ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಪುಂಡುವೇಷಕ್ಕೊಂದು ಘನತೆ ತಂದಿತ್ತ ಹೊಸಹಿತ್ಲು ಮಹಾಲಿಂಗ ಭಟ್

ಲೇಖಕರು :
ರಾಕೇಶ್ ಕುಮಾರ್ ಕಮ್ಮಜೆ
ಶನಿವಾರ, ಸೆಪ್ಟೆ೦ಬರ್ 6 , 2014

ಅಭಿಮನ್ಯುವಿಗೆ ಅರವತ್ತು ಎಪ್ಪತ್ತರ ದಶಕದಲ್ಲೇ ಕೀರ್ತಿ ತಂದಿಟ್ಟ ಮಹಾಲಿಂಗ ಭಟ್ ಆ ದಿನಗಳಲ್ಲಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದರೆಂದು ಅವರನ್ನು ಬಲ್ಲ ಅನೇಕರು ಹೇಳುತ್ತಾರೆ. ಸಲೀಸಾಗಿ ಮುನ್ನೂರು ಮುನ್ನೂರೈವತ್ತು ಧೀಂಗಿಣ ಹಾಕುತ್ತಿದ್ದ ಪುಂಡುವೇಷದ ಗಟ್ಟಿಗ ಎಂದೂ ಬಲ್ಲವರು ಹೇಳುತ್ತಾರೆ. ಹೊಸಹಿತ್ಲು ಲಿಂಗಣ್ಣ ಎಂದೇ ಖ್ಯಾತರಾದ ಅವರು ಕೇವಲ ಕುತ್ತು ಹಾಕುವುದಕ್ಕಷ್ಟೇ ಮೀಸಲಾಗಿರಲಿಲ್ಲ. ಅವರ ಅರ್ಥಗಾರಿಕೆಯೂ ಸೊಗಸಾಗಿತ್ತು. ಗೆಜ್ಜೆ ಕಟ್ಟಿ ರಂಗ ಪ್ರವೇಶಿಸಿದರೆ ಕೇವಲ ರಂಗಸ್ಥಳವನ್ನು ಆವರಿಸಿಕೊಳ್ಳುವುದಲ್ಲದೆ ಮಾತುಗಾರಿಕೆಯಲ್ಲೂ ಕೇಳುಗರನ್ನು ವಿಸ್ಮಯಗೊಳಿಸುತ್ತಿದ್ದರು. ಹಾಗಾಗಿಯೇ ಅವರ ಪುಂಡು ವೇಷಗಳನ್ನು ಮಾದರಿಗಳಾಗಿ ಸ್ವೀಕರಿಸಬಹುದು ಎಂದು ಅನೇಕ ಹಿರಿಯರು ಹೇಳುವುದನ್ನು ಕೇಳುವಾಗ ಅಚ್ಚರಿಯೆನಿಸುತ್ತದೆ.

ಕುರಿಯ ವಿಠಲ ಶಾಸ್ತ್ರಿಗಳ ಒಡನಾಟ

ಮಹಾಲಿಂಗ ಭಟ್ಟರ ಅಭಿಮನ್ಯು ಮಾತ್ರ ಅಲ್ಲ, ಬಬ್ರುವಾಹನ, ಕೃಷ್ಣ, ಪರಶುರಾಮ, ಲಕ್ಷ್ಮಣ, ಮಕರಾಕ್ಷ ಮೊದಲಾದ ಪಾತ್ರಗಳೂ ಜನಮನ ಸೂರೆಗೊಂಡಿದ್ದವು. ಅದರಲ್ಲೂ ಕಂಸವಧೆ ಪ್ರಸಂಗದಲ್ಲಿ ಯಕ್ಷರಂಗದ ಸಾರ್ವಕಾಲಿಕ ಅಚ್ಚರಿ ಕುರಿಯ ವಿಠಲ ಶಾಸ್ತ್ರಿಗಳ ಕಂಸ. ಅವರೆದುರಿಗೆ ಹೊಸಹಿತ್ಲು ಮಹಾಲಿಂಗ ಭಟ್ಟರ ಕೃಷ್ಣ. ಕುರಿಯ ಶಾಸ್ತ್ರಿಗಳಿಗೇ ಎದುರಾಗಿ ರಂಗಕ್ಕೆ ಬಂದು, ಜನ ತನ್ನನ್ನೂ ಆಸಕ್ತಿಯಿಂದ ಗಮನಿಸುವಂತೆ ಪಾತ್ರವನ್ನು ಸಾಕ್ಷಾತ್ಕರಿಸುತ್ತಿದ್ದರು. ಶಾಸ್ತ್ರಿಗಳು ರಂಗದಲ್ಲಿರುವಾಗಲೂ ವಿಜೃಂಭಿಸುತ್ತಿದ್ದದ್ದು ಮಹಾಲಿಂಗ ಭಟ್ಟರ ಪ್ರತಿಭೆಗೆ ಸಾಕ್ಷಿ ಎನ್ನುತ್ತಾರೆ ಆ ರಾತ್ರಿಗಳನ್ನು ಕಂಡವರು. ಅಂತೆಯೇ ಶಾಸ್ತ್ರಿಗಳ ರಾಮನೊಂದಿಗೆ ಅನೇಕ ಬಾರಿ ಲಕ್ಷ್ಮಣನಾಗಿ ಕಾಣಿಸಿಕೊಂಡವರು ಹೊಸಹಿತ್ಲು ಭಟ್ಟರು. ಇವರು ಶಾಸ್ತ್ರಿಗಳ ಶಿಷ್ಯರೂ ಹೌದು.

