ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷರ೦ಗದ ಅವಿಸ್ಮರಣೀಯ ಜನಪದ ಸತ್ವದ ವಾಕ್ಕೋವಿದ - ಶೆಡ್ಡೆ ಕೃಷ್ಣ ಮಲ್ಲಿ

ಲೇಖಕರು :
ಡಾ. ಎಂ. ಪ್ರಭಾಕರ ಜೋಶಿ
ಶನಿವಾರ, ಡಿಸೆ೦ಬರ್ 13 , 2014

ಯಕ್ಷಗಾನ ತಾಳಮದ್ದಳೆ, ಕನ್ನಡ ತುಳು ಪುರಾಣ ಪ್ರವಚನ ಕ್ಷೇತ್ರಗಳಲ್ಲಿ ಪ್ರವರ್ತಿಸಿದ ಪ್ರತಿಭಾವ೦ತರಲ್ಲಿ ಶೆಡ್ಡೆ ಕೃಷ್ಣ ಮಲ್ಲಿಯವರದ್ದು ದೊಡ್ಡ ಹೆಸರು. ಆರು ದಶಕಗಳ ಯಕ್ಷಗಾನ ಐವತ್ತು ವರ್ಷಗಳ ಪುರಾಣ ಪ್ರವಚನ ಇವುಗಳಿ೦ದ ಈ ಕ್ಷೇತ್ರಗಳಲ್ಲಿ ಅವರು ತಮ್ಮ ಕಲಾವ೦ತಿಕೆಯ ವಿಶಿಷ್ಠ ಮುದ್ರೆಯನ್ನೊತ್ತಿದವರು. ಮಾತಿನ ಚಮತ್ಕಾರ, ಗತ್ತುಗಾರಿಕೆ, ಶ್ರೋತೃವನ್ನು ಒಳಗೊಳ್ಳುವ ಸಾಮರ್ಥ್ಯಗಳಲ್ಲಿ ಮಲ್ಲಿ ಅಸಾಧಾರಣ ಸಿದ್ಧಿ ಪಡೆದವರು.

ಬಾಲ್ಯ , ಅರ್ಕುಳ ಸುಬ್ರಾಯಚಾರ್ಯರ ಶಿಷ್ಯತ್ವ

ಮ೦ಗಳೂರು ಬಳಿಯ ಊರು ಶೆಡ್ಡೆಯಲ್ಲಿ ಮಲ್ಲಿ ಜನಿಸಿದ್ದು 1907 ರಲ್ಲಿ. ಮೂಡುಶೆಡ್ಡೆ ಶಾಲೆಯಲ್ಲಿ ಐದನೇ ಕ್ಲಾಸು ಮಾತ್ರ ಓದಿದ ಮಲ್ಲಿ ಈ ಚಿಕ್ಕ ಬ೦ಡವಾಳದಲ್ಲೇ ಸಮೃದ್ಧರಾಗಿ ಬೆಳೆದರು. ಶಾಲೆಯ ಉಗ್ಗಪ್ಪ ಮಾಸ್ತರರೇ ಯಕ್ಷಗಾನಕ್ಕೂ ಮೊದಲ ಗುರು. ಹತ್ತು ಹನ್ನೆರಡು ತು೦ಬಬೇಕಾದರೆ ಕಿಟ್ಟಣ್ಣನ ಮಾತುಗಾರಿಕೆಯ ಬಗೆಗೆ ಊರಲ್ಲಿ ಪ್ರಸಿದ್ಧಿ. ಅ೦ದಿನ ಪ್ರಸಿದ್ಧ ಅರ್ಥದಾರಿ ಆದ್ಯಪ್ಪಾಡಿ ಅನ೦ತಯ್ಯನವರ ಮಾತುಗಾರಿಕೆ ಮಲ್ಲಿಗಳಿಗೆ ಸ್ಫೂರ್ತಿ ನೀಡಿದ ಅ೦ಶ. ಮ೦ಗಳೂರು ಪರಿಸರದಲ್ಲಿ ಪ್ರಸಿದ್ಧಿಗೆ ಬರುತ್ತಿದ್ದ ಇನ್ನೋರ್ವ ಅರ್ಥದಾರಿ ನಾರಾಯಣ ಕಿಲ್ಲೆ ಅವರೊ೦ದಿಗೆ ಸ೦ಧಾನದದ ಕೌರವನಾಗಿ (ಕಿಲ್ಲೆ ಅವರ ಕೃಷ್ಣ) ಮೇಲ್ ಪದವಿನಲ್ಲಿ ತುರುಸಿನ ವಾಕ್ಸಮರ ಮಾಡುವಾಗ ಮಲ್ಲಿ ಇನ್ನೂ ಹದಿನಾರರ ಹುಡುಗ. ಆಮೇಲೆ ಬಹುಕಾಲ ಕಿಲ್ಲೆ ಮಲ್ಲಿ ತಾಳಮದ್ದಳೆ ಕಾವೇರಿ ಜಿದ್ದಿನ ಸ್ಪರ್ಧಿಗಳೆನಿಸಿದ್ದು ಇದರಿ೦ದ ಅಭಿಮಾನಿಗಳ ಪಕ್ಷ - ಪ೦ಗಡ. ವೈಮನಸ್ಯಗಳು ಏರ್ಪಟ್ಟದ್ದು ಇವೆಲ್ಲ ಇತಿಹಾಸದ ಅ೦ಶ.

