ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ತೆಂಕುತಿಟ್ಟಿನ ಪ್ರಖರ ಪ್ರತಿಭೆ ರಂಗವಿಹಾರಿ ಕಾಸರಗೋಡು ಸುಬ್ರಾಯ ಹೊಳ್ಳ

ಲೇಖಕರು :
ಎಂ.ನಾ. ಚಂಬಲ್ತಿಮಾರ್‌
ಗುರುವಾರ, ಜೂನ್ 23 , 2016

ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ ಮಿಂಚು, ಪ್ರಖರ ಪ್ರತಿಭೆಯ ರಂಗವಿಹಾರಿ ಕಾಸರಗೋಡು ಸುಬ್ರಾಯ ಹೊಳ್ಳರವರು ಪ್ರಸ್ತುತ ತೆಂಕುತಿಟ್ಟಿನ ಪಾರಂಪರಿಕ ಶೈಲಿಯ ಪ್ರಾತಿನಿಧಿಕ ವೇಷಧಾರಿ. ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಮೆಚ್ಚುವ, ಪ್ರೀತಿಸುವ ಇವರು ಪ್ರತಿನಾಯಕನಾಗಿಯೇ ಜನಪ್ರಿಯ. ಅಚ್ಚುಕಟ್ಟಾದ ವೇಷಗಾರಿಕೆ, ಪರಿಪೂರ್ಣವಾದ ಬಣ್ಣದ ಬರವಣಿಗೆ, ಯಕ್ಷಗಾನೀಯ ನಿಲುಮೆ-ರಂಗಚಲನೆ, ಆಕರ್ಷಕ ಶೈಲಿಯ ರಂಗಲಯ, ಶ್ರುತಿಬದ್ಧ ಮಾತುಗಾರಿಕೆ, ತರ್ಕಕ್ಕೆ ಬಿದ್ದರೆ ಸ್ಫೋಟಗೊಳ್ಳುವ ಪಾಂಡಿತ್ಯಭರಿತ ವಾಕ್ಪಟುತ್ವ ಸುಬ್ರಾಯ ಹೊಳ್ಳರನ್ನು ಕಲಾವಿದನಾಗಿ ಎತ್ತರಕ್ಕೇರಿಸಿವೆ.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಸುಬ್ರಾಯ ಹೊಳ್ಳರು ಕಾಸರಗೋಡು ಪೇಟೆಯವರು. ನಾರಾಯಣ ಹೊಳ್ಳ-ಪದ್ಮಾವತಿ ಅಮ್ಮನವರ ಪುತ್ರ. ಇವರ ಅಜ್ಜನ ಮನೆ ಎಡನೀರಿನಲ್ಲಿ. ಚಿಕ್ಕಂದಿನಲ್ಲಿ ಎಡನೀರಿಗೆ ಹೋದರೆ ಮಠದಲ್ಲಿ ಜರುಗುತ್ತಿದ್ದ ಆಟ-ಕೂಟಗಳಿಗೆ ಇವರು ಖಾಯಂ ಪ್ರೇಕ್ಷಕರು. ಅಲ್ಲಿಗೆ ಬರುತ್ತಿದ್ದ ಪ್ರಸಿದ್ಧ ಕಲಾವಿದರು, ಅವರ ನೇತೃತ್ವದಲ್ಲಾಗುತ್ತಿದ್ದ ಬಯಲಾಟಗಳನ್ನು ನೋಡಿ ಯಕ್ಷಗಾನದ ಸೆಳೆತಕ್ಕೊಳಗಾದ ಸುಬ್ರಾಯ ಹೊಳ್ಳರು ತಾನೂ ಕಲಾವಿದನಾಗಿ ಮೆರೆಯುವ ಕನಸು ಕಂಡರು. ಕೂಡ್ಲು ಆನಂದ, ನಾರಾಯಣ ಬಲ್ಯಾಯರಲ್ಲಿ ನಾಟ್ಯ ಕಲಿತರು. ಹವ್ಯಾಸಿ ಮೇಳಗಳಲ್ಲಿ ವೇಷ ತೊಟ್ಟರು, ಕಲಾವಿದನಾಗಿ ತಯಾರಾಗುವ ಭರವಸೆ ಮೂಡಿಸಿದರು. ಬಳಿಕ ಮೇಳ ಸೇರಿ ಸುದೀರ್ಘ‌ 32 ವರ್ಷಗಳ ತಿರುಗಾಟದ ಮೂಲಕ ಪ್ರಸ್ತುತ ತೆಂಕುತಿಟ್ಟಿನ ಅನುಭವೀ, ಪಕ್ವ ಕಲಾವಿದರಾಗಿ ಎತ್ತರಕ್ಕೇರಿದರು. ಪ್ರಸ್ತುತ 51ರ ಹರೆಯದ ಸುಬ್ರಾಯ ಹೊಳ್ಳರು ಕಲಾವಿದನಾಗಿ ಸಾಗಿದ ಪಯಣ, ಏರಿದ ಎತ್ತರದಲ್ಲಿ ಅವರ ಪರಿಶ್ರಮ-ಸಾಧನೆ ಅಡಗಿದೆ.