ವಿಜ್ರ೦ಭಿಸಿದ ಅಭಿಮನ್ಯು

ಹೊಸಹಿತ್ಲು ಮಹಾಲಿಂಗ ಭಟ್ಟರ ಬಗೆಗೆ ಪ್ರಸ್ತಾವಿಸುವಾಗ ಒಂದು ರೋಚಕ ಸನ್ನಿವೇಶವನ್ನು ಹೇಳಲೇಬೇಕು. ಒಮ್ಮೆ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿ ಜೋಡಾಟ. ಮೂರು ಮೇಳಗಳು ಏಕಕಾಲಕ್ಕೆ ಒಂದೇ ಕಡೆ ಮೂರು ರಂಗಸ್ಥಳಗಳನ್ನಿಟ್ಟುಕೊಂಡು ಒಂದೇ ಪ್ರಸಂಗವನ್ನು ಆಡಿದ ಕಥೆಯಿದು. ಈಗೀಗ ಇಂಥಾ ಪ್ರಯೋಗಗಳು ಕಮ್ಮಿಯಾದರೂ ಇಂಥಾ ಸ್ಪರ್ಧಾತ್ಮಕ ರೀತಿಯ ಯಕ್ಷಗಾನಗಳು ಹಿಂದೆ ಸಾಕಷ್ಟು ಜಾರಿಯಲ್ಲಿದ್ದವು ಬಿಡಿ. ಅಂದಿನ ಪ್ರಸಂಗ ಅಭಿಮನ್ಯು. ಧರ್ಮಸ್ಥಳ, ಕರ್ನಾಟಕ ಹಾಗೂ ಕೂಡ್ಲು ಮೇಳಗಳು ಕಣದಲ್ಲಿದ್ದವು. ಧರ್ಮಸ್ಥಳ ಮೇಳದ ಪರವಾಗಿ ಭಟ್ಟರ ಅಭಿಮನ್ಯು.

