ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ನಡುತಿಟ್ಟಿನ ಆಶಾಕಿರಣ ಅಪೂರ್ವ ಪುರುಷ ವೇಷಧಾರಿ : ಕೋಟ ಸುರೇಶ ಬಂಗೇರ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಮಾರ್ಚ್ 2 , 2016

ಬಡಗು ತಿಟ್ಟಿನ ಒಂದು ಪ್ರಬೇದವಾದ ಕುಂದಾಪುರ-ಬ್ರಹ್ಮಾವರ ಪರಿಸರದ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷಧಾರಿಯಾಗಿ, ಮುಂದಿನ ಪೀಳಿಗೆಗೆ ಆಶಾಕಿರಣವಾಗಿರುವ ಕೋಟ ಸುರೇಶ ಬಂಗೇರ ಅವರನ್ನು ಮಾರ್ಚ್ 5 ರಂದು ಕೋಟ ಪಡುಕೆರೆ ಫ಼್ರೆಂಡ್ಸ್ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುತ್ತದೆ.

ಮಟ್ಪಾಡಿ ಶೈಲಿಯ ಅಪರೂಪದ ಕಲಾವಿದ

ಶಿರಿಯಾರ ಮಂಜು ನಾಯ್ಕರ ಲಾಲಿತ್ಯಪೂರ್ಣ ಶ್ರುತಿಬದ್ದ ಮಾತುಗಾರಿಕೆ. ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ ಮೊಳಹಳ್ಳಿ ಹೆರಿಯ ನಾಯ್ಕರ ರಂಗತಂತ್ರ ಮತ್ತು ಕಿರು ಹೆಜ್ಜೆ, ಇವರು ಮೂವರನ್ನು ಒಮ್ಮೆಗೆ ನೋಡಬೇಕಾದರೆ ಸುರೇಶ ಬಂಗೇರರ ವೇಷಗಾರಿಕೆಯ ಸೊಗಸನ್ನು ನೋಡಬೇಕು. ಕನಕಾಂಗಿ ಕಲ್ಯಾಣ, ಜಾಂಬವತಿ ಕಲ್ಯಾಣ, ಕ್ರಷ್ಣಾರ್ಜುನ-ಸುಭದ್ರ ಕಲ್ಯಾಣ ಸಹಿತ ಯಾವುದೇ ಪ್ರಸಂಗದ ಕೃಷ್ಣನಿರಲಿ, ಅಲ್ಲಿ ಮಂಜುನಾಯ್ಕರ ನಿರಾತಂಕ ನಿರರ್ಗಳವಾದ ಶ್ರುತಿ ಬದ್ದ ಮಾತುಗಾರಿಕೆ, ಕರ್ಣಾರ್ಜುನದ ಅರ್ಜುನ, ವೀರಮಣಿ ಕಾಳಗದ ಪುಷ್ಕಳ, ತಾಮ್ರದ್ವಜ ಮುಂತಾದ ವೇಷಗಳಲ್ಲಿ ಹೆರಿಯ ನಾಯ್ಕರ ರಂಗ ನಿರ್ವಹಣೆ, ಹೆಜ್ಜೆಗಾರಿಕೆ, ಅತಿಕಾಯನಂತ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಮಟ್ಪಾಡಿ ಶೈಲಿಯನ್ನು ಗುರುತಿಸಬಹುದಾದ ಬಡಗುತಿಟ್ಟಿನ ಅಪರೂಪದ ಕಲಾವಿದರಲ್ಲಿ ಇವರೂ ಒಬ್ಬರು.

