ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ  

ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ಎಪ್ರಿಲ್ 9 , 2016

“ಯಕ್ಷ ಕಣಜ” ಕೃತಿ ಬಿಡುಗಡೆ

ಶಂಕರ ನಾರಾಯಣ : ಹಿರಿಯ ಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕರ ಜೀವನ- ಸಾಧನೆಗಳನ್ನು ಅವರೊಡನೆ ಸಂದರ್ಶನ ನಡೆಸಿ ಉಪನ್ಯಾಸಕ, ಕುಮಾರ ಶಂಕರನಾರಾಯಣ ಇವರು ರಚಿಸಿದ “ಯಕ್ಷಕಣಜ” ಕೃತಿಯನ್ನು, ಕೋಟ ಗೀತಾನಂದ ಪೌಂಡೇಶನ್‌ನ ಪ್ರವರ್ತಕ, ಉದ್ಯಮಿ ಶ್ರೀ ಆನಂದ ಕುಂದರ್‌ರವರು ಇಲ್ಲಿನ ಶ್ರೀ ಶಂಕರನಾರಾಯಣ ಸಭಾಗೃಹದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಈ ಕೃತಿ ಮೊಳಹಳ್ಳಿಯವರ ಜೀವನ-ಸಾಧನೆಗಳೊಂದಿಗೆ, ಪಾರಂಪರಿಕ ಯಕ್ಷಗಾನ ಕಣ್ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಅದರ ಕುರಿತು ಆಸಕ್ತಿವಹಿಸಿ ಸಾಕಷ್ಟು ವಿಷಯಗಳನ್ನು ಮೊಳಹಳ್ಳಿಯವರಂತಹ ಹಿರಿಯ ಕಲಾವಿದರಿಂದ ಸಂಗ್ರಹಿಸಿ ದಾಖಲಿಸಿರುವುದು ಶ್ಲಾಘನಾರ್ಹ” ಎಂದರು. ಕೃತಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪ್ರಾಧ್ಯಾಪಕ ಶ್ರೀ ಎಸ್. ವಿ ಉದಯಕುಮಾರ ಶೆಟ್ಟಿಯವರು, ‘ತೆಂಕು, ಬಡಾ-ಬಡಗು ಯಕ್ಷಗಾನ ಕ್ಷೇತ್ರಕ್ಕೆ ಹೋಲಿಸಿದರೆ ನಮ್ಮ ನಡುತಿಟ್ಟಿನಲ್ಲಿ ಇಂತಹ ಪುಸ್ತಕ ಪ್ರಕಟಣೆ ತೀರಾ ವಿರಳ, ಯಕ್ಷಗಾನದಲ್ಲಿ ಡಾಕ್ಟ್ರರೇಟ್ ಮಾಡುವಷ್ಟು ವಿಷಯ ಮೊಳಹಳ್ಳಿಯವರಲ್ಲಿದ್ದು‌ ಈ ಕೃತಿಯು ಯಕ್ಷಗಾನಾಭಿಮಾನಿಗಳಿಗೊಂದು ಸಂಗ್ರಹ ಯೋಗ್ಯ ಕೃತಿ’ ಎಂದರು.

ಕೃತಿ ರಚನಕಾರರಾದ ಶ್ರೀ ಕುಮಾರ ಶಂಕರನಾರಾಯಣ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಕೃತಿಯ ಪರಿಚಯಗೈದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಲಕ್ಮೀನಾರಾಯಣ ಉಡುಪರು, ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇಂದಿನ ಪ್ರಜ್ಞಾವಂತ ಪ್ರೇಕ್ಷಕರು ಇಂತಹ ಕೃತಿಗಳನ್ನು ಹೆಚ್ಚು ಹೆಚ್ಚು ಕೊಂಡು ಓದುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಅರ್ಥಧಾರಿಗಳಾದ ಶ್ರೀಶಿವರಾಮ ಶೆಟ್ಟಿ ಸಂಕಾಪುರ, ಪುಸ್ತಕ ಪ್ರಕಾಶಕರಾದ, ಶ್ರೀ ಪ್ರವೀಣಕುಮಾರ ಶೆಟ್ಟಿ ಬೇಳೂರು ಮತ್ತು ಕಾರ್ಯಕ್ರಮದ ಸಹ ಪ್ರಾಯೋಜಕ ಸಂಸ್ಥೆ ಜೆ. ಸಿ. ಐ. ಶಂಕರನಾರಾಯಣದ ಅಧ್ಯಕ್ಷ ಶ್ರೀ ಮಂಜುನಾಥ ಭಟ್ ಉಪಸ್ಥಿತರಿದ್ದರು.

ಜೆ. ಸಿ. ಐ. ಶ್ರೀ ಪ್ರವೀಣಚಂದ್ರ ಶೆಟ್ಟಿಗಾರ್ ಅತಿಥಿ ಗಳನ್ನು ಸ್ವಾಗತಿಸಿದರು. ಶ್ರೀರಾಮಚಂದ್ರ ದೇವಾಡಿಗ ಧನ್ಯವಾದಗೈದರು. ಕುಮಾರಿ ಪ್ರಶಸ್ತಿಯ ಪ್ರಾರ್ಥನೆಯೋಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀ ಕೆ. ಪರಮೇಶ್ವರ ಉಡುಪ ಮತ್ತು ಶ್ರೀಕಿಶೋರ್ ಕುಮಾರ್ ನಿರ್ವಹಣೆಗೈದರು. ಸಭಾ ಕಾರ್ಯಕ್ರಮದ ಬಳಿಕ , ಖ್ಯಾತ ಭಾಗವತರುಗಳಾದ ಶ್ರೀ ಕೆ. ಪಿ. ಹೆಗ್ಡೆ, ಶ್ರೀ ವಿಶ್ವೇಶ್ವರ ಸೋಮಯಾಜಿ, ಶ್ರೀ‌ಎಸ್. ವಿ. ಉದಯ ಕುಮಾರ್ ಶೆಟ್ಟಿ, ಶ್ರೀ ಉಮೇಶ ಸುವರ್ಣ ಮತ್ತು ಶ್ರೀ ನಾಗೇಶ ಕುಲಾಲ ಇವರಿಂದ ಪೌರಣಿಕ ಯಕ್ಷ ‘ಗಾನ ವೈಭವ ‘ಕಾರ್ಯಕ್ರಮ ನಡೆಯಿತು. ಶ್ರೀ ಚಂದ್ರಯ್ಯ ಆಚಾರ್ ಹಾಲಾಡಿ ಮತ್ತು ಶ್ರೀ ಭಾಸ್ಕರ ಆಚಾರ್ ಕನ್ಯಾಣ ಇವರು ಮದ್ದಳೆ ಮತ್ತು ಚಂಡೆಗಳಲ್ಲಿ ಸಹಕರಿಸಿದರು.







ಎಪ್ರಿಲ್ 3, 2015

ಕೋಟ ಸುರೇಶರು ನಡುತಿಟ್ಟಿನ ಆಶಾಕಿರಣ : ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ

ಕುಂಭಾಶಿ : ``ಅನ್ಯ ತಿಟ್ಟು ಮಟ್ಟುಗಳ ಪ್ರಭಾವದಿಂದ ಕುಂದಾಪುರ ಪರಿಸರದಲ್ಲಿ ಖ್ಯಾತಿವೆತ್ತ ಹರಾಡಿ-ಮಟ್ಪಾಡಿ ಶೈಲಿಯನ್ನೊಳಗೊಂಡ ಮದ್ಯಮತಿಟ್ಟಿನಲ್ಲಿ ಸದ್ಯ ಕಲಾವಿದರ ಕೊರತೆ ಕಾಣುತ್ತಿದ್ದು ಈ ಶೈಲಿಯನ್ನು ಸಮರ್ಪಕವಾಗಿ ಮೈಗೂಡಿಸಿಕೊಂಡ ಕೆಲವೇ ಕೆಲವು ಕಲಾವಿದರಲ್ಲಿ ಸದ್ಯ ಸುರೇಶ ಬಂಗೇರ ಅವರು ಮುಂದಿನ ಪೀಳಿಗೆಗೆ ಆಶಾಕಿರಣ. ಸಮರ್ಥ ಪುರುಷವೇಷದಾರಿಗಳಾದ ಕೀರ್ತಿಶೇಷ ಮೊಳಹಳ್ಳಿ ಹೆರಿಯನಾಯ್ಕ್ ಮತ್ತು ಶಿರಿಯಾರ ಮಂಜು ನಾಯ್ಕರ ಉತ್ತರಾದಿಕಾರಿಯಾಗಿ ಗುರುತಿಸಲ್ಪಡುವ ಇವರಿಗೆ ನಡುತಿಟ್ಟಿನ ಸಮರ್ಥ ಸೊಬಗನ್ನು ಮುಂದಿನ ಪೀಳಿಗೆಗೆ ದಾಟಿಸುವ ಗುರುತರ ಹೊಣೆಗಾರಿಕೆ ಇದೆ``ಎಂದು ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕರಾದ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಅಭಿಪ್ರಾಯ ಪಟ್ಟರು.

