ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷರಂಗದ ದೈತ್ಯ ಪ್ರತಿಭೆ ಬೋಳಾರ ನಾರಾಯಣ ಶೆಟ್ಟಿ

ಲೇಖಕರು :
ಭಾಸ್ಕರ ರೈ ಕುಕ್ಕುವಳ್ಳಿ
ಶನಿವಾರ, ನವ೦ಬರ್ 16 , 2013

ವಿಶಾಲ ಹಣೆ, ದಪ್ಪ ಹುಬ್ಬುಗಳು, ಉಬ್ಬಿದ ಕೆನ್ನೆ, ಲಕ್ಷಣವಾದ ದೊಡ್ಡ ಮುಖ, ಅಜಾನುಬಾಹು, ಗಂಭೀರ ಸ್ವರ, ಆರೂಕಾಲು ಅಡಿಗಿಂತಲೂ ಎತ್ತರವಾದ ಕಾಯ-ಇದು ತೆಂಕುತಿಟ್ಟು ಯಕ್ಷಗಾನ ರಂಗದ ದೈತ್ಯ ಪ್ರತಿಭೆ ದಿ.ಬೋಳಾರ ನಾರಾಯಣ ಶೆಟ್ಟರ ಕಣ್ಣಿಗೆ ಕಟ್ಟುವ ವ್ಯಕ್ತಿತ್ವ, ಕನ್ನಡ ಪೌರಾಣಿಕ ಹಾಗೂ ತುಳು ಜಾನಪದ ಪ್ರಸಂಗಗಳಲ್ಲಿ ನಾಯಕ ಹಾಗೂ ಖಳಪಾತ್ರ ಗಳೆರಡರಲ್ಲೂ ಅಚ್ಚಳಿಯದ ಛಾಪು ಮೂಡಿಸಿದ ಇವರದು ಯಕ್ಷಗಾನ ವಲಯದಲ್ಲಿ ಈಗಲೂ ಪ್ರಚಲಿತವಿರುವ ಪ್ರಸಿದ್ಧ ಬೋಳಾರ ಶೈಲಿ!

ಬಾಲ್ಯ ಮತ್ತು ಶಿಕ್ಷಣ

ಮಂಗಳೂರು ಬೋಳಾರ ಅರಕೆರೆ ಮುಳಿಹಿತ್ಲಿನಲ್ಲಿ ದಿ.ಗುಡ್ಡಪ್ಪ ಶೆಟ್ಟಿ ಮತ್ತು ಸೋಮಕ್ಕ ದಂಪತಿಗೆ ಹಿರಿಯ ಮಗನಾಗಿ 1915ರಲ್ಲಿ ನಾರಾಯಣ ಶೆಟ್ಟರ ಜನನ. ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ ಸ್ವಂತ ವ್ಯವಹಾರ ನಡೆಸುತ್ತಿದ್ದಾಗಲೇ ಕಟೀಲು ಕುಂಡಾವು ಮೇಳಗಳ ಯಜಮಾನ ದಿ. ಕಲ್ಲಾಡಿ ಕೊರಗ ಶೆಟ್ಟರೊಂದಿಗೆ ಒಡನಾಟ ಬೆಳೆಯಿತು. ಮೇಳದ ನಿರ್ವಹಣೆ ಮತ್ತು ಭದ್ರತೆಗಾಗಿ ಕೊರಗ ಶೆಟ್ಟರ ಅಪೇಕ್ಷೆಯಂತೆ ತಿರುಗಾಟದ ಜೊತೆಗೂಡಿದರು. ಒಂದು ಹಂತದಲ್ಲಿ ಹಿರಿಯ ಬಲಿಪರ ಒತ್ತಾಯದಿಂದ ವೇಷಧಾರಿ ಯಾಗಿ ರಂಗಸ್ಥಳಕ್ಕೆ ಬಂದರು. ಅವರ ಅಭಿಜಾತ ಕಲಾವಂತಿಕೆ, ಆ ಬಳಿಕ ಅವರನ್ನು ಚರಿತ್ರನಟರನ್ನಾಗಿ ಬೆಳೆಸಿದುದು ಯಕ್ಷಗಾನ ಇತಿಹಾಸದ ಒಂದು ರೋಚಕ ಘಟನೆ. ನಾಟಕೀಯ ವೇಷದಲ್ಲಿ ಕಾಡೂರು ರಾಮಭಟ್ ಮತ್ತು ಪುತ್ತೂರು ಮಾನಂಗಾಯ ಕೃಷ್ಣಭಟ್, ಶೆಟ್ಟರ ಮೇಲೆ ಪ್ರಭಾವ ಬೀರಿದ್ದರು.

