ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ನೇಪಥ್ಯಕ್ಕೆ ಸರಿದ ತೆಂಕು ಬಡಗಿನ ಸವ್ಯಸಾಚಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಮೇ 6 , 2016

ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ತೀವ್ರವಾದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಸದ್ಯ ಚೇತರಿಸಿಕೊಳ್ಳುತ್ತಾ ಯಕ್ಷಗಾನದಿಂದ ನೇಪಥ್ಯಕ್ಕೆ ಸರಿದಿದ್ದಾರೆ.

ತೆ೦ಕು ಬಡಗಿನಲ್ಲಿ ಬಹು ಬೇಡಿಕೆಯ ವೇಷಧಾರಿ

ತೆಂಕು ಮತ್ತು ಬಡಗುತಿಟ್ಟಿನ ಮೇರು ಕಲಾವಿದರ ಸಾಲಿನಲ್ಲಿ ಕೇಳಿ ಬರುವ ಹೆಸರು ಸಿದ್ದಕಟ್ಟೆ ವಿಶ್ವನಾಥ ಶೆಟ್ಟರದ್ದು. ತಾಳ ಮದ್ದಳೆ ಅರ್ಥಧಾರಿಯಾಗಿ ಕನ್ನಡ ಮತ್ತು ತುಳುವಿನ ಶ್ರೇಷ್ಟ ಮಟ್ಟದ ಪ್ರಸಂಗಕರ್ತರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ ಇವರು ಸಿದ್ಧಿ ಮತ್ತು ಪ್ರಸಿದ್ಧಿಯ ನೆಲೆಯಲ್ಲಿ ಗುರುತಿಸಲ್ಪಟ್ಟವರು. ಬಡಗುತಿಟ್ಟಿನ ಸಾಲಿಗ್ರಾಮ ಮೇಳದಲ್ಲಿ ಪರಂಪರೆಯ ಪುರುಷ ವೇಷಧಾರಿಗಳು ನಿರ್ವಹಿಸುವ ಭೀಷ್ಮವಿಜಯದ ಪರಶುರಾಮ, ಬ್ರಹ್ಮ ಕಪಾಲದ ಮಹೋಗ್ರ, ಹರಿಶ್ಚಂದ್ರದ ವಸಿಷ್ಟ, ಸೀತಾ ಕಲ್ಯಾಣದ ವಿಶ್ವಾಮಿತ್ರ, ಪಂಚವಟಿಯ ರಾಮ, ಗಧಾಯುದ್ಧದ ಸಂಜಯ, ಕಂಸವಧೆಯ ಅಕ್ರೂರ, ಮುಂತಾದ ಸೌಮ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ತೆಂಕಿನಲ್ಲೂ ಅವರ ಜಾಂಬವ, ಪೆರುಮಳ ಬಲ್ಲಾಳ, ಚಂದುಗಿಡಿ, ದೇವಪೂಂಜ ಮುಂತಾದ ಪಾತ್ರಗಳೂ ಸಹ ಅಷ್ಟೇ ಪ್ರಸಿದ್ಧ. ತಾಳ ಮದ್ದಳೆಯಲ್ಲೂ ಮೇರು ಕಲಾವಿದರ ಪಟ್ಟಿಯಲ್ಲಿ ಕಾಣ ಸಿಗುವ ಶೆಟ್ಟರು ಎದುರಾಳಿಗೆ ಯಾವತ್ತೂ ತೊಂದರೆ ಕೊಡದೆ ವಾದವನ್ನು ಸಮರ್ಪಕವಾಗಿ ಮಂಡಿಸಿ ಸಭ್ಯ ಕಲಾವಿದರೆಂದು ಗುರುತಿಸಲ್ಪಟ್ಟಿದ್ದಾರೆ. ಸೌಮ್ಯವಾದ ಸ್ವರ, ವ್ಯಾಕರಣಬದ್ಧ ಶೈಲೀಕೃತ ಮಾತುಗಾರಿಕೆ, ಸ್ಫುಟವಾದ ಮಾತು ಇವರ ಹೆಚ್ಚುಗಾರಿಕೆ. ಹಾಗಾಗಿ ಸೌಮ್ಯ ಪಾತ್ರಗಳಾದ ಪರ್ವದ ಭೀಷ್ಮ, ಸಂಧಾನದ ಕೃಷ್ಣ, ವಿದುರ, ವಾಲಿವಧೆಯ ಸುಗ್ರೀವ, ರಾಮ, ಪಟ್ಟಾಭಿಷೇಕದ ರಾಮ, ಭರತ, ವಿಭೀಷಣ, ಶಲ್ಯ ಮುಂತಾದ ಪಾತ್ರಗಳಲ್ಲಿ ತಾಳ ಮದ್ದಳೆಯ ಕ್ಷೇತ್ರದಲ್ಲಿ ಜನ ಇವರನ್ನು ಬಯಸುತ್ತಾರೆ.