ಅವರು ಗೋಪಾಡಿಯಲ್ಲಿ ಶ್ರೀ ಅಮೃತೇಶ್ವರಿ ಮೇಳದಲ್ಲಿ ನೆಡೆದ ಕಲಾವಿದ ಕೋಟ ಸುರೇಶ ಬಂಗೇರರನ್ನು ಸನ್ಮಾನಿಸಿ ಮಾತನಾಡಿದರು. ಯಕ್ಷಗಾನ ರಂಗಕ್ಕೆ ಮೊಗವೀರ ಸಮಾಜದ ಕೊಡುಗೆ ಅನನ್ಯವಾಗಿದ್ದು ಸಮಾಜದ ಅನೇಕ ಕಲಾವಿದರು ಹಿಮ್ಮೇಳ ಮುಮ್ಮೇಳದಲ್ಲಿ ತೊಡಗಿಸಿಕೊಂಡು ಯಕ್ಷಗಾನದ ಬೆಳವಣಿಗೆಗೆ ಕಾರಣೀಕರ್ತರಾಗಿದ್ದರು ಎಂದರು. ಉದ್ಯಮಿ ಗಣೇಶ ಪುತ್ರನ್ ಅದ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ದೇವಸ್ಥಾನ ಮುಖ್ತೇಸರ ಗೋಪಾಲಕೃಷ್ಣ ಶೆಟ್ಟಿ. ಹಿರಿಯ ಪ್ರಸಂಗಕರ್ತ ರಮೇಶ್ಮಂಜು. ಸ್ಥಳಿಯಗಣ್ಯ ಬಾಬಣ್ಣ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮ ವ್ಯವಸ್ಥೆ ಮಾಡಿದ ಕಲಾಪ್ರೇಮಿ ಕೃಷ್ಣ ಕಾಂಚನ್ ಸ್ವಾಗತಿಸಿ ವಂದಿಸಿದರು. ಬಳಿಕ ಸುದನ್ವ ಕಾಳಗ-ಕನಕಾಂಗಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು







ಮಾರ್ಚ್ 29, 2016

ಮನಸೆಳೆದ ಕೆ. ಮೋಹನ್ ನಿರ್ದೇಶನದ ವೀರ ವೃಷಸೇನ ಯಕ್ಷಗಾನ ಪ್ರದರ್ಶನ

ಬೆಂಗಳೂರು : `` ಕೆ. ಮೋಹನ್‌ರನ್ನು 35 ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. ಅವರ ಸಂಘಟನೆಯ ಯಕ್ಷದೇಗುಲದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಅಭಿರುಚಿ ಮೂಡಿಸುತ್ತಿದ್ದಾರೆ. ಕೇವಲ ಪುರಾಣ ಪ್ರಸಂಗ ಸೀಮಿತವಲ್ಲದೇ ಏಡ್ಸ್, ಸ್ವಚ್ಛ ಭಾರತ್ ಹೀಗೆ ಇತರ ಸಾಮಾಜಿಕ ವಿಚಾರದ ಬಗ್ಗೆಯೂ ಯಕ್ಷಗಾನದ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ದೇಶ-ವಿದೇಶಗಳಲ್ಲೂ ಕಾರ್ಯಕ್ರಮ ನೀಡಿದ ಮೋಹನರು ಸ್ವಂತ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ದುಡಿದು ಇವರೊಬ್ಬರು ಚೈತನ್ಯದ ಚಿಲುಮೆಯೆಂದರೆ ತಪ್ಪಾಗದು. ಈ ಒಂದು ಸಂಘಟನೆ ಮೂಲಕ ಜನರಲ್ಲಿ ಕಲೆಯ ಅಭಿರುಚಿ ಮೂಡಿಸುತ್ತಿರುವುದು ಸ್ತುತ್ಯಾರ್ಹ`` ಎಂದು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸರಾದ ಡಾ|. ಆನಂದರಾಮ ಉಪಾಧ್ಯರು ಅಭಿಪ್ರಾಯಪಟ್ಟರು. ಮಾರ್ಚ್ 27 ರಂದು ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಿಂದ ಕೆ. ಮೋಹನ್‌ರು “ವೀರ ವೃಷಸೇನ” ಪ್ರಸಂಗದ ನಿರ್ದೇಶನದ ಯಕ್ಷಗಾನ ಪ್ರದರ್ಶನವು ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ಆದ ಶ್ರೀಮತಿ ಮೈಥಿಲಿಯವರು ಯಕ್ಷಗಾನದ ರಂಗ ಸ್ಥಳದ ದಿವುಟಿಕೆಗೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸರಾದ ಡಾ|. ಆನಂದರಾಮ ಉಪಾಧ್ಯರು ಯಕ್ಷಗಾನ ಕ್ಷೇತ್ರಕ್ಕೆ ಡಾ| ಶಿವರಾಮ ಕಾರಂತರ ಪ್ರವೇಶದಿಂದ ಮತ್ತಷ್ಟು ಪ್ರಚಲಿತವಾಯಿತು. ಹಳ್ಳಿಗರಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆ ಇಂದು ನಗರ ಪ್ರದೇಶ, ದೇಶ-ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ೨೫-೩೦ ವರ್ಷದ ಹಿಂದೆ ಕೆ. ಮೋಹನ್‌ರ ಗದಾಯುದ್ಧದ ಕೌರವ ಅದ್ಭುತವಾಗಿತ್ತು. ಇವರು ನಿರ್ದೇಶಿಸಿದ ಇಳೆಯಣ್ಣನ ಕತೆ ಯಕ್ಷಗಾನ ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದೆ. ಇಂದು ಹವ್ಯಾಸಿ ಕಲಾವಿದರು ಯಕ್ಷಗಾನದ ನಿರ್ಣಾಯಕರಾಗಿರುತ್ತಾರೆ. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಾರೆ.

ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಮೋಹನರು ನಗರ ಪ್ರದೇಶಗಳಲ್ಲಿ ಸಂಘಟನೆ-ಕಲಿಕೆ-ಪ್ರದರ್ಶನಗಳಿಗೆ ಕಾರ್ಪೋರೇಟ್ ರೂಪ ಕೊಟ್ಟವರಾಗಿದ್ದಾರೆ. ಅಲ್ಲದೇ ಬಿ.ಬಿ.ಕಾರಂತ್ ನಿರ್ದೇಶನದ ಕೆಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ರಂಗಭೂಮಿಯ ಅನುಭವ, ಚಲನಚಿತ್ರ, ಕಿರುತೆರೆಯವರೊಂದಿಗಿನ ಒಡನಾಟದಿಂದ ಚಿಂತನಾತ್ಮಕ ವಿಷಯಗಳನ್ನೂ ಪಡೆದಿರುತ್ತಾರೆ. ಇಂದು ಇವರ ನಿರ್ದೇಶನದ ವೀರ ವೃಷಸೇನ ಯಕ್ಷಗಾನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಯಕ್ಷಗಾನ ಪ್ರೋತ್ಸಾಹಕರು ಮತ್ತು ಪ್ರಸಂಗಕರ್ತರಾದ ಮಣೂರು ವಾಸುದೇವ ಮಯ್ಯರು ಮಾತನಾಡಿ ಕಳೆದ ೩೫ ವರ್ಷದಿಂದ ಕೆ.ಮೋಹನ್ ನಿರ್ದೇಶನದ ಯಕ್ಷದೇಗುಲ ತಂಡ ಹೀಗೆಯೇ ಸದಾ ಯಶಸ್ವಿಯಾಗಿ ನಡೆಯಲಿ ಹಾಗೆ ಇಂದಿನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕೆ. ಮೋಹನರು ಸ್ವಾಗತಿಸಿದರು, ಉಪನ್ಯಾಸಕ ಕಲಾವಿದ ಸುಜಯೀಂದ್ರ ಹಂದೆಯವರು ಸೊಗಸಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಸುಜಯೀಂದ್ರ ಹಂದೆ ಮತ್ತು ಲಂಬೋದರ ಹೆಗಡೆ ಮದ್ದಲೆಯಲ್ಲಿ, ಗಣಪತಿ ಭಟ್ ಹಾಗೂ ಮಾಧವ ಮಣೂರು ಚಂಡೆ ವಾದನದಲ್ಲಿ ಕಟ್ಕೇರಿ ಮಂಜುನಾಥ ಭಟ್‌ರು ಸಹಕರಿಸಿದರು. ಹಾಗೆ ಮುಮ್ಮೇಳದಲ್ಲಿ ಕೌರವನಾಗಿ ಕೆ. ಮೋಹನ್‌ರ ಮಗಳಾದ ಪ್ರಿಯಾಂಕ ಕೆ. ಮೋಹನ್ ಅರ್ಜುನನಾಗಿ, ಕೆ. ಮೋಹನ್‌ರ ಇನ್ನೊಬ್ಬಳು ಮಗಳಾದ ಡಾ. ಪ್ರೀತಿ ಕೆ. ಮೋಹನ್, ವೃಷಸೇನನಾಗಿ ನವೀನ್ ಕೋಟ, ಸೋಮಪ್ರಭೆಯಾಗಿ ಮನೋಜ್ ಭಟ್, ಭೀಮನಾಗಿ ಶಶಾಂಕ ಕಾಶಿ ಮತ್ತು ಕೃಷ್ಣನಾಗಿ ಪ್ರದೀಪ್ ಮಧ್ಯಸ್ಥರು ನಿರ್ವಹಿಸಿದರು. ರಂಗದ ಹಿಂದೆ ಕೋಟ ಸುದರ್ಶನ ಉರಾಳ, ನರಸಿಂಹ ತುಂಗ, ಉದಯಬೋವಿ, ಪ್ರಕಾಶ್ ಉಳ್ಳೂರ, ಚಿಂತನ್, ಸುಷ್ಮಾ, ದೀಪಕ್ ಮತ್ತು ರಾಘವೇಂದ್ರರವರು ಸಹಕರಿಸಿದರು.


















