ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಹಾಸ್ಯಗಾರರ ಅಗ್ರಜ ಮಿಜಾರು ಅಣ್ಣಪ್ಪ

ಲೇಖಕರು :
ಎಂ. ಶಾಂತಾರಾಮ ಕುಡ್ವ
ಶನಿವಾರ, ಏಪ್ರಿಲ್ 16 , 2016

ಮಂಗಳೂರು ತಾಲೂಕಿನ ಪುಟ್ಟ ಗ್ರಾಮವಾದ ಮಿಜಾರು ಇಂದು ವಿಶ್ವವ್ಯಾಪಿ ಹೆಸರು ಗಳಿಸಿದ್ದುದಾದರೆ, ಅದು ಯಕ್ಷರಂಗದ ಸುಪ್ರಸಿದ್ಧ ಹಾಸ್ಯ ಕಲಾವಿದ ಅಣ್ಣಪ್ಪ ಹಾಸ್ಯಗಾರರಿಂದಾಗಿ ಎಂದರೆ ಅತಿಶಯೋಕ್ತಿಯಲ್ಲ. ಮಿಜಾರು ಅಣ್ಣಪ್ಪ ಯಕ್ಷರಂಗದ ಅನಘ ರತ್ನ. ತಮ್ಮ ಹಾಸ್ಯ ಚಟಾಕಿಗಳಿಂದ, ಚುಟುಕು ಗಾದೆಗಳನ್ನು ಸಂದಭೋಚಿತವಾಗಿ ಉಲ್ಲೇಖೀಸಿ ಹಾಸ್ಯ ಸುರಿಸುವ ಶೈಲಿಯಿಂದ, ಶುದ್ಧ ತುಳುವಿನಲ್ಲಿ ನುಡಿಕಟ್ಟುಗಳನ್ನು, ಸಂಭಾಷಣೆಗಳನ್ನು ತನ್ನದೇ ಶೈಲಿಯಲ್ಲಿ ಪ್ರಸ್ತುತ ಪಡಿಸುವ ವಿಧಾನದಿಂದ ಅವರು ಹಲವು ತಲೆಮಾರುಗಳ ಯಕ್ಷಪ್ರಿಯರ ಹೃದಯ ಸಿಂಹಾಸನದಲ್ಲಿ ಆಸೀನರಾಗಿದ್ದಾರೆ.

