿ ಹಾಗೂ ಪ್ರಸಂಗಕರ್ತರು. ಅಸ್ಖಲಿತ ವಾಗ್ವೈಖರಿ, ಆಕರ್ಷಕ ಮಂಡನಾಕ್ರಮ, ಸುಂದರವಾದ ವಾದಸಂವಾದದ ಪ್ರಸ್ತುತಿ, ಸರಳ ಆದರೂ ಶುಧ್ಧ ಭಾಷಾ ಪ್ರಯೋಗ, ಇವೆಲ್ಲಾ ಮೇಳೈಸಿರುವದೇ ಶೆಟ್ಟಿಯವರ ಅರ್ಥಗಾರಿಕೆಯ ಹೆಚ್ಚುಗಾರಿಕೆ. ಪಿ. ಯು. ಸಿ. ಪೂರೈಸಿ, ಯಕ್ಷಗಾನ ರಂಗಕ್ಕೆ ಬಂದ ವಿಶ್ವನಾಥ ಶೆಟ್ಟರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದವರು. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದ ತಿರುಗಾಟ ಶೆಟ್ಟರಿಗೆ ಯಕ್ಷಗಾನದ ಪಟ್ಟುಗಳನ್ನು ತಿಳಿಯುವ ವೇದಿಕೆಯಾಯಿತು. ಮೇಳದ ಲೆಕ್ಕಾಚಾರವನ್ನು ಬರೆಯುವ ಜವಾಬ್ದಾರಿ ಹೊಂದಿ, ವೇಷಗಳನ್ನೂ ನಿರ್ವಹಿಸುತ್ತಿದ್ದರು. ಕದ್ರಿಮೇಳದ "ಬೊಳ್ಳಿದಂಡಿಗೆ"ಯ ಜಿಪುಣ ಶೆಟ್ಟಿಯ ಪಾತ್ರ, "ಗರುಡಕೇಂಜವೆ"ಯ ದುಷ್ಟ ಮಂತ್ರಿ, "ಗೆಜ್ಜೆದಪೂಜೆ"ಯ ನಿಷ್ಟಾವಂತ ಮಂತ್ರಿ, "ಕದ್ರಿಕ್ಷೇತ್ರ ಮಹಾತ್ಮೆ"ಯ ಗೋರಕ್ಷನಾಥ, ಮಾತ್ರವಲ್ಲದೇ ಪೌರಾಣಿಕ ಪ್ರಸಂಗಗಳ ಶ್ರೀರಾಮ, ಶ್ರೀಕೃಷ್ಣ, ವಿದುರ, ಪರಶುರಾಮ, ಭೀಷ್ಮ ಮುಂತಾದ ಪಾತ್ರಗಳಲ್ಲಿ ಹೆಸರು ಗಳಿಸಿದರು. ಈ ಅವಧಿಯಲ್ಲೇ ಶೆಟ್ಟರು ಪ್ರಸಂಗಗಳನ್ನು ಬರೆಯಲಾರಂಭಿಸಿದ್ದರು. ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ ಮುಂತಾದ ತುಳು ಪ್ರಸಂಗಗಳೊಂದಿಗೇ ಪೌರಾಣಿಕ ಪ್ರಸಂಗವನ್ನೂ ಬರೆದು, ಅವೆಲ್ಲಾ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು.

" ವಿಷಮ ಸಮರಂಗ" , ಕನ್ಯಾಂತರಂಗ, ಚಾಣಾಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶ ವಲ್ಲರಿ, ಜ್ವಾಲಾಜಾಹ್ನವೀ, ಶ್ರೀರಾಮಸೇತು ಮುಂತಾದ ಪೌರಾಣಿಕ ಪ್ರಸಂಗಗಳು ಶೆಟ್ಟರಿಂದಲೇ ರಚಿಸಲ್ಪಟ್ಟ ಕೃತಿಗಳು.