ಮಾರ್ಚ್ 27, 2016

ಬಳ್ಕೂರು ಕೃಷ್ಣಯಾಜಿ ಮತ್ತು ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಯಕ್ಷರತ್ನ ಪ್ರಶಸ್ತಿ

ಕುಂದಾಪುರ :

ಬಳ್ಕೂರು ಕೃಷ್ಣಯಾಜಿ :

ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದನಾಗಿ, ಪೌರಾಣಿಕ ಪ್ರಸಂಗದ ಗಂಡು ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ, ಪೌರಾಣಿಕ ಹಾಗೂ ಆದುನಿಕ ಪ್ರಸಂಗಗಳ ಪ್ರೇಕ್ಷಕರ ಮನೆಮಾತಾದ ಮೇರು ಕಲಾವಿದ ಬಳ್ಕೂರು ಕೃಷ್ಣ ಯಾಜಿಯವರು. ಪ್ರಸಂಗದ ಪ್ರಧಾನ ಪಾತ್ರಗಳಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ರಂಗದ ಹಿಡಿತ ಮತ್ತು ಗತ್ತುಗಾರಿಕೆಯನ್ನು ಇವರ ವೇಷಗಳಲ್ಲಿ ಗುರುತಿಸಬಹುದಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಡಗುಂಜಿ ಮೇಳದಲ್ಲಿ ಕೆರೆಮನೆ ಬ೦ಧುಗಳ ಮತ್ತು ಕುಂಜಾಲು ಹಾಸ್ಯಗಾರರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಯಾಜಿಯವರು ವಿನಮ್ರರಾಗಿ ನುಡಿಯುತ್ತಾರೆ.

ನಿರಂತರ 40 ವರ್ಷ ಬಡಗುತಿಟ್ಟು ರಂಗಸ್ಥಳವನ್ನು ಆಳಿದ ಇವರನ್ನು ರಂಗದ ರಾಜನೆಂದೇ ಜನ ಗುರುತಿಸಿದ್ದಾರೆ. ರಂಗಸ್ಥಳದಲ್ಲಿ ಒಂದೇ ರಾತ್ರಿಯಲ್ಲಿ ರಾಮನೂ ಆಗಬಲ್ಲ, ರಾವಣನೂ ಆಗಬಲ್ಲ, ಕೃಷ್ಣನೂ ಆಗಬಲ್ಲ ಕಂಸನೂ ಆಗಬಲ್ಲ, ಭೀಷ್ಮನೂ ಆಗಬಲ್ಲ ಪರಶುರಾಮ, ಸಾಲ್ವನೂ ಆಗಬಲ್ಲ, ಸ೦ಧಾನದ ಕೃಷ್ಣ ಕೌರವ ಎರಡು ಆಗಬಲ್ಲ, ಋತುಪರ್ಣನೂ ಆಗಬಲ್ಲ, ಬಾಹುಕನೂ ಆಗಬಲ್ಲ, ಸಮಗ್ರ ಭೀಷ್ಮದ ಮೂರೂ ಭೀಷ್ಮನಾಗಿ ವಿಭಿನ್ನವಾಗಿ ಅಭಿನಯಿಸಬಲ್ಲ ಸಮಕಾಲೀನ ಬೆರಳೆಣಿಕೆಯ ಕಲಾವಿದರಲ್ಲಿ ಯಾಜಿಯವರೂ ಒಬ್ಬರು ಎನ್ನುವುದನ್ನು ಪ್ರೇಕ್ಷಕರು ಒಪ್ಪಬಹುದಾದ ಸತ್ಯ. ಭೀಷ್ಮ ವಿಜಯದ ಭೀಷ್ಮ, ಧರ್ಮಾಂಗದ ದಿಗ್ವಿಜಯದ ಭರತ, ಶನೀಶ್ವರ ಮಹಾತ್ಮೆಯ ವಿಕ್ರಮಾದಿತ್ಯ, ಹೀಗೆ ಪಾತ್ರ ಯಾವುದೇ ಇರಲಿ ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಶಿಷ್ಟ ಕಲಾವಿದರಿವರು.

ಕೊಂಡದಕುಳಿ ರಾಮಚಂದ್ರ ಹೆಗಡೆ :

ಯಕ್ಷಗಾನದಲ್ಲಿ ಬರುವ ಪೌರಾಣಿಕ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವ ತುಂಬಿ ಆಧುನಿಕ ಪ್ರಸಂಗದಲ್ಲೂ ಹೊಸತನವನ್ನು ತುಂಬಿ ಬಡಾಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದರೆಂದು ಗುರುತಿಸಲ್ಪಡುವ ಕೊಂಡದಕುಳಿಯವರು ಸಿದ್ದಿ ಹಾಗೂ ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರು. ನಾಯಕ ಪ್ರತಿನಾಯಕ ಹಾಗೂ ಪುರುಷ ವೇಷಗಳಲ್ಲಿ ಸಮಾನ ಸಿದ್ದಿಯನ್ನು ಹೊಂದಿದ ಇವರು ಕೀಚಕ ವಧೆಯ ಕೀಚಕ, ವಲಲ, ರಾಮ, ರಾವಣ, ಗದಾಯುದ್ದದ ಕೌರವ, ಬೀಮ, ಕುಶಲವದ ರಾಮ, ಶತ್ರುಘ್ನ, ಕುಶ-ಲವ, ಸಮಗ್ರ ಭೀಷ್ಮದ ದೇವವ್ರತ, ಭೀಷ್ಮ, ಪರಶುರಾಮ, ಪರ್ವದ ಭೀಷ್ಮ ಹೀಗೆ ಪರಸ್ಪರ ವಿರುದ್ದ ನಿಲುವಿನ ಪಾತ್ರಗಳಿಗೂ ಜೀವತುಂಬಬಲ್ಲ ಅಪರೂಪದ ಕಲಾವಿದರು. ಅವರ ಸುಂದರವಾದ ಶರೀರ ಆಳಂಗ ಪುಂಡುವೇಷದಿಂದ ಎರಡನೇ ವೇಷದವರೆಗೆ ಯಾವ ವೇಷಕ್ಕೂ ಹೊಂದುವಂತಾದ್ದು.

ಉತ್ತರ ಕನ್ನಡ ಜಿಲ್ಲೆಯ ಕೊಂಡದಕುಳಿ ಎಂಬಲ್ಲಿ ಸುಸಂಸ್ಕ್ರುತ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ 1961ರಲ್ಲಿ ಗಣೇಶ ಹೆಗಡೆ ಮತ್ತು ಕಮಲ ದಂಪತಿಗಳ ಮಗನಾಗಿ ಜನಿಸಿದ ಹೆಗಡೆಯವರು ಪ್ರೌಢ ಶಿಕ್ಷಣವನ್ನು ಪೂರೈಸಿ ನಿಜಾರ್ಥದಲ್ಲಿ ಪ್ರೌಢರಾಗಿ ಇಡಗುಂಜಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ಗುಂಡಬಾಳ, ಅಮೃತೇಶ್ವರಿ, ಬಚ್ಚಗಾರು ಮೇಳದಲ್ಲಿ ತಿರುಗಾಟ ಮಾಡಿ ಕಾಳಿಂಗ ನಾವಡರ ಒಡನಾಡಿಯಾಗಿ 19 ವರ್ಷ ತಿರುಗಾಟ ಮಾಡಿ ಉತ್ತುಂಗಕ್ಕೆ ಏರಿದರು. ನಾರ್ಣಪ್ಪ ಉಪ್ಪೂರು, ನೆಬ್ಬೂರು ನಾರಾಯಣ ಭಾಗವತ, ಕಾಳಿಂಗ ನಾವಡರೊಂದಿಗೆ ತಿರುಗಾಟ ಮಾಡಿ ಕಾರ್ತವೀರ್ಯಾರ್ಜುನ, ಮಾಗಧ, ಕೃಷ್ಣ , ಬೀಷ್ಮ ಮುಂತಾದ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸದ್ಯ ತನ್ನದೇ ಸಂಸ್ಥೆ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಮೂಲಕ ಪ್ರದರ್ಶನ ನೀಡುತಿದ್ದ ಇವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ.