ಪ್ರಸಂಗದ ಆರಂಭಕ್ಕೆ ಮೊದಲು ‘ಇದಾ ಇಂದು ನೀನು ಬಿಡ್ಲಾಗ’(ಇವತ್ತು ನೀನು ಬಿಡಬಾರದು) ಎಂದು ಕುರಿಯ ಶಾಸ್ತ್ರಿಗಳು ಹೇಳಿದ್ದರೆಂದು ಕೆಲವರು ಹೇಳುತ್ತಾರೆ. ಅದೇನೇ ಇರಲಿ. ಮೂರೂ ರಂಗಸ್ಥಳಗಳಲ್ಲಿ ಮೂರು ಅಭಿಮನ್ಯುಗಳ ಪ್ರವೇಶವಾಯಿತು. ಆ ದಿನದ ರಥದ ಮೇಲಿನ ಭಟ್ಟರ ಕುಣಿತ ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಚಕ್ರವ್ಯೂಹವನ್ನು ಬೇಧಿಸುವ ಹೊತ್ತು ಮೂರೂ ರಂಗಸ್ಥಳಗಳಲ್ಲಿ ಅಭಿಮನ್ಯುಗಳು ರಥವೇರಿ ಕುಣಿಯಲಾರಂಭಿಸಿದರು. ಒಂದು ಮೇಳದ ಅಭಿಮನ್ಯು ಸುಮಾರು ಕಾಲು ಗಂಟೆ ರಥದ ಮೇಲೆ ಅಬ್ಬರಿಸಿ ಕೆಳಗಿಳಿದ. ಇನ್ನೊಂದು ಅಭಿಮನ್ಯು ಸುಮಾರು ಇಪ್ಪತ್ತು ನಿಮಿಷ ಕುಣಿದಾಗ ಸುಸ್ತಾಯಿತು. ಆದರೆ ಭಟ್ಟರ ಅಭಿಮನ್ಯು ಕೆಳಗಿಳಿಯಲೇ ಇಲ್ಲ. ಕೊನೆಗೆ ಅರ್ಧ ಗಂಟೆ ಕಳೆದ ಮೇಲೆ ಹಿಂದೆ ಕೂತಿದ್ದ ಅಗರಿ ಭಾಗವತರು‘ಸಾಕು ಸಾಕು ಇಳಿದುಬಿಡು’ ಎಂದು ವಿನಂತಿಸಿದ ಮೇಲೆಯೇ ಭಟ್ಟರು ನೆಗೆದದ್ದು! ಉಳಿದೆರಡು ಅಭಿಮನ್ಯುಗಳು ಯುದ್ಧದ ಮೊದಲೇ ಸೋತಾಯಿತು ಎಂದು ಹಿರಿಯ ಯಕ್ಷ ಕಲಾಭಿಮಾನಿಗಳು ಇಂದಿಗೂ ನಸುನಗುತ್ತಾರೆ.

ಹೊಸಹಿತ್ಲು ಮಹಾಲಿಂಗ ಭಟ್
ಜನನ : 1935
ಜನನ ಸ್ಥಳ : ಮೀಯಪದವು ಹೊಸಹಿತ್ಲು
ಬ೦ಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
40 ವರುಷಗಳ ಕಾಲ ಧರ್ಮಸ್ಥಳ, ಕಟೀಲು, ಸುರತ್ಕಲ್, ಕೂಡ್ಲು, ಬಪ್ಪನಾಡು, ಮೂಲ್ಕಿ, ಪುತ್ತೂರು ಮೇಳಗಳಲ್ಲಿ ಪ್ರಸಿಧ್ಧ ಪು೦ಡು ವೇಷಧಾರಿಯಾಗಿ ಕಲಾಸೇವೆ
ಪ್ರಶಸ್ತಿಗಳು:
ಹಲವಾರು ಸ೦ಘ ಸ೦ಸ್ಥೆಗಳಿ೦ದ ಸನ್ಮಾನಗಳು

ಮರಣ ದಿನಾ೦ಕ : ಸೆಪ್ಟೆ೦ಬರ್ 21, 2011

ವೈಭವಕ್ಕೆ ಸಾಕ್ಷಿಯಾಗಿದ್ದ ರಂಗಸ್ಥಳವೇ ಮುನಿಯಿತು

ಅಂದ ಹಾಗೆ ಅವರ ವೈಭವಕ್ಕೆ ಸಾಕ್ಷಿಯಾಗಿದ್ದ ರಂಗಸ್ಥಳವೇ ಅವರ ಪ್ರಸಿದ್ಧಿಯನ್ನು ನೋಡಿ ಅಸೂಯೆಪಟ್ಟಿತೋ ಏನೋ. ಒಂದು ಬಾರಿ ಕುಣಿಯುತ್ತಿದ್ದಾಗ ರಂಗಸ್ಥಳವೇ ತೂತಾಗಿ ಭಟ್ಟರ ಕಾಲು ಸಿಕ್ಕಿಹಾಕಿಕೊಂಡು ಮುಂದೆ ಕುಣಿಯದಂತಾಯಿತು! ಆದರೂ ಮೇಳದಾಚೆಗೆ ಹವ್ಯಾಸಿಯಾಗಿ ಆಗೊಮ್ಮೆ ಈಗೊಮ್ಮೆ ಕುಣಿಯುತ್ತಿದ್ದರು. ಕೌರವನಾಗಿಯೂ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು. ಈ ನಡುವೆ ತಾಳಮದ್ದಳೆಗಳಲ್ಲಿ ಅರ್ಥಧಾರಿಗಳಾಗಿಯೂ ಅವರು ಕಾಲಕಾಲಕ್ಕೆ ಭಾಗವಹಿಸುತ್ತಿದ್ದರು.