ವೃತ್ತಿ ಹಾಗೂ ಕಲಾಸೇವೆ

ಯಮ, ದುರ್ಜಯ, ವೃಷಪರ್ವ, ವಾಲಿ, ಸಾಲ್ವ, ಬಾಹುಬಲಿ, ಶುಂಭ, ಹಿರಣ್ಯಕಶಿಪು, ಬಲಿ, ಭಸ್ಮಾಸುರ, ಕಂಸ, ಭೀಮ, ಇಂದ್ರಜಿತು ಇತ್ಯಾದಿ ಪಾತ್ರಗಳನ್ನು ಇನ್ನಿಲ್ಲವೆಂಬಂತೆ ಅವರು ಚಿತ್ರಿಸಿದರು ಕಲ್ಲಾಡಿ ವಿಠಲ ಶೆಟ್ಟರೊಂದಿಗೆ ಅವರನ್ನು ಅತ್ಯಂತ ಆತ್ಮೀಯ ಸಂಬಂಧ, ಮಂಗಳೂರು ನೆಹರೂ ಮೈದಾನದಲ್ಲಿ ವಿಟ್ಲ ಬಾಬುರಾಯರ ಸೀನು-ಸೀನರಿಗಳೊಂದಿಗೆ ನಡೆದ ಕರ್ನಾಟಕ ಯಕ್ಷಗಾನ ನಾಟಕ ಸಭಾದ ಪ್ರದರ್ಶನಗಳು ಬೋಳಾರ ನಾರಾಯಣ ಶೆಟ್ಟರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟವು.

ಕರ್ನಾಟಕ-ಕುಂಡಾವು ಮೇಳಗಳು ತುಳು ಯಕ್ಷಗಾನದ ಹೊಸ ಶಕೆಯನ್ನು ಆರಂಭಿಸಿದ ಕಾಲದಲ್ಲಿ ‘ಕೋಟಿ-ಚೆನ್ನಯ’ದ ಕೋಟಿಯಾಗಿ ಆ ಪಾತ್ರಕ್ಕೆ ಮರುಹುಟ್ಟು ನೀಡಿದ್ದು ಬೋಳಾರರ ಹಿರಿಮೆ. ಅವರ ದೇವುಪೂಂಜ, ದಳವಾಯಿ ದುಗ್ಗಣ, ಕಾಂತಾಬಾರೆ, ಆಗೋಳಿ ಮಂಜಣ, ಕೊಡ್ಸರಾಳ್ವ, ಕಾಂತು ಪೂಂಜ, ಕೋರ‍್ದಬ್ಬು ಇತ್ಯಾದಿ ಪಾತ್ರಗಳನ್ನು ಕಲಾಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡರು.