1924ರಲ್ಲಿ ಕುಡುಬಿ ಜನಾಂಗದ ಕೊರಗ -ಪಾರ್ವತಿ ದಂಪತಿಯ ಸುಪುತ್ರರಾಗಿ ಮಿಜಾರಿನ ಕಂಡೇಲಿನಲ್ಲಿ ಜನಿಸಿದ ಅಣ್ಣಪ್ಪರು ಯಕ್ಷಗಾನೀಯ ಹಿನ್ನೆಲೆ ಇಲ್ಲದ, ಕೃಷಿಕ ಕುಟುಂಬದವರು. ಪ್ರಾಥಮಿಕ ಶಿಕ್ಷಣ ಮುಗಿಸುವಷ್ಟರಲ್ಲೇ ತಾಯಿಯನ್ನು ಕಳಕೊಂಡ ಕಾರಣ ಶಾಲಾ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು ಮನೆಯಲ್ಲಿ ಅಡುಗೆ ಮಾಡಬೇಕಾದ ಅನಿವಾರ್ಯತೆ ಒದಗಿತು. ಮಿಜಾರಿನಲ್ಲಿ ಆ ಕಾಲದಲ್ಲಿ ಯಕ್ಷಗಾನ ಸಂಘ ಒಂದಿತ್ತು. ಅದರ ಸದಸ್ಯರಾಗಿ ಸೇರಿದ ಅಣ್ಣಪ್ಪರಿಗೆ, ಮೂಡಬಿದಿರೆ ಸಣ್ಣಪ್ಪ ಎಂಬ ಕಲಾವಿದರ ಸಂಪರ್ಕವಾಗಿ ಅವರÇÉೇ ಯಕ್ಷಗಾನದ ಪ್ರಾರಂಭಿಕ ಹೆಜ್ಜೆಗಳನ್ನು ಅಭ್ಯಸಿಸಿದರು. ತಮ್ಮ 18ರ ಪ್ರಾಯದಲ್ಲಿ ಜೀವನೋಪಾಯಕ್ಕಾಗಿ ಕೂಡ್ಲು ಮೇಳ ಸೇರಿದರು. ಕಟೀಲು, ಕುಂಡಾವು ಮೇಳಗಳಲ್ಲಿ ಎರಡು ವರ್ಷ ತಿರುಗಾಟ ನಡೆಸಿ, ಮುಂದೆ ಕೀರ್ತಿಶೇಷ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕರ್ಣಾಟಕ ಮೇಳ ಸೇರಿದರು. ಪ್ರಾರಂಭದಲ್ಲಿ ಹಿರಣ್ಯಾಕ್ಷ, ರಾವಣ ಮುಂತಾದ ಬಣ್ಣದ ಪಾತ್ರ ಮಾಡುತ್ತಿದ್ದ ಅಣ್ಣಪ್ಪರು ಹಾಸ್ಯಗಾರರಾದುದು ಅನಿರೀಕ್ಷಿತವಾಗಿ. ಅವರ ಒಳಗಿರುವ ಹಾಸ್ಯದ ಪ್ರತಿಭೆಯನ್ನು ಗುರುತಿಸಿದ ಕೊರಗ ಶೆಟ್ಟರು ಒಂದು ದಿನ ಅಣ್ಣಪ್ಪರಲ್ಲಿ "ನಾಳೆಯಿಂದ ನೀನು ಹಾಸ್ಯ ಪಾತ್ರ ಮಾಡು' ಎಂದರಂತೆ. ಅಣ್ಣಪ್ಪರಿಗೆ ಹೆದರಿಕೆ ಹುಟ್ಟಿತು, ಎಂದೂ ಮಾಡದ ಹಾಸ್ಯ ಪಾತ್ರವನ್ನು ಹೇಗೆ ನಿರ್ವಹಿಸುವುದು? ಕೊನೆಗೆ ಧೈರ್ಯದಿಂದಲೇ ಹಾಸ್ಯ ಮಾಡಿ ಜನರ ಮೆಚ್ಚುಗೆ ಗಳಿಸಿದರು.

ಆ ಬಳಿಕ ಅಣ್ಣಪ್ಪರು ಹಿಂದೆ ನೋಡಿದ್ದೇ ಇಲ್ಲ. ಹಾಸ್ಯಪಾತ್ರಗಳಲ್ಲಿ ಹೊಸತನವನ್ನು ಅನ್ವೇಷಿಸಿದರು. ಹಾಸ್ಯಕ್ಕೊಂದು ಹೊಸ ಭಾಷ್ಯ ಬರೆದರು. ಅಶ್ಲೀಲದ ಛಾಯೆಯಿಲ್ಲದ, ದ್ವಂದ್ವಾರ್ಥವಿಲ್ಲದ ಶುದ್ಧ ಹಾಸ್ಯದ ಮೂಲಕ ಜನಮಾನಸದಲ್ಲಿ ಪ್ರತಿಷ್ಠಾಪನೆಗೊಂಡರು. ಹೀಗೆ ಕೊರಗ ಶೆಟ್ಟರ ದೂರದರ್ಶಿತ್ವದಿಂದಾಗಿ ಯಕ್ಷಗಾನಕ್ಕೊಬ್ಬ ಹಾಸ್ಯಗಾರರು ದೊರಕಿ, ಹಾಸ್ಯ ಚಕ್ರವರ್ತಿ, ತುಳುನಾಡ ತೆನಾಲಿ ಎಂಬ ನೆಗಳೆ¤ಗೆ ಪಾತ್ರರಾದುದು ಇದೀಗ ಇತಿಹಾಸ.