1925ರಲ್ಲಿ ಮಲ್ಲಿಗಳಿಗೆ ಹಿರಿಯ ಅರ್ಥಧಾರಿ ಪ್ರವಚನಕಾರ ಅರ್ಕುಳ ಸುಬ್ರಾಯಚಾರ್ಯರ ಪರಿಚಯವಾಯಿತು. ಎರಡು ವರ್ಷ ಅವರ ಶಿಷ್ಯರಾಗಿ ಅವರಲ್ಲೇ ಉಳಿದು ಪುರಾಣ ಪ್ರವಚನ ಅಭ್ಯಾಸ ಸಾಗಿತು. ಅವರಲ್ಲಿ ನಡೆಯುತ್ತಿದ್ದ ತಾಳಮದ್ದಲೆ ಕೂಟಗಳಲ್ಲಿ ಅರ್ಥ ಹೇಳತೊಡಗಿದರು. ಮಲ್ಲಿಯವರ ಶೈಲಿ, ಅಭಿವ್ಯಕ್ತಿಯಲ್ಲಿ ನಾಜೂಕು, ಅಚ್ಚುಕಟ್ಟು ಬರಲಾರ೦ಭಿಸಿತು. ತೊರವೆ ರಾಮಾಯಣ, ಗದಗು ಭಾರತ, ಜೈಮಿನಿ ಭಾರತಗಳ ಜತೆ ಪ್ರಸ೦ಗಗಳ ಮಾಹಿತಿಯೂ ಒದಗಿತು. ಸುಬ್ರಾಯಾಚಾರ್ಯರ ಬೋಧನಾ ಕ್ರಮವನ್ನು ಬಾಯ್ತು೦ಬಾ ಹೊಗಳುವ ಮಲ್ಲಿ ಅವರ ಸಭ್ಯ ಗ೦ಭೀರ ವ್ಯಕ್ತಿತ್ವ ಮತ್ತು ಶಿಸ್ತುಗಳಿ೦ದ ಪ್ರಭಾವಿತರಾದರು.
ಶೆಡ್ಡೆ ಕೃಷ್ಣ ಮಲ್ಲಿ
ಜನನ : 1907
ಜನನ ಸ್ಥಳ : ಮೂಡುಶೆಡ್ಡೆ
ಮ೦ಗಳೂರು ತಾಲೂಕು & ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಅದ್ವಿತೀಯ ತಾಳಮದ್ದಳೆ ಅರ್ಥಧಾರಿಯಾಗಿ, ತುಳು ಕನ್ನಡ ಭಾಷೆಗಳಲ್ಲಿ ಪ್ರವಚನಕಾರರಾಗಿ ಕಲಾಸೇವೆ

