ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹವ್ಯಾಸಿ ರಂಗಭೂಮಿಯ ದಶಾವತಾರಿ ಹಳ್ಳಾಡಿ ಸುಬ್ರಾಯ ಮಲ್ಯ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಜುಲೈ 25 , 2014

ಕೆನ್ನೆಯಲ್ಲಿ ಹಾಲಿನ ಹನಿಗಳು ಆರುವ ಮುನ್ನವೇ ನಾದ-ನಿನಾದ-ಸುನಾದಗಳ ರಸರೋಮಾಂಚನಗಳ ಅದ್ಬುತ ಯಕ್ಷಲೋಕದಿಂದ ಆಕರ್ಷಿತರಾಗಿ ಅದನ್ನೇ ವೃತ್ತಿಯಾಗಿಸಿಕೊಂಡು ಹವ್ಯಾಸಿ ಯಕ್ಷಗಾನ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ನಿರಂತರವಾಗಿ ಕುಂದಾಪುರ ಉಡುಪಿ ಪರಿಸರದಲ್ಲಿ ನೂರಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಸಾವಿರಾರು ಹವ್ಯಾಸಿಗಳನ್ನು ಕಲಾವಿದರನ್ನಾಗಿ ಮಾಡುವಲ್ಲಿ ಹಗಳಿರುಳೆನ್ನದೆ ನಿರಂತರ ಯಕ್ಷಮಾತೆಯ ಸೇವೆಮಾಡಿ ಹೆಜ್ಜೆ ಹೆಗ್ಗುರುತು ಮೂಡಿಸಿದ ಅನನ್ಯ ಸಾಧಕ ಹಳ್ಳಾಡಿ ಸುಬ್ರಾಯ ಮಲ್ಯರವರು.

ನಿರ೦ತರ ಯಕ್ಷಗಾನ ತರಬೇತಿ

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರ ಹಗಲಿರುಳು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಬಸ್ಸುಗಳಿರದ ಕಾಲದಲ್ಲಿ ಚೆಂಡೆ, ಮದ್ದಳೆ, ತಾಳ, ಕೆಲವೊಮ್ಮ ಶ್ರುತಿ ಪೆಟ್ಟಿಗೆಯನ್ನ ಸಹ ಪ್ರಾರಂಭದಲ್ಲಿ ಹೊತ್ತುಕೊಂಡು ನಡೆದುಕೊಂಡೋ, ಕೊನೆಗೆ ತನ್ನ ಜೀವಿತದ ಕೊನೆಯ ದಿನದವರೆಗೂ ತನ್ನ ಸಾಥಿಯಾಗಿದ್ದ ದ್ವಿಚಕ್ರವಾಹನವಾದ ಸೈಕಲ್ಲಿಗೆ ಕಟ್ಟಿಕೊಂಡು ಹೊರಟರೆಂದರೆ ಮಲ್ಯರು ಎಲ್ಲಿಗೋ ತರಬೇತಿಗೆ ಹೊರಟಿದ್ದಾರೆಂದೇ ಸುತ್ತ ಮುತ್ತಲಿನ ಜನ ತಿಳಿಯುತಿದ್ದರು. ಯಕ್ಷಗಾನದ ಸರ್ವ ಅಂಗಗಳನ್ನೂ ಪರಿಪೂರ್ಣವಾಗಿ ಕರಗತ ಮಾಡಿಕೊಂಡ ಇವರಿಗೆ ಚಲಿಸುವ ಯಕ್ಷಗಾನ ಭಂಡಾರ ಎನ್ನುವುದು ಅನ್ವರ್ಥಕ ನಾಮ.

