ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಡಗುತಿಟ್ಟಿನ `ರಂಗಸ್ಥಳ ರಾಜ` ನಗರ ಜಗನ್ನಾಥ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಫೆಬ್ರವರಿ 9 , 2014

ಬಡಗು ತಿಟ್ಟಿನ ಪ್ರೇಕ್ಷಕರಿ೦ದ "ರ೦ಗಸ್ಥಳದ ರಾಜ" ಎ೦ದು ಗುರುತಿಸಲ್ಪಟ್ಟ ನಗರ ಜಗನ್ನಾಥ ಶೆಟ್ಟರು ಯಕ್ಷಗಾನ ಪ್ರಪ೦ಚ ಕ೦ಡ ಕೆಲವೇ ಕೆಲವು ಶಿಷ್ಟ ಕಲಾವಿದರಲ್ಲಿ ಒಬ್ಬರು. ಸುಸ೦ಸ್ಕ್ರತರು, ವಾಗ್ಮಿ, ರ೦ಗದಲ್ಲಿ ಅದ್ಭುತ ಬೆಳವಣಿಗೆಯ ಇತಿಹಾಸವನ್ನೇ ನಿರ್ಮಿಸಿದ ಇವರು, ಎದುರು ಪಾತ್ರಧಾರಿಗಳ ಗು೦ಡಿಗೆಯನ್ನು ನಡುಗಿಸುವ೦ಥ ಧೀರ, ಧೀಮ೦ತ ಪಾತ್ರಧಾರಿ. ಬಡಗು ತಿಟ್ಟಿನ ಸ೦ಪ್ರದಾಯಿಕ ಶೈಲಿಯ ಕಲಾವಿದರಾದ ದಿವ೦ಗತ ಹಾರಾಡಿ ರಾಮ ಗಾಣಿಗ, ಹಾರಾಡಿ ಕುಷ್ಟ ಗಾಣಿಗ, ಶಿರಿಯೂರ ಮ೦ಜು ನಾಯ್ಕ್, ವೀರಭದ್ರ ನಾಯಕರ ಸಾಲಿನಲ್ಲಿ ಕಾಣಸಿಗುವ ಇನ್ನೋರ್ವ ಪ್ರಸಿದ್ಧ ಕಲಾವಿದ ನಗರ ಜಗನ್ನಾಥ ಶೆಟ್ಟರು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಮೂಲತ ಕುಂದಾಪುರ ತಾಲೂಕಿನವರಾದ ನಗರ ಜಗನ್ನಾಥ ಶೆಟ್ಟರು ಚಂದಯ್ಯ ಶೆಟ್ಟಿ ಮತ್ತು ಚಿಕ್ಕಮ್ಮ ಶೆಟ್ಟಿ ದಂಪತಿಗಳ ಸುಪುತ್ರನಾಗಿ 1941ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಜನಿಸಿದರು. ತಮ್ಮೂರಿನಲ್ಲಿ ನಡೆಯುತಿದ್ದ ಬಯಲಾಟಗಳನ್ನು ನೋಡಿ ಯಕ್ಷಗಾನದಲ್ಲಿ ಅಭಿರುಚಿ ಹುಟ್ಟಿ ತಾನೂ ಯಕ್ಷಗಾನ ವೇಷಧಾರಿಯಾಗಬೇಕೆಂಬ ಹಂಬಲದಿಂದ ತನ್ನ 12ರ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದರು.