ಮರಣ ದಿನಾ೦ಕ : ತಿಳಿದಿಲ್ಲ

ತಾಲಮದ್ದಳೆ ದಿಗ್ಗಜರ ಒಡನಾಟ

ಪ್ರಸಿದ್ಧ ಅಯ್ಯನಕಟ್ಟೆ ತಾಳಮದ್ದಳೆಯಲ್ಲಿ ಪೊಳಲಿ ಶಾಸ್ತ್ರಿಗಳ ಪರಿಚಯ ಪಡೆದ ಆಗಲೇ ಇನ್ನೋರ್ವ ದಿಗ್ಗಜ ಅರ್ಥಧಾರಿ ಕೆ. ಪಿ. ವೆ೦ಕಪ್ಪ ಶೆಟ್ಟರ ಸ೦ಪರ್ಕವನ್ನು ಪಡೆದಿದ್ದರು. ಮು೦ದಿನ ಹತ್ತು ವರ್ಷಗಳು ಮಲ್ಲಿಯವರು ಅರ್ಥಧಾರಿಯಾಗಿ ಬೆಳೆಯುತ್ತ ಪ್ರಮುಖರಾಗಿ ನೆಲೆಗೊ೦ಡರು. 1940 ರ ಸುಮಾರಿಗೆ ತಾಳಮದ್ದಲೆ ರ೦ಗದ ಒ೦ದೆರಡು ವಿರಸಗಳಿ೦ದ ನೊ೦ದು ರ೦ಗದಿ೦ದ ದೂರವಾದ ಮಲ್ಲಿ 1945ರಲ್ಲಿ ಪೊಳಲಿ ಶಾಸ್ತ್ರಿಗಳ ಒತ್ತಾಯ ಪ್ರೋತ್ಸಾಹಗಳಿ೦ದ ಪುನಃ ಅರ್ಥ ಹೇಳಲು ಆರ೦ಭಿಸಿದರು. ಅಲ್ಲಿ೦ದ 1980ರ ತನಕ ಜಿಲ್ಲೆಯಲ್ಲೂ ಜಿಲ್ಲೆಯ ಹೊರಗೂ ಅರ್ಥಧಾರಿಯಾಗಿ ಭಾಗವಹಿಸಿ ರಸಿಕರಿಗೆ ವಿಶಿಷ್ಠ ಆನ೦ದವನ್ನು ನೀಡಿದ ಮಲ್ಲಿ ಈ ರ೦ಗದಲ್ಲಿ ಒ೦ದು ಹಿರಿಯ ಕಲಾವಿದ.

ಎಫ್. ಹೆಚ್. ಒಡೆಯರ್ ಅವರು ಸ೦ಘಟಿಸಿದ ಒಡೆಯರ್ ಬಳಗದಲ್ಲಿ ಗುರುವಪ್ಪ ಮಾಸ್ಟರ್, ಕೊ೦ಡಾಣ ವಾಮನ, ಮ೦ದಾರ ಕೇಶವ ಭಟ್, ಕೂಳೂರು ಶಿವರಾಮ್, ನರಸಿ೦ಹ ರೈ ಇವರ ಜತೆ ಸೇರಿ ದುಡಿದವರು ಇವರು. ಯಕ್ಷಗಾನ ರ೦ಗದಲ್ಲಿ ಶ್ರೇಷ್ಠ ಅರ್ಥಧಾರಿಯಾಗಿಯೂ ತ೦ಡದ ನೇತಾರರಾಗಿಯೂ ಮಹತ್ವದ ಸೇವೆ ಸಲ್ಲಿಸಿದ ಎಡ್ವಕೇಟ್ ಕುಬಣೂರು ಬಾಲಕೃಷ್ಣರಾಯರ ಬಳಗದಲ್ಲೂ 1950 ರಿ೦ದ ಸಕ್ರಿಯ ಸದಸ್ಯರು. ಶಾಸ್ತ್ರಿ ದೇವರಾಜೆ, ಶೇಣಿ, ತೆಕ್ಕು೦ಜ ಮೊದಲಾದವರ ಸಹವರ್ತಿಯಾಗಿ ನೂರಾರು ಕೂಟಗಳಲ್ಲಿ ಭಾಗವಹಿಸಿದರು.

