ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ರಂಗ ರಸಾಯನ ಯಕ್ಷ-ನಾದ-ನಿನದ

ಲೇಖಕರು : ಬಿ. ಗಂಗಾಧರ ನಾಯಕ್‌
ಶುಕ್ರವಾರ, ಡಿಸೆ೦ಬರ್ 4 , 2015
ಡಿಸೆ೦ಬರ್ 4, 2015

ರಂಗ ರಸಾಯನ ಯಕ್ಷ-ನಾದ-ನಿನದ

ಸಾಗರ : ಸಾಗರದ ವಿಜಯ ಸೇವಾ ಟ್ರಸ್ಟ್‌ನ ಸಾಂಸ್ಕೃತಿಕ ಅಂಗ ಯಕ್ಷಶ್ರೀ ಹಮ್ಮಿ ಕೊಂಡಿದ್ದ ಯಕ್ಷ-ನಾದ-ನಿನದ ಎಂಬ ಯಕ್ಷಗಾನ ಪದ್ಯಗಳು ಮತ್ತು ಸುಗಮ ಸಂಗೀತ ಕಾರ್ಯಕ್ರಮ ಇತ್ತೀಚೆ ಸಾಗರದ ಶಾರದಾಂಬ ದೇವಸ್ಥಾನದ ಸಭಾಗೃಹದಲ್ಲಿ ನಡೆಯಿತು. ಹತ್ತಿರ ಒಂದೂವರೆ ದಶಕದ ನಿರಂತರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಯಕ್ಷಶ್ರೀ ಸದಾ ತನ್ನದೇ ಆದ ಅಚ್ಚುಕಟ್ಟುತನ ಮತ್ತು ವಿಭಿನ್ನತೆಯನ್ನು ಕಾಯ್ದು ಕೊಂಡಿದೆ. ಗಾನಲೋಕದ ಶ್ರವ್ಯಮಾಧ್ಯಮದಲ್ಲಿ ತೊಡಗಿಸಿಕೊಳ್ಳುವುದೆಂದರೆ ಯಕ್ಷಶ್ರೀಗೆ ಬಹಳ ಮೆಚ್ಚಿನದು.

ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಸುಗಮ ಸಂಗೀತದ ದಿಗ್ಗಜ ಕಲಾವಿದರು ವೇದಿಕೆಯಲ್ಲಿದ್ದರು. ಸಾಗರಕ್ಕೆ ಪ್ರಾಯಶಃ ಮೊದಲ ಪರಿಚಯವಾಗಿ ತೆಂಕುತಟ್ಟಿನ ಭಾಗವತಿಕೆಯಲ್ಲಿ ಕಾವ್ಯಶ್ರೀ ಆಜೇರು ಇದ್ದರು. ಬಡಗಿನಲ್ಲಿ ಯಕ್ಷಶ್ರೀಯ ಲಾಗಾಯ್ತಿನ ಒಡನಾಡಿ ಸುಬ್ರಹ್ಮಣ್ಯ ಧಾರೇಶ್ವರರಿದ್ದರು. ಸುಗಮ ಸಂಗೀತದಲ್ಲಿ ಹೆಸರಾಂತ ಕಲಾವಿದೆ ಬೆಂಗಳೂರಿನ ಮಂಗಳಾ ರವಿ ಕುಳಿತಿದ್ದರು. ಈ ಸಂಗೀತ ರಸಾಯನದ ರುಚಿ ಹೆಚ್ಚಳಕ್ಕೆ ವಿಶೇಷ ಆಕರ್ಷಣೆಯಾಗಿ ಕೊಳಲಿನೊಂದಿಗೆ ಕುಳಿತ ಪ್ರಕಾಶ್‌ ಹೆಗಡೆ ಕಲ್ಲಾರೆಮನೆ ಮೂವರಿಗೂ ಸಾಧ್ಯವಿರುವಲ್ಲೆಲ್ಲ ಸಾಥ್‌ ನೀಡಿದರು. ದೃಶ್ಯವಿರಲಿ, ಶ್ರಾವ್ಯ ವಿರಲಿ ಪ್ರೇಕ್ಷಕರಿಗೆ ಖುಷಿಕೊಡಬೇಕು. ಇದನ್ನು ಸಾದ್ಯಂತವಾಗಿ ಕರಗತ ಮಾಡಿಕೊಂಡು ಕೆಲಸ ಮಾಡುವ ಕಲೆ ಯಕ್ಷಶ್ರೀಗೆ ಚೆನ್ನಾಗಿ ಗೊತ್ತಿದೆ. ಕಲಾಭಿಮಾನಿಗಳ ಸಮಯದ ಮೌಲ್ಯದ ಅರಿವು ಕಲಾಸಂಘಟನೆಗಳಿಗೆ ಇರಬೇಕು ಎನ್ನುವುದಕ್ಕೆ ಯಕ್ಷಶ್ರೀ ಮಾದರಿ. ಅಂದು ಎಷ್ಟೇ ಕಾರ್ಯಕ್ರಮಗಳಿರಲಿ ಯಕ್ಷಶ್ರೀಯ ಸಭಾಂಗಣ ಹೌಸಫ‌ುಲ್‌!