ಕಟೀಲು, ಪುತ್ತೂರು, ಕದ್ರಿ, ಕರ್ನಾಟಕ, ಮಧೂರು, ಬಪ್ಪನಾಡು ಮೊದಲಾದ ಮೇಳಗಳಲ್ಲಿ ದುಡಿದ ಇವರು ಪ್ರಸ್ತುತ ಹೊಸನಗರ ಮೇಳದ ಪ್ರಧಾನ ಕಲಾವಿದರು. ತನ್ನ ಗುರು ಸಮಾನ ಹಿರಿ ತಲೆಮಾರಿನ ಕಲಾವಿದರಾದ ಹೊಸ ಹಿತ್ಲು ಮಾಲಿಂಗ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್‌, ಪೆರುವೋಡಿ ಹಾಸ್ಯಗಾರರು, ಬಲಿಪ-ತೆಂಕಬೈಲು ಭಾಗವತರು ಇವರಿಂದೆಲ್ಲ ಪ್ರಭಾವ ಮತ್ತು ಪ್ರಚೋದನೆ -ಸ್ಫೂರ್ತಿ ಪಡೆದಿ ರುವ ಸುಬ್ರಾಯ ಹೊಳ್ಳರು ಕೇವಲ ಒಬ್ಬ ವೇಷಧಾರಿ ಕಲಾವಿದ ನಲ್ಲ. ಯಾವುದೇ ಪಾತ್ರವಿದ್ದರೂ ಅದರ ಸಮಗ್ರವನ್ನರಿತು ರಂಗನಿರ್ವಹಿಸುವ, ಪ್ರೇಕ್ಷಕ ಮನತಟ್ಟುವ ಅನನ್ಯ ಕಲಾವಿದ.

ಪುರಾಣ ಪ್ರಸಂಗಗಳ ಸಂಪನ್ಮೂಲ ವ್ಯಕ್ತಿ

ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಮೆಚ್ಚುವ, ಪ್ರೀತಿಸುವ ಇವರು ಪ್ರತಿನಾಯಕನಾಗಿಯೇ ಜನಪ್ರಿಯ. ಅಚ್ಚುಕಟ್ಟಾದ ವೇಷಗಾರಿಕೆ, ಪರಿಪೂರ್ಣವಾದ ಬಣ್ಣದ ಬರವಣಿಗೆ, ಯಕ್ಷಗಾನೀಯ ನಿಲುಮೆ-ರಂಗಚಲನೆ, ಆಕರ್ಷಕ ಶೈಲಿಯ ರಂಗಲಯ, ಶ್ರುತಿಬದ್ಧ ಮಾತುಗಾರಿಕೆ, ತರ್ಕಕ್ಕೆ ಬಿದ್ದರೆ ಸ್ಫೋಟಗೊಳ್ಳುವ ಪಾಂಡಿತ್ಯಭರಿತ ವಾಕ್ಪಟುತ್ವ ಸುಬ್ರಾಯ ಹೊಳ್ಳರನ್ನು ಕಲಾವಿದನಾಗಿ ಎತ್ತರಕ್ಕೇರಿಸಿವೆ.
ಕಾಸರಗೋಡು ಸುಬ್ರಾಯ ಹೊಳ್ಳ
ಜನನ : 1965
ಜನನ ಸ್ಥಳ : ಕಾಸರಗೋಡು
ಕೇರಳ ರಾಜ್ಯ
ಕಲಾಸೇವೆ:
ಪ್ರಸ್ತುತ ತೆಂಕುತಿಟ್ಟಿನ ಪಾರಂಪರಿಕ ಶೈಲಿಯ ಪ್ರಾತಿನಿಧಿಕ ವೇಷಧಾರಿ, ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಹೊಳ್ಳರು ಕಟೀಲು ಮು೦ತಾದ ಮೇಳಗಳಲ್ಲಿ ಕಲಾಕೃಷಿ ನಡೆಸಿ, ಪ್ರಸ್ತುತ ಹೊಸನಗರ ಮೇಳದಲ್ಲಿ ಕಲಾಸೇವೆಯಲ್ಲಿ ನಿರತರಾಗಿದ್ದಾರೆ.
ಯಾವುದೇ ತಂಡದಲ್ಲಿ ಸುಬ್ರಾಯ ಹೊಳ್ಳರಿದ್ದಾರೆಂದರೆ ಸಾಕು, ಯಾವುದೇ ಭಾಗವತನಿಗೂ ನಿಶ್ಚಿಂತೆಯಲ್ಲಿ ಆಟ ಆಡಿಸುವ ಧೈರ್ಯ ಬರುತ್ತದೆ. ಕಾರಣ, ಯಾವುದೇ ಪುರಾಣ ಪ್ರಸಂಗವಿದ್ದರೂ ಪದ್ಯಗಳ ಆಯ್ಕೆಯಿಂದ ಮೊದಲ್ಗೊಂಡು ಪ್ರಸಂಗ ಸಾಗಬೇಕಾದ ಮಾಹಿತಿಗಳೆಲ್ಲ ಇವರು ಬಲ್ಲರು. ಹೀಗಾಗಿ ಭಾಗವತರಿಗೂ-ಕಲಾವಿದರಿಗೂ ಹೊಳ್ಳರು ಸಂಪನ್ಮೂಲ ವ್ಯಕ್ತಿ.

