ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮೂರು ದಶಕ ಪೂರೈಸಿದ ಮಲೆನಾಡ ಕೋಗಿಲೆ : ಕೊಳಗಿ ಕೇಶವ ಹೆಗಡೆ

ಲೇಖಕರು :
ರಾಘವೇಂದ್ರ ಬೆಟ್ಟಕೊಪ್ಪ
ಭಾನುವಾರ, ಏಪ್ರಿಲ್ 3 , 2016

ಖ್ಯಾತಿಗೂ ಮೀರಿದ ಸರಳತೆ. ಮೃದು. ತಲೆಗೊಂದು ಕೆಂಪು ಮಡಿ ಸುತ್ತಿಕೊಂಡು ಬಿಳೆ ಅಂಗಿ, ಲುಂಗಿಯೊಂದಿಗೆ ಸಣ್ಣದೊಂದು ಶ್ರುತಿ ಪೆಟ್ಟಿಗೆ, ತಾಳಗಳ ಜೊತೆ ವೇದಿಕೆಗೆ ಬಂದರೆ ಪ್ರೇಕ್ಷಕರಿಂದ ಕರತಾಡನ. ಭೀಷ್ಮ ಪರ್ವದ ಶ್ರೀಮನೋಹರ ಸ್ವಾಮಿ ಫ‌ರಾಕು, ಶ್ರೀಕೃಷ್ಣ ಸಂಧಾನದ ಅನೇಕ ಪದ್ಯಗಳು, ಜಾಂಬವತಿ ಕಲ್ಯಾಣದ ರಾಮ ರಾಘವ, ರಾಮ ನಿರ್ಯಾಣದ ಲಲನೆ ಜಾನಕಿ ಮೊದಲೆ ಪೋದಳು, ಲವಕುಶ, ಬ್ರಹ್ಮ ಕಪಾಲ, ರತ್ನಾವತಿ ಕಲ್ಯಾಣ, ಕಾರ್ತ್ಯವೀರಾರ್ಜುನ, ಚಂದ್ರಹಾಸ ಚರಿತ್ರೆ, ರಾಮಾಂಜನೇಯ ಸೇರಿದಂತೆ ಆನೇಕ ಪದ್ಯಗಳಿವೆ ಇವರು ಜನಪ್ರಿಯರು.

ಶುದ್ಧ ಸಾಂಪ್ರದಾಯಿಕ ಮಟ್ಟಿನಲ್ಲಿ ಶುದ್ಧ ಭಾವದಲ್ಲಿ, ಪದ್ಯದ ಶಬ್ಧ, ಬಂಧಕ್ಕೆ ಚ್ಯುತಿ ಬರದಂತೆ ಪದ್ಯ ಹೇಳುವ ಕರುನಾಡಿನ ಶ್ರೇಷ್ಠ ಭಾಗವತರು. ಓದಿದ್ದು ಎಸ್ಸೆಸ್ಸೆಲ್ಸಿ. ಆದರೂ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಣ್ಣದಲ್ಲ. ತಂದೆ ಅವರೂ ಇಡಗುಂಜಿ ಯಕ್ಷಗಾನ ಮೇಳದಲ್ಲಿ ವೇಷಧಾರಿಯಾಗಿದ್ದರ ಪರಿಣಾಮ ಎಂಬಂತೆ ಇವರನ್ನೂ ಅತ್ತ ಸೆಳೆದಿತ್ತು. ತಂದೆಯವರು ಹಾಗೂ ಅವರ ಒಡನಾಟದ ಕಲಾವಿದರು ಇವರಿಗೆ ಪ್ರೇರಣೆ ಆದರು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಇವರೇ ಕೇಶವ ಹೆಗಡೆ ಕೊಳಗಿಯವರು. ಉತ್ತರ ಕನ್ನಡದ ಸಿದ್ದಾಪುರ ಪೇಟೆ ಸಮೀಪದ ಕೊಳಗಿ ಎಂಬ ಪುಟ್ಟ ಗ್ರಾಮದವರು. 1964ರ ಮಾರ್ಚ್‌ 29ರಂದು ಅನಂತ ಹೆಗಡೆ ಹಾಗೂ ಅರುಂಧತಿ ಹೆಗಡೆ ಅವರ ಪುತ್ರನಾಗಿ ಜನಿಸಿದವರು. ಇಂದು ಮಂಜುಳಾ ಪತ್ನಿ, ಹರ್ಷಿತಾ ಮಗಳು, ಅಮ್ಮನೊಂದಿಗೆ ಕೊಳಗಿಯಲ್ಲಿ ವಾಸ್ತವ್ಯ ಮಾಡಿದವರು... ಯಕ್ಷಗಾನಕ್ಕೇ ಕಳೆದ ಮೂರು ದಶಕಗಳಿಂದ ನಿರಂತರ ಸೇವೆ ನೀಡುತ್ತಿದ್ದವರು.