ತುಳು ಪ್ರಸಂಗಗಳು ಯಕ್ಷರಂಗಕ್ಕೆ ಬರಲಾರಂಭಿಸಿದಾಗ ಅವುಗಳ ಹಾಸ್ಯಪಾತ್ರಗಳು ಅಣ್ಣಪ್ಪರಲ್ಲಿ ಹುದುಗಿದ್ದ ಅದ್ಭುತ ಹಾಸ್ಯಗುಣ, ಪ್ರತ್ಯುತ್ಪನ್ನಮತಿತ್ವಕ್ಕೆ ಒರೆಗಲ್ಲಾಗಿ ಪರಿಣಮಿಸಿದವು. ಯಾವುದೇ ಹಿನ್ನೆಲೆ ಇಲ್ಲದ ತುಳು ಹಾಸ್ಯಪಾತ್ರಗಳನ್ನು ರಂಗದಲ್ಲಿ ಕಟೆದು ನಿಲ್ಲಿಸುವುದು ಸುಲಭವಲ್ಲ. ಆದರೆ, ಅಣ್ಣಪ್ಪರು ತಮ್ಮ ಕಲ್ಪನೆ, ಸ್ವಂತಿಕೆ, ತುಳು ಸಂಸ್ಕೃತಿಯ ಸೊಗಡು, ಶುದ್ಧ ತುಳು ಭಾಷೆಯ ಮೂಲಕ ಆ ಹಾಸ್ಯಪಾತ್ರಗಳನ್ನು ಅನನ್ಯವಾಗಿ ರೂಪಿಸಿಕೊಟ್ಟರು. ಕೋಟಿಚೆನ್ನಯದ ಪಯ್ಯಬೈದ್ಯ, ಜೋತಿಷಿ, ದೇವುಪೂಂಜದ ಲಿಂಗಪ್ಪ ಆಚಾರಿ, ಕೋರ್ದಬ್ಬು ಬಾರಗದ ಬಬ್ಬುವಿನ ಸಖ ಮುಂತಾದ ಪಾತ್ರಗಳ ಪ್ರಥಮ ಚಿತ್ರಣ ಕೊಟ್ಟವರೇ ಮಿಜಾರು ಅಣ್ಣಪ್ಪರು. ತುಳು ಚಾರಿತ್ರಿಕ, ಐತಿಹ್ಯ, ಜಾನಪದ ಮೂಲದ ಸನ್ನಿವೇಶಗಳನ್ನು ರಂಗದ ಮೇಲೆ ಅಣ್ಣಪ್ಪ - ರಾಮದಾಸ ಸಾಮಗ, ಅಣ್ಣಪ್ಪ - ಕೋಳ್ಯೂರು ಜೋಡಿ ಸಾಕ್ಷಾತ್ಕರಿಸಿದ ಆ ಕಾಲ ತೆಂಕುತಿಟ್ಟಿನ ಸುವರ್ಣ ಯುಗ ಎಂದೇ ವ್ಯಾಖ್ಯಾನಿಸಬಹುದು. ಅಣ್ಣಪ್ಪರ ಹಾಸ್ಯಗಳಲ್ಲೆಲ್ಲ ಸಮಕಾಲೀನ ಪ್ರಜ್ಞೆಯೊಂದಿಗೆ, ತುಳು ಸಂಸ್ಕೃತಿ, ಆಚಾರ ವಿಚಾರಗಳ ಸಮನ್ವಯತೆ ದಟ್ಟವಾಗಿ ಇದ್ದುದೇ ಪ್ರೇಕ್ಷಕರನ್ನು ಸೆಳೆಯಲು ಪ್ರಧಾನ ಕಾರಣ.

