ಹಿ೦ದಿನ 10 ಸುದ್ದಿಗಳು ಮು೦ದಿನ 10 ಸುದ್ದಿಗಳು
ಜುಲೈ 2 , 2016
|
ಬೆಂಗಳೂರು ಯಕ್ಷಪ್ರಿಯರಿಗೆ 5 ದಿನ ಯಕ್ಷ ರಸಗವಳ
ಬೆಂಗಳೂರು :
ಯಕ್ಷಗಾನ ಪ್ರಿಯರು ಈ ಮಳೆಗಾಲದಲ್ಲಿ ಯಾವ ಕಡೆ ಹೋಗೋದು ಅಂತ ಗೊತ್ತಾಗದೇ ಒದ್ದಾಡುವಂಥ ಪರಿಸ್ಥಿತಿ ಈಗ. ಅಷ್ಟೊಂದು ಯಕ್ಷಗಾನ ಪ್ರಸಂಗಗಳ ಮಧ್ಯೆ ಇಲ್ಲೊಂದು ವಿಶೇಷ ಯಕ್ಷಗಾನ ಪ್ರದರ್ಶನ ನಿಮಗಾಗಿ ಕಾದಿದೆ. ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಗಳು, ವಿಚಾರ ಸಂಕಿರಣಗಳೆಲ್ಲಾ ಇವೆ.
ಮೊದಲ ದಿನ
ಜು. 6ಕ್ಕೆ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತದೆ. ರಾತ್ರಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ತಂಡದಿಂದ "ಮೋಹಿನಿ ಭಸ್ಮಾಸುರ' ಪ್ರಸಂಗ ನಡೆಯಲಿದೆ. ಅದೇ ದಿನ ಭೀಷ್ಮ ಪ್ರತಿಜ್ಞೆ, ಭೀಷ್ಮ ವಿಜಯ ಪ್ರಸಂಗಗಳು ಜರುಗಲಿವೆ. ಇದರಲ್ಲಿ ಭೀಷ್ಮನಾಗಿ ಬಳ್ಕೂರು ಕೃಷ್ಣಯಾಜಿ ಅವರು ಮಿಂಚಲಿದ್ದಾರೆ. ಮಧ್ಯರಾತ್ರಿ 2.30ಕ್ಕೆ ಪೆರ್ಡೂರು ಮೇಳದಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಲಿದೆ.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ
ಯಾವಾಗ?: ಜು. 6, ಬುಧವಾರ, ಸಂಜೆ 6ಕ್ಕೆ ಪ್ರಾರಂಭ
ಪ್ರವೇಶ: ಉಚಿತ
ಎರಡನೇ ದಿನ
ಯಕ್ಷಗಾನ ಮತ್ತು ರವೀಂದ್ರ ಕಲಾಕ್ಷೇತ್ರದ ಒಡನಾಟದ ಬಗ್ಗೆ ಒಂದು ವಿಚಾರ ಸಂಕಿರಣ ನಡೆಯಲಿದ್ದು ಪ್ರೊ. ಎಂಎಲ್ ಸಾಮಗ ಅವರ ಅಧ್ಯಕ್ಷತೆಯಲ್ಲಿ ವಿಚಾರ ಮಂಡನೆ ನಡೆಯಲಿದೆ. ಅನಂತರ ಬಡಗು-ತೆಂಕು ತಿಟ್ಟುಗಳ ನವರಸಗಾಯನ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಮಂಟಪ ಪ್ರಭಾಕರ ಉಪಾಧ್ಯ ಅವರ ಏಕವ್ಯಕ್ತಿ ಪ್ರದರ್ಶನವಿದೆ. ಕೊನೆಗೆ ತೆಂಕು ತಿಟ್ಟಿನ ರತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಎಲ್ಲಿ?: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ ಪಕ್ಕ, ಕನ್ನಡ ಭವನ, ಜೆಸಿ ರಸ್ತೆ
ಯಾವಾಗ?: ಜು. 7, ಗುರುವಾರ, ಸಂಜೆ 5ಕ್ಕೆ ಪ್ರಾರಂಭ
ಕೃಪೆ :
udayavani
|
ಜುಲೈ 1 , 2016
|
ಯಕ್ಷ ವಾಚಸ್ಪತಿ, ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ
ಮಂಗಳೂರು :
ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದ, ಹೆಸರಾಂತ ಅರ್ಥಧಾರಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ (71ವರ್ಷ) ಅವರು ಅನಾರೋಗ್ಯದಿಂದ ಇಂದು (ಶುಕ್ರವಾರ) ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು.
ಯಕ್ಷವಾಚಸ್ಪತಿ ಎಂಬ ಬಿರುದಾಂಕಿತರಾದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಕನ್ನಡ ಮತ್ತು ತುಳುವಿನ ಶ್ರೇಷ್ಠ ಪ್ರಸಂಗಕರ್ತರಾಗಿಯೂ ಹೆಸರುವಾಸಿಯಾಗಿದ್ದರು. ವಿಶ್ವನಾಥ ಶೆಟ್ಟಿ ಅವರು ಕೆಲದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟುವಿನಲ್ಲಿ ಕೊರಗ ಶೆಟ್ಟಿ ಮತ್ತು ರೇವತಿಯವರ ಪುತ್ರನಾಗಿ 1945ರಲ್ಲಿ ಜನಿಸಿದ ಇವರು ಪದವಿ ಪೂರ್ವ ಶಿಕ್ಷಣ ಪಡೆದಿದ್ದರು.
ಕನ್ನಡದಲ್ಲಿ ಶ್ರೀ ರಾಮ ಸೇತು, ವರ್ಣವೈಷಮ್ಯ, ವಿಷಮ ಸಮರಂಗ, ಕನ್ಯಾಂತರಂಗ, ಜ್ವಾಲಾ ಜಾಹ್ನವಿ, ಶಶಿವಂಶವಲ್ಲರಿ, ಚಾಣಕ್ಯತಂತ್ರ ಮುಂತಾದ ಪ್ರಸಂಗವನ್ನು ರಚಿಸಿದ್ದರೆ, ತುಳುವಿನಲ್ಲಿ ಬೆಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆ ಪ್ರಸಂಗ ಬರೆದಿದ್ದಾರೆ. ವಿಶ್ವನಾಥ ಶೆಟ್ಟಿಯವರೇ ರಚಿಸಿ ನಿರ್ದೇಶಿಸಿದ್ದ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ ಅವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿತ್ತು.
