ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನ ಇಡೀ ರಾತ್ರಿ ಬೇಡ ನಡು ರಾತ್ರಿ ಸಾಕು

ಲೇಖಕರು :
ಲಕ್ಷ್ಮಿ ಮಚ್ಚಿನ
ಬುಧವಾರ, ಸೆಪ್ಟೆ೦ಬರ್ 2 , 2015

ಬ್ರಿಟೀಷರ ಕಾಲದಲ್ಲಿ ಮೈಸೂರು ಅರಮನೆಯಲ್ಲಿ , ದಿಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ನೀಡಿದ, ಎರಡು ಶತಮಾನಗಳ ಇತಿಹಾಸದ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿ ಅನಿವಾರ್ಯವಾಗಿ ಈ ವರ್ಷದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದೆ. ಮೂರು ವರ್ಷ ಚಿಂತನ - ಮಂಥನ ನಡೆಸಿ ಸರ್ವರ ಅಭಿಪ್ರಾಯ ಸಂಗ್ರಹಿಸಿ ರಾತ್ರಿ 7ರಿಂದ ಮಧ್ಯರಾತ್ರಿ 12ರ ವರೆಗೆ ಪ್ರದರ್ಶನ ನೀಡಲು ತೀರ್ಮಾನಿಸಲಾಗಿದೆ. ಇದು ಕಾಲಮಿತಿಯ ಕುರಿತು ಹೊಸ ಚರ್ಚೆಗೆ ಪುನರ್‌ನಾಂದಿ ಹಾಡಿದೆ. ಐದು ದಿನಗಳ ಕಾಲ ನಡೆಯುತ್ತಿದ್ದ ದೇವಿ ಮಹಾತ್ಮೆ ನಂತರ ಮೂರು, ಎರಡು ದಿನಗಳ ಕಾಲ ನಡೆದು 1 ದಿನದ ದೇವಿಮಹಾತ್ಮೆ ಜನಪ್ರಿಯವಾಯಿತು. ಆದರೆ ಸಮಯಾಭಾವದ ಪ್ರೇಕ್ಷಕರಿಗೆ ಕಾಲಮಿತಿಯ ದೇವಿಮಹಾತ್ಮೆ ಕೂಡಾ ಕಥಾಸಾರ ನೀಡಬಲ್ಲದು.

ಯಕ್ಷಗಾನವು ಕರಾವಳಿಯ ಮಣ್ಣಿನ ಪುಣ್ಯದಿಂದ ಹುಟ್ಟಿ ಬೆಳೆದು ಬಂದ ವಿಶಿಷ್ಟ ಸಾಂಪ್ರದಾಯಿಕ ಕಲೆ. ತುಳುನಾಡಿನ ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಜನಜೀವನದ, ಸಮಾಜದ ಮತ್ತು ಸಾಂಸಾರಿಕ ರೀತಿ - ನೀತಿಗಳನ್ನು ಗೋಚರ ಮತ್ತು ಅಗೋಚರವಾಗಿ ಪ್ರೇರೇಪಿಸಿದ ಗಂಡು ಕಲೆಯಾಗಿದೆ. ವಾಡಿಕೆಯಿಂದ ರಾತ್ರಿಯ ಜಾಮಗಳಲ್ಲಿ ಪ್ರದರ್ಶಿಸಲ್ಪಟ್ಟು ರಂಜಿಸಿದೆ.