ಹೊಸತನಕ್ಕೆ ಬಾಗದೇ, ಹಳೆ ತನಕದ ಸೊಗಸು ಉಳಿಸಿಕೊಡುತ್ತಿರುವ ಗಾನ ಕೋಗಿಲೆ ಇವರು. ಪದ್ಯ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುವಷ್ಟು ಮಧುರ ಲಯದ ಕಂಠದವರು. ಯಾವುದೇ ಯಕ್ಷಗಾನೀಯ ಪದ್ಯ ನೀಡಿದರೂ ಅದನ್ನು ರಾಗಕ್ಕೆ ಜೋಡಿಸಿಕೊಡಬಲ್ಲವರು... ಭಾಗವತಿಕೆಯಲ್ಲಿ ಕೊಳಗಿ ಶೈಲಿಯನ್ನು ಕಟ್ಟಿಕೊಟ್ಟವರು. ಸದಾ ಯಕ್ಷಗಾನದ ಪದ್ಯಗಳ ಮೋಡ್‌ನ‌ಲ್ಲೇ ಇರೋ ಭಾಗವತರು...

ಇವರು ಜನಿಸಿದಾಗ ಇಷ್ಟೊಂದು ಹೆಸರು ಕೊಳಗಿ ಎಂಬ ಪುಟ್ಟ ಊರಿಗೆ ತಂದುಕೊಡುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಎಸ್ಸೆಸ್ಸೆಲ್ಸಿ ಶಿಕ್ಷಣ ಪೂರೈಸುವ ವೇಳೆಗೇ ಶಾಲೆಗೆ ಗೋಲಿ ಹೊಡೆದು ಹ‌ಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಮೂರು ವರ್ಷ ಅಧ್ಯಯನ ಮಾಡಿದರು. ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಗುರುಗಳು ಎಂದೇ ಹೆಸರಾಗಿದ್ದ ನಾರ್ಣಪ್ಪ ಉಪ್ಪೂರು ಹಾಗೂ ಕೆ.ಪಿ.ಹೆಗಡೆ ಅವರಲ್ಲಿ ಭಾಗವತಿಕೆ ಕಲಿತರು. ಮುಂದೆ ಕಮಲಶಿಲೆ, ಮುಲ್ಕಿ, ಪಂಚಲಿಂಗ, ಶಿರಸಿ, ಬಚ್ಚಗಾರ, ಸಾಲಿಗ್ರಾಮ, ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಮೇಳದಲ್ಲಿ ತಿರುಗಾಟ ಮಾಡಿ ಪ್ರಧಾನ ಭಾಗವತರಾಗಿದ್ದವರು. ಮೂರು ದಶಕಗಳ ಹಿಂದೆ ತಾಳ ಹಿಡಿದ ಕೋಗಿಲೆ ಗುನು ಗುಡಿಸುತ್ತಲೇ ಇದೆ. ತನ್ನದೇ ಆದ ಅಸಂಖ್ಯ ಕಲಾಸಕ್ತರ ಬಳಗ ಕಟ್ಟಿಕೊಂಡಿದೆ. ಎಷ್ಟೋ ಮಂದಿ ಕೊಳಗಿ ಅವರ ಪದ್ಯಕ್ಕೆ ಕುಣಿಯಲು ಕಾತರರಾಗಿರುತ್ತಾರೆ ಎಂದರೆ ಅಚ್ಚರಿಯಲ್ಲ.

ದಿಗ್ಗಜ ಕಲಾವಿದರಿಗೆ ಭಾಗವತಿಕೆಯ ಹಿರಿಮೆ

ಯಕ್ಷಗಾನದ ಹಿರಿಯ ಕಲಾವಿದರಾದ ದೇವರು ಹೆಗಡೆ, ಪಿ.ವಿ.ಹಾಸ್ಯಗಾರ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಎಂ.ಎಲ್‌.ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ, ಗಣಪತಿ ಭಟ್ಟ ಕಣ್ಣಿ, ಗಣಪತಿ ಹೆಗಡೆ ತೋಟಿ, ವಿನಾಯಕ ಹೆಗಡೆ, ವಿ. ಉಮಾಕಾಂತ ಭಟ್ಟ ಸೇರಿದಂತೆ ಅನೇಕ ಸೇರಿದಂತೆ ಅನೇಕ ಹಿರಿಯ ಕಿರಿಯ ಕಲಾವಿದರನ್ನು ಕುಣಿಸಿದ್ದಾರೆ. ಮಕ್ಕಳಿಂದಲೂ ಹಿಡಿದು ದೊಡ್ಡವರ ತನಕವೂ ಪದ್ಯ ಹೇಳಿ ರಂಗದಲ್ಲಿ ಆಡಿಸಿದ್ದಾರೆ.

