ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಲಾಸೇವೆಯ ರಜತ ವರ್ಷದ ಹೊಸ್ತಿಲಲ್ಲಿ ಬೇಡಿಕೆಯ ಕಲಾವಿದ : ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಜೂನ್ 11 , 2016

ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕಲಾವಿದರಲ್ಲಿ, ಭರವಸೆ ವೇಷಧಾರಿ ಹಾಗೂ ಅರ್ಥಧಾರಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ ಒಬ್ಬರು. ಆಟ ಕೂಟಗಳೆರಡರಲ್ಲೂ ಸಲ್ಲುವ ಶ್ರೇಷ್ಟ ಕಲಾವಿದರು. ಯಕ್ಷರಂಗದಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶೆಟ್ಟರು, ಇದೀಗ ತಮ್ಮ ಯಕ್ಷ ತಿರುಗಾಟದ ``ರಜತ ವರ್ಷ`` ದ ಹೊಸ್ತಿಲಲ್ಲಿದ್ದಾರೆ. ಕಿರಿಯ ಪ್ರಾಯದಲ್ಲೇ ಹಿರಿದನ್ನು ಸಾಧಿಸಿದ ಅಪೂರ್ವ ಕಲಾವಿದರು.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಕುಡಾಲುಗುತ್ತು ಬಾಲಕೃಷ್ಣ ಶೆಟ್ಟಿ ಹಾಗೂ ಲೀಲಾವತಿ ಶೆಟ್ಟಿ ದಂಪತಿಯ ಸುಪುತ್ರನಾಗಿ 1975ರ ಎಪ್ರಿಲ್‌ 26ರಂದು ಜನಿಸಿದ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಅವರು ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾದ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಅವರು ದಾಸನಡ್ಕ ರಾಮ ಕುಲಾಲ್‌ ಅವರ ಪ್ರೇರಣೆಯಿಂದ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ರಂಗಪ್ರವೇಶಿಸಿದರು. ಧರ್ಮತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್‌ನಲ್ಲಿ SSLC ಶಿಕ್ಷಣ ಪಡೆದರು. ಇವರ ಅಜ್ಜನವರಾದ ಗುಂಪೆ ರಾಮಯ್ಯ ರೈಗಳು, ಮಾವ ಪೆರುವಾಯಿ ನಾರಾಯಣ ಶೆಟ್ಟಿಯವರು ಪ್ರಸಿಧ್ಧ ಕಲಾವಿದರಾದ ಕಾರಣ ಜಯಪ್ರಕಾಶರೂ, ಯಕ್ಷರಂಗಕ್ಕೆ ಸೇರುವ ಮನಸ್ಸು ಮಾಡಿದರು.

ಅನಂತರದ ದಿನಗಳಲ್ಲಿ ಧರ್ಮಸ್ಥಳದ ಯಕ್ಷ ಕ್ಷೇತ್ರದ ಮಾನ್ಯ ಗುರುಗಳಾದ ಕೋಳ್ಯೂರು ರಾಮಚಂದ್ರ ರಾವ್‌ ಅವರಿಂದ ಪೂರ್ಣ ಪ್ರಮಾಣದ ಯಕ್ಷನಾಟ್ಯದ ತರಬೇತಿ ಪಡೆದು, ರಂಗದ ಅನುಭವಕ್ಕಾಗಿ ಶ್ರೇಷ್ಠ ಕಲಾವಿದ ಶ್ರೀಧರ ಭಂಡಾರಿ ನೇತೃತ್ವದ ಕಾಂತಾವರ ಮೇಳದಲ್ಲಿ ತಿರುಗಾಟ ಪ್ರಾರಂಭಿಸಿದರು. ಮುಂದೆ ಬಲಿಪ ನಾರಾಯಣ ಭಾಗವತರ ನಿರ್ದೇಶನದ ಕಟೀಲು ಮೇಳದಲ್ಲಿ ಸೇರಿಕೊಂಡು ಮಾತುಗಾರಿಕೆ, ರಂಗ ನಡೆಯ ಬಗ್ಗೆ ವಿಶೇಷ ಜ್ಞಾನ ಪಡೆದರು. ನಿತ್ಯ ವೇಷದಿಂದ ತೊಡಗಿ, ಎದುರು ವೇಷಗಳವರೆಗೆ ಕಲಾವಿದನೊಬ್ಬ ಎಳೆವೆಯಲ್ಲಿಯೇ ಬೆಳೆದು ಬರುವುದು ತೀರ ಅಪರೂಪವಾದರೂ ಈ ಬೆಳವಣಿಗೆಗೆ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ ಅವರು ಜ್ವಲಂತ ಸಾಕ್ಷಿಯಾಗಿದ್ದಾರೆ.