ಕಟೀಲು ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಬಳಿಕ ಕದ್ರಿ, ಕರ್ನಾಟಕ, ಮಂಗಳಾದೇವಿ ಸಾಲಿಗ್ರಾಮ, ಸದ್ಯ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತಿದ್ದರು. ದಾಮೋದರ ಮಂಡೆಚ್ಚರು, ಬಲಿಪರು, ಅರುವ ಕೊರಗಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಡಿಯಾಗಿದ್ದರು.
ಪ್ರಸಿದ್ಧ ಪ್ರಸ೦ಗಕರ್ತ, ತಾಳಮದ್ದಳೆಯ ಬೇಡಿಕೆಯ ವಾಗ್ಮಿಯಾಗಿ, ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.
ಕೃಪೆ :
udayavani
|
ಜೂನ್ 27 , 2016
|
ಮರವಂತೆ ದಾಸದ್ವಯರು ದಾಸ ಶೈಲಿಯ ಎರಡು ಕಣ್ಣುಗಳು : ಪ್ರೊ. ಎಸ್. ವಿ.
ಮರವಂತೆ :
ರಾಜ್ಯ ಪ್ರಶಸ್ತಿ ಪುರಸ್ಕ್ರತ ಮರವಂತೆ ದಿ. ನರಸಿಂಹ ದಾಸರು ಮತ್ತು ಶ್ರೀನಿವಾಸ ದಾಸರು ಕಡು ಬಡತನದಲ್ಲಿ ಬೆಳೆದು ದಾಸರ ಪದ್ಯ ಮತ್ತು ಗಮಕ ಹಾಡುವುದರ ಮೂಲಕ ಬಾಗವತರಾಗಿ ಪ್ರಸಿದ್ದರಾದವರು. ಯಕ್ಷಗಾನದಲ್ಲಿ ದಾಸರ ಶೈಲಿ ಎಂಬ ಬಾಗವತಿಕೆಯ ಹೊಸ ಶೈಲಿಯನ್ನು ಹುಟ್ಟು ಹಾಕಿದ ಈ ಸಹೋದರರು ಯಕ್ಷಗಾನ ಬಾಗವತಿಕೆಯ ಎರಡು ಕಣ್ಣುಗಳು. ಅನೇಕ ಶೈಲಿಗಳನ್ನು ಅನುಕರಿಸುವ, ಅನುಸರಿಸುವ ಇಂದಿನ ಯುವ ಬಾಗವತರಲ್ಲಿ ದಾಸರ ಶೈಲಿ ಕಾಣದಿರುವುದು ಯಕ್ಷಗಾನದ ದೌರ್ಬಾಗ್ಯ ಎಂದು ಮಣಿಪಾಲ ಎಂ. ಐ. ಟಿ. ಕಾಲೇಜಿನ ಉಪನ್ಯಾಸಕ ಪ್ರೊ. ಎಸ್. ವಿ. ಉದಯಕುಮಾರ ಶೆಟ್ಟಿಯವರು ಹೇಳಿದರು.
ಅವರು ಮರವಂತೆಯ ಶ್ರೀ ದಾಸ ಯಕ್ಷಗಾನ ಚಾರಿಟೇಬಲ್ ಟ್ರಷ್ಟ್ ವತಿಯಿಂದ ನೆಡೆದ ಖ್ಯಾತ ಬಾಗವತ ದ್ವಯರಾದ ಮರವಂತೆ ನರಸಿಂಹ ದಾಸ ಮತ್ತು ಶ್ರೀನಿವಾಸ ದಾಸರ ಸಂಸ್ಮರಣಾ ದಿನದಂದು ಪ್ರದಾನ ಸಂಸ್ಮರಣಾ ಬಾಷಣ ಮಾಡಿದರು. ಲಯ ಬ್ರಹ್ಮನೆನಿಸಿದ ದಾಸರ ಸ್ಮರಣೆ ಪ್ರತೀ ವರ್ಷ ನೆಡಿಸಿಕೊಂಡು ಬರುತ್ತಿರುವ ಟ್ರಷ್ಟ್ ನ ಕಾರ್ಯ ವೈಕರಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಹಿರಿಯ ಬಾಗವತ ಮಾರ್ವಿ ನಿತ್ಯಾನಂದ ಹೆಬ್ಬಾರ್ ಅವರಿಗೆ ದಾಸರ ಸ್ಮರಣಾರ್ಥ ಕಲಾ ಗೌರವ ನೀಡಲಾಯಿತು. ಟ್ರಷ್ಟ್ ನ ಅದ್ಯಕ್ಷ ಮಂಜುನಾಥ ದಾಸ ಅದ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕ ಸುಜಿಯೀಂದ್ರ ಹಂದೆ, ಪತ್ರಕರ್ತ ಜನಾರ್ದನ ಮರವಂತೆ, ಉದ್ಯಮಿ ರಾಜು ಭಟ್ ಉಪ್ಪುಂದ, ಬಾಬು ಹೆಗ್ಡೆ, ಮರವಂತೆ ಗ್ರಾಮ ಪಂಚಾಯತ್ ಅದ್ಯಕ್ಷೆ ಅನಿತಾಪೂಜಾರಿ ಉಪಸ್ಥಿತರಿದ್ದರು. ವಿವಿದ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಶುಭಾ ಮರವಂತೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ದೇವರಾಜ ದಾಸ್ ವಂದಿಸಿದರು. ಬಳಿಕ ಸ್ಥಳೀಯ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ನೆರವೇರಿತು.
