ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಉಭಯತಿಟ್ಟು ಯಕ್ಷರಂಗದ ಚಾರ್ಲಿ ಚಾಪ್ಲಿನ್‌ ಸುಪ್ರಸಿದ್ಧ ಹಾಸ್ಯ ಕಲಾವಿದ : ಕಟೀಲು ಸೀತಾರಾಮ ಕುಮಾರ್‌

ಲೇಖಕರು :
ಎಂ. ಶಾಂತಾರಾಮ ಕುಡ್ವ
ಬುಧವಾರ, ಮೇ 18 , 2016

ಯಕ್ಷರಂಗದ ಉಭಯತಿಟ್ಟುಗಳ ಸುಪ್ರಸಿದ್ಧ ಹಾಸ್ಯ ಕಲಾವಿದ ಸೀತಾರಾಮ ಕುಮಾರರಿಗೆ ಇದೀಗ 60ನೇ ಹುಟ್ಟುಹಬ್ಬದ ವರ್ಷ. ಶರೀರ ಪ್ರಕೃತಿ ಯಿಂದಾಗಲೀ, ರಂಗದ ಮೇಲಿನ ದುಡಿಮೆಯನ್ನು ಕಂಡಾಗ ಆಗಲೀ ಸೀತಾರಾಮರ ಪ್ರಾಯ 60 ಅಂದರೆ ನಂಬಲು ಸಾಧ್ಯವಾಗದು. ರಂಗದಲ್ಲಿ ಪಾದರಸದಂತೆ ಚುರುಕಾಗಿ ನಟಿಸುವ ಈ ವಾಮನ ಯಕ್ಷರಂಗದಲ್ಲಿ ತ್ರಿವಿಕ್ರಮನಂತೆ ಬೆಳೆದವರು.

ಯಕ್ಷರಂಗದ ಚಾರ್ಲಿ ಚಾಪ್ಲಿನ್‌ ಎಂಬ ಬಿರುದನ್ನು ಪಡೆದು ಹಾಸ್ಯದಲ್ಲಿ ಸೃಜನಶೀಲ ಸೃಷ್ಟಿಗೆ ಕಾರಣನಾಗಿ ಸದಾ ಹೊಸತನ್ನು ಅನ್ವೇಷಿಸುತ್ತಾ ತನ್ನದೇ ಛಾಪನ್ನು ಮೂಡಿಸಿದ ಸೀತಾರಾಮ ಕುಮಾರರ ಅಭಿಮಾನಿ ಬಳಗ ಅಪಾರ. ವಿಜಯ, ಮಕರಂದ, ಶ್ರೀನಿವಾಸನ ಸಖ, ಪೌಂಡ್ರಕನ ಚಾರ, ಮಾಲಿನಿದೂತ, ರುಕ್ಮಿಣಿಯ ಗುರು, ನಂದಿಶೆಟ್ಟಿ, ಕಾಶಿಮಾಣಿ, ವೃದ್ಧಬ್ರಾಹ್ಮಣ, ಮಂತ್ರವಾದಿ, ರಾಕ್ಷಸ ದೂತ, ಅರಬ್‌ ಕುದುರೆ ವ್ಯಾಪಾರಿ ಮುಂತಾದ ಪಾತ್ರಗಳಲ್ಲಿ ಸೀತಾರಾಮರದು ಹೊಸತನದ ಹಾಸ್ಯ. ಬಣ್ಣಗಾರಿಕೆ, ಸಂಭಾಷಣೆ, ವಾದ ಸಂವಾದಗಳಲ್ಲಿ ತೋರುವ ಪ್ರತ್ಯುತ್ಪನ್ನಮತಿತ್ವ, ಸೃಜನಶೀಲತೆಯ ಶುದ್ಧ ಹಾಸ್ಯ ಸೀತಾರಾಮರನ್ನು ಶ್ರೇಷ್ಠ ಹಾಸ್ಯಗಾರರೆಂದು ಎತ್ತರಕ್ಕೇರಿಸಿದ ಅಂಶಗಳು.