ಪೆರಾಜೆ ಕಾರ೦ತರಿ೦ದ ನುಡಿನಮನ

( ಕೃಪೆ : http://www.yakshamatu.blogspot.in )

1998ರ ಸಮಯ. ನನಗಾಗ ಬಹುತೇಕ ರಾತ್ರಿಗಳೆಲ್ಲಾ ಹಗಲು! ಕುಳಿತಲ್ಲಿ, ನಿಂತಲ್ಲಿ ಆಟದ್ದೇ ಮಾತು, ಧ್ಯಾನ. 'ನಿನ್ನೆ ಹಾಗಾಯಿತು, ಇಂದು ಹೀಗಾಗಬಹುದು' - ಈ ವ್ಯಾಪ್ತಿಯೊಳಗೆ ಮಾತಿನ ಸುರುಳಿ. ಅವಕಾಶ, ಬಹುಬೇಡಿಕೆ ಬರುತ್ತಿರುವುದರಿಂದ ಮನದೊಳಗೆ 'ಒಣಜಂಭ'.

ಅಂದು 'ಕಂಸವಧೆ' ಪ್ರಸಂಗ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಭಾಗವತಿಕೆ. ನನ್ನ 'ಕೃಷ್ಣ'. ಹೊಸಹಿತ್ಲು ಮಹಾಲಿಂಗ ಭಟ್ಟರ 'ಅಕ್ರೂರ'. ಅವರ ಕಲಾಗಾರಿಕೆಯನ್ನು ಹೇಳಿ-ಕೇಳಿ ಗೊತ್ತಿತ್ತೇ ವಿನಾ, ನೋಡಿದ್ದಿರಲಿಲ್ಲ, ಮಾತನಾಡಿದ್ದಿರಲಿಲ್ಲ. ಎಂದಿನಂತೆ ಚೌಕಿಗೆ ಹೋದಾಗ ಮಾತನಾಡಿಸುವ ಸ್ನೇಹಿತರು(?) ಸಿಕ್ಕರು. ಒಂದಷ್ಟು ಹೊತ್ತು ನಿನ್ನೆಯದೋ, ಮೊನ್ನಿನದೋ ಆಟದ ಕುರಿತು ವ್ಯಂಗ್ಯ, ಕ್ಲೀಷೆ, ಹೊಗಳಿಕೆ.. ನಡೆಯುತ್ತಲೇ ಇತ್ತು. 'ಇಂದಿನ ಆಟದ ಸುದ್ದಿ' ಯಾರೂ ಮಾತನಾಡುತ್ತಿಲ್ಲ.

'ಕಾರಂತ್ರೆ, ಲಿಂಗಣ್ಣ ಅವರಲ್ಲಿ ಮಾತನಾಡಿದ್ರಾ' ಎಂದರು ತೆಂಕಬೈಲು. 'ಪರಿಚಯವಿಲ್ಲ' ಎಂದೆ. ದೇವರ ಪೆಟ್ಟಿಗೆಯ ಹತ್ತಿರ ವಿಶ್ರಾಂತಿಯಲ್ಲಿದ್ದ ಅವರ ಬಳಿಗೆ ಕರೆದೊಯ್ದ ಭಾಗವತರು ಪರಿಚಯ ಮಾಡಿಕೊಟ್ಟರು. 'ಇವರಾ. ಕಾರಂತ್ರು ಅಂದ್ರೆ.. ಏನಯ್ಯಾ.. ಹೇಗಿದ್ದೀರಿ' ಎಂಬ ಮೊದಲ ಮಾತು ಅವರದ್ದೇ ಆಯಿತು. 'ಈ ಪ್ರಸಂಗದಲ್ಲಿ ಎಷ್ಟು ಕೃಷ್ಣನ ವೇಷ ಮಾಡಿದ್ರಿ' ಎಂಬುದು ಮರುಪ್ರಶ್ನೆ.

ನಾ.ಕಾರ೦ತ ಪೆರಾಜೆ ಶ್ರೀಕೃಷ್ಣನ ಪಾತ್ರದಲ್ಲಿ
ಈ ಪ್ರಶ್ನೆಯಲ್ಲಿದ್ದ ಹಿರಿತನ ನನ್ನನ್ನು ಚುಚ್ಚಿತು. ನಿಜಕ್ಕೂ ಸ್ತ್ರೀಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಾನು ಪುರುಷ ಪಾತ್ರಗಳನ್ನು ಮಾಡಿದ್ದೂ ಕಡಿಮೆ. ಈ ಪ್ರಶ್ನೆ ನನ್ನ ಅರ್ಧ ಶಕ್ತಿಯನ್ನು ಉಡುಗಿಸಿತ್ತು. 'ಒಂದೆರಡು ಮಾಡಿದ್ದೇನೆ' ಎಂದೆ. 'ಊಟ ಆಯಿತಾ' ಎಂದರು. 'ಬನ್ನಿ.. ಮಾತನಾಡುತ್ತಾ ಊಟ ಮಾಡೋಣ' ಎಂದು ಎದ್ದರು.