|
ಜೂನ್ 24 , 2016
|
ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಮಾಸದ ಮೆಲುಕು: ನರಕಾಸುರ ವಧೆ ಯಕ್ಷಗಾನ
ಬೆ೦ಗಳೂರು :
ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ನೆರವಿನೊಂದಿಗೆ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಚಿಕ್ಕಲಸಂದ್ರದ ಕೆ.ಎಸ್.ಆರ್.ಟಿ.ಸಿ. ಬಡಾವಣೆಯ ಮನೋರಂಜಿನಿ ಸಭಾಂಗಣದಲ್ಲಿ ಹಮ್ಮಿಕೊಂಡು ಬಂದಿರುವ ಮಾಸಾಂತ್ಯದ ಸಾಂಸ್ಕೃತಿಕ ರಂಜನೆಯ ಡಾ| ರಾಧಾಕೃಷ್ಣ ಉರಾಳರ ಪರಿಕಲ್ಪನೆ-ನಿರ್ದೇಶನದ ‘ಮಾಸದ ಮೆಲುಕು‘ ಸರಣಿಯ 61ನೇ ಕಾರ್ಯಕ್ರಮವಾಗಿ “ನರಕಾಸುರ ವಧೆ” ಬಡಗು ಶೈಲಿಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಅಂಬರೀಷ್ ಭಟ್ ಯಕ್ಷ ಸಂಯೋಜನೆಯಲ್ಲಿ ಸೀಮಿತಾವಧಿಯ ಅವರಣದಲ್ಲಿ ಅಜಪುರದ ಸುಬ್ಬ ಹಾಗೂ ಅನ್ಯ ಕವಿ ರಚಿತ ಪದಗಳನ್ನು ಆಧರಿಸಿದ ಈ ಯಕ್ಷ ಪ್ರಸಂಗ ದಿನಾಂಕ 25-06-2016ರ ಶನಿವಾರ ಸಂಜೆ 6ಕ್ಕೆ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರದರ್ಶನವನ್ನು ಪ್ರಾಯೋಜಿಸಲಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಎಂ.ಎನ್.ಹಿರಿಯಣ್ಣ, ಸಮಾಜ ಸೇವಕರಾದ ನರಸಿಂಹಮೂರ್ತಿ, ಗೋಕುಲಂ ಸಂಗೀತ ಶಾಲೆಯ ನಿರ್ದೇಶಕರಾದ ಎಚ್.ಎಸ್. ವೇಣು ಗೋಪಾಲ್ ಹಾಗೂ ಶ್ರೀ ಸಿದ್ಧಿ ಗಣಪತಿ ದೇವಾಲಯ ಸಮೀತಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಉಪಸ್ಥಿತರಿರುತ್ತಾರೆ.
ನಾರದ ಕೃಷ್ಣನಿಗೆ ತಂದುಕೊಟ್ಟ ಪಾರಿಜಾತ ಪುಷ್ಪವನ್ನು ರುಕ್ಮಿಣಿಗೆ ಕೊಟ್ಟಾಗ ಸಿಟ್ಟುಗೊಳ್ಳುವ ಸತ್ಯಭಾಮೆ, ಅವಳನ್ನು ಸಮಾಧಾನ ಪಡಿಸುವಲ್ಲಿ ಕೃಷ್ಣ ಪರದಾಟ, ಇಂದ್ರಾದಿ ದೇವತೆಗಳ ಮೇಲೆ ನರಕಾಸುರನ ಆರ್ಭಟ, ತಂದೆ ತಾಯಿಯರೊಂದಾಗಿ ಕೊಂದಾಗ ಮಾತ್ರ ತನ್ನ ಸಾವು ಎಂಬ ವರ ಪಡೆದ ಆತನನ್ನು ಕೊಲ್ಲುವುದಕ್ಕಾಗಿ ಹೊರಟ ಕೃಷ್ಣನನ್ನು ಪಾರಿಜಾತದ ಗಿಡ ನೋಡುವ ಸಡಗರದಲ್ಲಿ ಕೂಡಿಕೊಳ್ಳುವ ಸತ್ಯಭಾಮೆ ನರಕಾಸುರನ ಬಳಿ ಕೃಷ್ಣ ಸೋತಾಗ ಮುಂದೆ ಏನಾಗುವುದು ಎಂಬ ಕುತೂಹಲ, ನವಿರಾದ ಹಾಸ್ಯ, ವಿಡಂಬನೆ, ಚಿಂತನೆಗಳ ಹೂರಣವಾದ ಈ ಕಥಾಭಾಗದಲ್ಲಿ ಸುಬ್ರಾಯ ಹೆಬ್ಬಾರ್, ನಾರಾಯಣ ಹೆಬ್ಬಾರ್, ಆದಿತ್ಯ ಹಿಮ್ಮೇಳದಲ್ಲಿಯೂ ಸಂಸ್ಥೆಯ ಗೌರವಾಧ್ಯಕ್ಷ ರಾದ ದೇವರಾಜ್ ಕರಬ, ರವೀಶ ಹೆಗಡೆ, ಅಂಬರೀಶ್ ಭಟ್, ವಾಸುದೇವ ಹೆಗಡೆ, ಆದಿತ್ಯ, ಡಾ ಉರಾಳ್, ರಾಜೇಶ್ ಕಶ್ಯಪ್, ನಿತ್ಯಾನಂದ ನಾಯಕ್ ಮೊದಲಾದವರು ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ. ವಿಶ್ವನಾಥ್ ಉರಾಳರವರ ನಿರ್ವಹಣೆ, ಸತ್ಯನಾರಾಯಣ್, ಮುರಳೀಧರ ನಾವಡ, ಭರತ್‌ಗೌಡ, ಶ್ರೀನಿವಾಸ್ ಸಾಸ್ತಾನ್, ಮಮತ ಆರ್ಕೆ ಅವರ ಸಹಕಾರದೊಂದಿಗೆ ನಡೆಯುವ ಪ್ರದರ್ಶನಕ್ಕೆ ಪ್ರವೇಶ ಉಚಿತ. ಎಲ್ಲರಿಗೂ ಸ್ವಾಗತ. ಆಸನಗಳು ಸೀಮಿತವಾಗಿರುವುದರಿಂದ ಮುಂಚಿತವಾಗಿ ಬನ್ನಿ.