ಬಡಗು ತಿಟ್ಟಿನ ಈ ಇಬ್ಬರು ಮೇರು ಕಲಾವಿದರಿಗೆ ಯಕ್ಷ ರತ್ನ ಪ್ರಶಸ್ತಿ ಸ೦ದಿರುವುದು ಯೋಗ್ಯವಾಗಿದೆ.









ಮಾರ್ಚ್ 16, 2016

ಹೆರಂಜಾಲು ಯಕ್ಷ ತಿರುಗಾಟದ 30ರ ಸಂಭ್ರಮ - 2016

ಕುಂದಾಪುರ : ದಿವಂಗತ ವೆಂಕಟರಮಣ ಗಾಣಿಗರ ನಾಮಾಂಕಿತ ಪ್ರಶಸ್ತಿ ಪುರಸ್ಕಾರ ಹಾಗೂ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರಯಾದಿಯಲ್ಲಿ ಸಕಲ ಸಮುದಾಯದ ದಿಗ್ಗಜ ದಕ್ಷಿಣೋತ್ತರ ಕನ್ನಡ ಜಿಲ್ಲೆ ಮುಖ್ಯವಾಗಿ ಉಡುಪಿ ಜಿಲ್ಲೆಯ ಕಲಾವಿದರನ್ನೊಳಗೊಂಡು ಪೌರಾಣಿಕ ಪ್ರಸಂಗಕಲಾಕುಸುಮ ಯಕ್ಷಗಾನ ಪ್ರದರ್ಶನ ಕುಂದಾಪುರ ಗಾಂಧಿ ಮೈದಾನದಲ್ಲಿ ಎಪ್ರಿಲ್ 16ರ೦ದು ಸಂಪನ್ನಗೊಳ್ಳಲಿದೆ.

ಹೆರಂಜಾಲು ಗೋಪಾಲ ಗಾಣಿಗ
ಯಕ್ಷಗಾನ ಪರಂಪರೆಯಲ್ಲಿ ಸಮಾನವನ್ನು ಕಂಡ ನಾಲ್ಕನೆ ತಲೆಮಾರಿನ ಹೆರಂಜಾಲು ಪರಂಪರೆಯ ಕೊಂಡಿ "ಅಜ್ಜ ಗಣಪಯ್ಯ ಗಾಣಿಗ. ತಂದೆ ವೆಂಕಟರಮಣ ಗಾಣಿಗ. ಇವರ ಮಗ ನಿವೃತ್ತಿಯೆಡೆಗೆ ಕಾಲಿಡುತ್ತಿರುವ ಗೋಪಾಲ ಗಾಣಿಗ. ಮುಂದಿನ ಕುಡಿ ಪಲ್ಲವ ಗಾಣಿಗ." ಇವರ ತಲೆಮಾರಿನ ಪರಂಪರೆಯಿಂದ ಯಕ್ಷಗಾನಕ್ಕೆ ಸಂದ ಕೊಡುಗೆ ಹಾಗು ಸಲ್ಲುತ್ತಿರುವುದು ಶ್ಲಾಘನೀಯ. ಇವರು ಯಕ್ಷಗಾನದಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎನ್ನುವ ಹೆಮ್ಮೆ ಬಿಟ್ಟರೆ.. ಇವರು ಯಕ್ಷಗಾನದಿಂದ ಪಡೆದುಕೊಂಡದ್ದಕ್ಕಿಂತ ಇವರಿಂದ ಯಕ್ಷಗಾನಕ್ಕಾದ ಕೊಡುಗೆ ಪ್ರತಿಯೊಬ್ಬ ಯಕ್ಷಾಭಿಮಾನಿಗಳು ಹೆರಂಜಾಲು ಪರಂಪರೆಯ ಮೇಲೆ ಅಭಿಮಾನ ಪಡುವಂತದ್ದು. ಅದಕ್ಕೆ ಹೆರಂಜಾಲು ಶಿಶ್ಯವೃಂದವೇ ಸಾಕ್ಷಿ ಅನ್ನಬಹುದು.

ಯಕ್ಷಗಾನದ ಹೆಮ್ಮೆಯ ಶ್ರೇಷ್ಠ ಭಾಗವತರು ಎನಿಸಿರುವ ಹೆರಂಜಾಲು ಗೋಪಾಲ ಗಾಣಿಗರು 1978-79ರಲ್ಲಿ ಡಾ.ಶಿವರಾಮ್ ಕಾರಂತ ಇವರ ನೇತೃತ್ವದ ಯಕ್ಷಗಾನ ಕೇಂದ್ರ ಉಡುಪಿಯಲ್ಲಿ ಗುರುತ್ರಯರಾದ ನೀಲಾವರ ರಾಮಕೃಷ್ಣ ಮಯ್ಯ. ವೆಂಕಟರಮಣ ಗಾಣಿಗ. ಕೋಟ ಮಹಾಬಲ ಕಾರಂತ ಇವರುಗಳ ಗುರುತ್ವದಲ್ಲಿ 5 ವರ್ಷಗಳ ಕಾಲ ಯಕ್ಷಗಾನದ ಎಲ್ಲಾ ಪ್ರಕಾರಗಳನ್ನು ಅಭ್ಯಾಸಿಸಿ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದರು.

1983ರಲ್ಲಿ ಶ್ರೀ ಮಾರಣಕಟ್ಟೆ ಮೇಳದಲ್ಲಿ ಸಹ ಭಾಗವತರಾಗಿ ಸೇವೆ ಸಲ್ಲಿಸಿದ ಗಾಣಿಗರು ಕಮಲಶಿಲೆ, ಮಂದಾರ್ತಿ, ಸಾಲಿಗ್ರಾಮ, ಶಿರಸಿ, ಪ್ರಸ್ತುತ ಶ್ರೀ ಹಲವು ಮಕ್ಕಳ ತಾಯಿ ಅಮೃತೇಶ್ವರಿ ಮೇಳದ ಶ್ರೀ ಆನಂದ ಸಿ. ಕುಂದರ್ ಇವರ ಧೀಮಂತ ನಿರ್ದೇಶನದಲ್ಲಿ ಸೇವೆ ಸಲ್ಲಿಸುತ್ತಿರುವ ಗಾಣಿಗರು ಬಡಗು ತಿಟ್ಟಿನ ಶ್ರೇಷ್ಠ ಭಾಗವತರು ಎನಿಸಿದ್ದಾರೆ.(ಪ್ರಸ್ತುತ ಅಪಘಾತ ಸಂಭವಿಸಿದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.)

ಗೋಪಾಲ ಗಾಣಿಗರ ತೀರ್ಥರೂಪರ ಆಶಸೌದ "ಯಕ್ಷಗಾನ ಕೇಂದ್ರ" 1963ರಿಂದ ತೊಡಗಿದ "ಹೆರಂಜಾಲು ಯಕ್ಷಗಾನ ಪ್ರತಿಷ್ಠಾನ (ರಿ) ಯಕ್ಷಬಳಗ ನಾಗೂರು" ಇದರ ಕಾರ್ಯದರ್ಶಿ ಶ್ರೀನಿವಾಸ ದೇವಾಡಿಗ. ಖಜಾಂಚಿ ಶ್ರೀ ಸುಬ್ರಹ್ಮಣ್ಯ ನಾವುಡ. ಸರ್ವಸದಸ್ಯರ ತೀರ್ಮಾನದಂತೆ 2008ರಲ್ಲಿ ಶಿಲನ್ಯಾಸ ಮಾಡಿ 2014-15ರ ನವೆಂಬರ್ 9 ರಂದು ಉದ್ಘಾಟನೆ ಗೊಂಡಿತು.

ಈ ಯಕ್ಷಗಾನ ತರಬೇತಿ ಕೇಂದ್ರದಿಂದ ಉಚಿತವಾಗಿ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದ್ದು ಆ ಪ್ರಯುಕ್ತ ಯಕ್ಷಗಾನ ಕೇಂದ್ರದಲ್ಲಿ ನಿರಂತರ ತರಬೇತಿ ನೀಡುವ ಸದುದ್ದೇಶದಿಂದ ವೃತ್ತಿ ರಂಗಕ್ಕೆ ವಿದಾಯ ಹಾಡುವುದು ಗಾಣಿಗರಿಗೆ ಅನಿವಾರ್ಯವಾಗಿದೆ.