ಆಕರ್ಷಣೆಗಾಗಿ ಕಸರತ್ತು

ಕಳೆದ 50 ವರ್ಷಗಳಲ್ಲಿ ಯಕ್ಷಗಾನದ ಉಳಿವು - ಅಳಿವುಗಳ ಎಚ್ಚರಿಕೆಯ ಗಂಟೆ ಮೊಳಗಿತು. 1960 ರಿಂದ 1980 ರ ದಶಕಗಳಲ್ಲಿ ಯಕ್ಷಗಾನದ ಪ್ರಸಂಗದ ಕಥೆಗಳಲ್ಲಿ, ರಂಗಸ್ಥಳ ವಿನ್ಯಾಸದಲ್ಲಿ, ವಿದ್ಯುತ್ಛಕ್ತಿಯ ಬಳಕೆಯಲ್ಲಿ, ಧ್ವನಿಗೆ ಮೈಕುಗಳ ಬಳಕೆಯಲ್ಲಿ, ವೇಷಭೂಷಣಗಳಿಗೆ ಕೃತಕ ವಸ್ತು ಮತ್ತು ಬಟ್ಟೆಗಳ ಬಳಕೆಯಲ್ಲಿ ಬದಲಾವಣೆ ಮಾಡಿ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯತ್ನಗಳನ್ನು ಮೇಳದ ಯಜಮಾನರುಗಳು ಹಾಗೂ ರಂಗದ ಹಿನ್ನೆಲೆಯ ಮತ್ತು ರಂಗಸ್ಥಳದ ಕಲಾವಿದರು ಮಾಡಿದರು.

ಹೊಸತನ

ಯಕ್ಷಗಾನದಲ್ಲಿ ಹೊಸತನ ತರುವುದು ಹಿಂದಿನಿಂದಲೇ ನಡೆದು ಬಂದಿದೆ. ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನೀಯ ಅಭಿನಯಿಕೆ, ವೇಷ ಭೂಷಣದ ಜತೆಗೆ ನಾಟಕೀಯ ವೇಷಗಳ ಬಳಕೆ ಆರಂಭಿಸಿದರು. ಆಗಲೂ ಅಪ್ಪಟ ಯಕ್ಷಗಾನಾಭಿಮಾನಿಗಳು ಟೀಕಿಸಿದರು. ಯಕ್ಷಗಾನದ ಕೊಲೆ ಎಂದರು. ಅಜ್ಜ ಬಲಿಪರು ಯಕ್ಷಗಾನದಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಬೆಳಗಿನವರೆಗೆ ನಿಂತೇ ಪದ ಹೇಳುತ್ತಿದ್ದ ಭಾಗವತರಿಗೆ ಪಡಿಮಂಚ ತಂದು ಕುಳಿತು ಹಾಡುವ ಸೌಕರ್ಯದ ಬದಲಾವಣೆ ಬಂದುದು ಅಜ್ಜ ಬಲಿಪರಿಂದ. ಆಗಲೂ ಟೀಕೆ ಇದ್ದೇ ಇತ್ತು. ಬಡಾ ಬಡಗಿನ ಕಡತೋಕ ಮಂಜುನಾಥ ಭಾಗವತರು ತೆಂಕಿಗೆ ಬಂದಾಗಲೂ ಕಟ್ಟಾಳುಗಳು ಟೀಕಿಸಿದ್ದರು.