ತನ್ನೊಳಗೆ ಸಣ್ಣತನವಿರದೆ, ಚಂಚಲತೆ ಇರದೆ, ಮೇಲು ಕೀಳುಗಳೆಂಬ ಭೇದವಿರದೆ, ಆ ಜಾತಿ, ಈ ಜಾತಿ ಅನ್ನುವ ಲೆಕ್ಕಾಚಾರವಿರದೆ, ಅಹಂ ಇರದೆ, ದ್ವೇಷಗುಣ ಸಣ್ಣತನವಿರದೆ ಉಡುಪಿ ಜಿಲ್ಲೆಯ ಸಹಸ್ರಾರು ಕಲಾರಾದಕ ಶಿಷ್ಯ ವೃಂದದ ಹೃದಯ ಬೃಂದಾವನದಲ್ಲಿ ಸ್ಥಾಪಿತರಾದ ಗುರು ಮಲ್ಯರ ಸಹಸ್ರಾರು ಶಿಷ್ಯರು ಸಮಾಜದ ಉನ್ನತ ಹುದ್ದೆಗಳಲಿದ್ದರೂ ಮಲ್ಯರು ತಮ್ಮ ಯಕ್ಷಗಾನ ಗುರುಗಳು ಎಂಬ ಅವಿನಾಭಾವ ಸ೦ಬ೦ಧವನ್ನು ಬಿಂಬಿಸುತ್ತಾರೆ. ವೃತ್ತಿ ಮೇಳಗಳಲ್ಲಿ ಮೆರೆಯುತ್ತಿರುವ ಇಂದಿನ ನೂರಾರು ಕಲಾವಿದರು ಸಹ ಮಲ್ಯರ ಶಿಷ್ಯ ಪರಂಪರೆಯಿಂದ ಬಂದವರು. ಹಳ್ಳಾಡಿ, ಶಿರಿಯಾರ ಪರಿಸರದಿಂದ ಬೇರೆ ಬೇರೆ ಮೇಳಗಳಲ್ಲಿರುವ ವೃತ್ತಿ ಕಲಾವಿದರು ಮಲ್ಯರ ಗುರುಕುಲದಲ್ಲಿ ತರಬೇತಿ ಹೊಂದಿದವರೇ ಅಂದರೆ ಅತಿಶಯೋಕ್ತಿಯಾಗಲಾರದು.

ಬಾಲ್ಯ, ಯಕ್ಷಗಾನ ವಿದ್ಯಾಭ್ಯಾಸ

ಬಡಗುತಿಟ್ಟು ಯಕ್ಷಗಾನದ ತವರೂರು ಕುಂದಾಪುರ ತಾಲೂಕಿನ ಶಿರಿಯಾರ ಸಮೀಪ ಹಳ್ಳಾಡಿ ಎಂಬಲ್ಲಿ, 1937ರ ಫ಼ೆಬ್ರವರಿ 3 ರಂದು ಜಿ. ಎಸ್. ಬಿ. ಸಮಾಜದ ಸಾತ್ವಿಕ ದಂಪತಿಗಳಾದ ನಾಗಪ್ಪ ಮಲ್ಯ ಮತ್ತು ನೇತ್ರಾವತಿ ಅಮ್ಮನವರ ಪುತ್ರನಾಗಿ ಜನಿಸಿದ ಸುಬ್ರಾಯ ಮಲ್ಯರು 5ನೇ ತರಗತಿ ವಿದ್ಯಾಬ್ಯಾಸ ಮಾಡಿ ಪರಿಸರದಲ್ಲಿ ನಡೆಯುವ ಬಯಲಾಟ ಮೇಳಗಳಿಂದ ಆಕರ್ಷಿತರಾಗಿ ಯಕ್ಷಗಾನದ ಸೆಳೆತಕ್ಕೆ ಒಳಗಾದರು. ಮಂದಾರ್ತಿ ಮೇಳದಲ್ಲಿ ಮದ್ದಳೆಗಾರರಾಗಿದ್ದ ದಿ. ಸುರಗಿಕಟ್ಟೆ ಬಸವ ಗಾಣಿಗರಲ್ಲಿ ಮದ್ದಳೆಗಾರಿಕೆಗೆ ಬೇಕಾದ ತಾಳ, ಲಯ, ಶ್ರುತಿ, ಗುಂಪು, ಛಾಪುಗಳ ಪ್ರಾಥಮಿಕ ಅಬ್ಯಾಸ ನಡೆಸಿ, ಮದ್ದಳೆಗಾರರಾಗಿ ಗುರುತಿಸಿಕೊಂಡರು. ಬಳಿಕ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿಕೊಂಡು ಭಾಗವತಿಕೆಯನ್ನೂ ಬೆಳಂಜೆ ತಿಮ್ಮಪ್ಪ ನಾಯಕರಿಂದ ಚೆಂಡೆವಾದನ, ಹೆಜ್ಜೆಗಾರಿಕೆ ಹೀಗೆ ಯಕ್ಷಗಾನಕ್ಕೆ ಬೇಕಾದ ಎಲ್ಲಾ ಅಂಗಗಳಲ್ಲೂ ಪರಿಪೂರ್ಣತೆ ಪಡೆದು ಹವ್ಯಾಸಿ ರಂಗಭೂಮಿಗೆ ಅವಿಭಾಜ್ಯ ಅಂಗವಾಗಿ ದಶಾವಾತಾರಿ ಎಂದು ಗುರುತಿಸಿಕೊಂಡರು.