ಇಂಥಾ ಮಹತ್ವದ ಘಟ್ಟದ ವಿಶೇಷ ಸಂದರ್ಭದಲ್ಲಿ ಹಲವು ಸದುದ್ದೇಶ ಹೊತ್ತು ಕಾರ್ಯಕ್ರಮ ಆಯೋಜಿಸಿ ಕಾರ್ಯಕ್ರಮದಿಂದ ಸಂಗ್ರಹವಾದ ಕ್ಷೇಮ ನಿಧಿಯನ್ನು ಯಕ್ಷಗಾನ ಕಲಾವಿದರಿಗೆ ಯಾವ ಶಾಶ್ವತವಾದ ಬದುಕು ಭದ್ರತೆ ಇಲ್ಲದಕಾರಣ ವೈಯಕ್ತಿಕ ಜೀವನ ಭದ್ರತೆಗಾಗಿ ಹಾಗೂ ಗೋಪಾಲ ಗಾಣಿಗರ ತಂದೆ ತೀರ್ಥರೂಪರ ಸಂಸ್ಮರಣಾ ಕಾರ್ಯಕ್ರಮ ಪ್ರಶಸ್ತಿ ಪುರಾಸ್ಕಾರಗಳಿಗೆ ಹಾಗೂ ಯಕ್ಷಗಾನ ಶಾಲೆಯ ಅಧ್ಯಾಪಕರಿಗೆ ಆಸನದ ವ್ಯವಸ್ಥೆಗೆ ವಿನಿಯೋಗಿಸಲಾಗುವುದು.

ಈ ಒಂದು ಸದುದ್ದೇಶದಿಂದ ಹಮ್ಮಿಕೊಂಡ ಅರ್ಥಪೂರ್ಣ ಕಾರ್ಯಕ್ರಮ ಗೋಪಾಲಗಾಣಿಗರ ನೇತೃತ್ವದಲ್ಲಿ ನಡೆಯಬೇಕಿತ್ತು. ಆದರೆ ಗಾಣಿಗರಿಗೆ ರಸ್ತೆ ಅಪಘಾತ ಸಂಭವಿಸಿ ಕಾಲಿಗೆ ತೀವ್ರತರ ಪೆಟ್ಟು ಬಿದ್ದಕಾರಣ ಗೋಪಾಲ ಗಾಣಿಗರ ಮಗ ಪಲ್ಲವ ಗಾಣಿಗ ಹಾಗೂ ಅವರ ಶಿಶ್ಯವೃಂದ ಮತ್ತು ಅವರ ಅಭಿಮಾನಿಗಳೂ ನಡೆಸಿಕೊಡಲಿದ್ದು... ಈ ಕಾರ್ಯಕ್ರಮಕ್ಕೆ ಕಲಾಪೋಷಕರು ಸಕಲ ಸಮಾಜದ ಅಭಿಮಾನಿ ಬಂಧುಗಳು ಯಕ್ಷಗಾನಾಭಿಮಾನಿಗಳು ಪಾಲ್ಗೊಂಡು ಕ್ಷೇಮ ನಿಧಿಯ ಸಂಗ್ರಹಕ್ಕೆ ಹೆಚ್ಚಿನ ನೆರವು ನೀಡುವಿರೆಂದು ನಂಬಿ ಗೋಪಾಲ ಗಾಣಿಗರು ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ.

"ಅಂದು ನಡೆಯುವ ಯಕ್ಷಗಾನ ಕಾರ್ಯಕ್ರಮದ ವಿಶೇಷ ಆಕರ್ಷಣೆಗಳು ಇಂತಿವೆ"

ಪ್ರಸಂಗ "ಮಹಾಭಾರತ"

*ಕಿಂಢಮಶಾಪ. *ಬಕಾಸುರ ವಧೆ. *ಅಕ್ಷಯಾಂಬರ. *ಭೀಷ್ಮಪರ್ವ. *ಚಕ್ರವ್ಯೂಹ. *ಕರ್ಣಾವಸಾನ. *ರಕ್ತರಾತ್ರಿ.

ಅತಿಥಿಯಾಗಿ: ಸದಾಶಿವ ಅಮೀನ್. ನಗರ ಸುಬ್ರಹ್ಮಣ್ಯ ಆಚಾರ್ಯ. ರವೀಂದ್ರ ಶೆಟ್ಟಿ ಹೊಸಂಗಡಿ. ಹೆಬ್ರಿಗಣೇಶ. ಸುಬ್ರಹ್ಮಣ್ಯ ನಾವುಡ. ರಾಘವೇಂದ್ರ ಹೆಗಡೆ. ಸುಜನ್ ಹಾಲಾಡಿ. ಅಕ್ಷಯ ಹಾಲಾಡಿ. ಪಲ್ಲವ ಗಾಣಿಗ. ಅಶ್ವಿನಿ ಕೊಂಡದಕುಳಿ.

ಬಳ್ಕೋರು ಕೃಷ್ಣಯಾಜಿ. ಐರೋಡಿ ಗೋವಿಂದಪ್ಪ. ಕೋಡಿವಿಶ್ವನಾಥ. ಜಲವಳ್ಳಿ ವಿದ್ಯಾಧರ.ಕೋಟ ಸುರೇಶ. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಮಾಧವ ನಾಗೂರು. ಕಿನ್ನಿಗೋಳಿ ಮುಖ್ಯಪ್ರಾಣ. ಕಡಬಾ ಪೂವಪ್ಪ. ಕುಮಾರ ಅಭಿಷೇಕ್.

ವಿಶೇಷತೆ:

*ಯಲಗುಪ್ಪ-ಗೋಪಾಲಗಾಣಿಗರ ದ್ವಂದ್ವ ಭಾಗವತಿಕೆ.(ಗಾಣಿಗರ ಆರೋಗ್ಯ ಸುದಾರಿಸಿದಲ್ಲಿ.)
*ಮಯ್ಯ-ಅಮೀನರ ದ್ವಂದ್ವ ಭಾಗವತಿಕೆ.
*ಹಿಲ್ಲೂರು-ನಗರ ಅವರ ದ್ವಂದ್ವ ಭಾಗವತಿಕೆ.
*ಹೊಸಂಗಡಿ-ಹೆಬ್ರಿಯವರ ದ್ವಂದ್ವ ಭಾಗವತಿಕೆ.
*ಅಂಕೋಲ-ಸುಬ್ರಮಣ್ಯ ನಾವುಡ ಅವರ ದ್ವಂದ್ವ ಭಾಗವತಿಕೆ
*ಪಲ್ಲವ-ಅಶ್ವಿನಿ ಕೊಂಡದಕುಳಿಯವರ ದ್ವಂದ್ವ ಭಾಗವತಿಕೆ
*ಬಳ್ಕೂರು-ಅವರ ಮೊಮ್ಮಗ ಕುಮಾರ ಅಭಿಷೇಕ ಅಜ್ಜ ಮೊಮ್ಮಗನ ಜೋಡಿವೇಶ.
*ರಕ್ತರಾತ್ರಿ ಪ್ರಸಂಗ ದೊಂದಿ ಬೆಳಕಿನಲ್ಲಿ.. ಸ್ತ್ರೀ ವೇಷಧಾರಿಗಳಿಂದ..
*ಯಲಗುಪ್ಪ-ಕೃಷ್ಣ, ಶಶಿಕಾಂತ ಶೆಟ್ರ-ಭೀಮ, ಮಾಧವ ನಾಗೂರು-ಕೌರವ.
*19ವರ್ಷದ ಸುಜನ್ ಮತ್ತು ಅಕ್ಷಯ ಇವರಿಂದ ಚಂಡೆಮದ್ದಳೆವಾದನ.
*ಚಂಡೆಯ ಗಂಡುಗಲಿ ಕೋಟ ಶಿವಾನಂದ ಇವರಿಂದ ಏಳು ಚಂಡೆ ಝೇಂಕಾರ.
*ಪರಮೇಶ್ವರ್ ಭಂಡಾರಿ ಇವರಿಂದ ಎಂಟು ಮದ್ದಳೆವಾದನ.
*ಇನ್ನೂ... ಹಲವು ವಿಶೇಷ ಆಕರ್ಷಣೆಗಳು.......
ಇಂಥಾ ಸುಂದರ ಅರ್ಥಪೂರ್ಣ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆದರದಿಂದ ಆಮಂತ್ರಿಸುವವರು ಪಲ್ಲವ ಗಾಣಿಗ ಹೆರಂಜಾಲು.