ಹೆಚ್ಚಿನ ವಿವರಗಳಿಗೆ 9845663646 ಸಂಪರ್ಕಿಸಿ
ಕಲಾಕದಂಬ ಆರ್ಟ್ ಸೆಂಟರ್, 182/1, 9ನೇ ಅಡ್ಡರಸ್ತೆ, ತ್ಯಾಗರಾಜನಗರ, ಬೆಂ-28 ದೂ : 9448510582
|
ಜೂನ್ 22 , 2016
|
ಕುಂಬ್ಳೆ ಸುಂದರ ರಾವ್‌ಗೆ ಉಡುಪಿ ತೆಂಕುತಿಟ್ಟು ವೇದಿಕೆ ಪ್ರಶಸ್ತಿ ಪ್ರದಾನ
ಉಡುಪಿ :
ತೆಂಕುತಿಟ್ಟು ಯಕ್ಷಗಾನದ ಪ್ರದೇಶದವನಾದ ನಾನು ಅರಿತಂತೆ ಈ ಹಿಂದೆ ತೆಂಕು-ಬಡಗುತಿಟ್ಟುಗಳು ಒಂದನ್ನೊಂದು ಸಂಧಿಸುತ್ತಿರಲಿಲ್ಲ. ಅನಂತರದ ದಿನಗಳಲ್ಲಿ ಈ ಎರಡೂ ಪ್ರಭೇದಗಳ ಶ್ರೇಷ್ಠತೆ, ಕಲಾವಿದರ ಸಾಮರ್ಥ್ಯ ಎಲ್ಲ ಪ್ರದೇಶದವರಿಗಲ್ಲದೇ ದೇಶ-ವಿದೇಶಗಳಲ್ಲೂ ತಿಳಿಯುವಂತಾಯಿತು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ರಾಜಾಂಗಣದಲ್ಲಿ ಶನಿವಾರ ನಡೆದ "ರಾತ್ರಿ ಆಟ'ದಲ್ಲಿ ಅವರು, ಸುಧಾಕರ ಆಚಾರ್ಯರಂಥವರು ಕಲಾಪ್ರಸಾರಕ್ಕೆ "ತೆಂಕುತಿಟ್ಟು ವೇದಿಕೆ' ಸ್ಥಾಪಿಸಿ ಪ್ರತಿ ವರ್ಷ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಮೂಲಕ ಕಲಾ ಪೋಷಕರಾಗಿದ್ದಾರೆ ಎಂದರು.
ತಮ್ಮ ಪರ್ಯಾಯ ಅವಧಿಯಲ್ಲಿ ಕುಂಬ್ಳೆ ಸುಂದರ ರಾವ್ ಅವರ ಎಲ್ಲ ಪಾತ್ರ ನಿರ್ವಹಣೆ ಬಹು ಖುಷಿಕೊಟ್ಟಿದೆ ಎಂದು ಅವರಿಗೆ 10,000 ರೂ. ಗೌರವನಿಧಿಯೊಂದಿಗೆ "ತೆಂಕುತಿಟ್ಟು ವೇದಿಕೆ ಪ್ರಶಸ್ತಿ' ಪ್ರದಾನಿಸಿ ಆಶೀರ್ವಚನಗೈದರು.
ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿ, ಕುಂಬ್ಳೆ ಅವರ ಅಭಿನಂದನ ಗ್ರಂಥ "ಸುಂದರ ಕಾಂಡ'ದಲ್ಲಿ ಅವರ ಇಡೀ ವ್ಯಕ್ತಿ ಚಿತ್ರಣ ಅದ್ಭುತವಾಗಿ ಮೂಡಿಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸುರೇಶ ಶೆಟ್ಟಿ ಗುರ್ಮೆ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಯ ಶ್ರೇಷ್ಠತೆ, ಆಧ್ಯಾತ್ಮಿಕ ಮೌಲ್ಯಗಳು ಪ್ರಪಂಚದೆಲ್ಲೆಡೆ ಹಾಸುಹೊಕ್ಕಾಗಿವೆ. ಅವುಗಳಲ್ಲೊಂದಾದ ಯಕ್ಷಗಾನ ಸಂಸ್ಕೃತಿಯ ಶ್ರೇಷ್ಠತೆ, ಆಧ್ಯಾತ್ಮಿಕ ವಿಚಾರಧಾರೆ, ಜೀವನದ ಮೌಲ್ಯಗಳನ್ನು ಸದಾ ಪ್ರೇರೇಪಿಸುತ್ತ ಜನರನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯವನ್ನು ನಿರಂತರ ಮಾಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಅನಂತಪದ್ಮನಾಭ ಆಸ್ರಣ್ಣ, ತಲ್ಲೂರ್ ಫ್ಯಾಮಿಲಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ತಲ್ಲೂರು ಶಿವರಾಮ ಶೆಟ್ಟಿ ಶುಭ ಹಾರೈಸಿದರು. ಸುಧಾಕರ ಆಚಾರ್ಯ ಅವರ ಸಂಕಲ್ಪ-ಸಂಯೋಜನೆಯಲ್ಲಿ ಆ. 14ರಂದು ಜರಗಲಿರುವ ಹಿರಿಯ ಪತ್ರಕರ್ತ ಎಂ.ವಿ. ಹೆಗ್ಡೆ ವಿರಚಿತ "ಸ್ವರಾಜ್ಯ ವಿಜಯ' ತಾಳಮದ್ದಲೆಯ ಮಾಹಿತಿ ಪತ್ರವನ್ನು ಶ್ರೀವಿಶ್ವೇಶತೀರ್ಥ ಶ್ರೀಪಾದರು ಬಿಡುಗಡೆ ಗೊಳಿಸಿದರು.