ದೇಶ-ವಿದೇಶಗಳಲ್ಲಿ ಯಕ್ಷಗಾನದ ನಿನಾದ

ಉಪ್ಪಿನಕುದ್ರು ಗಣೇಶ ಯಕ್ಷಗಾನ ಮಂಡಳಿಯ ಮದ್ದಳೆಗಾರರಾಗಿ ದಿ. ಕೊಗ್ಗ ಕಾಮತರ ಒಡನಾಡಿಯಾಗಿ 30 ವರ್ಷ ತಿರುಗಾಟ ಮಾಡಿದ ಅವರು ಪ್ರಾನ್ಸ್, ಇಂಗ್ಲೆಂಡ್, ಆಸ್ಟ್ರೇಲಿಯ, ಜಪಾನ್, ಜರ್ಮನಿ, ರೋಮ್, ಮುಂತಾದ ದೇಶಗಳಲ್ಲಿ ತನ್ನ ಮದ್ದಳೆಯ ನಿನಾದವನ್ನು ಮೊಳಗಿಸಿದರು. ಡಾ/ ಶಿವರಾಮ ಕಾರಂತರಿಂದ ಶಹಬ್ಬಾಸ್ ಗಿರಿ ಪಡೆದ ಅವರು ಕಾರಂತರ ಯಕ್ಷಗಾನ ಬ್ಯಾಲೆಗಳಲ್ಲಿ ಭಾಗವಹಿಸಿ ವಿದೇಶ ಸಂಚಾರವನ್ನು ಅರವತ್ತರ ದಶಕಗಳಲ್ಲೇ ನಡೆಸಿದವರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀದರ ಹಂದೆಯವರ ಸಹವರ್ತಿಯಾಗಿ ನೂರಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರಿಗೆ ಶಾಲಾ ಮಕ್ಕಳನ್ನು ಆ ಕಾಲದಲ್ಲಿ ಯಕ್ಷಾಗಾನಕ್ಕೆ ಎಳೆದುತಂದ ಕೀರ್ತಿ ಸಲ್ಲುತ್ತದೆ.
ಹಳ್ಳಾಡಿ ಸುಬ್ರಾಯ ಮಲ್ಯ
ಜನನ : ಫ಼ೆಬ್ರವರಿ 3, 1937
ಜನನ ಸ್ಥಳ : ಶಿರಿಯಾರ ಸಮೀಪ ಹಳ್ಳಾಡಿ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಹವ್ಯಾಸಿ ಯಕ್ಷಗಾನ ರಂಗಭೂಮಿಯ ಅವಿಭಾಜ್ಯ ಅಂಗವಾಗಿ, ನೂರಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಸಾವಿರಾರು ಹವ್ಯಾಸಿಗಳನ್ನು ಕಲಾವಿದರನ್ನಾಗಿ ಮಾಡುವಲ್ಲಿ ಹಗಳಿರುಳೆನ್ನದೆ ನಿರಂತರ ಯಕ್ಷಮಾತೆಯ ಸೇವೆಮಾಡಿದ ಹೆಗ್ಗುರುತು.