( ಚಿತ್ರ ಕೃಪೆ : ತಿಮ್ಮಪ್ಪ ವಿ.ಕೆ. ಕಡಬ )
ಒಂದು ಪ್ರಸಂಗದಲ್ಲಿ ರಾಮದಾಸ ಸಾಮಗರು ಅರಸನಾಗಿ, ತನ್ನ ಚಾರಕನ ಪಾತ್ರ ವಹಿಸಿದ ಅಣ್ಣಪ್ಪರಲ್ಲಿ ಸಂಭಾಷಿಸುತ್ತಾರೆ, ""ಅಂದಯಾ, ನಮ ಲಿಂಬೆದ ಪುಳಿ ಪಣಾ³ ಅತ್ತಾ, ಅವೆನ್‌ ತುಳುಟು ಎಂಚ ಪಣೋಲಿ?'' ಕೂಡಲೇ ಅಣ್ಣಪ್ಪರು, ""ಧನಿಕುಲೇ, ದೇವ ನಾರಂಗಾಯಿ ಪಣೋಲಿ ಅತ್ತೇ?'' ಎನ್ನುತ್ತಾರೆ.

ತುಳು ಪ್ರಸಂಗವೊಂದರಲ್ಲಿ ಅಣ್ಣಪ್ಪರ ಗುರುವಿನ ಪಾತ್ರ. ಇಬ್ಬರು ರಾಜಕುವರ ಶಿಷ್ಯರ ವಿದ್ಯಾ ಪ್ರದರ್ಶನದ ಸಂದರ್ಭ. ಅಣ್ಣಪ್ಪರು ಎರಡೂ ಕೈಗಳಲ್ಲೂ ಖಡ್ಗ ಹಿಡಿದು, ಕೈಗಳನ್ನು ಕತ್ತರಿಯಾಗಿರಿಸಿ, ಏಕಕಾಲದಲ್ಲಿ ಖಡ್ಗ ಕೊಡುತ್ತಾರೆ. ಆಗ ಅಣ್ಣಪ್ಪರು ಹೇಳುವ ಮಾತು, ""ಇಂದಾ, ನಿಕ್‌ ದತ್ತ ಕೈಟ್‌ ಕೊರ್ಯೆ ಪಂಡ್‌ದ್‌ ಬೇಜಾರ್‌ ಮಲ್ಪಡ. ದತ್ತ ಕೈಟ್‌ ಕೊರುಂಡಲಾ, ಅವೆನ್‌ ನಿನ್ನ ಬಲತ ಕೈಟ್‌ ಕೊರ್ತೆ. ಅಂಚನೇ ಮಗಾ, ನಿಕ್‌ ಬಲತ ಕೈಟ್‌ ಕೊರ್ಯೆ ಪಂಡ್‌ದ್‌ ಲಾಗ್ಯಡಾ. ಅವೆನ್‌ ನಿನ್ನ ದತ್ತ ಕೈಟ್‌ ಕೊರ್ತೆ.

ಗುರುವಿಗೆ ಎಲ್ಲ ಶಿಷ್ಯರೂ ಸಮಾನರು ಎಂದು ಹೇಳುವ ಮಿಜಾರರ ಈ ಶೈಲಿ ಪ್ರೇಕ್ಷಕರ ಮನ ಮುಟ್ಟುತ್ತಿತ್ತು.

ಬೊಳ್ಳಿಗಿಂಡೆಯ ಹೆಡ್ಡ ಕೇಚು ಪಾತ್ರ ಅಣ್ಣಪ್ಪರಿಗೆ ಅಪಾರ ಹೆಸರು ಗಳಿಸಿಕೊಟ್ಟಿತ್ತು. ಕೇಚು ಅರಸನ ಮಗನಾದರೂ ಹೆಡ್ಡನಾದ ಕಾರಣ ಆತನ ಚಿಕ್ಕಪ್ಪನ ಮಗ ರಾಜ್ಯವಾಳುತ್ತಾನೆ. ರಾಮದಾಸ ಸಾಮಗರದ್ದು ಆ ಅರಸನ ಪಾತ್ರ.

