ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಮಾಂಬಾಡಿಯವರಿಗೆ ಕೀರಿಕ್ಕಾಡು ಶತಮಾನೋತ್ಸವ ಪುರಸ್ಕಾರ, ಡಾ| ಅಮೃತ ಸೋಮೇಶ್ವರ ಅವರಿಗೆ ಕೀರಿಕ್ಕಾಡು ಪ್ರಶಸ್ತಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಡಿಸೆ೦ಬರ್ 20 , 2013
ಡಿಸೆ೦ಬರ್ 20, 2013

ಮಾಂಬಾಡಿಯವರಿಗೆ ಕೀರಿಕ್ಕಾಡು ಶತಮಾನೋತ್ಸವ ಪುರಸ್ಕಾರ, ಡಾ| ಅಮೃತ ಸೋಮೇಶ್ವರ ಅವರಿಗೆ ಕೀರಿಕ್ಕಾಡು ಪ್ರಶಸ್ತಿ

ಸುಳ್ಯ ದೇಲಂಪಾಡಿ - ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನದ ಕಲಾ ಸಂಘಕ್ಕೆ ಕೀರಿಕ್ಕಾಡು ವಿಷ್ಣು ಭಟ್‌ ಶತಮಾನೋತ್ಸವದ ಸಡಗರ. ಡಿ. 28ರಂದು ದೇಲಂಪಾಡಿ - ಬನಾರಿ ರಂಗಮಂದಿರದಲ್ಲಿ ಶತಮಾನೋತ್ಸವ ಮತ್ತು ಸಂಘದ 69ನೇ ವರುಷದ ಕಾರ್ಯಕ್ರಮ ನಡೆಯಲಿದೆ.

ಹಿರಿಯ ಸಾಹಿತಿ, ಸಂಶೋಧಕ ಡಾ| ಅಮೃತ ಸೋಮೇಶ್ವರ ಇವರಿಗೆ ಕೀರಿಕ್ಕಾಡು ಪ್ರಶಸ್ತಿ ಮತ್ತು ಹಿರಿಯ ಮದ್ದಳೆಗಾರ, ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಅವರಿಗೆ ಕೀರಿಕ್ಕಾಡು ಶತಮಾನೋತ್ಸವ ಪುರಸ್ಕಾರ ನೀಡಲಾಗುತ್ತದೆ.

ಡಾ| ಅಮೃತ ಸೋಮೇಶ್ವರ

ಡಾ| ಅಮೃತ ಸೋಮೇಶ್ವರ
ಯಕ್ಷಗಾನ ಪ್ರಸಂಗಕರ್ತ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ ಡಾ| ಅಮೃತ ಸೋಮೇಶ್ವರ ಉಪನ್ಯಾಸಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಇವರ ಅಮರಶಿಲ್ಪಿ ವೀರ ಕಲ್ಕುಡ, ಘೋರಮಾರಕ, ಸಹಸ್ರಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮೊದಲಾದ ಮೂವತ್ತಕ್ಕೂ ಮಿಕ್ಕಿ ಯಕ್ಷಗಾನದ ಕೃತಿಗಳು ರಂಗದಲ್ಲಿ ಮಿಂಚಿದವುಗಳು. ಪಾತ್ರ, ಪ್ರಸಂಗ ರಚನೆಗಳಲ್ಲಿ ಹೊಸತನದ ನೋಟ ನೀಡಿದ ಅಮೃತರ ಪ್ರಸಂಗಗಳೆಲ್ಲವೂ ಗಟ್ಟಿಯಾದ ರಸಗವಳ. ಅವರ ಬಹುತೇಕ ಪ್ರಸಂಗಳು ಶ್ರೀ ಧರ್ಮಸ್ಥಳ ಮೇಳದಲ್ಲಿ ಪ್ರದರ್ಶನಗಳಾದವುಗಳು.

ಯಕ್ಷಗಾನ ಕೃತಿ ಸಂಪುಟ ಇವರ ಜಾನಪದ ಯಕ್ಷಗಾನದ ಸಂಶೋಧನೆಯ ಫಲವಾಗಿ ಮೂಡಿ ಬಂದ ಕೃತಿ. ಎಲೆಗಿಳಿ, ವನಮಾಲೆ, ಭ್ರಮಣ, ಉಪ್ಪುಗಳ್ಳಿ (ಕವನಸಂಕಲನಗಳು), ತೀರದ ತೆರೆ (ಕಾದಂಬರಿ), ಕೋಟಿಚೆನ್ನಯ್ಯ, ವಿಶ್ವರೂಪ (ನಾಟಕ), ನಂದಳಿಕೆ ನಂದಾ ದೀಪ, ರಾಜರತ್ನಂ ಕವಿತೆಗಳು (ವಿಮಶಾìಕೃತಿಗಳು), ರಂಗೀತ, ತಂಬಿಲ (ತುಳು ಕವನ ಸಂಕಲನ) ತುಳು ಪಾಡªನ ಕತೆಗಳು, ಅವಿಲು (ತುಳು ಜಾನಪದ ಕತೆಗಳು) ಅಪಾರ್ಥಿನಿ - ಕುಚೋದ್ಯದ ಶಬ್ದಕೋಶ. ಹೀಗೆ ಹಲವು ತುಳು ಕೃತಿಗಳು. ಮೂವತ್ತಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳು ಧ್ವನಿಸುರುಳಿಗಳಾಗಿವೆ. ಯಕ್ಷಗಾನ ಕಲಾ ತಂಡವನ್ನು ಬಹರೈನ್‌, ದುಬಾಯ್‌, ದೇಶಗಳಿಗೆ ಒಯ್ದ ಹಿರಿಮೆ ಅವರದ್ದು.

