ಇಂದು ನಿಧನರಾದ ಶಶಿಧರ ಪಡುಕೋಣೆಯವರು ಸರಳ ಸಜ್ಜನಿಕೆಯ ಅಪರೂಪದ ಕಲಾವಿದರು. ಯಾವದೇ ದುಶ್ಷಟಗಳಿಂದ ದೂರವಿದ್ದು, ತನ್ನ ಪಾತ್ರ, ವೇಷಗಳ ಬಗ್ಗೆ ಮಾತ್ರ ಯೋಚಿಸುವರು. ಅಂತೂ ಯಕ್ಷರಂಗದಲ್ಲಿ ಮೆರೆದ ಯುವ ಕಲಾವಿದನ ನಿಧನ ನಿಜಾರ್ಥದಲ್ಲಿ ಯಕ್ಷರಂಗಕ್ಕಾದ ದೊಡ್ಡ ನಷ್ಟವೇ ಸರಿ.
ಅತ್ಯಂತ ಬಡತನದ ಕುಟುಂಬದಲ್ಲಿ ಜನಿಸಿದ ಶಶಿ ಪಡುಕೋಣೆಯವರು ಕುಟುಂಬದ ಜವಾಬ್ದಾರಿ ಹೊತ್ತವರು. ಬಾಲ್ಯದಲ್ಲೇ ತಂದೆಯನ್ನು ಕಳೆದು ತಾಯಿ ಹಾಗೂ ಇಬ್ಬರು ತಂಗಿಯಂದಿರ ಪಾಲನೆಯ ಹೊಣೆಗಾರಿಕೆ ಹೊತ್ತವರು. ತನ್ನ ತಂಗಿಯಂದಿರ ಮದುವೆಯನ್ನು ಮಾಡಿ, ಇನ್ನೇನು ಹೊಸಬಾಳನ್ನು ಪ್ರವೇಶಿಸುವ ಹಂತದಲ್ಲೇ "ಯಮ" ನ ಕ್ರೂರ ದೃಷ್ಟಿಯಿಂದ ಜೀವನರಂಗದಿಂದಲೇ, ಮಧ್ಯಂತರದಲ್ಲೇ ನಿರ್ಗಮಿಸಿದುದು ವಿಷಾದನೀಯ.
ಕುಂದಾಪುರ ತಾಲೂಕಿನ ಮರವಂತೆಯ ವರಾಹಸ್ವಾಮಿ ದೇವಸ್ತಾನದ ಎದುರಿನಿಂದ, ದೋಣಿಯಲ್ಲಿ ಹೊಳೆ ದಾಟಿಯೇ ಹೋಗಬೇಕಾದ ಊರೇ "ಪಡುಕೋಣೆ". ಶಶಿಯವರ ಹುಟ್ಟೂರು. "ಪಡುಕೋಣೆ" ಎಷ್ಟೋ ಕಲಾವಿದರಿಗೆ ಜನ್ಮ ಕೊಟ್ಟ ಊರು. ಪ್ರತೀ ಕಲೆಗೆ ಸಂಬಂಧ ಪಟ್ಟವರು, ಕ್ರೀಡೆಗೆ ಸಂಬಂಧಿಸಿದವರ ಊರು ಪಡುಕೋಣೆ. ಆದರೆ, ಅದೇ ಪಡುಕೋಣೆ ಯಕ್ಷಗಾನಕ್ಕಾಗಿ ಒಬ್ಬರೇ ಒಬ್ಬರು ಕಲಾವಿದರನ್ನು ಕೊಟ್ಟದ್ದು. ಅವರೇ, ಶಶಿ ಪಡುಕೋಣೆ. ( ತುಂಬಾ ಹಿಂದೆ ಸೂರ ಗಾಣಿಗ ಎಂಬ ಯಕ್ಷಗಾನ ಕಲಾವಿದರು ಪಡುಕೋಣೆಯವರು )
ಜೀವನೋಪಾಯಕ್ಕೆ ಯಕ್ಷಗಾನ ಆರಿಸಿದ ಶಶಿ, ಹಾಲಾಡಿ, ಸೌಕೂರು, ಪೆರ್ಡೂರು ( ಬದಲಿ ಕಲಾವಿದನಾಗಿ ಸಾಲಿಗ್ರಾಮ) ಮುಂತಾದ ಬಡಗು ಮೇಳಗಳಲ್ಲಿ ದುಡಿದು ಇತ್ತೀಚೆಗೆಷ್ಟೇ ತೆಂಕಿನ ಸುಪ್ರಸಿಧ್ಧ ಧರ್ಮಸ್ತಳ ಮೇಳ ಸೇರಿದ್ದರು. ಸುಮಾರು 30 