ದಾಮೋದರ ಮ೦ಡೆಚ್ಚ

ಬದಲಾವಣೆ

ಮಂಡೆಚ್ಚರು ಸಂಗೀತ ಶೈಲಿಯಲ್ಲಿ ಹಾಡಿದಾಗ ಯಕ್ಷಗಾನ ಕುಲಗೆಟ್ಟು ಹೋಯಿತು ಎಂದರು. ಕಾಳಿಂಗ ನಾವಡರ ಸ್ವರಕ್ಕೆ ಸೋಲದವರಿಲ್ಲ. ಆದರೆ ಟೀಕೆಯ ಪೆಡಂಭೂತ ಅವರನ್ನೂ ಬಿಡಲಿಲ್ಲ. ಸುಬ್ರಹ್ಮಣ್ಯ ಧಾರೇಶ್ವರರು ಗಳಿಸಿದ ಖ್ಯಾತಿ ಉತ್ತುಂಗ. ಅವರ ಹಾಡು ಅಷ್ಟೇ ಸೌಮ್ಯ, ಮೃದು, ಮಾಧುರ್ಯಭರಿತ, ಲಾಲಿತ್ಯಪೂರ್ಣ. ಅವರೂ ಭಜನೆ, ಸಿನಿಮಾ ಪದ್ಯಗಳ ಹಾಡುಗಾರ ಎಂಬ ಟೀಕೆ ಕೇಳಿದ್ದುಂಟು. ತುಳುಪ್ರಸಂಗಗಳ ಪ್ರದರ್ಶನ ಆರಂಭವಾದಾಗ ಯಕ್ಷಗಾನ ಇನ್ನು ಕಾಣಸಿಗದು, ತುಳು ಪ್ರಸಂಗಗಳು ಯಕ್ಷಗಾನವನ್ನು ಇನ್ನಿಲ್ಲದಂತೆ ಹಾಳು ಮಾಡಿತು ಎಂದೇ ವಿಮರ್ಶೆ ಬಂತು. ಆದರೆ ಕಲಾಸಕ್ತರನ್ನು ಬರಸೆಳೆದು ಟೆಂಟು ತುಂಬಿಸುವಂತೆ ದಾಖಲೆ ಬರೆದದ್ದು ಕರ್ನಾಟಕ ಮೇಳ.

ಕಾಲಮಿತಿ

ಇಡಿ ರಾತ್ರಿಯ ಬದಲಿಗೆ ಕಾಲಕ್ರಮೇಣ ಕಾಲಮಿತಿಯ ಯಕ್ಷಗಾನ ಬಂತು. ಅಸಲಿಗೆ ಕಾಲಮಿತಿಯ ಯಕ್ಷಗಾನ ಬಂದ ಬಳಿಕ ಯಕ್ಷಗಾನದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಇಡೀ ರಾತ್ರಿಯ ಪ್ರಸಂಗ ವೀಕ್ಷಕರ ಸಂಖ್ಯೆ ಕಡಿಮೆಯಾಯಿತು. ಇದಕ್ಕೆ ಅಪವಾದವೂ ಇದೆ.

ಕಾಲಮಿತಿ ಕುರಿತು ಡಾ| ವೀರೇಂದ್ರ ಹೆಗ್ಗಡೆಯವರು ಹೇಳುವುದು ಹೀಗೆ.

ಇದೀಗ ಬದಲಾವಣೆಗಳು ಅನಿವಾರ್ಯವಾಗತೊಡಗಿದೆ. ನಗರಗಳು ಮತ್ತು ಪೇಟೆಗಳೊಂದಿಗೆ ಗ್ರಾಮೀಣ ಜನ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಸಿನೆಮಾ, ಟಿ.ವಿ. ಸೀರಿಯಲ್‌ಗ‌ಳನ್ನು ನೋಡುವ ಇಂದಿನ ಜನಾಂಗಕ್ಕೆ ರಾತ್ರಿ ಇಡೀ ಪ್ರಸಂಗದ ಕಲ್ಪನೆ ಮಾಡಿಕೊಂಡು ಪ್ರಸಂಗದ ಅದ್ಭುತ ದೃಶ್ಯಗ‌ಳನ್ನು ಮನತುಂಬಿಕೊಳ್ಳುವ ಮುಗ್ಧತೆ ಕಡಿಮೆಯಾಗಿದೆ. ರಾತ್ರಿ ಕೃಷಿಯ ರಕ್ಷಣೆ, ಮನೆಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಿರುತ್ತದೆ. ಯಕ್ಷಗಾನ ಪ್ರದರ್ಶನಕ್ಕೆ ಜಾಗದ ಕೊರತೆಯಾಗಿದೆ.