ಯಾರೆಲೆ ನೀನು ಹುಡುಗಿ... ನಳ ಚರಿತ್ರೆಯ ಜಾನಪದ ಸೊಗಡಿನ ಪದ್ಯ. ತೆಂಕು ತಿಟ್ಟಿನ ಮಟ್ಟು ಮತ್ತು ಶ್ರುತಿ ಸ್ಪಷ್ಟತೆಯಲ್ಲಿ ಕಾವ್ಯಶ್ರೀ ಹಾಡಿ ದೀರ್ಘ‌ ಕರತಾಡನಕ್ಕೆ ಕಾರಣರಾದರು. ಇದರ ಸೊಗಡು ಕೇಳಿದ ಧಾರೇಶ್ವರರು ಕೂಡ ದನಿಗೂಡಿಸಿದರು. ಚೂಡಾಮಣಿಯ ಒಂದು ಏರು ಪದ್ಯ ಮತ್ತು ರಾಮಾಂಜನೇಯದ ಬಿರುಸಿನ ಹಾಡು ನಡೆ ನಡೆ ರಘುವರನೆಡೆಗೆ... ಹೀಗೆ ಸಾಕಷ್ಟು ಅವಕಾಶ ಗಿಟ್ಟಿಸಿದ ಕಾವ್ಯಶ್ರೀ ಸಾಗರದ ಕಲಾಭಿಮಾನಿಗಳ ಮನಸ್ಸಲ್ಲಿ ನೆಲೆ ನಿಂತರು. ಸಾಗರಕ್ಕೂ ಧಾರೇಶ್ವರರಿಗೂ ಎಂದಿಗೂ ಅವಿನಾಭಾವ ಸಂಬಂಧವಿದೆ. ನಡುಬಡಗಿನ ಕಲಾಭಿಮಾನಿಗಳು ಇಲ್ಲಿ ಹೆಚ್ಚು. ಉಪ್ಪೂರರು ಮತ್ತು ನಾವುಡರು ಈ ಭಾಗದ ಜನಪ್ರಿಯ ಕಲಾವಿದರು. ಉಪ್ಪೂರರ ಶಿಷ್ಯ, ನಾವುಡರ ಒಡನಾಡಿ ಧಾರೇಶ್ವರರಿಗೂ ಈ ಭಾಗದಲ್ಲಿ ಅಸಂಖ್ಯ ಅಭಿಮಾನಿಗಳಿ ದ್ದಾರೆ. ಕರ್ಣಾರ್ಜುನದ ಕೇಳು ಮುರರಿಪು ಕಮಲಲೋಚನ... ಉಪ್ಪೂರರ ಶೈಲಿ, ಕುಂಜಾಲು ಶೈಲಿ ಹಾಗೂ ತನ್ನದೇ ಸ್ವಂತಿಕೆಯಲ್ಲಿ ಹಾಡಿ ತೋರಿ ಪ್ರತಿಭೆ ಮೆರೆದರು. ಅಪರೂಪ ಪ್ರಸಂಗಗಳ ಅಪರೂಪದ ಪದ್ಯಗಳನ್ನು ಇಲ್ಲಿ ಸಾದರ ಪಡಿಸಿದುದು ಇಲ್ಲಿನ ವೈಶಿಷ್ಟ್ಯವೆನಿಸಿತು. ಸುಗಮ ಸಂಗೀತದಲ್ಲಿ ಮಂಗಳಾ ಎಚ್‌ಎಸ್‌ವಿ, ಜಿಎಸ್ಸೆಸ್‌, ಹಾಗೂ ಬಿ.ಆರ್‌. ಲಕ್ಷ್ಮಣರಾವ್‌ ಇವರ ಆಯ್ದ ಪದ್ಯಗಳನ್ನು ಹಾಡಿ ಜನಮನ ಗೆದ್ದರು.

ಯಕ್ಷಗಾನದಲ್ಲಿ ಬಡಗುತಿಟ್ಟಿನಲ್ಲಿ ಶಂಕರ ಭಾಗವತರು ಮತ್ತು ಕೃಷ್ಣ ಯಾಜಿ ಇಡಗುಂಜಿ ಇವರು ಕ್ರಮವಾಗಿ ಮದ್ದಳೆ ಮತ್ತು ಚೆಂಡೆಯಲ್ಲಿದ್ದರು. ತೆಂಕಿನಲ್ಲಿ ಪ್ರಕಾಶ್‌ ಉಳಿತ್ತಾಯ, ಸುಬ್ರಹ್ಮಣ್ಯ ಭಟ್‌ ದೇಲಂತಮಜಲು ಮತ್ತು ಶ್ರೀಪತಿ ನಾಯಕ್‌ ವಿವಿಧ ವಾದನಗಳಲ್ಲಿದ್ದರು. ಸುಗಮ ಸಂಗೀತದಲ್ಲಿ ನಾಗಭೂಷಣ ಉಡುಪ, ತುಕಾರಾಮ ರಂಗಧೋಳ್‌ ಮತ್ತು ವಿಠuಲ ರಂಗಧೋಳ್‌ ಸಾಥ್‌ ನೀಡಿದರು. ಕೊಳಲಿನ ಹೆಸರಾಂತ ಕಲಾವಿದ ಪ್ರಕಾಶ್‌ ಹೆಗಡೆ ಕಲ್ಲಾರಮನೆ ಎಲ್ಲೆಮೀರಿ ಎಲ್ಲ ನಾದಗಳಿಗೂ ಜತೆಯಾಗಿ ರಂಗ ರಸಾಯನದ ಸವಿ ಹೆಚ್ಚಿಸಿದುದು ಪ್ರಶಂಸನೀಯವಾಯಿತು. ಈ ರಂಗ ಪ್ರಸ್ತುತಿಯ ರೂವಾರಿ ಡಾ| ಎಚ್‌. ಎಸ್‌. ಮೋಹನ್‌ ಪರಿಕಲ್ಪನೆ,

ಸಂಯೋಜನೆ ಮಾಡಿ ನಿರೂಪಿಸಿ ಕಾರ್ಯಕ್ರಮದ ಒಟ್ಟು ಯಶಸ್ಸಿಗೆ ಕಾರಣರಾದರು.

ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