ನಡುತಿಟ್ಟಿನಲ್ಲಿ ಇಂದು ಬಹು ಪ್ರಸಿದ್ದಿಯ ಸಮರ್ಥ ಸುಧನ್ವ ಪಾತ್ರಧಾರಿ ಇವರೊಬ್ಬರೇ ಎಂದೂ ಯಾವ ಮಾನದಂಡದಿಂದಲೂ ಹೇಳಬಹುದು. ಉತ್ತರ ಕನ್ನಡದ ಬಾವಾಭಿನಯಕ್ಕೆ ದಕ್ಷಿಣ ಕನ್ನಡದ ವೀರಾಭಿನಯ ಸೇರಿಸಿ ಅವರು ಚಿತ್ರಿಸಿದ ಸುಧನ್ವ ಯುವ ಕಲಾವಿದರಿಗೆ ಮಾರ್ಗದರ್ಶಿ, ಶೃಂಗಾರ, ವೀರ, ಭಕ್ತಿ ರಸಗಳಿಂದ ಚಿತ್ರಿಸಲ್ಪಡುವ ಸುಧನ್ವನ ವೇಷವನ್ನು ಚಿತ್ರಿಸುವುದು ಪುರುಷ ವೇಷಧಾರಿಗಳಿಗೆ ಒಂದು ಸವಾಲು. ಬೀಷ್ಮ ಪ್ರತಿಜ್ಞೆಯ ದೇವವ್ರತನಾಗಿ “ಪರಿಕಿಸು ಮಂತ್ರಿಯೇ ನೀನು” ಮತ್ತು “ಮಲಗಿರುವ ಪಿತನನ್ನು ಎಬ್ಬಿಸುತ ಗಾಂಗೇಯ” ಇರಲಿ, ರುಕ್ಮಾಂಗದ ಚರಿತ್ರೆಯ ಧರ್ಮಾಂಗದನಾಗಿ “ಮನದೊಳಾಲೋಚಿಸುತಲಾಗ ಧರ್ಮಾಂಗದನು” ಹಾಗೂ ರುಕ್ಮಾವತಿ ಕಲ್ಯಾಣದ “ವನಚರರ ನುಡಿ ಕೇಳಿ ಹರಿಯು ತನ್ನಯ ಮನದಿ” ಈ ಮೂರು ಸನ್ನಿವೇಷ ಸಾಕು ಸುರೇಶನವರ ಪಾತ್ರದ ಸಿದ್ದಿಯನ್ನು ಗಮನಿಸಲು.

ಪರಿಪೂರ್ಣ ಪಾರ೦ಪರಿಕ ವೇಷಧಾರಿ

ಸುರೇಶರ ವೇಷಗಳಲ್ಲಿ ಗುರುತಿಸ ಬೇಕಾದದ್ದು ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆಯ ಸೊಗಸು. ಎಲ್ಲಿಯೂ ಯಕ್ಷಗಾನದ ಆವರಣ ಭಂಗಮಾಡದೆ, ಪಾತ್ರಗಳ ಔಚಿತ್ಯ ಕೆಡಿಸದೆ, ಎದುರು ಪಾತ್ರಧಾರಿಗಳಿಗೆ ಅನಗತ್ಯ ಸವಾಲು ಹಾಕದೇ ಹಿರಿಯರು ಹಾಕಿ ಕೊಟ್ಟ ಚೌಕಟ್ಟಿನೊಳಗೆ ಕಡೆದು ನಿಲ್ಲಿಸಿದ ಬಿಂಬದ ಹಾಗೆ ಅವರ ಪಾತ್ರ ಚಿತ್ರಣ. ಅಪೂರ್ವವಾದ ಶ್ರುತಿಬದ್ದತೆ ಅವರ ಆಸ್ತಿ. ಬಹುದೂರ ಕೇಳಿಸಬಹುದಾದ ಶ್ರುತಿಬದ್ದ ಕಂಠದಿಂದ ಹೊರಡುವ ಅವರ ಸುಧನ್ವ , ದೇವವ್ರತ , ಚಂದ್ರಹಾಸ ಮುಂತಾದ ಪಾತ್ರಗಳ ವ್ಯಾಕರಣಬದ್ದ ಪೀಠಿಕೆಯ ಅರ್ಥ ಎಂತಾಹ ವಿದ್ಯಾವಂತರನ್ನು ನಾಚಿಸುವಂತಹದ್ದು.
ಕೋಟ ಸುರೇಶ ಬಂಗೇರ
ಜನನ : 1965
ಜನನ ಸ್ಥಳ : ಮಣೂರು, ಪಡುಕೆರೆ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ನಿರಂತರ 36 ವರ್ಷ ಕಲಾಸೇವೆ ಮಾಡಿದ ಇವರು ಮಂದಾರ್ತಿ, ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿ ಸದ್ಯ ಅಮೃತೇಶ್ವರಿ ಮೇಳದ ಪುರುಷ ವೇಷಧಾರಿ ಜೊತೆಗೆ ಮೇಳದ ಪ್ರಭಂದಕರಾಗಿ ಸೇವೆ ಸಲ್ಲಿಸುತಿದ್ದಾರೆ.