ಪರಿಪೂರ್ಣ ಕಲಾವಿದರಾಗಿ ಕಟೀಲು ಮೇಳದಲ್ಲಿರುವಾಗ ಪೆರುವಾಯಿಯವರೊಂದಿಗಿನ ತಿರುಗಾಟದಲ್ಲಿ ಮಾತುಗಾರಿಕೆಯನ್ನು ಕಲಿತರು. ಯಕ್ಷರಂಗಕ್ಕೆ ನಿಷ್ಟರಾಗಿ, ಛಲದಿಂದ ಯಾವದೇ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಗಳಿಸಿದರು. ಕಟೀಲು ಮೇಳದಲ್ಲಿ 16 ವರ್ಷಗಳ ಕಲಾಸೇವೆ ಸಲ್ಲಿಸಿದ ಜಯಪ್ರಕಾಶ್‌ ಶೆಟ್ಟಿ ಅವರು ಪ್ರಸ್ತುತ ಶ್ಯಾಮ್‌ ಭಟ್‌ ಅವರ ನೇತೃತ್ವದಲ್ಲಿ ಹೊಸನಗರ ಮೇಳದಲ್ಲಿ ಕಳೆದ 9 ವರ್ಷಗಳಿಂದ ಅಭಿಮಾನಿಗಳ ಬೇಡಿಕೆಯ ಕಲಾವಿದರಾಗಿ ಸೇವಾ ನಿರತರಾಗಿದ್ದಾರೆ.

ಕಲಾಭಿಮಾನಿಗಳ ಮನಗೆದ್ದ ಸೊಗಸಿನ ಅರ್ಥಗಾರಿಕೆ

ಆಟ-ಕೂಟಗಳೆರಡರಲ್ಲಿಯೂ ಕಲಾರಸಿಕರಿಂದ ಶ್ಲಾಘಿಸಲ್ಪಡುವ ಪೆರ್ಮುದೆ ಅವರು ಅಪಾರ ಅಭಿಮಾನಿಗಳ ಸರದಾರ. ತನಗೊದಗಿದ ಯಾವ ಗುಣದ ಪಾತ್ರಕ್ಕೂ ರಂಗದಲ್ಲಿ ಜೀವ ತುಂಬಬಲ್ಲ ವಿಶಿಷ್ಟ ತಾರಾ ಮೌಲ್ಯವನ್ನು ಸಾಧನೆಯ ಮೂಲಕ ಸಂಪಾದಿಸಿದ್ದಾರೆ ಜಯಪ್ರಕಾಶ್‌ ಶೆಟ್ಟಿ. `` ನಾವು ಎಲ್ಲವನ್ನು ಗೆಲ್ಲಬಹುದು ಆದರೆ ಇನ್ನೊಬ್ಬರ ಮನಸ್ಸನ್ನು ಗೆಲ್ಲುವುದು ದೊಡ್ಡ ಸವಾಲಾಗಿದೆ.
ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ
ಜನನ : ಎಪ್ರಿಲ್‌ 26, 1975
ಜನನ ಸ್ಥಳ : ಪೆರ್ಮುದೆ, ಕುಡಾಲ್ ಮೇರ್ಕಳ ಗ್ರಾಮ
ಕಾಸರಗೋಡು ತಾಲೂಕು
ಕೇರಳ ರಾಜ್ಯ
ಕಲಾಸೇವೆ:
ಆಟ-ಕೂಟಗಳೆರಡರಲ್ಲಿಯೂ ಕಲಾರಸಿಕರಿಂದ ಶ್ಲಾಘಿಸಲ್ಪಡುವ ತನಗೊದಗಿದ ಯಾವ ಗುಣದ ಪಾತ್ರಕ್ಕೂ ರಂಗದಲ್ಲಿ ಜೀವ ತುಂಬಬಲ್ಲ ವಿಶಿಷ್ಟ ತಾರಾ ಮೌಲ್ಯವನ್ನು ಸಾಧನೆಯ ಮೂಲಕ ಸಂಪಾದಿಸಿದ ಶೆಟ್ಟಿಯವರು ಕಾಂತಾವರ ಮೇಳದಲ್ಲಿ ಪಾದಾರ್ಪಣೆ ನ೦ತರ ಕಟೀಲು ಮೇಳದಲ್ಲಿ 16 ವರ್ಷಗಳ ಕಲಾಸೇವೆ ಸಲ್ಲಿಸಿ ಪ್ರಸ್ತುತ ಹೊಸನಗರ ಮೇಳದಲ್ಲಿ ಕಳೆದ 9 ವರ್ಷಗಳಿಂದಕಲಾಕೃಷಿ ಮು೦ದುವರೆಸುತ್ತಿದ್ದು, ತಾಳಮದ್ದಳೆಯಲ್ಲಿಯೂ ಯಶಸ್ವೀ ಅರ್ಥಧಾರಿ.
ಮನಸ್ಸನ್ನು ಗೆದ್ದವ ಸರ್ವಸ್ವವನ್ನು ಗೆದ್ದ ಹಾಗೆ`` ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಲಾಭಿಮಾನಿಗಳ ಮನಗೆದ್ದ ಅಪ್ಪಟ್ಟ ಕಲಾವಿದ ಪೆರ್ಮುದೆ ಅವರು ಪ್ರಸ್ತುತ ಶಬ್ದ ಭಂಡಾರದ ಖನಿಯಾಗಿದ್ದಾರೆ. ಅವರು ಓದಿದೆಲ್ಲವೂ ಅವರಿಗೆ ಜೀವನಾನುಭವದಿಂದಲೇ ಬಂದಿರುವುದು.