ನನಗೆ ಆಶ್ಚರ್ಯವಾಯಿತು. ನನಗೋ 30-32 ಆದರೆ ಅವರಿಗೋ 60 ಮೀರಿದ ಹರೆಯ. 'ಇಂದು ನನ್ನನ್ನು ಲಗಾಡಿ ಕೊಡ್ತಾರೆ' ಎಂದು ಮನಸ್ಸಿನಲ್ಲೇ ಸಂಘಟಕರಿಗೆ ಹಿಡಿಶಾಪ ಹಾಕುತ್ತಾ ಹೆಜ್ಜೆ ಹಾಕಿದೆ. 'ಬನ್ನಿ.. ಒಳ್ಳೆಯ ಗಾಳಿ ಇದೆ. ಇಲ್ಲೇ ಮಾತನಾಡೋಣ.. ನಿಮ್ಮ ಬಗ್ಗೆ ಕೇಳುತ್ತಾ ಇದ್ದೇನೆ. ಪತ್ರಿಕೆಗಳಲ್ಲಿ ಲೇಖನ ಒದುತ್ತಾ ಇದ್ದೇನೆ..' ಹೀಗೆ 'ಹೊಗಳುತ್ತಾ' (ಹೊಗಳಿದಾಗ ಉಬ್ಬುವುದು ಸಹಜ ಧರ್ಮ!) ಹೋದ ಹಾಗೆ ಅಂಜಿಕೆ ದೂರವಾಗುತ್ತಾ ಹೋಯಿತು.

'ಸರಿ.. ಜಲದಿಸುತೆಯಳ.. ಈ ಪದ್ಯಕ್ಕೆ ಏನು ಅರ್ಥ ಹೇಳ್ತೀರಿ ನೋಡ್ವಾ' ಎಂದರು. ನನಗೆ ಗೊತ್ತಿರುವಷ್ಟನ್ನು ಒಪ್ಪಿಸಿದೆ. ಎರಡನೇ ಪದ್ಯ, ಮೂರನೇ ಪದ್ಯ.. ಹೀಗೆ ನನ್ನ ಸಂದರ್ಶನ ಮುಗಿಸಿದರು. ನಂತರ ಅಕ್ರೂರದ ಪದ್ಯದ ಪಾಳಿ ಬಂದಾಗ, 'ನಾನು ಏನು ಹೇಳ್ತೇನೆ ಎಂಬುದನ್ನು ಈಗ ಹೇಳುವುದಿಲ್ಲ. ನನ್ನ ಜತೆಯಲ್ಲೇ ಬಂದರೆ ಆಯಿತು' ಎಂದರು. ನಿಜಕ್ಕೂ 'ತಲೆಬುಡ' ಗೊತ್ತಾಗಲಿಲ್ಲ.

ಮೇಕಪ್ಗೆ ಕುಳಿತೆ. 'ಸ್ತ್ರೀವೇಷ ಮಾಡುವವರು ಪುರುಷ ವೇಷ ಮಾಡಬಾರದು' ಎಂದು ನನ್ನ ಮೇಕಪ್ ನೋಡಿ ಗೇಲಿ ಮಾಡಿದರು! ಆಟ ಶುರುವಾಯಿತು, ಪ್ರವೇಶವಾಯಿತು. ತೆಂಕಬೈಲು ಭಾಗವತರ 'ಬೆಟ್' ಪ್ರಸಂಗದಲ್ಲಿ 'ಕಂಸವಧೆ'ಯೂ ಒಂದು. ಅಂದಿನ ಪದ್ಯವನ್ನು ಜ್ಞಾಪಿಸಿಕೊಂಡರೆ ರೋಮಾಂಚನವಾಗುತ್ತದೆ. ಮೊದಲ ಪದ್ಯಕ್ಕೆ ಅರ್ಥ ಹೇಳಿದೆ. ಅವರೂ ಮಾತನಾಡಿದರು. ನಿರರ್ಗಳವಾದ ಮಾತುಗಾರಿಕೆ. ಶಬ್ದ ಶಬ್ದಗಳಲ್ಲಿ ಭಾವನೆಗಳು. ಅಂದಿನ ಅವರ ಅರ್ಥಗಾರಿಕೆ ಹೇಗಿತ್ತೆಂದರೆ ಅದರಲ್ಲೆಲ್ಲಾ ಪ್ರಶ್ನೆಗಳೇ ತುಂಬಿದ್ದುವು. ಅವಕ್ಕೆ ನಾನು ಉತ್ತರ ಕೊಟ್ಟರೆ ನನ್ನ ಅರ್ಥ ತುಂಬಿದಂತೆ. ಉತ್ತರ ಹೇಳಲಾಗದಿದ್ದರೆ 'ಹಾಗಲ್ವೋ ಕೃಷ್ಣ' ಎಂದು ಅವರೇ ಉತ್ತರ ಹೇಳುತ್ತಿದ್ದರು.