ನಿರ್ಮಾಣ ಹ೦ತದಲ್ಲಿ ಹೆರಂಜಾಲು ಯಕ್ಷಗಾನ ಕೇಂದ್ರ



ಕೃಪೆ : facebook




ಮಾರ್ಚ್ 16, 2016

ಯಕ್ಷಗಾನ ಅಕಾಡೆಮಿ ನಿರ್ಧಾರಕ್ಕೆ ಬೇಸರ : ಪಿ.ಕಿಶನ್‌ ಹೆಗ್ಡೆ

ಬೆಂಗಳೂರು :
ಕಾರ್ಯಕ್ರಮದಲ್ಲಿ ಮಾಜಿ ಶಾಸಕ, ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್‌ ಮತ್ತು ಸುಶೀಲ ದಂಪತಿಗೆ ‘ಕರ್ನೂರು ಪ್ರಶಸ್ತಿ 2016’ ಪ್ರದಾನ ಮಾಡಲಾಯಿತು. (ಎಡದಿಂದ) ಕೆ.ಪ್ರಕಾಶ್‌ ಶೆಟ್ಟಿ, ಪಿ.ಕಿಶನ್‌ ಹೆಗ್ಡೆ, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ತಾರಾ ಅನೂರಾಧ, ನೇತ್ರತಜ್ಞ ಡಾ.ಕೆ.ಭುಜಂಗಶೆಟ್ಟಿ, ಜ್ಯೋತಿಷಿ ಕಬ್ಬಿಯಾಡಿ ಜಯರಾಮ ಆಚಾರ್ಯ ಮತ್ತು ನಟ ಸುರೇಶ್‌ ರೈ ಚಿತ್ರದಲ್ಲಿದ್ದಾರೆ. -ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಯಕ್ಷಗಾನ ಕಲಾವಿದರಿಗೆ ನೀಡಬೇಕಾದ ‘ಪಾರ್ತಿಸುಬ್ಬ’ ಪ್ರಶಸ್ತಿಯನ್ನು ಬೊಂಬೆಯಾಟದ ಕಲಾವಿದರಿಗೆ ನೀಡಲಾಗುತ್ತಿದೆ’ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ.ಕಿಶನ್‌ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಯಕ್ಷಗಾನ ಸಂಘಟಕ ದಿವಂಗತ ಕರ್ನೂರು ಕೊರಗಪ್ಪ ರೈ ಅವರ ಸ್ಮರಣಾರ್ಥ ಕರ್ನಾಟಕ ಕಲಾ ಸಂಪದ ಸಂಸ್ಥೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕರ್ನೂರು ಒಂದು ನೆನಪು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತ್ಯೇಕ ಯಕ್ಷಗಾನ ಮಂಡಳಿರಚಿಸಬೇಕೆಂದು ನಾವು ಅನೇಕ ದಿನಗಳಿಂದ ಹೋರಾಡುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಫಲ ಸಿಕ್ಕಿಲ್ಲ. ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಹೋರಾಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ ಮಾತನಾಡಿ, ‘ರಂಗಭೂಮಿಯಿಂದ ಬಂದವರೇ ನಿಜವಾದ ಕಲಾವಿದರು. ಸಿನಿಮಾಗಳಲ್ಲಿ ನಟರು ಮಾಡಿದ ತಪ್ಪುಗಳನ್ನು ತೆಗೆದು ಹಾಕಿ, ಒಪ್ಪಗೊಳಿಸಿ ತೋರಿಸಲಾಗುತ್ತದೆ. ಆದರೆ ರಂಗಭೂಮಿಯಲ್ಲಿ ಕಲಾವಿದರು ಹಾಗೆಲ್ಲ ಮಾಡಲು ಸಾಧ್ಯವಿಲ್ಲ. ನಿಜವಾದ ಕಲಾವಿದರನ್ನು ಗುರುತಿಸಿ ಗೌರವಿಸುವ ಈ ಕಾರ್ಯ ಜಿಲ್ಲಾಮಟ್ಟದಲ್ಲಿಯೂ ನಡೆಯಲಿ’ ಎಂದು ಹೇಳಿದರು.

ಎಂಆರ್‌ಜಿ ಸಮೂಹದ ಅಧ್ಯಕ್ಷ ಕೆ.ಪ್ರಕಾಶ್‌ ಶೆಟ್ಟಿ ಮಾತನಾಡಿ, ‘ಶಾಲಾ, ಕಾಲೇಜುಗಳು ಮಕ್ಕಳಿಗೆ ಶಿಕ್ಷಣ ಕೊಡಬಹುದೇ ವಿನಾ ಸಂಸ್ಕಾರವನ್ನಲ್ಲ. ಅದು ಪೋಷಕರಿಂದಲೇ ಬರಬೇಕಾದದ್ದು. ಆದರೆ ಇವತ್ತು ಎಷ್ಟೋ ಕುಟುಂಬಗಳಲ್ಲಿ ತಂದೆ–ಮಕ್ಕಳ ನಡುವೆ ಸಾಮರಸ್ಯವೇ ಇಲ್ಲವಾಗಿದೆ. ಉತ್ತಮ ಸಂಸ್ಕಾರವೇ ದೊರೆಯದ ಅನೇಕ ಪದವೀಧರರು ಉಗ್ರರಾಗಿ ಸಮಾಜ ಕಂಟಕರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ತಮ್ಮ ಇಡೀ ಜೀವನವನ್ನು ಯಕ್ಷಗಾನಕ್ಕಾಗಿ ಮುಡುಪಿಟ್ಟ ಕರ್ನೂರು ಕೊರಗಪ್ಪ ರೈ ಅವರು ಭರತನಾಟ್ಯವನ್ನು ಯಕ್ಷಗಾನಕ್ಕೆ ಅಳವಡಿಸಿ, ಪರಿಶುದ್ಧ ನೃತ್ಯಗಾರಿಕೆ ಪರಿಚಯಿಸಿದರು. ಅನೇಕ ಕಲಾವಿದರನ್ನು ಬೆಳಕಿಗೆ ತಂದರು’ ಎಂದರು.

‘ಕದ್ರಿ ಮೇಳವನ್ನು ಪುನರುಜ್ಜೀವನಗೊಳಿಸಿ ನಡೆಸುವುದಕ್ಕಾಗಿ ತಮ್ಮ ಸ್ವಂತ ಮನೆ, ತೋಟ ಕಳೆದುಕೊಂಡರೂ ಕೊರಗದ ಕೊರಗಪ್ಪ ರೈ ಅವರು ಅನಾರೋಗ್ಯದಿಂದಾಗಿ ಕೊನೆಯ ದಿನಗಳಲ್ಲಿ ತುಂಬಾ ನೊಂದುಕೊಂಡರು’ ಎಂದರು.

ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಎಂಟು ಕಲಾವಿದರಿಗೆ ‘ಕರ್ನಾಟಕ ಕಲಾಸಂಪದ ಪ್ರಶಸ್ತಿ 2016’ ನೀಡಿ ಸನ್ಮಾನಿಸಲಾಯಿತು. ‘ಬಲೆ ತೆಲಿಪುಲೆ’ ಎಂಬ ಹಾಸ್ಯ ಕಾರ್ಯಕ್ರಮ ಮತ್ತು ‘ಶಾಂಭವಿ ವಿಜಯ’ ಎಂಬ ಪೌರಾಣಿಕ ಕನ್ನಡ ಯಕ್ಷಗಾನ ಪ್ರದರ್ಶನಗೊಂಡವು.



ಕೃಪೆ : prajavani




ಫೆಬ್ರವರಿ 27, 2016

ಯಕ್ಷಗಾನದ ಸ್ತ್ರೀ ಪಾತ್ರಧಾರಿ ಶಶಿಧರ್ ಪಡುಕೋಣೆ ಇನ್ನಿಲ್ಲ

ಕುಂದಾಪುರ :
ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿ ಶಶಿಧರ ಪಡುಕೋಣೆ ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳ ಹಿಂದ ಅಸೌಖ್ಯರಾಗಿದ್ದ ಶಶಿಧರ್ ಅವರು ಧಾರಾವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುಣಮುಖರಾಗಿದ್ದ ಅವರು ಮತ್ತೆ ಇಂದು ಅಸೌಖ್ಯರಾಗಿದ್ದರಿಂದ ಉಡುಪಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಧರ್ಮಸ್ಥಳ ಮೇಳದ ಎರಡನೇ ಸ್ತ್ರೀ ವೇಷಧಾರಿಯಾಗಿದ್ದ ಶಶಿಧರ್ ಲಾಲಿತ್ಯಪೂರ್ಣ ಹೆಜ್ಜೆಗಾರಿಕೆ ಸ್ವರಬಾರ ಅಭಿನಯ ಛಾತುರ್ಯದಿಂದ ಬ್ರಮರಕುಂತಳೆ ತಾರಾವಳಿ ಪದ್ಮಗಂದಿ ಮುಂತಾದ ಪಾತ್ರಗಳಿಗೆ ಅದ್ಭುತ ನ್ಯಾಯ ಒದಗಿಸಿದ ಕಲಾವಿದ. ಈ ಹಿಂದೆ ಪೇರ್ಡೂರು ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಶಶಿಧರ್ ಅವರ ಅಗಲುವಿಕೆ ಯಕ್ಷಾಭಿಮಾನಿಗಳನ್ನು ದಿಗ್ಬ್ರಾಂತರನ್ನಾಗಿಸಿದೆ. ಕೆಲವು ದಿನಗಳ ಹಿಂದಷ್ಟೆ ಕಣ್ಣಿಮನೆ ಅವರನ್ನು ಕಳೆದುಕೊಂಡಿದ್ದ ಯಕ್ಷಪ್ರಿಯರು ಈಗ ಮತ್ತೊಬ್ಬ ಉದಯೋನ್ಮಖ ಕಲಾವಿದನನ್ನು ಕಳೆದುಕೊಂಡಂತಾಗಿದೆ.