ಚಂದ್ರಹಾಸ ಚರಿತ್ರೆಯ “ಅಹಾಹ ಏನ್ ಸೊಬಗು ಕಾಣುವುದಿಲ್ಲಿ ನೇತ್ರ ಸಹ ಹರುಷವ ಕಾಂಬ ತೆರನಿಲ್ಲಿ” ಇದೊಂದೆ ಪದ್ಯದ ಸ್ವಗತದ ಮಾತು ಸಾಕು ಇವರ ಅರ್ಥಗಾರಿಕೆಯ ಸೊಗಸನ್ನು ತಿಳಿಯಲು. ಇಂದಿಗೂ ದಕ್ಷಿಣ ಕನ್ನಡ ದೂರದ ಬೆಂಗಳೂರು ಮುಂಬೈಗಳಲ್ಲಿ ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲೀಕೃತ ಭವ್ಯತೆಯನ್ನು ಪಾತ್ರಗಳ ಮೂಲಕ ಜೀವಂತವಾಗಿ ತೆರೆದಿಡುವ ಮದ್ಯಮತಿಟ್ಟಿನ ಕರ್ಣಾರ್ಜುನ ಪ್ರಸಂಗದ ಪ್ರದರ್ಶನವಿದ್ದಲ್ಲಿ ಅರ್ಜುನ ಅಥವಾ ಕೃಷ್ಣನ ಪಾತ್ರಕ್ಕೆ ಇವರು ಅನಿವಾರ್ಯವಾಗುತ್ತಾರೆ. ಬಡಗುತಿಟ್ಟಿನ ಪುರುಷವೇಷಗಳ ಸಾಂಪ್ರದಾಯಕ ಸೊಗಸು ಮೈದುಂಬಿಕೊಂಡ ಸುರೇಶರ ಪರಿಶುದ್ದ ನೃತ್ಯಾಭಿನಯ, ಆಕರ್ಷಕ ಆಳಂಗ, ನಿರರ್ಗಳ ಮಾತುಗಾರಿಕೆ, ಸೊಗಸಾದ ವೇಷಗಾರಿಕೆಯಿಂದ ಇತರರಿಗಿಂತ ಬಿನ್ನವಾಗಿ ಗುರುತಿಸ ಬಹುದಾಗಿದೆ.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಉಡುಪಿ ತಾಲೂಕು ಮಣೂರು-ಪಡುಕೆರೆ ಎಂಬಲ್ಲಿ 1965ರಲ್ಲಿ ಬೇಡು ಮರಕಾಲ ಮತ್ತು ಅಕ್ಕಮ್ಮ ದಂಪತಿಯ ಮಗನಾಗಿ ಜನಿಸಿದ ಸುರೇಶ ಬಂಗೇರರು ಹದಿನಾರನೇ ವಯಸ್ಸಿನಲ್ಲಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಿರಂತರ 36 ವರ್ಷ ಕಲಾಸೇವೆ ಮಾಡಿದ ಇವರು ಬಹುತೇಕ ಹಿರಿಯ ಕಲಾವಿದರಂತೆ ಯಾವ ಅಧೀಕೃತ ಗುರುವೂ ಇಲ್ಲದೆ, ಏಕಲವ್ಯನಂತೆ ಕಂಡುಕೇಳಿ ಉನ್ನತ ಮಟ್ಟಕ್ಕೆ ಏರಿದವರು.