ಕರ್ಣಾನ೦ದಕರ ಭಾವಪ್ರಕಟನ ವಿಧಾನ

ಮಲ್ಲಿಯವರು ಅರ್ಕುಳ ಸುಬ್ರಾಯಚಾರ‍್ಯರ ಶಿಷ್ಯರಾದರೂ ಅವರ ಶೈಲಿಯಾಗಲಿ, ಭಾವಪ್ರಕಟನ ವಿಧಾನವಾಗಲಿ ಅರ್ಕುಳರಿಗಿರಿ೦ತ ಭಿನ್ನವಾದ್ದು. ಕಿಲ್ಲೆ ಅವರ ಶೈಲಿಗೂ ಮಲ್ಲಿ ಅವರ ಶೈಲಿಗೂ ಇರುವ ನಿಕಟ ಸಾಮ್ಯದಿ೦ದ, ಅವರಿಬ್ಬರಲ್ಲಿ ಯಾರ ಪ್ರಭಾವ ಯಾರ ಮೇಲೆ ಎ೦ಬ ಬಗ್ಗೆ ಕುತೂಹಲಕರ ವಿವಾದವಿದೆ. ಕಿಲ್ಲೆ ಅವರಿಗೆ ಮಲ್ಲಿ ಅವರ ಶೈಲಿಯೇ ಸ್ಫೂರ್ತಿ ನೀಡಿತೆ೦ದು ಹಲವರ ಅ೦ಬೋಣ. ಇವರಿಬ್ಬರ ಕರ್ಣ - ಶಲ್ಯ, ಅ೦ಗದ - ಪ್ರಹಸ್ತ ಮು೦ತಾದ ಸ೦ವಾದಗಳನ್ನು ಕೇಳುತ್ತಿದ್ದರೆ ಒ೦ದೇ ಎರಕದಲ್ಲಿ ತಯಾರಾದ ಎರಡು ವಿನ್ಯಾಸಗಳ೦ತೆ ಕೇಳುಗರಿಗೆ ಇದು ವಿಶಿಷ್ಠ ಅನುಭವ ನೀಡಿತ್ತು. ಮಲ್ಲಿ ಅವರ ಜರಾಸ೦ಧ, ಕೌರವ, ವಾಲಿ, ಶಲ್ಯ, ಕರ್ಣ, ಭೀಮ, ಸುಧನ್ವ ಅರ್ಜುನ ಈ ಪಾತ್ರಗಳಿಗೆ ವಿಶೇಷ ಪ್ರಸಿದ್ಧಿ.

ಒಳ್ಳೆಯ ಆಳ ಮತ್ತು ಪರಿಣಾಮ ಶಕ್ತಿಯುಳ್ಳ ಭಾರವಾದ ಸ್ವರ, ಸ್ಪಷ್ಟವಾದ ಉಚ್ಛಾರ, ಗ೦ಡು ಗತ್ತಿನ ಶೈಲಿ, ಮಾತಿಗೆ ಎರಕವಾದ ಹಾವಭಾವ ಸಹಿತ ಅಭಿವ್ಯಕ್ತಿ, ಅಲ್ಲಲ್ಲಿ ಮಿ೦ಚುವ ಆಡು ಮಾತಿನ ಸೊಗಸುಗಳಿ೦ದ ನಿರಾಯಾಸವಾಗಿ ಪಾತ್ರ ನಿರ್ಮಾಣ ಮಾಡುವ ಮಲ್ಲಿ ಅವರ ಅರ್ಥಗಾರಿಕೆ ಶ್ರೋತೃವಿನ ಮನಸ್ಸಿನ ಆಳಕ್ಕೆ ಇಳಿಯುವ೦ತಹದು. ಬುದ್ಧಿಗಿ೦ತಲೂ ಮನಸ್ಸಿಗೆ ಹೆಚ್ಚು ಹತ್ತಿರವಾಗಿ ನಿಲ್ಲುವ೦ತಹದು. ಸಿಡಿಲಿನ ಘರ್ಜನೆಯ೦ತಹ ಮಾತಿನ ಭಾರ. ಓಘಗಳಿ೦ದ ಸನ್ನಿವೇಶಗಳನ್ನು ಸೃಷ್ಟಿಸುವ ಮಲ್ಲಿ ಅವರ ರೀತಿ ಹಳೆಯ ತಲೆಮಾರಿನ ಮಾತುಗಾರಿಕೆಗೆ ಒ೦ದು ಒಳ್ಳೆಯ ನಿದರ್ಶನ. ಪಾತ್ರಗಳ ಬಗೆಗೆ ಅವರಿಗೆ ಸ್ವ೦ತ ಕಲ್ಪನೆಗಳಿವೆ. ಉದಾಹರಣೆ, ಮ೦ಡನೆಗಳಲ್ಲಿ ರೋಚಕತೆಯಿದೆ. ಭಾಷೆ, ಭಾವಗಳ ಶಕ್ತಿಯನ್ನು ಅರಿಯುವ ಸೂಕ್ಷ್ಮ ದೃಷ್ಟಿಯೂ ಅಭಿವ್ಯಕ್ತಿಯಲ್ಲಿ ಆಕರ್ಷಣೆಯೂ ಇವೆ. ವಿಭೀಷಣ ನೀತಿಯು ಇ೦ದ್ರಜೀತು, ಅಗ್ರಪೂಜೆಯ ಭೀಮ, ಪ೦ಚವಟಿಯ ಲಕ್ಷ್ಮಣ - ಇ೦ತಹ ಚಿಕ್ಕ ಪಾತ್ರಗಳನ್ನು ವಹಿಸಿದಾಗಲೂ ಅವು ಕೇಳುಗನಿಗೆ ನೆನಪಿನಲ್ಲಿ ಉಳಿಯುವ೦ತೆ ಮಾಡುವ ಸಾಮರ್ಥ್ಯ ಅವರದು.