ಎಂಜಿನಿಯರ್ ಎಂ.ಡಿ. ಗಣೇಶ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧೀರ್ ಕೊಡವೂರು ಕಾರ್ಯಕ್ರಮ ನಿರೂಪಿಸಿ, ಎಂ.ಎಸ್. ವಿಷ್ಣು ವಂದಿಸಿದರು.
ಕೃಪೆ :
udayavani
|
ಜೂನ್ 12 , 2016
|
ಜನಪ್ರಿಯ ಯಕ್ಷಗಾನ ಕಲಾ ಮಂಡಳಿಗೆ 60
ಮುಂಬೈ :
ಯಕ್ಷಗಾನ ಕಲೆಯನ್ನು ಪರರಾಜ್ಯದಲ್ಲಿ ಪೋಷಿಸಿ, ಬೆಳೆಸಿ, ಮುಂದುರಿಸುವುದು ಸುಲಭ ಸಾಧನೆಯಲ್ಲ. ಮುಂಬೈಯ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಇದನ್ನು ಮಾಡಿ ತೋರಿಸುತ್ತಿದೆ. ಈ ಮಂಡಳಿಗೆ ಈಗ ಅರುವತ್ತರ ಸಂಭ್ರಮ-ಮೆರುಗು.
ಜನಪ್ರಿಯ ಯಕ್ಷಗಾನ ಕಲಾಮಂಡಳಿಯು ಕುಂಬ್ಳೆ ಪುಂಡಲೀಕ್ ನಾಯಕ್, ಎಸ್. ವೆಂಕಟೇಶ್ ಮಲ್ಯ ಮತ್ತಿತರ ಕೆಲ ಕಲಾಪ್ರೇಮಿಗಳೊಂದಿಗೆ ಉಡುಪಿ ಮೂಲದ ಮುಂಬೈಯ ಖ್ಯಾತ ಹೊಟೇಲ್ ಉದ್ಯಮಿ ಕಲಾಪ್ರೇಮಿ ರಾಮ ನಾಯಕ್ ಅವರ ಪೂರ್ಣ ಬೆಂಬಲದೊಂದಿಗೆ ಆರಂಭವಾಯಿತು. ಶ್ರೀ ಕಾಶೀಮಠದ ಶ್ರೀಮತ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರು "ಜನಪ್ರಿಯ ಯಕ್ಷಗಾನ ಕಲಾ ಮಂಡಳಿ' ಎಂಬ ನಾಮಕರಣದೊಂದಿಗೆ ಮಂಡಳಿಯನ್ನು ಶುಭಾರಂಭ ಮಾಡಿ, ಆಶೀರ್ವದಿಸಿದರು. 1956ರಲ್ಲಿ "ಜರಾಸಂಧ ವಧೆ' ಪ್ರಸಂಗದೊಂದಿಗೆ ಪ್ರದರ್ಶನ ಆರಂಭಿಸಿತು.
ಆ ಬಳಿಕ ಹೆಸರಿಗೆ ಅನ್ವರ್ಥವಾಗಿ ಮಂಡಳಿ ಜನಮಾನಸದಲ್ಲಿ ವಿಶೇಷ ಛಾಪು ಪಡಿಮೂಡಿಸಿ, ಜನಪ್ರಿಯತೆಯೆಡೆಗೆ ಸಾಗತೊಡಗಿದರೂ, ವೇಷ-ಭೂಷಣ, ಪರಿಕರಗಳ ಕೊರತೆಯ ಕಷ್ಟ ಎದುರಾಯಿತು. ಆದರೆ ಧೃತಿಗೆಡದೆ ಮುಂಬೈಯ ಇತರ ತಂಡಗಳಿಂದ ಬಾಡಿಗೆಗೆ ಪಡೆದು, ಕೊಂಕಣಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಯಕ್ಷ ಆಖ್ಯಾನ ಪ್ರದರ್ಶಿಸಿ ಕಲಾಸೇವೆಗೈಯಲಾರಂಭಿಸಿತು. ಕೆಲ ಕಾಲದ ಬಳಿಕ ರಾಮನಾಯಕರ ಮುತುವರ್ಜಿಯಿಂದ ಮಂಡಳಿ ಸಂಪೂರ್ಣ ಸ್ವಾವಲಂಬಿಯಾಯಿತು. ಈ ತನಕ ದೇಶದ ವಿವಿಧೆಡೆ ನೂರಾರು ಯಕ್ಷ ಪ್ರದರ್ಶನಗಳನ್ನು ನೀಡಿ ಯಕ್ಷ ಅಭಿಮಾನಿಗಳನ್ನು ರಂಜಿಸಿ ಪ್ರೀತಿಗೆ ಪಾತ್ರವಾಗಿದೆ ಈ ಮಂಡಳಿ.
ಪ್ರಸ್ತುತ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಕ್ಷ ಸೇವೆ ನಿಲ್ಲಿಸಿಲ್ಲ. ಮಂಡಳಿಯ ಕಲಾಪ್ರೇಮಕ್ಕೊಂದು ನಿದರ್ಶನವಿದು. ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಯಕ್ಷಮಾತೆಯ ಸೇವೆ - ರಂಗದಲ್ಲಿ ಮತ್ತಷ್ಟು ಜನಪ್ರಿಯವಾಗಲಿ. ಭವಿಷ್ಯ ಉಜ್ವಲವಾಗಲಿ.
ಕೃಪೆ :
udayavani
|
ಜೂನ್ 12 , 2016
|
ಯಕ್ಷ ಕಲಾನಿಧಿಧಿ ಪ್ರಶಸ್ತಿಗೆ ಪಾತಾಳ ವೆಂಕಟರಮಣ ಭಟ್ಟ ಆಯ್ಕೆ
ಮಂಗಳೂರು :
ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷ ಗಾನ ವತಿಯಿಂದ ನೀಡುವ ಯಕ್ಷ ಕಲಾನಿಧಿ ಪ್ರಶಸ್ತಿಗೆ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟ ಆಯ್ಕೆ ಆಗಿದ್ದಾರೆ.