ಪದವಿಪೂರ್ವ ಶಿಕ್ಷಣ ಪಡೆದ ಸುಶಿಕ್ಷಿತ ಕಲಾವಿದ

ಬ೦ಟ್ವಾಳ ತಾಲೂಕು ಅಜ್ಜಿಬೆಟ್ಟು ಎಂಬಲ್ಲಿ ಕೊರಗ ಶೆಟ್ಟಿ ಮತ್ತು ರೇವತಿಯವರ ಪುತ್ರನಾಗಿ 1945ರಲ್ಲಿ ಜನಿಸಿದ ಶೆಟ್ಟರದ್ದು ಯಕ್ಷಗಾನವು ವಂಶೀಯ ಹಿನ್ನಲೆಯಿಂದ ಬಂದಿದ್ದಲ್ಲ. ಪರಿಸರ, ಮತ್ತು ಪರಿಶ್ರಮದಿಂದ ಅರ್ಥಗಾರಿಕೆ ಕಲಿತು ಸ್ವಪ್ರಯತ್ನದಿಂದ ಸುದೀರ್ಘಕಾಲ ಯಕ್ಷರಂಗದಲ್ಲಿ ತೊಡಗಿಸಿಕೊಂಡು ಹೊಸ ವೈಭವವನ್ನು ಸೃಷ್ಟಿಸಿದವರು.

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ಜನನ : 1945
ಜನನ ಸ್ಥಳ : ಅಜ್ಜಿಬೆಟ್ಟು, ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಪ್ರಸಿದ್ಧ ಪ್ರಸ೦ಗಕರ್ತ, ತಾಳಮದ್ದಳೆಯ ಬೇಡಿಕೆಯ ವಾಗ್ಮಿಯಾಗಿ, ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿ ಕಲಾಸೇವೆಗೈದ ಶ್ರೇಷ್ಠ ಕಲಾವಿದ.
ಮರಣ ದಿನಾ೦ಕ : ಜುಲೈ 1 , 2016
ಪದವಿಪೂರ್ವ ಶಿಕ್ಷಣ ಪಡೆದು ಸುಶಿಕ್ಷಿತ ಕಲಾವಿದನೆಂಬ ಹಣೆಪಟ್ಟಿಯೊಂದಿಗೆ ಕಟೀಲು ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಬಳಿಕ ಕದ್ರಿ, ಕರ್ನಾಟಕ, ಮಂಗಳಾದೇವಿ ಸಾಲಿಗ್ರಾಮ, ಸದ್ಯ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತಿದ್ದರು. ದಾಮೋದರ ಮಂಡೆಚ್ಚರು, ಬಲಿಪರು, ಅರುವ ಕೊರಗಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಡಿಯಾಗಿ ತೆಂಕುತಿಟ್ಟನ್ನು ಪೂರ್ಣ ಮಟ್ಟದಲ್ಲಿ ಅರೆಗಿಸಿಕೊಂಡರು.