ಮೊದಲು ಅವರ ಬಗ್ಗೆ ನಾನು ಯಾವ ಭಾವ ಇಟ್ಟುಕೊಂಡಿದ್ದೆನೋ, ಆಟ ಮುಗಿಯುವಾಗ ನಿರಾಳ. ಅಂದಿನ ಆಟಕ್ಕೆ ನಿರೀಕ್ಷೆಗಿಂತ ಹತ್ತು ಅಂಕ ಅಧಿಕವೇ. ಅಂದಿನ 'ಕೃಷ್ಣ-ಅಕ್ರೂರ' ಜತೆಗಾರಿಕೆ ನನಗಂತೂ ಮಾಸದ ನೆನಪು. ಮುಂದೆ ಆ ಪ್ರಸಂಗದಲ್ಲಿ 'ಕೃಷ್ಣ'ನ ಪಾತ್ರ ಪಾಲಿಗೆ ಬಂದಾಗ ಲಿಂಗಣ್ಣ ನೆನಪಿಗೆ ಬರುತ್ತಾರೆ.

ನಂತರದ ಕೆಲವು ಆಟಗಳಿಗೆ ಅವರು ಕೆಲವು ಪಾತ್ರಗಳಿಗೆ ನನ್ನನ್ನೆ ಆಯ್ಕೆ ಮಾಡಿ ಸಂಘಟಕರಿಂದ ಹೇಳಿಸುತ್ತಿದ್ದರು. ಕೃಷ್ಣಾರ್ಜುನ ಕಾಳಗದ ಅವರ 'ಅರ್ಜುನ' ಪಾತ್ರಕ್ಕೆ ಮೂರ್ನಾಲ್ಕು ಬಾರಿ ನನ್ನ 'ಸುಭದ್ರೆ'ಯ ಜತೆಯಾಗಿತ್ತು.

1994-95ರ ಸುಮಾರಿಗೆ ಅಡೂರು ಶ್ರೀಧರ ರಾಯ ಮನೆಯಂಗಳದಲ್ಲಿ 'ಯಕ್ಷಗಾನ ಸಮ್ಮೇಳನ' ಜರುಗಿತ್ತು. ಅಂದು 'ದಮಯಂತಿ ಪುನರ್ ಸ್ವಯಂವರ' ಪ್ರಸಂಗದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ 'ಋತುಪರ್ಣ'ನ ಪಾತ್ರ, ಕೋಳ್ಯೂರು ರಾಮಚಂದ್ರ ರಾಯರ 'ದಮಯಂತಿ', ಪೆರುವಡಿ ನಾರಾಯಣ ಭಟ್ಟರ 'ಬಾಹುಕ' ಮತ್ತು ಬಲಿಪ ನಾರಾಯಣ ಭಾಗವತರ ಹಾಡುಗಾರಿಕೆ. ಆ ಹೊತ್ತಿಗೆ ಮಹಾಲಿಂಗ ಭಟ್ಟರು ಶಾರೀರಿಕವಾಗಿ ಬಳಲಿದ್ದರೂ, ಪಾತ್ರದ ಗತ್ತುಗಾರಿಕೆಯಲ್ಲಿ ಅದು ಕಂಡಿಲ್ಲ. ಬಹುಶಃ ಅವರನ್ನು ಕಂಡದ್ದು, ಮಾತನಾಡಿದ್ದು ಅದೇ ಕೊನೆ.