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಅತ್ಯಂತ ಬೇಡಿಕೆಯ ನಟನಾಗಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ್ದ ಬೋಳಾರ ನಾರಾಯಣ ಶೆಟ್ಟರು ಇರಾ ದೇವಸ್ಥಾನದಲ್ಲಿ ಸೇವೆಯಾಟದ ದಿನವೇ ರಂಗದಲ್ಲಿ ಕುಸಿದು ಬಿದ್ದರು. ಮತ್ತೆ ಮೇಲೇಳದ ಸ್ಥಿತಿಯಲ್ಲಿ ಅಗೋಸ್ತು 12, 1987ರಲ್ಲಿ ವಿಧಿವಶ ರಾದರು. ಪತ್ನಿ ಕಲ್ಯಾಣಿ, ಎರಡು ಗಂಡು-ಮೂರು ಹೆಣ್ಮಕ್ಕಳನ್ನು ಅವರು ಆಗಲಿದ್ದಾರೆ.
ಬೋಳಾರ ನಾರಾಯಣ ಶೆಟ್ಟಿ
ಜನನ : 1915
ಜನನ ಸ್ಥಳ : ಬೋಳಾರ ಗ್ರಾಮ
ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಅತ್ಯಂತ ಬೇಡಿಕೆಯ ನಟನಾಗಿ ಹಲಾವಾರು ಮೇಳಗಳಲ್ಲಿ ದುಡಿಮೆ.
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು.
ಮರಣ ದಿನಾ೦ಕ : ಅಗೋಸ್ತು 12, 1987

ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನ

ಬೋಳಾರರು ಗತಿಸಿ ಎರಡು ದಶಕಗಳ ಬಳಿಕ ಆ ಮಹಾನ್ ಕಲಾವಿದನನ್ನು ಮತ್ತೆ ನೆನಪಿಸುಕೊಳ್ಳುವ ಒಂದು ಸ್ತುತ್ಯರ್ಹ ಕಾರ್ಯ ನಡೆಯುತ್ತಿದೆ. ಕತಾರಿನಲ್ಲಿರುವ ಅವರ ಪುತ್ರ ಬೋಳಾರ ಕರುಣಾಕರ ಶೆಟ್ಟರ ಪ್ರಯತ್ನದಿಂದ ‘ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನ’ ದಶಂಬರ 2, 2009ರಂದು ಒಡಿಯೂರಿನಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಉದ್ಘಾಟನೆ ಗೊಂಡಿದೆ. ಪ್ರತೀವರ್ಷ ಹಿರಿಯ ಕಲಾವಿದರಿಗೆ ‘ಬೋಳಾರ ಪ್ರಶಸ್ತಿ’ ನೀಡಲು ವಿಶ್ವಸ್ಥ ಮಂಡಳಿ ನಿರ್ಧರಿಸಿದೆ.

ಅದರಂತೆ ಪ್ರಪ್ರಥಮ ಪ್ರಶಸ್ತಿಯನ್ನು ಕರ್ನಾಟಕ ಮೇಳದಲ್ಲಿ ನಾರಾಯಣ ಶೆಟ್ಟರ ಓರಗೆಯ ಕಲಾವಿದರಾಗಿದ್ದ ಹರಿದಾಸ ಮಲ್ಪೆ ರಾಮದಾಸ ಸಾಮಗ ಮತ್ತು ಹಾಸ್ಯಗಾರ ಮಿಜಾರು ಅಣ್ಣಪ್ಪ ಅವರಿಗೆ ಪ್ರದಾನ ಮಾಡಲಾಗಿದೆ. 2010-11ನೇ ಸಾಲಿಗೆ ಡಾ.ಕೋಳ್ಯೂರು ರಾಮಚಂದ್ರ ರಾವ್ ಮತ್ತು ಬೋಳಾರ ಸುಬ್ಬಯ್ಯ ಶೆಟ್ಟರು ಪ್ರಶಸ್ತಿ ಪಡೆದಿದ್ದಾರೆ. 2011-12ನೇ ಸಾಲಿಗೆ ಕೆ.ಎಚ್ ದಾಸಪ್ಪ ರೈ ಮತ್ತು ಅಡ್ಕಸ್ಥಳ ಸಂಜೀವ ಶೆಟ್ಟಿ , 2012-13ನೇ ಸಾಲಿಗೆ ಪೆರುವಾಯಿ ನಾರಾಯಣ ಶೆಟ್ಟಿ ಮತ್ತು ಜಪ್ಪು ದಯಾನಂದ ಶೆಟ್ಟಿ ಪ್ರಶಸ್ತಿ ಪಡೆದಿದ್ದಾರೆ.