ಕೇಂದ್ರ ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಂಪನ್ಮೂಲ ತರಬೇತಿ ಕೇಂದ್ರದ (ಸಿಸಿಆರ್‌ಟಿ) ನಿರ್ದೇಶಕ ಗಿರೀಶ್ ಜೋಶಿ ಅಧ್ಯಕ್ಷ ತೆಯಲ್ಲಿ ಜೂ.12 ರಂದು ಹೊಸದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೇಂದ್ರ ಕಾನೂನು ಇಲಾಖೆ ಜಂಟಿ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಪ್ರಾಧ್ಯಾಪಕ ಡಾ. ಪುರುಷೊತ್ತಮ ಬಿಳಿಮಲೆ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾತಾಳ ಕುರಿತು ಸಾಕ್ಷ ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಪ್ರಶಸ್ತಿ 20 ಸಾವಿರ ನಗದು, ಸನ್ಮಾನ ಫಲಕ, ನೆನಪಿನ ಕಾಣಿಕೆ ಒಳಗೊಂಡಿದೆ. ಕಡಂದೇಲು ಪುರುಷೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಡಾ.ಕೋಳ್ಯೂರು ರಾಮಚಂದ್ರ ರಾವ್, ಮಲ್ಪೆ ರಾಮದಾಸ ಸಾಮಗ, ಕುಂಬಳೆ ಸುಂದರ ರಾವ್, ಸೂರಿ ಕುಮೇರಿ ಗೋವಿಂದ ಭಚ್, ಬಲಿಪ ನಾರಾಯಣ ಭಾಗವತ ಹಾಗೂ ಸಂಪಾಜೆ ಶೀನಪ್ಪ ರೈ ಅವರಿಗೆ ಈ ಹಿಂದೆ ಯಕ್ಷ ಕಲಾನಿಧಿ ಪ್ರಶಸ್ತಿ ನೀಡಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ದಿಲ್ಲಿಯಲ್ಲಿ ಕರ್ಣ ಭೇದನ ಎಂಬ ಪ್ರಸಂಗದ ತಾಳ ಮದ್ದಳೆ ನಡೆಯಲಿದ್ದು, ಅರ್ಥದಾರಿ ವಾಸುದೇವ ರಂಗಾ ಭಟ್, ಭಾಗವತ ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯರು ಸಹಕರಿಸುವರು. ವಿದ್ಯಾ ಕೋಳ್ಯೂರು ಮತ್ತು ಡಾ.ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೃಪೆ :
vijaykarnataka
|
ಜೂನ್ 12 , 2016
|
ಜೂನ್ 15 ಸಿದ್ದಾಪುರದಲ್ಲಿ ಯಕ್ಷ ವೈಭವ-ಅಭಿನಂದನೆ
ಸಿದ್ದಾಪುರ :
ಶ್ರೀ ಮಂದಾರ್ತಿ ಮೇಳದ ಕಲಾವಿದರಾದ ಆಜ್ರಿ ಉದಯ ಶೆಟ್ಟಿ ಮತ್ತು ಮೂರೂರು ರಮಾಕಾಂತ ಮಡಿವಾಳರ ಸಂಯ್ಯೋಜನೆಯಲ್ಲಿ ಸಿದ್ದಾಪುರದ ರಂಗನಾಥ ಸಬಾಂಗಣದಲ್ಲಿ ಇದೇ ಜೂನ್ ೧೫ ಬುಧವಾರ ಮಳೆಗಾಲದ ಅದ್ದೂರಿಯ ಯಕ್ಷಗಾನ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಗೆ ನೂತನವಾಗಿ ಆಯ್ಕೆಗೊಂಡ ಹಾಲಾಡಿ ತಾರಾನಾಥ ಶೆಟ್ಟಿ ಮತ್ತು ತಾಲೂಕು ಪಂಚಾಯತ್ ಗೆ ಆಯ್ಕೆಗೊಂಡ ವಾಸುದೇವ ಪೈಗಳನ್ನು ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಅಭಿನಂದಿಸಲಾಗುವುದು. ಮಣಿಪಾಲಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟಿಯವರು ಅಭಿನಂದನಾ ಬಾಷಣ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಕಮಲಶಿಲೆ ದೇವಸ್ಥಾನದ ದರ್ಮದರ್ಶಿ ಸಚ್ಚಿದಾನಂದ ಛಾತ್ರ, ಉದ್ಯಮಿ ಕಿರಣ್ ಕೊಡ್ಗಿ. ಡಿ. ಭರಥ್ ಕುಮಾರ್ ಕಾಮತ್, ಕಮಲಶಿಲೆ ನಾರಾಯಣ ಶೆಟ್ಟಿ, ಮುಂತಾದವರು ಬಾಗವಹಿಸಲಿರುವರು. ಬಳಿಕ ಖ್ಯಾತ ಕಲಾವಿದರಿಂದ ಲಂಕಾದಹನ ಎಂಬ ಯಕ್ಷಗಾನ ನೆರವೇರಲಿದೆ. ವಿಶೇಷ ಆಕರ್ಷಣೆಯಾಗಿ 20 ವರ್ಷಗಳ ನಂತರ ಹಿರಿಯ ಕಲಾವಿದ ಎಂ. ಎ. ನಾಯ್ಕರು ಸೀತೆಯಾಗಿ, ಖ್ಯಾತ ಸ್ತ್ರೀ ವೇಷಧಾರಿ ಶಶಿಕಾಂತಶೆಟ್ಟಿ ಹನುಮಂತನಾಗಿ, ಪ್ರಸನ್ನ ಶೆಟ್ಟಿಗಾರ್ ಸುಂದರ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಪ್ರದಾಯದ ಹಿರಿಯ ಭಾಗವತ ನಾಗೇಶ ಕುಲಾಲ್ ಬಳಗದವರ ಹಿಮ್ಮೇಳವಿದೆ ಎಂದು ಸಂಘಟಕರು ತಿಳಿಸಿದ್ದಾರೆ
|
ಜೂನ್ 11 , 2016
|
ಬಸವ ಯೋಜನೆ ಕೈಕೊಟ್ಟಾಗ ಕೈ ಹಿಡಿದ ಕಲಾರಂಗ
ಉಡುಪಿ :
ಸರಕಾರ ಬಸವ ಯೋಜನೆಯಲ್ಲಿ ಮನೆ ಮಂಜೂರುಗೊಳಿಸಿ ಅರ್ಧದಲ್ಲಿ ಕೈಕೊಟ್ಟರೆ, ಉಡುಪಿಯ ಯಕ್ಷಗಾನ ಕಲಾರಂಗ ಮನೆ ನಿರ್ಮಿಸಿ ಹಸ್ತಾಂತರಿಸಿ ನೆರವಾಗಿದೆ. ಇದರಿಂದಾಗಿ ಕುಕ್ಕೆಹಳ್ಳಿ ಗ್ರಾಮ ಹೊಸಂಗಡಿಯ ಸುಪ್ರಿತಾ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಕುಟುಂಬ ಮಳೆಗಾಲದಲ್ಲೂ ಬೆಚ್ಚಗೆ ಮಲಗುವಂತಾಗಿದೆ.