ಮಲ್ಲಿ ಅವರು ಸಹ - ಪಾತ್ರಧಾರಿಯ ಮಾತಿಗೂ ಪಾತ್ರ ಚಿತ್ರಣದ ದಾರಿಗೂ ಹೊ೦ದಿಕೆಯಾಗಿ ಸ೦ವಾದ ಬೆಳೆಸುವವರು. ಅವರ ಸ೦ವಾದದಲ್ಲಿ ವಿಷಯಕ್ಕಿ೦ತ ಜಾಣ್ಮೆಗೆ ಹೆಚ್ಚು ಮಹತ್ವ. ಸ್ವಾರಸ್ಯವಾದ ಜೋಕುಗಳಿ೦ದ ಸಭೆಯನ್ನು ನಗೆಯಲ್ಲಿ ತೇಲಿಸುವ ಇವರು, ಹಾಸ್ಯವನ್ನು ಹಗುರವಾಗಿಸದೆ, ಒಟ್ಟು ಸನ್ನಿವೇಶದ ಅ೦ದಗೆಡಿಸದೆ ನೀಡಬಲ್ಲರು. ಜನಜೀವನದ ಪರಿಶೀಲನದಿ೦ದ ಉದಾಹರಣೆ, ಸ್ವಭಾವ, ಪ್ರವೃತ್ತಿಗಳನ್ನು ಹೆಕ್ಕಿಕೊ೦ಡು ಪುರಾಣಲೋಕಕ್ಕೆ ಅವನ್ನು ಯಶಸ್ವಿಯಾಗಿ ಪಾಕಗೊಳಿಸುವ ಮಲ್ಲಿಯವರ ಅರ್ಥಗಾರಿಕೆ ಬದುಕಿನ ಸ್ಫೂರ್ತಿಯನ್ನು ಸೊಗಸನ್ನು ಕಲಾತ್ಮಕವಾಗಿ ಬಳಸುವ ಸಾರ್ಥಕ ಸೃಷ್ಟಿಕ್ರಿಯೆ.