ಇದರೊಂದಿಗೆ ರಾತ್ರಿ ಇಡೀ ಮೈಕಾಸುರನ ಹಿಂಸೆ ಅನ್ನಿಸಿದರೂ, ಕಲೆಯ ಮೇಲಿನ ಗೌರವ ಮತ್ತು ಯಕ್ಷಗಾನ ಮೇಳಗಳ ಹಿಂದೆ ಇರುವ ಕ್ಷೇತ್ರಗಳ ಮತ್ತು ದೇವತಾ ಸಾನ್ನಿಧ್ಯದ ಮೇಲಿನ ಗೌರವದಿಂದ ಕಲಾಭಿಮಾನಿಗಳು ಸಹಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯ ವರೆಗೆ ಪ್ರಸಂಗಗಳನ್ನು ನೋಡಿ ಹೋಗುವವರು ಹೆಚ್ಚಾಗುತ್ತಿದ್ದಾರೆ. ಕೆಲವು ಮೇಳಗಳ ಪ್ರಸಂಗದ ನೀರವತೆ‌ಯೂ, ಕಲಾವಿದರ ಪರಿಶ್ರಮದ ಕೊರತೆಯ ಕಾರಣದಿಂದಲೂ ರಾತ್ರಿ ಇಡೀ ಪ್ರಸಂಗ ನೋಡುವ ಪ್ರೇಕ್ಷಕರ ಕೊರತೆಯಾಗುತ್ತಿದೆ.


ಐತಿಹಾಸಿಕ ತೀರ್ಮಾನ

ಈಗ ಇನ್ನೊಂದು ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕಾಗಿದೆ. ಈಗಾಗಲೇ ಕೆಲವು ಮೇಳಗಳು ಪ್ರಯೋಗ ನಡೆಸಿದ ಕಾಲಮಿತಿಯ ಪ್ರಸಂಗಗಳನ್ನು ಶ್ರದ್ಧೆ ಹಾಗೂ ಪರಿಣಾಮಕಾರಿಯಾಗಿ ಪ್ರದರ್ಶಿಸುವ ಬದಲಾವಣೆ ಬೇಕಾಗಿದೆ. 200 ವರ್ಷದ ಇತಿಹಾಸವಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿ ಅನಿವಾರ್ಯವಾಗಿ ಈ ವರ್ಷದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಬಗ್ಗೆ ಮೂರು ವರ್ಷಗಳ ಕಾಲ ನಡೆಸಿದ ಚಿಂತನ-ಮಂಥನಗಳಿಂದ ಸರ್ವರ ಅಭಿಪ್ರಾಯ ಸಂಗ್ರಹಿಸಿ ಸಂಜೆ 7 ರಿಂದ ಮಧ್ಯರಾತ್ರಿ 12ರ ವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದೆಂದು ತೀರ್ಮಾನಿಸಲಾಗಿದೆ. ಸಹಜವಾಗಿಯೇ ಉತ್ತರಿಸಲಾಗದ ಕೆಲವು ಪ್ರಶ್ನೆಗಳಿಗೆ ಕಾಲ ಮತ್ತು ಪ್ರಯೋಗಶೀಲತೆಯೇ ಉತ್ತರಿಸಬೇಕಿದೆ.