ಅರ್ಥಗಾರಿಕೆಯ ನೈಪುಣ್ಯತೆ ಸಾಧಿಸಿದ ಶೆಟ್ಟರ ಅರ್ಥಗಾರಿಕೆ ಬಲು ಸೊಗಸು. ನಿರರ್ಗಳ, ಶೃತಿ, ಲಯಬದ್ದವಾದ ಮಾತುಗಾರಿಕೆ, ಉತ್ತಮ ನಾಟ್ಯ ಹಾಗೂ ಅಭಿನಯ, ಪಾತ್ರದ ಸ್ವಭಾವ ಅರಿತು, ಪಾತ್ರಕ್ಕೆ ಚಿತ್ರಣ ಕೊಡುವದು ಶೆಟ್ಟರ ವಿಶೇಷತೆ. ಯಾವದೇ ಪಾತ್ರ ನಿರ್ವಹಿಸುವದಾದರೂ, ಆ ಪಾತ್ರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಆ ಪಾತ್ರಕ್ಕೆ ನ್ಯಾಯ ಒದಗಿಸುವವರು. ಶೆಟ್ಟರ ಅರ್ಥಗಾರಿಕೆಯಲ್ಲಿ ``ಪೆರುವಾಯಿ ಶೈಲಿ`` ಗುರುತಿಸಬಹುದು. ಶೆಟ್ಟರ ವಾದ ಸಂವಾದ, ಮಂಡನೆ ಖಂಡನೆ, ಪೀಠಿಕಾ ನಿರೂಪಣೆ ಎಲ್ಲಾ ಆಕರ್ಷಣೀಯ. ವಾದಕ್ಕೆ ನಿಂತರಂತೂ ಪ್ರೇಕ್ಷಕರಿಗೆ ಸಾಹಿತ್ಯದ ರಸದೌತಣ. ಪುರಾಣಲೋಕವನ್ನೇ ಅನಾವರಣಗೊಳಿಸುವ ಶೈಲಿ ಶೆಟ್ಟರಿಗೆ ಚೆನ್ನಾಗಿ ಸಿಧ್ದಿಸಿದೆ.

ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಶಿಷ್ಯ

ಹೊಸನಗರ ಮೇಳ ಸೇರಿದ ನಂತರ ಸುಪ್ರಸಿಧ್ಧ ವಾಗ್ಮಿ ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಎದುರು ಅರ್ಥ ಹೇಳಿ ಮಿಂಚಿ ``ಶೆಟ್ಟಿದ್ವಯ``ರ ಸಂಭಾಷಣೆ ಆಸ್ವಾದಿಸಲಿಕ್ಕಾಗಿಯೇ ಪ್ರೇಕ್ಷಕರು ಕಾತುರದಿಂದಿರುತ್ತಿದ್ದರು ಎಂಬುದು ಈಗ ಇತಿಹಾಸ. ತಾಳಮದ್ದಳೆ ಕೂಟದಲ್ಲೂ ಈ ``ಶೆಟ್ಟಿದ್ವಯ`` ಜೋಡಿ ಪ್ರಸಿಧ್ಧಿ ಪಡೆದಿತ್ತು. ``ನನ್ನಿಂದಲೇ ಕಲಿತು...ನನ್ನಿಂದಲೇ ಅರಿತು...ನನಗೆ ಹೇಳುವಷ್ಟು ಎತ್ತರಕ್ಕೆ ಬೆಳೆದು ಹೊದೆಯಾ ನೀನು?. ಗುರುವಿಗೇ...ತಿರುಗುಬಾಣ...`` ಎಂದು ಮುಗುಳ್ನಕ್ಕು ಶಿಷ್ಯ ಬೆಳೆಯುವುದನ್ನು ಕಂಡು ಸಂತಸಪಟ್ಟ ಯಕ್ಷಗಾನದ ಧ್ರುವತಾರೆ ದಿ| ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಅವರಿಂದ ಶಹಬ್ಟಾಸ್‌ಗಿರಿಯನ್ನು ಪಡೆದ ಜಯಪ್ರಕಾಶ್‌ ಶೆಟ್ಟಿ ಪ್ರಸ್ತುತ ಯಕ್ಷ ಕಲಾಭಿಮಾನಿಗಳ ಹೃದಯದಲ್ಲಿ ಸ್ಥಾಯಿಯಾಗಿದ್ದಾರೆ.

``ನೀವು ಕಲಿಸಿದರೊಂದಿಗೆ ನನ್ನ ಸ್ವಂತದನ್ನು ಸೇರಿಸಿ ನಿಮಗೆ ಹೇಳುವುದು ಅಷ್ಟೆ`` ಎಂದು ತಲೆಬಾಗಿಸಿ ವಿನಮ್ರತೆಯಿಂದ ಗುರುವಿನ ಏಟಿಗೆ ಎದಿರೇಟು ನೀಡುವ ಪೆರ್ಮುದೆ ಅವರ ಬದುಕು ಕಲಾವಿದರಿಗೆ ಮಾದರಿಯಾಗಿದೆ. ಎಳ್ಳಷ್ಟು ಅಹಂ ಭಾವ ಇಲ್ಲದ, ಎಳ್ಳಷ್ಟು ಸ್ವಾರ್ಥವಿಲ್ಲದ ಬದುಕು ಅವರದ್ದು. `` ನಿಮ್ಮಲ್ಲಿ ಏನೆಲ್ಲ ಉಂಟೋ ಅದನ್ನು ನನಗೆ ಧಾರೆ ಎರೆದುಕೊಡಿ ಎಲ್ಲವೂ ನನಗೆ ಬೇಕು ಎಂಬ ದುರಾಸೆ ಎನಗಿಲ್ಲ. ಆದರೆ ನಿಮ್ಮಲ್ಲಿರುವ ಎಲ್ಲವೂ ನನಗೆ ಬೇಕು. ಕೇಳಿ ತಿಳಿದುಕೊಳ್ಳುವ ತುಡಿತ ನನ್ನಲ್ಲುಂಟು`` ಎಂದು ಯಕ್ಷಗಾನದ ತಾರಕಮಂತ್ರ ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರಿಗೆ ತಾಳಮದ್ದಳೆಯ ಅರ್ಥಗಾರಿಕೆಯ ಸಂದರ್ಭದಲ್ಲಿ ಕೇಳಿಕೊಳ್ಳುತ್ತಿದ್ದ ಅವರು, ``ನೀವಿಲ್ಲದ್ದ ಜೀವನ ಶೂನ್ಯ`` ಎಂದು ಸಿದ್ದಕಟ್ಟೆ ಅವರ ಬಗ್ಗೆ ಹೇಳಿರುವುದು ಕಲಾಭಿಮಾನಿಗಳ ಕಿವಿಯಲ್ಲಿ ಇಂದಿಗೂ ಪ್ರತಿಧ್ವನಿಸುತ್ತಿದೆ. ಚೆನ್ನಪ್ಪ ಶೆಟ್ಟರ ಅಕಾಲಿಕ ನಿಧನ ಜಯಪ್ರಕಾಶ ಶೆಟ್ಟರಿಗೂ ಆಘಾತ ತಂದದ್ದು ಸತ್ಯ.