ಶೆಟ್ಟರು ಬಡಗುತಿಟ್ಟಿನಲ್ಲಿ ಶ್ರೇಷ್ಟ ಮಟ್ಟದ ನೃತ್ಯಪಟುವಾಗಿ ಗುರುತಿಸಲ್ಪಡದಿದ್ದರೂ, ಹೊಸಪ್ರಸಂಗದಲ್ಲಿ ಅವರ ಸಿದ್ದಿಗೆ ಸರಿಯಾದ ಪಾತ್ರ ದೊರೆಯದಿದ್ದರೂ, ದೊರೆತ ಚಿಕ್ಕಪಾತ್ರವಾದರೂ ಅವರ ಮಾತಿನ ಮೋಡಿಯಿಂದ ಆ ಪಾತ್ರ ರಂಗವನ್ನು ತುಂಬುತಿತ್ತು. ನಾಗಶ್ರೀ ಪ್ರಸಂಗದ ಶುಭ್ರಾಂಗ, ಶ್ವೇತದತ್ತ, ರಂಗನಾಯಕಿ, ಧರ್ಮ ಸಂಕ್ರಾಂತಿ, ಈಶ್ವರಿ ಪರಮೇಶ್ವರಿ, ಅಗ್ನಿ ನಕ್ಷತ್ರ, ಸೂರ್ಯವಂಶಿ ಮುಂತಾದ ಪ್ರಸಂಗಗಳ ಅವರ ಪಾತ್ರಗಳು ಅಪಾರ ಜನ ಮನ್ನಣೆ ಪಡೆದವು.

ಖ್ಯಾತಿವೆತ್ತ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ

ಸಾಲಿಗ್ರಾಮ ಮೇಳದಲ್ಲಿ ಬಡಾಬಡಗಿನ ಮೇರು ಕಲಾವಿದರ ನೃತ್ಯ ವಿಶಿಷ್ಟತೆಯ ಮಧ್ಯವೂ ಇವರು ತಮ್ಮ ಮಾತಿನ ಮೋಡಿಯಿಂದ ಜನಾಕರ್ಷಣೆ ಪಡೆದರು. ಕಥೆಯ ಉಪಸಂಹಾರ ಭಾಗದಲ್ಲಿ ಅವರ ಉಪಸ್ಥಿತಿ ಅನಿವಾರ್ಯವಾಗುತಿತ್ತು. ದೀರ್ಘಕಾಲ ಅಲ್ಲಿ ಶಿರಿಯಾರ ಮಂಜು ನಾಯ್ಕರ ಜಾಗವನ್ನು ಅವರು ಚೌಕಿಯಲ್ಲೂ, ರಂಗದಲ್ಲೂ ಸಮರ್ಪಕವಾಗಿ ತುಂಬಿದ್ದರು. ಯುವ ಕಲಾವಿದರಿಗೆ ಗುರುವಾಗಿ ಅವರು ಸಹಕರಿಸಿದ್ದರು. ಅಲ್ಲಿ ಅವರೇ ರಚಿಸಿ ನಿರ್ದೇಶಿಸಿದ್ದ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ ಅವರಿಗೆ ಅಪಾರ ಕೀರ್ತಿಯನ್ನು ತಂದಿತ್ತಿದೆ. ನಾರಾಯಣ ಶಬರಾಯರ ಭಾಗವತಿಕೆಯಲ್ಲಿ ಯಾಜಿ, ಕೊಂಡದಕುಳಿ, ರಾಜೀವ ಶೆಟ್ಟಿ, ಹಳ್ಳಾಡಿ ಮುಂತಾದವರ ಕೂಡುವಿಕೆಯಲ್ಲಿ ಶ್ರೀ ಕೃಷ್ಣನ ನೋವು ನಲಿವಿನ ಚಿತ್ರಣವನ್ನು ಅವರು ಸೃಷ್ಟಿಸಿದ ರೀತಿ ಹೃದಯಸ್ಪರ್ಶಿಯಾಗಿತ್ತು. ಬಡಗುತಿಟ್ಟಿನ ರಂಗಕ್ಕೆ ಅನಿವಾರ್ಯವಾದ ನೃತ್ಯ ವಿಭಾಗವೊಂದನ್ನುಳಿದು ಬೇರೆಲ್ಲೂ ಅವರು ಸೋಲುವುದಿಲ್ಲ ಆದರೆ ಅದನ್ನು ತೆಂಕುತಿಟ್ಟಿನಲ್ಲಿ ಸಮರ್ಪಕವಾಗಿ ತುಂಬಿದ್ದಾರೆ ಎನ್ನುವುದು ಗಮನಾರ್ಹ.