ಪ್ರಶಸ್ತಿಗಳು:
  • 2010-11ರ ಯಕ್ಷಗಾನ ಕಲಾರಂಗ ಪ್ರಶಸ್ತಿ
  • ನಾರ್ಣಪ್ಪ ಉಪ್ಪೂರ ಪ್ರಶಸ್ತಿ
  • ಅಂಬಲಪಾಡಿ ಯಕ್ಷಗಾನ ಸಂಘದ ವಾರ್ಷಿಕ ಪ್ರಶಸ್ತಿ
  • ನೆಹರೂ ಯುವಕೇಂದ್ರ ಮಂಗಳೂರು, ರೋಟರಿ ಕ್ಲಬ್ ಸಾಯಬರಕಟ್ಟೆ ಇದರ ಸುವರ್ಣ ಪುರಸ್ಕಾರ
  • ಜಿ. ಎಸ್. ಬಿ ಸಮಾಜ ಭಾಂದವರ ಜಿ. ಎಸ್. ಬಿ. ಕಲಾರತ್ನ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ಮರಣ : 2013

ಕುಂದಾಪುರ ತಾಲೂಕಿನಾದ್ಯಂತ ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಕಾರ್ಯಕ್ರಮಕ್ಕೆ ಮಲ್ಯರ ಉಪಸ್ಥಿತಿ ಅನಿವಾರ್ಯವಾಗಿತ್ತು. ಮಂದಾರ್ತಿ, ಕಮಲಶಿಲೆ, ಸೌಕೂರು ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದರೂ ಅವರ ಗಣನೀಯ ಕೊಡುಗೆ ಹವ್ಯಾಸಿ ರಂಗಭೂಮಿಗೆ. ಉಡುಪಿ ಜಿಲ್ಲೆಯ ಉತ್ತರ ಭಾಗದಲ್ಲಿ ಮಲ್ಯರು, ದಕ್ಷಿಣ ಭಾಗದಲ್ಲಿ ಕಾಂತಪ್ಪ ಮಾಸ್ತರರು ಹವ್ಯಾಸಿ ರಂಗಭೂಮಿಯ ಚಲಿಸುವ ಯಕ್ಷಭಂಡಾರ ಎಂದು ಖ್ಯಾತಿವೆತ್ತವರು. ಜೀವಿತದ ಕೊನೆಯವರೆಗೂ ಮಂದಾರ್ತಿ ಮತ್ತು ಸೌಕೂರು ಮೇಳಗಳ ಮೊದಲ ಮತ್ತು ಕೊನೆಯ ದೇವರ ಸೇವೆಯಲ್ಲಿ ಅವರ ಚಂಡೆ ಮದ್ದಳೆ ಸೇವೆ ನಿರಂತರ ನಡೆಸಿದ್ದು ಅವರ ಕಲಾಪ್ರೀತಿ ಮತ್ತು ಕ್ಷೇತ್ರದ ಬಗ್ಗೆ ಅಭಿಮಾನವನ್ನು ಸೂಚಿಸುತ್ತದೆ.

ಆಕಾಶವಾಣಿ ದೂರದರ್ಶನದಲ್ಲೂ ಕಾರ್ಯಕ್ರಮ ನೀಡಿದ ಇವರು ಸಮಾಜದ ಗಣ್ಯರನೇಕರಿಗೆ, ರಾಜಕೀಯ ವ್ಯಕ್ತಿಗಳಿಗೆ, ವಿದ್ಯಾವಂತರಿಗೂ ವೇಷ ಹಾಕಿಸಿ ಕುಣಿಸಿ ಯಕ್ಷಗಾನ ಕಲೆಗೆ ಆ ಕಾಲದಲ್ಲಿದ್ದ ಮೈಲಿಗೆಯನ್ನು ದೂರಮಾಡಿದ್ದರು. ಸಮಾಜದ ಮೇಲುವರ್ಗದಿಂದ ಬಂದ ಅವರು ಸಮಾಜಭಾಂದವರ ಟೀಕೆ ಟಿಫ್ಫಣಿಗಳಿಗೂ ಧೃತಿಗೆಡದೆ ಧೈರ್ಯದಿಂದ ಎದುರಿಸಿದವರು. ಸಮಾಜದ ಮೇಲುವರ್ಗದವರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಮಲ್ಯರ ಕೊಡುಗೆ ಅಪಾರ ಎನ್ನುವುದು ಈ ರಂಗದಲ್ಲಿ ತೊಡಗಿಸಿಕೊಂಡ ಅನೇಕರ ಅಭಿಪ್ರಾಯವಾಗಿದೆ.