ಅನಿವಾರ್ಯ

ಕೆಲವರು ಯಕ್ಷಗಾನದ ಅಭಿಮಾನಿಗಳಿರುತ್ತಾರೆ. ಪ್ರತಿದಿನ ಬೆಳಗ್ಗೆದ್ದು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಇರುತ್ತದೆ. ಅವರಿಗೆ ಬೆಳಗಿನ ಜಾವದ ಹಾಡುಗಳು ಕೇಳಲು ಇಷ್ಟ ದೊಡ್ಡ ಕಲಾವಿದರ ವೇಷಗಳು ರಾತ್ರಿ 2ರ ನಂತರವೇ ಬರುವುದು. ಅದು ಹಿಂದೋಳವೋ, ಮಾಯಾಗೌಳವವೋ, ಮೋಹನವೋ ಅವನಿಗರಿಯದು. ಆತ ಆ ವಿಚಾರದಲ್ಲಿ ಪಾಮರ. ಆದರೆ ಕೇಳಲು ಇಂಪು ಎಂದಷ್ಟೇ ಅರಿತವ. ಅಂತಹ ಹಾಡುಗಳು ಸದಾ ಮನಸ್ಸಲ್ಲಿ ಉಳಿಯುವಷ್ಟು ಮನಮೋಹಕ. ಆಟದಲ್ಲಿ ಮೊದಲು ಕುಳಿತುಕೊಳ್ಳುವ ಭಾಗವತರಿಗೆ ಹಾಡಲು ಗೊತ್ತಿದ್ದರೂ ಸಂದರ್ಭಗಳಿಲ್ಲ. ರಾತ್ರಿ 3ರ ನಂತರ ಕೂರಲು ಅಂತಹ ಅಭಿಮಾನಿಗೆ ಅನುಕೂಲವಿಲ್ಲ. ಇಂತಹ ರಾಗಗಳು ಮರೆಯಾಗಿ ಹೋಗುವ ಅಪಾಯವೂ ಇದೆ. ಏಕೆಂದರೆ ಬೆಳಗಿನ ಜಾಮದ ಭಾಗವತರು ಅದನ್ನು ಹಾಡುವಾಗ ಕೆಲವೆಡೆ 10 ಮಂದಿ ಕೂಡಾ ಇರುವುದಿಲ್ಲ. ಭಾಗವತರು ಅಷ್ಟು ಸುಶ್ರಾವ್ಯವಾಗಿ ಯಾರಿಗಾಗಿ ಹಾಡಬೇಕು. ತಲ್ಲೀನರಾಗುವಂತಹ ತನ್ಮಯತೆಯ ಅಭಿನಯ, ಭಾವಪೂರ್ಣ ಮಾತುಗಾರಿಕೆ ಅನುಭವಿ ವೇಷಧಾರಿಗಳಿಂದ ನೋಡಬೇಕಾದರೆ ಸಮಯರಾಹಿತ್ಯರಾದ ಅಭಿಮಾನಿಯೇನು ಮಾಡಬೇಕು. ಯಕ್ಷಗಾನದ ಗೂಢಾರ್ಥ, ಮೂಲಾರ್ಥ, ಭಾವಾರ್ಥ, ನಿಗೂಢಾರ್ಥ, ಪರಂಪರೆಯ ಹೊಳಹು, ಮುಂಬರಿಕೆ, ಕಲೆಗೆ ಉಳಿಗಾಲದ ಚಿಂತೆ ಇತ್ಯಾದಿಗಳಿಂದ ಬಲು ದೂರ ಇರುವ ಒಬ್ಬ ಅಭಿಮಾನನಿಗೆ ಯಕ್ಷಗಾನವನ್ನು ತಲುಪಿಸಲು ಕಾಲಮಿತಿ ಸಹಕಾರಿ. ಇಲ್ಲದಿದ್ದರೆ ಕಲೆ ಅಭಿಮಾನಿಯಿಂದ ದೂರ ಉಳಿಯುತ್ತದೆ.

ಕಲೆ ಪರಿವರ್ತನೆ ಎಂಬ ನಿಕಷಕ್ಕೆ ಒಳಪಟ್ಟಾಗಲೇ ಹೊಳಪುಪಡೆದುಕೊಳ್ಳುವುದು ಎಂದು ನಾನರಿತ ಸತ್ಯ. ಮಡಿವಂತಿಕೆಯಿಂದ ಕಲೆ ಬೆಳೆಯದು. ಕಾಲಮಿತಿಯ ಮೂಲಕ ಇನ್ನಷ್ಟು ಜನರ ಆಕರ್ಷಣೆಗೆ ಕಾರಣವಾಗಬಹುದು. ಕಾಲಮಿತಿಯಿಂದ ನಾನು ಯಕ್ಷಗಾನ ನೋಡುವುದನ್ನು ಬಿಟ್ಟಿದ್ದೇನೆ ಎಂದು ಅಪಕರ್ಷಣೆಗೆ ಒಳಗಾಗುವವರ ಸಂಖ್ಯೆ ಸಣ್ಣದು.