ಕೊಳಗಿ ಕೇಶವ ಹೆಗಡೆ
ಜನನ : ಮಾರ್ಚ್‌ 29, 1964
ಜನನ ಸ್ಥಳ : ಕೊಳಗಿ
ಸಿದ್ದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಆಧುನಿಕತೆಯ ಮೋಡಿಗೊಳಗಾಗದೆ ಯಕ್ಷಗಾನ ಪರ೦ಪರೆಯ ಸೊಗಸು ಉಳಿಸಿಕೊ೦ಡಿರುವರ ಕೊಳಗಿ ಕೇಶವ ಹೆಗಡೆಯವರು ಕಳೆದ ಮೂರು ದಶಕಗಳಿಂದ ಕಮಲಶಿಲೆ, ಮುಲ್ಕಿ, ಪಂಚಲಿಂಗ, ಶಿರಸಿ, ಬಚ್ಚಗಾರ, ಸಾಲಿಗ್ರಾಮ, ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಮೇಳದಲ್ಲಿ ತಿರುಗಾಟ ಮಾಡಿದ ಬಡಗುತಿಟ್ಟಿನ ಮೇರು ಭಾಗವತರು.
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
"ಆಗತಾನೆ ಬಡಗು ತಿಟ್ಟಿನ ಭಾಗವತಿಕೆ ಕಲಿತ ಹೊತ್ತು. ಹೊಸಾಕುಳಿಯಲ್ಲಿ ಆಟ. ಸುಧನ್ವಾರ್ಜುನ ಕಾಳಗ ಪ್ರದರ್ಶನದಲ್ಲಿ ಪದ್ಯ ಹೇಳುತ್ತಿದ್ದೆ. ಯಾಕೋ ಗೊತ್ತಿಲ್ಲ. ಪದ್ಯ ಹೇಳಲು ಆಗಲೇ ಇಲ್ಲ. ಎದುರಿಗೆ ಇದ್ದ ಕಲಾವಿದರು ಕುಣಿತಕ್ಕೆ ಸಜ್ಜಾಗಿದ್ದರೆ ನನಗೆ ಪದಗಳು ಹೊರಡಲಿಲ್ಲ. ಏನಾಯಿತು ಅರಿವಾಗುವ ಮೊದಲೇ ಜನರ ಕೂಗಾಟ ಶುರುವಾಗಿತ್ತು. ಕೊನೆಗೆ ಅರ್ಧ ಆಟದಲ್ಲೇ ಇನ್ನೊಬ್ಬ ಭಾಗವತರು ಬಂದು ಪದ್ಯ ಹೇಳಿದರು. ಆಗತಾನೆ ವೇದಿಕೆಯೇರಿ ಪದ್ಯ ಹೇಳಲು ತಾಳ ಹಿಡಿದಿದ್ದ ನನಗೆ ಮುಜುಗರವಾಗಿತ್ತು. ಸಹಜವಾಗಿಯೇ ಸಾಕಷ್ಟು ಬೇಸರ, ಹಿಂಸೆ, ನೋವಾಯಿತು. ಮರುದಿನವೇ ನೋವಿನ ಜ್ವರವೂ ಬಂತು. ಮರು ವರ್ಷ ಅಲ್ಲೇ ಅದೇ ಆಟ. ``ತಾಯೆ ಕೇಳ್‌ `` ಪದ್ಯಕ್ಕೆ ಜನರು ಚಪ್ಪಾಳೆ ಹೊಡೆದರು. ಒಂದು ವರ್ಷದ ನಿರಂತರ ಅಭ್ಯಾಸ ಫ‌ಲ ಕೊಟ್ಟಿತ್ತು.

ಆರೆಂಟು ವರ್ಷದ ಹಿಂದೆ ಇರಬೇಕು. ಯಾವ ಊರು ಅಂತ ನೆನಪಿಲ್ಲ. ಬಹುಶಃ ಬೆಂಗಳೂರಿನ ಯಕ್ಷ ಸಂಪಿಗೆ ಕಾರ್ಯಕ್ರಮ ಇರಬೇಕು. ಸತ್ಯ ಹರಿಶ್ಚಂದ್ರ ಆಖ್ಯಾನ. ಇಂದಿನ ಯಕ್ಷಗಾನ ಅಕಾಡೆಮಿ ಸದಸ್ಯ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರದ್ದು ಸತ್ಯ ಹರಿಶ್ಚಂದ್ರ ಪಾತ್ರ. ``ಯಾರ ಮಗ ಯಾರ ಪುರ`` ಪದ್ಯಕ್ಕೆ ಅವರ ಸ್ಪಂದನೆಯ ರೀತಿ ಅಪರೂಪವೇ ಆಗಿತ್ತು. ಪದ್ಯ ಹೇಳುತ್ತಲೇ ಭಾವ ಕಟ್ಟಿ ಬಂತು. ಧ್ವನಿ ಹೊರಡಲಿಲ್ಲ. ಪ್ರೇಕ್ಷಕರೂ ಮಂತ್ರ ಮುಗ್ಧತೆಯಲ್ಲಿ ಭಾವುಕರಾಗಿದ್ದರು. ನನ್ನ ಕಣ್ಣೂ ಒದ್ದೆಯಾಗಿ ನೀರು ಹರಿದಿತ್ತು. ಈ ಘಟನೆ ನನಗೆ ಎಂದೂ ಮರೆಯಲು ಸಾಧ್ಯವೇ ಇಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಕೇಶವ ಹೆಗಡೆ ಕೊಳಗಿ.