ಅಂದಿನ ಹಿರಿಯ ಕಲಾವಿದ ಶಿರಿಯಾರ ಮಂಜು ನಾಯ್ಕರ ಹೂವಿನ ಕೋಲಿನ ಬಾಲ ಕಲಾವಿದರಾಗಿ ಶಿರಿಯಾರದವರ ನಿಕಟ ಸಂಪರ್ಕವನ್ನು ಸಾಧಿಸಿ ಪ್ರೌಢ ಅರ್ಥಗಾರಿಕೆ, ರಂಗ ನಡೆ, ನೃತ್ಯಾಭಿನಯ ಕೌಶಲವನ್ನು ಕಂಡುಕೊಂಡು ತನ್ನ ಕಲಾನುಭವವನ್ನು ಗರಿಷ್ಟಮಟ್ಟದಲ್ಲಿ ಇಟ್ಟು ಕೊಂಡವರು. ಸಹೋದರ ಸಂಬಂದಿ ಮೊಳಹಳ್ಳಿ ಹೆರಿಯ ನಾಯ್ಕರನ್ನು ಗುರು ಸ್ಥಾನದಲ್ಲಿರಿಸಿ ಕೊಂಡು ಅವರೊಂದಿಗೆ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿ ನಂತರ ದೀರ್ಘಕಾಲ 17 ವರ್ಷ ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿ ಸದ್ಯ ಅಮೃತೇಶ್ವರಿ ಮೇಳದ ಪುರುಷ ವೇಷಧಾರಿ ಜೊತೆಗೆ ಮೇಳದ ಪ್ರಭಂದಕರಾಗಿ ಸೇವೆ ಸಲ್ಲಿಸುತಿದ್ದಾರೆ.

ಕಾಲ್ಪನಿಕ ಪ್ರಸ೦ಗಗಳಿಗೂ ಸೈ

ಹೊಸ ಪ್ರಸಂಗಕ್ಕೂ ನ್ಯಾಯ ಒದಗಿಸಿದ ಅವರಿಗೆ ಬಹು ಪ್ರಸಿದ್ದಿ ತಂದ ಪಾತ್ರ ದಿ. ಕಾಳಿಂಗ ನಾವಡರ ಕಾಲದಲ್ಲಿ ನಾಗಶ್ರೀ ಪ್ರಸಂಗದಲ್ಲಿ ಶಿರಿಯಾರ ಮಂಜು ನಾಯ್ಕರು ಮಾಡುತಿದ್ದ ಶುಭ್ರಾಂಗನ ಪಾತ್ರ. ಬಯಲಾಟ ಮೇಳದಲ್ಲಿ ಈ ಪಾತ್ರವನ್ನು ಇವರ ರೀತಿ ಚಿತ್ರಿಸಿದ ಇನ್ನೊಬ್ಬ ಕಲಾವಿದ ಇಲ್ಲವೆನ್ನಬಹುದಾಗಿದೆ. ಅಭಿನವ ಶಿರಿಯಾರ ಮಂಜುನಾಯ್ಕ್ ಎಂದು ಜನ ಇವರನ್ನು ಗುರುತಿಸುತ್ತಾರೆ.