ಕೃಪೆ : www.kundapraa.com

ಚಿತ್ರಗಳ ಕೃಪೆ : ಕಿರಣ್ ವಿಟ್ಲ




ಮಾರ್ಚ್ 1, 2016

ಯಕ್ಷಗಾನಕ್ಕೆ ಬೆಳಕಿನ ವಿಕಾರ ರೂಪ: ಹೊಸ್ತೋಟ ಮಂಜುನಾಥ ಭಾಗವತ

ಸಿದ್ದಾಪುರ : ಜನರು ಕೇಳುತ್ತಿದ್ದಾರೆ ಎಂಬ ನೆಪದಿಂದ ಇಂದು ಯಕ್ಷಗಾನ ದೈಹಿಕ ಕಸರತ್ತಿನಂತಾಗಿದ್ದು, ಜೊತೆಯಲ್ಲಿ ಬೆಳಕಿನ ಕಸರತ್ತನ್ನು ಸೇರಿಸಿ ವಿಕಾರವಾಗುವಂತೆ ಮಾಡುತ್ತಿದ್ದಾರೆ ಎಂದು ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಬೇಸರ ವ್ಯಕ್ತಪಡಿಸಿದರು.

ಅವರು ಭಾನುವಾರ ಸಂಜೆ ಪಟ್ಟಣದ ಬಾಲಿಕೊಪ್ಪ ಶಾಲೆಯ ಸಭಾಭವನದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ, ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ, ಡಾ.ಟಿ.ದಯಾನಂದ ಪೆ ಮತ್ತು ಸತೀಶ ಪೆ ಯಕ್ಷಗಾನ ಕೇಂದ್ರ ಮಂಗಳೂರು, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿ.ಕಷ್ಣ ಭಂಡಾರಿ ಸೋಂದಾ ಇವರಿಂದ ರಚಿತಗೊಂಡ ಯಕ್ಷಗಾನ ಕೈಪಿಡಿಯ ಪುನರ್ಮುದ್ರಣ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಯಕ್ಷಗಾನಕ್ಕೆ ಒಂದು ಲಕ್ಷಣವಿದೆ. ಇದು ಅಪ್ಪಟ ಕಲೆಯಾಗಿದ್ದು, ಬೇರೆಯದರಿಂದ ಸಾಲ ಪಡೆಯುವ ಮೂಲಕ ಬೆಳೆಯಬೇಕಾದ ಕಲೆಯಲ್ಲ. ಈ ಕಲೆ ಸಂಗೀತ, ನಾಟ್ಯ, ಸಾಹಿತ್ಯಕ್ಕೆ ಮೂಲ ಪ್ರೇರಣೆಯಾಗಬಲ್ಲದು. ಯಕ್ಷಗಾನವೂ ಹೀಗಿರಬೇಕೆಂದು ಒಪ್ಪಿಕೊಂಡು ಸುಮಾರು 250 ವರ್ಷವಾಗಿರುವ ಸಾಧ್ಯತೆ ಇದ್ದು ಯಕ್ಷಗಾನವನ್ನು ಕೆಲವು ವರ್ಗಕ್ಕೆ ಸೀಮಿತಗೊಳಿಸದೆ ಪ್ರೇಕ್ಷಕರತ್ತ ಒಯ್ಯುವ ಕಾಲದಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

ಡಾ.ಶಿವರಾಮ ಕಾರಂತರು ಯಕ್ಷಗಾನದ ಬಗ್ಗೆ ಪುಸ್ತಕ ಬರೆಯುವ ಮೊದಲೇ ಉತ್ತರ ಕನ್ನಡ ನೆಲದ ಪ್ರತಿಭಾವಂತ ಕಷ್ಣ ಭಂಡಾರಿಯವರು ಈ ಪುಸ್ತಕವನ್ನು ರಚಿಸಿದ್ದು, ವಿದ್ಯೆ ಕೆಲವರ ಸೊತ್ತಾಗಿ,ಬಡತನದಲ್ಲಿ ದಿನಗಳನ್ನು ದೂಡುತ್ತಿದ್ದಾಗಲೂ ಯಕ್ಷಗಾನದ ಮೇಲಿನ ಪ್ರೇಮದಿಂದಾಗಿ ಇಂತಹ ಪುಸ್ತಕವನ್ನು ಪ್ರಕಟಿಸಿರುವ ಭಂಡಾರಿಯವರು ಅಭಿನಂದಾನಾರ್ಹರು ಎಂದು ಹೇಳಿದರು.

ಯಕ್ಷಗಾನ ಕಲೆಯು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಪ್ರಚಲಿತದಲ್ಲಿದ್ದರೂ ನಮ್ಮ ಜಿಲ್ಲೆಯಲ್ಲಿ ಇದರ ಕಲಿಸುವ ಕುರಿತು ಕೆಲಸವಾಗಿದೆ. ಹಲವು ಮಹನೀಯರು ಯಕ್ಷಗಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಈ ಯಕ್ಷಗಾನ ಕೆಪಿಡಿಯು ಯಕ್ಷಗಾನ ಕಲಿಯುವವರಿಗೆ ಮಾರ್ಗದರ್ಶಕವಾಗಿದೆ. ಇಲ್ಲಿ ಕೇವಲ ಮುಮ್ಮೇಳದ ಬಗ್ಗೆಯಷ್ಟೆ ಅಲ್ಲ, ಮದ್ದಳೆಯ ಬಗ್ಗೆಯೂ ವಿವರಣೆ ಇದೆ. ಯಾವ ರಾಗ ಎಷ್ಟು ಹಾಡಬೇಕು, ಹೇಗೆ ಹಾಡ ಬೇಕು, ಅದಕ್ಕೆ ಮದ್ದಳೆಯನ್ನು ಯಾವ ಪ್ರಮಾಣದಲ್ಲಿ ನುಡಿಸಬೇಕು ಎನ್ನುವ ಎಲ್ಲಾ ವಿವರಣೆಗಳೂ ಈ ಗ್ರಂಥದಲ್ಲಿ ಅಡಕವಾಗಿದೆ. ಇಂದು ಯಕ್ಷಗಾನದ ಸಂಗೀತದಲ್ಲಿ ಪ್ರಸಿದ್ಧರು ಎಂದು ಮೆರೆದಾಡುತ್ತಿರುವವರು ಈ ಪುಸ್ತಕವನ್ನು ಓದಲೇ ಬೇಕಾಗಿದ್ದು, ಅವರ ಸಂಗೀತ ಎಷ್ಟು ನಿರರ್ಥಕ ಎನ್ನುವುದನ್ನು ಮನಗಾಣಬೇಕಾಗಿದೆ ಎಂದು ಹೇಳಿದರು.

ಪ್ರಸಿದ್ಧ ಯಕ್ಷಗಾನ ಅರ್ಥದಾರಿ ಪ್ರೋ.ಎಂ.ಎ.ಹೆಗಡೆ ಶಿರಸಿ ಅಧ್ಯಕ್ಷತೆವಹಿಸಿದ್ದರು. ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸದಸ್ಯೆ ಡಾ.ವಿಜಯನಳಿನಿ ರಮೇಶ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಪುಸ್ತಕ ಪರಿಚಯ ಮಾಡಿದರು. ದಿವಾನ್ ಯಕ್ಷ ಸಮೂಹದ ಪಿ.ವಿ.ಹೆಗಡೆ ಹೊಸಗದ್ದೆ, ಡಾ.ವಿಠಲ ಭಂಡಾರಿ, ರಮೇಶ ಹಾರ್ಸಿಮನೆ ಮುಂತಾದವರು ಉಪಸ್ಥಿತರಿದ್ದರು.