ಕದ್ರಿ ಮೇಳ ನಿಂತಾಗ ಶೆಟ್ಟರು ಕರ್ಣಾಟಕ ಮೇಳ ಸೇರಿದರು. ಈ ಅವಧಿಯಲ್ಲೇ ಶೆಟ್ಟರ ಅದ್ಭುತ ಪ್ರತಿಭೆ ಹೊರಹೊಮ್ಮಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಶ್ರೇಷ್ಟ ಪ್ರಸಂಗ ಕೃತಿಯಾದ" ಮಾನಿಷಾದ" ದ ಪ್ರಧಾನ ಪಾತ್ರವಾದ "ವಾಲ್ಮೀಕಿ" ಪಾತ್ರ ಶೆಟ್ಟರಿಗೆ ದೊರಕಿತು. ವಿಶ್ವನಾಥ ಶೆಟ್ಟರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಅಸ್ಖಲಿತವಾದ ಮಾತುಗಾರಿಕೆ, ಭಾವಾಭಿನಯ ಹಾಗೂ ತಾವೇ ಸ್ವತಃ ಪ್ರಸಂಗಕರ್ತರಾದ ಕಾರಣ, ವಾಲ್ಮೀಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು. ವಾಲ್ಮೀಕಿ ಪಾತ್ರ ಅತ್ಯಂತ ಜನಪ್ರಿಯತೆ ಗಳಿಸಿ ಶೆಟ್ಟರು, ಪ್ರಸಿಧ್ಧಿಯಾದರು. ಉತ್ತಮ ಪ್ರಸಂಗಕರ್ತರಾಗಿ ಬೊಟ್ಟಿಕೆರೆಯವರು" ಅಭಿನವ ವಾಲ್ಮೀಕಿ" ಎನಿಸಿಕೊಂಡರೆ, ಶೆಟ್ಟರು ವಾಲ್ಮೀಕಿಯ ಪಾತ್ರ ನಿರ್ವಹಣೆಯಿಂದ" ಯಕ್ಷರಂಗದ ವಾಲ್ಮೀಕಿ" ಎನಿಸಿಕೊಂಡರು. ವಾಲ್ಮೀಕೀ ರಾಮಾಯಣದ ಶ್ಲೋಕ, ಅರ್ಥ, ಭಾವಾರ್ಥ ಗಳೆಲ್ಲವನ್ನೂ ತಮ್ಮ ಪಾತ್ರ ಪೋಷಣೆಗೆ ಸಮರ್ಥವಾಗಿ ಬಳಸಿದರು. ಪರಿಣಾಮವಾಗಿ ಶೆಟ್ಟರ ವಾಲ್ಮೀಕಿ ಜನಮಾನಸದಲ್ಲಿ ಪ್ರತಿಷ್ಟೆಗೊಂಡಿತು. " ಮಾನಿಷಾದ" ದ ಭರ್ಜರಿ ಯಶಸ್ಸಿಗೆ" ವಾಲ್ಮೀಕಿಯ ಕೊಡುಗೆ" ಯೂ ಸೇರಿಕೊಂಡಿತು. ಇಂದಿಗೂ " ಮಾನಿಷಾದ" ಎಂದಾಗ ಶೆಟ್ಟರ ವಾಲ್ಮೀಕಿ ಪಾತ್ರವೇ ಕಣ್ಣ ಮುಂದೆ ನಿಲ್ಲುವಷ್ಟು ಆ ಪಾತ್ರವನ್ನು ಕಟೆದು ನಿಲ್ಲಿಸಿದ್ದರು.