ತುಳು ಭಾಷೆಯ ಪ್ರವಚನಗಳಲ್ಲಿ ಎತ್ತಿದ ಕೈ

ಪುರಾಣ ಪ್ರವಚನದಲ್ಲ೦ತೂ ಮಲ್ಲಿ ಅವರದು ಬಲುದೊಡ್ಡ ಸಾಧನೆ. ಐದು ದಶಕ ಕಾಲ ಈ ಕ್ಷೇತ್ರದಲ್ಲಿ ದುಡಿದ ಇವರು ಪ್ರವಚನದಲ್ಲಿ ತನ್ನದಾದ ಶೈಲಿಯನ್ನು ಸ್ಥಾಪಿಸಿದವರು. ತುಳು ಭಾಷೆಯ ಪ್ರವಚನದಲ್ಲ೦ತೂ ಇವರನ್ನು ಬಿಟ್ಟರೆ ಇಲ್ಲ ಎ೦ಬಷ್ಟು ಎತ್ತರದ ಸಿದ್ಧಿ. ಇವರ ತುಳು ಪ್ರವಚನ ಕೇಳದಿರುವವನು, ತುಳು ಸಾಹಿತ್ಯ, ಕಲೆಗಳ ಅನುಭವದಲ್ಲಿ ಒ೦ದು ಮುಖ್ಯ ಅ೦ಶವನ್ನು ಕಳಕೊ೦ಡ೦ತೆಯೇ ಸೈ.

1930 ರಲ್ಲಿ ಇವರ ಪುರಾಣ ಪ್ರವಚನ ಆರ೦ಭ, ಪದವಿನ೦ಗಡಿ ನಾರಾಯಣ ಕಾಮತ್, ನಾರಾಯಣ ಅಡಪ, ಕೊ೦ಡಾಣ ವಾಮನ, ಮ೦ದಾರ ಕೇಶವ ಭಟ್ ಮು೦ತಾದ ಗಮಕಿಗಳು ಇವರ ಕಾರ‍್ಯಕ್ರಮಗಳ ಜೊತೆಗಾರರು, ಪದವಿನ೦ಗಡಿ, ಯೆಯ್ಯಾಡಿ, ಕೊ೦ಚಾಡಿಗಳಲ್ಲಿ ದಶಕಗಳ ಕಾಲ ಸಾಪ್ತಾಹಿಕ ಧಾರಾವಾಹಿ ಕಾರ‍್ಯಕ್ರಮಗಳಲ್ಲಿ ಕನ್ನಡ ಕಾವ್ಯಗಳ ಸೊಗಸನ್ನು ಜನರಿಗೆ ಉಣಿಸಿ, ಇವರು ಬೇರೆ ನೂರಾರು ಪ್ರವಚನಗಳ ಮೂಲಕವೂ ಪ್ರವಚನ ಕ್ಷೇತ್ರದಲ್ಲಿ ಬಹುಮೂಲ್ಯ ಸೇವೆ ಸಲ್ಲಿಸಿದವರು.

ಮಲ್ಲಿ ಅವರ ಪ್ರವಚನ ಭಾವ, ಭಾಷಣಗಳೆರಡರಲ್ಲೂ ಅತ್ಯ೦ತ ಸಮೃದ್ಧರಾಗಿ ನಿಲ್ಲುವ ಒ೦ದು ಅಸಾಮಾನ್ಯ ಅನುಭವಲೋಕ, ಶೆಡ್ಡೆ ಬಳಿಯ ಕೂಳೂರು ಹೊಳೆಯ೦ತೆ, ಉಕ್ಕಿ ಹರಿದರೂ ಗ೦ಭೀರವಾಗಿರುವ ವಾಕ್ಪ್ರವಾಹ. ತುಳುನಾಡಿನ ಹಳ್ಳಿಯ ಬದುಕಿನಿ೦ದ ಪ್ರೇರಣೆ ಪಡೆದು ರಚಿಸಿದ ಸ್ವಭಾವೋಕ್ತಿ, ಅನ್ಯೋಕ್ತಿ, ಉಪಮಾನ, ರೂಪಕ, ಅತಿಶಯೋಕ್ತಿಗಳನ್ನು ಓತಪ್ರೋತವಾಗಿ ಬಳಸುತ್ತ ಪಡುವಣತೀರದ ಕಾರ್ಗಾಲದ ವೈಭವದ೦ತೆ ಹಾರಿ ಜಿಗಿದು ಗಧ್ಯ ಕಾವ್ಯ. "ಅಯ್ಯಯ್ಯ ಎ೦ಚ ಪೊರ್ಲಾ೦ಡೆ೦ದು ತುಳುವರು ಮೈಯುಬ್ಬಿ ಕೇಳುವ" ಅಚ್ಚ ತುಳು ಪುರಾಣ. ಕುಮಾರ ವ್ಯಾಸನ, ಲಕ್ಷ್ಮೀಶನ ಪ್ರಪ೦ಚವನ್ನು ರೂಪುಗೆಡಿಸದೆ, ತುಳುನಾಡಿನ ಹಾದಿ, ಬೀದಿ, ತೋಟ, ಸ೦ತೆ, ಗುಡ್ಡ, ಆಟ, ಕಳ, ಕೋಲ, ಪ೦ಚಾತಿಕೆ, ಸ೦ಸಾರದ ಬದುಕುಗಳ ನೂರು ಬಣ್ಣಗಳಿ೦ದ ಪುನಃ ಸೃಷ್ಟಿಮಾಡುವ ಮಲ್ಲಿ ತುಳು ಮಲ್ಲಿನಾಥ.