ಸಾಮಗರು, ಕೇಚುವಿನಲ್ಲಿ ""ಕೇಚೂ, ನಿನ್ನ ಅಮ್ಮೆರ್‌ ಎನ್ನ ಅಮ್ನೆರೆಡ್‌ ನೇಲ್ಯಾರ್‌'' ಎಂದಾಗ ಅಣ್ಣಪ್ಪರು, ಹೆಡ್ಡನ ಭಾಷೆಯಲ್ಲೇ ""ಅಂದ್‌. ಎನ್ನ ಅಮ್ಮೆ ನೇಲೆ'' ಎನ್ನುತ್ತಿದ್ದರು, ಪ್ರೇಕ್ಷಕರಿಂದ ನಗುವಿನ ಸುನಾಮಿ ಹೊಮ್ಮುತ್ತಿತ್ತು. ಆ ಪ್ರಸಂಗದಲ್ಲಿ ಸಾಮಗರ ಪತ್ನಿಯಾಗಿ ಕೋಳ್ಯೂರರು, ಕೇಚುವನ್ನು ಪೀಡಿಸುವ ಸನ್ನಿವೇಶವಿದೆ. ಕೋಳ್ಯೂರರು, ಅಣ್ಣಪ್ಪರಲ್ಲಿ ಬಟ್ಟೆಯ ಗಂಟನ್ನು ಕೊಟ್ಟು ಒಗೆದು ಬರಲು ಹೇಳುತ್ತಾರೆ. ಆಗ ಅಣ್ಣಪ್ಪರು, ""ಎಂಕ್‌ ಬಡವು ಆಪುಂಡು, ಎಂಕ್‌ ಉಣೋಡು'' ಎಂದು ಹೆಡ್ಡನ ಶೈಲಿಯಲ್ಲೇ ಹೇಳುವಾಗ ಕೊಳ್ಯೂರರು, ""ಉಣೋಡಾಂಡ ಬೆನೋಡ್‌'' ಎನ್ನುತ್ತಾರೆ. ಅದಕ್ಕೆ ಅಣ್ಣಪ್ಪರು ""ಅಂಚತ್ತ್ ಮೈತಕ್ಕೆ, ಬೆನೋಡಾಂಡ ಉಣೋಡು'' ಎಂದಾಗ ನಗದಿರಲು ಯಾರಿಂದ ತಾನೇ ಸಾಧ್ಯ?

ಕನ್ನಡ ಪೌರಾಣಿಕ ಪ್ರಸಂಗಗಳಲ್ಲೂ ಮಿಜಾರರು ತಮ್ಮ ಅನನ್ಯ ಹಾಸ್ಯ ಪ್ರತಿಭೆಯನ್ನು ತೋರ್ಪಡಿಸಿದರು. ನಳ ದಮಯಂತಿಯಲ್ಲಿ ಬಾಹುಕನ ಪಾತ್ರ ಅವರದು. ಮೃಗಯಾ ವಿಹಾರದಲ್ಲಿ ಋತುಪರ್ಣನು ದಣಿದು ನೆಲಕ್ಕೊರಗಿದಾಗ ಬಾಹುಕ ಅವನನ್ನು ಸಂತೈಸುತ್ತಾನೆ, ಯಾವ ಪರಿಕರಗಳೂ ಇಲ್ಲದೆ ಷಡ್ರಸೋಪೇತ ಭೋಜನ ತಯಾರಿಸಿ ಉಣಬಡಿಸುತ್ತಾನೆ. ಆಗ ಋತುಪರ್ಣ, ""ನೀನು ನಳ ಚಕ್ರವರ್ತಿಯಲ್ಲವೇ, ಸತ್ಯ ಹೇಳು?'' ಎನ್ನುತ್ತಾನೆ.