ಮೂರನೇ ತರಗತಿ ವಿದ್ಯಾಭ್ಯಾಸ ಮಾಡಿದ ಇವರು ಬಾಲ ಕಲಾವಿದನಾಗಿ ಶ್ರೀ ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದರು. ಹರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ಶಿರಿಯಾರ ಮಂಜು ನಾಯಕ್, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಕುಮಟಾ ಗೋವಿಂದ ನಾಯ್ಕರಂತ ಮೇರು ಕಲಾವಿದರ ಒಡನಾಡಿಯಾದ ಇವರು ಅವರೆಲ್ಲರ ನೇರ ಪ್ರಭಾವಕ್ಕೆ ಒಳಗಾಗಿದ್ದರು. ಭಾಗವತರಾದ ಗುಂಡ್ಮಿ ರಾಮಚಂದ್ರ ನಾವಡ, ನಾರ್ಣಪ್ಪ ಉಪ್ಪೂರ, ಕಾಳಿಂಗ ನಾವಡ, ಗೋರ್ಪಾಡಿ ವಿಠಲ ಪಾಟೀಲ, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಮರವಂತೆ ನರಸಿಂಹದಾಸ, ನೆಲ್ಲೂರು ಮರಿಯಪ್ಪಾಚಾರ್ ಇವರ ರಂಗನೆಡೆಯಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡ ಇವರು, ಇವರೆಲ್ಲರ ರಂಗನಡೆ ರಂಗಸ್ಥಳದಲ್ಲಿ ಪಾತ್ರ ನಿರ್ವಹಣೆಗೆ ಸಹಕಾರಿಯಾಗುತಿತ್ತೆಂದು ನೆನಪಿಸಿಕೊಳ್ಳುತಿದ್ದರು.

ಅಗ್ರಗಣ್ಯರ ಒಡನಾಟ

ಅಮೃತೇಶ್ವರಿ ಡೇರೆ ಮೇಳದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ಇವರ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಕೋಟ ವೈಕುಂಠರ ಜೋಡಿ ವೇಷಗಳು ಆ ಕಾಲದಲ್ಲಿ ಅತ್ಯಂತ ಜನಪ್ರಿಯವಗಿದ್ದವು. ಚಿಟ್ಟಾಣಿಯವರ ಕೀಚಕ - ಶೆಟ್ಟರ ವಲಲ - ವೈಕುಂಠರ ಸೈರಂದ್ರಿ, ಶೆಟ್ಟರ ಉಗ್ರಸೇನ - ಚಿಟ್ಟಾಣಿಯರ ಕಂಸ - ವೈಕುಂಠರ ರುಚಿಮತಿ, ಶೆಟ್ಟರ ಸುಂದರರಾವಣ - ಚಿಟ್ಟಾಣಿಯವರ ಹನುಮಂತ - ವೈಕುಂಠರ ಸೀತೆ, ರುತುಪರ್ಣ-ಬಾಹುಕ-ದಮಯಂತಿ ಮುಂತಾದ ಪಾತ್ರಗಳು ಎಪ್ಪತ್ತರ ದಶಕದಲ್ಲಿ ಅಪಾರ ಜನಮನ್ನಣೆ ಪಡೆದಿತ್ತು. ಬಳಿಕ ಸಾಲಿಗ್ರಾಮ ಮೇಳ ಸೇರಿದ ಅವರು ಶಿರಿಯಾರ ಮಂಜುನಾಯಕ್, ಅರಾಟೆ ಮಂಜುನಾಥ, ಐರೋಡಿ ಗೋವಿಂದಪ್ಪ ಜಲವಳ್ಳಿ ವೆಂಕಟೇಶ ರಾವ್ ಮುಂತಾದವರ ಒಡನಾಟದಲ್ಲಿ ಇವರ ವಸಂತ ಸೇನೆಯ ಚಾರುದತ್ತ ಮತ್ತು ನಾಗಶ್ರೀ ಪ್ರಸಂಗದ ಶುಭ್ರಾ೦ಗ ಜನಮನದಲ್ಲಿ ಇಂದಿಗೂ ಅಚ್ಚೊತ್ತಿದೆ. ಆಗ ತಾನೇ ಹೊಸ ಡೇರೆ ಮೇಳವಾಗಿ ಮೂಡಿ ಬಂದ ಮೂಲ್ಕಿ ಮೇಳದ ಎರಡನೇ ವೇಷಧಾರಿಯಾಗಿ ಸೇರಿದ ಇವರು ಎಂಬತ್ತರ ದಶಕದಲ್ಲಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದರು.