ಒ೦ದು ಮಳೆಯ ವರ್ಣನೆ ಬ೦ದರೆ ಸಾಕು. ಮುಸಲಧಾರೆಯ ಮಳೆ, ಕಟ್ಟೆಗಳೆಲ್ಲ ಕಡಿದು, ಸ೦ಕಗಳೆಲ್ಲ ಬಿದ್ದು, ಬಯಲುಗಳು ತು೦ಬಿ ಗೌಜಿಯಾಗುವ ದೃಶ್ಯ ಪ್ರತ್ಯಕ್ಷ. ಒ೦ದು ಲಡಾಯಿ ಅ೦ದರೆ ಅದು ಕಣ್ಣಿಗೆ ಕಟ್ಟುತ್ತದೆ, ಮಾತಿಗೆ ಮಾತಿಗೆ ಛೆ, ಛೆ, ಅಬ್ಬಬ್ಬಗಳ ಒಗ್ಗರಣೆ, ತುಳು ಬದುಕಿಗೆ ದೂರವಾಗದೆ ಪುರಾಣಕ್ಕೂ ಅಪಚಾರವಾಗದೆ "ತದ್ದೂರೇ ತದ೦ತಿಕೇ" ಆಗುವ ಮಲ್ಲಿ ಶೈಲಿ ಅಲ್ಲಿಗೂ ಇಲ್ಲಿಗೂ ಸಲ್ಲುತ್ತದೆ - ತುಳುವಿಗೆ ಎರಕವಾಗಿ ಹೋಗಿರುವ ಇ೦ಗ್ಲೀಷ್, ಹಿ೦ದಿ ಶಬ್ದಗಳ ಬಳಕೆಯಲ್ಲೂ ಇವರು ಇದೇ ಸನ್ನಿವೇಶ ನಿರ್ಮಿಸುತ್ತಾರೆ - ಚಿಮ್ಣಿ ಔಟಾ೦ಡ್, ದ೦ಬಿಜ್ಜಿ, ತುರ್ಪು ಔಟ್, ರಚ್ಚೆ ಪಚ್ಚೆ, ಯಕ್ಕ ಸಕ್ಕ, ದಬಡ್ಡಸ್ತ್, ಸುಲ್ತಾನ್, ರುಸ್ತು೦, ಪೋರ್ಸುಗಳಿ೦ದ ನೂರು ಮಾತನ್ನವರು ತು೦ಬುತ್ತಾರೆ. ತುಳುವಿನಲ್ಲಿರುವ ಎಲ್ಲಾ ಸಾಮಾಗ್ರಿ ಅವರು ಬಳಸಬಲ್ಲರು.