ಸತಿ ಶೀಮಂತಿನಿಯ ಚಂದ್ರಾಂಗದ, ಚೆಲುವೆ ಚಿತ್ರಾವತಿಯ ಹೇಮಾಂಗದ, ಭಾನು ತೇಜಸ್ವಿ ಮುಂತಾದ ಪಾತ್ರಗಳು ಅಷ್ಟೇ ಪ್ರಸಿದ್ದ. ಕೇವಲ ಸೌಮ್ಯ ಸಾತ್ವಿಕ ಪಾತ್ರಗಳಿಗೆ ಮಾತ್ರ ಒಗ್ಗುವ ಅವರ ಆಳಂಗ ಮತ್ತು ಸ್ವರ ಖಳನಾಯಕನ ಪಾತ್ರಗಳಿಗೆ ಒಗ್ಗದಿದ್ದರಿಂದ ಸಾತ್ವಿಕ ಪಾತ್ರವಾದ ದೇವಿ ಮಹಾತ್ಮೆಯ ವಿಷ್ಣು, ರಕ್ತಬೀಜ, ಸುಧನ್ವ, ಕೃಷ್ಣ ಮುಂತಾದ ಪಾತ್ರಗಳನ್ನು ಮಾತ್ರ ಜನ ಅವರಿಂದ ಬಯಸಿದ್ದರಿಂದ ಕೀಚಕ, ರಾವಣ ಮುಂತಾದ ಖಳ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದು ಕಡಿಮೆ. ಹಾಗೇಯೇ ಕಿರೀಟ ವೇಷಕ್ಕಿಂತ ಕೇದಗೆ ಮುಂದಲೆ ವೇಷಗಳೆ ಅವರಲ್ಲಿ ಹೆಚ್ಚು ಆಕರ್ಷಣೆಯಾಗಿ ಕಾಣುವುದರಿಂದ ಅವರ ವತ್ಸಾಕ್ಯ, ಚಂದ್ರಹಾಸನಂತ ಪಾತ್ರಗಳು ಹೆಚ್ಚು ಜನಪ್ರೀಯವಾಗಿವೆ. ಬಡಗುತಿಟ್ಟಿನ ಪ್ರಕೃತಿ-ಪುರುಷರ ಸಮ್ಮಿಲನದಂತೆ ಕಾಣುವ ನೆರಿಯುಟ್ಟ ಕ್ರಷ್ಣನ ವೇಷ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟಿದೆ.

ಕೌಟು೦ಬಿಕ ಜೀವನ

ಬೇರೆಬೇರೆ ತಿಟ್ಟು ಮಟ್ಟು, ಶೈಲಿಗಳ ಪ್ರಬಾವದಿಂದ ನಡುತಿಟ್ಟಿನ ಕಲಾವಿದರೆಂದು ಅದಿಕ್ರತವಾಗಿ ಗುರುತಿಸಲ್ಪಡುವ ಕಲಾವಿದರು ವಿರಳವಾಗಿರುವ ಇಂದಿನ ಕಾಲಘಟ್ಟದಲ್ಲಿ, ಮುಂದಿನ ಪೀಳಿಗಗೆ ಆಶಾಕಿರಣವಾಗಿರುವ ಕೊಂಡಿ ಕೋಟ ಸುರೇಶರು ಪತ್ನಿ ಸುಶಿಲಾ ಮಕ್ಕಳಾದ ಸುರಕ್ಷ, ಸಮರ್ಥರೊಂದಿಗೆ ಕೋಟ ಪಡುಕೆರೆಯಲ್ಲಿ ವಾಸವಾಗಿದ್ದಾರೆ. ನಿತ್ಯ ಜೀವನದಲ್ಲಿ ಸರಳ ಸಜ್ಜನ ನಿರಾಡಂಬರ ಸ್ನೇಹಶೀಲರಾದ ಇವರಿಗೆ ಸನ್ಮಾನ ಯೋಗ್ಯವಾಗಿಯೇ ಸಲ್ಲುತ್ತಿದೆ.

****************

ಕೋಟ ಸುರೇಶ ಬಂಗೇರರವರ ಕೆಲವು ವಿಡಿಯೊಗಳು







****************



ಕೋಟ ಸುರೇಶ ಬಂಗೇರರವರ ಕೆಲವು ಛಾಯಾ ಚಿತ್ರಗಳು ( ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು )










****************




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Praveen Shetty(3/3/2016)
ಉತ್ತಮ ಕಲಾವಿದರು ಅವರ ಸುದನ್ವ ವೇಷ. ಕಾಣುವುದೆ ಚಂದ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