ಬಾಲ್ಯ, ಶಿಕ್ಷಣ ಮತ್ತು ಪಾದಾರ್ಪಣೆ

ಶ್ರೀನಿವಾಸ -ಕಲ್ಯಾಣಿ ದಂಪತಿಯ ಪುತ್ರನಾಗಿ 1955ರ ಅಕ್ಟೋಬರ್‌ 10ರಂದು ಜನಿಸಿದ ಸೀತಾರಾಮರದು ಬಡತನದ ಕುಟುಂಬ. ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ ಹೊಂದಿ ಬಾಲ್ಯದಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ನೋಡಿಯೇ ಕಲಿತರು. ಏಕಲವ್ಯನಂತೆ ಗುರುವಿಲ್ಲದೆ ಯಕ್ಷಗಾನ ಕಲಾವಿದರಾದರು. ಮುಂದೆ ಉದ್ಯೋಗ ಅರಸಿ ಮುಂಬೈಯತ್ತ ಮುಖ ಹೊರಳಿಸಿ ದರು. ಮುಂಬೈಯಲ್ಲಿ ದುಡಿಯುತ್ತ ಸಂಘ ಸಂಸ್ಥೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ಮಾಡತೊಡಗಿದರು.

ಮುಂಬೈಯಲ್ಲಿದ್ದ ಸೀತಾರಾಮರನ್ನು ಯಕ್ಷಗಾನ ಮೇಳಕ್ಕೆ ತಂದದ್ದು ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು. ಶೆಟ್ಟರು ಮುಂಬೈಯಲ್ಲಿ ಸೀತಾರಾಮರ ವೇಷ ನೋಡಿ ಅವರನ್ನು ತಾನು ತಿರುಗಾಟ ನಡೆಸುತ್ತಿದ್ದ ಕದ್ರಿ ಮೇಳಕ್ಕೆ ಸೇರಿಸಿದರು. ಸೀತಾರಾಮರು ಮೂಲತಃ ಪುಂಡು ವೇಷಧಾರಿ. ಕದ್ರಿ ಮೇಳದಲ್ಲಿ ಪುಂಡುವೇಷ ಮಾಡುತ್ತಿದ್ದರು. ಅವರನ್ನು ಹಾಸ್ಯಗಾರರಾಗಲು ಪ್ರೇರೇಪಿಸಿದವರು ವಾಸುದೇವ ಸಾಮಗರು. ಆ ವರ್ಷ ಕದ್ರಿ ಮೇಳದಲ್ಲಿ ``ಮದ್ರೆಂಗಿ ಮದ್ಮಲ್‌ `` ತುಳುಪ್ರಸಂಗ. ವಾಸುದೇವ ಸಾಮಗರ ಉಪ್ಪಣ್ಣ ದೀಕ್ಷಿತರ ಪಾತ್ರ. ಅವರ ಮಗ ಹೆಡ್ಡ ಜನ್ನಮಾಣಿ ಹಾಸ್ಯ ಪಾತ್ರವನ್ನು ಹಲವು ಮಂದಿ ಕಲಾಧಿವಿಧಿದಧಿರಿಂದ ಮಾಡಿಧಿಸಿಧಿದರೂ ನಿರೀಕ್ಷೆಯ ಮಟ್ಟಕ್ಕೆ ಬರಲಿಲ್ಲ. ಕೊನೆಗೆ ಸಾಮಗರು "ಸೀತಾರಾಮರಿಂದಲೇ ಮಾಡಿಸುವಾ' ಅಂದರು. ಸೀತಾರಾಮರ ಹೆಡ್ಡನ ಸಹಜ ಅಭಿನಯ, ಮಾತುಗಾರಿಕೆಯಿಂದ ಜನ್ನಮಾಣಿ ಯಶಸ್ವಿಯಾಯಿತು. ಮುಂದಿನ ವರ್ಷ ``ಗೆಜ್ಜೆದ ಪೂಜೆ`` ತುಳು ಪ್ರಸಂಗ. ಅದರಲ್ಲಿ ಬರುವ ಕುಡುಕ ಕಾಳು ಪಾತ್ರದಲ್ಲಿ ಸೀತಾರಾಮರ ಹಾಸ್ಯ ಪ್ರಜ್ಞೆ ಪ್ರಕಟಗೊಂಡಿತು. ಅನಂತರ ಹಾಸ್ಯ ಪಾತ್ರಗಳಲ್ಲೇ ಮಿಂಚಿ, ಇದೀಗ ಪ್ರಧಾನ ಹಾಸ್ಯಗಾರರಾಗಿದ್ದಾರೆ. ಸೀತಾರಾಮ್‌ ಅವರು ಬಡಗು ತಿಟ್ಟನ್ನು ಸೇರುವುದಕ್ಕೂ ಚೆನ್ನಪ್ಪ ಶೆಟ್ಟರೇ ಕಾರಣರು. ಶೆಟ್ಟರು ತಿರುಗಾಟ ನಡೆಸುತ್ತಿದ್ದ ಪೆರ್ಡೂರು ಮೇಳದಲ್ಲೇ ಅವರು ಬಡಗುತಿಟ್ಟಿನ ಮೊದಲ ತಿರುಗಾಟ ನಡೆಸಿದರು.