ಐರೋಡಿ ಗೋವಿಂದಪ್ಪನವರ ಮತ್ತು ಇವರ ಕರ್ಣಾರ್ಜುನದ ಜೋಡಿ, ಕುಮಟಾ ಗೋವಿಂದ ನಾಯ್ಕ್ ಮತ್ತು ಎಂ. ಎ. ನಾಯ್ಕರೊಂದಿಗೆ ರಾಮ-ಆಂಜನೇಯ-ಸೀತೆ ಜೋಡಿ ವೇಷಗಳು ಇಂದಿಗೂ ಹಚ್ಚಹಸಿರು. ಸೌಕೂರು, ಗೋಳಿಗರಡಿ, ಇಡಗುಂಜಿ, ಕುಮಟಾ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ಜೀವಿತದ ಕೊನೆಯವರೆಗೆ ದೀರ್ಘಕಾಲ ಶ್ರೀ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾಗವತ ಸುಬ್ರಮಣ್ಯ ದಾರೇಶ್ವರ, ದುರ್ಗಪ್ಪ ಗುಡಿಗಾರ್, ಗಜಾನನ ದೇವಾಡಿಗರ ಹಿಮ್ಮೇಳವು ಇವರನ್ನು ಸಮರ್ಥವಾಗಿ ಬಳಸಿಕೊಂಡಿತ್ತು, ಪ್ರಥಮ ವರ್ಷದಲ್ಲೇ ದಾಖಲೆ ಪ್ರದರ್ಶನ ಕಂಡ ಶೂದ್ರ ತಪಸ್ವಿನಿ ಪ್ರಸಂಗದಲ್ಲಿ ಗೋಡೆ ನಾರಾಯಣ ಹೆಗಡೆ, ಉಪ್ಪುಂದ ನಾಗೇಂದ್ರ ರಾವ್, ರಾಮ ನಾಯರಿ, ಮುರೂರು ವಿಷ್ಣು ಭಟ್, ಬೇಳಂಜೆ ಸುಂದರ ನಾಯ್ಕ, ತೀರ್ಥಳ್ಲಿ ಗೋಪಾಲಾಚಾರ್, ಕೂಟದಲ್ಲಿ ಅಭಿನಯಿಸಿದ ಭಾವಪೂರ್ಣ ಉದಯನ ಪಾತ್ರ ಯಕ್ಷಗಾನದ ಹೊಸಪ್ರಸಂಗದ ಇತಿಹಾಸದಲ್ಲಿ ದಾಖಲೆ ಎಣಿಸಿತು.
ನಗರ ಜಗನ್ನಾಥ ಶೆಟ್ಟಿ
ಜನನ : 1941
ಜನನ ಸ್ಥಳ : ಹೊಸನಗರ
ಶಿವಮೊಗ್ಗ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
50 ವರ್ಷಗಳ ಕಾಲ ಮಾರಣಕಟ್ಟೆ, ಹೆರ್ಗಾ, ಹೆಗ್ಗೋಡು, ಬಾಳೆಹೊಳೆ, ಸಾಗರ, ಕೊಡಿಗೆ, ಅಮೃತೇಶ್ವರಿ, ಗೋಳಿಗರಡಿ, ಮ೦ದಾರ್ತಿ, ಸಾಲಿಗ್ರಾಮ, ಇಡಗು೦ಜಿ, ಕರ್ನಾಟಕ ಹಾಗು ಪೆರ್ಡೂರು ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ದುಡಿಮೆ.