ಕಲಾಸೇವೆ

ತಂದೆ ಹೊಸಹಿತ್ಲು ಗಣಪತಿ ಭಟ್, ತಾಯಿ ವೆಂಕಮ್ಮ. ಬಾಲ್ಯದಿಂದಲೇ ಯಕ್ಷಗಾನ ಉಸಿರು. ಶ್ರೀಧರ್ಮಸ್ಥಳ ಮೇಳದಲ್ಲಿ ಹದಿನೈದು ವರುಷ, ಕಟೀಲು, ಸುರತ್ಕಲ್, ಕೂಡ್ಲು, ಬಪ್ಪನಾಡು, ಮೂಲ್ಕಿ, ಪುತ್ತೂರು ಮೇಳಗಳಲ್ಲಿ ತಲಾ ಎರಡು ವರುಷಗಳಂತೆ ವ್ಯವಸಾಯ. ನಿವೃತ್ತಿಯ ಬಳಿಕ ಹವ್ಯಾಸಿ ಸಂಘಗಳಲ್ಲಿ ಭಾಗಿ. ಯಕ್ಷಗಾನ ಶಿಕ್ಷಕನಾಗಿ ಹಲವಾರಿ ಶಿಷ್ಯರನ್ನು ರೂಪಿಸಿದ್ದಾರೆ

ಯಕ್ಷಗಾನದ ಸರ್ವಾಂಗ ಸಂಪನ್ಮೂಲವಿದ್ದರೂ ಅದರ ಪ್ರಕಾಶಕ್ಕೆ 'ವಿಧಿ'ಯ ಮಸುಕು. 'ಯೋಗ-ಯೋಗ್ಯತೆ' ಒಬ್ಬರಲ್ಲೇ ಇರುವುದಿಲ್ಲವಲ್ಲಾ! ಮೀಯಪದವು ಹೊಸಹಿತ್ಲು ಮಹಾಲಿಂಗ ಭಟ್ (ಲಿಂಗಣ್ಣ) 2011, ಸೆಪ್ಟೆಂಬರ್ 21ರಂದು ವಿಧಿವಶರಾದರು.

ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ, ಮಕರಾಕ್ಷ, ಭೀಷ್ಮ, ಕಾರ್ತವೀರ್ಯ.. ಮೊದಲಾದ ಪಾತ್ರಗಳು ಹೈಲೈಟ್ಸ್. ಎಲ್ಲವೂ ಗಂಡುಗತ್ತಿನವುಗಳು. ಪುಂಡುವೇಷಕ್ಕೊಂದು ಘನತೆ ತಂದಿತ್ತ ಭಟ್ಟರು ಸಾರ್ವಕಾಲಿಕ ಶ್ರೇಷ್ಠ ಅಭಿಮನ್ಯುವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವರು ಹೇಳುವುದುಂಟು.