ಮುಂದೆ ಕರ್ಣಾಟಕ ಮೇಳ ತನ್ನ ತಿರುಗಾಟ ನಿಲ್ಲಿಸುವ ಹಂತದಲ್ಲಿರುವಾಗ, ಶೆಟ್ಟರಿಗೆ ಬಡಗಿನ ಸಾಲಿಗ್ರಾಮ ಮೇಳದಿಂದ ಬೇಡಿಕೆ ಬಂತು. ಸಾಲಿಗ್ರಾಮ ಮೇಳಕ್ಕೆ " ಮಾತಾಡುವ" ಕಲಾವಿದರ ಅನಿವಾರ್ಯತೆಯಿದ್ದಾಗ, ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರಿಗೆ ಹೊಳೆದದ್ದು, ವಿಶ್ವನಾಥ ಶೆಟ್ಟರ ಹೆಸರು. ಅಂತೂ ಶೆಟ್ಟರು, ಸಾಲಿಗ್ರಾಮ ಮೇಳ ಸೇರಿ, ಅಲ್ಲೂ ಮಾತುಗಾರಿಕೆಯಿಂದ ವಿಜೃಂಭಿಸಲಾರಂಭಿಸಿದರು. ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಭೀಷ್ಮ, ಹನೂಮಂತ, ಈಶ್ವರ ಮುಂತಾದ ಪಾತ್ರಗಳ ನಿರ್ವಹಣೆಯಿಂದ ಬಡಗಿನ ಅಭಿಮಾನಿಗಳ ಮನ ರಂಜಿಸಿದರು. ಕಾಲ್ಪನಿಕ ಪ್ರಸಂಗವಾದ" ಅಗ್ನಿನಕ್ಷತ್ರ" ದ ಮಂತ್ರಿಯ ಪಾತ್ರ, ಈಶ್ವರೀ ಪರಮೇಶ್ವರಿ, ರಂಗನಾಯಕಿ, ಧರ್ಮಸಂಕ್ರಾಂತಿ, ಸೂರ್ಯವಂಶಿ ಪ್ರಸಂಗಗಳ ಪಾತ್ರಗಳೆಲ್ಲಾ ಶೆಟ್ಟರಿಗೆ ಹೆಸರು ತಂದ ಪಾತ್ರಗಳು. ಇತ್ತೀಚೆಗೆ ಹಿರಿಯಡ್ಕ ಮೇಳದ ತಿರುಗಾಟದಲ್ಲೇ ಶೆಟ್ಟರು ಗಂಭೀರ ಸ್ತಿತಿಯಲ್ಲಿ ಅನಾರೋಗ್ಯಕ್ಕೊಳಗಾದರು.

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ" ಎಂದಾಕ್ಷಣ ಜನಸಾಮಾನ್ಯ ಪ್ರೇಕ್ಷಕರು ಇವರು ಯಕ್ಷರಂಗದ ಸುಪ್ರಸಿಧ್ಧ ಕಲಾವಿದ, ಇತ್ತೀಚೆಗೆ ನಮ್ಮನ್ನು ಅಗಲಿದ, ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಖಾಸಾ ತಮ್ಮ ಎಂದೇ ಭಾವಿಸಿದ್ದಾರೆ. ಇದಕ್ಕೆ ಕಾರಣ " ಸಿದ್ದಕಟ್ಟೆ" ಎಂಬ ಊರು ಎಂಬುದು ಮಾತ್ರ ಕಾರಣವಲ್ಲ, ಮಾತುಗಾರಿಕೆಯಲ್ಲೂ, ವಿಶ್ವನಾಥ ಶೆಟ್ಟರ ಪ್ರಬುಧ್ಧತೆಯಿಂದಾಗಿ. ಆದರೆ, ವಿಶ್ವನಾಥ ಶೆಟ್ಟರು, ಚೆನ್ನಪ್ಪ ಶೆಟ್ಟರಿಗೆ ಸಂಬಂಧದಲ್ಲಿ ತಮ್ಮನೇ ಹೊರತು ಖಾಸಾ ತಮ್ಮನಲ್ಲ. ಆದರೂ, ಈ ಇಬ್ಬರು "ಸಿದ್ದಕಟ್ಟೆ" ಯವರ ಅರ್ಥಗಾರಿಕೆಯಲ್ಲಿಯ ವ್ಯತ್ಯಾಸ ಗಮನಾರ್ಹ.