ನಾಯಕ-ಪ್ರತಿನಾಯಕ, ಸಾತ್ವಿಕ-ಖಳ ಎಲ್ಲಾ ಪಾತ್ರಗಳು ಶೆಟ್ಟರ ``ಮಾಸ್ಟರ್ ಪೀಸ್``

ಪೆರ್ಮುದೆ ಅವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟ ಪಾತ್ರವೆಂದರೆ ``ಜಾಬಾಲಿ``. ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ನಂದಿನಿ ಮತ್ತು ಪೆರ್ಮುದೆ ಅವರ `ಜಾಬಲಿ ಪಾತ್ರಗಳನ್ನು ಕಣ್ತುಂಬಿಕೊಳ್ಳಲು ಕಲಾಭಿಮಾನಿಗಳ ದಂಡೆ ಸೇರುತ್ತಿತ್ತು. ಭಾವನಾತ್ಮಕ ಪಾತ್ರಗಳಾದ ಮಾನಿಷಾದದ ಲಕ್ಷ್ಮಣ, ದೇವಿಯ ಮಹಾತ್ಮೆಯ ರಕ್ತಬೀಜ ಪಾತ್ರ ಪೆರ್ಮುದೆ ಅವರ ಘನ, ಗಾಂಭೀರ್ಯ, ದುರಂತ ಪಾತ್ರಕ್ಕೆ ಇನ್ನೊಂದು ನಿದರ್ಶನ. ಇಂದ್ರಜಿತು, ಕರ್ಣಾವಸಾನದ ಕರ್ಣ, ವಿಷ್ಣು, ಋತುಪರ್ಣ, ಭರತಾಗಮನದ ಭರತ, ಗದಾಪರ್ವದ ಕೌರವ, ರುಕ್ಮಿಣಿ ಕಲ್ಯಾಣದ ರುಕ್ಮ, ಕೃಷ್ಣ ಜನ್ಮದ ಕಂಸ, ಅರುಣಾಸುರ, ಪರ್ವದ ಭೀಷ್ಮ, ಶ್ರೀರಾಮ, ಶ್ರೀಕೃಷ್ಣ, ಜಾಂಬವ, ದಕ್ಷ, ವಾಲಿ, ಅತಿಕಾಯ, ಹನೂಮಂತ ಹೀಗೆ ಎಲ್ಲಾ ಪಾತ್ರಗಳು, ಶೆಟ್ಟರ ``ಮಾಸ್ಟರ್ ಪೀಸ್``.

ಸದಾ ಹಸನ್ಮುಖೀಯಾಗಿರುವ ಪೆರ್ಮುದೆ ಅವರು ಹಿರಿಯ-ಕಿರಿಯ ಕಲಾವಿದರನ್ನು ಗೌರವದಿಂದ ಕಾಣುವ ಗುಣ ಹೊಂದಿದವರು. ಎಲ್ಲರೊಂದಿಗೆ ಬೆರೆತು, ಎಲ್ಲರಿಂದ ಕಲಿತು, ಎಲ್ಲರನ್ನು ಸಮಾನ ಚಿತ್ತದಿಂದ ಕಂಡು ವ್ಯವಹರಿಸುವವರು.ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಪ್ರಸಂಗಗಳ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಅವರು ಕಥಾ ನಾಯಕ, ಖಳನಾಯಕ ಪಾತ್ರಗಳನ್ನೂ ನಿಭಾಯಿಸುತ್ತಿದ್ದಾರೆ.