ಎರಡನೇ ಕ್ಲಾಸ್ ಕಲಿತಿರುವ ಹೊಸಂಗಡಿ ಲಲಿತಾ ಮತ್ತು ಮೂರನೇ ತರಗತಿ ಓದಿರುವ ಕಾರ್ಕಳ ಬೈಲೂರು ಸುಧಾಕರ ದಂಪತಿಗೆ ಸುಹಾಸಿನಿ ಮತ್ತು ಸುಪ್ರಿತಾ ಎಂಬ ಇಬ್ಬರು ಮಕ್ಕಳು. ಸುಧಾಕರ್ ಕುಡಿತದ ದಾಸರಾಗಿ ತೊಂದರೆ ಕೊಡತೊಡಗಿದ್ದರಿಂದ ಲಲಿತಾ ತನ್ನಿಬ್ಬರು ಮಕ್ಕಳೊಂದಿಗೆ ಹೊಸಂಗಡಿಗೆ ವಾಪಸಾಗಿ ಅಲ್ಲಿ ಗುಡಿಸಲು ಕಟ್ಟಿಕೊಂಡು ಮಕ್ಕಳನ್ನು ಓದಿಸುತ್ತಿದ್ದರು. ಕೆಲವು ವರ್ಷಗಳ ಬಳಿಕ ಒಂದೇ ಕೊಠಡಿಯ ಸಿಮೆಂಟ್ ಶೀಟ್‌ನ ಮನೆಯಲ್ಲಿ ವಾಸಿಸುತ್ತಿದ್ದು, ಮನೆಗಾಗಿ ಗ್ರಾಮ ಪಂಚಾಯಿತಿ ಮೂಲಕ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಇವರ ಸ್ಥಿತಿ ನೋಡಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. 1.20 ಲಕ್ಷ ರೂ.ನಲ್ಲಿ ಒಟ್ಟು 39 ಸಾವಿರ ರೂ. ನೀಡಿದ್ದರಿಂದ ಪಂಚಾಂಗ ಕಟ್ಟಿ ಗೋಡೆ ನಿರ್ಮಿಸುವ ಹೊತ್ತಿಗೆ ಅಧಿಧಿಕಾರಿಗಳು ಕೈಕೊಟ್ಟು ಉಳಿದ ಹಣವೇ ಬಾರದೆ ಗೋಡೆ ಅರ್ಧದಲ್ಲಿಯೇ ಬಾಕಿಯಾಗಿತ್ತು.
ನೆರವಿಗೆ ಬಂದ ಕಲಾರಂಗ:
ದೊಡ್ಡ ಮಗಳು ಪಿಯುಸಿ ಮುಗಿಸಿದಾಗ ಓದಿದ್ದು ಸಾಕು ಎಂದು ಕೆಲಸಕ್ಕೆ ಕಳುಹಿಸಿದ್ದರು. ಸುಹಾಸಿನಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಎರಡನೆ ಮಗಳು ಸುಪ್ರಿತಾ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 76 ಅಂಕ ಪಡೆದರೂ, ಅಕ್ಕನೊಡನೆ ಕೆಲಸಕ್ಕೆ ಹೋಗುವಂತೆ ಅಮ್ಮ ಹೇಳಿದ್ದರು. ಓದುವ ಇಚ್ಚೆ ಇದ್ದ ಸುಪ್ರಿತಾಗೆ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನಲ್ಲಿದ್ದ ದಿವ್ಯಾ ಎಂಬ ಗೆಳತಿಯೊಬ್ಬಳು ಅದರ ವಿಳಾಸ ನೀಡಿದ್ದಳು. ಅದರಂತೆ ವಿದ್ಯಾಪೋಷಕ್ ಸಂಪರ್ಕಿಸಿದ್ದರಿಂದ ಆಕೆ ಪಿಯುಸಿಗೆ ಹೋಗುವಂತಾಗಿತ್ತು. ಅಲ್ಲಿ ಪರಿಚಯವಾದ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್‌ಗೆ ತನ್ನ ಮನೆ ಅರ್ಧದಲ್ಲಿ ನಿಂತಿರುವ ಬಗ್ಗೆ ಏಪ್ರಿಲ್‌ನಲ್ಲಿ ತಿಳಿಸಿ ಬೇಸರ ಪಟ್ಟಿದ್ದಳು.
ಯಕ್ಷಗಾನ ಕಲಾರಂಗದವರು ಇವರ ಮನೆಗೆ ಭೇಟಿ ನೀಡಿ ಮನೆ ವೀಕ್ಷಿಸಿ ಮನೆ ಕಟ್ಟಿಕೊಡಲು ತೀರ್ಮಾನಿಸಿದ್ದಾರೆ. ಎರಡೇ ತಿಂಗಳಲ್ಲಿ ವಿವಿಧ ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ನೀಡಿದ್ದಾರೆ.