ಯಶಸ್ವಿ ತುಳು, ಪೌರಾಣಿಕ ಹಾಗೂ ಕ್ಷೇತ್ರ ಪ್ರಸಂಗ ರಚನೆ

ತಾಳಮದ್ದಳೆಯಷ್ಟೇ ಶೆಟ್ಟರ ಇನ್ನೊ0ದು ಯಶಸ್ವಿ ಕ್ಷೇತ್ರ ಪ್ರಸಂಗ ರಚನೆ. ತುಳು ಹಾಗೂ ಪೌರಾಣಿಕ ಪ್ರಸಂಗ ರಚಿಸಿದ ಅವರ ಕನ್ನಡ ಪೌರಾಣಿಕ ಪ್ರಸಂಗ ಯಕ್ಷಗಾನ ರಂಗಭೂಮಿಯಲ್ಲಿ ಗಟ್ಟಿಯಾಗಿ ನಿಂತಿವೆ. ಇಂದಿಗೂ ಎಂದಿಗೂ ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿದೆ. ಶ್ರೀ ರಾಮ ಸೇತು, ವರ್ಣವೈಷಮ್ಯ, ವಿಷಮ ಸಮರಂಗ, ಕನ್ಯಾಂತರಂಗ, ಜ್ವಾಲಾ ಜಾಹ್ನವಿ, ಶಶಿವಂಶವಲ್ಲರಿ, ಚಾಣಕ್ಯತಂತ್ರ ಮುಂತಾದ ಪ್ರಸಂಗಗಳು ವಿವಿಧ ಮೇಳಗಳಲ್ಲಿ‌ ಇಂದಿಗೂ ಪ್ರದರ್ಶಿತಗೊಳ್ಳುತ್ತಿವೆ. ಬೆಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆ ಮುಂತಾದ ತುಳು ಪ್ರಸಂಗಗಳು ಸಹ ಜನಪ್ರೀಯವಾಗಿವೆ. ಇತರ ಪ್ರಸಂಗಕರ್ತರ ಸಾಹಿತ್ಯಕ್ಕೆ ಅನೇಕ ಪ್ರಸಂಗಗಳಿಗೆ ಪದ್ಯಬರೆದು ಕೊಡುವುದರಲ್ಲೂ ಅವರು ಸಹಕರಿಸಿದ್ದಾರೆ.

ಶೆಟ್ಟರ ಸಾದನೆಗೆ ಕರ್ನಾಟಕ ಮುಂಬೈಗಳಲ್ಲಿ ಹಲವಾರು ಸನ್ಮಾನಗಳು ಸಂದಿವೆ. ಪ್ರಸಂಗಕರ್ತರಿಗೆ ನೀಡಲ್ಪಡುವ ಸೀತಾನದಿ ಪ್ರಶಸ್ತಿ ಸಹ ಅವರಿಗೆ ಸಂದಿದೆ. ತುಳು ಕನ್ನಡ ಬಾಷೆಗೆ ಸುದೀರ್ಘ ಸೇವೆ ಸಲ್ಲಿಸಿದ ಇವರ ತಮ್ಮ ಸಿದ್ದಕಟ್ಟೆ ಸದಾಶಿವ ಶೆಟ್ಟರು ತೆಂಕುತಿಟ್ಟಿನ ಪ್ರಸಿದ್ದ ಸ್ತ್ರೀವೇಷಧಾರಿಯಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ತೀವ್ರ ಆಘಾತಕ್ಕೊಳಗಾದ ಅವರು ಶೀಘ್ರ ಚೇತರಿಸಿ ಕೊಳ್ಳಲಿ ಎಂಬುದೇ ಕಲಾಭಿಮಾನಿಗಳ ಹಾರೈಕೆ.

****************

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿರವರ ಕೆಲವು ವಿಡಿಯೊಗಳು


****************ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿರವರ ಕೆಲವು ಛಾಯಾ ಚಿತ್ರಗಳು ( ಕೃಪೆ : ರಾಮ್ ನರೇಶ್ ಮ೦ಚಿ, ಕಟೀಲು ಸಿತ್ಲ ರ೦ಗನಾಥ ರಾವ್ ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು )

****************
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