****************







ಕೃಪೆ : http://www.noopurabhramari.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
SUBRAHMANYA ADKA(9/8/2014)
೧೯೭೫ರಲ್ಲಿ ಕೋಟೂರು ಶ್ರೀ ಕಾರ್ತಿಕೇಯ ಕಲಾನಿಲಯದಲ್ಲಿ ನಡೆದ ಯಕ್ಷಗಾನ ತರಬೇತಿಯಲ್ಲಿ ನಾಟ್ಯ ಗುರುಗಳಾಗಿ ಬಂದು ನಮ್ಮನ್ನು ಯಕ್ಷಗಾನ ಕಲಾಮೂರ್ತಿಗಳಾಗಿ ರೂಪಿಸಿದ ಮಹಾಶಿಲ್ಪಿ ಹೊಸಹಿತ್ಲು ಮಹಾಲಿಂಗ ಭಟ್ಟರು. ಅವರಿಗೆ ಎಂದೆಂದಿಗೂ ನಮನಗಳನ್ನು ಅರ್ಪಿಸುತ್ತೇನೆ. ಅವರ ಕುರಿತಾಗಿ ಬರೆದ ಈ ಲೇಖನವನ್ನು ನೋಡಿದಾಗ ಗುರುಗಳ ದಿವ್ಯ ರೂಪವನ್ನೆ ನೋಡಿದಷ್ಟು ಆನಂದವಾಯಿತು. ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾತ್ರಿ ಹೊತ್ತು ನಮಗೆ ನೃತ್ಯ ತರಬೇತಿಯನ್ನಿತ್ತು ಮಧ್ಯರಾತ್ರಿ ಎರಡು ಕಿ.ಮೀ ದೂರ ಗುಡ್ಡವನ್ನೇರಿ ನಮ್ಮ ಮನೆಗೆ ಬರುತ್ತಿದ್ದ ಲಿಂಗಣ್ಣನವರು ನಮಗೆ ನೀಡಿದ ಸ್ನೇಹವನ್ನು ಎಂದೆಂದಿಗೂ ಮರೆಯಲಸಾಧ್ಯ.
Janardhan N Shastri(9/8/2014)
nanna. gurusamanaru. puttur. meladalli. thirugata. ottige.1981. 1982. 1983ralli. nanu. k.govinda. bhattara. kendradalli. shishya.1979ralli.tumba. olleyavaru.nandalike. janardana. shasthri. 9845663852. ege. h.a/l.nalli. .namma. mane.catareres.bangalore
Venugopala Ks(9/8/2014)
nana modala gurugalu evaru.
Govinda Ballamoole(9/7/2014)
ನಮ್ಮಲ್ಲಿ ನಮ್ಮ ಕಲಾನಿಲಯದಲ್ಲಿ ಯಕ್ಷಗಾನದ ಜ್ನಾನ ತು೦ಬಿ ಅನುಗ್ರಹಿಸಿದ ನಮ್ಮ ಪ್ರೀತಿಯ ಗುರು ಹೊಸಹಿತ್ಲು ಮಹಾಲಿ೦ಗ ಭಟ್ ಅವರ ಕುರಿತಾದ ವಿಚಾರ ಒದಿ ಮಹದಾನ೦ದವಾಯಿತು. ಧನ್ಯವಾದಗಳು.
Raj Kumar(9/7/2014)
ಪುಂಡು ವೇಷವೆಂದರೆ ಬರೀ ಕುತ್ತು ಹಾರುವುದು ಮತ್ತು ಒಂದರ್ಧ ಘಂಟೆ ಕುಣಿಯುವುದು...ಇದು ಪಾತ್ರದಿಂದ ಪಾತ್ರಕ್ಕೆ ವೆತ್ಯಾಸವೇ ಇರುವುದಿಲ್ಲ. ಮಾತಿನಿಂದ ಪಾತ್ರವನ್ನು ಕಟ್ಟಿಕೊಳ್ಳುವ ಭಾಗ ಯಾವತ್ತಿಗೂ ಶೂನ್ಯ..ಇದು ಇಂದಿನ ಬಹಳಷ್ಟು ಪುಂಡುವೇಷಧಾರಿಗಳ ತೊಂದರೆ. ಈ ವೆತ್ಯಾಸಗಳನ್ನೆಲ್ಲ ಇವತ್ತು ಗುರುತಿಸಬಹುದಿದ್ದರೆ ಅದು ಲಿಂಗಣ್ಣನಂತಹ ಕಲಾವಿದರ ವೇಷಗಳನ್ನು ನೋಡಿರಬೇಕು. ಇದು ಅತಿಶಯೋಕ್ತಿಯ ಮಾತಲ್ಲ. ಇವರಲ್ಲಿ ನಾಟ್ಯ ವೈವಿಧ್ಯಮಯವಾಗಿ ಪಾತ್ರದಿಂದ ಪಾತ್ರಕ್ಕೆ ವಿಭಿನ್ನವಾಗಿರುತ್ತಿತ್ತು. ನಾಟ್ಯ ಎಷ್ಟಿತ್ತೋ ಅಷ್ಟೇ ಅರ್ಥಗಾರಿಕೆಯೂ ಇರುತ್ತಿತ್ತು. ಈಗೀಗ ಆಟ ರೈಸು ಬೇಕು ಎಂದು ಕುಣಿತ ಕುಣಿತ ಅದೊಂದೇ ಕಾಣುತ್ತದೆ. ಯುದ್ದ ಸನ್ನಿವೇಶದ ಏರು ಪದಗಳಲ್ಲಿ ಒಂದೇ ಪದಕ್ಕೆ ಎರಡೂ ವೇಷಗಳು ಕುತ್ತು ಹಾಕಿ ಸ್ಪರ್ಧೆ ನಡೆಸುವುದು ಇದಕ್ಕೊಂದು ನಿದರ್ಶನ. ಲಿಂಗಣ್ಣನಂತಹವರ ವೇಷಗಳನ್ನು ನೋಡಿ ಅದನ್ನು ಅನುಸರಿಸುವ ಅಲ್ಪ ಜ್ಞಾನವಾದರೂ ಇರುತ್ತಿದ್ದರೆ ಎಂದು ಈಗಿನ ವೇಷಗಳನ್ನು ನೋಡುವಾಗ ಅನಿಸುವುದುಂಟು.




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