ಅಲ್ಲಿ ಬಾಹುಕನಾಗಿ ಮಿಜಾರು ಅಣ್ಣಪ್ಪರು, ""ನಾನು ನಳ, ಅಲ್ಲ ಬಾಹುಕ'' ಅನ್ನುತ್ತಿದ್ದರು. ಒಡನೆಯೇ ಅದೇ ವಾಕ್ಯವನ್ನು ""ಹಾಗಲ್ಲ ಒಡೆಯಾ, ನಾನು ನಳ ಅಲ್ಲ, ಬಾಹುಕ'' ಎಂದು ಪುನರಾವರ್ತಿಸುತ್ತಿದ್ದರು.

ಅಣ್ಣಪ್ಪರಲ್ಲಿ ಮಗುವಿನ ಮುಗ್ಧತೆಯಿತ್ತು. ಬಿಳಿ ಪಂಚೆ, ಕ್ರೀಂ ವರ್ಣದ ಅಂಗಿ ಹಾಗೂ ಹೆಗಲಲ್ಲಿ ಶಲ್ಯ ಇವಿಷ್ಟೇ ಅಣ್ಣಪ್ಪರ ಡ್ರೆಸ್‌ ಕೋಡ್‌. ಅತೀ ಬೇಡಿಕೆಯ, ತಾರಾಮೌಲ್ಯದ ಕಲಾವಿದನಾದರೂ ಅತ್ಯಂತ ಸರಳ ವ್ಯಕ್ತಿತ್ವ ಅವರದು. ನಿಜ ಜೀವನದ ಅವರ ಸಂಭಾಷಣೆಗಳಲ್ಲೂ ಹಾಸ್ಯಕ್ಕೇ ಒತ್ತು. ಬಿಡುವಿರುವಾಗ ಮೂಡಬಿದಿರೆಯಲ್ಲಿರುವ ನನ್ನ ಅಂಗಡಿಯಲ್ಲಿ ಗಂಟೆಗಟ್ಟಲೆ ಕುಳಿತು ಹರಟುವುದು ವಾಡಿಕೆ. ಹಾಗೆ ಬಂದು ಕುಳಿತಿರುವಾಗ ಅಂಗಡಿಗೆ ಬಂದವರು ಅಣ್ಣಪ್ಪರನ್ನು ನೋಡಿ, ""ಇವರು ಯಾರು?'' ಎಂದು ಪ್ರಶ್ನಿಸಿದರೆ ""ನಾನು ಅಣ್ಣಪ್ಪ'' ಎಂದಷ್ಟೇ ಹೇಳುತ್ತಿದ್ದರು. ಅವರನ್ನು ನೋಡಿ ತಿಳಿಯದವರು ""ಹೌದಾ'' ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದುದುಂಟು. ಆಗ ನಾನು ""ಇವರು ಮಿಜಾರು ಅಣ್ಣಪ್ಪರು'' ಎಂದರೆ ಪ್ರಶ್ನಿಸಿದವರ ಮುಖಚರ್ಯೆಯೇ ಬದಲಾಗಿ ಸಂಭ್ರಮಿಸುತ್ತಿದ್ದರು.

ಅವರು ಹೋದ ಮೇಲೆ ಅಣ್ಣಪ್ಪರ ವಿನೋದ, ""ಕುಡ್ವರೇ, ಅವರಿಗೆ ಅಣ್ಣಪ್ಪನ ಪರಿಚಯವಿಲ್ಲ. ಮಿಜಾರು ಅಣ್ಣಪ್ಪರ ಪರಿಚಯ ಚೆನ್ನಾಗಿ ಉಂಟು ಅಲ್ಲವೇ?'' ಸರಳ ನಡೆನುಡಿ, ಎತ್ತರದ ವ್ಯಕ್ತಿತ್ವದಿಂದ ಬೆಳಗುವ ಇಂತಹ ಕಲಾವಿದರನ್ನು ಇನ್ನು ಕಾಣಲುಂಟೇ?**********************


ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