ತಾಳಮದ್ದಳೆ ಕೂಟಗಳಲ್ಲ್ಲೂ ಮಿ೦ಚುವ ಶೆಟ್ಟರು

ತಾಳಮದ್ದಳೆ ಕೂಟಗಳಲ್ಲಿ ದಿ.ಚೆನ್ನಪ್ಪ ಶೆಟ್ಟಿ, ಮೂಡಂಬೈಲು, ಡಾ| ಜೋಷಿ, ಸುಣ್ಣಂಬಳ, ಉಜ್ರೆ ಅಶೋಕ್ ಭಟ್, ಶಂಭುಶರ್ಮ, ಜಬ್ಬಾರ್, ಗೋವಿಂದ ಭಟ್, ಕೊಳ್ಯೂರು, ಕಲ್ಚಾರ್, ಹಿರಣ್ಯ, ವಾ. ರಂಗಾ ಭಟ್, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ತಾರನಾಥ ವರ್ಕಾಡಿ ಮುಂತಾದ ಘಟಾನುಘಟಿಗಳೊಂದಿಗೆ ಅರ್ಥ ಹೇಳಿ ಮಿಂಚಿದ್ದಾರೆ.

ಯಕ್ಷಗಾನದಲ್ಲಿ ಶುದ್ಧ ಕನ್ನಡವನ್ನು, ಸಂಸ್ಕೃತ ಶ್ಲೋಕಗಳನ್ನು ಕಲಾಭಿಮಾನಿಗಳ ಮನಮುಟ್ಟುವಂತೆ, ಹೃದಯ ತಟ್ಟುವಂತೆ ವಿಂಗಡಿಸಿ ಹೇಳಲು ವ್ಯಾಕರಣದ ಜ್ಞಾನವನ್ನು ಹೊಂದಬೇಕು. ಇವೆಲ್ಲ ಪರಸ್ಪರ ಚರ್ಚೆಯಿಂದ ಅಥವಾ ಹೇಳಿ-ಕೇಳಿ, ತಿಳಿದು ಬರುವಂಥದ್ದು. ಇದೇ ಮಾತನ್ನು ಅರಿತಿರುವ ಪೆರ್ಮುದೆ ಅವರು ``ಕೆಲವೊಂದನ್ನು ಬಲ್ಲವರಿಂದ ಕಲಿತು, ಕೆಲವೊಂದನ್ನು ತನ್ನ ಪರಿಶ್ರಮದ ಮೂಲಕ ಅರಗಿಸಿಕೊಂಡು`` ಇಂದು ತೆಂಕುತಿಟ್ಟಿನಲ್ಲಿ ಪ್ರಬುದ್ಧ ಕಲಾವಿದರಾಗಿ ಕಂಗೊಳಿಸುತ್ತಿದ್ದಾರೆ. ಪೆರ್ಮುದೆ ಅವರಿಗೆ ಕಲಿಯುವ ತುಡಿತ ಇಂದಿಗೂ ಇದೆ ಎಂಬುವುದು ವರ್ಷದಿಂದ ವರ್ಷಕ್ಕೆ ಅವರು ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವುದು ಸಾಕ್ಷಿಯಾಗಿದೆ. ಸತತ ಪ್ರಯತ್ನ, ಏಕಾಗ್ರತೆ, ಪರಿಶ್ರಮ, ಶ್ರದ್ಧೆ ಇತ್ಯಾದಿಗಳನ್ನೇ ಮೂಲಮಂತ್ರವನ್ನಾಗಿಸಿಕೊಂಡು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಅಪಾರ ಜ್ಞಾನ ಭಂಡಾರ, ಶಬ್ಧ ಭಂಡಾರವನ್ನು ಹೊಂದಿದ್ದಾರೆ. ತಾಳಮದ್ದಳೆ ಅರ್ಥಧಾರಿಯಾಗಿ, ಯಕ್ಷಗಾನ ಘಟಾನುಘಟಿ ಕಲಾವಿದರ ಮುಂದೆ ಮಾತಿನೊಂದಿಗೆ ಹಟ ಬಿಡದ ತ್ರಿವಿಕ್ರಮನಂತೆ ಸೆಣಸಾಡುವ ಪರಿಯಂತು ರೋಮಾಂಚನಗೊಳಿಸುತ್ತದೆ.