ಇವರ ತುಳುನಾಡ ಕಲ್ಕುಡೆ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಯಕ್ಷಗಾನ ಕೃತಿ ಸಂಪುಟಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ. ತುಳು ಪಾಡªನ ಕಥೆಗಳು ಕೃತಿಗೆ ಕೇಂದ್ರ ವಿದ್ಯಾ ಇಲಾಖೆ ಪ್ರಶಸ್ತಿ. ಅಪಾರ್ಥಿನಿ ಶಬ್ದಕೋಶಕ್ಕೆ ಆರ್ಯಭಟ ಪ್ರಶಸ್ತಿ. ಯಕ್ಷಗಾನದ ಕೊಡುಗೆಗೆ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು.

ಮಾಂಬಾಡಿ ಸುಬ್ರಹ್ಮಣ್ಯ ಭಟ್‌

ಮಾಂಬಾಡಿ ಸುಬ್ರಹ್ಮಣ್ಯ ಭಟ್‌
ತೆಂಕುತಿಟ್ಟು ಯಕ್ಷಗಾನದ ಹಿರಿಯ ಮದ್ದಳೆಗಾರ ಧಿ ಮಾಂಬಾಡಿ ಸುಬ್ರಹ್ಮಣ್ಯ ಭಟ್‌. ಹಲವು ಶಿಷ್ಯರನ್ನು ಹೊಂದಿದ ಗುರು. ಸುಬ್ಬಣ್ಣ ಎನ್ನುವುದು ಪ್ರೀತಿಯ ನುಡಿ. ತಂದೆ ಮಾಂಬಾಡಿ ನಾರಾಯಣ ಭಾಗವತರು. ಸುಬ್ರಹ್ಮಣ್ಯರಿಗೆ ಬಾಲ್ಯದಿಂದಲೇ ಯಕ್ಷಗಾನದ ನಂಟು. ಮನೆಯ ಪರಿಸರ ಅಭ್ಯಾಸ ಕೇಂದ್ರವಾದುದರಿಂದ ತಂದೆ ಕಲಿಸುತ್ತಿದ್ದುದನ್ನು ನೋಡಿಯೇ ಕಲಿತ ಏಕಲವ್ಯ. ಬಳಿಕ ತಂದೆ ಜತೆಯಲ್ಲಿ ಶಾಸ್ತ್ರೀಯ ಕಲಿಕೆ. ಮುಂದೆ ಕುದ್ರೆಕೂಡ್ಲು ರಾಮಭಟ್ಟರಲ್ಲೂ ಕಲಿಕೆ.

ಮೂಲ್ಕಿ, ಇರಾ, ಕಟೀಲು, ಕದ್ರಿ, ಕೂಡ್ಲು, ಧರ್ಮಸ್ಥಳ ಮೇಳಗಳಲ್ಲಿ ಹತ್ತೂಂಬತ್ತು ವರುಷದ ವ್ಯವಸಾಯ. 1968ರಲ್ಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮೂಲಕ ಶಿಷ್ಯರ ರೂಪೀಕರಣಕ್ಕೆ ಶ್ರೀಕಾರ. ಈಗವರು ಅಸಂಖ್ಯ ಶಿಷ್ಯರನ್ನು ಹೊಂದಿದ ಮಹಾನ್‌ ಗುರು.

ಸರಳ ವ್ಯಕ್ತಿತ್ವ. ಪ್ರಚಾರದಿಂದ ದೂರ. ತಾನಾಯಿತು, ತನ್ನ ಕಸುಬಾಯಿತು ಎನ್ನುವ ಜಾಯಮಾನ. ಸಹನಶೀಲ ವ್ಯಕ್ತಿತ್ವ. ಇವರ ಕಲಿಕಾ ವಿಧಾನ ಸರಳ. ಮನದಟ್ಟಾಗುವ ಪಠ್ಯಕ್ರಮ. ನಗುನಗುತ್ತಾ ಶಿಷ್ಯರನ್ನು ಪಳಗಿಸುವ ಪರಿ ಅನನ್ಯ.

ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