ದಿ. ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲಿ ಸ್ವಲ್ಪ ಮಟ್ಟಿನಲ್ಲಿ "ಶೇಣಿ" ಯವರ ಪ್ರಭಾವ ಗುರುತಿಸಬಹುದು. ಪದ್ಯಗಳಲ್ಲಿ ಬರುವ ಶಬ್ದಾರ್ಥಗಳನ್ನು ವಿಶ್ಲೇಶಿಸಿ, ತನ್ನ ಪಾತ್ರ ಪೋಷಣೆಯನ್ನು ಪೀಠಿಕೆಯಲ್ಲೇ ಮಂಡಿಸುವ ಶೇಣಿಯವರ ಅದ್ಭುತ ಕಲೆಯನ್ನು ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲೂ ಕಾಣಬಹುದಾಗಿತ್ತು. ಎದುರು ಪಾತ್ರಧಾರಿ ದಾರಿ ತಪ್ಪಿದರೆ, ಕೂಡಲೇ ಖಂಡಿಸುವದು ಚೆನ್ನಪ್ಪ ಶೆಟ್ಟರ ಕ್ರಮ. ( ದಿ. ಶೇಣಿಯವರ ಅರ್ಥದಲ್ಲೂ ಇದನ್ನು ಗಮನಿಸಬಹುದು) ಆದರೆ, ವಿಶ್ವನಾಥ ಶೆಟ್ಟರ ಅರ್ಥ ದಿ. ರಾಮದಾಸ ಸಾಮಗರ ಅರ್ಥವನ್ನು ಹೋಲುತ್ತಿದೆ. ಪೀಠಿಕೆ, ಮಂಡನೆ, ಖಂಡನೆ, ವಾದ, ಸಂವಾದಗಳಲ್ಲಿ "ಸಾಮಗ" ಶೈಲಿ ಕಾಣಬಹುದಾಗಿದ್ದರೂ, ಸಾಮಗರ ಅನುಕರಣೆಯಾಗದೇ ಸ್ವಂತಿಕೆಯಿದೆ. ಸರಳ ಭಾಷೆ, ಆಕರ್ಷಕವಾದ ಮಾತುಗಾರಿಕೆಯು ವಿಶ್ವನಾಥ ಶೆಟ್ಟರ ಅರ್ಥಗಾರಿಕೆಯ ಜೀವಾಳ. ಎದುರು ಪಾತ್ರಧಾರಿ ತಪ್ಪಿ ಮಾತಾಡಿದರೆ, ನಗುನಗುತ್ತಾ ಹಾಸ್ಯದಿಂದಲೇ ಮರುತ್ತರ ನೀಡುತ್ತಿದ್ದರು. ಶುಧ್ದ ತುಳು ಭಾಷೆಯನ್ನು ತುಳು ಪ್ರಸಂಗಗಳಲ್ಲಿ ಪ್ರಸ್ತುತಪಡಿಸುವ ಕಲೆ ವಿಶ್ವನಾಥ ಶೆಟ್ಟರಿಗೆ ಸಿಧ್ದಿಸಿತ್ತು. ತುಳುಭಾಷೆಯ ಸಾಹಿತ್ಯ ಜ್ಞಾನದಿಂದಾಗಿ ತುಳು ಗಾದೆ, ಒಗಟುಗಳನ್ನು ಧಾರಾಳವಾಗಿ ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದರು.