ಇಂದೀಗ ಚಾಲ್ತಿಯಲ್ಲಿಲ್ಲದ ಬಹುತೇಕ ಪ್ರಸಂಗಗಳು ಇವರಿಗೆ ಕಂಠಸ್ಥ. ಅನೇಕ ಪ್ರಸಂಗಗಳ ರಂಗನಡೆಗಳು ಕರತಲಾ ಮಲಕ. ರಂಗಸ್ಥಳದಲ್ಲಿ ಪಾತ್ರವಾಗಿ ಮೈದಾಳಿದರೆ ಗಂಡುಗತ್ತಿನ ಛಾಪು. ಹೀಗಾಗಿ ಅನೇಕ ಪ್ರಸಂಗಗಳನ್ನಾಡಬೇಕಿದ್ದರೆ ಸುಬ್ರಾಯ ಹೊಳ್ಳರು ಅನಿವಾರ್ಯ ಕಲಾವಿದ. ಇದಕ್ಕೆ ಕಾರಣ ತಾನು ಹಿರಿಯ ಕಲಾವಿದರನ್ನು ಅನುಸರಿಸಿದ್ದು ಎನ್ನುವ ಸುಬ್ರಾಯ ಹೊಳ್ಳರು ಯಕ್ಷಗಾನದ ನಿತ್ಯ ವಿದ್ಯಾರ್ಥಿ. ಇಂದಿಗೂ ಪ್ರಸಂಗ ಗಳನ್ನು ನಕಲು ಮಾಡಿ ಬರೆದಿಡುವುದು ಅವರ ಆಸಕ್ತಿಯ ವಿಷಯ. ಎಲ್ಲೂ ಲಭ್ಯವಿಲ್ಲದ ಅನೇಕ ಪ್ರಸಂಗಗಳ ಸಂಗ್ರಹ ಇವರ ಬಳಿ ಇದೆ ಎನ್ನುವುದೂ ವಿಶೇಷ.

ಬಾಲ್ಯದಲ್ಲೇ ಹೊಳ್ಳರಿಗೆ ಶೇಣಿ ಗೋಪಾಲಕೃಷ್ಣ ಭಟ್ಟರೆಂದರೆ ಆಸಕ್ತಿ. ಬಿಡುವಿದ್ದಾಗ ಶೇಣಿ ಅಜ್ಜನ ಮನೆಯಲ್ಲೇ ಮೊಕ್ಕಾಂ. ಅವರೊಂದಿಗೆ ಪುರಾಣ ಸಂದೇಹಗಳ ಜಿಜ್ಞಾಸೆ. ಪರಿಣಾಮ ಸುಬ್ರಾಯ ಹೊಳ್ಳರು ತಾಳಮದ್ದಳೆಗಳ ಸಮರ್ಥ ಅರ್ಥ ಧಾರಿಯೂ ಹೌದು, ಭಾಗವತಿಕೆಯೂ ಮಾಡಬಲ್ಲರು. ಯಕ್ಷಗಾನದ ಹಿಮ್ಮೇಳ-ಮುಮ್ಮೇಳವಲ್ಲದೆ ಪ್ರಸಂಗ ಸಾಹಿತ್ಯದ ಬಗ್ಗೆಯೂ ಅಪಾರ ಒಲವುಳ್ಳ, ಅರಿವುಳ್ಳ ಕಲಾವಿದನಾದುದರಿಂದ ಯಾವುದೇ ಮೇಳಕ್ಕೂ ಇವರೊಂದು ಆಸ್ತಿ.