ಮನೆ ಹಸ್ತಾಂತರ
ಮನೆ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆದಿದೆ. ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮನೆ ಉದ್ಘಾಟಿಸಿ ಹಸ್ತಾಂತರಿಸಿದ್ದಾರೆ. ಸುಪ್ರಿತಾಳ ಮುಂದಿನ ವಿದ್ಯಾಭ್ಯಾಸದ ಖರ್ಚನ್ನು ಕಾಣಿಯೂರು ಮಠದಿಂದ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಕಲಾರಂಗ ಅಧ್ಯಕ್ಷ ಗಣೇಶ್ ರಾವ್, ಮುರಳಿ ಕಡೆಕಾರ್, ವಿಶ್ವನಾಥ ಶೆಣೈ, ಭುವನೇಂದ್ರ ಕಿದಿಯೂರು, ಪುರುಷೋತ್ತಮ ಪಟೇಲ್, ಎಂ.ಎಲ್.ಸಾಮಗ, ಎಸ್.ವಿ.ಭಟ್, ಗಂಗಾಧರ ರಾವ್, ಶೃಂಗೇಶ್ವರ್, ನಾರಾಯಣ ಹೆಗಡೆ, ಕಿಶನ್ ಹೆಗ್ಡೆ, ಭುವನಪ್ರಸಾದ್ ಹೆಗ್ಡೆ, ಅಶೋಕ್, ಶಿವಣ್ಣ, ರಾಮ ಕುಲಾಲ, ಗಂಗಾಧರ ಆಚಾರ್ಯ, ದಿನೇಶ್, ಕೃಷ್ಣಮೂರ್ತಿ, ಸುಧಾಕರ ಕುಲಾಲ್, ಲಲಿತಾ, ಸುಹಾಸಿನಿ, ಸುಪ್ರಿತಾ ಮತ್ತಿತರರು ಉಪಸ್ಥಿತರಿದ್ದರು.
ಕೃಪೆ :
vijaykarnataka
|
ಜೂನ್ 10 , 2016
|
ಪ್ರಾತಿನಿಧಿಕ ಕಲೆಯಾಗಿ ಯಕ್ಷಗಾನಕ್ಕೆ ಮನ್ನಣೆ ಅಗತ್ಯ: ಮೋಹನ ಆಳ್ವ
ಮಂಗಳೂರು :
ಒಡಿಶಾದಲ್ಲಿ ಒಡಿಸ್ಸಿ ಕಲಾಪ್ರಕಾರವನ್ನು ನೆರೆಯ ಕೇರಳದಲ್ಲಿ ಕಥಕ್ಕಳಿಯನ್ನು, ತಮಿಳುನಾಡಿನಲ್ಲಿ ತಿರುಕೂತ್ತು ಕಲೆಯನ್ನು ಪ್ರಾತಿನಿಧಿಕ ಕಲೆಯನ್ನಾಗಿ ಅಲ್ಲಿನ ಸರ್ಕಾರಗಳು ಒಪ್ಪಿಕೊಂಡಿರುವಾಗ ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಶಾಸ್ತ್ರೀಯ ಕಲೆಯಾದ ಯಕ್ಷಗಾನಕ್ಕೆ ಮನ್ನಣೆ ನೀಡಲು ಸರ್ಕಾರ ಹಿಂದೇಟು ಹಾಕಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಭಾನುವಾರ ಹಿರಿಯ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರಿಗೆ ಗೌರವ ಸಲ್ಲಿಸುವ ‘ಪದಯಾನ’ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರವು ಸಮರ್ಪಕವಾದ ಸಾಂಸ್ಕೃತಿಕ ನೀತಿಯನ್ನು ರೂಪಿಸಲು ವಿಳಂಬ ಮಾಡಬಾರದು ಎಂದರು.
ತೆಂಕು, ಬಡಗು ಎಂಬ ಭೇದವಿಲ್ಲದೆ ಯಕ್ಷಗಾನ ಕಲೆಯು ಹಳ್ಳಿಯಿಂದ ದಿಲ್ಲಿವರೆಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ವಿಸ್ತಾರವಾದ ಮತ್ತು ವೈವಿಧ್ಯವಾದ ಪ್ರೇಕ್ಷಕರನ್ನು ಹೊಂದಿದೆ. ಆದರೆ ಅದರ ಕಲಿಕೆಗೆ ಸಂಗೀತ ನೃತ್ಯದ ಕಲಿಕೆಯ ಮಾದರಿಯಲ್ಲಿ ವ್ಯವಸ್ಥೆಯನ್ನು ಇನ್ನೂ ರೂಪಿಸುವುದು ಸಾಧ್ಯವಾಗಿಲ್ಲ.
ಆದ್ದರಿಂದ ಡಿಪ್ಲೊಮಾ ಕೋರ್ಸ್ ಅಥವಾ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ರೂಪಿಸಬೇಕಾಗಿದೆ. ಸಂಗೀತ ನೃತ್ಯದಲ್ಲಿ ಇರುವಂತೆಯೇ ಜೂನಿಯರ್, ಸೀನಿಯರ್ ವಿದ್ವತ್‌ನಂತಹ ಗ್ರೇಡ್‌ಗಳನ್ನು ನೀಡುವ ಶೈಲಿಯಲ್ಲಾದರೂ ಕಲಿಕೆಯ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕ್ಷೇತ್ರದ ಹಿರಿಯರ, ವಿದ್ವಾಂಸರ ಸಭೆಯೊಂದನ್ನು ಸದ್ಯದಲ್ಲಿಯೇ ಕರೆಯಲಾಗುವುದು ಎಂದರು.
ಕೃಪೆ :
prajavani
|
ಹಿ೦ದಿನ 10 ಸುದ್ದಿಗಳು ಮು೦ದಿನ 10 ಸುದ್ದಿಗಳು
|