ಪ್ರಶಸ್ತಿಗಳು:
ಮಂದಾರ್ತಿ ಕ್ಷೇತ್ರದ ಪ್ರಥಮ ವರ್ಷದ ಹಾರಾಡಿ ರಾಮಗಾಣಿಗ ಪ್ರಶಸ್ತಿ

ಉಡುಪಿ ಯಕ್ಷಗಾನ ಕಲಾಕ್ಷೇತ್ರದ ಸುವರ್ಣೋತ್ಸವ ಪ್ರಶಸ್ತಿ


ಮರಣ : 2004

’ನಗರ ಶೈಲಿ’ಯ ಜನಕ

ರಂಗ ಪ್ರವೇಶಿಸಿದ ಕೂಡಲೇ ಪ್ರೇಕ್ಷಕರ ಗಮನವನ್ನೂ ತನ್ನತ್ತ ಆಕರ್ಷಿಸಿ ಅವರ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ವಿಶೇಷ ಗುಣ ಇವರ ಪಾತ್ರ ನಿರ್ವಣೆಯಲ್ಲಿ ಗಮನಿಸಬಹುದಾಗಿದ್ದು. “ಸುತ್ತಲು ನೋಡುತಾ ಗಂಗತನಯನು”. ಎಂಬಲ್ಲಿ ಬೀಷ್ಮನ ರಂಗಪ್ರವೇಶ ಮತ್ತು . “ಇತ್ತ ದ್ವಾರಕೆಯೊಳಗೆ ಹಲದರ” ಎನ್ನುವಲ್ಲಿ ಯಾವುದೇ ಪ್ರಸಂಗದ ಬಲರಾಮನ ವೇಶದ ರಂಗ ಪ್ರವೇಶದಲ್ಲಿ ಇದನ್ನು ಗಮನಿಸ ಬಹುದಾಗಿದೆ. ಇಂದಿನ ಕಲಾವಿದರಲ್ಲಿ ಉಪ್ಪುಂದ ನಾಗೇಂದ್ರರ ವೇಷದಲ್ಲಿ ಈ ಛಾಯೆಯನ್ನು ಗುರುತಿಸ ಬಹುದಾಗಿದೆ. ಬಡಗುತಿಟ್ಟಿನಲ್ಲಿ ಪ್ರಚಲಿತವಿದ್ದ ಹಾರಾಡಿ, ಮಟಪಾಡಿ, ಬಡಾಬಡಗು, ಮುಂತಾದ ಯಾವುದೇ ಶೈಲಿಯ ಪ್ರಭಾವಕ್ಕೂ ಒಳಗಾಗದೇ ತನ್ನದೇ ಸ್ವಂತ ಶೈಲಿ, ಛಾಪನ್ನು ಮೂಡಿಸಿ `ನಗರ ಶೈಲಿ` ಎಂಬ ಹೊಸ ಶೈಲಿಯನ್ನು ಹುಟ್ಟು ಹಾಕಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ರಂಗಸ್ಥಳದಲ್ಲಿ ರಾಜಗಾಂಭೀರ್ಯದಿಂದ ಮಿಂಚಿನ ಸಂಚಾರ ಮೂಡಿಸಿ “ರಂಗಸ್ಥಳ ರಾಜ”ನೆಂಬ ಬಿರುದನ್ನು ಪಡೆದದ್ದು, ಇವರೊಬ್ಬ ಅಭಿಜಾತ ಕಲಾವಿದರಾಗಿದ್ದರು ಎಂಬುದನ್ನು ಸಾಬೀತು ಪಡಿಸುತ್ತದೆ. ಬೀಷ್ಮ ವಿಜಯದ ಬೀಷ್ಮ, ನರಕಾಸುರ, ಬಲರಾಮ, ದ್ರೌಪದಿ ಪ್ರತಾಪದ ಭೀಮ, ರಾಮಾಂಜನೇಯದ ರಾಮ, ಸೀತಾ ಪಾರಮ್ಯದ ಲವಣಾಸುರ, ನಾಗಶ್ರೀ, ರಾಜಾ ಬ್ರಹದ್ರತ, ಯಕ್ಷಲೋಕ ವಿಜಯ, ವಧುಮಾದವಿ, ಚಾರು ಚಂದ್ರಿಕೆ. ಶೂದ್ರ ತಪಸ್ವಿನಿ, ಮಾನಸ ಮಂದಾರ, ಮುಂತಾದ ಪ್ರಸಂಗಗಳ ಅವರ ಪಾತ್ರ ನಿರ್ವಹಣೆಯಿಂದ ಅವರಿಗೆ ಕಲಾಕೇಸರಿ, ಯಕ್ಷರಂಗದ ಬೀಷ್ಮ ಮುಂತಾದ ಬಿರುದುಗಳು ಲಭ್ಯವಾಗಿತ್ತು, ಹಿರಿಯ ಕಲಾವಿದರನ್ನು ಗೌರವದಿಂದ, ಸಮಕಾಲೀನರನ್ನು ಸ್ನೇಹದಿಂದ ಕಿರಿಯರನ್ನು ಪ್ರೀತಿಯಿಂದ ಕಾಣುವುದು ಅವರ ಗುಣವಾಗಿತ್ತು. ಭಾಗವತ ನಾವಡರು, ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ, ವೀರಭದ್ರ ನಾಯ್ಕ್, ಮಲ್ಪೆ ರಾಮದಾಸ ಸಾಮಗ, ವಾಸುದೇವ ಸಾಮಗ, ಉಡುಪಿ ಬಸವ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಕೋಟ ವೈಕುಂಠ, ಎಂ. ಎ. ನಾಯಕ್, ಅರಾಟೆ ಮಂಜುನಾಥ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಅರ್ಗೋಡು ಮೋಹನದಾಸ ಶಣೈ. ಐರೋಡಿ ಗೋವಿಂದಪ್ಪ, ಉಪ್ಪೂಂದ ನಾಗೇಂದ್ರ, ಬೇಗಾರು ಪದ್ಮನಾಭ, ಸುಬ್ರಮಣ್ಯ ದಾರೇಶ್ವರ, ಹುಂಚದಕಟ್ಟೆ ಶ್ರೀನಿವಾಸ ಅಚಾರ್ ಮುಂತಾದ ಹಿರಿಕಿರಿಯ ಕಲಾವಿದರ ಒಡನಾಟ ಅವರಿಗೆ ದೊರಕಿತ್ತು.