ಅಪಾರ ಶಿಷ್ಯ ವೃ೦ದ, ನೂರಾರು ಸ೦ಘಗಳ ಸ್ಥಾಪನೆ

ಮೇಲಿನ ಎಲ್ಲವದಕ್ಕಿಂತಲೂ ಸುಬ್ರಾಯ ಮಲ್ಯರನ್ನು ಗುರುತಿಸಬೇಕಾದದ್ದು ಅವರು ಹವ್ಯಾಸಿ ಯಕ್ಷಗಾನ ಕೇತ್ರಕ್ಕೆ ನೀಡಿದ ಅಸಾದಾರಣ ಕೊಡುಗೆಯನ್ನು. ಶಾಲಾ ಮಕ್ಕಳ ಹೆತ್ತವರಿಗೆ ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದ ಆ ಕಾಲದಲ್ಲಿ, ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ಮಕ್ಕಳಿಂದ ನಿರಂತರ ಕಾರ್ಯಕ್ರಮ ನೀಡಿದ ಕೀರ್ತಿ ಸುಮಾರು ಐವತ್ತರ ದಶಕದಿಂದೀಚೆ ಮಲ್ಯರಿಗೆ ಸಲ್ಲಬೇಕು. ಯಕ್ಷ ಶಿಕ್ಷಣ ಟ್ರಷ್ಟ್ ನಂತ ತರಬೇತಿ ಕೇಂದ್ರಗಳಿಲ್ಲದ ಆ ಕಾಲದಲ್ಲಿ ಮದ್ದಳೆಯನ್ನು ಸೈಕಲ್ಲಿಗೆ ಕಟ್ಟಿಕೊಂಡು ಬಹುದೂರದವರೆಗೆ ಹೋಗಿ ಶ್ರುತಿಪೆಟ್ಟಿಗೆ ಇಲ್ಲದೆ ತಾನೇ ಮದ್ದಳೆ ಬಾರಿಸಿ ತರಬೇತಿ ನೀಡಿದ್ದರಿಂದ ಅವರ ಸ್ವರವೂ ಕೈಕೊಟ್ಟದ್ದರಿಂದ ಜೀವಿತದ ಕೊನೆಯ ಕಾಲದಲ್ಲಿ ಅವರು ಭಾಗವತಿಕೆಯನ್ನು ನಿಲ್ಲಿಸಬೇಕಾಯಿತು.