ಕಳೆದ ಮೇ 7ರಂದು ಅಡ್ಯನಡ್ಕದ ಎರುಗಲ್ಲಿನಲ್ಲಿರುವ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆರೋಗ್ಯ ಸಂಶೋಧನಾ ಕೇಂದ್ರದ ವಠಾರದಲ್ಲಿ ಶ್ರೀ ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಎಡನೀರು ಮೇಳದ ಬಯಲಾಟ ಸಪ್ತಾಹದ ಸಮಾರೋಪದಲ್ಲಿ ಸುಬ್ರಾಯ ಹೊಳ್ಳರಿಗೆ ಗೌರವ ಸಮ್ಮಾನ ನಡೆಯಿತು. ಪ್ರಸ್ತುತ ತೆಂಕುತಿಟ್ಟಿನ ಪಾರಂಪರಿಕ ಶೈಲಿಯ ಪ್ರಾತಿನಿಧಿಕ ವೇಷಧಾರಿಯಾಗಿ ಹೆಸರಿಸಬಲ್ಲ ಇವರ ಅರ್ಹತೆಯನ್ನು ಗುರುತಿಸಿ ನೀಡುವ ಸಮ್ಮಾನವೆಂಬ ಅಂಗೀಕಾರ ಯಕ್ಷಗಾನದಲ್ಲಿ ಅವರುಗೈದ ಸಾಧನೆಗೆ ಮನ್ನಣೆ.

****************

ಕಾಸರಗೋಡು ಸುಬ್ರಾಯ ಹೊಳ್ಳರವರ ಕೆಲವು ವಿಡಿಯೊಗಳು

ರಕ್ತಬೀಜನ ಪಾತ್ರದಲ್ಲಿ



ಅರುಣಾಸುರನ ಪಾತ್ರದಲ್ಲಿ



ವಾಲಿಯ ಪಾತ್ರದಲ್ಲಿ



ಕಾರ್ತವೀರ್ಯಾರ್ಜುನನ ಪಾತ್ರದಲ್ಲಿ



ತಾಳಮದ್ದಳೆಯೊ೦ದರಲ್ಲಿ ಅರ್ಥಗಾರಿಕೆ



****************



ಕಾಸರಗೋಡು ಸುಬ್ರಾಯ ಹೊಳ್ಳರವರ ಕೆಲವು ಛಾಯಾ ಚಿತ್ರಗಳು
( ಕೃಪೆ : ರಾಮ್ ನರೇಶ್ ಮ೦ಚಿ, ನಾಗೇಶ್ ಕೆ ಎಸ್ ಆಚಾರ್ಯ, ಶೈಲು ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು )




ಸನ್ಮಾನ ಸಮಾರ೦ಭವೊ೦ದರಲ್ಲಿ



















****************



ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Vivek(10/3/2016)
ರಕ್ತಬೀಜ ಪಾತ್ರವಂತೂ ಸುಬ್ರಾಯಹೊಳ್ಳರ ಮಾಸ್ಟರ್ ಪೀಸ್. ಆ ಪಾತ್ರಕ್ಕೆ ಅವರಲ್ಲದೆ ಬೇರಾರನ್ನೂ ಕಲ್ಪಿಸಿಕೊಳ್ಳಲು ಆಗುವುದಿಲ್ಲ
RAJ KUMAR M(6/23/2016)
ಬಲಿಪ್ಪಜ್ಜನ ಗರಡಿಯಲ್ಲಿ ಪಳಗಿದ ಅದ್ಭುತ ವಿನಮ್ರ ಅಪರೂಪದ ಕಲಾವಿದ.
Ashoka(6/23/2016)
Subraha Holla is a very good artist. Very polite in behaviour and keen on learning the things. Simple in nature but a great talent in the art.
Shridhar D S(6/23/2016)
ಸುಬ್ರಾಯ ಹೊಳ್ಳರು ಅಧ್ಯನಶೀಲ ಕಲಾವಿದ. ಮಾತು ಅಚ್ಚುಕಟ್ಟು, ಅರ್ಥಪೂರ್ಣ.ಪೌರಾಣಿಕ ಗಾಂಭೀರ್ಯ ಅವರ ಹಿರಿತನ.ಮೂವತ್ತೆರಡು ತಿರುಗಾಟ ಎಂದರೆ ನಂಬುವುದು ಕಷ್ಟ.ಸೊಗಸಿನ ಬಣ್ಣಗಾರಿಕೆ,ಕಟ್ಟುವಿಕೆ.
Ravishankar Valakkunja(6/23/2016)
Great artist. Ivarondige kateel meladalli nanna thirugaatagalu mareyalàgada anubhava. Sambhaashana chathura.
Satish Rai Bellipady(6/23/2016)
Nanna mechina yaxaghaana veshadhaari
Anabha Polali(6/23/2016)
Subraya hollaru obba paripoorna kalavidharu. Samanyaralli samanyaru. prathiyorvarannu guruthisuvavaru.
Rama Aithala(6/23/2016)
yakshaganada savyasachi- maanikhya.varthamanakaladalli thulanaatheetha kalavida.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