ವರ್ಷವನ್ನೂ ದಾಟದ ಶಶಿ ನೋಡಿಯೇ ಯಕ್ಷಗಾನ ಕಲಿತದ್ದು ಹೆಚ್ಚು. ಹಾಲಾಡಿ ಮೇಳದಲ್ಲಿರುವಾಗ "ಮಾಯಾ ಮೇಘನ" ಪ್ರಸಂಗದ ಪ್ರಧಾನ ಪಾತ್ರವಾದ "ಮೇಘನ" ಪಾತ್ರದ ಮೂಲಕ ಅಪಾರ ಪ್ರಸಿಧ್ಧಿ ಪಡೆದಿದ್ದರು. ಸುಮಾರು 14 ವರ್ಷಗಳ ಯಕ್ಷ ತಿರುಗಾಟ ನಡೆಸಿದ "ಶಶಿ" ತನ್ನ ಸಜ್ಜನಿಕೆ, ದುಶ್ಚಟ ರಾಹಿತ್ಯದಿಂದಾಗಿ ಎಲ್ಲಾ ಕಲಾವಿದರ ಪ್ರೀತಿಯ "ಶಶಿ" ಯಾಗಿದ್ದರು. ತಾನು ನಿರ್ವಹಿಸುವ ಯಾವದೇ ಪಾತ್ರಗಳ ವೇಷಭೂಷಣದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಶಶಿ ಇತರರಿಗೂ, ಯಾವ ಪಾತ್ರಕ್ಕೆ ಯಾವ ವೇಷಭೂಷಣ ಚೆಂದವಾಗಿ ಕಾಣುತ್ತದೆ ಎಂದು ತಿಳಿಸಿ ಕೊಡುತ್ತಿದ್ದರು. ಸಮಯಾವಕಾಶವಿದ್ದಾಗ ಬೇರೆ ಮೇಳದವರ ಆಟವನ್ನು ನೋಡುವದು ಶಶಿಯವರ ಅಭ್ಯಾಸ.
ಯಕ್ಷಗಾನದ ಪೋಷಾಕು ಹೊಲಿಯುವದರಲ್ಲಿ ಶಶಿಯವರು ಸಿಧ್ಧಹಸ್ತರಾಗಿದ್ದರು. ಮಳೆಗಾಲದಲ್ಲಿ ತನ್ನ ತಂಗಿಯಂದಿರ ನೆರವಿನಿಂದ ಯಕ್ಷಗಾನದ "ಡ್ರೆಸ್" ಹೊಲಿಯುವ ಕೆಲಸ ಮಾಡುತ್ತಿದ್ದರು. ಶಶಿಕಾಂತ ಶೆಟ್ಟಿ ಸಹಿತ ಸುಪ್ರಸಿಧ್ಧ ಕಲಾವಿದರಿಗೆ ಅವರಿಗೆ ಒಪ್ಪುವಂಥಹ "ಡ್ರೆಸ್" ಹೊಲಿದು ಕೊಟ್ಟಿದ್ದರು. ಹಾಲಾಡಿ ಮೇಳದಲ್ಲಿ ಹರಕೆ ಆಟ ಆಡಿಸುವವರು ದೇವರಿಗೆ ಸೀರೆ ಒಪ್ಪಿಸುವ ಕ್ರಮವಿದೆ. ಆ ಸೀರೆಗಳು ಕಲಾವಿದರ ಪಾತ್ರಗಳಿಗೆ ಉಪಯೋಗಿಸುವದು ವಾಡಿಕೆ. ಸೀರೆಗಳು ತುಂಬಾ ಹರಕೆ ರೂಪದಲ್ಲಿ ಬಂದು ಉಪಯೋಗಕ್ಕಿಂತಲೂ ಅಧಿಕವಾಗುತ್ತಿತ್ತು. ಆದರೆ ಶಶಿಯವರು, ಹರಕೆ ಸೇವಾಕರ್ತರ ಮನ ಓಲೈಸಿ ಮೇಳಕ್ಕೆ ಬೇಕಾದ ಇತರ ವೇಷಗಳ "ಡ್ರೆಸ್" ಕೊಡಲು ಹೇಳುತ್ತಿದ್ದರು. ವೇಷಭೂಷಣದ ಬಗೆಗೆ ಶಶಿಯವರ ಮನೋಧೃಷ್ಟಿಗಾಗಿ ಇದನ್ನು ಉಲ್ಲೇಖಿಸುತ್ತಿದ್ದೇನೆ.