ಶ್ರುತಿ ಪೆಟ್ಟಿಗೆ ಬದಲಿಗೆ ತಂಬೂರ ಬರಲಿಲ್ಲವೇ. ವೇಷಭೂಷಣ ಬದಲಾಗಲಿಲ್ಲವೇ. ಕುಣಿತ ವೈವಿಧ್ಯ ಇಲ್ಲವೇ. ತೆಂಕು ಬಡಗುಗಳ ಮಿಶ್ರಣ ಇಲ್ಲವೇ. ದ್ವಂದ್ವ ಹಾಡುಗಾರಿಕೆ ಒಪ್ಪಿಲ್ಲವೇ. ಬೆಳಗಿನ ತನಕ ಒಬ್ಬರೇ ಹಾಡುತ್ತಿದ್ದ ಯಕ್ಷಗಾನದಲ್ಲಿ ಮೂರ್ನಾಲ್ಕು ಮಂದಿ ಹಾಡುವುದಿಲ್ಲವೇ. ರಾತ್ರಿ 10 ಗಂಟೆಗೆ ಬಂದ ದೇವೇಂದ್ರ ಬೆಳಗಿನ ತನಕ ಅಗತ್ಯವಿದ್ದರೆ ವೇಷ ತೆಗೆಯುತ್ತಿರಲಿಲ್ಲ. ಈಗ ಆ ಪ್ಲಾಟನ್ನೇ ಜಂಪ್‌ ಮಾಡುವುದಿಲ್ಲವೇ. ವೇಷಗಳ ಒಡ್ಡೋಲಗ, ತೆರೆ ಪರಪ್ಪಾಟ್‌ ಇತ್ಯಾದಿ ಕಡಿತಕ್ಕೊಳಗಾಗಿದೆ ನಿಜ. ಹಾಗಂತ ಯಕ್ಷಗಾನ ಸತ್ತೇ ಹೋಯಿತು ಎಂಬ ಹಳಹಳಿಕೆಯಲ್ಲಿ, ರೋದನದಲ್ಲಿ ಅರ್ಥವಿಲ್ಲ. ಯಕ್ಷಗಾನದ ಅಭಿಮಾನಿಗಳ ವಾಟ್ಸಾಪ್‌ ಗ್ರೂಪು, ಫೇಸ್‌ ಬುಕ್‌ ಪೇಜ್‌ಗಳೇ ಯಕ್ಷಗಾನ ಚಿರಾಯು ಎಂದು ಸಾರುತ್ತವೆ.

ಯುವಕರು ಯಕ್ಷಗಾನದೆಡೆಗೆ

ಕೇವಲ ಅಭಿಮಾನಿಗಳು ಮಾತ್ರ ಯುವ ಸಮುದಾಯ ಇರುವುದಲ್ಲ. ಯುವ ಕಲಾವಿದರು ಕೂಡಾ ಯಕ್ಷಗಾನದಲ್ಲಿ ಕೂಡಾ ಮಿಂಚುತ್ತಿದ್ದಾರೆ. ಕಟೀಲು ಮೇಳದಲ್ಲಿ 10ಕ್ಕೂ ಅಧಿಕ ಕಾಲೇಜು ಉಪನ್ಯಾಸಕರು, ಬ್ಯಾಂಕ್‌ ಉದ್ಯೋಗಿಗಳು ಪೂರ್ಣಕಾಲಿಕ ವೇಷಧಾರಿಗಳು. ಇಂದು ಕರಾವಳಿಯ ಸೀಮಾರೇಖೆ ಮೀರಿ ದುಬಾಯಿ, ಲಂಡನ್‌, ಮುಂಬಯಿ, ಬೆಹರೀನ್‌, ಕುವೈಟ್‌, ಅಮೆರಿಕಾ ಮೊದಲಾದೆಡೆ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. 15ರಷ್ಟಿದ್ದ ಟೆಂಟ್‌ ಮೇಳಗಳು ಅಸ್ತಿತ್ವವನ್ನೇ ಕಳೆದುಕೊಂಡು ತೆಂಕಿನಲ್ಲಿ ಟೆಂಟ್‌ ಮೇಳಗಳೇ ಇಲ್ಲ. ಬಡಗಿನಲ್ಲಿ 2 ಟೆಂಟ್‌ ಮೇಳಗಳಿವೆ. ಸುರತ್ಕಲ್‌ನಂತಹ ಮೇಳ ಉತ್ತುಂಗದಲ್ಲಿದ್ದಾಗ ತಿರುಗಾಟ ನಿಲ್ಲಿಸಿತು. ತುಳು ಪ್ರಸಂಗಗಳೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಕಾಲ ಕೂಡಾ ಮಂದವಾಯಿತು. ಆದರೂ ಯಕ್ಷಗಾನ ಯಾವತ್ತೂ ವಿಶ್ವಗಾನ.

ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್‌

ಕಲಾವಿದನಿಗೆ 50:50

ಈಗಿನ ನಾಗರಿಕ ಜಗತ್ತಿನ ಬೆಳವಣಿಗೆಯಲ್ಲಿ ಇಂತಹ ಪರಿವರ್ತನೆ ಅನಿವಾರ್ಯ. ಪ್ರೇಕ್ಷಕರು ಸ್ವಯಂ ಕಾಲಮಿತಿಗೆ ಒಳಪಟ್ಟಿದ್ದಾರೆ. ಇಡೀ ರಾತ್ರಿ ಯಕ್ಷಗಾನ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಪ್ರೇಕ್ಷಕರ ಸಂಖ್ಯೆ ದೃಷ್ಟಿಯಿಂದ ಕಾಲಮಿತಿ ಉತ್ತಮ. ಕಲಾವಿದರಿಗೆ ವಸತಿ ಸೌಕರ್ಯ ಇದ್ದರೆ ಅನುಕೂಲ. ಇಲ್ಲದಿದ್ದರೆ ಕಷ್ಟ. ಒಂದು ದಿನ ಕಾಲಮಿತಿ, ಇನ್ನೊಂದು ದಿನ ಇಡೀ ರಾತ್ರಿಯಾದರೂ ಕಲಾವಿದರಿಗೆ ಕಷ್ಟ. ಹರಕೆ ಆಟ ಆಡಿಸುವವರ ಮನೋಭಿಲಾಷೆ ಕೂಡಾ ಕಾಲಮಿತಿಯ ಕಡೆಗಿದ್ದರೆ ಸ್ವಾಗತಾರ್ಹವಾಗಿರುತ್ತದೆ. - ಹಿರಿಯ ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್‌.

ಸ್ವಾಗತಾರ್ಹ ನಿರ್ಧಾರ

ಯಕ್ಷಗಾನದಲ್ಲಿ ಬದಲಾವಣೆ ಹಿಂದಿನಿಂದಲೂ ಆಗುತ್ತಿದೆ. ಕಲಾವಿದರ ಆರೋಗ್ಯ, ಸಮಯರಾಹಿತ್ಯದ ಪ್ರೇಕ್ಷಕರ ಅನುಕೂಲ, ತಾಳ್ಮೆ ಕೆಡದಂತೆ ಕಾಲಮಿತಿಯ ಪ್ರದರ್ಶನ ನಡೆಯಲಿದೆ. ಇಲ್ಲಿ ಪೂರ್ವರಂಗ ಉಳಿಸಿಕೊಂಡು, ಕಥೆಗೆ ಭಂಗ ಬರದಂತೆ, ಕಲೆಗೆ ಅಪಚಾರವಾಗದಂತೆ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ ಎನ್ನುತ್ತಾರೆ - ಹಿರಿಯ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ,


*********************
ಕೃಪೆ : udayavaniShare

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