ದೇಶ-ವಿದೇಶಗಳಲ್ಲಿಯೂ ತಿರುಗಾಟ

ಶಿರಸಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರಲ್ಲದೇ ಮುಂಬಯಿ, ದೆಹಲಿ, ಪೂನಾ, ಚೆನ್ನೈ, ಕೇರಳ, ಅಮೇರಿಕಾ, ದುಬೈ, ಬೆಹರಿನ್‌, ಸಿಂಗಾಪುರಗಳಲ್ಲಿ ಪದ್ಯ ಹೇಳಿದ್ದಾರೆ. ದ್ವಂದ್ವ ಭಾಗವತಿಕೆ ಕೂಡ ಮಾಡಿದ್ದಾರೆ. ಇವರ ಹಾಡಿನ ಸಿಡಿ, ಯಕ್ಷಗಾನ ಪ್ರಸಂಗಗಳ ಡಿವಿಡಿಗಳೂ ಬಂದಿವೆ. ಅನಂತ ಹೆಗಡೆ ಕೊಳಗಿ ಯಕ್ಷ ಪ್ರತಿಷ್ಠಾನ ಕೂಡ ನಡೆಸುತ್ತಿದ್ದಾರೆ.

ಅಪ್ಪ ಅನಂತ ಹೆಗಡೆ ಸ್ವತಃ ಯಕ್ಷಗಾನ ಕಲಾವಿದರಾದರೂ ಮಗನಿಗೆ ಈ ಉದ್ಯೋಗ ಬೇಡ ಎಂಬಂತಿತ್ತು. ಆದರೆ, ಎಸ್ಸೆಸ್ಸೆಲ್ಸಿ ಮುಗಿಸುತ್ತಿದ್ದಂತೇ ಈ ಬಾಲಕನಿಗೆ ಚಂಡೆ, ಮದ್ದಲೆ, ತಾಳದ ಲಯಗಳು ಕಿವಿಯಲ್ಲಿ ಗುಣುಗುಡಿಸಲು ಶುರು ಮಾಡಿದವು. ಅಂದಿನ ಸೆಳೆತ ಇಂದು ಪ್ರೇಕ್ಷಕರನ್ನೇ ತನ್ನತ್ತ ಸೆಳೆಯುವಂತೆ ಮಾಡಿದೆ. ಕರಾವಳಿ ಕೋಗಿಲೆ, ಗಾನ ಗಂಧರ್ವ, ಯಕ್ಷ ಬಸವ, ಗಾನ ಗಂಧರ್ವ, ಯಕ್ಷ ಸಂಗೀತ ಕಲಾಶ್ರೀ, ಕರಾವಳಿ ರತ್ನಾಕರ ಸೇರಿದಂತೆ ಅನೇಕ ಪುರಸ್ಕಾರಗಳೂ ಬಂದಿವೆ. ವಿಶೇಷ ಗೊತ್ತಾ? ಅಡಿಕೆ ಬೇಸಾಯದ ಜೊತೆ ಯಕ್ಷ ಕೃಷಿ ಮಾಡುತ್ತಲೇ ಸ್ಟಾರ್‌ ಕಲಾವಿದರಾಗಿದ್ದಾರೆ. ಹಳೆ, ಹೊಸ ತಲೆಮಾರಿನ ಕೊಂಡಿಯಾಗಿದ್ದಾರೆ.

****************

ಕೊಳಗಿ ಕೇಶವ ಹೆಗಡೆಯವರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು













****************

ಕೊಳಗಿ ಕೇಶವ ಹೆಗಡೆಯವರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನ ಅಭಿಮಾನಿಗಳು )




ಸಮಾರ೦ಭವೊ೦ದರಲ್ಲಿ ಸನ್ಮಾನಿಸಲ್ಪಡುತ್ತಿರುವುದು









****************

ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
sandeep(4/4/2016)
Nice article sir




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