ಈ ಲೇಖಕನೂ ಸೇರಿದಂತೆ ಸಾವಿರಾರು ಶಿಷ್ಯರನ್ನು ಸೃಷ್ಟಿಸುವುದರ ಮೂಲಕ ಹಾಗೂ ನೂರಕ್ಕೂ ಅಧಿಕ ಯಕ್ಷಗಾನ ಸಂಘವನ್ನು ಹುಟ್ಟು ಹಾಕುವುದರ ಮೂಲಕ ಕಲಾ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸ್ವತಹ ಯಕ್ಷಗಾನ ವೇಷಭೂಷಣವನ್ನು ತಯಾರಿಸಿ ಸಂಘ ಸಂಸ್ಥೆಗಳಿಗೆ ಪೂರೈಸುವ ಕಾಯಕವನ್ನೂ ಅವರು ನಡೆಸಿದ್ದರು. ಸಾಯುವ ದಿನದಂದು ಸಹ ತರಬೇತಿ ಮುಗಿಸಿ ಬಂದು ಮಲಗಿದ್ದರು ಎನ್ನುವುದು ಸಹ ಅವರ ವಿಶಿಷ್ಟ ಕೊಡುಗೆಗೆ ಸಾಕ್ಷಿ. ಕೊನೆಯವರೆಗೂ ತನ್ನ ಸೈಕಲ್ಲನ್ನು ಬಿಟ್ಟು ಬೇರೆ ವಾಹನ ಏರದ ಸರಳ ವ್ಯಕ್ತಿಯಾದ ಇವರು ಸರಳತೆ ಮತ್ತು ಸಜ್ಜನಿಕೆಗೆ ಇನ್ನೊ೦ದು ಉದಾಹರಣೆ. ಎರಡು ಹೆಣ್ಣು ಮಕ್ಕಳಿಗೆ ಒಳ್ಳಯ ವಿದ್ಯಾಭ್ಯಾಸ ಕೊಡಿಸಿದ ಇವರು ತನ್ನ ಏಕಮಾತ್ರ ಪುತ್ರ ರಾಕೇಶ ಮಲ್ಯನನ್ನು ಉತ್ತಮ ಚಂಡೆವಾದಕನನ್ನಾಗಿ ರೂಪಿಸಿದ್ದಾರೆ. ಮಂದಾರ್ತಿ, ಶಿರಸಿ, ಸೌಕೂರು, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರ ಪುತ್ರ ಸಹ ಕಲಾವಿದರ ಮತ್ತು ಹಿಮ್ಮೇಳ ವಾದಕರ ಪ್ರೀತಿಗೆ ಪಾತ್ರರಾದವರು. ಭಾಗವತಿಕೆ, ಮದ್ದಳೆ ವಾದನದಲ್ಲೂ ನಿಷ್ಣಾತರಾದ ರಾಕೇಶಮಲ್ಯರು ಪದ್ಯದ ಭಾವಕ್ಕೆ ಮತ್ತು ಸಾಹಿತ್ಯಕ್ಕೆ ಚ್ಯುತಿ ಬಾರದ ಹಾಗೆ ಚಂಡೆವಾದನ ಮಾಡುವ ಬೆರಳೆನಿಕೆಯ ಕಲಾವಿದರಲ್ಲಿ ಒಬ್ಬರು.

ಪ್ರಶಸ್ತಿ ಸನ್ಮಾನಗಳು

ಜೀವಿತದಲ್ಲಿ ಅನೇಕ ಸಂಘ ಸಂಸ್ಥೆಯಿಂದ ಸನ್ಮಾನಿಸಲ್ಪಟ್ಟ ಇವರಿಗೆ 2010-11ರ ಯಕ್ಷಗಾನ ಕಲಾರಂಗ ಮತ್ತು ನಾರ್ಣಪ್ಪ ಉಪ್ಪೂರರ ಮಕ್ಕಳು ಜಂಟಿಯಾಗಿ ನೀಡುವ ಇವರ ಗುರುಗಳ ಹೆಸರಿನ ನಾರ್ಣಪ್ಪ ಉಪ್ಪೂರ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ. ಅಂಬಲಪಾಡಿ ಯಕ್ಷಗಾನ ಸಂಘದ ವಾರ್ಷಿಕ ಪ್ರಶಸ್ತಿ, ನೆಹರೂ ಯುವಕೇಂದ್ರ ಮಂಗಳೂರು, ರೋಟರಿ ಕ್ಲಬ್ ಸಾಯಬರಕಟ್ಟೆ ಇದರ ಸುವರ್ಣ ಪುರಸ್ಕಾರ, ಜಿ. ಎಸ್. ಬಿ ಸಮಾಜ ಭಾಂದವರ ಜಿ. ಎಸ್. ಬಿ. ಕಲಾರತ್ನ ಪ್ರಶಸ್ತಿ, ಗಣೇಶೋತ್ಸವ ಸಮಿತಿ ಮೆಕ್ಕೆಕಟ್ಟೆ ಇವರಿಂದ ಕಲಾ ತಪಸ್ವಿ ಪ್ರಶಸ್ತಿ ಸಹಿತ ನೂರಾರು ಸನ್ಮಾನಗಳು ನಾಡಿನಾದ್ಯಂತ ನೆಡೆದಿವೆ. ಹವ್ಯಾಸಿ ರಂಗಭೂಮಿಗೆ ತೀರಾ ಅನಿವಾರ್ಯರಾಗಿದ್ದ ಸುಬ್ರಾಯ ಮಲ್ಯರ ಅಗಲುವಿಕೆಯಿಂದ ಬಡಗುತಿಟ್ಟು ಹವ್ಯಾಸಿ ರಂಗಭೂಮಿ ಬಡವಾಗಿದೆ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