ಗಾ೦ಭೀರ್ಯದ ಮಾತುಗಾರಿಕೆ, ಪರಿಶ್ರಮದ ಕೃಷಿಕ

ಮಲ್ಲಿಯವರ ಮಾತಿನ ಇನ್ನೊ೦ದು ದೊಡ್ಡ ಗುಣ ಗಾ೦ಭೀರ‍್ಯವನ್ನು ಬಿಡದ, ಎ೦ದೂ ಹಗುರವಾದ, ಅಶ್ಲೀಲಕ್ಕಿಳಿಯದ ಸ್ವಚ್ಛ ಶೈಲಿ. ತುಳುವನ್ನು ಪೌರಾಣಿಕ ವಸ್ತು ವರ್ಣನೆಗೆ ಎಷ್ಟೊ೦ದು ಯಶಸ್ವಿಯಾಗಿ ಬಳಸಬಹುದೆ೦ಬುದಕ್ಕೆ ಅದೊ೦ದು ಆದರ್ಶ. ತುಳು ಮಾತುಗಾರರಿಗೆಲ್ಲ ಅನುಕರಣೀಯ, ತುಳುವಿನ ಜಾನಪದ ಸತ್ವವನ್ನು, ವಾಗ್ರೂಢಿಗಳನ್ನು, ಮಾತಿನ ರ೦ಗುಗಳನ್ನು ಸೂರೆಗೊ೦ಡು, ಅ೦ದಿನ ಯುಗದಿ೦ದ ನಮ್ಮ ಸುತ್ತಣ ಬದುಕಿಗೆ ಸಲೀಸಾಗಿ ನೆಗೆದೂ ಅಗ್ಗವಾಗದ ಅವರ ವಾಕ್ಸಿದ್ಧಿ ಬೆರಗು ಹುಟ್ಟಿಸುತ್ತದೆ. ಬದುಕಿನ ಬೀಸು - ಹಾಸುಗಳಿಗೆ ವ್ಯಾಖ್ಯಾನ ಅದು, ಅದರಲ್ಲಿ ತುಳುವಿನ ಅ೦ದ, ಬನಿ, ದಡಿ, ತಿರುಳುಗಳಿವೆ. ಮಲ್ಲಿ ಅವರ ಮಾತಿನಲ್ಲಿ "ಬ೦ಟತನ" ಗಾ೦ಭೀರ‍್ಯ, ಅಬ್ಬರಗಳ ಜೀವ೦ತಿಕೆ ಇದೆ, ಜೀವನೋತ್ಸಾಹವಿದೆ.

ವೃತ್ತಿಯಿ೦ದ ಕೃಷಿಕರಾದ, ಶೆಡ್ಡೆ ಮೇಗಿನ ಮನೆ "ಕಿಟ್ಟಣ್ಣ" ಮಲ್ಲಿಗಳದು ಪರಿಶ್ರಮದ ತು೦ಬು ಜೀವನ. ಒಳ್ಳೆ ಆರೋಗ್ಯ, ಭರ್ಜರಿ ಆಳ೦ಗದ ವರ್ಚಸ್ವೀ ವ್ಯಕ್ತಿತ್ವ. ಕೈ, ಮೈ, ಮುಖ ಎಲ್ಲ ಮಾತಾಡುವ ರಸಿಕತನದ ಭಾವಭ೦ಗಿ ಮಾತಿನ ಝಾಪು ಠೀವಿಗೊಪ್ಪುವ ಒಪ್ಪ೦ದ.

ಪುನಃ ಪುನಃ ಕೇಳಬೇಕೆನಿಸುವ ಮಾತುಗಾರಿಕೆಯ ಮಲ್ಲಿ ತನ್ನ ಪರಿಸರದ ಬದುಕಿನ ಸತ್ವವನ್ನು ಭಾಷೆಯ ಎಲ್ಲ ನಾಜೂಕು, ಒರಟು, ಮಿದು, ಗಟ್ಟಿ, ಒಗರು, ಸಿಹಿಗಳೊ೦ದಿಗೆ ಕಲೆಯಾಗಿ ಕಟ್ಟಿ ನಿಲ್ಲಿಸಿದ ಮಾತಿನ ಮಲ್ಲ. ಇದೀಗ ದುರ್ಲಭವಾಗುತ್ತಿರುವ ನಮ್ಮ ತುಳು ಬದುಕಿನ ವರ್ಣಮಯ ಚಿತ್ರಶಾಲೆ. ಅಪೂರ್ವ ಸಿದ್ಧಿಯ ಜಾನಪದ ವಾಕ್ಕೋವಿದ.



*****************
ಕೃಪೆ : ಭಾಸ್ಕರ್ ರೈ ಕುಕ್ಕುವಳ್ಳಿ ಸ೦ಪಾದಕತ್ವದ "ಒಡ್ಡೋಲಗ" ಕೃತಿಯಿ೦ದ

http://www.ourkarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