ಕಟೀಲು ಸೀತಾರಾಮ ಕುಮಾರ್‌
ಜನನ : ಅಕ್ಟೋಬರ್‌ 10, 1955
ಜನನ ಸ್ಥಳ : ಕಟೀಲು, ಮ೦ಗಳೂರು
ಕರ್ನಾಟಕ ರಾಜ್ಯ

ಕಲಾಸೇವೆ:
ಯಕ್ಷರಂಗದ ಚಾರ್ಲಿ ಚಾಪ್ಲಿನ್‌ ಎಂಬ ಬಿರುದನ್ನು ಪಡೆದ, ಸೃಜನಶೀಲತೆಯ ಶುದ್ಧ ಹಾಸ್ಯದ ಶ್ರೇಷ್ಠ ಹಾಸ್ಯಗಾರರಾಗಿ ಕದ್ರಿ, ಪೆರ್ಡೂರು, ಹೊಸನಗರ ಮೇಳಗಳಲ್ಲಿ ನಿರಂತರ 45 ವರ್ಷಗಳ ಕಾಲ ಸೇವೆ

ದಿಗ್ಗಜರ ಒಡನಾಟ

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರನ್ನು ಸೀತಾರಾಮರು ಗುರುಭಾವದಿಂದ ಕಾಣುತ್ತಿದ್ದರು. ``ನನ್ನ ಸಾಹಿತ್ಯವನ್ನು ತಿದ್ದಿ ತೀಡಿ ಸಮಪಾಕಗೊಳಿಸಿದವರು ಚೆನ್ನಪ್ಪ ಶೆಟ್ಟರೇ`` ಎಂದು ಅಭಿಮಾನದಿಂದ ನುಡಿಯುವ ಸೀತಾರಾಮರಿಗೆ ಶೆಟ್ಟರನ್ನು ಕಳಕೊಂಡ ನೋವನ್ನು ಇಂದಿಗೂ ಮರೆಯಲಾಗುತ್ತಿಲ್ಲ. ಹಿರಿಯ -ಕಿರಿಯ ಕಲಾವಿದರೊಂದಿಗೆ ಸ್ನೇಹಿಯಾಗಿಯೇ ವರ್ತಿಸುವ ಸೀತಾರಾಮರು, ತಾವೇ ಕಷ್ಟದಲ್ಲಿ ಇದ್ದರೂ ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ ಎಷ್ಟೋ ಉದಾಹರಣೆಗಳಿವೆ. ರಂಗ ಪ್ರವೇಶಿಸುವ ಮೊದಲು ವಿಟ್ಲ ಜೋಷಿ, ಪೆರುವೊಡಿ, ಮಿಜಾರು ಅಣ್ಣಪ್ಪ ಹಾಗೂ ಬೆಟ್ಟಂಪಾಡಿ ಹಾಸ್ಯಗಾರರನ್ನು ಮನಸ್ಸಿನಲ್ಲೇ ಸ್ಮರಿಸುವ ಸೀತಾರಾಮರು ಯಾವುದೇ ಹಾಸ್ಯಗಾರರನ್ನು ಅನುಕರಿಸದೆ, ತಮ್ಮ ಸ್ವಂತಿಕೆಯನ್ನು ಅಳವಡಿಸಿದವರು.