ಸರಳ, ಸಜ್ಜನಿಕೆಯ ಯುವಕಲಾವಿದ ಜಯಪ್ರಕಾಶ ಶೆಟ್ಟರ ಪ್ರತಿಭೆ ಗುರುತಿಸಿ ಹಲವಾರು ಕಡೆ ಸಂಮಾನ ನಡೆದಿವೆ. ಶೆಟ್ಟರು ಪ್ರಾಯದಲ್ಲಿ ಕಿರಿಯವರಾದ ಕಾರಣ ಯಕ್ಷರಂಗದಲ್ಲಿ ಇನ್ನೂ ಸಾಧನೆ ಮಾಡಲು ವಿಪುಲ ಅವಕಾಶವಿದೆ. ಯಕ್ಷಗಾನ ದಿಗ್ಗಜ ಸಿದ್ದಕಟ್ಟೆ ದಿ| ಚೆನ್ನಪ್ಪ ಶೆಟ್ಟಿ ಅವರ ತಣ್ತೀ, ಆದರ್ಶಗಳನ್ನು ಪಾಲಿಸಿ, ಅದೇ ದಾರಿಯಲ್ಲಿ ನಡೆಯುತ್ತಿರುವ ಪೆರ್ಮುದೆ ಅವರು ಮುಂದೊಂದು ದಿನ ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವಲ್ಲಿ ಯಶಸ್ವಿಯಾಗಲಿ ಶೆಟ್ಟರಿಂದ ಇನ್ನಷ್ಟು ಸಾಧನೆಗಳು ಮೂಡಿ ಬರಲಿ, ಇನ್ನೂ ಅನೇಕ ಸಂಮಾನಗಳಿಗೆ ಭಾಜನರಾಗಲಿ ಎಂದು ನಾವೆಲ್ಲರೂ ಹಾರೈಸುವ.

****************

ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿಯವರ ಕೆಲವು ವಿಡಿಯೊಗಳು

ಮಾನಿಷಾದದ ಭಾವನಾತ್ಮಕ ಲಕ್ಷ್ಮಣನ ಪಾತ್ರದಲ್ಲಿಗುರು ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರವರೊ೦ದಿಗೆ
ದೇವಿ ಮಹಾತ್ಮೆಯ ವಿದ್ಯುನ್ಮಾಲಿಯಾಗಿ
ಚ೦ದ್ರಾವಳಿ ವಿಲಾಸದ ಚ೦ದಗೋಪನಾಗಿ
ತಾಳಮದ್ದಳೆಯೊ೦ದರಲ್ಲಿ ಅರ್ಥಗಾರಿಕೆ


****************ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿಯವರ ಕೆಲವು ಛಾಯಾ ಚಿತ್ರಗಳು
( ಕೃಪೆ :ಮಧುಸೂಧನ ಅಲೆವೂರಾಯ, ರಾಮ್ ನರೇಶ್ ಮ೦ಚಿ, ಮುರಳಿ ನಾವಡ, ಕಿರಣ್ ವಿಟ್ಲ ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು )


ಧರ್ಮ ಪತ್ನಿಯವರೊ೦ದಿಗೆ
ಸನ್ಮಾನ ಸಮಾರ೦ಭದಲ್ಲಿ
****************ಕೃಪೆ : ಈ ಲೇಖನದ ಮಾಹಿತಿಯನ್ನು ಎಂ. ಶಾಂತರಾಮ ಕುಡ್ವರವರ shantharamakudva.blogspot ಹಾಗೂ ಉದಯವಾಣಿಯಲ್ಲಿ ಪ್ರಕಟಗೊ೦ಡ ದಿನೇಶ್‌ ಶೆಟ್ಟಿ ರೆಂಜಾಳರಿ೦ದ ಲಿಖಿತ ಲೇಖನಗಳಿ೦ದ ಸ೦ಗ್ರಹಿಸಲಾಗಿದೆ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Sukesh Shetty Thevu(6/25/2016)
Congratulations Anna kateeldappe eren nanaath uthorothara yashashu korad pandh kai mugive
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