ಭಾಷಣ, ಅಭಿನಂದನಾ ನುಡಿಗಳನ್ನು ಶೆಟ್ಟರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ನಮ್ಮ "ಯಕ್ಷಸಂಗಮ" ದ ಐದನೇ ವರ್ಷದ ಕಾರ್ಯಕ್ರಮದಂದು "ಮಿಜಾರು ಅಣ್ಣಪ್ಪ ಸಂಮಾನ" ದಂದು ಅಣ್ಣಪ್ಪರ ಸಹಕಲಾವಿದರಾದ, ವಿಶ್ವನಾಥ ಶೆಟ್ಟರು, ಅಭಿನಂದನಾ ಭಾಷಣ ಮಾಡಿ ಅಣ್ಣಪ್ಪರಿಂದಲೇ ಮೆಚ್ಚುಗೆ ಗಳಿಸಿದ್ದರು. ( ``ವಿಶ್ವನಾಥ ಶೆಟ್ಟರು ಇಷ್ಟೆಲ್ಲಾ ಹೇಳಿದ್ದು ನನ್ನ ಕುರಿತಾಗಿಯಾ ?`` ಎಂದು ಅಣ್ಣಪ್ಪರು ಸಂಮಾನಿತರ ಭಾಷಣದಲ್ಲಿ ಕೇಳಿದ್ದರು) ತಾಳಮದ್ದಳೆಯಲ್ಲೂ ತಮ್ಮ ಛಾಪನ್ನು ಒತ್ತಿದ ವಿಶ್ವನಾಥ ಶೆಟ್ಟರು ಶ್ರೀರಾಮ, ಶ್ರೀಕೃಷ್ಣ, ಸುಗ್ರೀವ, ಪರಶುರಾಮ, ಭೀಷ್ಮ, ಶಂತನು, ಹನೂಮಂತ, ಸುಧನ್ವ ಮುಂತಾದ ಸಾತ್ವಿಕ ಪಾತ್ರಗಳಲ್ಲಿ ಮಿಂಚಿದಂತೆ ಸಾಲ್ವ, ದುಷ್ಟಬುಧ್ಧಿ, ಕೌರವ ದಂಥಹ ಖಳ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು. ನಗುನಗುತ್ತಾ ಎದುರು ಪಾತ್ರಧಾರಿಗಳ ವಾದಗಳಿಗೆ ಪ್ರತ್ಯುತ್ತರ ಕೊಡುವ ಶೈಲಿ ಅಸದೃಶ. ಸಹ ಕಲಾವಿದರೊಂದಿಗೆ ಆತ್ಮೀಯರಾಗಿರುತ್ತಿದ್ದ ಶೆಟ್ಟರು, ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಚೆನ್ನಪ್ಪ ಶೆಟ್ಟರ ಬಗ್ಗೆ ಅಪಾರ ಗೌರವ ಹೊಂದಿದ್ದ ಶೆಟ್ಟರು, ಚೆನ್ನಪ್ಪ ಶೆಟ್ಟರ ಅಕಾಲ ನಿಧನದಿಂದಾಗಿ ಸ್ವಲ್ಪ ಕಾಲ ಅಧೀರರಾಗಿದ್ದುದು ಸತ್ಯ. ಚೆನ್ನಪ್ಪ ಶೆಟ್ಟರ ಸಂಸ್ಮರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೆಲ್ಲಾ , ಚೆನ್ನಪ್ಪ ಶೆಟ್ಟರ ಬಗ್ಗೆ ಮಾತಾಡುವಾಗ ಅಳುತ್ತಿದ್ದರು. " ಚೆನ್ನಪ್ಪ ಶೆಟ್ಟಿ" ಯವ ರಿರುವಾಗ ಕರಪತ್ರಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ" ಸಿದ್ದಕಟ್ಟೆ ದ್ವಯರು" ಎಂಬ ಶಬ್ದ ಇನ್ನು ಕಾಣಲಾಗದು" ಎಂದು ಕಂಬನಿ ಮಿಡಿದಿದ್ದರು. ( ಚೆ. ಶೆಟ್ಟಿ × ವಿ. ಶೆಟ್ಟಿ ಯವರನ್ನು ಒಟ್ಟಾಗಿ ಸಿದ್ದಕಟ್ಟೆದ್ವಯರು ಎಂದು ಬರೆಯುವ ರೂಢಿಯಿತ್ತು )

ಎರಡು ತಿಂಗಳ ಹಿಂದೆ ಶೆಟ್ಟರ ಆರೈಕೆ ನೋಡುತ್ತಿದ್ದ ಡಾ. ಪದ್ಯಾಣ ಸುಬ್ರಹ್ಮಣ್ಯರೊಂದಿಗೆ ಶೆಟ್ಟರ ಮನೆಗೆ ಹೋದಾಗ "ಕುಡ್ವರೇ, ನಾನು ಮರಳಿ ಅರ್ಥ ಹೇಳಲಾಗುತ್ತದೆಯಲ್ಲವೇ ?" ಎಂದು ನನ್ನಲ್ಲಿ ಪ್ರಶ್ನಿಸಿದ್ದರು. ಮರಳಿ ಯಕ್ಷರಂಗಕ್ಕೆ ಬರಬೇಕೆಂಬ ಹಂಬಲ ಶೆಟ್ಟರಿಗಿತ್ತು . ಆದರೂ ವಿಧಿಯ ಎದುರು ಯಾರಾದರೂ ನಿಲ್ಲಬಲ್ಲರೇ ?

ಆಟಕೂಟಗಳ ಸರದಾರ, ಪ್ರಸಂಗಕರ್ತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು, ಇಂದು ಯಕ್ಷರಂಗವನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿ ನೀಡಲಿ, ಅಗಲಿದ ಶೆಟ್ಟರ ಆತ್ಮಕ್ಕೆ "ಸದ್ಗತಿ" ದೊರಕಲಿ ಎಂದು ಪರಮಾತ್ಮನಲ್ಲಿ ಹಾಗೂ ಕಲಾಮಾತೆಯಲ್ಲಿ ಪ್ರಾರ್ಥನೆ.

***********************ಕೃಪೆ : ವಾಟ್ಸಪ್ ಗು೦ಪಿನಿ೦ದ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