2004ರಲ್ಲಿ ಅಸ್ತ೦ಗತ

ಪತ್ನಿ, ಮೀರಾ, ಇಬ್ಬರು ಪುತ್ರರನ್ನು ಅಗಲಿದ ಶೆಟ್ಟರು 2004ರಲ್ಲಿ ತನ್ನ 63ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ನೇರ ನಡೆನುಡಿಯ ಇವರು ಸುಮಾರು ಹತ್ತು ವರ್ಷ ಅನಾರೋಗ್ಯದಿಂದ ಬಳಲುತಿದ್ದರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಯಾರ ಬಳಿಯೂ ಚಿಕ್ಕಾಸನ್ನು ಯಾಚಿಸಿದ ವ್ಯಕ್ತಿಯಾಗಿರಲಿಲ್ಲ. ಯಕ್ಷಗಾನದ ಮೇರು ವ್ಯಕ್ತಿತ್ವದ ಇವರನ್ನು ಅಭಿಮಾನಿಗಳು ಸಾರ್ವಜನಿಕವಾಗಿ ಗೌರವಿಸಬೇಕಾಗಿದ್ದರೂ ಕಾಲ ಕೂಡಿ ಬರಲಿಲ್ಲ. ಸನ್ಮಾನ ಪ್ರಶಸ್ತಿಗಳಿಂದ ದೂರ ಉಳಿದ ಇವರಿಗೆ ಮಂದಾರ್ತಿ ಕ್ಷೇತ್ರದ ಪ್ರಥಮ ವರ್ಷದ ಹಾರಾಡಿ ರಾಮಗಾಣಿಗ ಪ್ರಶಸ್ತಿ ಮತ್ತು ಉಡುಪಿ ಯಕ್ಷಗಾನ ಕಲಾಕ್ಷೇತ್ರದ ಸುವರ್ಣೋತ್ಸವ ಪ್ರಶಸ್ತಿ ಮಾತ್ರ ದೊರಕಿದೆ.

****************

ನಗರ ಜಗನ್ನಾಥ ಶೆಟ್ಟಿಯವರ ಕೆಲವು ಭಾವಚಿತ್ರಗಳು












Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