ಉತ್ತಮ ಸಾಹಿತ್ಯ ವನ್ನು ಅಭ್ಯಸಿಸಿ ತನ್ನ ಪಾತ್ರಗಳಿಗೆ ಅಳವಡಿಸುವಲ್ಲಿ ಸೀತಾರಾಮರು ಸಿದ್ಧಹಸ್ತರು. ನಿರರ್ಗಳವಾಗಿ ಶ್ಲೋಕ , ವರ್ಣನೆ, ಹೊಗಳಿಕೆಗಳಲ್ಲಿ ಸೀತಾರಾಮರ ವಿದ್ವತ್ತನ್ನು ಗಮನಿಸಬಹುದು. ಬಡಗಿನಲ್ಲಿ ಹಲವಾರು ವರ್ಷಗಳ ತಿರುಗಾಟ ನಡೆಸಿದ ಸೀತಾರಾಮರು ಇದೀಗ ಸುಮಾರು 8 ವರ್ಷಗಳಿಂದ ತೆಂಕಿನ ಹೊಸನಗರ ಮೇಳದ ಪ್ರಧಾನ ಹಾಸ್ಯಗಾರರಬ್ಬರಾಗಿದ್ದಾರೆ. ಇತರ ಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ತಮ್ಮ ಪಾತ್ರಗಳ ಬಗ್ಗೆ ಉದಾಸೀನ, ಆಲಸ್ಯ ತೋರದೆ ಸಂಪೂರ್ಣ ಪೂರ್ವಸಿದ್ಧತೆಯಿಂದ ರಂಗದಲ್ಲಿ ಕಾಣಿಸಿಕೊಳ್ಳುವ ಸೀತಾರಾಮ ಕುಮಾರ್‌ ಈ ಕಾರಣಗಳಿಂದ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಾರೆ. 45 ವರ್ಷಗಳಿಂದ ಯಕ್ಷರಂಗದ ತಿರುಗಾಟದಲ್ಲಿರುವ ಸೀತಾರಾಮರು ತಾಳಮದ್ದಳೆ ಹಾಗೂ ಶನಿಪೂಜೆಯ ಕೂಟಗಳಲ್ಲೂ ಬೇಡಿಕೆಯ ಕಲಾವಿದರಾಗಿದ್ದಾರೆ .

ದಿನಾಂಕ 30-4-2016 ಹಾಗೂ 1-5-2016ರಂದು ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ, ಹೊಸನಗರ ಮೇಳದ ಮಹಾಪೋಷಕರಾದ ಶಾಮ್‌ ಭಟ್‌ ಅವರ ಶುಭಾಶೀರ್ವಾದದೊಂದಿಗೆ ಹಾಸ್ಯ ಕಲಾವಿದ ಸೀತಾರಾಮ ಕುಮಾರ್‌ ಅವರು ತಮ್ಮ 60ನೇ ವರ್ಷದ ಸಂಭ್ರಮವನ್ನು ವಿಶಿಷ್ಟ ಕಾರ್ಯಕ್ರಮದ ಮೂಲಕ ಆಚರಿಸಿದರು. ತಮ್ಮ 60 ವರ್ಷಗಳ ಜೀವನದಲ್ಲಿ ತನ್ನ ಉನ್ನತಿಗೆ ಕಾರಣರಾದ, ಕಷ್ಟಧಿಕಾಧಿಲಧಿದಲ್ಲಿ ನೆರಧಿವಾದ 60 ಮಹನೀಯರನ್ನು ಗುರುತಿಸಿ ಗಣ್ಯರ ಸಮಕ್ಷದಲ್ಲಿ ಸಮ್ಮಾನ, ಗೌರವಾರ್ಪಣೆ ಹಾಗೂ ಅಭಿನಂದಿಸಿದ ಕಾರ್ಯಕ್ರಮ ಇವರ ಉದಾರತೆಗೊ೦ದು ಸಾಕ್ಷಿ.

****************

ಕಟೀಲು ಸೀತಾರಾಮ ಕುಮಾರ್‌ ರವರ ಕೆಲವು ದೃಶ್ಯಾವಳಿಗಳು

****************

ಕಟೀಲು ಸೀತಾರಾಮ ಕುಮಾರ್‌ ರವರ ಕೆಲವು ಭಾವಚಿತ್ರಗಳು( ಕೃಪೆ : ಪ್ರವೀಣ್ ಪೆರ್ಡೂರು, ಅನಿಲ್ ಕರ್ಕೇರ, ಧೀರು, ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು )
ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಶ್ರೀರಾಮ ಡೋಂಗ್ರೆ(5/19/2016)
ಶ್ರೀ ಸೀತಾರಾಮ ಕುಮಾರ್ ಅವರ ಪ್ರತಿಭೆ - ಸಿದ್ಧಿಯನ್ನು ಇಲ್ಲಿನ ವರ್ಣಚಿತ್ರಗಳಲ್ಲಿ ಅವರ ಮುಖಭಾವದಲ್ಲೇ ಕಾಣಬಹುದಾಗಿದೆ. ಸರ್ವಜನರಂಜಕವಾದ ಹಾಸ್ಯವನ್ನು ಪ್ರಸ್ತುತಪಡಿಸುವುದು ಪ್ರತಿಭಾಸಂಪನ್ನರಿಗೆ ಮಾತ್ರ ಸಾಧ್ಯ. ನಿತ್ಯನೂತನ ಹಾಸ್ಯವನ್ನು ಉಣಬಡಿಸುತ್ತಿರುವ ಶ್ರೀಯುತರಿಗೆ ಅಭಿನಂದನೆಗಳು.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