ಕೃಪೆ : vijaykarnataka




ಫೆಬ್ರವರಿ 27, 2016

ಹಣದ ಶಕ್ತಿಗಿಂತ ಮನೋಶಕ್ತಿಯು ಎಲ್ಲರಿಗೂ ಅಗತ್ಯ : ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ

ಚೇರ್ಕಾಡಿ : ``ಜಗತ್ತಿನಲ್ಲಿರುವ ಪ್ರತೀ ಜೀವಜಂತುವಿನ ಹುಟ್ಟು ಅನೀರೀಕ್ಷಿತ ಮತ್ತು ಆಕಸ್ಮಿಕ, ಆದರೆ ಸಾವು ಮಾತ್ರ ನಿರೀಕ್ಷಿತ ಮತ್ತು ಅನಿವಾರ್ಯ. ಪ್ರತಿ ಒಬ್ಬ ಮನುಷ್ಯನಿಗೂ ನಾನು ಒಂದಲ್ಲ ಒಂದು ದಿನ ಸಾಯುತ್ತೇನೆ ಎಂದು ಗೊತ್ತೇ ಇರುತ್ತದೆ ಆದರೆ ಯಾವಾಗ ಎಂದು ಗೊತ್ತಿಲ್ಲದೆ ಇರುವುದು ದೇವ ರಹಸ್ಯ. ಹುಟ್ಟು ಸಾವಿನ ಮಧ್ಯೆ ನಾವು ಇತರರಿಗೆ ಸಹಾಯಕರಾಗಿ ಬದುಕಿ ಆದರ್ಶರಾಗ ಬೇಕು. ಉಪಕಾರ ಮಾಡುವ ಬುದ್ದಿ ಇದ್ದರೂ ಮಾಡುವ ಅನುಕೂಲತೆ ಎಲ್ಲರಲ್ಲೂ ಇರುದಿಲ್ಲ. ಆದರೆ ಅಪಕಾರ ಮಾಡದಿರಲು ಎಲ್ಲರಿಗೂ ಸಾದ್ಯ. ಜೀವನದಲ್ಲಿ ಬರುವ ಅನೇಕ ಕಷ್ಟ ಪರಂಪರೆಯನ್ನು ಎದುರಿಸುವ ಮನೋಶಕ್ತಿಯನ್ನು ಪ್ರತೀ‌ಒಬ್ಬರೂ ಬಳಸಿಕೊಳ್ಳಬೇಕು. ತೋಳಿನಶಕ್ತಿ , ಹಣದ ಶಕ್ತಿಗಿಂತ ಇಂತಹ ಮನೋಶಕ್ತಿಯ ಅಗತ್ಯ ಇಂದಿನ ಯಾಂತ್ರಿಕ ಯುಗದಲ್ಲಿ ಎಲ್ಲರಿಗೂ ಅಗತ್ಯ`` ಎಂದು ಮಣಿಪಾಲ ಎಂ, ಐ. ಟಿ ಕಾಲೇಜಿನ ಪ್ರಾದ್ಯಾಪಕ, ಯಕ್ಷಗಾನ ಚಿಂತಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.

ಅವರು ಅಕಾಲದಲ್ಲಿ ನಿಧನ ಹೊಂದಿದ ಶಿಕ್ಷಕ ಚೇರ್ಕಾಡಿ ಅನಿಲ್ ಕುಮಾರ ಶೆಟ್ಟರ ಪ್ರಥಮ ವರ್ಷದ ಸಂಸ್ಮರಣೆಯಂದು ಸಂಸ್ಮರಣಾ ಭಾಷಣ ಮಾಡಿದರು. ಹೈಸ್ಕೂಲ್ ಶಿಕ್ಷಕರಾದ ಅನಿಲ್ ಕುಮಾರ ಶೆಟ್ಟರು ಆದರ್ಶ ಅಧ್ಯಾಪಕರಾಗಿ ಯಕ್ಷಗಾನ ಕಲಾಭಿಮಾನಿಯಾಗಿ ಬಹುಬೇಗ ನಮ್ಮನ್ನಗಲಿದರು ಅವರ ಅಗಲುವಿಕೆಯ ನೋವನ್ನು ಸಹಿಸುವ ಮನೋಶಕ್ತಿ ಅವರ ಕುಟುಂಬಕ್ಕೆ ಲಭಿಸಲಿ ಎಂದರು. ಹಿರಿಯ ಸಮಾಜ ಸೇವಕ ಕುಂಜಾಲು ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ವರ್ಷದ ಸಂಸ್ಮರಣಾ ಪ್ರಶಸ್ತಿಯನ್ನು ಮಂದಾರ್ತಿ ಮೇಳದ ಹಿರಿಯ ಕಲಾವಿದರಾದ ಆಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ರೂ 10000/- ಸಹಿತ ಪ್ರದಾನ ಮಾಡಲಾಯಿತು. ಸರ್ಫ಼ು ಸದಾನಂದ ಪಾಟೀಲ್ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ವಿಜಯ ಹೆಗ್ಡೆ, ಚೇರ್ಕಾಡಿ ಪಂಚಾಯತ್ ಅದ್ಯಕ್ಷ ಹರೀಶ ಹೆಗ್ಡೆ, ಸುದರ್ಶನ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ಹುಬ್ಬಳ್ಳಿ ಶಾಂಡಿಲ್ಯ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ನಿತ್ಯಾನಂದ ಸ್ವಾಮೀಜಿ ದಿವ್ಯ ಸಾನ್ನೀದ್ಯ ವಹಿಸಿದ್ದರು. ಅನಿಲ್ ಕುಮಾರ್ ಶೆಟ್ಟಿಯವರ ತಂದೆ ಕೊರ್ಗು ಶೆಟ್ತಿ ಜಯರಾಮ ಶೆಟ್ಟಿ, ಡಾ/ ಬಾಲಕ್ರಷ್ಣ ಶೆಟ್ಟಿ, ಉಮೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ. ಮಂಜುನಾಥ ನಾಯ್ಕ್ ಸ್ವಾಗತಿಸಿ ಶ್ರೀಕಾಂತ ಸಾಮಂತ್ ನಿರೂಪಿಸಿದರು. ಬಳಿಕ ಖ್ಯಾತ ಕಲಾವಿದರಿಂದ ಜಾಂಬವತಿ ಕಲ್ಯಾಣ ತಾಳಮದ್ದಳೆ ಕರ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟ ನೆರವೇರಿತು.








ಫೆಬ್ರವರಿ 27, 2016

ಶಂಭೂರಿನಲ್ಲಿ ಬೊಂಡಾಲ ಪ್ರಶಸ್ತಿ ಪ್ರದಾನ

ಮಂಗಳೂರು : ಯಕ್ಷಗಾನ ಒಂದು ಪಾರಂಪರಿಕ ಕಲೆ. ಹಿಂದಿನ ಮೌಲ್ಯ ಗಳನ್ನು ಮುಂದಿನ ತಲೆಮಾರಿಗೆ ತಲು ಪಿಸುವುದರೊಂದಿಗೆ ಈ ಕಲೆಯ ಮೂಲಕ ಹಿರಿಯರನ್ನು ಸ್ಮರಿಸಿಕೊಳ್ಳುವ ಕಾರ್ಯ ಆಗಬೇಕಿದೆ. ಇದರಿಂದ ಪರಂಪರೆ ಉಳಿಯುವುದಲ್ಲದೆ, ಯುವ ಜನಾಂಗಕ್ಕೆ ಯಕ್ಷಗಾನದ ಬಗ್ಗೆ ಗೌರವ ಮೂಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಬಂಟ್ವಾಳ ತಾಲೂಕು ಶಂಭೂರಿನಲ್ಲಿ ಜರುಗಿದ ಕಟೀಲು ಶ್ರೀದುರ್ಗಾಪರಮೇ ಶ್ವರಿ ದಶಾವತಾರ ಮಂಡಳಿಯ ಬಯಲಾಟದ ವೇದಿಕೆಯಲ್ಲಿ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2015-16 ನೇ ಸಾಲಿನ ``ಬೊಂಡಾಲ ಪ್ರಶಸ್ತಿ`` ಪ್ರದಾನ ಮಾಡಿ ಅವರು ಮಾತನಾಡಿದರು.

ಕಟೀಲು ಕ್ಷೇತ್ರದ ಅರ್ಚಕ ಕಮಲಾ ದೇವಿ ಪ್ರಸಾದ ಆಸ್ರಣ್ಣ ಆಶೀರ್ವಚನ ನೀಡಿದರು. ಯಕ್ಷಗಾನ ಭಾಗವತ ಹಾಗೂ ಪ್ರಸಂಗಕರ್ತ ಕುಬಣೂರು ಶ್ರೀಧರ ರಾವ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವೇಷಧಾರಿ ಸಂಪಾಜೆ ಶೀನಪ್ಪ ರೈ ಅವರಿಗೆ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟಿ ಅವರ ಹೆಸರಿನಲ್ಲಿ ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಿತಿಯ ಪ್ರಧಾನ ಸಲಹೆಗಾರ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ಕೆ ಲಕ್ಷ್ಮೀ ನಾರಾಯಣ ರೈ ಹರೇಕಳ ಸಮ್ಮಾನ ಪತ್ರ ವಾಚಿಸಿದರು.

ನಿವೃತ್ತ ಶಿಕ್ಷಕ ನಾಟಿ ಕೃಷ್ಣ ರಾಜ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿ ದರು. ಶ್ರೀನಿವಾಸ ಪೂಜಾರಿ, ಬೊಂಡಾಲ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಬೊಂಡಾಲ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಮತ್ತು ಸಂಸ್ಮರಣಾ ಸಮಿತಿ ಸಂಚಾ ಲಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. . ಬೊಂಡಾಲ ಸೀತಾ ರಾಮ ಶೆಟ್ಟಿ ವಂದಿಸಿದರು. ಬಳಿಕ ಕಟೀಲು ಮೇಳದವರಿಂದ 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ಜರುಗಿತು.

ಕೃಪೆ : vijaykarnataka




ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