ಶಶಿಧರ ಪಡುಕೋಣೆ
ಜನನ
:
ಎಪ್ರಿಲ್ 18, 1979
ಜನನ ಸ್ಥಳ
:
ಪಡುಕೋಣೆ, ಮರವಂತೆ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಹಾಲಾಡಿ, ಸೌಕೂರು, ಪೆರ್ಡೂರು, ಸಾಲಿಗ್ರಾಮ ಮುಂತಾದ ಬಡಗು ಮೇಳಗಳಲ್ಲಿ ದುಡಿದು ಪ್ರಸ್ತುತ ತೆಂಕಿನ ಸುಪ್ರಸಿಧ್ಧ ಧರ್ಮಸ್ತಳ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮರಣ ದಿನಾ೦ಕ
:
ಮಾರ್ಚ್ 9, 2016
ಪ್ರಾರಂಭದಲ್ಲಿ ಬೆಂಗಳೂರಿನ, ಶ್ರೀನಿವಾಸ ಸಾಸ್ತಾನ ಎಂಬವರ ವ್ಯವಸ್ತಾಪಕತ್ವದ "ಕರ್ಣಾಟಕ ಕಲಾ ದರ್ಶನಿ" ಯಲ್ಲಿ ಮಳೆಗಾಲದಲ್ಲಿ ತಿರುಗಾಟ ಮಾಡಿದ್ದರು. ಇತ್ತೀಚೆಗೆ ಸುಪ್ರಸಿಧ್ಧ ಕಲಾವಿದರಾದ ನಿಡ್ಲೆ ಗೋವಿಂದ ಭಟ್ಟರ "ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ" ಯ ಮಳೆಗಾಲದ ತಿರುಗಾಟದಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿದ್ದರು.
ಪೆರ್ಡೂರು ಮೇಳದಲ್ಲಿರುವಾಗ ನೀಲ್ಗೋಡು ಶಂಕರ ಹೆಗ್ಡೆಯವರು ಅಮೇರಿಕಾ ಪ್ರವಾಸದಲ್ಲಿರುವಾಗ ಅವರ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಅಲ್ಪ ಕಾಲ ಬಡಗಿನ ಸುಪ್ರಸಿಧ್ಧ ಸ್ತ್ರೀ ಪಾತ್ರಧಾರಿ ಶಶಿಕಾಂತ ಶೆಟ್ಟರ ಒಡನಾಟ ಹೊಂದಿದ್ದರು. ಶಶಿಕಾಂತರನ್ನು ಶಶಿಯವರ ಕುರಿತು ಸಂಪರ್ಕಿಸಿದಾಗ, ಶೆಟ್ಟರು ತೀವ್ರವಾಗಿ ನೊಂದಿರುವದು ಕಂಡು ಬಂತು. ದುಃಖದಿಂದಲೇ "ಕುಡ್ವರೇ, ಕಣ್ಣಿಮನೆಯವರ ನಿಧನದ ಸುದ್ದಿಯೇ ಆಘಾತ, ಅದನ್ನು ಮರೆಯುವಷ್ಟರಲ್ಲೇ, ಇನ್ನೊಂದು ಬರಸಿಡಿಲು ಎರಗಿತು" ಎಂದು ದುಖಃ ದಿಂದಲೇ ನುಡಿದರು.
ಯಕ್ಷರ೦ಗದಲ್ಲಿ ಈಗ ತಾನೆ ಪ್ರಜ್ವಲಿಸಲು ತೊಡಗಿದ ಶಶಿಯವರ ಅಕಾಲಿಕ ನಿಧನ ಯಕ್ಷಗಾನ ರ೦ಗಕ್ಕೆ ಹಾಗೂ ಯಕ್ಷಗಾನ ಕಲಾಭಿಮನಿಗಳಿಗೆ ಬಹುದೊಡ್ಡ ಆಘಾತ. ಶ್ರೀಯುತರ ಆತ್ಮಕ್ಕೆ ಚಿರ ಶಾ೦ತಿಯನ್ನು ಎಲ್ಲರ ಪರವಾಗಿ ಶೃಧ್ಧಾಂಜಲಿ ಸಲ್ಲಿಸುತ್ತಿದ್ದೇನೆ.
****************
ಶಶಿಧರ ಪಡುಕೋಣೆಯವರ ಕೆಲವು ದೃಶ್ಯಾವಳಿಗಳು
****************
ಶಶಿಧರ ಪಡುಕೋಣೆಯವರ ಕೆಲವು ಭಾವಚಿತ್ರಗಳು
( ಕೃಪೆ : ಕಟೀಲು ಸಿತ್ಲ ರ೦ಗನಾಥ ರಾವ್, ಕಿರಣ್ ವಿಟ್ಲ ಮತ್ತು ರಾಮ್ ನರೇಶ್ ಮ೦ಚಿ )
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.