*********************

ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಕಲಾವಿದರು ಪ್ರಸಿದ್ಧಿಯನ್ನು ಪಡೆದು ರಂಗವನ್ನು ಬೆಳಗಿದವರಿದ್ದಾರೆ . ಕಲೆಯನ್ನು ತಮ್ಮದೇ ಆದ ಛಾಪಿನಿಂದ ಶ್ರೀಮಂತಗೊಳಿಸಿ ತೆರೆಗೆ ಸರಿದವರು ಹಾಗೂ ಅವರೊಂದಿಗೆ ಪರಿಶ್ರಮಿಸಿ ಈಗ ಹಿರಿಯರೆನಿಸಿಕೊಂಡ ಚೇತನಗಳ ಕೆಲವು ಅಪೂರ್ವ ಛಾಯಾಚಿತ್ರ. ( ಚಿತ್ರ ಕೃಪೆ : http://ballirenayya.blogspot.in )

ಮೊದಲ ಚಿತ್ರದಲ್ಲಿ ಎಪ್ಪತ್ತರ ತಲೆಮಾರಿನ "ಯಕ್ಷ ದಿಗ್ಗಜರು ಮತ್ತು ಯಕ್ಷ ಪೋಷಕರು

ಕುಳಿತವರು (ಎಡದಿಂದ ಬಲಕ್ಕೆ ) ಶ್ರೀ ನಿಡ್ಲೆ ನರಸಿಂಹ ಭಟ್ , ಶ್ರೀ. ಬೋಳಾರ ನಾರಾಯಣ ಶೆಟ್ಟಿ ,ಶ್ರೀ ವಿಟ್ಲ ಗೋಪಾಲಕೃಷ್ಣ ಜೋಶಿ , ಶ್ರೀ.ಎಂ.ನಾರಾಯಣ ಭಟ್ (ಅಳಿಕೆ) ಶ್ರೀ ಬಲಿಪ ನಾರಾಯಣ ಭಾಗವತ , ಶ್ರೀ ಅಳಿಕೆ ರಾಮಯ್ಯ ರೈ ,ಶ್ರೀ ಕದ್ರಿ ವಿಷ್ಣು

ಮೊದಲ ಸಾಲಿನಲ್ಲಿ ನಿಂತವರು : ಶ್ರೀ ಎಂ.ವಾಸುದೇವ ಪ್ರಭು , ಶ್ರೀ.ಕೆ.ಸಂಜೀವ ಶೆಟ್ಟಿ , ಶ್ರೀ ಗೋಪಾಲಕೃಷ್ಣ ಕುರುಪ್ , ಶ್ರೀ ಬಣ್ಣದ ಕುಟ್ಯಪ್ಪು, ಶ್ರೀ ಕೋಳ್ಯುರ್ ರಾಮಚಂದ್ರ ರಾವ್ , ಶ್ರೀ ಕೆ.ವಿ. ಸುಬ್ಬಾ ರಾವ್ , ಶ್ರೀ ಅಡ್ಕಸ್ಥಳ ನಾರಾಯಣ ಶೆಟ್ಟಿ

ನಿಂತವರಲ್ಲಿ ಕೊನೆಯ ಸಾಲು : ಶ್ರೀ ಡೊಂಬ, ಶ್ರೀ ಯು. ಗಂಗಾಧರ ಭಟ್ , ಶ್ರೀ.ಕೇದಗಡಿ ಗುಡ್ಡಪ್ಪ ಗೌಡ , ಶ್ರೀ ಪಡ್ರೆ ಕುಮಾರ ಮತ್ತು ಶ್ರೀ ಪಡ್ರೆ ಚಂದು




ಕೃಪೆ : http://www.jayakirana.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